೨೦೩. ಲಲಿತಾ ಸಹಸ್ರನಾಮ ೯೬೮ರಿಂದ ೯೭೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೯೬೮ - ೯೭೬
Sukhakarī सुखकरी (968)
೯೬೮. ಸುಖಕರೀ
ದೇವಿಯು ಸುಖವನ್ನುಂಟು ಮಾಡುತ್ತಾಳೆ. ದೇವಿಯು ತನ್ನ ಭಕ್ತರಿಗೆ ಸಂತೋಷವನ್ನು ಕರುಣಿಸುವ ಆಕೆಯ ಸ್ವಭಾವದ ಕುರಿತಾಗಿ ಇದುವರೆಗಾಗಲೇ ನಾಮ ೧೨೫, ೧೯೨ ಮತ್ತು ೯೫೩ರಲ್ಲಿ ಚರ್ಚಿಸಲಾಗಿದೆ.
Suveṣāḍhyā सुवेषाढ्या (969)
೯೬೯. ಸುವೇಷಾಢ್ಯಾ
ಸುವೇಷಾ ಎಂದರೆ ಸುಂದರವಾಗಿ ಅಥವಾ ಮಂಗಳಕರವಾಗಿ ಅಲಂಕೃತವಾಗಿರುವುದು. ದೇವಿಯ ಶುಭಪ್ರದತೆಯ ಸಂಕೇತದ ಕುರಿತಾಗಿ ನಾಮ ೫೧ ಮತ್ತು ೯೬೭ರಲ್ಲಿ ಚರ್ಚಿಸಲಾಗಿದೆ. ಯಾರು ಈ ವಿಧವಾಗಿ ಅಲಂಕೃತಗೊಳ್ಳುತ್ತಾರೋ ಅವರ ಕುರಿತಾಗಿ ಮುಂದಿನ ನಾಮದಲ್ಲಿ ವಿವರಿಸಲಾಗಿದೆ.
Suvāsinī सुवासिनी (970)
೯೭೦. ಸುವಾಸಿನಿ
ಮಂಗಳಕರವಾಗಿ ವಸ್ತ್ರಧಾರಣ ಮಾಡಿ ಮತ್ತು ತನ್ನ ಪತಿಯೊಡನೆ ವಾಸಿಸುವ ಸ್ತ್ರೀಯನ್ನು ಸುವಾಸಿನಿ ಎಂದು ಕರೆಯುತ್ತಾರೆ.
ಸುವಾಸಿನಿಯ ಲಕ್ಷಣಗಳನ್ನು ಅನಸೂಯೆಯು ವಾಲ್ಮೀಕಿ ರಾಮಾಯಣದಲ್ಲಿ (ಅಯೋಧ್ಯಾಕಾಂಡ, ಪರಿಚ್ಛೇದ ೧೧೭, ಶ್ಲೋಕ ೨೨ರಿಂದ ೨೪) ವಿವರಿಸುತ್ತಾಳೆ. "ಓಹ್ಞ್! ಹೆಮ್ಮೆಯ ಸೀತೆಯೇ, ಮಹಾನ್ ಸಂಪದವುಳ್ಳ ದೇಶಗಳು ಯಾವ ಸ್ತ್ರೀಯರು ತಮ್ಮ ಪತಿಯರಿಗೆ ನಿಷ್ಠರಾಗಿರುತ್ತಾರೋ ಅವರಿಗಾಗಿ ಕಾಯುತ್ತವೆ; ಆಕೆಯ ಪತಿಯು ಪಟ್ಟಣ ಅಥವಾ ಅಡವಿಯಲ್ಲಿ ನಿವಸಿಸಲಿ, ಅವನು ಒಳ್ಳೆಯವನಿರಲಿ ಅಥವಾ ಕೆಟ್ಟವನಿರಲಿ. ಯಾವ ಸ್ತ್ರೀಯರು ಪೂಜ್ಯಭಾವನೆಯನ್ನು ಉಂಟುಮಾಡುವ ವರವನ್ನು ಪಡೆದಿದ್ದಾರೋ ಅವರ ಕಣ್ಣುಗಳಲ್ಲಿ ಪತಿಯೇ ಪರದೈವವು, ಆಕೆಯ ಪತಿಯು ದುಷ್ಟನಿರಲಿ ಅಥವಾ ವ್ಯಭಿಚಾರಿಯಾಗಿರಲಿ ಅಥವಾ ದಟ್ಟ ದರಿದ್ರನಿರಲಿ. ನಾನು ಗಾಢವಾಗಿ ಆಲೋಚಿಸಿದರೂ ಸಹ, ಒಬ್ಬ ಸ್ತ್ರೀಗೆ ಆಕೆಯ ಪತಿಗಿಂತ ಶ್ರೇಷ್ಠನಾದ ಸ್ನೇಹಿತನನ್ನು ನಾನು ಕಲ್ಪಿಸಿಕೊಳ್ಳಲಾರೆ. ಆವನು, ಆಕೆಯು ಬಯಸಿದ ವಸ್ತುಗಳನ್ನು; ಎಲ್ಲಾ ಸ್ಥಳಗಳಲ್ಲಿ ಕಠಿಣ ತಪಸ್ಸಿನಿಂದ ಹೊಂದುವ ನಾಶವಿಲ್ಲದ ಫಲಗಳಂತೆ ಕೊಡುವ ಸಾಮರ್ಥ್ಯವುಳ್ಳವನಾಗಿರುತ್ತಾನೆ".
ಪುನಃ ಪರಿಚ್ಛೇದ ೩೯, ಶ್ಲೋಕ ೨೨ರಲ್ಲಿ ರಾಮನ ತಾಯಿಯಾದ ಕೌಸಲ್ಯೆಯು ಸೀತೆಗೆ ಹೀಗೆ ಹೇಳುತ್ತಾಳೆ, "ಯಾರು ನಿಜವಾಗಿಯೂ ಸನ್ನಡತೆಯುಳ್ಳವರೋ, ಸತ್ಯಸಂಧರೋ ಮತ್ತು ಹಿರಿಯರನ್ನು ಗೌರವಿಸುವವರೋ ಮತ್ತು ತಮ್ಮ ವಂಶದ ಸಂಪ್ರದಾಯಗಳನ್ನು ಸೂಕ್ತವಾಗಿ ಪಾಲಿಸುತ್ತಾ ತಮ್ಮನ್ನು ತಾವು ’ಪತಿಯೇ ಪರಮ ಪವಿತ್ರವಾದ ವಸ್ತು ಮತ್ತು ಅವನೇ ಸಕಲಕ್ಕಿಂತಲೂ ಶ್ರೇಷ್ಠನ’ ಎನ್ನುವ ಕಟ್ಟಳೆಯೊಳಗೆ ಪರಿಮಿತಿಗೊಳಿಸಿಕೊಳ್ಳುತ್ತಾರೋ, ಅಂತಹ ಸ್ತ್ರೀಯರ ಹೃದಯಗಳನ್ನು ಉನ್ನತಕುಲದಲ್ಲಿ ಜನಿಸುವುದಾಗಲಿ, ಅದೃಷ್ಟವನ್ನು ಪಡೆದಿರುವುದಾಗಲಿ, ವಿದ್ಯೆಯಾಗಲಿ, ಕಾಣಿಕೆಯಾಗಲಿ ಅಥವಾ ವಿವಾಹ ಬಂಧನವಾಗಲಿ ಕಟ್ಟಿ ಹಾಕಲಾರದು".
ಪುನಃ ಸುಂದರಕಾಂಡದ ೨೪ನೇ ಪರಿಚ್ಛೇದದ ೯ನೇ ಶ್ಲೋಕದಲ್ಲಿ, ಸೀತೆಯು ಹೀಗೆ ಹೇಳುತ್ತಾಳೆ, "ನಾನು ಇಕ್ಷ್ವಾಕು ಕುಲತಿಲಕನಾದ ನನ್ನ ಪತಿಯಾದ ಶ್ರೀರಾಮನಲ್ಲಿ ಭಕ್ತಿಯುಳ್ಳವಳಾಗಿದ್ದೇನೆ, ಯಾವ ವಿಧದಲ್ಲಿ ಅದೃಷ್ಟವಂತೆಯಾದ ಶಚೀ ದೇವಿಯು ಇಂದ್ರನಿಗಾಗಿ ಪರಿತಪಿಸುತ್ತಾಳೆಯೋ, ಯಾವ ವಿಧದಲ್ಲಿ ಆರುಂಧತಿಯು ವಶಿಷ್ಠರಿಗಾಗಿ ಮತ್ತು ಯಾವ ವಿಧದಲ್ಲಿ ಚಂದ್ರನಿಗಾಗಿ ರೋಹಿಣಿಯು (ಚಂದ್ರನಿಗೆ ಇರುವ ೨೭ ಹೆಂಡಿರಲ್ಲಿ ಅತ್ಯಂತ ಪ್ರಮುಖಳು; ಅವನು ಆಕಾಶದಲ್ಲಿರುವ ಇದೇ ಸಂಖ್ಯೆಯಷ್ಟು ನಕ್ಷತ್ರಗಳ ಗುಂಪಿನಲ್ಲಿ ನಿವಸಿಸುತ್ತಾನೆ), ಲೋಪಾಮುದ್ರೆಯು ಅಗಸ್ತ್ಯ ಋಷಿಗಳಿಗಾಗಿ ಮತ್ತು ಸುಕನ್ಯೆಯು ಚ್ಯವನ ಮಹರ್ಷಿಗಾಗಿ, ಸಾವಿತ್ರಿಯು ಸತ್ಯವಾನನಿಗಾಗಿ ಪರಿತಪಿಸಿದಂತೆ ಮತ್ತು ಶ್ರೀಮತಿಯು ಕಪಿಲ ದೇವನಿಗಾಗಿ, ರಾಜ ಸೌದಸನಿಗಾಗಿ ಮದಯಂತಿಯಂತೆ, ಕೇಶಿನಿಯು ರಾಜ ಸಗರನಿಗಿರುವಂತೆ, ಮತ್ತು ಭೀಮರಾಜನ ಪುತ್ರಿಯಾದ ದಮಯಂತಿಯು ತನ್ನ ಪತಿಯಾದ ನಳನಿಗೆ ನಿಷ್ಠಳಾಗಿದ್ದಂತೆ".
ರಾಮಾಯಣದ ಮೇಲಿನ ಉಲ್ಲೇಖಗಳಂತೆ ಸುವಾಸಿನಿ ಎಂದರೆ ಕೇವಲ ಒಳ್ಳೆಯ ಒಡವೆ ವಸ್ತ್ರಗಳನ್ನು ಧರಿಸಿದವಳಲ್ಲ, ಆದರೆ ಒಳ್ಳೆಯ ಗುಣ ನಡತೆಯುಳ್ಳವಳೂ ಸಹ.
ಲಲಿತಾಂಬಿಕೆಯು ಪವಿತ್ರವಾದ ಮತ್ತು ಮಂಗಳಕರವಾದ ಹಾಗು ಸೊಬಗಿನಿಂದ ಕೂಡಿದ ವಸ್ತ್ರಧಾರಿಯಾಗಿರುವುದಲ್ಲದೇ ಆಕೆಯು ಸಕಲ ಸದ್ಗುಣಗಳ ಸ್ವರೂಪವಾಗಿರುವುದರಿಂದ ಆಕೆಯನ್ನು ವಾಗ್ದೇವಿಗಳು ಸುವಾಸಿನಿ ಎಂದು ಸಂಭೋದಿಸಿದ್ದಾರೆ.
Suvāsinyarcana-prītā सुवासिन्यर्चन-प्रीता (971)
೯೭೧. ಸುವಾಸಿನ್ಯಾರ್ಚನ-ಪ್ರೀತಾ
ದೇವಿಯು ಹಿಂದಿನ ನಾಮದಲ್ಲಿ ಚರ್ಚಿಸಿರುವಂತಹ ಸುವಾಸಿನಿಯರಿಂದ ಪೂಜಿಸಲ್ಪಟ್ಟಾಗ ಸಂತೋಷಗೊಳ್ಳುತ್ತಾಳೆ. ನವಾವರಣ ಪೂಜೆಯ ಅಂತಿಮ ಘಟ್ಟದಲ್ಲಿ, ಈ ವಿಧವಾದ ಸುವಾಸಿನಿಯರನ್ನು ಅತ್ಯಂತ ಗೌರವದಿಂದ ಪೂಜಿಸಲಾಗುತ್ತದೆ.
Āśobhanā आशोभना (972)
೯೭೨. ಆಶೋಭನಾ
ಆ ಅಕ್ಷರವು ಶೋಭನಾ ಶಬ್ದದ ಬಲವನ್ನು ಹೆಚ್ಚಿಸುತ್ತದೆ. ಶೋಭನಾ ಎಂದರೆ ಸುಂದರವಾದದ್ದು ಮತ್ತು ಆಶೋಭನಾ ಎಂದರೆ ಅತ್ಯಂತ ಸುಂದರವಾದದ್ದು.
ಸೌಂದರ್ಯ ಲಹರಿಯು ಎರಡು ಭಾಗಗಳನ್ನು ಒಳಗೊಂಡಿದೆ, ಆನಂದ ಲಹರೀ (ಸ್ತ್ರೋತ್ರ ೧ರಿಂದ ೪೧) ಮತ್ತು ಸೌಂದರ್ಯ ಲಹರೀ (ಸ್ತ್ರೋತ್ರ ೪೨ರಿಂದ ೧೦೦). ಇದರಲ್ಲಿ ಆನಂದ ಲಹರಿಯು ಪರಮಾನಂದದ ಕುರಿತಾಗಿ ಹೇಳಿದರೆ ಸೌಂದರ್ಯ ಲಹರಿಯು ವಿಶೇಷವಾಗಿ ದೇವಿಯ ಸೌಂದರ್ಯವನ್ನು ವರ್ಣಿಸುತ್ತವೆ.
Śuddhamānasā शुद्धमानसा (973)
೯೭೩. ಶುದ್ಧಮನಸಾ
ದೇವಿಯು ಪರಿಶುದ್ಧ ಮನಸ್ಕಳು. ಮನಸ್ಸು ಇಂದ್ರಿಯಗಳೊಂದಿಗೆ ಸಂಭಂದ ಹೊಂದಿದ್ದರೆ ಅದು ಕಲುಷಿತವಾಗುತ್ತದೆ. ದೇವಿಯನ್ನು ಕೇವಲ ಪರಿಶುದ್ಧವಾದ ಪ್ರಜ್ಞೆಯಿದ್ದಾಗ ಅರಿಯಬಹುದು, ಮನಸ್ಸಿನ ಈ ಸ್ಥಿತಿಯಲ್ಲಿ ಮನಸ್ಸು ಸಂಪೂರ್ಣವಾಗಿ ಲಲಿತಾಂಬಿಕೆಯ ಮೇಲೆಯೇ ಕೇಂದ್ರೀಕೃತಗೊಂಡು ಇತರೇ ಆಲೋಚನೆಗಳಿಂದ ಮುಕ್ತವಾಗಿರುತ್ತದೆ. ಇದನ್ನು ಧ್ಯಾನದ ಮೂಲಕ ಪಡೆಯಬಹುದು.
ದೇವಿಯು ಕರ್ಮ ಮತ್ತು ವಾಸನೆಗಳಿಂದ ಪ್ರಭಾವಿತಳಾಗುವುದಿಲ್ಲ, ಆದ್ದರಿಂದ ಆಕೆಯು ಶುದ್ಧಮನಸ್ಸುಳ್ಳವಳಾಗಿದ್ದಾಳೆ.
ಇಂತಹ ವಿವರಣೆಗಳು ಬ್ರಹ್ಮವು ಸರ್ವವ್ಯಾಪಿಯಾಗಿದೆ ಮತ್ತು "ತತ್ತ್ವಮಸಿ" ಎಂದು ಹೇಳುವ ಮಹಾನ್ ವಾಕ್ಯಗಳ ಮೇಲೆ ಆಧರಿಸಿವೆ. ಒಬ್ಬನು ತನ್ನನ್ನು ತಾನು ಅದೇ (ಬ್ರಹ್ಮ) ಎಂದು ಪರಿಗಣಿಸಬೇಕಾದರೆ ಅವನಿಗೆ ಅವಶ್ಯವಾಗಿ ಬ್ರಹ್ಮದ ಗುಣಗಳ ಬಗ್ಗೆ ತಿಳುವಳಿಕೆಯಿರಬೇಕು. ಈ ನಾಮವು ಶುದ್ಧವಾದ ಮನಸ್ಸು ಬ್ರಹ್ಮದ ಅವಶ್ಯ ಲಕ್ಷಣವೆಂದು ಹೇಳುತ್ತದೆ. ಇಂತಹ ವಿವರಣೆಗಳು ಸಾಧಕನಿಗೆ ಬ್ರಹ್ಮದ ಲಕ್ಷಣಗಳನ್ನು ತಿಳಿಸಿಕೊಡುತ್ತವೆ, ಇಂತಹ ಲಕ್ಷಣಗಳನ್ನು ಅಭ್ಯಾಸ ಮಾಡಿ ಅನುಷ್ಠಾನಕ್ಕೆ ತರಬಹುದು ಮತ್ತದರ ಮೂಲಕ ಸಾಧಕನು ಸ್ವಯಂ ಬ್ರಹ್ಮವೇ ಆಗಬಹುದು ಅಥವಾ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯಬಹುದು.
Bindu-tarpaṇa-santuṣṭā बिन्दु-तर्पण-सन्तुष्टा (974)
೯೭೪. ಬಿಂದು-ತರ್ಪಣ-ಸಂತುಷ್ಟಾ
ದೇವಿಯು ಬಿಂದುವಿನಲ್ಲಿ ಸಮರ್ಪಿಸುವ ಅರ್ಪಣೆಗಳಿಂದ ಸಂತುಷ್ಟಳಾಗುತ್ತಾಳೆ. ಬಿಂದುವನ್ನು ಕುರಿತಾಗಿ ಇದುವರೆಗಾಗಲೇ ನಾಮ ೯೦೫ - ’ಬೈಂದವಾಸನಾ’ದಲ್ಲಿ ಚರ್ಚಿಸಲಾಗಿದೆ. ಶ್ರೀ ಚಕ್ರದ ಕೇಂದ್ರದಲ್ಲಿರುವ ಚುಕ್ಕೆಯನ್ನು ಬಿಂದುವೆಂದು ಕರೆಯಲಾಗುತ್ತದೆ. ಅದು ಅತ್ಯಂತ ಒಳಗಡೆ ಇರುವ ತ್ರಿಕೋಣದಲ್ಲಿ ಇರಿಸಲ್ಪಟ್ಟಿರುತ್ತದೆ, ಶ್ರೀ ಮೇರುವಿನಲ್ಲಾದರೆ ತುತ್ತತುದಿಯಲ್ಲಿರಿಸಲಾಗಿರುತ್ತದೆ, (ಹೆಚ್ಚಿನ ವಿವರಣೆಗಳನ್ನು ನಾಮ ೯೭೬ರಲ್ಲಿ ನೋಡೋಣ). ಬಿಂದುವನ್ನು ‘ಸರ್ವಾನಂದಮಯ ಚಕ್ರ’ ಅಥವಾ ‘ಬೈಂದವ ಸ್ಥಾನ’ವೆಂದೂ ಕರೆಯಲಾಗುತ್ತದೆ. ದೇವಿಯನ್ನು ಇಲ್ಲಿ ವಿಶೇಷ ಅರ್ಘ್ಯ ಮತ್ತು ಪುಷ್ಪಗಳಿಂದ ಪೂಜಿಸಲಾಗುತ್ತದೆ. ವಿಶೇಷ ಅರ್ಘ್ಯದ ತಯಾರಿಕೆ ಮತ್ತು ಅದರ ಅರ್ಪಣೆಯು ಶ್ರೀ ಚಕ್ರದ ನವಾವರಣ ಪೂಜೆಯಲ್ಲಿ ಪ್ರಮುಖವಾದ ಆಚರಣೆಯೆನಿಸಿದೆ. ಬಿಂದುವಿನ ಮೇಲೆ ವಿಶೇಷವಾದ ಅರ್ಘ್ಯವನ್ನು ಸಮರ್ಪಿಸುವುದನ್ನು ತರ್ಪಣವೆಂದು ಕರೆಯಲಾಗುತ್ತದೆ. ಸುಧಾ ದೇವಿಯನ್ನು ವಿಶೇಷ ಅರ್ಘ್ಯವಿರುವ ಪಾತ್ರೆಯೊಳಗೆ ಆವಾಹಿಸಲಾಗುತ್ತದೆ. ಇದು ಬಹಳ ದೀರ್ಘವಾದ ವಿಧಾನವಾಗಿದ್ದು ಅದು ಸಾಕಷ್ಟು ಆಚರಣೆ ಮತ್ತು ಮಂತ್ರಗಳಿಂದ ಕೂಡಿರುತ್ತದೆ. ವಿಶೇಷ ಅರ್ಘ್ಯವನ್ನು ಸಂಪೂರ್ಣವಾಗಿ ತನ್ನ ಗುರುವಿನ ಮಾರ್ಗದರ್ಶನದಂತೆ ಒಬ್ಬನು ತಯಾರಿಸಬೇಕು. ವಾಮ ಹಸ್ತದ ಪೂಜಕರು ವಿಶೇಷ ಅರ್ಘ್ಯದ ತಯಾರಿಕೆಯಲ್ಲಿ ಮದ್ಯ ಮೊದಲಾದ ಮತ್ತೇರಿಸುವ ಪದಾರ್ಥಗಳನ್ನು ಸೇರಿಸುತ್ತಾರೆ.
Pūrvajā पूर्वजा (975)
೯೭೫. ಪೂರ್ವಜಾ
ದೇವಿಯು ಸೃಷ್ಟಿಯ ಮುಂಚಿನಿಂದಲೂ ಅಸ್ತಿತ್ವದಲ್ಲಿದ್ದಳು. ಶಿವನು ಲಲಿತಾಂಬಿಕೆಯನ್ನು ಸೃಷ್ಟಿಸಿದರೆ ಆಕೆಯು ಈ ಬ್ರಹ್ಮಾಂಡವನ್ನು ಸೃಷ್ಟಿಸಿದಳೆಂದು ಹೇಳಲಾಗುತ್ತದೆ. ಬ್ರಹ್ಮವು ನಿರಂತರವಾದ ಸತ್ಯವಾಗಿದೆ. ಮಾಯೆಯನ್ನು ತೋರಿಕೆಯ ಸತ್ಯವೆಂದು ವಿವರಿಸಬಹುದು. ಬ್ರಹ್ಮಕ್ಕೆ ನಾಮರೂಪಗಳಿಲ್ಲ ಆದರೆ ಮಾಯೆಗೆ ಸಂಪೂರ್ಣವಾಗಿ ನಾಮರೂಪಗಳಿದ್ದು ಅದು ಭ್ರಮಾತ್ಮಕವಾದ ಅಸ್ತಿತ್ವವನ್ನು (ಇರುವಿಕೆಯನ್ನು) ಹೊರಹೊಮ್ಮಿಸಿದೆ. ಮಾಯೆಯು ಬ್ರಹ್ಮದ ಸೃಷ್ಟಿಯಾಗಿದೆ. ಈ ನಾಮದ ಉದ್ದೇಶ ಇವನ್ನು ತಿಳಿಸುವುದಾಗಿದೆ. ಈ ನಾಮವನ್ನು ೩೯೭ನೇ ನಾಮವಾದ ’ಮೂಲಪ್ರಕೃತಿಃ’ಯ ಹಿನ್ನಲೆಯಲ್ಲಿಯೂ ವಿವರಿಸಬಹುದು.
Tripurāmbikā त्रिपुराम्बिका (976)
೯೭೬. ತ್ರಿಪುರಾಂಬಿಕಾ
ತ್ರಿಪುರಾಂಬಿಕಾ ದೇವಿಯು ಶ್ರೀಚಕ್ರದ ಎಂಟನೆಯ ಆವರಣದಲ್ಲಿ ಉಪಸ್ಥಿತವಾಗಿರುವ ದೇವತೆಯಾಗಿದೆ. ಈ ಆವರಣವು ಅತ್ಯಂತ ಒಳ ತ್ರಿಕೋಣವಾಗಿದ್ದು ಇದರ ಮಧ್ಯದಲ್ಲಿ ಶ್ರೀ ಚಕ್ರದ ಕೇಂದ್ರ ಚುಕ್ಕೆಯಾದ ಬಿಂದುವನ್ನು ಇರಿಸಲಾಗಿರುತ್ತದೆ. ಈ ಸಹಸ್ರನಾಮದ ಕೊನೆಯಲ್ಲಿ ವಾಗ್ದೇವಿಗಳು ಎಂಟನೆಯ ಆವರಣದ ದೇವತೆಯನ್ನು ಪೂಜಿಸುತ್ತಾರೆಂದೂ ಅಭಿಪ್ರಾಯಪಡಬಹುದು. ಈ ತ್ರಿಕೋಣವು ಲಲಿತಾಂಬಿಕೆಯ ಅತಿಸೂಕ್ಷ್ಮವಾದ ಕಾಮಕಲಾರೂಪದ ರಚನೆಯಾಗಿದೆ. ತ್ರಿಪುರಾಂಬಿಕಾ ಎಂದರೆ ತ್ರಿಪುಟಿಗಳ ಮಾತೆ ಎಂದರ್ಥ. ಈ ತ್ರಿಪುಟಿಯು ಸೃಷ್ಟಿ, ಸ್ಥಿತಿ, ಮತ್ತು ಮಹತ್ (ಮಹಾನ್ ತತ್ವವಾದ ಬುದ್ಧಿ ಅಥವಾ ಮೇದಾವಿತನದ ತತ್ವ - ಸಾಂಖ್ಯಪದ್ಧತಿಯಂತೆ ೨೩ತತ್ವಗಳಲ್ಲಿ ಎರಡನೆಯದು ಮತ್ತು ಅಹಂಕಾರ ಅಥವಾ ’ನಾನು ಎನ್ನುವ ಪ್ರಜ್ಞೆ’ ಮತ್ತು ಮನಸ್ಸುಗಳ ಮೂಲ). ಈ ತ್ರಿಕೋಣದ ಮೂರು ಭುಜಗಳು ತ್ರಿಪುಟಿಯ ರೂಪದಲ್ಲಿರುವ ಸಮಸ್ತವನ್ನೂ ಪ್ರತಿನಿಧಿಸುತ್ತವೆ. ಉದಾಹರಣೆಗೆ ಸೃಷ್ಟಿ, ಸ್ಥತಿ ಮತ್ತು ಲಯಗಳು; ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ, ಮೊದಲಾದವುಗಳು.
ಈ ತ್ರಿಕೋಣದ ಮೂಲೆಗಳನ್ನು ಶ್ರೀ ಚಕ್ರದ ಪ್ರಮುಖ ದೇವತೆಗಳಾದ ವಾಮಾ, ವಜ್ರೇಶ್ವರೀ ಮತ್ತು ಭಗಮಾಲಿನೀ ದೇವಿಯರು ರಕ್ಷಿಸುತ್ತಾರೆ. ವಾಮಕೇಶ್ವರ ತಂತ್ರವು (೪.೯ ಮತ್ತು ೧೦) ಹೀಗೆ ಹೇಳುತ್ತದೆ, "ಆಕೆಯು ತ್ರಿಕೋಣಗಳ ರಚನಕಾರರಾದ ವಾಮಾ, ಶಿಖಾ ಮತ್ತು ಜ್ಯೇಷ್ಠಾ. ರೌದ್ರಿಯಾಗಿ ಆಕೆಯು ಈ ಸಮಸ್ತ ವಿಶ್ವವನ್ನು ನುಂಗುತ್ತಾಳೆ. ಆಕೆಯು ಪರಮಶ್ರೇಷ್ಠವಾದ ಸಂಯುಕ್ತ ಶಕ್ತಿ ಅಥವಾ ಪರಮೇಶ್ವರೀ, ತ್ರಿಪುರಾ, ಮತ್ತು ಸ್ವಯಂ ಬ್ರಹ್ಮ, ವಿಷ್ಣು ಮತ್ತು ಈಶಳಾಗಿದ್ದಾಳೆ."
ಒಂಬತ್ತನೇ ಆವರಣದಲ್ಲಿ ಆಕೆಯನ್ನು ಸಕಲ ತ್ರಿಪುಟಿಗಳ ಒಟ್ಟು ಮೊತ್ತವಾದ ಲಲಿತಾಂಬಿಕೆಯಾಗಿ ಪೂಜಿಸಲಾಗುತ್ತದೆ. ಎಲ್ಲಾ ತ್ರಿಪುಟಿಗಳು ಒಂಬತ್ತನೇ ಆವರಣವಾದ ಬಿಂದುವಿನಲ್ಲಿ ಒಂದಾಗುತ್ತವೆ. ಸತ್, ಚಿತ್ ಮತ್ತು ಆನಂದ ಇವೆಲ್ಲವೂ ಪರಬ್ರಹ್ಮವಾಗಲು ಒಂದಾಗುತ್ತವೆ ಮತ್ತು ಆಕೆಯು ಅಲ್ಲಿ ನಿತ್ಯ ನಿರಂತರವಾದ ನಿರ್ಗುಣ ಬ್ರಹ್ಮವಾಗಿ ಹೊಳೆಯುತ್ತಾಳೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 968 - 976 http://www.manblunder.com/2010/07/lalitha-sahasranamam-968-976.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೨೦೩. ಲಲಿತಾ ಸಹಸ್ರನಾಮ ೯೬೮ರಿಂದ ೯೭೬ನೇ ನಾಮಗಳ ವಿವರಣೆ
ಶ್ರೀಧರರೆ, "೨೦೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೬೮ - ೯೭೬
_____________________________
.
೯೬೮. ಸುಖಕರೀ
ಯಾರಿಗುಂಟು ಭಕ್ತರಲಿಂತಹ ಕರುಣೆ, ಎಣೆಯಿಲ್ಲದ ಪ್ರೀತಿ
ಸಾಗರದಾಳದ ಮಮತೆಯನ್ಹರಿಸಿ, ಸಂತಸ ಪಡಿಸೊ ರೀತಿ
ಸಂತೋಷದಾಯಿನಿ ಹರ್ಷಪ್ರದಾಯಿನಿಯ ಕಾರ್ಯ ವೈಖರಿ
ಭಕ್ತರಲಿ ಸುಖವುಂಟು ಮಾಡುತ ದೇವಿ ಲಲಿತೆಯೆ ಸುಖಕರೀ ||
.
೯೬೯. ಸುವೇಷಾಢ್ಯಾ
ಸುಂದರ ಮಂಗಳಕರ ಅಲಂಕೃತವಿರೆ ಸುವೇಷಾ, ಅಭಿವ್ಯಕ್ತಿ ಸ್ವರೂಪ
ಸೌಂದರ್ಯವೆ ದೇವಿ ರೂಪಾಗಿ ಸಾಕಾರ, ಸಿಂಗಾರದೆ ಬೆಳಗುವ ದೀಪ
ಶುಭದಾಯಿನಿ ಶುಭಕರಿ ಮಂಗಳರೂಪಿಣಿ ಅಲಂಕಾರದೆ ಸುವೇಷಾಢ್ಯಾ
ದುಷ್ಟ ದಮನದೆ ಭೀಕರ ರೂಪ, ಅರಿಗಳನಂತಕನ ಮನೆಗಟ್ಟೊ ಬಲಾಡ್ಯ ||
.
೯೭೦. ಸುವಾಸಿನಿ
ಮಂಗಳಕರ ವಸ್ತ್ರಧಾರಿಣಿ, ಅತಿ ನಿಷ್ಠೆಯ ಪತಿ ಸಹವಾಸಿನಿ ಸುವಾಸಿನಿ
ಪೂಜ್ಯಭಾವ ಹುಟ್ಟಿಸುತೆ, ಆತ್ಮ ಸಖ ಪತಿಯೆ ಪರದೈವವೆನ್ನೊ ಸ್ವಾಮಿನಿ
ಸಂಪ್ರದಾಯದಂತೆ ಹಿರಿಯರ ಗೌರವಿಸೊ ಸನ್ನಡತೆ ಸತ್ಯ ಸಂಧತೆ ಗುಣ
ಲಲಿತೆಯ ಮಂಗಳರೂಪ-ವಸ್ತ್ರಧಾರಣೆ-ಸದ್ಗುಣ ಸ್ವರೂಪದೆ ಅನಾವರಣ ||
.
೯೭೧. ಸುವಾಸಿನ್ಯಾರ್ಚನ-ಪ್ರೀತಾ
ಸುವಾಸಿನಿ ತಾನಾಗಿ ಲಲಿತೆ, ನಿಜಸತಿಯರಿಗೆಲ್ಲ ಮಾರ್ಗದರ್ಶಿಸುತ
ಸುವಾಸಿನಿಯರೆ ಪೂಜಿಸುತಿರೆ ಹರ್ಷಿಸೊ ಸುವಾಸಿನ್ಯಾರ್ಚನ-ಪ್ರೀತಾ
ನವಾವರಣ ಪೂಜಾ ಪ್ರಕರಣಾ, ಅಂತಿಮ ಘಟ್ಟದೆ ಸುವಾಸಿನಿ ಸಹಿತ
ಗೌರವಾದರದಿ ಪೂಜಿಸುತಲವರ, ದೇವಿಯ ಸಂತೃಪ್ತಿಗೊಳಿಸೊ ಹಂತ ||
.
೯೭೨. ಆಶೋಭನಾ
ಶೋಭನಾ ಸುಂದರವಿರೆ, ಆಶೋಭನಾ ಸಬಲ ಅತ್ಯಂತ ಸುಂದರ
ಸೃಷ್ಟಿಸ್ಥಿತಿಲಯ ತ್ರಿಕಾರ್ಯ ನಿರತೆ, ಸಕಲಕು ದೇವಿಯ ಮೊಹರ
ಪರಮಾನಂದ ಸೌಂದರ್ಯಾಸ್ವಾದ ವರ್ಣಿಸುತ ಲಹರಿ ಆರಾಧನಾ
ಸಗುಣ ನಿರ್ಗುಣ ರೂಪಿಲ್ಲದ, ಪರಬ್ರಹ್ಮದ ಸ್ವರೂಪವೆ ಆಶೋಭನಾ ||
.
೯೭೩. ಶುದ್ಧಮನಸಾ
ಶುದ್ಧವಾದ ಮನಸ್ಸು ಬ್ರಹ್ಮದ ಅವಶ್ಯ ಲಕ್ಷಣ, ಸಾಧಿಸಿದವ ಸ್ವಯಂಬ್ರಹ್ಮ
ಸರ್ವವ್ಯಾಪಿ ತತ್ತ್ವಮಸಿ ಬ್ರಹ್ಮ, ಕರ್ಮವಾಸನೆ ಕಾಡದ ಶುದ್ಧ ಮನ ಮರ್ಮ
ಇಂದ್ರಿಯಸಂಬಂಧಿ ಮನ ಕಲುಷಿತ, ಪರಿಶುದ್ಧ ಪ್ರಜ್ಞೆಗಷ್ಟೆ ದೇವಿ ಅನುಗ್ರಹ
ಧ್ಯಾನದೆ ವ್ಯರ್ಥಾಲೋಚನೆ ಮುಕ್ತಿ, ಏಕಾಗ್ರ ಮನವಿತ್ತು ದೇವಿ ಶುದ್ಧ ಮನಸಾ ||
.
೯೭೪. ಬಿಂದು-ತರ್ಪಣ-ಸಂತುಷ್ಟಾ
ಶ್ರೀ ಚಕ್ರದೊಳಗೆ ಕಡೆ ತ್ರಿಕೋನದೆ, ಶ್ರೀ ಮೇರು ತುತ್ತ ತುದಿ ಬಿಂದು ಲಲಿತೆ
ಬೈಂದವ ಸ್ಥಾನ - ಸರ್ವಾನಂದಮಯ ಚಕ್ರ, ವಿಶೇಷಾರ್ಘ್ಯ ಪುಷ್ಪ ಪೂಜಿತೆ
ನವಾವರಣ ಪೂಜೆ ಅರ್ಘ್ಯ ಸಮರ್ಪಿಸೆ ತರ್ಪಣೆ, ಪಾತ್ರೆಗಾವಾಹಿಸುತ ಪಟ್ಟ
ಚುಕ್ಕೆ ಬಿಂದುವಿನಾ ಸಮರ್ಪಣೆಗೆ ತೃಪ್ತೆ ಲಲಿತೆ, ಬಿಂದು-ತರ್ಪಣ-ಸಂತುಷ್ಟಾ ||
.
೯೭೫. ಪೂರ್ವಜಾ
ಶಿವನ ಸೃಷ್ಟಿ ಲಲಿತಾಂಬಿಕೆ, ದೇವಿಯವಳ ದೃಷ್ಟಿಗೆ ಬ್ರಹ್ಮಾಂಡಸೃಷ್ಟಿ
ಬ್ರಹ್ಮ ನಿರಂತರ ಸತ್ಯ ಸೃಷ್ಟಿಸಿಹ ಮಾಯೆ, ತೋರಿಕೆ ಸತ್ಯದ ಸಮಷ್ಟಿ
ಬ್ರಹ್ಮಕೆಲ್ಲಿ ನಾಮರೂಪ, ಭ್ರಮಾತ್ಮಕ ಅಸ್ತಿತ್ವ ಮಾಯ ನಾಮದ ಬೀಜ
ಮೂಲಪ್ರಕೃತಿಃ ಬ್ರಹ್ಮ ಲಲಿತೆ, ಪ್ರಪ್ರಥಮದಿಂದಿಹ ಅಸ್ತಿತ್ವ ಪೂರ್ವಜಾ ||
.
೯೭೬. ತ್ರಿಪುರಾಂಬಿಕಾ
ತ್ರಿಪುಟಿಗಳೆಲ್ಲದರ ಮಾತೆ ತ್ರಿಪುರಾಂಬಿಕಾ, ಸೃಷ್ಟಿ-ಸ್ಥಿತಿ-ಮಹತ್ ತ್ರಿಪುಟಿ
ಶ್ರೀ ಚಕ್ರದೆಂಟನೆ ಆವರಣದಲುಪಸ್ಥಿತ ದೇವತೆ, ಬಿಂದು ತ್ರಿಕೋನ ಮಹತಿ
ಶೃಂಗಗಳ ರಕ್ಷಣೆಗೆ ವಾಮಾ-ವಜ್ರೇಶ್ವರೀ-ಭಗಮಾಲಿನೀದೇವಿಯರ ಸಾನಿಧ್ಯ
ತ್ರಿಪುಟಿ ಮೊತ್ತ ಪೂಜಿತೆ, ಸತ್-ಚಿತ್-ಆನಂದವೊಂದಾದ ಪರಬ್ರಹ್ಮ ನಿತ್ಯ ||
.
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು