೨೦೭. ಲಲಿತಾ ಸಹಸ್ರನಾಮ ೯೯೧ರಿಂದ ೯೯೫ನೇ ನಾಮಗಳ ವಿವರಣೆ

5

                                                                ಲಲಿತಾ ಸಹಸ್ರನಾಮ ೯೯೧-೯೯೫

Ṣaḍadhvātīta-rūpiṇī षडध्वातीत-रूपिणी (991)

೯೯೧. ಷಡಧ್ವಾತೀತ-ರೂಪಿಣೀ

            ಷಡಧ್ವ ಎಂದರೆ ದೇವಿಯನ್ನು ಪೂಜಿಸುವ ಆರು ವಿಧವಾದ ಮಾರ್ಗಗಳು (ಅಧ್ವಾನ್ ಎಂದರೆ ಮಾಧ್ಯಮ, ವಿಧಾನ ಅಥವಾ ಮಾರ್ಗಗಳು) ಮತ್ತು ಅತೀತ ಎಂದರೆ ಅಧಿಗಮಿಸು. ದೇವಿಯು ಆರು ಪೂಜಾ ವಿಧಾನಗಳಿಗೆ ಅತೀತಳಾಗಿದ್ದಾಳೆ. ಆರು ವಿಧವಾದ ಪೂಜೆಗಳೆಂದರೆ, ಪಾದ (ಒಂದು ಶ್ಲೋಕ ಅಥವಾ ಒಂದು ಸಾಲು), ಭುವನ (ನಿವಾಸ ಸ್ಥಳ ಅಂದರೆ ಶ್ರೀಚಕ್ರವನ್ನು ಸೂಚಿಸುತ್ತದೆ), ವರ್ಣ (ವರ್ಣ ಎಂದರೆ ಬಾಹ್ಯರೂಪ, ಹೊರಗೆ ಕಾಣುವ, ರೂಪ, ಆಕಾರ, ಆಕೃತಿ, ಅಂದರೆ ಇದು ಮೂರ್ತಿ ಪೂಜೆಯನ್ನು ಸೂಚಿಸುತ್ತದೆ. ವರ್ಣ ಎಂದರೆ ಅಕ್ಷರಗಳೆಂದೂ ಅರ್ಥವಿದೆ. ದೇವಿಯು ಮಾತೃಕಾ-ವರ್ಣ-ರೂಪಿಣೀ - ನಾಮ ೫೭೭), ತತ್ತ್ವ (ಶಿವಾಗಮದ ಪ್ರಕಾರ ಹೇಳಿರುವ ಸಿದ್ಧಾಂತಗಳು), ಕಲಾ (ಅರವತ್ನಾಲ್ಕು ವಿಧವಾದ ತಂತ್ರಗಳು ಅಥವಾ ಅರವತ್ನಾಲ್ಕು ಲಲಿತ ಕಲೆಗಳು. ಕೆಲವೊಮ್ಮೆ ಕಲಾವು ಕಾಲವನ್ನೂ ಸೂಚಿಸುತ್ತದೆ), ಮತ್ತು ಮಂತ್ರ (ಅಕ್ಷರಗಳ ಸಂಯೋಜನೆ). ಈ ಆರರಲ್ಲಿ ಪಾದ, ವರ್ಣ, ಮತ್ತು ಮಂತ್ರಗಳು ಧ್ವನಿಯ ರೂಪಾಂತರಗಳು ಅಥವಾ ಇವು ವಾಕ್‌ನ (ಮಾತಿನ) ರೂಪದಲ್ಲಿ ಇರುತ್ತವೆ. ಇದನ್ನೇ ವಿಮರ್ಶ ರೂಪವೆನ್ನುತ್ತಾರೆ. ಉಳಿದ ಮೂರು ಭುವನ (ಭೂಮಿ), ತತ್ತ್ವ ಮತ್ತು ಕಲಾ, ಇವುಗಳು ‘ಅರ್ಥ’ದ ಅಂದರೆ ’ಮೂಲ ಕಾರಣ’ದ ರೂಪಾಂತರಗಳಾಗಿವೆ. ಇದನ್ನೇ ಪ್ರಕಾಶ ರೂಪವೆನ್ನುತ್ತಾರೆ. ಈ ವಿಶ್ವವು ನಿರಂತರವಾಗಿ ಹೊಳೆಯುವ; ಅದಿಲ್ಲದೇ ಯಾವುದೇ ವಸ್ತುವನ್ನು ನೋಡಲಾಗದು ಇಂತಹ ಶಿವನ ಪ್ರಕಾಶ ರೂಪವು, ಶಕ್ತಿಯ (ಶಿವನ ಸ್ವತಂತ್ರ ಶಕ್ತಿ, ಇದನ್ನೇ ಶಿವನು ಶಕ್ತಿ ದೇವಿಗೆ ಕೊಟ್ಟಿದ್ದಾನೆ; ಇದನ್ನು ಶಿವನ ಸಹಜ ಸ್ವಭಾವ ಎಂದೂ ಕರೆಯಲಾಗುತ್ತದೆ) ವಿಮರ್ಶ ರೂಪದೊಂದಿಗೆ ಒಂದುಗೂಡುತ್ತದೆ. ಈ ವಿಧವಾಗಿ ಈ ನಾಮವು ದೇವಿಯು ಇವೆಲ್ಲುವುಗಳಿಗೆ ಅತೀತಳಾಗಿದ್ದಾಳೆ ಅಥವಾ ನಿಲುಕಲಾರದವಳಾಗಿದ್ದಾಳೆ ಎಂದು ಹೇಳುತ್ತದೆ, ಮತ್ತು ಆಕೆಯನ್ನು ಹೊಂದಬೇಕಾದರೆ ಒಬ್ಬನು ಈ ಆರು ವಿಧಾನಗಳ ಮೂಲಕ ಶ್ರೀ ಚಕ್ರದ ಮೇಲೆ ಧ್ಯಾನಿಸಬೇಕು. ಮೊದಲು ಸಾಧಕನು ಮಂತ್ರ ಸಿದ್ಧಿಯನ್ನು ಪಡೆಯುತ್ತಾನೆ, ನಂತರ ಅವನು ಕ್ರಮೇಣವಾಗಿ ಲೋಕಗಳನ್ನು, ಸಿದ್ಧಾಂತಗಳನ್ನು ಮತ್ತು ಸಮಯವನ್ನು (ಭುವನ, ತತ್ತ್ವ ಮತ್ತು ಕಲಾ) ಇವುಗಳನ್ನು ಅಧಿಗಮಿಸಿ ಅಂತಿಮವಾಗಿ ದೇವಿಯನ್ನು ಅರಿಯುತ್ತಾನೆ. ಹೆಚ್ಚಿನ ಮಾಹಿತಿಗಾಗಿ ನಾಮ ೯೦೭ನ್ನು ನೋಡಿ.

             ಈ ನಾಮವು ಶಿವ-ಶಕ್ತಿಯರ ಐಕ್ಯತೆಯನ್ನು ಕುರಿತು ಹೇಳಲುಪಕ್ರಮಿಸಿ ಅದು ಅಂತಿಮವಾಗಿ ನಾಮ ೯೯೯ರಲ್ಲಿ ಪರ್ಯವಸಾಯಗೊಳ್ಳುತ್ತದೆ.

Avyāja-karuṇā-murtiḥ अव्याज-करुणा-मुर्तिः (992)

೯೯೨. ಅವ್ಯಾಜ-ಕರುಣಾ-ಮೂರ್ತಿಃ

           ದೇವಿಯು ಭೇದರಹಿತವಾಗಿರುವ ಕರುಣೆಯುಳ್ಳವಳು. ಅವ್ಯಾಜ ಎಂದರೆ ನಟನಾರಹಿತ. ಇದರ ಅರ್ಥವೇನೆಂದರೆ ದೇವಿಯು ನಟನೆಯ ಅಥವಾ ತೋರಿಕೆಯ ಕರುಣೆಯುಳ್ಳವಳಲ್ಲ ಆದರೆ ಆಕೆಯು ನಿಜವಾಗಿಯೂ ಕರುಣಾಮೂರ್ತಿಯಾಗಿದ್ದಾಳೆ. ಈ ನಾಮವು ಪರೋಕ್ಷವಾಗಿ ನಟಿಸುವುದನ್ನು ಖಂಡಿಸುತ್ತದೆ.  ದೇವಿಯ ಮೂಲ ಗುಣವು ಕರುಣೆಯಾಗಿದ್ದು ಇದನ್ನಾಗಲೇ ನಾಮ ೧೯೭, ೩೨೬ ಮತ್ತು ೫೮೧ರಲ್ಲಿ ಚರ್ಚಿಸಲಾಗಿದೆ. ಕರುಣೆಯು ತಾಯ್ತತನ ಲಕ್ಷಣವಾಗಿರುವಾಗ, ಇನ್ನು ಜಗನ್ಮಾತೆಯಾಗಿರುವ ದೇವಿಯು ಸಹಜವಾಗಿಯೇ ಕರುಣೆಯ ಮೂರ್ತರೂಪವೇ ಆಗಿದ್ದಾಳೆ ಎನ್ನುವುದನ್ನು ಈ ಮೂರು ನಾಮಗಳಲ್ಲಿ ಹೇಳಲಾಗಿದೆ. ಶಿವನು ಶಿಸ್ತನ್ನು ಪರಿಪಾಲಿಸುವವನು (ಯಜುರ್ವೇದ ೪.೫.೩.೧ - ಶ್ರೀ ರುದ್ರಂ ಹೀಗೆ ಹೇಳುತ್ತದೆ, "ನಿವ್ಯಾಧಿನ ಆವ್ಯಾಧಿನೀನಾಂ ಪತಯೇ ನಮಃ  निव्याधिन आव्याधिनीनां पतये नमः" ಅಂದರೆ ಯಾರು ನಿರಂತರವಾಗಿ ಶತ್ರುಗಳಿಗೆ ಘಾಸಿಯುಂಟು ಮಾಡುವವನು) ಆದರೆ ಶಕ್ತಿಯು ಕರುಣಾಮೂರ್ತಿಯಾಗಿದ್ದಾಳೆ.

          ಸೌಂದರ್ಯ ಲಹರಿಯು (ಸ್ತೋತ್ರ ೬) ದೇವಿಯ ಕಣ್ಣುಗಳು ಕರುಣಾಮಯವಾಗಿವೆ ಎಂದು ಹೇಳುತ್ತದೆ.

Ajñāna-dhvānta-dīpikā अज्ञान-ध्वान्त-दीपिका (993)

೯೯೩. ಅಜ್ಞಾನ-ಧ್ವಾಂತ-ದೀಪಿಕಾ

            ದೇವಿಯು ಅಜ್ಞಾನವನ್ನು ಹೊಡೆದೋಡಿಸುವ ದೀಪವಾಗಿದ್ದಾಳೆ. ಇಲ್ಲಿ ದೀಪವೆನ್ನುವುದು ಜ್ಞಾನದ ಮೂಲವೆನ್ನುವ ಅರ್ಥದಲ್ಲಿ ಬಳಸಲ್ಪಟ್ಟಿದೆ. ದೇವಿಯು ಶಿವನ ಸ್ವಯಂ ಪ್ರಕಾಶವನ್ನು ಹೊರಹೊಮ್ಮಿಸುತ್ತಾಳೆ, ಏಕೆಂದರೆ ಆಕೆಯು ಶಿವನ ಸ್ವತಂತ್ರ ಶಕ್ತಿಯಾಗಿದ್ದಾಳೆ (ಸಂಪೂರ್ಣ ಸ್ವಾಯತ್ಯತೆಯನ್ನು ಹೊಂದಿರುವ ಈ ಶಕ್ತಿಯನ್ನು ವಿಮರ್ಶ ರೂಪವೆನ್ನುತ್ತಾರೆ) ಮತ್ತು ಆಕೆಯು ಈ ವಿಶ್ವಸೃಷ್ಟಿಯ ಕಾರ್ಯವನ್ನು ಉಂಟುಮಾಡುತ್ತಾಳೆ. ವಾಸ್ತವವಾಗಿ, ಜ್ಞಾನಜ್ಯೋತಿಯು ಅಜ್ಞಾನದ ಕತ್ತಲೆಯನ್ನು ಚದುರಿಸಿ ಏಕಕಾಲಕ್ಕೆ ಆತ್ಮಸಾಕ್ಷಾತ್ಕಾರವು ಉಂಟಾಗುವಂತೆ ಮಾಡುತ್ತದೆ. ಆದರೂ ಸಹ ಈ ಎರಡೂ ಪ್ರಕ್ರಿಯೆಗಳಲ್ಲಿ ಸ್ವಲ್ಪ ಸಮಯದ ವ್ಯತ್ಯಾಸವಿದೆ; ಮತ್ತು ತಿಳಿಯಬೇಕಾದುದೇನೆಂದರೆ ಮೊದಲು ಅಜ್ಞಾನದ ನಿರ್ಮೂಲನವಾಗುತ್ತದೆ ಮತ್ತು ತಕ್ಷಣವೇ ಆತ್ಮಸಾಕ್ಷಾತ್ಕಾರವು ಅದನ್ನು ಹಿಂಬಾಲಿಸುತ್ತದೆ.

           ಕೃಷ್ಣನು ಈ ದೀಪದ ಕುರಿತಾಗಿ ಭಗವದ್ಗೀತೆಯಲ್ಲಿ (೧೦.೧೧) ಹೀಗೆ ಹೇಳುತ್ತಾನೆ, "ನನ್ನ ಕೃಪೆಯನ್ನು ಅವರ ಮೇಲೆ ಬೀರಲು, ಅವರ ಹೃದಯಗಳಲ್ಲಿ ನಿವಸಿಸುವ ನಾನು, ಅವರ ಅಜ್ಞಾನ ಜನ್ಯ ಕತ್ತಲೆಯನ್ನು ಪ್ರಕಾಶಿಸುತ್ತಿರುವ ದೀಪದಿಂತೆ ನಾಶಮಾಡುತ್ತೇನೆ".

ಅಜ್ಞಾನದ ಕುರಿತು ಇನ್ನಷ್ಟು ವಿವರಗಳು:

            ಅಜ್ಞಾನವೆಂದರೆ ತಿಳುವಳಿಕೆಯಿಲ್ಲದಿರುವಿಕೆ, ಅದರಲ್ಲೂ ವಿಶೇಷವಾಗಿ ಆಧ್ಯಾತ್ಮಿಕತೆಯ ಕುರಿತಾದ ಅಜ್ಞಾನ; ಅದು ಮಾಯೆಯಿಂದ ಕೂಡಿದ್ದು, ಅದಕ್ಕೆ ಆದಿಯಿಲ್ಲ ಆದರೆ ಅದು ಜ್ಞಾನದಿಂದ ನಿರ್ಮೂಲವಾಗುತ್ತದೆ; ಮತ್ತು ಅಜ್ಞಾನವು ಸತ್ಯವೂ ಅಲ್ಲ ಅಥವಾ ಅಸತ್ಯವೂ ಅಲ್ಲ. ಅದು ಒಂದು ಬಗೆಯಲ್ಲಿ ಧನಾತ್ಮಕವಾದದ್ದು. ಅದು ಧನಾತ್ಮಕವಾಗಿರದಿದ್ದರೆ ಅದು ಈ ಪ್ರಪಂಚದ ವಸ್ತುತಃ ಕಾರಣಕ್ಕೆ ಮೂಲವಾಗುತ್ತಿರಲಿಲ್ಲ. ಅದು ಮೂರು ಗುಣಗಳನ್ನು ಒಳಗೊಂಡಿದೆ. ಅದು ಧನಾತ್ಮಕವಾಗಿರುವುದರಿಂದ ಅದು ಭ್ರಮೆಗೆ ಕಾರಣವಾಗಿದೆ. ಅಜ್ಞಾನವು ನಿಜವಾದುದಲ್ಲವೆಂದು ಪರಿಗಣಿತವಾಗಿದೆ ಏಕೆಂದರೆ ಜ್ಞಾನೋದಯವಾಗುತ್ತಿದ್ದಂತೆ ಅದು ಇಲ್ಲವಾಗುತ್ತದೆ. ಅದು ಅಸತ್ಯವೂ ಅಲ್ಲ ಏಕೆಂದರೆ ಅದು ಅನುಭವಕ್ಕೆ ನಿಲುಕುವ ವಸ್ತುವಾಗಿದೆ. ಅದು ಸತ್ಯವೂ ಅಲ್ಲ ಮತ್ತು ಅಸತ್ಯವೂ ಅಲ್ಲದಿರುವುದರಿಂದ, ಅದು ವರ್ಣನೆಗೆ ನಿಲುಕಲಾರದ್ದು ಎಂದು ಕರೆಯಲಾಗುತ್ತದೆ. ಅಜ್ಞಾನವು ಅಧ್ಯಾರೋಪಕ್ಕೆ ಕಾರಣವಾಗಿದೆ. ಈ ಪ್ರಪಂಚವು ಬ್ರಹ್ಮದ ಮೇಲೆ ಅಧ್ಯಾರೋಪಗೊಂಡಿದೆ (ಮೇಲೆ ಹೊದಿಸಲ್ಪಟ್ಟಿದೆ) ಮತ್ತು ಇದಕ್ಕೆ ಅಜ್ಞಾನವು ಕಾರಣವಾಗಿದೆ. ಈ ಅಜ್ಞಾನವು ಅಂತಿಮ ಸತ್ಯದ ‌ಜ್ಞಾನದೊಂದಿಗೆ ಇಲ್ಲವಾಗುತ್ತದೆ.

           ಮೋಹವೂ ಸಹ ಭ್ರಮೆಯಾಗಿದ್ದು ಅದನ್ನು ಜ್ಞಾನವು ಹೋಗಲಾಡಿಸುತ್ತದೆ ಆದರೆ ಅದು ಜ್ಞಾನದಿಂದ ತಕ್ಷಣವೇ ನಾಶವಾಗುವುದಿಲ್ಲ. ಅಂದರೆ ಮೋಹ ಬಂಧನವು ಅಜ್ಞಾನದಿಂದ ಉಂಟಾಗುತ್ತದೆ ಮತ್ತು ಅಜ್ಞಾನವು ಜ್ಞಾನದಿಂದಾಗಿ ತಕ್ಷಣವೇ ಹೊಡೆದೋಡಿಸಲ್ಪಡತ್ತದೆ, ಆದ್ದರಿಂದ ಮೋಹ ಬಂಧನವು ಕಡೆಯಲ್ಲಿ ಜ್ಞಾನದಿಂದ ನಿರ್ಮೂಲಿಸಲ್ಪಡುತ್ತದೆ. ಜ್ಞಾನದ ಆಸೆ ಮತ್ತು ಮುಂಚಿತವಾಗಿ ಜ್ಞಾನವಿಲ್ಲದಿರುವಿಕೆಗಳು ಜ್ಞಾನವನ್ನು ಹೊಂದಿದ ಕೂಡಲೇ ನಿರ್ಮೂಲನೆ ಮಾಡಲ್ಪಟ್ಟರೂ ಸಹ ಅವು ಭ್ರಮಾತ್ಮಕವಲ್ಲ. ಆದ್ದರಿಂದ ಅಜ್ಞಾನದ ವ್ಯಾಖ್ಯೆಯು ಬಹಳ ಕಷ್ಟದ್ದೇನಲ್ಲ, ಏಕೆಂದರೆ ಅದು ಮೋಹ, ಆಸೆ ಮತ್ತು ಮುಂಚಿತ ಜ್ಞಾನವಿಲ್ಲದಿರುವಿಕೆ ಇವುಗಳಿಗೆ ಅನ್ವಯಿಸುವುದಿಲ್ಲ. ಆದರೆ. ಪ್ರಜ್ಞೆಯು ಎಂದಿಗೂ ಭ್ರಮಾತ್ಮಕವಲ್ಲ ಏಕಂದರೆ ಭ್ರಮೆಯನ್ನು ಯಾವಾಗಲೂ ನಕಾರಾತ್ಮಕವಾಗಿ ಹೇಳಲಾಗುತ್ತದೆ.

Ābāla-gopa-viditā आबाल-गोप-विदिता (994)

೯೯೪. ಆಬಾಲ-ಗೋಪ-ವಿದಿತಾ

            ಆಬಾಲ ಎಂದರೆ ಮಕ್ಕಳನ್ನು ಸೇರಿಸಿ, ಗೋಪ ಎಂದರೆ ಗೋವಳರು (ಗೋಪ ಎಂದರೆ ರಕ್ಷಕ ಅಥವಾ ಸ್ತ್ರೀ ಸಂರಕ್ಷಕ ಎನ್ನುವ ಅರ್ಥವಿದೆ) ಮತ್ತು ವಿದಿತಾ ಎಂದರೆ ತಿಳಿದ, ಅರ್ಥವಾದ, ಗ್ರಹಿಸಿದ ಮೊದಲಾದ ಆರ್ಥವುಳ್ಳದ್ದಾಗಿದೆ. ದೇವಿಯು ಆಧ್ಯಾತ್ಮದ ಗಂಧವೇ ಇಲ್ಲದ ಬಾಲಕರು ಮತ್ತು ಗೋವಳರಿಂದಲೂ ಅರಿಯಲ್ಪಡುತ್ತಾಳೆ. ಇಲ್ಲಿ ಗೋಪ ಎನ್ನುವ ಶಬ್ದವನ್ನು ಬಹು ವಿಶಾಲ ಅರ್ಥದಲ್ಲಿ ಉಪಯೋಗಿಸಲಾಗಿದೆ ಮತ್ತದು ಯಾರು ತಮ್ಮ ಕೆಲಸಕಾರ್ಯಗಳಲ್ಲೇ ತಲ್ಲೀನರಾಗಿ ಬ್ರಹ್ಮವನ್ನು ಅರಿಯುವ ಪ್ರಯತ್ನವನ್ನು ಮಾಡುವುದಿಲ್ಲವೋ ಅಥವಾ ಬ್ರಹ್ಮವನ್ನರಿಯಲು ಸಮಯದ ಅಭಾವವಿರುವುದೋ ಅವರನ್ನೆಲ್ಲಾ ಒಳಗೊಂಡಿದೆ. ಒಂದು ವಿಧದಲ್ಲಿ ಅವರು ಕರ್ಮಯೋಗಿಗಳು ಮತ್ತು ಅವರನ್ನು ಕೃಷ್ಣನು ವಿಶೇಷವಾಗಿ ಕೊಂಡಾಡುತ್ತಾನೆ. ಕರ್ಮಯೋಗಿಗಳೂ ಸಹ ದೇವಿಯನ್ನು ಹೊಂದಬಹುದು, ಆದರೆ ಕರ್ಮಮಾರ್ಗದ ಮೂಲಕ ಬ್ರಹ್ಮವನ್ನು ಅರಿಯುವುದು ಜ್ಞಾನಮಾರ್ಗವನ್ನು ಕೈಗೊಳ್ಳುವುದರ ಮೂಲಕ ತಗುಲುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಬೇಡುತ್ತದೆ.

           ಬಾಲ-ಗೋಪ ಶಬ್ದವನ್ನುಪಯೋಗಿಸಿರುವುದರಿಂದ, ಅದು ಸದಾಶಿವ ಅಥವಾ ಕೃಷ್ಣನನ್ನು ಸೂಚಿಸಬಹುದು. ಆಗ ಈ ನಾಮದ ಅರ್ಥವು, ದೇವಿಯು ದೈವತ್ವದ ಅತ್ಯುನ್ನತ ಸ್ತರದಲ್ಲಿರುವವರಿಂದಲೂ ಮತ್ತು ಅತ್ಯಂತ ಕೆಳಸ್ತರವಾದ ಮಾನವರಲ್ಲಿನ ಬಾಲಕರಿಂದಲೂ ಗ್ರಹಿಸಲ್ಪಡುತ್ತಾಳೆ ಎಂದಾಗುತ್ತದೆ. ಶ್ರೀ ರುದ್ರಂ (೧.೮) ಹೀಗೆ ಹೇಳುತ್ತದೆ, "ಉತೈನಂ ಗೋಪಾ ಅದೃಶನ್ ಅದೃಶನ್ ಉದಹಾರ್ಯಃ उतैनं गोपा अदृशन् अदृशन् उदहार्यः ಅಂದರೆ ‘ಗೋಪಾಲಕರು ಮತ್ತು ನೀರನ್ನು ಹೊರುವವರೂ ಸಹ ಅವನನ್ನು ನೋಡಿದ್ದಾರೆ’

Sarvānullaṅghya-śāsanā सर्वानुल्लङ्घ्य-शासना (995)

೯೯೫. ಸರ್ವಾನುಲ್ಲಂಘ್ಯ-ಶಾಸನಾ

           ದೇವಿಯ ಆಜ್ಞೆಗಳನ್ನು ಎಂದಿಗೂ ಮೀರಲಾಗಿಲ್ಲ. ಒಬ್ಬನು ದೇವಿಯ ಸಾಕ್ಷಾತ್ಕಾರವನ್ನು ಹೊಂದಿದಾಗ್ಯೂ ಸಹ ಆಕೆಯ ಆಜ್ಞೆಗಳನ್ನು ಮೀರಲಾರ. ಅಷ್ಟೇಕೆ ಬ್ರಹ್ಮ, ವಿಷ್ಣು ಮತ್ತು ರುದ್ರಾದಿಗಳು ಸಹ ಆಕೆಯ ಆಜ್ಞೆಯನ್ನು ಮೀರಲಾರರು. ಈ ನಾಮವನ್ನು ’ಪಂಚ-ಕೃತ್ಯ-ಪರಾಯಣ’ ೨೭೪ನೇ ನಾಮದೊಂದಿಗೆ ಸೇರಿಸಿ ಓದಿಕೊಂಡರೆ ಹೆಚ್ಚಿನ ವಿವರಗಳು ಹೊಳೆಯುತ್ತವೆ.

           ಸೌಂದರ್ಯ ಲಹರಿಯ ೨೪ನೇ ಸ್ತೋತ್ರವು ಹೀಗೆ ಹೇಳುತ್ತದೆ, "ಹೇ ಭಗವತೀ, ಬ್ರಹ್ಮನು ಜಗತ್ತನ್ನು ಸೃಷ್ಟಿಸುತ್ತಾನೆ, ವಿಷ್ಣುವು ಅದನ್ನು ಪಾಲಿಸುತ್ತಾನೆ, ರುದ್ರನು ಅದನ್ನು ನಾಶಗೊಳಿಸುತ್ತಾನೆ, ಈಶ್ವರನು ಈ ಮೂವರನ್ನು ಉಪಸಂಹರಿಸಿ ತನ್ನ ಶರೀರವನ್ನು ಸದಾಶಿವನಲ್ಲಿ ಲಯಗೊಳಿಸುತ್ತಾನೆ. ಅನಂತರ ಸದಾಶಿವನು ಕ್ಷಣಮಾತ್ರ ಚಲೆನೆಯುಳ್ಳ ನಿನ್ನ ಭ್ರೂಲತಿಕೆಯ ಆಜ್ಞೆಯನ್ನು ಪಡೆದು (ಬಳ್ಳಿಯಂತಿರುವ ನಿನ್ನ ಕಣ್ಣಹುಬ್ಬಿನ ಸಂಜ್ಞೆಯಿಂದ) ಬ್ರಹ್ಮ, ವಿಷ್ಣು, ರುದ್ರ, ಈಶ್ವರರೆಂಬ ಚತುಷ್ಟಯವನ್ನು ಸೃಷ್ಟಿಸುತ್ತಾನೆ".

ಸೌಂದರ್ಯ ಲಹರಿಯ ಈ ಸ್ತೋತ್ರದ ಕುರಿತು ಹೆಚ್ಚಿನ ವಿವರಗಳು:

            ಬ್ರಹ್ಮನು ಸೃಷ್ಟಿಕರ್ತ, ವಿಷ್ಣುವು ಪಾಲನಕರ್ತ, ರುದ್ರನು ಲಯಕರ್ತ, ಈಶ್ವರನು ತಿರೋಧಾನಕ್ಕೆ ಕಾರಣನಾಗಿದ್ದಾನೆ (ಒಳಸೆಳೆದುಕೊಂಡು ಮರೆಮಾಡುವಾತ) ಮತ್ತು ಸದಾಶಿವನು ಅಂತಿಮನಾಗಿದ್ದು ಅವನಲ್ಲಿಯೇ ಈ ನಾಲ್ವರೂ ಲೀನವಾಗುತ್ತಾರೆ. (ಸದಾಶಿವ ಹಂತವನ್ನು ಈ ವಿಧವಾಗಿ ವರ್ಣಿಸಲಾಗುತ್ತದೆ, ಈ ಸ್ಥಿತಿಯಲ್ಲಿ ‘ನಾನು’ (ಅಹಂ) ಎನ್ನುವುದು ‘ಅದು’ (ಪ್ರಕೃತಿ) ತತ್ತ್ವಕ್ಕಿಂತ ಹೆಚ್ಚು ಪ್ರಧಾನವಾಗಿರುತ್ತದೆ. ಇಲ್ಲಿ ಇಚ್ಛಾ ಶಕ್ತಿಯು ಪ್ರಧಾನವಾಗಿರುತ್ತದೆ). ಈ ಕ್ರಿಯೆಯು ಮಹಾಪ್ರಳಯ ಅಥವಾ ಸರ್ವನಾಶದ ಸಮಯದಲ್ಲಿ ಜರುಗುತ್ತದೆ ಮತ್ತು ಶಕ್ತಿಯು ಆ ಸಮಯದಲ್ಲಿ ಶಿವ ಎಂದೂ ಕರೆಯಲ್ಪಡುವ ಸದಾಶಿವನೊಂದಿಗೆ ನಿರಂತರವಾಗಿರುತ್ತಾಳೆ. ಈ ನಾಲ್ಕು ಹಂತಗಳಲ್ಲದೆ ಇನ್ನೊಂದು ಹಂತವೂ ಇದೆ, ಅದನ್ನು ಪುನಃಸೃಷ್ಟಿ ಎನ್ನುತ್ತಾರೆ. ಈ ಪುನರ್ರಚನೆಯ ಕಾಲದಲ್ಲಿ ಈಶ್ವರನು ಸದಾಶಿವನಿಂದ ಹೊರಹೊಮ್ಮುತ್ತಾನೆ ಮತ್ತು ಈ ಈಶ್ವರನಿಂದ ರುದ್ರ, ರುದ್ರನಿಂದ ವಿಷ್ಣು ಮತ್ತು ಈ ವಿಷ್ಣುವಿನಿಂದ ಬ್ರಹ್ಮನು ಜನಿಸುತ್ತಾರೆ ಮತ್ತು ಪುನಃ ನಾಶ ಹೊಂದಲು ಈ ಪ್ರಪಂಚವನ್ನು ಬ್ರಹ್ಮನು ಮರಳಿ ಸೃಷ್ಟಿಸುತ್ತಾನೆ.

                                                                           ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 991 - 995 http://www.manblunder.com/2010/07/lalitha-sahasranamam-meaning-991-995.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ರೀಧರರೇ, ಮೂಲಲೇಖಕರು ಶ್ರಮಪಟ್ಟು ನೀಡಿದ ವಿವರಣೆಯ ಕನ್ನಡದ ಸನುವಾದವನ್ಗನು ಸೊಗಸಾಗಿ ಮಾಡುತ್ತಾ ಕೊನೆಯ ಘಟ್ಟಕ್ಕೆ ತಲುಪಿದ್ದೀರಿ. ನಿಮ್ಮ ಶ್ರಮ ಮತ್ತು ಸಾಧನೆ ಮೆಚ್ಚುವಂತಹದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹೃತ್ಪೂರ್ವಕ ಪ್ರತಿಕ್ರಿಯೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು, ಕವಿಗಳೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ತೆ , ಶ್ರೀಧರ ಬಂಡ್ರಿಯವರೆ.
ಪಾದ (ಒಂದು ಶ್ಲೋಕ ಅಥವಾ ಒಂದು ಸಾಲು), >>. ಅಲ್ಲಿ ಪಾದ ದ ಬದಲು ಪದ ಎಂದಾಗಬೇಕು..
ಪದಾಧ್ವಾ ಅಂದರೆ ಉಪಾಸ್ಯ ದೇವತೆಯ ಮಂತ್ರದ ಪದಗಳು ಎಂಬುದು ಸ್ಥೂಲಾರ್ಥ.
ಸಂಗ್ರಾಹ್ಯವಾದ ಅನುವಾದ ಮಾಲಿಕೆಯನ್ನು ನೀಡಿದ್ದೀರಿ,
ಬಹಳಷ್ಟು ಹೊಸ ವಿಷಯಗಳು ತಿಳಿಯುತ್ತಿವೆ ನಿಮ್ಮಿಂದ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಂತೇಶರೆ,
ನೀವು ಸೂಚಿಸಿರುವ ತಿದ್ದುಪಡಿಯನ್ನು ನಾನು ಮೂಲ ಲೇಖನದಲ್ಲಿ ಸರಿಪಡಿಸುತ್ತೇನೆ; ನಿಮಗೆ ತಿಳಿದಿರುವ ಹಾಗೆ ಪ್ರಸ್ತುತ ಸಂಪದದಲ್ಲಿ ತಿದ್ದುಪಡಿ ಮಾಡುವ ವ್ಯವಸ್ಥೆಯಿಲ್ಲ. ಸೂಕ್ತ ಮಾಹಿತಿಗೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೆ ಅನಂತೇಶರ ವಿವರಣೆಯನುಸಾರ ನಾನೂ ಕವನದ ಮೂಲರೂಪದಲ್ಲಿ ಬದಲಿಸುತ್ತೇನೆ. ಮೊದಲ ಎರಡು ಪಂಕ್ತಿಯ ಎಲ್ಲಾ 'ಪಾದ'ಗಳು 'ಪದ'ಗಳಾಗಬೇಕಲ್ಲವೆ?
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾಗೇಶರೆ, ಅದನ್ನು ಸೂಕ್ತವಾಗಿ ಬದಲಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೆ, "೨೦೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೯೧-೯೯೫
_________________________________________
.
೯೯೧. ಷಡಧ್ವಾತೀತ-ರೂಪಿಣೀ
ಧ್ವನಿ ವಿಮರ್ಶಾರೂಪಾಂತರಾಧಾರಿತ ಪೂಜೆ ಪಾದ-ವರ್ಣ-ಮಂತ್ರ
ಅರ್ಥದ ಪ್ರಕಾಶರೂಪಾಂತರ ಮೂಲಕಾರಣ ಭುವನ-ತತ್ತ್ವ-ಕಲಾ
ಸಮಷ್ಟಿಸೆ ಷಡಧ್ವ, ಅತೀತೆ ಲಲಿತೆಯಾಗಿ ಷಡಧ್ವಾತೀತ-ರೂಪಿಣೀ
ಹೊಂದಲವಳ ಧ್ಯಾನಿಸೆ ಶ್ರೀ ಚಕ್ರದಿ, ಷಡಧ್ವ ವಿಧಾನ ಸಾಧನೆ ಗಣಿ ||
.
ಷಡಧ್ವ ವಿಧ ಪೂಜೆ ಶ್ಲೋಕ-ಸಾಲಿದ್ದರೆ 'ಪಾದ', ಶ್ರೀ ಚಕ್ರವಿರೆ 'ಭುವನ'
ಬಾಹ್ಯರೂಪ ಮೂರ್ತಿಪೂಜೆ ವರ್ಣಾಕ್ಷರವಿರೆ 'ವರ್ಣ', ಸಿದ್ದಾಂತ 'ತತ್ತ್ವ'
ಕಲೆ ಕಾಲ ತಂತ್ರ 'ಕಲಾ', ಅಕ್ಷರ ಸಂಯೋಜನೆ 'ಮಂತ್ರ' ಆರಾಗುತ
ಪಾದ-ವರ್ಣ-ಮಂತ್ರ ವಾಕ್ರೂಪಿ, ಭುವನ-ತತ್ತ್ವ-ಕಲಾ ಮೂಲಕಾರಣ ||
.
೯೯೨. ಅವ್ಯಾಜ-ಕರುಣಾ-ಮೂರ್ತಿಃ
ನಟನೆ, ತೋರಿಕೆಯಿರದ ಅವ್ಯಾಜ ಕರುಣೆ, ಲಲಿತೆ ಕರುಣಾಮೂರ್ತಿ
ಕರುಣೆಯವಳ ಮೂಲಗುಣ, ನಟನೆ ಖಂಡಿಸುವ ಜಗನ್ಮಾತೆಯ ರೀತಿ
ಶಿಸ್ತಿನ ಪರಿಪಾಲಕ ಶಿವನ ಕೆಂಗಣ್ಣಿನ ತಾಪ ಭರಿಸೊ ತಾಯಿಯ ಪ್ರೀತಿ
ಶತ್ರುಗಳ ಘಾತಿಸುವವನ ಕೃಪೆ ಕೊಡಿಸೊ, ಅವ್ಯಾಜ-ಕರುಣಾ-ಮೂರ್ತಿಃ ||
.
೯೯೩. ಅಜ್ಞಾನ-ಧ್ವಾಂತ-ದೀಪಿಕಾ
ನಿರಂತರ ಹೊಳೆದೆಲ್ಲವ ತೋರೊ ಶಿವನ ಸ್ವತಂತ್ರ ಶಕ್ತಿ ಪ್ರಕಾಶ, ದೇವಿಗಿತ್ತ
ಶಕ್ತಿಯ ವಿಮರ್ಶಾರೂಪಿನಲೊಂದುಗೂಡಿ, ವಿಶ್ವ ಸೃಷ್ಟಿಯಾಗುವ ದೈವಚಿತ್ತ
ಅಜ್ಞಾನ ಹೊಡೆದೊಡಿಸೊ ಜ್ಞಾನದೀವಿಗೆ ಲಲಿತೆ, ಹೊಮ್ಮಿಸಿ ಶಿವನ ಪ್ರಕಾಶ
ಅಜ್ಞಾನ ತಮ ಚದುರಿಸೊ ಆತ್ಮ ಸಾಕ್ಷಾತ್ಕಾರ, ಅಜ್ಞಾನ-ಧ್ವಾಂತ-ದೀಪಿಕಾ ||
.
ಅಜ್ಞಾನದ ಕುರಿತು ಮತ್ತಷ್ಟು ವಿವರಗಳು:
___________________________________________
.
ಅಜ್ಞಾನದ ಕತ್ತಲೆ ನುಂಗುತಲೆ ಪ್ರಕಾಶ, ಆತ್ಮ ಸಾಕ್ಷಾತ್ಕಾರ ಹಿಂಬಾಲಿಸುತ
ಆದಿಯಿಲ್ಲದ ಮಾಯೆ ಆಧ್ಯಾತ್ಮಿಕತೆಯಜ್ಞಾನ, ಜಗಕೆ ಮೂಲಕಾರಣವಾಯ್ತ
ತ್ರಿಗುಣ ಪೂರ್ಣ ಧನಾತ್ಮಕ ತ್ರಾಣ, ಭ್ರಮಾಕಾರಣ ಅಜ್ಞಾನ ಅನಿಜದ ಪರಿ
ಜ್ಞಾನೋದಯದೆ ಅದೃಶ್ಯ, ಅನುಭವಕೆಗಮ್ಯ ಸತ್ಯ ಬ್ರಹ್ಮಕಧ್ಯಾರೋಪ ಏರಿ ||
.
ಅಜ್ಞಾನದಿಂದುಂಟಾಗೊ ಮೋಹ ಬಂಧನ, ಭ್ರಮೆ ಹೊಡೆದೋಡಿಸೊ ಜ್ಞಾನ
ಭ್ರಮಾತ್ಮಕವಲ್ಕದ ಜ್ಞಾನ, ಅರಿವಿಗೆ ಮುಂಚಿನ ಮಾಯೆ ಅಜ್ಞಾನಕೆ ಕಾರಣ
ಆಸೆ ಮೋಹ ಪೂರ್ವ ಜ್ಞಾನವಿರದ ಸ್ಥಿತಿಗನ್ವಯವಾಗದ ಅಜ್ಞಾನದ ವ್ಯಾಖ್ಯೆ
ನಕಾರಾತ್ಮಕ ಭ್ರಮೆ ಅನ್ವಯವಾಗದು ಪ್ರಜ್ಞೆಗೆ, ಭ್ರಮಾತ್ಮಕವಲ್ಲದ ಜ್ಞಾನಕೆ ||
.
೯೯೪. ಆಬಾಲ-ಗೋಪ-ವಿದಿತಾ 
ಉನ್ನತ ಸ್ತರದ ದೈವವರಿತಷ್ಟೆ ಸಹಜವಾಗಿ, ಕೆಳಸ್ತರದ ಮಾನವ
ಬಾಲರಿಂದ ಸ್ತ್ರೀ, ವೃದ್ಧರವರೆಗೆಲ್ಲರೂ, ಬ್ರಹ್ಮವನರಿಯುವ ಭಾವ
ಧ್ಯಾನದಲಿ ಜ್ಞಾನಮಾರ್ಗ ಅಂತೆಯೆ ಕರ್ಮಮಾರ್ಗದೆ ಹೊಂದುತ
ಕಾಲಮಾಪನದಲಂತರವಿಟ್ಟು ಕರುಣಿಸೆ ಆಬಾಲ-ಗೋಪ-ವಿದಿತಾ ||
.
೯೯೫. ಸರ್ವಾನುಲ್ಲಂಘ್ಯ-ಶಾಸನಾ
ಮೀರಬಲ್ಲವರಾರು ಜಗದಿ ದೇವಿಯಾಜ್ಞೆ, ತ್ರಿಮೂರ್ತಿಗಳೂ ಮೀರದ ಘನ
ಕಣ್ಣ ಹುಬ್ಬಿನ ಸಂಜ್ಞೆಗೆ ಅನುಗ್ರಹವೀವ ಲಲಿತೆ ಸರ್ವಾನುಲ್ಲಂಘ್ಯ-ಶಾಸನಾ
ಬ್ರಹ್ಮ ಸೃಷ್ಟಿಯ ವಿಷ್ಣು ಪಾಲಿಸಿ ನಾಶಕೆ ರುದ್ರ, ಈಶ್ವರನೆ ಉಪಸಂಹಾರಕೆ
ಸದಾಶಿವ ಮರುಸೃಷ್ಟಿಗೆ, ಚತುಷ್ಟಯಕೆ ಮರುಕಳಿಕೆ ದೇವಿಯಾಜ್ಞೆ ಪೂರೈಕೆ ||
.
ಸೌಂದರ್ಯಲಹರಿಯ ಈ ಸ್ತೋತ್ರದ ಹೆಚ್ಚು ವಿವರಗಳು:
___________________________________________
.
ಮಹಾಪ್ರಳಯ ಸರ್ವನಾಶದೆ ಪ್ರಧಾನವಿಹ 'ಅಹಂ' ಸದಾಶಿವ ಇಚ್ಛಾಶಕ್ತಿ
ಪ್ರಕೃತಿ ತತ್ತ್ವ ಶಕ್ತಿ ನಿರಂತರ ಸಾಕ್ಷೀಭೂತ, ಪುನಃಸೃಷ್ಟಿಗೆ ಈಶ್ವರ ಪ್ರಸ್ತುತಿ
ತಿರೋದಾನ ಕಾರಣ ಈಶ್ವರದಿಂ ಲಯಕರ್ತ ರುದ್ರ, ರುದ್ರನಿಂದಲಿ ವಿಷ್ಣು
ವಿಷ್ಣು ಬ್ರಹ್ಮನ ಸೃಜಿಸೆ, ಪ್ರಪಂಚ ಮರುಸೃಷ್ಟಿಯಾಗಿಸೆ ಹೊಸತೆ ಜಗವನ್ನು ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗೇಶರೆ,
ಈ ತಿಂಗಳಿನಲ್ಲಿ ಸ್ವಲ್ಪ ಕಾರ್ಯಬಾಹುಳ್ಯದಿಂದ ನಾನು ಸಂಪದದಿಂದ ಒಂದು ವಾರ ದೂರವುಳಿಯುವುದು ಖಚಿತವಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದು ಸುಮಾರು ಹತ್ತು ದಿವಸಗಳಷ್ಟಾಯಿತು. ಪುನಃ ೨೪ರಿಂದ ಮೂರ‍್ನಾಲ್ಕು ದಿನಗಳ ಕಾಲ ಊರಿನಲ್ಲಿ ಇರುವುದಿಲ್ಲ, ಹಾಗಾಗಿ ಅಷ್ಟರೊಳಗೆ ೧೦೦೦ನಾಮಗಳನ್ನು ಸೇರಿಸೋಣವೆಂದು ಕೊಂಡಿದ್ದೇನೆ. ನೋಡೋಣ, ಜಗನ್ಮಾತೆಯ ಇಚ್ಛೆ ಹೇಗಿದೆಯೋ ಹಾಗಾಗಲಿ. ನಾನು ಊರಿಂದ ಹಿಂದಿರುಗಿ ಬಂದನಂತರ ಕವನಗಳ ತಿದ್ದುಪಡಿಯನ್ನು ಮಾಡೋಣ, ಆಗ ನೀವೆಂದಂತೆ ಪುನಃ ಸಹಸ್ರನಾಮದ ರಿವಿಷನ್ ಆಗುತ್ತೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀದರರೆ ತಮ್ಮ ಕಡೆಯಘಟ್ಟಕ್ಕೆ ಬರುತ್ತಿರುವ ಸಾಧನೆ ನನಗೆ ಖುಷಿ ಎನಿಸುತ್ತಿದೆ.!
ಆಬಾಲ ಎಂದರೆ ಮಕ್ಕಳಿಂದ ಮುದುಕರವರೆಗೂ ಎನ್ನುವ ಅರ್ಥದಲ್ಲಿ ಬಳಸಬಹುದು
ಮತ್ತೆ ಗೋಪ ಎನ್ನುವಾಗ ವೆಂಕಟಸುಬ್ಬಯ್ಯನವರ ನಿಘಂಟಿನ ಅರ್ಥಗಳನ್ನು ನೋಡಿ
ಗೋಪ ನಾಮಪದ
(ಸಂ) ೧ ಗೋವುಗಳನ್ನು ಕಾಯುವವನು, ದನಗಾಹಿ, ಗೊಲ್ಲ ೨ ಗೋವುಗಳ ಒಡೆಯ, ಕೃಷ್ಣ ೩ ಸೂರ್ಯ ೪ ಚಂದ್ರ ೫ ದೇವೇಂದ್ರ ೬ ದೊರೆ, ರಾಜ ೭ ಪ್ರಾಂತಾಧಿಕಾರಿ ೮ ನಂದಿಯ ಒಡೆಯ, ಶಿವ ೯ ಪಕ್ಷಿಗಳ ಒಡೆಯ, ಗರುಡ ೧೦ ಸರಸ್ವತಿಯ ಒಡೆಯ, ಬ್ರಹ್ಮ
--
ವಂದನೆಗಳೊಡನೆ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ,
-ಆಬಾಲ ಎಂದರೆ ಮಕ್ಕಳಿಂದ ಮುದುಕರವರೆಗೂ ಎನ್ನುವ ಅರ್ಥದಲ್ಲಿ ಬಳಸಬಹುದು..
-"ಆಬಾಲ ವೃದ್ಧ" ಎಂದರೆ ಮಕ್ಕಳಿಂದ ಮುದುಕರವರೆಗೆ...
"ಆಬಾಲ ಗೋಪ.." ಎಂದಾಗ ಶ್ರೀಧರ್‌ಜಿ ಹೇಳಿದ್ದೇ ಸರಿ.
->ಗೋಪ ನಾಮಪದ
(ಸಂ) ೧ ಗೋವುಗಳನ್ನು ಕಾಯುವವನು, ದನಗಾಹಿ, ಗೊಲ್ಲ ೨ ಗೋವುಗಳ ಒಡೆಯ, ಕೃಷ್ಣ ೩ ಸೂರ್ಯ ೪ ಚಂದ್ರ ೫ ದೇವೇಂದ್ರ ೬ ದೊರೆ, ರಾಜ ೭ ಪ್ರಾಂತಾಧಿಕಾರಿ ೮ ನಂದಿಯ ಒಡೆಯ, ಶಿವ ೯ ಪಕ್ಷಿಗಳ ಒಡೆಯ, ಗರುಡ ೧೦ ಸರಸ್ವತಿಯ ಒಡೆಯ, ಬ್ರಹ್ಮ
-ಎಲ್ಲಾ ಸರಿ..ಗಣೇಶ ಇಲ್ಲ ಯಾಕೆ?:)
ಶ್ರೀಧರ್‌ಜಿ,
೯೯೭,೯೯೮,೯೯೯,೧೦೦೦!!! ಶುಭಾಶಯ ಹೇಳಲು ಕಾತರದಿಂದಿದ್ದೇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಪಾರ್ಥಸಾರಥಿಗಳೆ,
ನೀವು ಸೂಚಿಸಿರುವ ಎರಡೂ ಅರ್ಥಗಳೂ ಸರಿ. ಈ ಎರಡು ಅರ್ಥಗಳ ಹಿನ್ನಲೆಯಲ್ಲಿಯೂ ಶ್ರೀಯುತ ವಿ. ರವಿಯವರು, ಈ ನಾಮವನ್ನು ವಿವರಿಸಿದ್ದಾರೆ. ಇದನ್ನು ಗಣೇಶರೂ ಸಹ ಸ್ಪಷ್ಟ ಪಡಿಸಿದ್ದಾರೆ. ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.
@ಗಣೇಶ್‌ಜಿ,
ಪಾರ್ಥರ ಪ್ರಶ್ನಗೆ ನೀವು ನನ್ನ ಪರವಾಗಿ ಉತ್ತರಿಸಿದ್ದಕ್ಕೆ ಹಾಗೂ ಮುಂಗಡ ಶುಭಾಶಯಗಳನ್ನು ತಿಳಿಸುತ್ತಿರುವುದಕ್ಕೆ ಧನ್ಯವಾದಗಳು. ಗೋಪ ಶಬ್ದದಲ್ಲಿ ಗಣೇಶ ಏಕೆ ಇಲ್ಲ ಎಂದರೆ ಅವನು ಎಲ್ಲರಿಗಿಂತಲೂ ಮುಂಚೆ ಪೂಜೆ ಮಾಡಿಸಿಕೊಂಡು ಅಲ್ಲಿಂದ ಕಾರ್ಯನಿಮಿತ್ತ ಬೇರೆಡೆಗೆ ಹೋಗಿದ್ದಾನೆ. :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.