೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೯೪೯ - ೯೫೯
Pañca-bhuteśī पञ्च-भुतेशी (949)
೯೪೯. ಪಂಚ-ಭೂತೇಶೀ
ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯಾಗಿದ್ದಾಳೆ. ತೈತ್ತರೀಯ ಉಪನಿಷತ್ತು (೨.೧.೧), "ಸತ್ಯಂ ಜ್ಞಾನಂ ಅನಂತಂ ಬ್ರಹ್ಮಂ" ಅಂದರೆ ಸತ್ಯ, ಜ್ಞಾನ ಮತ್ತು ಎಣೆಯಿಲ್ಲದ್ದು ಬ್ರಹ್ಮವೆಂದು ಹೇಳುತ್ತದೆ. ಹೀಗೆ ಬ್ರಹ್ಮದ ಕುರಿತು ಹೇಳಿಕೆಯನ್ನು ಕೊಟ್ಟ ನಂತರ, ಆ ಉಪನಿಷತ್ತು ಮುಂದುವರೆಯುತ್ತಾ ಹೇಳುತ್ತದೆ, "ಈ ಬ್ರಹ್ಮದಿಂದ ಆಕಾಶವು ಉಂಟಾಗುತ್ತದೆ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು ಮತ್ತು ಈ ನೀರಿನಿಂದ ಭೂಮಿ..." ಈ ಉಪನಿಷತ್ತು ಈ ಪಂಚಮಹಾಭೂತಗಳು ಬ್ರಹ್ಮದಿಂದ ಉದ್ಭವವಾದವು ಎಂದು ಹೇಳುತ್ತದೆ. ದೇವಿಯೇ ಪರಬ್ರಹ್ಮವಾಗಿರುವುದರಿಂದ, ಈ ನಾಮವು ದೇವಿಯು ಪಂಚಭೂತಗಳ ಮೂರ್ತರೂಪವಾಗಿದ್ದಾಳೆ ಎಂದು ಹೇಳುತ್ತದೆ.
೧೩೭೭ನೇ ಇಸವಿಯಿಂದ ೧೩೮೬ರವರಗೆ ಶ್ರೀ ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾರಣ ಸ್ವಾಮಿಗಳು (ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರು) ರಚಿಸಿರುವ ಪಂಚದಶಿಯ ಕುರಿತಾಗಿ ಒಂದು ಪುರಾತನ ಗ್ರಂಥವಿದೆ. ಈ ಕೃತಿಯಲ್ಲಿ (೨.೧) ಹೀಗೆ ಹೇಳಲಾಗಿದೆ, "ಸತ್ ರೂಪವೂ, ಅದ್ವೈತವೂ ಆದ ಯಾವ ಬ್ರಹ್ಮವನ್ನು ಶ್ರುತಿಯು ಹೇಳುತ್ತದೆಯೊ ಅದನ್ನು ಪಂಚಭೂತಗಳ ವಿವೇಚನದ ಮೂಲಕ ಅರಿತುಕೊಳ್ಳಲು ಶಕ್ಯವಾದುದರಿಂದ, ಪಂಚಭೂತಗಳಿಗಿಂತ ಬ್ರಹ್ಮವು ಭಿನ್ನವಾಗಿರುವುದೆಂದು ಅರಿಯಬಹುದು.
"ಮುತ್ತು, ಮಾಣಿಕ್ಯ, ಹಳದಿ ಪುಷ್ಯರಾಗ, ಪಚ್ಚೆ ಮತ್ತು ವಜ್ರ ಈ ಐದು ಅನರ್ಘ್ಯ ರತ್ನಗಳಿಂದ ರಚಿಸಲ್ಪಟ್ಟಿರುವ ವೈಜಯಂತವೆಂಬ ಮಾಲೆಯನ್ನು ವಿಷ್ಣುವು ಧರಿಸುತ್ತಾನೆ. ಈ ಐದು ರತ್ನಗಳು ಪಂಚ ಮಹಾಭೂತಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ವೈಜಯಂತ ಮಾಲೆಯು ವಿಜಯವನ್ನು ಮುಂಗಡವಾಗಿ ತಂದುಕೊಡುತ್ತದೆ. ದೇವಿಯು ವಿಷ್ಣುವಿಗಿಂತ ಭಿನ್ನಳಾಗಿರದೇ ಇರುವುದರಿಂದ ಆಕೆಯನ್ನೂ ವೈಜಯಂತೀ ಎಂದು ಕರೆಯಲಾಗಿದೆ.
Pañca-saṃkhyopacāriṇī पञ्च-संख्योपचारिणी (950)
೯೫೦. ಪಂಚ-ಸಂಖ್ಯೋಪಚಾರಿಣೀ
ದೇವಿಯ ಐದು ವಿಧವಾದ ಪವಿತ್ರವಾದ ಅರ್ಪಣೆಗಳ ಮೂಲಕ ಪೂಜಿಸಲ್ಪಡುತ್ತಾಳೆ. ಸಂಖ್ಯಾ ಎಂದರೆ ಅದರೊಂದಿಗೆ ಸಂಭಂದವಿರುವ ಅಥವಾ ಅನುಭಂದ ಹೊಂದಿರುವ ಎನ್ನುವ ಅರ್ಥವನ್ನು ಹೊಂದಿದ್ದರೆ ಉಪಚಾರ ಎಂದರೆ ಗೌರವವನ್ನು ಸೂಚಿಸುವುದಾಗಿದೆ. ದೇವಿಗೆ ಐದು ವಿಧವಾದ ವಸ್ತುಗಳನ್ನು ಅರ್ಪಿಸುತ್ತಾರೆ, ಅವೆಂದರೆ, ಗಂಧ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯ. ಈ ಪ್ರತಿಯೊಂದು ವಸ್ತುಗಳೂ ಒಂದೊಂದು ಮಹಾಭೂತಗಳನ್ನು ಪ್ರತಿನಿಧಿಸುತ್ತವೆ. ಅವುಗಳು ಅನುಕ್ರಮವಾಗಿ ಭೂಮಿ, ಆಕಾಶ, ವಾಯು, ಅಗ್ನಿ ಮತ್ತು ನೀರಾಗಿವೆ. ಈ ಐದು ವಿಧವಾದ ವಸ್ತುಗಳ ಸಮರ್ಪಣೆಯ ಮೂಲಕ ಪೂಜಿಸುವವನಿಗೆ ಮತ್ತು ಪೂಜಿಸಲ್ಪಡುವವನ ಮಧ್ಯೆ ಸಂಪರ್ಕವು ಏರ್ಪಡುತ್ತದೆ.
ಛಾಂದೋಗ್ಯ ಉಪನಿಷತ್ತು (೬.೨.೧) ಹೇಳುತ್ತದೆ, " ಆ ಅಸತ್‌ನಿಂದ (ಪರಬ್ರಹ್ಮದಿಂದ) ’ಸತ್’ವು (ಅಸ್ತಿತ್ವವು) ಉಂಟಾಯಿತು (ಪಂಚಭೂತಗಳ ಮೂಲಕ)." ಆದ್ದರಿಂದ ಬ್ರಹ್ಮವು ಈ ಪಂಚೋಪಚಾರಗಳ ಮೂಲಕ ಪೂಜಿಸಲ್ಪಟ್ಟು ತನ್ಮೂಲಕ ಬ್ರಹ್ಮನಿಗೆ ಸೃಷ್ಟಿಗೆ (ಪಂಚಭೂತಗಳ ಮೂಲಕ) ಗೌರವವನ್ನು ಸೂಚಿಸಲಾಗುತ್ತದೆ. ಇದು ಒಂದು ವಿಧವಾಗಿ ಪರಬ್ರಹ್ಮಕ್ಕೆ ಅವನು ಸೃಷ್ಟಿಸಿದ ಈ ವಿಶ್ವಕ್ಕೆ ಕೃತಜ್ಞತೆಯನ್ನು ಅರ್ಪಿಸುವ ದ್ಯೋತಕವಾಗಿದೆ ಮತ್ತು ಅದರಲ್ಲಿ ಈ ವ್ಯಕ್ತಿಗತ ಆತ್ಮವು ಈ ಬ್ರಹ್ಮಾಂಡ ಸೃಷ್ಟಿಯಲ್ಲಿ ಒಂದು ಅಣುವಿನಂತಹ ಭಾಗವಾಗಿದೆ ಎನ್ನುವುದರ ಅರಿವಾಗುತ್ತದೆ.
Śāśvatī शाश्वती (951)
೯೫೧. ಶಾಶ್ವತೀ
ದೇವಿಯು ನಿತ್ಯ ನಿರಂತಳು, शाश्वतीभ्यः समाभ्यः, शाश्वतीः समाः ಶಾಶ್ವತೀಭ್ಯಃ ಸಮಾಭ್ಯಃ, ಶಾಶ್ವತೀಃ ಸಮಾಃ ಎನ್ನುವುದು ಶಾಶ್ವತ ಶಬ್ದಕ್ಕಿರುವ ನಿರ್ವಚನ, ಇದರರ್ಥ ಪದೇ ಪದೇ ಎಂದೂ ಆಗುತ್ತದೆ. ಈ ಸಂದರ್ಭದಲ್ಲಿ ಈ ನಾಮವು ದೇವಿಯು ಪದೇ ಪದೇ ಪೂಜಿಸಲ್ಪಡುತ್ತಾಳೆ ಎನ್ನುವುದಾಗಿದೆ.
ಕಠೋಪನಿಷತ್ತು (೨.೨.೧೨) ಹೀಗೆ ಹೇಳುತ್ತದೆ, "ಅವನು (ಪರಬ್ರಹ್ಮನು) ಅದ್ವಿತೀಯನು, ಮತ್ತು ಅವನು ಎಲ್ಲವನ್ನೂ ನಿಯಂತ್ರಿಸುತ್ತಾನೆ. ಅವನು ಬಹುವಿಧವಾದ ರೂಪಗಳನ್ನು ಮಾಡಿಕೊಂಡಿರುತ್ತಾನೆ ಮತ್ತು ಸರ್ವ ಪ್ರಾಣಿಗಳ ಅಂತರಾತ್ಮನಾಗಿರುವ (ಚೈತನ್ಯರೂಪಿಯಾಗಿರುವ) ಅವನನ್ನು ಯಾವ ವಿವೇಕಿಗಳು ನೋಡುತ್ತಾರೆಯೋ ಅವರಿಗೆ ಶಾಶ್ವತವಾದ ಸುಖವು, ಇತರರಿಗಲ್ಲ."
Śāśvataiśvaryā शाश्वतैश्वर्या (952)
೯೫೨. ಶಾಶ್ವತೈಶ್ವರ್ಯಾ
ದೇವಿಯು ಶಾಶ್ವತವಾದ ಐಶ್ವರ್ಯವಾಗಿದ್ದಾಳೆ. ಆಕೆಯು ನಿರಂತರವಾದ ಐಶ್ವರ್ಯದ ಮೂರ್ತರೂಪವಾಗಿದ್ದಾಳೆ, ಅಂದರೆ ಜ್ಞಾನ ಮತ್ತು ಸಿರಿ ಸಂಪದಗಳ ನಿಧಿಯಾಗಿದ್ದಾಳೆ.
Śarmadā शर्मदा (953)
೯೫೩. ಶರ್ಮದಾ
ಶರ್ಮಾನ್ ಎಂದರೆ ಆನಂದ, ಸಂತೋಷ, ಸುಖ, ಹರ್ಷ, ಮೊದಲಾದ ಅರ್ಥಗಳನ್ನು ಹೊಂದಿದೆ. ನಾಮ ೧೨೫ ಶರ್ಮದಾಯಿನಿ ಅಂದರೆ ಸೌಖ್ಯಗಳನ್ನು ಕೊಡುವವಳು ಎಂದು ಹೇಳುತ್ತದೆ. ದೇವಿಯು ದಯಪಾಲಿಸುವ ಸಂತೋಷ ಅಥವಾ ಸೌಖ್ಯವು ಒಬ್ಬನು ಗಳಿಸುವದವುಕ್ಕಿಂತ ಭಿನ್ನವಾಗಿರುತ್ತವೆ. ಒಬ್ಬನು ಪ್ರಾಪಂಚಿಕ ವಸ್ತುಗಳಿಂದ ಹೊಂದುವ ಸುಖವು ಶಾಶ್ವತವಲ್ಲದ್ದು. ಆದರೆ ದೇವಿಯು ದಯಪಾಲಿಸುವ ಪರಮಾನಂದವು ನಿತ್ಯವಾದದ್ದು. ಇದೇ ಅರ್ಥವು ಈ ಎರಡೂ ನಾಮಗಳಲ್ಲಿ ಹೇಳಲಾಗಿದೆ. ಒಂದು ನಾಮವು ಶಾರೀರಿಕ ಸುಖಗಳ ಕುರಿತಾಗಿ ಹೇಳಿದರೆ ಮತ್ತೊಂದು ಮಾನಸಿಕ ಸುಖದ (ಪರಮಾನಂದದ) ಕುರಿತಾಗಿ ಹೇಳುತ್ತದೆ. ನಿಜವಾದ ಸಂತೋಷವು ಮುಕ್ತಿಯನ್ನು ಹೊಂದುವುದರಲ್ಲಿದೆ.
Śambhu-mohinī शम्भु-मोहिनी (954)
೯೫೪. ಶಂಭು-ಮೋಹಿನೀ
ದೇವಿಯು ಶಂಭು ಅಥವಾ ತನ್ನ ಸಂಗಾತಿಯಾದ ಭಗವಾನ್ ಶಿವನನ್ನು ಪರವಶಗೊಳಿಸುತ್ತಾಳೆ. ಶಿವನು ತನ್ನ ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಂಡವನು. ಆದರೆ ನಾಮ ೮೬೩ ಕಾಮ-ಕೇಳಿ-ತರಂಗಿತಾದ ಪ್ರಕಾರ ದೇವಿಯು ಶಿವನನ್ನು ಸಂಮ್ಮೋಹನಗೊಳಿಸುತ್ತಾಳೆ.
Dharā धरा (955)
೯೫೫. ಧರಾ
ದೇವಿಯು ಭೂಮಿಯ ರೂಪದಲ್ಲಿದ್ದಾಳೆ. ದೇವಿಯು ಭೂಮಿದೇವಿ ಅಥವಾ ಪ್ರಕೃತಿಯಾಗಿದ್ದಾಳೆ. ಧರಾ ಎಂದರೆ ಧರಿಸಿರುವುದು, ಆಧಾರವಾಗಿರುವುದು, ಎತ್ತಿ ಹಿಡಿದಿರುವುದು, ಹೊತ್ತುಕೊಂಡಿರುವುದು, ಭರಿಸಿರುವುದು, ಉಳ್ಳದ್ದು, ಸುಸ್ಥಿತಿಯಲ್ಲಿಡುವುದು, ಪರಿಪಾಲಿಸುವುದು, ಸಂರಕ್ಷಿಸುವುದು, ಗಮನಿಸುವುದು, ಮೊದಲಾದ ಅರ್ಥಗಳನ್ನು ಹೊಂದಿದೆ. ಈ ಎಲ್ಲಾ ಕ್ರಿಯೆಗಳು ದೇವಿಯ ಸ್ಥಿತಿ ಕ್ರಿಯೆಗೆ ಸಂಭಂದಿಸಿದ್ದಾಗಿದೆ.
(ಭೂಮಿಯ ಬೀಜಾಕ್ಷರವು ಲ ಆಗಿದ್ದು, ಲ ಬೀಜದ ಬಳಕೆಯು ಪ್ರಕೃತಿಯನ್ನು ಸೂಚಿಸುತ್ತದೆ).
Dhara-sutā धर-सुता (956)
೯೫೬. ಧರ-ಸುತಾ
ಸುತಾ ಎಂದರೆ ಮಗಳು. ದೇವಿಯು ಪರ್ವತರಾಜನಾದ ಹಿಮವಂತನ ಪುತ್ರಿಯಾಗಿದ್ದಾಳೆ. ಇದರ ಕುರಿತಾಗಿ ಇದುವರೆಗಾಗಲೇ ’ಪಾರ್ವತಿ’ - ನಾಮ ೨೪೬ರಲ್ಲಿ ಚರ್ಚಿಸಲಾಗಿದೆ. ಧರ ಎನ್ನುವುದು ಪರ್ವತಗಳು, ಅರಣ್ಯಗಳು ಮೊದಲಾದುವನ್ನು ಒಳಗೊಂಡಿರುತ್ತದೆ.
Dhanyā धन्या (957)
೯೫೭. ಧನ್ಯಾ
ಧನ್ಯಾ ಎಂದರೆ ಐಶ್ವರ್ಯ, ಸಿರಿ ಸಂಪದಗಳು, ಅದೃಷ್ಟ, ಸಂತೋಷಗಳು, ಮಂಗಳವನ್ನುಂಟು ಮಾಡುವುದು ಮೊದಲಾದವು. ಈ ಸಂದರ್ಭದಲ್ಲಿ ದೇವಿಯು ಐಶ್ವರ್ಯವನ್ನು ಹೊಂದಿದ್ದಾಳೆ ಮತ್ತು ಮಂಗಳಕರಳಾಗಿದ್ದಾಳೆಂದು ಈ ನಾಮವು ಹೇಳುತ್ತದೆ. ಧನ್ಯ ಎಂದರೆ ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸುವುದೂ ಆಗುತ್ತದೆ.
ಮನುಷ್ಯ ಜೀವನದ ಕಡೆಯ ಘಳಿಗೆಗಳನ್ನು ಅಂದರೆ ಮರಣ ಸಮಯವನ್ನು ಚರಮಕಾಲ ಎಂದು ಕರೆಯುತ್ತಾರೆ. ಒಬ್ಬನಿಗೆ ಈ ಸಮಯದಲ್ಲಿ ನಾಲ್ಕು ವಿಧವಾದ ಆಲೋಚನೆಗಳಿರುತ್ತವೆ ಎಂದು ಹೇಳಲಾಗುತ್ತದೆ. ಅವುಗಳೆಂದರೆ, ೧) ಆರ್ಥ, ಈ ವಿಧವಾದ ಆಲೋಚನೆಯುಳ್ಳವರು ಕೆಟ್ಟ ಬಯಕೆಗಳನ್ನು ಇಟ್ಟುಕೊಂಡಿರುತ್ತಾರೆ, ಅದರ ಫಲವಾಗಿ ಅವರು ಗಿಡ, ಪ್ರಾಣಿ ಅಥವಾ ಪಕ್ಷಿಗಳಾಗಿ ಮುಂದಿನ ಜನ್ಮದಲ್ಲಿ ಹುಟ್ಟುತ್ತಾರೆ. ೨) ರೌದ್ರ, ಈ ವಿಧವಾದ ಆಲೋಚನೆಯುಳ್ಳವರು ತೀವ್ರವಾಗಿ ಗಾಯಗೊಂಡಿದ್ದಾಗ್ಯೂ ಅಥವಾ ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಸಹ ಕೆಟ್ಟ ಆಲೋಚನೆಗಳಿಂದ ದೂರವುಳಿಯುವುದಿಲ್ಲ ಅಂಥಹವರು ಕಿರಿದಾದ ಕ್ರಿಮಿ ಕೀಟಗಳಾಗಿ ಜನ್ಮ ತಾಳುತ್ತಾರೆ. (ಜನನ ಮರಣಗಳ ಪ್ರಕ್ರಿಯೆಯು ಬಹಳಷ್ಟು ಯಾತನಾಮಯವಾದದ್ದು). ಇಂತಹವರ ಆತ್ಮವು ಎಂದಿಗೂ ಮುಕ್ತಿಯನ್ನು ಹೊಂದುವುದಿಲ್ಲ. ೩) ಧನ್ಯ (ಪ್ರಚಲಿತ ನಾಮ), ಈ ವಿಧದಲ್ಲಿ ಒಬ್ಬರು ತಮ್ಮ ಪ್ರಜ್ಞೆಯನ್ನು ವೇದೋಪನಿಷತ್ತುಗಳ ಮತ್ತು ಒಳ್ಳೆಯ ವಿಚಾರಗಳ ಮೇಲೆ ಕೇಂದ್ರೀಕರಿಸುತ್ತಾರೆ. ೪) ಶುಕ್ಲ, ಈ ವಿಧದಲ್ಲಿ ಒಬ್ಬನು ತನ್ನ ಪ್ರಜ್ಞೆಯನ್ನು ಮಹಾ ವಾಕ್ಯಗಳ ಅಂದರೆ "ಅಹಂ ಬ್ರಹ್ಮಾಸ್ಮಿ" ಅಥವಾ "ತತ್ತ್ವಮಸಿ" ಎನ್ನುವ ಮಹಾ ವಾಕ್ಯಗಳ ಮೇಲೆ ಕೇಂದ್ರೀಕರಿಸುತ್ತಾನೆ. ಅವನು ಮರಣಕಾಲವನ್ನು ತನ್ನ ಪ್ರಜ್ಞೆಯನ್ನು ಪರಬ್ರಹ್ಮದ ಮೇಲೆ ಧ್ಯಾನವನ್ನು ಕೇಂದ್ರೀಕರಿಸುವುದರ ಮೂಲಕ ಪ್ರವೇಶಿಸುತ್ತಾನೆ. ಅವನು ತನ್ನ ನಿರಂತರ ಧ್ಯಾನ ಸ್ಥಿತಿಯನ್ನು ಚರಮಕಾಲದಲ್ಲಿಯೂ ಮುಂದುವರೆಸುತ್ತಾನೆ. ಅವನು ಪುನಃ ಜನ್ಮ ತಾಳುವುದಿಲ್ಲ ಮತ್ತು ಅವನ ಆತ್ಮವು ಮುಕ್ತಿಯನ್ನು ಹೊಂದುತ್ತದೆ. ಈ ಸಂದರ್ಭದಲ್ಲಿ, ಈ ನಾಮವು ದೇವಿಯು ಧನ್ಯ ಹಂತದ ರೂಪದಲ್ಲಿದ್ದಾಳೆಂದು ಹೇಳುತ್ತದೆ.
ಇದನ್ನು ಕೃಷ್ಣನು ಭಗವದ್ಗೀತೆಯಲ್ಲಿ (೮.೫ ಮತ್ತು ೮.೬) ಬಹು ಸುಂದರವಾಗಿ ವಿವರಿಸಿದ್ದಾನೆ. "ಯಾರು ಮರಣಕಾಲದಲ್ಲಿ ಕೇವಲ ನನ್ನನ್ನೇ ಧ್ಯಾನಿಸುತ್ತಾ ತನ್ನ ಶರೀರವನ್ನು ತ್ಯಜಿಸುತ್ತಾನೆಯೋ ಅವನು ನನ್ನ ಸ್ಥಿತಿಯನ್ನೇ ಹೊಂದುತ್ತಾನೆ, ಇದಕ್ಕೆ ಸಂಶಯ ಬೇಡ. ಯಾರು ಮರಣಕಾಲದಲ್ಲಿ ಯಾವ ಯಾವ ಭಾವವನ್ನು ಧರಿಸಿ ದೇಹ ತ್ಯಾಗ ಮಾಡುತ್ತಾರೆಯೋ, ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತಾರೆಯೋ ಅವರು ಅದನ್ನೇ ಹೊಂದುತ್ತಾರೆ."
Dharmiṇī धर्मिणी (958)
೯೫೮. ಧರ್ಮಿಣೀ
ಧರ್ಮವೆಂದರೆ ಯಾವುದು ಸ್ಥಾಪಿತವಾಗಿದೆಯೋ, ಸ್ಥಿರವಾಗಿದೆಯೋ, ನ್ಯಾಯಯುತವಾಗಿದೆಯೋ ಅಥವಾ ಶಾಸ್ತ್ರಬದ್ಧವಾಗಿದೆಯೋ ಅಥವಾ ಯಾವುದು ಸಾಂಪ್ರದಾಯಿಕವಾಗಿ ಆಚರಣೆಯಲ್ಲಿದೆಯೋ ಅದು. ದೇವಿಯು ಈ ವಿಧವಾಗಿ ವಿವರಿಸಲ್ಪಟ್ಟ ಧರ್ಮದ ರೂಪದಲ್ಲಿರುತ್ತಾಳೆಂದು ಹೇಳಲಾಗುತ್ತದೆ.
Dharma-vardhinī धर्म-वर्धिनी (959)
೯೫೯. ಧರ್ಮ-ವರ್ಧಿನೀ
ದೇವಿಯು ತನ್ನ ಭಕ್ತರ ಮನಗಳಲ್ಲಿ ಧಾರ್ಮಿಕತೆಯು ಅಭಿವೃದ್ಧಿ ಹೊಂದುವಂತೆ ಮಾಡುತ್ತಾಳೆ. ಶಿವನು ಇಂದ್ರಿಯ ನಿಗ್ರಹಕ್ಕೆ ಹೆಸರಾಗಿದ್ದರೆ, ಸೂರ್ಯನು ಪರಿಶುಭ್ರತೆಗೆ ಹೆಸರಾಗಿದ್ದಾನೆ ಮತ್ತು ದೇವಿಯು ತನ್ನ ಸಂಗಾತಿಯಾದ ಶಿವನ ಮೇಲಿನ ಭಕ್ತಿಗೆ ಪ್ರಸಿದ್ಧಳಾಗಿದ್ದಾಳೆ. ಯಾರು ಆ ದೇವರುಗಳ ಮೇಲೆ ಧ್ಯಾನಿಸುತ್ತಾರೋ ಅವರಿಗೆ ಆ ವಿಧವಾದ ಫಲಗಳು ದೊರೆಯುತ್ತವೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 949 - 959 http://www.manblunder.com/2010/07/lalitha-sahasranamam-949-959.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಶ್ರೀದರ್ ರವರೆ
ತಾವು ಸತತವಾಗಿ ದೇವಿಮಹಾತ್ಮೆಯ ನಾಮಮಹಿಮೆಯನ್ನು ತಿಳಿಸುತ್ತ ಕೊನೆಯ ಹಂತಕ್ಕೆ ಬರುತ್ತಿದ್ದಿರಿ
ತಮಗೆ ಹಾಗು ತಮ್ಮ ಮೂಲಕ ಸಮಸ್ತ ಸಂಪದಿಗರಿಗೆ ಹೊಸವರ್ಷ ಶುಭತರಲಿ
In reply to ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ by partha1059
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಪಾರ್ಥಸಾರಥಿಗಳೆ,
ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಿಮಗೂ ಹಾಗೂ ಸಮಸ್ತ ಸಂಪದಿಗರಿಗೂ ಸಹ ಹೊಸ ವರ್ಷದ ಶುಭಾಶಯಗಳು. ಈಗ ಈ ಸಹಸ್ರನಾಮದ ವಿವರಣೆಯ ಕೊನೆಯ ಹಂತವನ್ನು ಮುಟ್ಟುತ್ತಿರುವುದು ದೇವಿ ಲಲಿತಾಂಬಿಕೆಯ ಕೃಪೆಯಷ್ಟೆ. ಆಕೆಯ ಕೃಪೆ ನಿಮ್ಮ ಮೇಲೆ ಮತ್ತು ಸಮಸ್ತ ಸಂಪದಿಗರಿಗೆ ಉಂಟಾಗಲಿ ಎಂದು ಹಾರೈಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಶ್ರೀಯುತ ಶ್ರೀಧರ ಬಂಡ್ರಿ ಅವರಿಗೆ ಹೊಸ ವರುಷದ ಶುಭಾಶಯಗಳು.
' ಮನಸ್ಸಿದ್ದಲ್ಲಿ ಮಹದೇವ ' ಎಂಬ ನಾನ್ನುಡಿಯನ್ನು ತಾವು ಸದ್ಯದಲ್ಲೇ ಸಾಕರ ಗೊಳಿಸಲಿದ್ದೀರಿ.ಅತ್ಯಂತ ಕಠಿಣವಾದ ಲಲಿತಾ ಸಹಸ್ರನಾಮವಳಿ ಯ ಅರ್ಥಸಮೇತ ಅನುವಾದವು ಮನಸ್ಸಿಗೆ ತುಂಬಾ ಹಿಡಿಸಿತು.ಕಾಲ ಕ್ರಮೇಣ ಇದರ ಮರುಓದಿನಿಂದ ಇನ್ನಷ್ಟು ಮನಸ್ಸನ್ನ ಪಕ್ವ ಗೊಳಿಸಲು ಸಾದ್ಯವಾಗಬಹುದೆಂದು ನನ್ನ ಅಭಿಪ್ರಾಯ.
'ಧರ ಸುತಾ ' ಎಂಬ ನಾಮವಳಿಯಲ್ಲಿ ಸುತಾ ಎಂದರೆ ಮಗಳು ಎಂಬ ಅರ್ಥ ನೀಡಿರುವಿರಿ.ಆದರೆ ಸುತಾ ಅಂದರೆ ಮಗನು ಎಂಬ ಅರ್ಥದಲ್ಲಿ
ನಾವು ವಿವರಣೆ ನೀಡುತ್ತೇವೆ. ಉದಾಹರಣೆಗೆ 'ಪಾರ್ವತಿ ಸುತಾ ' ಎಂದರೆ' ಗಣೇಶ ' ಎಂದು ನಾವು ತಿಳಿಯುತ್ತೇವೆ. ದಯವಿಟ್ಟು ತಾವು ಬೇಸರಿಸದೆ ನನ್ನ ಈ ಚಿಕ್ಕ ಅನುಮಾನಕ್ಕೆ ಸಮಾಧಾನ ನೀಡುವಿರಾಗಿ ಕೋರುತ್ತೇನೆ....ವಂದನೆಗಳು.....ರಮೇಶ ಕಾಮತ್.
In reply to ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ by swara kamath
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಕಾಮತ್ ಸರ್,
ಈ ರೀತಿ ಅನೇಕ ಸಣ್ಣಪುಟ್ಟ ಅನುಮಾನಗಳು ಎಲ್ಲರಿಗೂ ಸಹಜವಾಗಿ ಇದ್ದೇ ಇರುತ್ತವೆ ಅದಕ್ಕೆ ತಪ್ಪು ತಿಳಿಯುವ ಅಥವಾ ಬೇಸರಿಸುವ ಪ್ರಮೇಯವೇಕೆ ಬಿಡಿ. ನೀವು ಎತ್ತಿರುವ ಪ್ರಶ್ನೆಯನ್ನು ಸರಳವಾಗಿ ಹೇಳಬೇಕೆಂದರೆ ಸುತ ಎಂದರೆ ಮಗ (ಹ್ರಸ್ವ ರೂಪ) ಮತ್ತು ಸುತಾ (ತಾ ದೀರ್ಘವಾಗಿ ಇರುತ್ತದೆ) ಎಂದಾಗ ಅದು ಮಗಳು ಎಂದಾಗುತ್ತದೆ, ಸಂಸ್ಕೃತ ವ್ಯಾಕರಣದ ನಿಯಮದಂತೆ ಹಾಗಾಗಿ ಇಲ್ಲಿ ಧರಸುತಾ ಎಂದು ಹೇಳಿದಾಗ ಧರ (ಪರ್ವತನ) ಮಗಳು ಎಂದಾಗುತ್ತದೆಯಷ್ಟೆ.
ನಿಮಗೂ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ಸಹ ಹೊಸ ವರ್ಷದ ಶುಭಾಶಯಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ by swara kamath
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಕಾಮತ್‌ರೆ,
ನಿಮ್ಮ ಪ್ರಶ್ನೆಗೆ ಶ್ರೀಧರ್‌ಜಿ ಉತ್ತರಿಸಿರುವರು. ವ್ಯಾಕರಣ /ಗ್ರಾಮರ್‌ಗಳು ನನಗೆ ತಲೆನೋವಿನ ವಿಷಯ. ಸ್ವಲ್ಪ ವ್ಯತ್ಯಾಸವಾದರೆ ಅಜಗಜಾಂತರ.. "ಧರ" ಅಂದರೆ "ಪರ್ವತ" ಆದರೆ, "ಧರಾ" -ಭೂಮಿಯಾಗುವುದು. "ಧರಾಧರ" ಅಂದರೆ ಪುನಃ "ಪರ್ವತ" :)
ಅದೇ ಮುರಳೀ"ಧರ" ಕೊಳಲಿನ ಪರ್ವತವಲ್ಲ.. :)
In reply to ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ by ಗಣೇಶ
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಗಣೇಶ್‌ಜಿ,
ನಿಜ ಹೇಳಬೇಕೆಂದರೆ ನನಗೂ ವ್ಯಾಕರಣ ತಿಳಿಯದು. ಆದರೆ ಇಂತಹ ಅನೇಕ ಅನುಮಾನಗಳು ಬಂದಾಗ ಬಲ್ಲಿದರಿಂದ ಕೇಳಿ ಪರಿಹರಿಸಿಕೊಂಡಿದ್ದೇನಷ್ಟೇ. ಸುಮ್ಮನೇ ಅನುಮಾನವೆಂದು ಹೇಳುತ್ತಾ ಒಂದು ಶಬ್ದಕ್ಕಿರುವ ಸಕಲ ಅರ್ಥಗಳನ್ನೂ ಹೇಳಿದ್ದೀರ! ಅಂದರೆ ನಿಮ್ಮದು ಖಂಡಿತಾ ತೋರಿಕೆಯ ಅನುಮಾನ! :)
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಶ್ರೀಧರರೆ ನಮಸ್ಕಾರ, ತಮಗೆ ಮತ್ತು ಸಮಸ್ತ ಸಂಪದಿಗರಿಗೆಲ್ಲ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕಳೆದ ಎಂಟು ದಿನ ಊರಿನಲ್ಲಿರದ ಕಾರಣ ಸಂಪದದ ಸಂಪರ್ಕ ತಪ್ಪಿಹೋಗಿತ್ತು. ಇಂಟರ್ನೆಟ್ಟಿನ ಅನಾನುಕೂಲತೆಯಿಂದಾಗಿ ಹೋದ ಜಾಗದಲ್ಲೂ ಸಂಪದದ ಕದ ತೆರೆಯಲು ಆಗಲಿಲ್ಲ. ಈದೀಗ ತಾನೆ ವಾಪಸ್ಸು ಬಂದೆ - ಮತ್ತೆ ಸಂಪದದತ್ತ ನೋಡುವ ಅವಕಾಶವಾಯ್ತು :-)
ಸಹಸ್ರನಾಮ ಸಾಕಷ್ಟು ಮುಂದೋಡಿ 200ನೆ ಕಂತು ದಾಟಿಬಿಟ್ಟಿದೆ, ಅಭಿನಂದನೆಗಳು! ನನ್ನ ಹೋಮ್ವರ್ಕ್ ಹೊಸವರ್ಷದ ಮೊದಲ ವಾರದಲ್ಲೆ ಆರಂಭಿಸಬೇಕೀಗ. ಹಾಗೆಯೆ, ಇತರ ಬರಹಗಳ ಬಾಕಿಯನ್ನು ನೋಡಬೇಕು...
ಮತ್ತೆ ಎಲ್ಲರಿಗು ಹೊಸವರ್ಷದ ಶುಭಾಶಯಗಳು :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ by nageshamysore
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ನಾಗೇಶರೆ,
ನನ್ನ ಹೋಮ್ ವರ್ಕ್‌ಗೆ ಹೋಲಿಸಿದರೆ ನಿಮ್ಮದು ಕಡಿಮೆ ಬಿಡಿ. ಏಕೆಂದರೆ ನೀವು ಈ ಹಿಂದೆ ಬರೆದಿರುವುದನ್ನೇ ನನಗೆ ಮರುಪರಿಶೀಲಿಸಲಾಗಿಲ್ಲ. ಹಾಗಾಗಿ ಇಬ್ಬರೂ ಈ ಹೊಸ ವರ್ಷದ ಆರಂಭದಿಂದಲೂ ಬ್ಯುಸಿಯಾಗೋಣ. ನಿಮಗೂ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ದೇವಿ ಲಲಿತಾಂಬಿಕೆಯು ಈ ಹೊಸ ವರುಷ ಹರುಷವನ್ನು ತರಲಿ ಮತ್ತು ಮಂಗಳವನ್ನುಂಟು ಮಾಡಲಿ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ by nageshamysore
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ನಾಗೇಶರೆ,
ನನ್ನ ಹೋಮ್ ವರ್ಕ್‌ಗೆ ಹೋಲಿಸಿದರೆ ನಿಮ್ಮದು ಕಡಿಮೆ ಬಿಡಿ. ಏಕೆಂದರೆ ನೀವು ಈ ಹಿಂದೆ ಬರೆದಿರುವುದನ್ನೇ ನನಗೆ ಮರುಪರಿಶೀಲಿಸಲಾಗಿಲ್ಲ. ಹಾಗಾಗಿ ಇಬ್ಬರೂ ಈ ಹೊಸ ವರ್ಷದ ಆರಂಭದಿಂದಲೂ ಬ್ಯುಸಿಯಾಗೋಣ. ನಿಮಗೂ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ದೇವಿ ಲಲಿತಾಂಬಿಕೆಯು ಈ ಹೊಸ ವರುಷ ಹರುಷವನ್ನು ತರಲಿ ಮತ್ತು ಮಂಗಳವನ್ನುಂಟು ಮಾಡಲಿ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ
ಶ್ರೀಧರರೆ, "೨೦೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೪೯ - ೯೫೯
____________________________________________
.
೯೪೯. ಪಂಚ-ಭೂತೇಶೀ
ಪಂಚಮಹಾಭೂತಕೆ ಮೂಲ ಬ್ರಹ್ಮ, ದೇವಿ ಪಂಚಭೂತ ಮೂರ್ತರೂಪಿಣಿ
ಪಂಚಮಹಾಭೂತಗಳಿಗಧಿಪತಿ ಲಲಿತೆ, ತನ್ಮುಖೇನ ಬ್ರಹ್ಮವರಿಯೆ ಜ್ಞಾನಿ
ಮುತ್ತು,ಮಾಣಿಕ್ಯ,ಹಳದಿಪುಷ್ಯರಾಗ,ಪಚ್ಚೆ,ವಜ್ರ ಪಂಚಭೂತಮಾಲೆ ಧರಿಸಿ
ಮುಂಗಡ ವಿಜಯೀ ವೈಜಯಂತೀ, ವಿಷ್ಣುರೂಪಿಣಿಯಾಗಿಹ ಪಂಚ ಭೂತೇಶೀ ||
.
೯೫೦. ಪಂಚ-ಸಂಖ್ಯೋಪಚಾರಿಣೀ
ಪಂಚ ಪವಿತ್ರಾರ್ಪಣೆ ಮುಖೇನ ಪೂಜಿತೆ, ಗೌರವೋಪಚಾರ ಧಾರಿಣಿ
ಪಂಚಭೂತ ಪ್ರತಿನಿಧಿ, ಜೀವಾತ್ಮ ನಮಿತೆ ಪಂಚ-ಸಂಖ್ಯೋಪಚಾರಿಣೀ
ಗಂಧದೆ ಭೂಮಿ, ಪುಷ್ಪದಾಕಾಶ, ಧೂಪದೆ ವಾಯು, ದೀಪಾಗ್ನಿಸಹಿತ
ನೈವೇದ್ಯದ ನೀರ ಹರಿಸಿ, ದೇವ-ಭಕ್ತರ ಸಂಪರ್ಕ ಕೊಂಡಿಯಾಗಿಸುತ ||
.
೯೫೧. ಶಾಶ್ವತೀ
ನಿತ್ಯ ನಿರಂತರಳು ದೇವಿ, ಸದಾ ಸರ್ವದ ಪೂಜಿತೆ ಅನವರತ
ಮತ್ತೆ ಮತ್ತೆ ಅನುರಣಿಸುತ ಪೂಜೆ, ಭಕ್ತಿಯನಾವರಣ ಶಾಶ್ವತ
ನಿಯಂತ್ರಿಸುತೆಲ್ಲ ಅದ್ವಿತೀಯ ಪರಬ್ರಹ್ಮ, ದೇವಿಯಾಗಿ ಶಾಶ್ವತೀ
ಜೀವಾಂತರಾತ್ಮದಲವನ ಕಾಣೆ, ವಿವೇಕಿಗೆ ಶಾಶ್ವತ ಸುಖ ಪ್ರಾಪ್ತಿ ||
.
೯೫೨. ಶಾಶ್ವತೈಶ್ವರ್ಯಾ
ಶಾಶ್ವತತೆ ಕಡಲಿನ ಸಿರಿನಿಧಿ, ನಶ್ವರಕೆ ಸೃಷ್ಟಿ ಸ್ಥಿತಿ ಲಯ ವಾರಸುದಾರಿಣಿ
ನಶ್ವರವಿರದೈಶ್ವರ್ಯ ತಾನಾಗಿಹ ಲಲಿತೆ, ಶಾಶ್ವತೈಶ್ವರ್ಯಾ ರೂಪಧಾರಿಣಿ
ನಿರಂತರ ಐಶ್ವರ್ಯದ ಮೂರ್ತರೂಪ ದೇವಿ , ಜ್ಞಾನ ಸಿರಿ ಸಂಪದ ವಾರಿಧಿ
ಕರುಣಿಸುತೆಲ್ಲ ಸಂಪದ ಭಕ್ತರಿಗೆಲ್ಲ ಅನವರತ, ಕಾಯುವಳು ಕರುಣಾನಿಧಿ ||
.
೯೫೩. ಶರ್ಮದಾ
ಸೌಖ್ಯವನೀವ ಶರ್ಮದಾಯಿನಿ ಲಲಿತೆ, ಪರಮಾನಂದ ನೀಡುತಲಿ ಶರ್ಮದಾ
ಗಳಿಸಿದ ಪ್ರಾಪಂಚಿಕ ಸೌಖ್ಯ ಅಶಾಶ್ವತ, ನಿರಂತರ ಹರ್ಷವನೀವಳು ವರದಾ
ಶಾರೀರಿಕ ಸುಖದಂತೆ, ಮಾನಸಿಕ ಸುಖವೀಯುತ ಹರಸುವ ಆನಂದವರ್ಷಿಣಿ
ನಿಜ ಸಂತೋಷದ ಪರಮ ಪದ ಮುಕ್ತಿ, ಉನ್ನತಿಯತ್ತ ಮೇಲೆರಿಸುವ ನೂಲೇಣಿ ||
.
೯೫೪. ಶಂಭು-ಮೋಹಿನೀ
ಇಂದ್ರಿಯ ನಿಗ್ರಹದ ಮೇರು ಶಿಖರದಲಿಹ ಶಿವನ ದೃಢತೆಯ ಕಡಿದು
ಮೃದುಲವಾಗಿಸುತ ಸಂಯಮ ನಿಷ್ಠೆಯನು ಪರವಶತೆಯಲಿ ಮಿಡಿದು
ಸಮ್ಮೋಹನಗೊಳಿಸುತಲವನ ನಿಗ್ರಹವ ಸದೆ ಬಡಿಯುವಳು ಭವಾನಿ
ಮಾಯೆಯ ಸೃಜಿಸಿದವನನೆ ಮಾಯಪಾಶದಲ್ಹಿಡಿವ ಶಂಭು ಮೋಹಿನೀ ||
.
೯೫೫. ಧರಾ
ಧರೆಯ ರೂಪಿನಲಿಹ ದೇವಿ ಲಲಿತೆಯೆ ಭೂದೇವಿ, ಪ್ರಕೃತಿ ಮಾತೆ
ಸೃಷ್ಟಿಸಿದವಳವಳೆ ತಾನೆ ಸುಸ್ಥಿತಿಯಲಿಡುವ ಧರಾ ಸಂಭಾಳಿಸುತೆ
ಧಾರಿಣಿ ಆಧಾರಿಣಿ ಮಾತೆ, ಭರಿಸಿ ಹೆತ್ತು ಹೊತ್ತು ಮೇಲ್ಹೊತ್ತು ಸಾಕಿ
ಲ ಬೀಜಾಕ್ಷರ ಭುವಿ ಪ್ರಕೃತಿ, ಪರಿಪಾಲಿಸಿ ಸಂರಕ್ಷಿಸುವ ಕ್ರಿಯಾಶಕ್ತಿ ||
.
೯೫೬. ಧರ-ಸುತಾ
ಪರ್ವತರಾಜ ಹಿಮವಂತನ ಪುತ್ರಿ ದೇವಿಯಾಗಿ, ಧರ ಸುತಾ
ಧರಣಿಯೊಳಗ ಪರ್ವತ-ಅಡವಿಗಳಾಗಿ ಧರ, ಪ್ರಕೃತಿಮಾತಾ
ಪರ್ವತೇಶನ ತನುಜಾತೆ, ಶೈಲಾಧಿಪತಿಗೆ ಮಗಳಾಗಿ ಶೈಲಜೆ
ಕಡಿದು ಶಿಖರ ಗಿರಿ ಕಂದರ ದಾಟೆ ಮನೋಹರ, ಮುಕ್ತಿಗೆ ಹೆಜ್ಜೆ ||
.
೯೫೭. ಧನ್ಯಾ
ಐಶ್ವರ್ಯ-ಸಿರಿಸಂಪದ-ಅದೃಷ್ಟ-ಸಂತೋಷ-ಮಂಗಳ-ಕೃತಜ್ಞತಾಭಾವ ಧನ್ಯಾ
ಮರಣದ ಹೊತ್ತಲಿ ಧರಿಸಿದ ಭಾವವೆ ಸ್ಥಿತಿಯಾಗುತಲಿ ಧ್ಯಾನದ ಸಮನ್ವಯ
ಚರಮಕಾಲದಾಲೋಚನೆ ಅರ್ಥವಿರೆ ಗಿಡ-ಪ್ರಾಣಿ-ಪಕ್ಷಿ, ರೌದ್ರವಿರೆ ಕ್ರಿಮಿಕೀಟ
ಪ್ರಜ್ಞೆ ಧನ್ಯವಿರೆ ವೇದೋಪನಿಷತ್ಸುಭಾಷಿತ, ಶುಕ್ಲದೆ ತತ್ತ್ವಮಸಿ ಮುಕ್ತಿಪಥದತ್ತ ||
.
೯೫೮. ಧರ್ಮಿಣೀ
ಸುಸ್ಥಿರ ಸಂಸ್ಥಾಪಿತ ನ್ಯಾಯಯುತ ಶಾಸ್ತ್ರಬದ್ದ ಆಚರಣೆಯೆ ಧರ್ಮ
ಸಾಂಪ್ರದಾಯಿಕತೆಗೆ ಹಾಸುಹೊಕ್ಕಾಗಿ ಬೆರೆತ ವಿಧಿವಿಧಾನ ಮರ್ಮ
ಅನುಕರಿಸಲನುವಾಗುವಂತೆ ತಾನೆ ಆಚರಣೆಯಲಿ ಪಾಲಿಸೊ ದನಿ
ದೇವಿ ಲಲಿತೆಯದಾಗಿ ಮೇಲ್ಪಂಕ್ತಿ, ನಿಸ್ಸಂದೇಹ ರೂಪಾಗಿ ಧರ್ಮಿಣಿ ||
.
೯೫೯. ಧರ್ಮ-ವರ್ಧಿನೀ
ಇಂದ್ರಿಯ ನಿಗ್ರಹಕೆ ಶಿವ, ಪರಿಶುಭ್ರತೆಗೆ ಸೂರ್ಯ ಕೀರ್ತಿವೆತ್ತಂತೆ
ಸಂಗಾತಿ ಶಿವನ ಮೇಲಿನ ಭಕ್ತಿಗೆ ಶಕ್ತಿ ಹೆಸರಾದವಳು ಶ್ರೀ ಲಲಿತೆ
ಭಕ್ತರ ಮನದಲುದ್ಭವಿಸಿ ಧಾರ್ಮಿಕಭಾವ, ಔನ್ನತ್ಯದತ್ತ ಉರವಣಿ
ಪೂಜಿಸಿದ ದೇವರಂತೆ ಫಲ, ಧರ್ಮಾಭಿವೃದ್ಧಿಸಿ ಧರ್ಮ ವರ್ಧಿನೀ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು