೨೦೯. ಲಲಿತಾ ಸಹಸ್ರನಾಮ ೯೯೭ರಿಂದ ೯೯೮ನೇ ನಾಮಗಳ ವಿವರಣೆ

೨೦೯. ಲಲಿತಾ ಸಹಸ್ರನಾಮ ೯೯೭ರಿಂದ ೯೯೮ನೇ ನಾಮಗಳ ವಿವರಣೆ

                                                               ಲಲಿತಾ ಸಹಸ್ರನಾಮ ೯೯೭ - ೯೯೮

Śrīmat-tripura-sundarī श्रीमत्-त्रिपुर-सुन्दरी (997)

೯೯೭. ಶ್ರೀಮತ್-ತ್ರಿಪುರ-ಸುಂದರೀ

           ಶಿವನು ತ್ರಿಪುರ ಎಂದು ಕರೆಯಲ್ಪಟ್ಟಿದ್ದಾನೆ. ತ್ರಿ ಎಂದರೆ ಮೂರು ಮತ್ತು ಪುರ ಎಂದರೆ ಕೋಟೆ, ರಾಜಭವನ ಮೊದಲಾದವು. ಮತ್ತು ತ್ರಿಪುರ ಎಂದರೆ ಮೂರು ಕೋಟೆಗಳು. ಈ ಮೂರು ಕೋಟೆಗಳು ಶಿವನ ಮೂರು ವಿಶಿಷ್ಠ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಸೂಚಿಸುತ್ತವೆ. ಈ ಒಂದೊಂದು ಕಾರ್ಯಗಳನ್ನು ಬ್ರಹ್ಮ, ವಿಷ್ಣು ಮತ್ತು ರುದ್ರರು ನಿರ್ವಹಿಸುತ್ತಾರೆ. ಶಿವನು ಈ ಮೂರು ಕ್ರಿಯೆಗಳ ಅಂತಿಮ ನಿಯಂತ್ರಕನಾಗಿರುವುದರಿಂದ ಅವನನ್ನು ತ್ರಿಪುರ-ಸುಂದರ ಎಂದು ಕರೆಯಲಾಗಿದೆ (ತ್ರಿಪುರ ಎನ್ನುವ ಪ್ರತ್ಯಯವು ಅವನ ಅಂದವಾದ ವ್ಯಕ್ತಿತ್ವವನ್ನು ಸೂಚಿಸುತ್ತದೆ). ಬ್ರಹ್ಮ, ವಿಷ್ಣು ಮತ್ತು ರುದ್ರರು ಶಿವನ ದೇಹದ ಭಾಗಗಳೆಂದು ಹೇಳಲಾಗುತ್ತದೆ. ಆತನ ಸಂಗಾತಿಯು ತ್ರಿಪುರ ಸುಂದರಿಯಾಗಿದ್ದಾಳೆ (ಸುಂದರೀ ಎನ್ನುವುದು ಸುಂದರ ಶಬ್ದದ ಸ್ತ್ರೀಲಿಂಗ ರೂಪವಾಗಿದೆ). ಈ ವಿಷಯವನ್ನು ನಾಮ ೭೮೭ ತ್ರಿಪುರೇಶೀಯಲ್ಲಿ ವಿವರಿಸಲಾಗಿದೆ.

          ವಾಮಕೇಶ್ವರೀಮತಮ್ ಗ್ರಂಥದಲ್ಲಿ (೪.೪) ಶಿವನು ಭೈರವಿಯನ್ನು ಹೀಗೆ ಸಂಭೋದಿಸುತ್ತಾನೆ, "ಪ್ರಿಯೆ, ತ್ರಿಪುರ ಎನ್ನುವುದು ಅತ್ಯುನ್ನತವಾದ ಮೂಲಶಕ್ತಿಯಾಗಿದೆ ಮತ್ತದು ಸೃಷ್ಟಿಯ ಬೆಳಕಾಗಿದೆ. ಶಕ್ತಿ ದೇವಿಯು ಮಾತೃಕೆಯಾಗಿ ತನ್ನ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳಿಂದ ತ್ರಿಲೋಕಗಳಿಗೆ ಜನ್ಮನೀಡುತ್ತಾಳೆ. ಮಹಾಪ್ರಳಯ ಕಾಲದಲ್ಲಿ, ದೇವಿಯು ಎಲ್ಲಾ ವಸ್ತುಗಳ (ಅಂದರೆ ಎಲ್ಲಾ ತತ್ತ್ವಗಳ) ನಿಲಯವಾಗುತ್ತಾಳೆ, ಮತ್ತಾಕೆ ಹಾಗೆಯೇ ಅಸ್ತಿತ್ವದಲ್ಲಿರುತ್ತಾಳೆ (ನಾಮ ೫೭೧). ಆಕೆಯ ಆವಿರ್ಭಾವದ ನಂತರ, ಭಗವಂತನ (ಶಿವನ) ಅವಶ್ಯಕತೆಯಿರುವುದಿಲ್ಲ. ಶಕ್ತಿಯಿಲ್ಲದಿದ್ದರೆ ಅವನು ಕಾರ್ಯಪ್ರವೃತ್ತನಾಗಲಾರ".

          ತ್ರಿಪುರ ಎಂದರೆ ಶ್ರೀ ಚಕ್ರದ ಅತ್ಯಂತ ಒಳಗಿನ ತ್ರಿಕೋಣದ ಮೂರು ಭುಜಗಳಲ್ಲಿ ಸ್ಥಾಪಿತವಾಗಿರುವ ವಾಮಾ, ಶಿಖಾ ಮತ್ತು ಜ್ಯೇಷ್ಠಾ ದೇವಿಯರಾಗಿದ್ದಾರೆ; ಇವರುಗಳು ಅನುಕ್ರಮವಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನೋಡಿಕೊಳ್ಳುತ್ತಾರೆ. ಈ ತ್ರಿಕೋಣದ ಪ್ರತಿಯೊಂದು ಭುಜವನ್ನೂ ಸಹ ಪುರ ಅಥವಾ ಕೋಟೆ ಎಂದು ಕರೆಯಲಾಗುತ್ತದೆ. ದೇವಿಯು ಈ ತ್ರಿಪುರಗಳನ್ನು ನಿಯಂತ್ರಿಸುವ ಅಂತಿಮ ಐಕ್ಯ ಶಕ್ತಿಯಾಗಿರುವುದರಿಂದ ಆಕೆಯನ್ನು ತ್ರಿಪುರಾ ಎಂದು ಕರೆಯಲಾಗುತ್ತದೆ.

          ದೇವಿಯು ಪರಬ್ರಹ್ಮಳಾಗಿ, ಪಂಚದಶಿಯ ಮೂರು ಕೂಟಗಳು ಅನುಕ್ರಮವಾಗಿ ಪ್ರತಿನಿಧಿಸುವ ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ರಿಯ ಮೂಲಕ ಸೃಷ್ಟಿ ವಿಕಸನದ ಕ್ರಿಯೆಯನ್ನು ಉಂಟುಮಾಡುತ್ತಾಳೆ. ಆದ್ದರಿಂದ ಆಕೆಯನ್ನು ಮಹಾ ತ್ರಿಪುರ ಸುಂದರಿ ಎಂದು ಕರೆಯಲಾಗುತ್ತದೆ (ಮಹಾ ಎಂದರೆ ಅತ್ಯುನ್ನತವಾದದ್ದು).

ಇನ್ನಷ್ಟು ವಿವರಗಳು:

           ದೇವಿಯು ಆದಿಶಕ್ತಿಯಾಗಿರುವುದರಿಂದ ಆಕೆಯಿಂದಲೇ ಎಲ್ಲಾ ತ್ರಿಪುಟಿಗಳು (ತ್ರಿಪುರಗಳು) ಉಗಮವಾಗುತ್ತವೆ. ಆದಿ ಶಕ್ತಿಯು, ಈ ಭೌತಿಕ ಪ್ರಪಂಚಕ್ಕೆ ಕಾರಣವಾಗಿರುವ ಸಕಲ ಶಕ್ತಿಗಳ ಒಟ್ಟು ಮೊತ್ತವಾಗಿದ್ದಾಳೆ. ಕಾಲದಿಂದ ಕಾಲಕ್ಕೆ ಈ ದೈವೀ ಶಕ್ತಿಯು ನಾವು ಗ್ರಹಿಸಬಹುದಾದಂತಹ ಹಲವು ವಿಧದ ಆಕಾರ ಮತ್ತು ರೂಪಗಳನ್ನು ಹೊಂದುತ್ತದೆ. ಈ ಸಮಸ್ತ ಬ್ರಹ್ಮಾಂಡವೂ ಸಹ ಸಂಪೂರ್ಣವಾಗಿ ವಸ್ತು ಅಥವಾ ಶಕ್ತಿಯಿಂದ ತುಂಬಿದೆ. ವಾಸ್ತವವಾಗಿ ನಾವು ನಿರ್ವಾತವೆಂದು ಕರೆಯಲ್ಪಡುವ ಪ್ರದೇಶವು ಗುರುತ್ವಾಕರ್ಷಣ ಶಕ್ತಿ ಅಥವಾ ವಿದ್ಯುದಯಸ್ಕಾಂತೀಯ ಶಕ್ತಿಯಿಂದ ತುಂಬಿರುತ್ತದೆ. ಇಂದಿರುವ ವಿಶ್ವವು ಹಿಂದೆ ಬಹು ಕಿರಿದಾಗಿತ್ತೆಂದೂ ಮತ್ತು ಇದು ಇನ್ನಷ್ಟು ಹಿಗ್ಗಿ ಅಂತಿಮವಾಗಿ ಕುಸಿಯುತ್ತದೆ ಮತ್ತು ಅದು ಸರ್ವನಾಶವಾಗುತ್ತದೆನ್ನುವುದನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ. ಪ್ರಪಂಚದ ಈ ಹಿಗ್ಗುವಿಕೆಯ ಒಂದು ಹಂತದಲ್ಲಿ ಸ್ತಬ್ದಗೊಂಡು, ಪುನಃ ಈ ಪ್ರಪಂಚದ ಕುಗ್ಗುವಿಕೆಯು ಆರಂಭವಾಗುತ್ತದೆ. ಯಾವಾಗ ಈ ಕುಗ್ಗುವಿಕೆಯು ಸಂಪೂರ್ಣವಾಗುತ್ತದೆಯೋ ಆಗ ಈ ಪ್ರಪಂಚವು ‘ಮಹಾಸ್ಪೋಟ’ (ಬಿಗ್-ಬ್ಯಾಂಗ್ Big Bang) ಸ್ಥಿತಿಯ ಪೂರ್ವ ರೂಪವನ್ನು ಪಡೆಯುತ್ತದೆ. ದೇವಿಯು ಚರಶಕ್ತಿಯಾಗಿ ಅಂತಿಮ ಪಾಲಕಿಯಾಗಿರುವುದರಿಂದ ಆಕೆಯು ಧಾರಣೆ, ವಿಕಾಸ  (ಹಿಗ್ಗುವಿಕೆ) ಮತ್ತು ಸಂಕುಚನ (ಕುಗ್ಗುವಿಕೆ) ಇವುಗಳನ್ನುಂಟು ಮಾಡುತ್ತಾಳೆ. (ಈ ಮೂರೂ ಕ್ರಿಯೆಗಳು ಶಕ್ತಿಯ ಮೂಲಭೂತ ಕ್ರಿಯೆಗಳಾಗಿದ್ದು, ಇವು ಪ್ರತಿಯೊಂದೂ ಒಂದೊಂದು ಪುರದ ರೂಪದಲ್ಲಿವೆ; ಆದ್ದರಿಂದ ದೇವಿಯನ್ನು ತ್ರಿಪುರ ಸುಂದರೀ ಎಂದು ಕರೆಯಲಾಗುತ್ತದೆ). ಈ ಚರ ಶಕ್ತಿಯು ಅಚರ ಶಕ್ತಿ ಅಥವಾ ‘ಮಹಾಸ್ಪೋಟ’ದ ಮೂಲವಾದ ಶಿವನಿಂದ ಪಡೆಯಲ್ಪಟ್ಟಿದೆ.

Śrī Śivā श्री शिवा (998)

೯೯೮. ಶ್ರೀ ಶಿವಾ

           ಶಿವನ ಪರಮೋನ್ನತ ಶಕ್ತಿಯನ್ನು ಆತನ ಹೆಂಡತಿಯಾಗಿ ಪ್ರತಿಮಾಲಂಕಾರಗೊಳಿಸಲಾಗಿದೆ. ಶಿವ ಎಂದರೆ ಮುಕ್ತಿ ಎನ್ನುವ ಅರ್ಥವೂ ಇದೆ. ದೇವಿಯನ್ನು ನಾಮ ೫೩ರಲ್ಲಿ ವಾಗ್ದೇವಿಗಳು ಶಿವಾ ಎಂದು ಸಂಭೋದಿಸಿದ್ದರೆ ಇಲ್ಲಿ ಶಿವಾ ಶಬ್ದಕ್ಕೆ ಪೂರ್ವ ಪ್ರತ್ಯಯವಾಗಿ ಶ್ರೀಯನ್ನು ಜೋಡಿಸಿದ್ದಾರೆ; ಏಕೆಂದರೆ ಅವರಿಗೆ ದೇವಿಯು ಈ ಪ್ರಪಂಚದಲ್ಲಿ ಸರ್ವಶ್ರೇಷ್ಠಳು ಅಥವಾ ಪರಮಪವಿತ್ರಳು ಎನ್ನುವುದನ್ನು ಸಾರಬೇಕಾಗಿತ್ತು. ಶ್ರೀ ಎನ್ನುವುದು ಲಕ್ಷ್ಮೀ ದೇವಿಯ ಬೀಜಾಕ್ಷರವಾಗಿದ್ದು, ಲಕ್ಷ್ಮೀ ದೇವಿಯ ರೂಪವು ಅತ್ಯಂತ ಮಂಗಳಕರ ರೂಪಗಳಲ್ಲೊಂದು ಎಂದು ಪರಿಗಣಿತವಾಗಿದೆ. ಯಾರು ದೇವಿಯನ್ನು ಶ್ರೀ ಶಿವಾ ಆಗಿ ನೋಡಬಲ್ಲರೋ ಅವರು ಪರಮಾನಂದದಲ್ಲಿ ತೋಯುತ್ತಾರೆ ಏಕೆಂದರೆ ಅವರಿಗೆ ಮುಂದಿನ ನಾಮದಲ್ಲಿ ಶಿವ ಶಕ್ತಿಯರ ಐಕ್ಯತೆಯ (ಶಿವ-ಶಕ್ತಿ ಸಾಮರಸ್ಯದ) ಒಂದು ಇಣುಕು ನೋಟವು ಸಾಧ್ಯವಾಗುತ್ತದೆ ಮತ್ತು ಅಂತಿಮವಾಗಿ ಈ ಸಹಸ್ರನಾಮದ ಕೊನೆಯಲ್ಲಿ ಅವರು ದೇವಿಯಲ್ಲಿ ಲೀನವಾಗುತ್ತಾರೆ. ಪರಮಾನಂದದ ಉನ್ನತ ಹಂತಗಳಲ್ಲಿ ಮಾತ್ರವೇ ಸಾಕ್ಷಾತ್ಕಾರವು ಉಂಟಾಗುತ್ತದೆ.

           ಸಾಧಕನ ಅಂತಿಮ ಹಂತವನ್ನು ಈ ನಾಮದ ಮೂಲಕ ಬಿಂಬಿಸಲಾಗುತ್ತಿದೆ. ಕುಂಡಲಿನೀ ಎಂದು ಕರೆಯಲ್ಪಡುವ ಸ್ತ್ರೀ ಶಕ್ತಿಯು ಶಿವ ಎಂದು ಕರೆಯಲ್ಪಡುವ ಪುಂ ಶಕ್ತಿಯೊಂದಿಗೆ ಐಕ್ಯವಾಗುವುದರ (ಮುಂದಿನ ನಾಮ) ಮೊದಲು ಒಂದುಗೂಡುವುದು ಆಧ್ಯಾತ್ಮಿಕ ಸಾಧನೆಯ ಮುಕ್ತಾಯವನ್ನು ಸೂಚಿಸುತ್ತದೆ.

           ಶಿವ ಎಂದರೆ ಪರಮೋನ್ನತವಾದ ಪರಿಶುದ್ಧತೆ. ಮಾಂಡೂಕ್ಯ ಉಪನಿಷತ್ತು (೭) ಹೀಗೆ ಹೇಳುತ್ತದೆ, “प्रपञ्चोपशमं शान्तं शिवम् अद्वैतम् - ಪ್ರಪಂಚೋಪಶಮಂ ಶಾಂತಂ ಶಿವಮ್ ಅದ್ವೈತಮ್" ಅಂದರೆ ’ಈ ಸಮಸ್ತ ಪ್ರಪಂಚದಿಂದ ಸಂಪೂರ್ಣ ಬಿಡುಗಡೆಗೊಂಡ, ಒಳ್ಳೆಯದೆಲ್ಲದರ ಒಟ್ಟು ಮೊತ್ತ, ಅವನಂತಹ ಎರಡನೇ ವಸ್ತುವಿಲ್ಲದ್ದು (ಬ್ರಹ್ಮವು)’. ಈ ಉಪನಿಷದ್ವಾಕ್ಯವು ಶಿವನೆಂದರೆ ಒಳ್ಳೆಯದೆಲ್ಲದರ ಮೊತ್ತವೆಂದು ಹೇಳುತ್ತದೆ.

           ಯಜುರ್ವೇದವು (೪.೪.೧೦) ಹೀಗೆ ಹೇಳುತ್ತದೆ, "या तॆ रुद्र शिवा तनुः शिवा विश्वाहभेषजी (श्री रुद्रं १०.३) ಯಾ ತೆ ರುದ್ರ ಶಿವಾ ತನುಃ ಶಿವಾ ವಿಶ್ವಾಹಭೇಷಜೀ (ಶ್ರೀ ರುದ್ರಂ ೧೦.೩)" ಅಂದರೆ ನಿನ್ನ ಆ ಮಂಗಳಕರವಾದ ರೂಪವು, ಓಹ್ಞ್, ರುದ್ರನೇ! ಯಾವುದು ಮಂಗಳಕರವಾಗಿದೆಯೋ ಮತ್ತು ಗುಣಪಡಿಸುವ ಗುಣವನ್ನು ಹೊಂದಿದೆಯೋ". ಮಹಾನಾರಾಯಣ ಉಪನಿಷತ್ತು (೨೧) ಸಹ ಹೀಗೆ ಹೇಳುತ್ತದೆ, "ಪರಮೋನ್ನತನಾದ, ಸಮಸ್ತ ಜ್ಞಾನಕ್ಕೆ ಅಧಿಪತಿಯಾಗಿರುವ, ಸೃಷ್ಟಿಸಲ್ಪಟ್ಟ ಜೀವಿಗಳ ನಿಯಂತ್ರಕನಾಗಿರುವ, ವೇದಗಳ ಸಂರಕ್ಷಕನಾದ ಮತ್ತು ಹಿರಣ್ಯಗರ್ಭನ ಒಡೆಯನಾದವನೇ, ನನಗೆ ಶಿವವನ್ನುಂಟು (ಮಂಗಳವನ್ನುಂಟು) ಮಾಡು".

          ವಾಕ್-ದೇವಿಗಳು ಜ್ಞಾನೋದಯ ಮತ್ತು ಪರಿವರ್ತನೆ ಹೊಂದಿದ ಅನುಭಾವಿಗೆ ದೇವಿಯ ವಿಸ್ಮಯಕರವಾದ ಸರ್ವವ್ಯಾಪಕತೆಯು ಗ್ರಹಿಕೆಗೆ ನಿಲುಕುವ ಅನುಭವವಾಗಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸುವ ಇಚ್ಛೆಯುಳ್ಳವರಾಗಿದ್ದರೆ, ಈ ನಾಮವನ್ನು ಕಡೆಯ ನಾಮವಾಗಿ ಇರಿಸಲು ಆಯ್ದುಕೊಳ್ಳಬಹುದಾಗಿತ್ತು. ಆದರೆ ಅವರು ಹಾಗೆ ಏಕೆ ಮಾಡಲಿಲ್ಲವೆಂದರೆ, ಈ ನಾಮವು ಮುಂದಿನ ನಾಮಕ್ಕೆ ಮುನ್ನುಡಿಯಾಗಿದೆ; ಏಕೆಂದರೆ ಅದು ಬ್ರಹ್ಮಾಂಡದ ಅರಿಯುವಿಕೆಯನ್ನು ಅನಾವರಣಗೊಳಿಸುವಲ್ಲಿ ಅತ್ಯಂತ ಮಹತ್ವವುಳ್ಳದ್ದಾಗಿದೆ.

                                                                                   ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 997 - 998 http://www.manblunder.com/2010/07/lalitha-sahasranamam-997-998.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Mon, 01/20/2014 - 19:43

ಶ್ರೀಧರರೆ,"೨೦೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೯೭ - ೯೯೮
_____________________________
.
೯೯೭. ಶ್ರೀಮತ್-ತ್ರಿಪುರ-ಸುಂದರೀ
.
ಬ್ರಹ್ಮ ಪ್ರಕಟ ಸ್ಥೂಲ ಸೂಕ್ಷ್ಮ ರೂಪ, ಸೃಷ್ಟಿ-ಸ್ಥಿತಿ-ಲಯ ಬ್ರಹ್ಮ-ವಿಷ್ಣು-ರುದ್ರ ಗುರಿ
ಮೋಹನಾಕಾರ ಶಿವ ತ್ರಿಪುರ ಸುಂದರ, ಸಂಗಾತಿ ಶ್ರೀಮತ್ ತ್ರಿಪುರ ಸುಂದರೀ
ಮಹಾನಿಯಂತ್ರಕ ಶಿವನ ಅಂಗಗಳಾಗಿ ತ್ರಿಮೂರ್ತಿ, ಮೇಲ್ವಿಚಾರಣೆ ತ್ರಿಕಾರ್ಯಕೆ
ಶಕ್ತಿ ಹೊರಹೊಮ್ಮಿದ ಮೇಲೆ ನಿಷ್ಕ್ರಿಯನಾಗಿ ಶಿವ, ಸಕ್ರಿಯನಾಗೆ ಶಕ್ತಿ ಸಹಚರಿಕೆ ||
.
ಶ್ರೀ ಚಕ್ರದೊಳ ತ್ರಿಕೋಣ ಭುಜದುಪಸ್ಥಿತ ವಾಮಾ-ಶಿಖಾ-ಜ್ಯೇಷ್ಟಾ ದೇವತಾ
ತ್ರಿಕಾರ್ಯ ನಡೆಸುವ ಪುರ ತ್ರಿಪುರ, ಅಂತಿಮ ಅಧಿಕಾರಿಣಿಯಾಗಿ ಲಲಿತ
ಪಂಚದಶೀ ತ್ರಿಕೂಟ ತ್ರಿಶಕ್ತಿಗೆ ಸೃಷ್ಟಿ, ಪ್ರೇರೇಪಿಸೆ ತ್ರಿಪುರಸುಂದರ ಸಂಗಾತಿ
ಆದಿಶಕ್ತಿ ಮಾತೃಕಾ ತ್ರೈಲೋಕ್ಯ ಜನನಿ, ಲಯದೆಲ್ಲ ಅಪೋಷಿಸಿ ಸಾಕ್ಷಿಭೂತೆ ||
.
ಇನ್ನಷ್ಟು ವಿವರಗಳು (ಮಹಾಸ್ಪೋಟ):
ಸಕಲ ಶಕ್ತಿ ಸಮಷ್ಟಿ ರೂಪ ಆದಿಶಕ್ತಿ, ತ್ರಿಪುರ ಚರಾಚರ ಸೃಷ್ಟಿ ಮೂಲ
ಅನಂತದೆ ನಿರಂತರವಿಹ ಶಕ್ತಿ ಕ್ಷೇತ್ರ, ನಾನಾರೂಪ ಪ್ರಕಟ ಕಾಲಕಾಲ
ಹಿಗ್ಗಿಸೆ ಬ್ರಹ್ಮಾಂಡ ವಿಸ್ತರಣೆ, ಕುಗ್ಗೆ ಸಂಕುಚನ ಮೂಲ ರೂಪ ಮರಳಿಸೆ
ದೇವಿ ಚರಾಶಕ್ತಿ ಕಾರಣ, ಮಹಾಸ್ಪೋಟದ ಅಚರ ಶಿವ ಶಕ್ತಿಯ ಬಳಸೆ ||
.
೯೯೮. ಶ್ರೀ ಶಿವಾ
ಶ್ರೀ ಪವಿತ್ರ ಲಕ್ಷ್ಮಿ ಬೀಜ, ದೇವಿ ಮಹತ್ತ ಜಗಕೆ ಬಿತ್ತರಿಸೊ ಉದ್ಗಾರ
ಶಿವನೆನೆ ಬಿಡುಗಡೆ, ಶಿವನ ಪರಮಶಕ್ತಿ ಸತಿಯ ರೂಪಲಿ ಸ್ಥಿತ್ಯಂತರ
ಶ್ರೀ ಶಿವಾ ರೂಪ ಚಿತ್ರಿಸಿಕೊಳಬಲ್ಲ ಭಕ್ತ, ತೋಯ್ದು ಪರಮಾನಂದದೆ
ಅತ್ಯುನ್ನತ ಸಾಧನೆ ಹಾದಿ ಮೆಟ್ಟಿಲ ಸುಗಮಗೊಳಿಸುವ ಲಲಿತಾಶ್ರದ್ಧೆ ||
.
ಶಿವ ಅತ್ಯುನ್ನತ ಪರಿಶುದ್ಧತೆ, ಜಗದ ಸಕಲ ಒಳಿತ ಮೊತ್ತವಿಹ ಬ್ರಹ್ಮ
ಮಹತ್ತರ ಜ್ಞಾನಾಧಿಪತಿ ಪವಿತ್ರ, ಸರ್ವನಿಯಂತ್ರಕ, ವೇದರಕ್ಷ ಧರ್ಮ
ಮಂಗಳ ಗುಣಕಾರಕ, ಹಿರಣ್ಯಗರ್ಭದಧಿನಾಯಕ ಪರಮೋನ್ನತ ಘನ
ಅವ್ಯಕ್ತದಿಂದನುಭವ, ಸ್ತ್ರೀ ಕುಂಡಲಿನಿ - ಪುರುಷ ಶಿವಾಧ್ಯಾತ್ಮ ಮಿಲನ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

ದಿಢೀರ್ ಎಂದು ರಚಿಸಿದರೂ ಸಹ ಈ ಕಂತಿನ ಪದ್ಯಗಳು ಸುಂದರವಾಗಿ ಮೂಡಿ ಬಂದಿವೆ ನಾಗೇಶರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ