೨೪. ಶ್ರೀ ಲಲಿತಾ ಸಹಸ್ರನಾಮ -ಬಾಲಾ ಮಂತ್ರದ ವಿವರಣೆ
ಬಾಲಾ ಮಂತ್ರ
ಶ್ರೀ ಬಾಲಾ ತ್ರಿಪುರ ಸುಂದರೀ ಮಂತ್ರವು ಶ್ರೀ ವಿದ್ಯಾ ಪದ್ಧತಿಯಲ್ಲಿ ಅತ್ಯಂತ ಶಕ್ತಿಯುತವಾದ ಮಂತ್ರಗಳಲ್ಲಿ ಒಂದಾಗಿದೆ. ವ್ಯಕ್ತಿಯೊಬ್ಬನು ಶಕ್ತಿ ಅಥವಾ ಶ್ರೀ ವಿದ್ಯಾ ಎಂದೂ ಕರೆಯಲ್ಪಡುವ ಉಪಾಸನೆಯನ್ನು ಕೈಗೊಳ್ಳುವ ಆಸೆಯನ್ನು ವ್ಯಕ್ತಪಡಿಸಿದಾಗ ನಿಯಮದ ಪ್ರಕಾರ ಈ ಮಂತ್ರದ ಉಪದೇಶವು ಒಬ್ಬ ಗುರುವಿನಿಂದಲೇ ಆಗಬೇಕು. ಈ ಮಂತ್ರವನ್ನು ಸಾಮಾನ್ಯವಾಗಿ ಬಾಲಾ ಮಂತ್ರ ಎನ್ನುತ್ತಾರೆ.
ಮೂರು ರೀತಿಯಾದ ಬಾಲಾ ಮಂತ್ರಗಳಿದ್ದು ಅವುಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
೧. ಬಾಲಾ ಮಂತ್ರವು ಮೂರು ಬೀಜಾಕ್ಷರಗಳನ್ನು ಒಳಗೊಂಡಿರುತ್ತದೆ –
ॐ - ऐं - क्लीं – सौः (ಓಂ - ಐಂ - ಕ್ಲೀಂ – ಸೌಃ)
೨. ಬಾಲಾತ್ರಿಪುರಸುಂದರೀ ಮಂತ್ರವು ಆರು ಬೀಜಾಕ್ಷರಗಳನ್ನು ಒಳಗೊಂಡಿದೆ –
ॐ - ऐं - क्लीं - सौः -- सौः - क्लीं – ऐं (ಓಂ - ಐಂ - ಕ್ಲೀಂ - ಸೌಃ -- ಸೌಃ - ಕ್ಲೀಂ – ಐಂ)
೩. ಬಾಲಾ ನವಾಕ್ಷರೀ ಮಂತ್ರ –
ॐ - ऐं - क्लीं - सौः -- सौः - क्लीं - ऐं -- ऐं - क्लीं – सौः
(ಓಂ - ಐಂ - ಕ್ಲೀಂ - ಸೌಃ -- ಸೌಃ - ಕ್ಲೀಂ - ಐಂ -- ಐಂ - ಕ್ಲೀಂ – ಸೌಃ)
ಈ ಮೂರೂ ಮಂತ್ರಗಳಲ್ಲಿ ಅತ್ಯಂತ ಶಕ್ತಿಯುತವಾದದ್ದು ಬಾಲಾ ನವಾಕ್ಷರೀ ಮಂತ್ರ, ಏಕೆಂದರೆ ಅದರ ವಿಲೋಮ ಕ್ರಮವು (ತಿರುಗು ಮುರುಗಾದ ಕ್ರಮವು) ಬಾಲಾ ಮಂತ್ರದಲ್ಲಿಯೇ ಕವಚೀಕರಣವಾಗಿದೆ. ಕವಚೀಕರಣವನ್ನು ಸಂಪುಟೀಕರಣವೆಂದೂ ಅನ್ನುತ್ತಾರೆ; ಇದರಲ್ಲಿ ಮಂತ್ರದ ಬಲ, ತರಂಗ ಮತ್ತು ಶಕ್ತಿಗಳನ್ನು ಎರಡು ಬೀಜಾಕ್ಷರಗಳ ಮಧ್ಯೆ ಬಂಧಿಸಲಾಗಿರುತ್ತದೆ. ಒಂದು ಮಂತ್ರವನ್ನು ವಿಲೋಮವಾಗಿ ಉಚ್ಛರಿಸಿದಾಗ ಆ ಮಂತ್ರದ ಶಕ್ತಿಯು ಹಲವಾರು ಪಟ್ಟು ಹೆಚ್ಚಾಗುತ್ತದೆ. ಒಂದು ಮಂತ್ರವನ್ನು ಸಂಪೂರ್ಣ ಏಕಾಗ್ರತೆಯಿಂದ ಉಚ್ಛರಿಸಿದಾಗ ಅದು ಘನವಾದ (ಸಾಂದ್ರತೆಯಿಂದ ಕೂಡಿದ/ಬಲಯುತವಾದ) ಶಕ್ತಿಯನ್ನು ದೇಹದೊಳಗೆ ಉತ್ಪತ್ತಿ ಮಾಡುತ್ತದೆ ಮತ್ತು ಅದು ದೇಹದೆಲ್ಲಡೆ ಪಸರಿಸುತ್ತದೆ. ಈ ಮಂತ್ರ ಶಕ್ತಿಯ ಸೋರುವಿಕೆಯನ್ನು ತಡೆಯಲು ಮತ್ತು ಈ ವಿಧವಾಗಿ ಉತ್ಪನ್ನವಾದ ಶಕ್ತಿಯನ್ನು ದೇಹದೊಳಗೇ ಹಿಡಿದಿಡಲು ಅದನ್ನು ಎರಡು ಬೀಜಾಕ್ಷರಗಳ ಮಧ್ಯೆ ಬಂಧಿಸಿ ರಕ್ಷಿಸಲಾಗುತ್ತದೆ. ಈ ಬೀಜಾಕ್ಷರಗಳು ಒಂದೇ ಅನುಕ್ರಮದಲ್ಲಿರುತ್ತವೆ; ಬಾಲಾ ನವಾಕ್ಷರೀ ಮಂತ್ರದಲ್ಲಿರುವಂತೆ ಅಥವಾ ಮಂತ್ರದ ಪ್ರಾರಂಭದ ಬೀಜಾಕ್ಷರ(ಗಳು) ಸವ್ಯ ಕ್ರಮದಲ್ಲಿದ್ದು ಅಂತ್ಯದ ಬೀಜಾಕ್ಷರ(ಗಳು) ಅಪಸವ್ಯ ಕ್ರಮದಲ್ಲಿ ಇರಬಹುದು; ಷೋಡಶೀ ಮಂತ್ರದಲ್ಲಿರುವಂತೆ.
ಬಾಲಾ ಮಂತ್ರದಲ್ಲಿ ಮೂರು ಬೀಜಾಕ್ಷರಗಳಿದ್ದು ಅವಕ್ಕೆ ಪ್ರತ್ಯೇಕವಾದ ಹೆಸರುಗಳಿವೆ. ऐं (ಐಂ) ಬೀಜಾಕ್ಷರವನ್ನು ‘ವಾಗ್ಭವಬೀಜ’ ಎಂದು ಕರೆಯಲಾಗಿದೆ. ಈ ಬೀಜಾಕ್ಷರವು ಜ್ಞಾನವನ್ನು ದೋಷಮುಕ್ತವಾಗಿಸುತ್ತದೆ ಅಥವಾ ಸ್ಪಷ್ಟಗೊಳಿಸುತ್ತದೆ/ನಿಖರವಾಗಿಸುತ್ತದೆ. ಎರಡನೆಯದಾದ क्लीं (ಕ್ಲೀಂ) ಬೀಜವನ್ನು ‘ಕಾಮಬೀಜ’ವೆಂದು ಕರೆಯಲಾಗಿದೆ. ಕಾಮವೆಂದರೆ ಸಾಮಾನ್ಯ ಅರ್ಥದಲ್ಲಿ ಆಸೆ ಮತ್ತು ಇಲ್ಲಿ ಆಸೆ ಎಂದರೆ ದೇವಿಯ ಪಾದಚರಣಗಳನ್ನು ಹೊಂದುವುದಾಗಿದೆ. ಮೂರನೆಯ ಬೀಜವು सौः (ಸೌಃ) ಅಗಿದೆ. ಇದನ್ನು ಬೀಜ ಮಂತ್ರ, ಪರಾಬೀಜ ಅಥವಾ ಪಿಂಡನಾಥ ಎಂದು ಕರೆಯುತ್ತಾರೆ. ಈ ಮಂತ್ರವನ್ನು ಭಗವತಿಯ ‘ಪರಾಶಕ್ತಿ ಮಂತ್ರ’ವೆಂದೂ ಕರೆಯುತ್ತಾರೆ. ಈ ಬೀಜವು ಸಾಧಕನಿಗೆ ’ಮಂತ್ರವೀರ್ಯವೆಂದು’ ಕರೆಯಲ್ಪಡುವ ಆತ್ಮ ಸಾಕ್ಷಾತ್ಕಾರ ಹೊಂದುವ ಸಂಪೂರ್ಣ ಸಾಮರ್ಥ್ಯವನ್ನು ಕೊಡುತ್ತದೆ.
ಸೌಃ ಬೀಜವು ಮೂರು ಅಕ್ಷರಗಳನ್ನು ಒಳಗೊಂಡಿದೆ ಸ+ಔ+ : , ಇಲ್ಲಿ ಸ ಅಕ್ಷರವು ಇರುವಿಕೆಯನ್ನು (ಅಸ್ತಿತ್ವವನ್ನು) ಸೂಚಿಸುತ್ತದೆ. ಔ ಅಕ್ಷರವು ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಕಡೆಯದಾದ ಅಕ್ಷರವು ಃ ವಿಸರ್ಗವಾಗಿದ್ದು ಇದು ಔ ಅಕ್ಷರದ ಮೂಲಕ ಪ್ರಪಂಚವನ್ನು ಅಂತರ್ಮುಖವಾಗಿಸುತ್ತದೆ. ತಂತ್ರ ಶಾಸ್ತ್ರದ ದೃಷ್ಟಿಕೋನದಿಂದ ನೋಡಿದಾಗ ಸೌಃ ಅಕ್ಷರವು ನಿಜವಾದ ಸಾಧಕನಲ್ಲಿ ಕುಂಡಲಿನೀ ಶಕ್ತಿಯನ್ನು ಉನ್ನತ ಸ್ಥಾಯಿಗಳಿಗೆ ಕೊಂಡೊಯ್ಯುತ್ತದೆ. ಈ ಮಂತ್ರದ ಸಿದ್ಧಿಯನ್ನು ಒಬ್ಬರು ಹೊಂದಬೇಕಾದರೆ ಅವರು ಅದನ್ನು ಮೂರು ಲಕ್ಷ (೩,೦೦,೦೦೦) ಬಾರಿ ಜಪಿಸಬೇಕು.
ಬಾಲಾ ಮಂತ್ರಕ್ಕೆ ನಾಲ್ಕು ಧ್ಯಾನ ಶ್ಲೋಕಗಳಿದ್ದು ಅವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಂತ್ರ ದೀಕ್ಷೆಯನ್ನು ಕೊಡುವ ಗುರುವು ಅದನ್ನು ನಿರ್ಣಯಿಸುತ್ತಾನೆ ಏಕೆಂದರೆ ಅವನಿಗೆ ಶಿಷ್ಯನ ಸಾಮರ್ಥ್ಯಕ್ಕೆ ಯಾವುದು ಯೋಗ್ಯವಾದುದೆಂದು ತಿಳಿದಿರುತ್ತದೆ. ಪ್ರತಿಯೊಂದು ಮಂತ್ರಗಳಿಗೂ ಶಾಪಗಳಿರುತ್ತವೆ ಮತ್ತು ಅವನ್ನು ಹೋಗಲಾಡಿಸಲು ಅವೆಲ್ಲಕ್ಕೂ ಪ್ರತಿಶಾಪದ ಮಂತ್ರಗಳಿರುತ್ತವೆ. ಈ ವಿಧವಾದ ಶಾಪಗಳನ್ನು ಋಷಿ ಮುನಿಗಳು, ದೇವರುಗಳು, ದೇವಿಯರು, ಮೊದಲಾದವರು ವಿಧಿಸಿರುತ್ತಾರೆ. ಬಾಲಾ ಮಂತ್ರವೂ ದೇವಿಯಿಂದ ಶಪಿಸಲ್ಪಟ್ಟಿದ್ದು ಅದನ್ನು ತ್ರಿಪುರ ಭೈರವಿ ಮಂತ್ರವನ್ನು ೧೦೦ (ನೂರು) ಬಾರಿ ಜಪಿಸುವುದರಿಂದ ವಿಮುಕ್ತಗೊಳಿಸಬಹುದು.
ತ್ರಿಪುರ ಭೈರವಿ ಮಂತ್ರವು ಹೀಗಿದೆ - हसैं हसकरीं हसैं (ಹಸೈಂ ಹಸಕರೀಂ ಹಸೈಂ)
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ BĀLĀ MANTRA - बाला मन्त्र http://www.manblunder.com/2012/04/bala-mantra-bala-mantra.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
>>>ಬಾಲಾ ಮಂತ್ರಕ್ಕೆ ನಾಲ್ಕು
>>>ಬಾಲಾ ಮಂತ್ರಕ್ಕೆ ನಾಲ್ಕು ಧ್ಯಾನ ಶ್ಲೋಕಗಳಿದ್ದು ಅವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಂತ್ರ ದೀಕ್ಷೆಯನ್ನು ಕೊಡುವ ಗುರುವು ಅದನ್ನು ನಿರ್ಣಯಿಸುತ್ತಾನೆ-->ಶ್ರೀಧರ್ಜಿ, ಈಗ ನಮಗೆ ಗುರು ನೀವೇ. ಯಾವ ಧ್ಯಾನ ಶ್ಲೋಕ ಮಾಡಲಿ? ಈಗ ತ್ರಿಪುರಭೈರವಿ ಮಂತ್ರ ಪ್ರಾರಂಭಿಸುವೆನು;>>>ಪ್ರತಿಯೊಂದು ಮಂತ್ರಗಳಿಗೂ ಶಾಪಗಳಿರುತ್ತವೆ ಮತ್ತು ಅವನ್ನು ಹೋಗಲಾಡಿಸಲು ಅವೆಲ್ಲಕ್ಕೂ ಪ್ರತಿಶಾಪದ ಮಂತ್ರಗಳಿರುತ್ತವೆ. --> ಇದು ಅರ್ಥವಾಗಲಿಲ್ಲ. ಮಂತ್ರಗಳಿಗೆ ಯಾಕೆ ಶಾಪವಿರುತ್ತದೆ? >>>ಕವಚೀಕರಣವನ್ನು ಸಂಪುಟೀಕರಣವೆಂದೂ ಅನ್ನುತ್ತಾರೆ--> ಇದರ ಬಗ್ಗೆ ವಿವರಣೆಗೆ ಧನ್ಯವಾದಗಳು. ಮೃತ್ಯುಂಜಯ ಮಂತ್ರಕ್ಕೂ ಹೀಗೆ (http://en.wikipedia.org/wiki/Mahamrityunjaya_Mantra) ಕವಚೀಕರಣ(ಓಂ ಹ್ರೌಂ ಜೂಂ ಸಃ.........ಸಃ ಜೂಂ ಹ್ರೌಂ ಓಂ) ಇದೆ. ನಾನು ಅದು ಕೊಂಡಿಯಲ್ಲಿ ಕೊಟ್ಟಂತೆ ತಾಂತ್ರಿಕ ವರ್ಶನ್ ಅಂದುಕೊಂಡಿದ್ದೆ.
In reply to >>>ಬಾಲಾ ಮಂತ್ರಕ್ಕೆ ನಾಲ್ಕು by ಗಣೇಶ
ಗಣೇಶರೆ ಆಶ್ಚರ್ಯ , ಭ್ರಹ್ಮಾಂಡ
ಗಣೇಶರೆ ಆಶ್ಚರ್ಯ , ಭ್ರಹ್ಮಾಂಡ ಗುರುಗಳಿಗೆ ಮತ್ತೊಬ್ಬ ಗುರುಗಳು, ಸಂತಸ , ಆದರೆ ಯಾವುದೆ ಮೂಲಮಂತ್ರಗಳು ಗುರುಮುಖೇನ ಮಾತ್ರವೆ ಉಪದೇಶವಾಗಬೇಕೆಂಬ ನಿಯಮವಿದೆ, ಕಡೆಗೆ ಗಾಯತ್ರಿಮಂತ್ರ ಸಹ ತಂದೆ ಅಥವ ಗುರುಮೂಲಕವೆ ಉಪನಯನದದಲ್ಲಿ ಕೊಡಲ್ಪಡುತ್ತದೆ. ಆದರು ಚಿಂತೆಯಿಲ್ಲ ಆ ದೇವಿಯನ್ನೆ ಗುರು ಎಂದು ಸ್ವೀಕರಿಸಿ, ನಿಮ್ಮ ಎಕ್ಲಸ ಪ್ರಾರಂಬಿಸಿ, ಶುಭಂ
In reply to ಗಣೇಶರೆ ಆಶ್ಚರ್ಯ , ಭ್ರಹ್ಮಾಂಡ by partha1059
ಎಕ್ಲಸ = ಅಭ್ಯಾಸ ಎಂದು
ಎಕ್ಲಸ = ಅಭ್ಯಾಸ ಎಂದು ಓದಿಕೊಳ್ಳಿ,
ಅದು ಹೇಗಾಯಿತು ನನಗೆ ತಿಳಿಯುತ್ತಿಲ್ಲ , ಈ ರೀತಿ ಎಲ್ಲ ಟೈಪ್ ಆಗುತ್ತದ ???
In reply to ಎಕ್ಲಸ = ಅಭ್ಯಾಸ ಎಂದು by partha1059
ಗಣೇಶ್. ಜಿ; ಅಭ್ಯಾಸ ಮಾಡದಿದ್ದರೂ
ಗಣೇಶ್. ಜಿ; ಅಭ್ಯಾಸ ಮಾಡದಿದ್ದರೂ "ಏ" ಕ್ಲಾಸ್ ಅಲ್ಲವಾ ಅದಕ್ಕೇ ಹಾಗೆ ಟೈಪ್ ಆಗಿದೆ ಬಿಡಿ ಪಾರ್ಥ ಸರ್!
In reply to ಗಣೇಶರೆ ಆಶ್ಚರ್ಯ , ಭ್ರಹ್ಮಾಂಡ by partha1059
ಪಾರ್ಥ ಸರ್,
ಪಾರ್ಥ ಸರ್,
ನೀವು ತಮಾಷೆಗಾಗಿ ಬ್ರಹ್ಮಾಂಡ ಗುರುಗಳಿಗೆ ಮತ್ತೊಬ್ಬ ಗುರುವೇ ಎಂದು ಹೇಳಿ ದೇವಿಯನ್ನೇ ಗುರುವಾಗಿ ಸ್ವೀಕರಿಸಿ ಎಂದು ಬಹಳ ಸೂಕ್ತವಾಗಿ ಹೇಳಿದ್ದೀರ. ಗುರುವಿಲ್ಲದವನು ಆದಿ ಗುರುವಾದ ಶಂಕರನನ್ನೇ ಗುರುವೆಂದು ಸ್ವೀಕರಿಸಿ ಮಂತ್ರೋಪದೇಶವನ್ನು ಹೊಂದಬಹುದು ಮತ್ತು ಸ್ವಯಂ ಅಭ್ಯಾಸದಲ್ಲಿ ನಿರತವಾಗಬಹುದು ಎಂದು ವಿ. ರವಿಯವರ ಲೇಖನವೊಂದರಲ್ಲಿ ಓದಿದ ನೆನಪು. ನನ್ನ ಪರವಾಗಿ ಗಣೇಶರಿಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು.
In reply to ಗಣೇಶರೆ ಆಶ್ಚರ್ಯ , ಭ್ರಹ್ಮಾಂಡ by partha1059
>>>ಆಶ್ಚರ್ಯ , ಭ್ರಹ್ಮಾಂಡ
>>>ಆಶ್ಚರ್ಯ , ಭ್ರಹ್ಮಾಂಡ ಗುರುಗಳಿಗೆ ಮತ್ತೊಬ್ಬ ಗುರುಗಳು,:) --> ಪಾರ್ಥರೆ, ಏನ್ ಹೇಳಲಿ....ಗುರುವಿನ ಪಟ್ಟ ನಿಭಾಯಿಸೋದು ಬಹಳ ಕಷ್ಟ. ಬೆಂಬಲಿಕ್ಕಿದ್ದ ಕವಿನಾಗರಾಜರು ಕೈಬಿಟ್ರು:), ನೀವು ಮೊದಲೇ"ನಾನಿಲ್ಲ" ಅಂದಿದ್ದೀರಿ, ಪಟ್ಟ ಶಿಷ್ಯರಂತಿದ್ದ ಚಿಕ್ಕು, ಜಯಂತ್, ಸತೀಶ್ ಕಾಣಿಸುತ್ತಲೇ ಇಲ್ಲ :( ರಾಮೋಜಿ ಎಲ್ಲಿ? ಶ್ರೀಕರ್, ಸಪ್ತಗಿರಿವಾಸಿ ಆಗೊಮ್ಮೆ ಈಗೊಮ್ಮೆ ಅಟೆಂಡೆನ್ಸ್ ಹಾಕಿ ಹೋಗುತ್ತಿದ್ದಾರೆ. ಉಳಿದ ಭಕ್ತರನ್ನು ಬಿಗ್ ಬಾಸ್ ಎಳಕೊಂಡರು ಕಾಣುತ್ತದೆ. ಶಿಷ್ಯರೇ ಇಲ್ಲದ ಮೇಲೆ ಎಲ್ಲಿಯ ಗುರು? :( ಒಂದು ಕಾಲದಲ್ಲಿ ಭಂಡ್ರಾಯ್ಡ್ ಫೋನಿಂದ ವಿಶ್ವದಾಚೆಗೂ ಸಂಪರ್ಕವಿಟ್ಟುಕೊಂಡಿದ್ದ ನಮಗೆ ಈ ಗತಿ ಬರಬಾರದಿತ್ತು. ಕಣ್ಣೀರು ಒರೆಸಿಕೊಳ್ಳಿ ಪಾರ್ಥರೆ, ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. - ನಿವೃತ್ತ ಅಂ.ಭಂ.ಸ್ವಾಮಿ...
In reply to >>>ಬಾಲಾ ಮಂತ್ರಕ್ಕೆ ನಾಲ್ಕು by ಗಣೇಶ
ಗಣೇಶ್..ಜಿ,
ಗಣೇಶ್..ಜಿ,
ನನ್ನನ್ನು ನೀವು ಗುರುವೆಂದು ಭಾವಿಸಿದರೆ ಅದು ಒಬ್ಬ ಕುರುಡ ಮತ್ತೊಬ್ಬ ಕುರುಡನಿಗೆ ಕಾಡಿನಲ್ಲಿ ದಾರಿ ತೋರಿಸಿದಂತಾಗುತ್ತದೆಯಷ್ಟೇ :))
ಸಾಧ್ಯವಾದರೆ ಬಾಲಾಮಂತ್ರಕ್ಕಿರುವ ಧ್ಯಾನ ಶ್ಲೋಕಗಳನ್ನು ಶ್ರೀಯುತ ರವಿಯವರಿಂದ ಕೇಳಿ ಪಡೆಯುತ್ತೇನೆ, ಒಂದು ವೇಳೆ ಅದನ್ನು ಬಯಲು ಮಾಡಬಹುದು ಎಂದರೆ!
ಗಾಯತ್ರೀ ಮಂತ್ರಕ್ಕೂ ನೂರಾರು ಶಾಪಗಳಿವೆಯಂತೆ ಅದಕ್ಕೆ ಸ್ವಯಂ ಅದರ ದ್ರಷ್ಟಾರರಾದ ಮಹರ್ಷಿ ವಿಶ್ವಾಮಿತ್ರರೇ ಅನೇಕ ಶಾಪಗಳನ್ನು ಕೊಟ್ಟಿದ್ದಾರಂತೆ. ಶಾಪಕ್ಕೆ ಕಾರಣವೇನೆಂದರೆ ಅದನ್ನು ಯೋಗ್ಯತೆಯಿಲ್ಲದವರು ಪಠಿಸಿದರೆ ಅದು ಫಲಿತವನ್ನು ಕೊಡಬಾರದು ಎನ್ನುವ ಉದ್ದೇಶದಿಂದ ಕೊಡಲಾಗಿದೆ ಎಂದು ಶ್ರೀಯುತ ರವಿಯವರು ಬರೆದ ಇದೇ ಲಲಿತಾ ಸಹಸ್ರನಾಮದ ವ್ಯಾಖ್ಯಾನದಲ್ಲಿ ಮತ್ತೊಂದು ಕಡೆಯಲ್ಲಿ ಓದಿದ ನೆನಪು. ಯಾವಾಗ ಇದು ಗುರುಮುಖೇನವೇ ಆಗುತ್ತದೆಯೋ ಆಗ ಅವನು ಯೋಗ್ಯನಾದವನಿಗೆ ಅದನ್ನು ವರ್ಗಾಯಿಸುತ್ತಾನಾದ್ದರಿಂದ ಮಂತ್ರಸಿದ್ಧಿಯ ಸದ್ಬಳಕೆಯಾಗುತ್ತದೆ. ಇರಲಿ ಬಿಡಿ, ನೀವು ಕೊಟ್ಟಿರುವ ಮಹಾಮೃತ್ಯುಂಜಯ ಮಂತ್ರದ ಕೊಂಡಿಯನ್ನು ನೋಡಿದೆ. ನೀವು ಹೇಳಿದ ಹಾಗೆ ಅದು ಮಂತ್ರದ ತಾಂತ್ರಿಕ ಪ್ರಕಾರವಾಗಿರದೆ ಅದು ಶಾಪ ವಿಮೋಚನಾ ಮಂತ್ರ ಅಥವಾ ಸಂಪುಟೀಕರಣವನ್ನು ಒಳಗೊಂಡಿದೆ. ಎರಡನೆಯದೇ ಸರಿ ಏಕೆಂದರೆ ಮೊದಲೆರಡು ಸಾಲಿನ ಅಕ್ಷರಗಳು ಕೊನೆಯ ಎರಡು ಸಾಲಿನ ಅಕ್ಷರಗಳು ಕನ್ನಡಿಯ ಪ್ರತಿಬಿಂಬದಂತಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.