೨೦೮. ಲಲಿತಾ ಸಹಸ್ರನಾಮ ೯೯೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೯೯೬
Śrī Cakra-rāja-nilayā श्री चक्र-राज-निलया (996)
೯೯೬. ಶ್ರೀ ಚಕ್ರ-ರಾಜ-ನಿಲಯಾ
ದೇವಿಯು ಶ್ರೀ ಚಕ್ರದಲ್ಲಿ ನೆಲೆಸಿದ್ದಾಳೆ. ಇದನ್ನು ಶ್ರೀ ಯಂತ್ರ ಮತ್ತು ಚಕ್ರ-ರಾಜ ಎಂದೂ ಸಹ ಕರೆಯಲಾಗುತ್ತದೆ. ಇದುವೆ ಯಂತ್ರಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದದ್ದು. ಲಲಿತಾ ತ್ರಿಶತಿಯ ಉತ್ತರ ಭಾಗವು (ಸಹಸ್ರನಾಮವನ್ನು ಉಚ್ಛರಿಸುವುದರಿಂದ ಹೊಂದಬಹುದಾದ ಫಲಗಳ ಕುರಿತ ಅಧ್ಯಾಯ ಅಥವಾ ಫಲಶ್ರುತಿಯ ಭಾಗ) ಶ್ರೀ ಚಕ್ರದ ವಿವರಣೆಯನ್ನು ಸಂಪೂರ್ಣವಾಗಿ ಅನಾವರಣಗೊಳಿಸುತ್ತದೆ. ಶ್ರೀ ಚಕ್ರವು ಶಿವ ಮತ್ತು ಶಕ್ತಿಯರ ದೇಹವಾಗಿದೆ. ಶ್ರೀ ಚಕ್ರವನ್ನು ಮಾನವ ಶರೀರಕ್ಕೆ ಹೋಲಿಸಲಾಗಿದ್ದು ಶಿವ ಮತ್ತು ಶಕ್ತಿಯರನ್ನು ಅದರೊಳಗಿನ ಆತ್ಮಕ್ಕೆ ಹೋಲಿಸಲಾಗಿದೆ. ಶ್ರೀ ಚಕ್ರವು ಸಂಪೂರ್ಣವಾಗಿ ಜೀವ ಮತ್ತು ಶಕ್ತಿಭರಿತವಾಗಿದ್ದು ಅದನ್ನು ಅತ್ಯಂತ ಗೌರವಯುತವಾಗಿ ಪೂಜಿಸಬೇಕು. ಶ್ರೀ ಚಕ್ರದೊಳಗೆ ಯಾವುದೇ ದೇವ ಅಥವಾ ದೇವಿಯರನ್ನು ಪೂಜಿಸಬಹುದು ಏಕೆಂದರೆ ಅದರಲ್ಲಿ ಎಲ್ಲರಿಗೂ ಸ್ಥಾನವಿದೆ.
ಸೌಂದರ್ಯ ಲಹರಿಯ ಹನ್ನೊಂದನೇ ಸ್ತೋತ್ರವು ಶ್ರೀ ಚಕ್ರವನ್ನು ವಿವರಿಸುತ್ತದೆ. "ಹೇ ಹಿಮಗಿರಿಸುತೆ, ನಾಲ್ಕು ಶಿವ ಚಕ್ರಗಳು, ಇವುಗಳಿಗಿಂತ ಭಿನ್ನವಾದ ಐದು ಶಕ್ತಿ ಚಕ್ರಗಳು - ಈ ಒಂಬತ್ತು ಮೂಲಪ್ರಕೃತಿಗಳಿಂದಲೂ, ಅಷ್ಟದಳಗಳನ್ನು ಮತ್ತು ಷೋಡಶದಳಗಳನ್ನುಳ್ಳ ಎರಡು ಪದ್ಮಗಳಿಂದಲೂ, ಮೂರು ಮೇಖಲೆಗಳಿಂದಲೂ, ಮೂರು ಭೂಪುರಗಳಿಂದಲೂ ನಿನ್ನ ವಾಸಸ್ಥಾನವಾದ ಶ್ರೀ ಚಕ್ರವು ನಲವತ್ತನಾಲ್ಕು ಕೋಣಗಳಿಂದ ಪರಿಣತವಾಗಿದೆ". (ಸ್ವಾಮಿ ಸೋಮನಾಥಾನಂದ - ಇವರ ಅನುವಾದ)
ಶ್ರೀ ಚಕ್ರವು ನಲವತ್ತಮೂರು ತ್ರಿಕೋಣಗಳು ಮತ್ತು ಒಂದು ಬಿಂದುವನ್ನು ಸೇರಿಸಿ ಒಟ್ಟು ನಲವತ್ತನಾಲ್ಕು ತ್ರಿಕೋಣಗಳನ್ನು ಹೊಂದಿದೆ. ತ್ರಿಕೋಣಗಳನ್ನು ಹೊರತು ಪಡಿಸಿ ಒಂದು ಅಷ್ಟದಳದ ಪದ್ಮ ಹಾಗು ಇನ್ನೊಂದು ಹದಿನಾರು ದಳದ ಪದ್ಮ ಇವುಗಳನ್ನು ಒಳಗೊಂಡಿದೆ. ಎಲ್ಲಾ ನಲವತ್ತಮೂರು ತ್ರಿಕೋಣಗಳು ಮತ್ತು ಬಿಂದು - ಇವೆಲ್ಲಾ ಎರಡು ಕಮಲದ ಹೂವುಗಳೊಳಗೆ ಇವೆ. ಈ ಕಮಲದ ಹೂವಿನ ಹೊರಗಡೆ, ಮೂರು ವೃತ್ತಾಕಾರದ ರೇಖೆಗಳಿವೆ. ಈ ವೃತ್ತಾಕಾರದ ಗೆರೆಗಳ ಹೊರಗೆ ಮೂರು ಚತುರ್ಭುಜಗಳಿದ್ದು ಅವು ಒಂದೊಂದು ಕಡೆಗೆ ಒಂದರಂತೆ ನಾಲ್ಕು ದ್ವಾರಗಳನ್ನು ಹೊಂದಿದೆ. ಇದುವೇ ಶ್ರೀ ಚಕ್ರದ ರಚನೆಯಾಗಿದೆ.
ಒಬ್ಬನು ಶ್ರೀ ಚಕ್ರವನ್ನು ಅತ್ಯಂತ ಹೊರಗಿರುವ ಚತುರ್ಭುಜದ ಮೂಲಕ ಪ್ರವೇಶಿಸಬೇಕು. ಎಲ್ಲಾ ಮೂರು ಚಕ್ರಗಳನ್ನು ಒಟ್ಟಾಗಿ ‘ತ್ರೈಲೋಕ್ಯ-ಮೋಹನ’ವೆಂದು ಕರೆಯಲಾಗುತ್ತದೆ, ಇದು ಪ್ರಜ್ಞೆಯ ಮೂರು ಹಂತಗಳಲ್ಲಿ ಭ್ರಮೆಯನ್ನುಂಟು ಮಾಡುತ್ತದೆ. ಇದುವೇ ಶ್ರೀ ಚಕ್ರದ ಮೊದಲನೇ ಆವರಣವಾಗಿದೆ. ಈ ಆವರಣವು ತ್ರಿಪುರಾ ದೇವಿಯಿಂದ ಪರಿಪಾಲಿಸಲ್ಪಡುತ್ತದೆ. ಪ್ರತಿಯೊಂದು ಆವರಣವೂ ಒಬ್ಬ ಸ್ಥಾನ ದೇವತೆಯಿಂದ ಪರಿಪಾಲಿಸಲ್ಪಡುತ್ತದೆ ಮತ್ತು ಪ್ರತಿಯೊಂದು ಆವರಣದಲ್ಲೂ ಒಬ್ಬ ಸ್ವತಂತ್ರ ಯೋಗಿನಿ ಇರುತ್ತಾಳೆ. ಮೊದಲನೇ ಆವರಣದ ಯೋಗಿನಿಯ ಹೆಸರು ಪ್ರಕಟ ಯೋಗಿನಿ. ಅತ್ಯಂತ ಹೊರ ಗೋಡೆಯಲ್ಲಿ ಹತ್ತು ಸಿದ್ಧಿಗಳನ್ನು (ಅತಿಮಾನುಷ ಶಕ್ತಿಗಳು) ಪ್ರತಿನಿಧಿಸುವ ಹತ್ತು ದೇವತೆಗಳಿರುತ್ತಾರೆ, ಮಧ್ಯದ ಗೋಡೆಯಲ್ಲಿ, ಅಷ್ಟಮಾತೆಯರಿದ್ದಾರೆ (ಬ್ರಾಹ್ಮೀ, ವಾರಾಹಿ, ಮೊದಲಾದ ಎಂಟು ದೇವತೆಗಳು). ಅವರ ಸಂಗಾತಿಗಳು ಅಷ್ಟ ಭೈರವರಾಗಿದ್ದಾರೆ (ಅಸಿತಾಂಗ, ರುರು, ಮೊದಲಾದವರು). ಒಳಗಿನ ಗೋಡೆಯಲ್ಲಿ ಯೋನಿ ಮುದ್ರಾ (ನಾಮ ೯೮೨), ತ್ರಿಖಂಡಾ (ನಾಮ ೯೮೩) ಮೊದಲಾದ ಹತ್ತು ಮುದ್ರೆಗಳನ್ನು (ಹಸ್ತಗಳ ಸಂಕೇತಗಳನ್ನು) ಪ್ರತಿನಿಧಿಸುವ ಹತ್ತು ದೇವತೆಯರಿದ್ದಾರೆ. ಆದ್ದರಿಂದ ಮೊದಲನೇ ಆವರಣದಲ್ಲಿ, ೧೦+೮+೧೦=೨೮ ದೇವತೆಯರಿದ್ದಾರೆ. ಶ್ರೀ ಚಕ್ರದ ಪ್ರವೇಶವನ್ನು, ಪೂಜಕನಿಗೆ ಅಭಿಮುಖವಾಗಿರುವ ಅತ್ಯಂತ ಒಳಗಿನ ತ್ರಿಕೋಣದ ತುದಿಯ ಕೆಳಗಡೆ ಇರುವ ದ್ವಾರದ ಮೂಲಕ ಮಾಡಲಾಗುತ್ತದೆ. ಈ ಎಲ್ಲಾ ಇಪ್ಪತ್ತೆಂಟು ದೇವತೆಗಳನ್ನು ಪೂಜಿಸಿದ ನಂತರ ಮತ್ತು ಅವರಿಂದ ಅಪ್ಪಣೆ ಪಡೆದ ನಂತರ ಒಬ್ಬರು ಮುಂದಿನ ಆವರಣಕ್ಕೆ ಪ್ರವೇಶಿಸಬಹುದು.
ಎರಡನೇ ಆವರಣವನ್ನು ’ಸರ್ವಾಶಪರಿಪೂರಕ’ವೆಂದು ಕರೆಯುತ್ತಾರೆ, ಇದು ಸಾಧಕನ ಆಧ್ಯಾತ್ಮಿಕ ಬಯಕೆಗಳನ್ನು ಪ್ರಜ್ವಲಗೊಳಿಸುತ್ತದೆ. ಈ ಆವರಣವನ್ನು ತ್ರಿಪುರೇಶೀ ದೇವಿಯು ಪರಿಪಾಲಿಸುತ್ತಾಳೆ ಮತ್ತು ಈ ಆವರಣದಲ್ಲಿರುವ ಯೋಗಿನಿಯ ಹೆಸರು ಗುಪ್ತ ಯೋಗಿನಿ. ಎರಡನೇ ಆವರಣವು ಮೂರು ವೃತ್ತಗಳ ಒಳಗೆ ಇರುವ ಷೋಡಶದಳ ಪದ್ಮವಾಗಿದೆ (ಹದಿನಾರು ದಳಗಳುಳ್ಳ ಕಮಲ) ಮತ್ತು ಈ ಮೂರು ವೃತ್ತಗಳ ಒಳಗೆ ಯಾವುದೇ ಪೂಜೆಯನ್ನು ಮಾಡುವುದಿಲ್ಲ. ಪ್ರತಿಯೊಂದು ದಳಕ್ಕೂ ಒಬ್ಬ ಅಧಿದೇವತೆಯಿದ್ದಾಳೆ ಮತ್ತು ಪ್ರತಿಯೊಂದು ದಳದ ಮೇಲೂ ಸಂಸ್ಕೃತದ ಒಂದು ಸ್ವರಾಕ್ಷರವಿದೆ (ಸಂಸ್ಕೃತದಲ್ಲಿ ಹದಿನಾರು ಸ್ವರಗಳಿವೆ). ಈ ಹದಿನಾರು ದೇವತೆಗಳನ್ನು ಪೂಜಿಸಿ ಅವರ ಆಣತಿಯನ್ನು ಪಡೆದ ನಂತರ ಒಬ್ಬರು ಮುಂದಿನ ಆವರಣಕ್ಕೆ ಪ್ರವೇಶಿಸಬಹುದು.
ಮೂರನೇ ಆವರಣವನ್ನು ‘ಸರ್ವ-ಕ್ಷೋಭಣ’ ಎಂದು ಕರೆಯುತ್ತಾರೆ; ಇದು ಆಧ್ಯಾತ್ಮಿಕ ಆಕಾಂಕ್ಷೆಗಳ ಪರವಾಗಿ ಹೋರಾಡುತ್ತದೆ. ಇದು ಎಂಟು ದಳದ ಪದ್ಮವಾಗಿದೆ. ಈ ಆವರಣದಲ್ಲಿ ನಿವಸಿಸುವ ದೇವತೆಯ ಹೆಸರು ‘ತ್ರಿಪುರಸುಂದರೀ’ ಮತ್ತು ಯೋಗಿನಿಯ ಹೆಸರು ‘ಗುಪ್ತತರ ಯೋಗಿನಿ’. ಪ್ರತಿಯೊಂದು ದಳದಲ್ಲೂ ಒಬ್ಬ ದೇವತೆಯಂತೆ ಎಂಟು ದೇವತೆಗಳಿದ್ದಾರೆ. ಇವರೆಲ್ಲರನ್ನೂ ಪೂಜಿಸಿ ಅವರ ಅಪ್ಪಣೆಯನ್ನು ಪಡೆದುಕೊಂಡ ನಂತರ ಒಬ್ಬರು ಶ್ರೀ ಚಕ್ರದ ತ್ರಿಕೋಣಗಳ ಮೊದಲನೇ ಗುಂಪನ್ನು ಪ್ರವೇಶಿಸಬೇಕು.
ನಾಲ್ಕನೇ ಆವರಣವು ‘ಸರ್ವ-ಸೌಭಾಗ್ಯ-ದಾಯಕ’ ಅಂದರೆ ಅದು ಎಲ್ಲಾ ವಿಧವಾದ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಸಂಪದಗಳನ್ನು ಒದಗಿಸುತ್ತದೆ. ಈ ಆವರಣವು ಹದಿನಾಲ್ಕು ತ್ರಿಕೋಣಗಳನ್ನು ಒಳಗೊಂಡಿದ್ದು ಇದರ ಅಧಿಷ್ಠಾನ ದೇವತೆಯು ‘ತ್ರಿಪುರವಾಸಿನೀ’ ಮತ್ತು ಈ ಆವರಣಕ್ಕೆ ಸಂಭಂದಿಸಿದ ಯೋಗಿನಿಯು ‘ಸಂಪ್ರದಾಯ ಯೋಗಿನಿ’ ಆಗಿದ್ದಾಳೆ. ಪ್ರತಿಯೊಂದು ತ್ರಿಕೋಣಕ್ಕೂ ಸಹ ಒಬ್ಬ ಅಧಿದೇವತೆಯಿದ್ದಾಳೆ. ಈ ಎಲ್ಲಾ ದೇವತೆಗಳನ್ನೂ ಪೂಜಿಸಿ, ಅಪ್ಪಣೆ ಪಡೆದ ನಂತರ ಒಬ್ಬರು ಮುಂದಿನ ಆವರಣವನ್ನು ಪ್ರವೇಶಿಸಬಹುದು.
ಐದನೆಯ ಆವರಣವನ್ನು ‘ಸರ್ವಾರ್ಥ-ಸಾಧಕ’ ಅಂದರೆ ಉಪಾಸಕನು ಆಧ್ಯಾತ್ಮಿಕವಾಗಿ ಎಲ್ಲಾ ವಿಧವಾದ ಸಾಧನೆಗಳನ್ನು ಪಡೆಯುವಂತೆ ಮಾಡುತ್ತದೆ ಮತ್ತು ಇದು ಹತ್ತು ತ್ರಿಕೋಣಗಳನ್ನು ಒಳಗೊಂಡಿದೆ. ಈ ಆವರಣದಲ್ಲಿ ಸ್ಥಿತವಾಗಿರುವ ದೇವತೆಯ ಹೆಸರು ‘ತ್ರಿಪುರಶ್ರೀ’ ಮತ್ತು ಸಂಭಂದಿತ ಯೋಗಿನಿಯು ‘ಕುಲೋತ್ತೀರ್ಣ-ಯೋಗಿನಿ’. ಪ್ರತಿಯೊಂದು ತ್ರಿಕೋಣದಲ್ಲೂ ಒಬ್ಬ ದೇವತೆಯು ಪ್ರತಿಷ್ಠಿತಳಾಗಿರುತ್ತಾಳೆ. ಈ ಎಲ್ಲಾ ದೇವತೆಗಳನ್ನು ಪೂಜಿಸಿ ಅವರ ಅಪ್ಪಣೆಯನ್ನು ಪಡೆದ ನಂತರ ಮುಂದಿನ ಚಕ್ರವನ್ನು ಪ್ರವೇಶಿಸಬಹುದು.
ಆರನೆಯ ಆವರಣದಲ್ಲೂ ಸಹ ಹತ್ತು ತ್ರಿಕೋಣಗಳಿದ್ದು ಇದನ್ನು ‘ಸರ್ವ-ರಕ್ಷಾಕರ ಚಕ್ರ’ ಅಂದರೆ ಇದು ಸಾಧಕನನ್ನು ಸಂಸಾರದ ತಾಪತ್ರಯಗಳಿಂದ ರಕ್ಷಿಸುತ್ತದೆ. ಈ ಅವರಣವನ್ನು ‘ಒಳ ಹತ್ತು ತ್ರಿಕೋಣ’ಗಳೆಂದೂ ಮತ್ತು ಹಿಂದಿನ ಆವರಣವನ್ನೂ ‘ಹೊರ ಹತ್ತು ತ್ರಿಕೋಣ’ಗಳೆಂದೂ ಕರೆಯುತ್ತಾರೆ. ಈ ಆವರಣದಲ್ಲಿರುವ ಸ್ಥಾನ ದೇವತೆಯು ‘ತ್ರಿಪುರಮಾಲಿನೀ’ ಮತ್ತು ಯೋಗಿನಿಯ ಹೆಸರು ‘ನಿಗರ್ಭ ಯೋಗಿನಿ’. ಪ್ರತಿಯೊಂದು ತ್ರಿಕೋಣದಲ್ಲೂ ಒಬ್ಬ ದೇವತೆಯಿದ್ದು ಅವರನ್ನು ಪೂಜಿಸಿ ಅವರ ಅಪ್ಪಣೆಯನ್ನು ಪಡೆದ ನಂತರ ಮುಂದಿನ ಆವರಣಕ್ಕೆ ಪ್ರವೇಶಿಸಬೇಕು.
ಏಳನೆಯ ಆವರಣವು ‘ಸರ್ವ-ರೋಗ-ಹರ ಚಕ್ರ’ವಾಗಿದ್ದು ಇದು ಎಲ್ಲಾ ವಿಧವಾದ ಮಾನಸಿಕ ದೋಷಗಳನ್ನು ನಿವಾರಿಸುತ್ತದೆ. ಈ ಆವರಣವು ಎಂಟು ತ್ರಿಕೋಣಗಳನ್ನು ಹೊಂದಿದ್ದು ಇವನ್ನು ‘ವಸು ಕೋನ’ ಎಂದು ಕರೆಯುತ್ತಾರೆ; ಇದು ಅಷ್ಟ ವಸುಗಳನ್ನು ಪ್ರತಿನಿಧಿಸುತ್ತದೆ. ಬೃಹದಾರಣ್ಯಕ ಉಪನಿಷತ್ತಿನ (೩.೯.೩) ಪ್ರಕಾರ, "ಅಗ್ನಿಶ್ಚ, ಪೃಥಿವೀ ಚ, ವಾಯುಶ್ಚಾಂತರಿಕ್ಷರಂಚಾದಿತ್ಯಶ್ಚದ್ಯೌಶ್ಚ ಚಂದ್ರಮಾಶ್ಚ ನಕ್ಷತ್ರಾಣಿ ಚೈತೇ ವಸವಃ अग्निश्च, पृथिवी च, वायुश्चांतरिक्षरंचादित्यश्चद्यौश्च चंद्रमाश्च नक्षत्राणि चैते वसवः" ಅಗ್ನಿ, ಪೃಥ್ವಿ, ವಾಯು, ಅಂತರಿಕ್ಷ, ಆದಿತ್ಯ, ದ್ಯುಲೋಕ, ಚಂದ್ರ ಮತ್ತು ನಕ್ಷತ್ರಗಳು - ಇವು ಎಂಟು ವಸುಗಳು. [ಬೃಹದಾರಣ್ಯಕ ಉಪನಿಷತ್ತಿನ ಕೆಲವೊಂದು ಆವೃತ್ತಿಗಳು, ಆಪ್ (ನೀರು), ಧ್ರುವ ನಕ್ಷತ್ರ, ಸೋಮ (ಚಂದ್ರ), ಧವ/ಧರ (ಭೂಮಿ), ಅನಿಲ (ವಾಯು), ಪಾವಕ (ಅಗ್ನಿ), ಪ್ರತ್ಯೂಷ (ಸೂರ್ಯೋದಯದ ಕಾಲ) ಮತ್ತು ಪ್ರಭಾಸ (ಬೆಳಕು) ಇವುಗಳನ್ನು ಅಷ್ಟ ವಸುಗಳು ಎಂದು ಹೆಸರಿಸುತ್ತವೆ]. ಈ ಆವರಣದ ಅಧಿದೇವತೆಯು ‘ತ್ರಿಪುರಸಿದ್ಧಾ’ ಮತ್ತು ಯೋಗಿನಿಯ ಹೆಸರು ‘ರಹಸ್ಯ ಯೋಗಿನಿ’. ಪ್ರತಿಯೊಂದು ತ್ರಿಕೋಣದಲ್ಲಿಯೂ ಒಬ್ಬ ವಾಗ್ದೇವಿಯು ನೆಲೆಸಿರುತ್ತಾಳೆ, ಈ ಎಂಟು ವಾಗ್ದೇವಿಗಳು ಈ ಸಹಸ್ರನಾಮದ ಕರ್ತೃಗಳು. ವಾಮಕೇಶ್ವರೀಮತಮ್ (ಶ್ಲೋಕ ೬೦-೬೩) ಗ್ರಂಥವು ಸಂಸ್ಕೃತದ ಎಲ್ಲಾ ಅಕ್ಷರಗಳು ಈ ಎಂಟು ವಾಗ್ದೇವಿಗಳ ಆಧೀನದಲ್ಲಿವೆ ಎಂದು ಹೇಳುತ್ತದೆ. ಆ ಕೃತಿಯಲ್ಲಿ ಹೇಳಿರುವುದನ್ನು ಬದಿಗಿಟ್ಟರೆ, ಎಲ್ಲಾ ತ್ರಿಕೋಣಗಳು ಮತ್ತು ಕಮಲದ ದಳಗಳ ಮೇಲೆ ಸಂಸ್ಕೃತ ಅಕ್ಷರಗಳ ಮುದ್ರೆಯಿದೆ. ಈ ತ್ರಿಕೋಣವು ಅತ್ಯಂತ ಒಳ ಆವರಣದ (ನಾಮ ೯೮೬ ತ್ರಿಕೋಣಗಾ) ನಂತರದ ಮೊದಲನೇ ಹೊರ ಆವರಣವಾಗಿದೆ. ಈ ಅಷ್ಟದೇವತೆಗಳನ್ನು ಪೂಜಿಸಿದ ನಂತರ ಒಬ್ಬರು ಲಲಿತಾಂಬಿಕೆಯ ಆಯುಧಗಳನ್ನು ಪೂಜಿಸಲು ಅಣಿಯಾಗುತ್ತಾರೆ.
ಎಂಟನೆಯ ಆವರಣವು ಕೇಂದ್ರ ಬಿಂದುವಿನ ಹೊರಗಿದ್ದು ಅದುವೇ ಅತ್ಯಂತ ಒಳತ್ರಿಕೋಣವಾಗಿದೆ. ಇಲ್ಲಿಂದ ಆಧ್ಯಾತ್ಮಿಕ ಸಾಧನೆಗಳನ್ನು ಪಡೆದುಕೊಳ್ಳುವುದು ಆರಂಭವಾಗಿ ಅದು ಬಿಂದುವಿನಲ್ಲಿ ಪರ್ಯವಸಾನವಾಗುತ್ತದೆ. ಈ ತ್ರಿಕೋಣದ ಹೊರಗಡೆ ಲಲಿತಾಂಬಿಕೆಯ ಆಯುಧಗಳು ಇರಿಸಲ್ಪಟ್ಟಿರುತ್ತವೆ. ದೇವಿಯ ಆಯುಧಗಳನ್ನು ನಾಮ ೮,೯,೧೦ ಮತ್ತು ೧೧ರಲ್ಲಿ ವಿವರಿಸಲಾಗಿದೆ. ದೇವಿಯ ಆಯುಧಗಳನ್ನು ಪೂಜಿಸಿದ ನಂತರ ‘ಸರ್ವಸಿದ್ಧಿಪ್ರಧಾ’ ಎಂದು ಕರೆಯಲ್ಪಡುವ ಎಂಟನೆಯ ಆವರಣಕ್ಕೆ ಒಬ್ಬನು ಪ್ರವೇಶಿಸಬಹುದು; ಈ ಆವರಣದ ಅಧಿದೇವತೆಯ ‘ತ್ರಿಪುರಾಂಬಾ’ ಆಗಿದ್ದು, ಯೋಗಿನಿಯ ಹೆಸರು ‘ಅತಿರಹಸ್ಯ ಯೋಗಿನಿ’ಯಾಗಿದೆ. ಈ ತ್ರಿಕೋಣದ ಮೂರು ಮೂಲೆಗಳಲ್ಲಿ ಮೂರು ದೇವಿಯರನ್ನು ಪೂಜಿಸಲಾಗುತ್ತದೆ ಮತ್ತು ಲಲಿತಾಂಬಿಕೆಯನ್ನು ಕೇಂದ್ರದಲ್ಲಿರುವ ಚುಕ್ಕೆಯಾದ ಬಿಂದುವಿನಲ್ಲಿ ಪೂಜಿಸಲಾಗುತ್ತದೆ.
ಅತ್ಯಂತ ಒಳಚಕ್ರದ ಹೊರಗಡೆ ಹದಿನೈದು ತಿಥಿನಿತ್ಯ ದೇವಿಯರನ್ನು ಪೂಜಿಸಲಾಗುತ್ತದೆ. ಪ್ರತಿಯೊಂದು ತಿಥಿ ದೇವತೆಯು ಚಾಂದ್ರಮಾನದ ಒಂದು ದಿನವನ್ನು ಪ್ರತಿನಿಧಿಸುತ್ತದೆ. ಈ ಒಳ ತ್ರಿಕೋಣದ ಮೇಲಿನ ಹೊರ ಆವರಣದಲ್ಲಿ ಬರೆಯಲಾಗುವ ಮೂರು ಗೆರೆಗಳಲ್ಲಿ ಒಬ್ಬನ ಗುರು ಪರಂಪರೆಯನ್ನೂ ಸಹ ಪೂಜಿಸಲಾಗುತ್ತದೆ. ಮೂರು ಗೆರೆಗಳ ಸ್ಥಳದಲ್ಲಿ ಒಬ್ಬನ ಗುರು, ಗುರುವಿನ ಗುರು, ಗುರುವಿನ ಗುರುವಿನ ಗುರು ಈ ಮೂವರನ್ನು ಪೂಜಿಸಲಾಗುತ್ತದೆ. ಅವರೊಂದಿಗೆ ಅನೇಕ ಪೂಜ್ಯರಾದ ಗುರುಗಳನ್ನೂ ಸಹ ಪೂಜಿಸಲಾಗುತ್ತದೆ. ಶ್ರೀ ವಿದ್ಯಾ ಉಪಾಸನೆಯಲ್ಲಿ ಗುರುಗಳನ್ನು ಪೂಜಿಸುವುದು ಅತ್ಯಂತ ಪ್ರಮುಖವಾದ ಅಂಶವಾಗಿದೆ.
ಒಂಬತ್ತನೇ ಅವರಣವು ‘ಬಿಂದು’ವಾಗಿದೆ. ಇದನ್ನು ‘ಸರ್ವಾನಂದಮಯ ಚಕ್ರ’ವೆಂದು ಕರೆಯುತ್ತಾರೆ ಏಕೆಂದರೆ ಇದು ಅತ್ಯುನ್ನತವಾದ ಶಾಂತಿ ಅಥವಾ ಸಂತೋಷವನ್ನು ಸೂಚಿಸುತ್ತದೆ; ಈ ಸ್ಥಳದಲ್ಲಿ ಆತ್ಮವು ನಿತ್ಯವಾದ ಮತ್ತು ಸರ್ವವ್ಯಾಪಿಯಾದ ಆತ್ಮನಲ್ಲಿ (ಪರಬ್ರಹ್ಮ/ಪರಮಾತ್ಮ) ಒಂದುಗೂಡುತ್ತದೆ. ಬಿಂದುವಿನಲ್ಲಿ ‘ಶ್ರೀ ಮಹಾ ತ್ರಿಪುರಸುಂದರೀ’ ದೇವಿಯು ಅಧಿಷ್ಠಾನಗೊಂಡಿರುತ್ತಾಳೆ, ಆಕೆಯನ್ನು ಹಲವಾರು ಹೆಸರುಗಳಿಂದ ಪೂಜಿಸಲಾಗುತ್ತದೆ; ಲಲಿತಾಂಬಿಕಾ, ರಾಜರಾಜೇಶ್ವರೀ, ಮಹಾ ಕಾಮೇಶ್ವರೀ ಮೊದಲಾದವುಗಳು ಮತ್ತಾಕೆಯು ಈ ಬ್ರಹ್ಮಾಂಡದ ಪರಮೋನ್ನತ ದೇವಿಯಾಗಿದ್ದಾಳೆ ಅಥವಾ ಜಗನ್ಮಾತೆಯಾಗಿದ್ದಾಳೆ. ಈ ಆವರಣದ ಯೋಗಿನಿಯ ಹೆಸರು ‘ಪರಾಪರಾತಿ ರಹಸ್ಯ ಯೋಗಿನೀ’ (ಪರಾಪರಾತಿ ರಹಸ್ಯ ಎಂದರೆ ರಹಸ್ಯಗಳಲ್ಲೇ ಅತ್ಯಂತ ರಹಸ್ಯವಾದದ್ದು – ಪರಮೋನ್ನತ ರಹಸ್ಯ). ಈ ಬಿಂದುವಿನ ಆಚೆಗೆ ಷೋಡಶೀ ಮಂತ್ರದ ಉಪದೇಶ ಪಡೆಯದೇ ಇರುವವರು ಪ್ರವೇಶಿಸಲಾರರು. ಯಾರು ಷೋಡಶೀ ಮಂತ್ರ ದೀಕ್ಷೆಯನ್ನು ಪಡೆದಿದ್ದಾರೋ ಅವರು ಪುನಃ ಬಿಂದುವಿನಲ್ಲಿ ದೇವಿಯನ್ನು ಪರಮ ಮಂತ್ರ ಮತ್ತು ತ್ರಿಖಂಡ ಮುದ್ರೆಯ ಮೂಲಕ ಪೂಜಿಸುವ ಪುಣ್ಯವನ್ನು ಪಡೆದಿದ್ದಾರೆ. ಈ ಚಕ್ರ ಅಥವಾ ಆವರಣವು ಅತ್ಯಂತ ರಹಸ್ಯಾತ್ಮಕವಾದದ್ದು, ಇಲ್ಲಿ ಪ್ರಕಾಶ ಮತ್ತು ವಿಮರ್ಶ ರೂಪಗಳ (ಶಿವ ಮತ್ತು ಶಕ್ತಿಯರ) ಸಮಾಗಮವು ಉಂಟಾಗಿ ಸೃಷ್ಟಿಯ ರಚನೆಯಾಗುತ್ತದೆ. ಇಲ್ಲಿ ಶಕ್ತಿಯು ಶಿವನ ಎಡತೊಡೆಯ ಮೇಲೆ ಆಸೀನಳಾಗಿದ್ದು ಅವರಿಬ್ಬರೂ ತಮ್ಮ ಕೃಪೆಯನ್ನು ಅವರ ಭಕ್ತರ ಮೇಲೆ ಹರಿಸುತ್ತಾರೆ.
ಸಾಧಕನು ಪ್ರಾಪಂಚಿಕ ಬಂಧನಗಳಿಂದ ಬಾಧಿತನಾದಾಗ ಅಥವಾ ಸಂಸಾರ ಬಂಧನಗಳಿಂದ ದುಃಖಕ್ಕೆ ಒಳಗಾದಾಗ ಅವನು ಶ್ರೀ ಚಕ್ರವನ್ನು ಪ್ರವೇಶಿಸಿದರೆ ಅವನಿಗೆ ನಿಧಾನವಾಗಿ ಜ್ಞಾನ ಸಿದ್ಧಿಯಾಗುತ್ತದೆ ಮತ್ತು ಪರಮಬಿಂದುವನ್ನು ಸೇರುವ ಹೊತ್ತಿಗೆ ಅವನಲ್ಲಿ ಸಂಪೂರ್ಣ ಬದಲಾವಣೆಯುಂಟಾಗುತ್ತದೆ. ’ಬಿಂದು’ವು ಸೃಷ್ಟಿ ಮತ್ತು ಲೀನವಾಗುವಿಕೆ ಎರಡನ್ನೂ ಪ್ರತಿನಿಧಿಸುತ್ತದೆ. ಉಪಾಸಕನು ಮೊದಲನೇ ಆವರಣದಿಂದ ಬಿಂದುವನ್ನು ಪ್ರವೇಶಿಸುವಷ್ಟರಲ್ಲಿ ಸಂಪೂರ್ಣವಾಗಿ ತಲ್ಲೀನನಾಗುತ್ತಾನೆ. ಹೀಗೆ ತಲ್ಲೀನನಾದ ಒಬ್ಬ ಸಾಧಕನು ಪುನಃ ಸಂಸಾರದಲ್ಲಿ ಆಸಕ್ತನಾದರೆ, ಅವನು ಪುನಃ ಸೃಷ್ಟಿಸಲ್ಪಟ್ಟು ಅವನ ಜನ್ಮವು ಬಿಂದುವಿನಿಂದ ಹೊರಮುಖವಾಗಿ ಅತ್ಯಂತ ಹೊರಗಿನ ಚಕ್ರದ ಮೂಲಕ ಆಗುತ್ತದೆ.
ಶ್ರೀ ಚಕ್ರದಲ್ಲಿ ಒಟ್ಟು ಒಂದುನೂರಾ ಹದಿಮೂರು ದೇವತೆಗಳನ್ನು ಪೂಜಿಸಲಾಗುತ್ತದೆ. ಶ್ರೀ ಚಕ್ರವು ಇಪ್ಪತ್ತೈದು ಕೋಟೆಗಳನ್ನುಳ್ಳ ಶ್ರೀನಗರದ ಒಳಗಡೆ ರಕ್ಷಿಸಲ್ಪಟ್ಟಿದೆ. ಎರಡು ಕೋಟೆಗಳ ಮಧ್ಯದಲ್ಲಿ ದೊಡ್ಡದಾದ ಸ್ಥಳಗಳಿದ್ದು ಅವುಗಳಲ್ಲಿ ಲಲಿತಾಂಬಿಕೆಯನ್ನು ಹೊರತುಪಡಿಸಿ ಇತರೆಲ್ಲಾ ದೇವ-ದೇವಿಯರು ನಿವಸಿಸುತ್ತಾರೆ. ಶ್ರೀ ಚಕ್ರದ ಒಂಬತ್ತು ಆವರಣಗಳನ್ನು ಷಟ್ ಚಕ್ರಗಳಿಗೆ (ಮೂಲಾಧಾರದಿಂದ ಆರಂಭಿಸಿ ಆಜ್ಞಾಚಕ್ರದವರೆಗೆ) ಹಾಗು ಸಹಸ್ರಾರ, ಕುಲಸಹಸ್ರಾರ ಮತ್ತು ಅಕುಲ ಸಹಸ್ರಾರಗಳಿಗೆ ಹೋಲಿಸಲಾಗಿದೆ. ಶ್ರೀ ಚಕ್ರವು ಕೇವಲ ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಮತ್ತು ಪುನಃಸೃಷ್ಟಿಗಳನ್ನು ಜ್ಯಾಮಿತಿಯ ರೇಖಾ ಚಿತ್ರಗಳ ಮೂಲಕ ತಿಳಿಸುವ ಸಂಕೇತವಾಗಿರದೆ, ಅದು ಬ್ರಹ್ಮಾಂಡ ವಿಕಸನದ ಕ್ರಿಯೆಯನ್ನು ಈ ಸೃಷ್ಟಿಯ ಚಿಕ್ಕ ಕಣವಾದ ಮಾನವ ಜೀವಿಯ ಮೇಲೆ ಅಧ್ಯಾರೋಪಿಸಿ ಅದನ್ನು ಅಭಿವ್ಯಕ್ತಗೊಳಿಸುವುದಾಗಿದೆ. ಶಾಸ್ತ್ರಗಳೂ ಸಹ ಮಾನವ ಶರೀರವು ಶ್ರೀಚಕ್ರದ ಪ್ರತಿರೂಪವಾಗಿದೆ ಎಂದು ಸಾರುತ್ತವೆ.
ಈ ನಾಮವು, ದೇವಿಯು ಅತ್ಯಂತ ಸೋಜಿಗವಾದ ಈ ಶ್ರೀ ಚಕ್ರದಲ್ಲಿ ನಿವಸಿಸುತ್ತಾಳೆ ಎಂದು ಹೇಳುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 996 http://www.manblunder.com/2010/07/lalitha-sahasranamam-996.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೨೦೮. ಲಲಿತಾ ಸಹಸ್ರನಾಮ ೯೯೬ನೇ ನಾಮಗಳ ವಿವರಣೆ
ಶ್ರೀಧರರೆ,"೨೦೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಅಂದಹಾಗೆ ನೀವು 'ಚತುರ್ಭುಜ' ಎಂದು ಬಳಸಿದ ಕಡೆ ನಾನು 'ಚೌಕ' ಎಂದು ಹಾಕಿದ್ದೇನೆ - ಶ್ರೀಯುತ ರವಿಯವರ ಮೂಲ ರೂಪದಲ್ಲಿ 'ಸ್ಕೈಯರ' ಎಂದು ಇದ್ದ ಕಾರಣ. ಹಾಗೆ ಗಮನಿಸುವಾಗ ತೃತಿಯಾವರಣದ 'ಸರ್ವ-ಕ್ಷೋಭಣಾ' ಹೆಸರಿನ ಬದಲು 'ಸರ್ವ-ಸಂಕ್ಷೋಭಣ' ಎಂದಿದ್ದುದ್ದು ಕಣ್ಣಿಗೆ ಬಿತ್ತು. ಅನುವಾದದಲ್ಲಿ ಕಣ್ತಪ್ಪಿನಿಂದಾಗಿರಬಹುದೆಂದುಕೊಂಡು ಮೂಲ ರೂಪವನ್ನು ಬಳಸಿದ್ದೇನೆ (ಎರಡು ರೂಪಗಳು ಸರಿಯಾದ್ದೇ ಗೊತ್ತಿಲ್ಲ)
.
ಲಲಿತಾ ಸಹಸ್ರನಾಮ ೯೯೬
____________________________
.
೯೯೬. ಶ್ರೀ ಚಕ್ರ-ರಾಜ-ನಿಲಯಾ
ಶ್ರೀ ಚಕ್ರವೆ ಶರೀರ, ಶಿವ-ಶಕ್ತಿಯರೆ ಆತ್ಮ ಸಕಲ ದೈವಗಳಿಗಾವಾಸ ಸ್ಥಾನ
ಯಂತ್ರಗಳ ಯಂತ್ರ ಚಕ್ರರಾಜ-ಶ್ರೀ ಯಂತ್ರ, ಲಲಿತಾ ನಿವಸಿತ ಸಂಕೀರ್ಣ
ಮೂಲಪ್ರಕೃತಿ ಜಗಕಾರಣಶಕ್ತಿ, ತ್ರಿಕೋಣ-ಬಿಂದು-ದಳಕಮಲ-ವೃತ್ತಮಯ
ಸೇರೆಲ್ಲ ಒಟ್ಟು ನಲ್ವತ್ನಾಲ್ಕರ ಜತೆ ವಿರಾಜಿತೆ ದೇವಿ ಶ್ರೀ ಚಕ್ರ-ರಾಜ-ನಿಲಯಾ ||
.
ಸೌಂದರ್ಯಲಹರಿ ಏಕದಶಾ ಸ್ತೋತ್ರದೆ ಸ್ತುತಿ, ಶ್ರೀ ಚಕ್ರದ ವಿಸ್ಮೃತಿ
ಚತುರ್ಶಿವ ಚಕ್ರದ ಜತೆ ಪಂಚ ಶಕ್ತಿ ಚಕ್ರ ಭಿನ್ನತೆ, ನವ ಮೂಲಪ್ರಕೃತಿ
ಅಷ್ಟದಳ-ಷೋಡಶದಳ ದ್ವಿಪದ್ಮಗಳಿಂದಾವೃತ್ತ, ಲಲಿತೆಯ ಮಂದಿರಾ
ತ್ರೈಮೇಖಲ-ಭೂಪುರತ್ರಯ ಚತುರ್ದಶಚತುರ್ಕೋಣ ಪೂರ್ಣ ಶ್ರೀ ಚಕ್ರ ||
.
ಜೀವದುಂಬಿದಗಣಿತ ಶಕ್ತಿಯ ಶ್ರೀ ಚಕ್ರ, ಗೌರವ ಸಮ್ಮಾನದೆ ಪೂಜಿತ ಭಕ್ತಿ
ನಾಲ್ಕು ಉರ್ಧ್ವಮುಖಿ ಶಿವ ತ್ರಿಕೋನ, ಐದು ಅಧೋಮುಖಿ ತ್ರಿಕೋನ ಶಕ್ತಿ
ನಲ್ವತ್ಮೂರು ತ್ರಿಭುಜಾ ಅಷ್ಟ-ಷೋಡಶದಳ ಕಮಲದೊಳಗೆ,ಜತೆಗಿಹ ಚುಕ್ಕೆ
ತ್ರಿವೃತ್ತ ಸುತ್ತ ತ್ರಿಚೌಕವಾವರಿಸುತ್ತ, ಪ್ರತಿಬದಿಗೂ ಚತುರ್ದ್ವಾರ ಪ್ರವೇಶಕೆ ||
.
ಹೊರ ಚೌಕದೆ ದ್ವಾರ, ತ್ರಿಚೌಕ ಪ್ರಜ್ಞಾವಸ್ಥೆ ತ್ರಿಹಂತ 'ತ್ರೈಲೋಕ್ಯ ಮೋಹನ'
ಶ್ರೀ ಚಕ್ರ ಪ್ರಥಮಾವರಣ, ದೇವತೆ ತ್ರಿಪುರಾ ದೇವಿ ಜತೆಗೆ ಪ್ರಕಟ ಯೋಗಿನಿ
ಅತಿಮಾನುಷ ಶಕ್ತಿಯ ದಶಸಿದ್ಧಿ ದೇವತೆ ಹೊರಗೋಡೆ, ಅಷ್ಟ ಮಾತೆ ನಡುವೆ
ಒಳಗೋಡೆ ದಶಮುದ್ರಾದೇವತೆ, ದ್ವಾದಶಾಷ್ಟಮೊತ್ತ ಪೂಜಿಸನುಮತಿ ಪಡೆವೆ ||
.
ಅಷ್ಟಮಾತೆ ಪತಿಗಳಷ್ಟ ಭೈರವ, ಒಳತ್ರಿಕೋಣದ ತುದಿ ಕೆಳದ್ವಾರದೆ ಪ್ರವೇಶ
ಸರ್ವಾಶಾ-ಪರಿ-ಪೂರಕಾವರಣಕೆ ಹೆಜ್ಜೆ, ಸಾಧಕನಾಧ್ಯಾತ್ಮಿಕಜ್ಯೋತಿ ತೇಜಸ್ಸ
ಒಡತಿ ತ್ರಿಪುರೇಶೀ ಜತೆ ಗುಪ್ತ ಯೋಗಿನಿ, ಷೋಡಶದಳ ಕಮಲದೊಳ ವಾಸ
ಪ್ರತಿದಳವನಾಳೊ ದೇವಿಗೆ ಜತೆ ಸ್ವರಾಕ್ಷರ, ಪೂಜಿಸನುಮತಿಸಿರೆ ಮುನ್ನಡೆಸ ||
.
ತೃತೀಯಾವರಣ ಸರ್ವ-ಸಂಕ್ಷೋಭನ, ಆಧ್ಯಾತ್ಮಿಕೋನ್ನತಿ ಸಮರಸನ್ನದ್ಧ
ಅಷ್ಟದಳ ಕಮಲ ನಿವಸಿತೆ ತ್ರಿಪುರಸುಂದರಿ, ಗುಪ್ತತರಯೋಗಿನಿ ಸದಾ
ಅಷ್ಟದಳದೊಳಗಿಹರು ಪ್ರತಿದಳಕೊಬ್ಬ ದೇವಿಯರು, ಪೂಜಿಸುತಲವರ
ಪಡೆಯಲನುಮತಿ ಹೊರಡೆ ಅಷ್ಟಕಮಲ ರಾಜ್ಯ, ತ್ರಿಕೋಣದ ಪರಿವಾರ ||
.
ಚತುರ್ಥಾವರಣ ಸರ್ವ-ಸೌಭಾಗ್ಯ-ದಾಯಕ, ಐಹಿಕ ಅಧ್ಯಾತ್ಮಿಕ ಸೌಲಭ್ಯ
ಚತುರ್ದಶ ತ್ರಿಭುಜಗಳಿಗೊಡತಿ ತ್ರಿಪುರವಾಸಿನೀ, ಯೋಗಿನಿ ಸಂಪ್ರದಾಯ
ಪ್ರತಿ ತ್ರಿಭುಜವನಾಳುವ ದೇವಿಯರ ಪೂಜಿಸಿ-ನಮಿಸಿ ಪಡೆಯಲನುಮತಿ
ಮುಂದಿನಾವರಣಕೆ ತೆರಳಲು ಸಿಗೊ ರಹದಾರಿ, ಪ್ರತಿ ಆವರಣದ ಪದ್ದತಿ ||
.
ಪಂಚಮಾವರಣ ಸರ್ವಾರ್ಥ-ಸಾಧಕ, ಸಾಧಕನಾಧ್ಯಾತ್ಮಿಕ ಪ್ರಗತಿ ಔನ್ನತ್ಯ
ದಶ ತ್ರಿಭುಜಕೆ ತ್ರಿಪುರಶ್ರೀಯೊಡತಿ, ಕುಲೋತ್ತೀರ್ಣ ಯೋಗಿನಿ ಸಾಂಗತ್ಯ
ಪ್ರತಿ ತ್ರಿಕೋನದಲೊಂದೊಂದು ದೇವಿಯರುಪಸ್ಥಿತಿ, ಪೂಜಿಸಿ ನಮಿಸುತಲಿ
ಪಡೆದನುಮತಿಯವರೆಲ್ಲರದಾಟೆ ಮುಂದಿನಾವರಣ, ಆರನೆಯ ಮೆಟ್ಟಿಲಲಿ ||
.
ಷಡ್ಚಮಾವರಣ ಸರ್ವ-ರಕ್ಷಾಕರ-ಚಕ್ರ, ಸಾಧಕನಿಗೆ ವಿಮುಕ್ತಿ ಸಂಸಾರ ಭಾರ
ಪಂಚಮದಲಿಹ ಹೊರಗಣ ತ್ರಿಭುಜದಂತೆ, ಒಳಗಣ ದಶ ತ್ರಿಕೋನ ಪ್ರಸ್ತಾರ
ನಿವಸಿತಳಿಲ್ಲಿ ಒಡತಿ ತ್ರಿಪುರಮಾಲಿನೀ, ನಿಗರ್ಭ ಯೋಗಿನಿ ಸಾಂಗತ್ಯ ಕಾದು
ಪ್ರತಿ ತ್ರಿಕೋನ ದೇವಿಯರನು ಜತೆಗೆ ಪೂಜಿಸಿ, ಮುನ್ನಡೆ ಅನುಮತಿ ಪಡೆದು ||
.
ಸಪ್ತಮಾವರಣ ಸರ್ವ-ರೋಗ-ಹರ ಚಕ್ರ, ಮಾನಸಿಕ ಕ್ಲೇಷ ನಿವಾರಿಸುತ
ಅಷ್ಟತ್ರಿಕೋನ ಅಷ್ಟಾವಸುಕೋನ, ತ್ರಿಪುರಸಿದ್ಧಾ, ರಹಸ್ಯಯೋಗಿನಿ ಚಿತ್ತ
ಪ್ರತಿ ತ್ರಿಕೋನದಲೊಬ್ಬ ವಾಗ್ದೇವಿ ನಿವಸಿತ, ನಾಮಾವಳಿ ವಿರಚಿಸಿ ಸೂಕ್ತ
ವರ್ಣಮಾಲೆಗೊಡತಿಯಿವರೆಲ್ಲರ ಪೂಜಿಸಿರೆ, ಮುನ್ನಡೆಯಲನುಮತಿಸುತ ||
.
ಆಷ್ಟಮಾವರಣ ಅತಿ ಒಳಗಣ ತ್ರಿಕೋನ, ಸರ್ವಸಿದ್ಧಿಪ್ರದಾಯಿತ ತಾಣ
ಆಧ್ಯಾತ್ಮಸಾಧನೆ ಪರಿಪೂರ್ಣಕಾರಂಭ, ಉಚ್ಛ್ರಾಯಕೆ ಬಿಂದು ಸಮ್ಮಿಲನ
ಒಡತಿ ತ್ರಿಪುರಾಂಬಾ, ಅತಿರಹಸ್ಯ ಯೋಗಿನಿ, ದೇವಿ ಆಯುಧ ಪೂಜಿತ
ತ್ರಿಶೃಂಗದೆ-ತ್ರಿದೇವಿ, ತ್ರಿಕೋನದಾಚೆ ತಿಥಿದೇವಿ, ಗುರು ಪರಂಪರೆ ಸ್ತುತ ||
.
ನವಾವರಣ ಬಿಂದು ಲಲಿತಾಂಬಿಕೆಯ ಪೂಜಿಸೊ, ಸರ್ವಾನಂದ ಮಯ ಚಕ್ರ
ಪರಮಾನಂದದೆ ಆತ್ಮ ಬ್ರಹ್ಮೈಕ್ಯವಾಗೊ, ರಾಜೇಶ್ವರಿ-ಮಹಾಕಾಮೇಶ್ವರಿ ಚಿತ್ರ
ಜಗನ್ಮಾತೆ ಶ್ರೀ ಮಹಾ ತ್ರಿಪುರಸುಂದರೀ ಜತೆ ಪರಾಪರಾತಿರಹಸ್ಯ ಯೋಗಿನಿ
ದಾಟಲಿರಬೇಕು ಷೋಡಶಿಸಿದ್ಧಿ, ರಹಸ್ಯಾವರಣ ಶಿವಶಕ್ತಿ ಐಕ್ಯತೆಯ ಸೃಷ್ಟಿದನಿ ||
.
ಷೋಡಶೀ ಸಾಧಕ ಬಿಂದು ಪೂಜೆ ತ್ರಿಖಂಡಾಮುದ್ರೆ, ಪ್ರಕಾಶ ವಿಮರ್ಶ ಐಕ್ಯ
ಶಿವನೆಡತೊಡೆಯ ಮೇಲಾಸೀನೆ ಶಕ್ತಿ, ಕರುಣಾವರ್ಷ ಹರಿಸಿ ಸಾಧಕ ಸೌಖ್ಯ
ಸಂಸಾರದಿಂದ ಶೃಂಗಕೆ ಸಾಧಕಯಜ್ಞ, ಬಿಂದು ಪರಿವರ್ತಿಸಿ ಗಮ್ಯದತ್ತ ಮಗ್ನ
ಜಾರಿದರೆ ಸಾಂಸಾರಿಕತೆಯತ್ತ, ಮೊದಲಾವರಣದಾಚೆ ಪುನರ್ಜನ್ಮ ಕಾರಣ ||
.
ಒಳಾಂಗಣ ತ್ರಿಕೋನದಾಚೆ ಹದಿನೈದು ನಿತ್ಯ ತಿಥಿದೇವಿ, ಪ್ರತಿ ತಿಥಿಗೊಬ್ಬರು
ನೂರಹದಿಮೂರು ದೇವತೆಗಳ ಶ್ರೀ ಚಕ್ರ, ಇಪ್ಪತ್ತೈದು ಕೋಟೆ ಶ್ರೀ ನಗರ ಸುತ್ತ
ಕೋಟೆ ನಡುವಣ ಜಾಗ ದೇವ ದೇವಿಗೆ ನಿವಾಸ, ನವಾವರಣವೆ ಮಾನಸಚಕ್ರ
ಮೂಲಾಧಾರದಿಂದಾಜ್ಞಾ, ಕುಲ-ಅಕುಲ ಸಹಸ್ರಾರ, ವಿಶ್ವಾತ್ಮ ಮಾನವ ಸ್ತರ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೨೦೮. ಲಲಿತಾ ಸಹಸ್ರನಾಮ ೯೯೬ನೇ ನಾಮಗಳ ವಿವರಣೆ by nageshamysore
ಉ: ೨೦೮. ಲಲಿತಾ ಸಹಸ್ರನಾಮ ೯೯೬ನೇ ನಾಮಗಳ ವಿವರಣೆ
ನಾಗೇಶರೆ,
ಮೊದಲಿಗೆ ಈ ಕಂತಿನ ಕವನಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಹೇಳಿ ಬಿಡುತ್ತೇನೆ, ನಿಜಕ್ಕೂ ಬಹಳ ಅದ್ಭುತವಾಗಿ ಮೂಡಿ ಬಂದಿವೆ. ಉಳಿದಂತೆ, ಸರ್ವ-ಕ್ಷೋಭಣ ಅಲ್ಲ, ಮೂಲ ಲೇಖನದಲ್ಲಿರುವಂತೆ ಅದು ಸರ್ವ-ಸಂಕ್ಷೋಭಣ ಆಗಬೇಕು. ನೀವೆಂದಹಾಗೆ ಎಲ್ಲಾ ಚತುರ್ಭುಜಗಳು ಚೌಕಗಳಲ್ಲ, ಈ ಸೂಕ್ಷ್ಮ ವ್ಯತ್ಯಾಸವನ್ನು ನಾನು ಗಮನಕ್ಕೆ ತೆಗೆದುಕೊಂಡಿರಲಿಲ್ಲ; ಆದರೆ ಚತುರ್ಭುಜ ಶಬ್ದದ ಬಳಕೆಯಿಂದ ಅರ್ಥವ್ಯತ್ಯಯವುಂಟಾಗುತ್ತದೆ ಎನಿಸಿದರೆ ತಿಳಿಸಿ, ನಾನು ಅದನ್ನು ಮೂಲ ಲೇಖನದಲ್ಲಿ ಸರಿಪಡಿಸುತ್ತೇನೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೨೦೮. ಲಲಿತಾ ಸಹಸ್ರನಾಮ ೯೯೬ನೇ ನಾಮಗಳ ವಿವರಣೆ by makara
ಉ: ೨೦೮. ಲಲಿತಾ ಸಹಸ್ರನಾಮ ೯೯೬ನೇ ನಾಮಗಳ ವಿವರಣೆ
ಶ್ರೀಧರರೆ ಧನ್ಯವಾದಗಳು. ಚೌಕವೂ ಒಂದು ಚತುರ್ಭುಜವೆ - ಆದಕಾರಣ ಚತುರ್ಭುಜವು ಸರಿಯಾದ ಪದವೆ ಆದರೂ, ಶ್ರೀ ಚಕ್ರ ರಚನೆಯಲ್ಲಿ ಚೌಕವೆಂದೆ ಸ್ಪಷ್ಟ ವಿವರಣೆ ಇರುವುದರಿಂದ, ಬದಲಾಯಿಸಿದರೆ (ಅಥವ ಚೌಕ ಎಂದು ಸಹ ಸ್ಪಷ್ಟನೆಯ ವಾಕ್ಯವೊಂದನ್ನು ಸೇರಿಸಿದರೆ) ಸೂಕ್ತವೆನಿಸುತ್ತದೆ (ಮೂಲ ಪ್ರತಿಯಲ್ಲಿ).
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು