೨೫. ಶ್ರೀ ಲಲಿತಾ ಸಹಸ್ರನಾಮ ೫೯ರಿಂದ ೬೩ನೇ ನಾಮಗಳ ವಿವರಣೆ

೨೫. ಶ್ರೀ ಲಲಿತಾ ಸಹಸ್ರನಾಮ ೫೯ರಿಂದ ೬೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೫೯ರಿಂದ ೬೩

Mahāpadmāṭavī-saṃsthā महापद्माटवी-संस्था (59)

೫೯. ಮಹಾಪದ್ಮಾಟವೀ-ಸಂಸ್ಥಾ

        ದೇವಿಯು ಕಮಲ ಪುಷ್ಪಗಳಿಂದ ತುಂಬಿದ ಮಹಾ ಅಡವಿಯಲ್ಲಿ ವಾಸವಾಗಿದ್ದಾಳೆ. ಕಮಲದ ಹೂವುಗಳು ನೀರಿನಲ್ಲಿ ಮಾತ್ರವೇ ಬೆಳೆಯುತ್ತವೆ. ಪ್ರಕೃತಿಯ ಅಧಿಕವಾಗಿ ಕೊಡುವ ಗುಣವನ್ನು ಇಲ್ಲಿ ಪ್ರಸ್ತಾವಿಸಲಾಗಿದೆ (ಪ್ರಕೃತಿ ಏನು ಕೊಟ್ಟರೂ ಅದನ್ನು ಬಹಳ ಹೆಚ್ಚಿನ ಪ್ರಮಾಣದಲ್ಲಿ ಕೊಡುತ್ತದೆ). ಎತ್ತರದ ಶಿಖರಗಳುಳ್ಳ ಬೃಹತ್ ಪರ್ವತಗಳ ಬಗ್ಗೆ ಈ ಮೊದಲು ಉಲ್ಲೇಖಿಸಲಾಗಿತ್ತು. ಈಗ ಪರೋಕ್ಷವಾಗಿ ನೀರಿನ ಮೂಲಗಳನ್ನು ಉಲ್ಲೇಖಿಸಲಾಗಿದೆ. ಮಹಾಪದ್ಮವೆಂದರೆ ಒಂದು ವಿಧವಾದ ಆನೆ ಎನ್ನುವ ಅರ್ಥವೂ ಇದೆ.

         ಈ ನಾಮವು ಶಿರದಲ್ಲಿರುವ ಚಕ್ರ (ಕಿರೀಟ ಚಕ್ರ) ಅಥವಾ ಸಹಸ್ರಾರದ ಬಗ್ಗೆ ಮಾತನಾಡುತ್ತದೆ; ಈ ಚಕ್ರವು ನಮ್ಮ ಶರೀರದಲ್ಲಿರುವ ಆರು ಚಕ್ರಗಳಿಗಿಂತ ಉನ್ನತವಾದ ಸ್ಥಾನದಲ್ಲಿರುತ್ತದೆ. ಸಹಸ್ರಾರದ ಮಧ್ಯದಲ್ಲಿರುವ ಅತಿಸೂಕ್ಷ್ಮವಾದ ತೂತನ್ನು ‘ಬ್ರಹ್ಮರಂಧ್ರ’ ಅಥವಾ ‘ಪದ್ಮಾಟವಿ’ ಎಂದು ಕರೆಯುತ್ತಾರೆ. ದೈವೀ ಶಕ್ತಿಯು ಮನುಷ್ಯನ ದೇಹವನ್ನು ಈ ರಂಧ್ರದ ಮೂಲಕವಷ್ಟೇ ಒಳಸೇರುತ್ತದೆ. ಮಾನವನು ಬ್ರಹ್ಮಾಂಡದ ಉನ್ನತ ಸ್ತರದ ಶಕ್ತಿಗಳೊಂದಿಗೆ ಸಂಭಂದವನ್ನು ಈ ಬ್ರಹ್ಮರಂಧ್ರದ ಮೂಲಕವೇ ಹೊಂದುತ್ತಾನೆ (ಸ್ಥಾಪಿಸಿಕೊಳ್ಳುತ್ತಾನೆ). ಈ ರಂಧ್ರವು ಎಲ್ಲಾ ಆರು ಚಕ್ರಗಳೊಂದಿಗೆ ಸಂಭಂದವನ್ನು ಹೊಂದಿದೆ. ಶ್ರೀ ಲಲಿತೆಯು ತನ್ನ ಸಂಗಾತಿಯಾದ ಶಿವನೊಡನೆ ಈ ಸಹಸ್ರಾರದಲ್ಲಿ ಒಂದುಗೂಡುತ್ತಾಳೆ. ಈ ನಾಮವು ಸಹಸ್ರದಳ ಪದ್ಮವಾದ ಸಹಸ್ರಾರದಲ್ಲಿರುವ ಅವಳ ವಾಸಸ್ಥಾನದ ಕುರಿತಾಗಿ ಹೇಳುತ್ತದೆ.

Kadaṃbavana-vāsinī कदंबवन-वासिनी (60)

೬೦. ಕದಂಬವನ-ವಾಸಿನೀ

       ದೇವಿಯು ದಿವ್ಯ ಸುಗಂಧವನ್ನು ಬೀರುವ ಕದಂಬ ವೃಕ್ಷಗಳ ಮಧ್ಯದಲ್ಲಿ ವಾಸಿಸುತ್ತಾಳೆ. ಅವಳ ಚಿಂತಾಮಣಿ ಗೃಹವು ಕದಂಬ ವೃಕ್ಷಗಳ ವನದಿಂದಾವೃತವಾಗಿದೆ. ಇಲ್ಲಿ ಪ್ರಕೃತಿಯ ಹಚ್ಚಹಸುರನ್ನು ಕುರಿತಾದ ಪ್ರಸ್ತಾವನೆಯಿದೆ. ಈ ರೀತಿಯಾದ ವಿವರಣೆಗಳಿಂದ ವಾಗ್ದೇವಿಗಳು ಅವಳ ಪೃಥ್ವೀ ತತ್ವವಾದ ಪ್ರಕೃತಿಯ ಕುರಿತಾಗಿ ವಿವರಿಸುತ್ತಾರೆ. ಶ್ರೀ ಲಲಿತೆಯು ಭೂಮಿ ತಾಯಿಯೆಂದೂ ಕರೆಯಲ್ಪಡುತ್ತಾಳೆ. ಅವಳ ಚಿಂತಾಮಣಿ ಗೃಹದ ಸುತ್ತಲೂ ೨೫ ಗೋಡೆಗಳಿವೆ; ಪ್ರತಿಯೊಂದು ಗೋಡೆಯು ೨೫ತತ್ವಗಳನ್ನು ಸಂಕೇತಿಸುತ್ತವೆ. ಈ ಕದಂಬವನವು ಬಂಗಾರದ ಗೋಡೆಯಾದ ಎಂಟನೆಯ ಗೋಡೆ ಮತ್ತು ಬೆಳ್ಳಿಯದಾದ ಏಳನೆಯ ಗೋಡೆಯ ಮಧ್ಯದಲ್ಲಿದೆ.

       ಸ್ವಾರಸ್ಯಕರ ಸಂಗತಿಯೇನೆಂದರೆ ಶ್ರೀ ಚಕ್ರದ ಎಲ್ಲಾ ದೇವಿಯರು ಒಬ್ಬರನ್ನೊಬ್ಬರು ಈ ಏಳನೆಯ ಮತ್ತು ಎಂಟನೆಯ ಗೋಡೆಗಳ ಮಧ್ಯದಲ್ಲಿ ಸಂಧಿಸುತ್ತಾರೆ. ವರ್ಷಕ್ಕೆ ಹನ್ನೆರಡು ತಿಂಗಳುಗಳಿರುವುದು ಎಲ್ಲರಿಗೂ ತಿಳಿದ ವಿಷಯ.  ಅವುಗಳನ್ನು ಆರು ಋತುಗಳಾಗಿ ವಿಂಗಡಿಸಿಲಾಗಿದೆ ಮತ್ತು ಒಂದೊಂದು ಋತುವು ಎರಡು ತಿಂಗಳುಗಳಿಂದ ಕೂಡಿರುತ್ತದೆ ಮತ್ತು ಪ್ರತಿಯೊಂದು ಋತುವನ್ನೂ ಒಬ್ಬೊಬ್ಬ ದೇವತೆಯು ಆಳುತ್ತಾನೆ.

       ಈ ಎಲ್ಲಾ ಋತುಗಳ ದೇವತೆಗಳು ತಮ್ಮ ಹೆಂಡತಿಯರೊಂದಿಗೆ ’ಶ್ರೀಪುರ’ದ ಮೂರನೇ ಮತ್ತು ಎಂಟನೆಯ ಗೋಡೆಯ ಮಧ್ಯದಲ್ಲಿರುವ ತಮ್ಮ ತಮ್ಮ ಅರಮನೆಗಳಲ್ಲಿ ವಾಸಿಸುತ್ತಾರೆ.

        ಬಂಗಾರದ ಮತ್ತು ಬೆಳ್ಳಿಯ ಗೋಡೆಗಳ ಮಧ್ಯೆ ಶ್ಯಾಮಲಾ ದೇವಿಯೆಂದು ಕರೆಯಲ್ಪಡುವ ಮಂತ್ರಿಣೀ ದೇವಿಯ ಅರಮನೆಯಿದ್ದು ಅದರಲ್ಲಿ ಆಕೆಯು ನೆಲೆಸಿರುತ್ತಾಳೆ. ಆಕೆಯು ಬ್ರಹ್ಮವಿದ್ಯೆಯ ತೊಂಭತ್ತು ಬೀಜಾಕ್ಷರಗಳಿಗೆ ಅಧಿಕಾರಿಣಿಯಾಗಿದ್ದಾಳೆ. ಮಂತ್ರಿಣೀ ದೇವಿಯ ವಿವರಗಳಿಗೆ ೧೦ನೇ ನಾಮವನ್ನೂ ನೋಡಿ.

        ವಾಗ್ದೇವಿಗಳು ನಮಗೆ ಶ್ರೀ ಲಲಿತೆಯು ಪ್ರತಿಯೊಂದು ಸಣ್ಣಪುಟ್ಟ ವಿಷಯಗಳನ್ನೂ ಹೇಗೆ ನಿಯಂತ್ರಿಸುತ್ತಾಳೆಂದು ತಿಳಿಸುತ್ತಾರೆ. ಸಾಹಿತ್ಯಕ ದೃಷ್ಟಿಯಿಂದ ಕೆಲವೊಂದು ನಾಮಗಳು ಮಹತ್ವವಿಲ್ಲದಂತೆ ಕಾಣಬಹುದು. ಆದರೆ ಸಹಸ್ರನಾಮದ ಪ್ರತಿಯೊಂದು ನಾಮದ ಹಿನ್ನಲೆಯಲ್ಲಿ ರಹಸ್ಯವಾದ ಮತ್ತು ಅಂತರ್ಗತವಾದ ಅರ್ಥ ಮತ್ತು ಒಂದು ಬೀಜಾಕ್ಷರವಿದೆ. ಸಾಮಾನ್ಯವಾಗಿ ಎಲ್ಲರಿಗೂ ಈ ಬೀಜಾಕ್ಷರಗಳ ಗೂಡಾರ್ಥಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಈ ಎಲ್ಲಾ ನಾಮಗಳ ಗೂಡಾರ್ಥವನ್ನು ತಿಳಿದ ಜನರು ಬಹಳ ಅಪರೂಪವಾಗಿ ಸಿಗುತ್ತಾರೆ.

Sudhā-sāgara-madhyasthā सुधा-सागर-मध्यस्था (61)

೬೧. ಸುಧಾ-ಸಾಗರ-ಮಧ್ಯಸ್ಥಾ

        ದೇವಿಯು ಅಮೃತಸಾಗರದ ಮಧ್ಯದಲ್ಲಿ ವಾಸಿಸುತ್ತಾಳೆ. ಸುಧೆ ಎಂದರೆ ಅಮೃತ, ಸಾಗರವೆಂದರೆ ಮಹಾಸಮುದ್ರ ಮತ್ತು ಮಧ್ಯಸ್ಥವೆಂದರೆ ನಡುವೆ. ಸುಧಾ ಸಾಗರವೆನ್ನುವುದು ಸಹಸ್ರಾರದಲ್ಲಿ ಒಂದು ಜಾಗವಾಗಿದೆ. ಸಹಸ್ರಾರಕ್ಕಿಂತ ಮುಂಚೆ, ಸೋಮಚಕ್ರವೆಂಬ ಜಾಗವೊಂದಿದೆ. ಯಾವಾಗ ಕುಂಡಲಿನೀ ಶಕ್ತಿಯು ಸೋಮಚಕ್ರವನ್ನು ಸೇರುತ್ತದೆಯೋ, ಆಗ ವಿಪರೀತ ಉಷ್ಣದಿಂದಾಗಿ, ಒಂದು ವಿಧವಾದ ದ್ರವವು ಕಂಠದ ಮೂಲಕ ಕೆಳಗೆ ಹರಿಯುತ್ತದೆ (ನಾಮ ೧೦೬). ಈ ದ್ರವವನ್ನು ಕೂಡಾ ಸುಧಾ ಎನ್ನುತ್ತಾರೆ ಏಕೆಂದರೆ ಇದರ ಸಾಂದ್ರತೆ ಮತ್ತು ರುಚಿಯು ಅಮೃತದಂತಿರುತ್ತದೆ. ಈ ದ್ರವವನ್ನು ಅಮೃತವರ್ಷಿಣೀ ಎಂದೂ ಕರೆಯುತ್ತಾರೆ. ಅಮೃತವನ್ನು ‘ದೈವೀ ಮಕರಂದ’ವೆಂದೂ ಕರೆಯಬಹುದು. ದೇವಿಯು ಸುಧಾ ಸಾಗರದ ಮಧ್ಯದಲ್ಲಿರುವ ಸೋಮಚಕ್ರದ ಮಧ್ಯದಲ್ಲಿ ಉಪಸ್ಥಿತಳಿರುವುದರಿಂದ ಈ ಮಕರಂದವು ಮಾನವ ದೇಹದ ಎಲ್ಲಾ ೭೨,೦೦೦ನಾಡಿಗಳಲ್ಲಿ ಹರಿಯುವಂತೆ ಮಾಡುತ್ತಾಳೆ. ಈ ಮಕರಂದವು ನಮ್ಮ ದೇಹದಲ್ಲಿ ಹರಿದರೆ ಅದು ಈ ಭೌತಿಕ ಶರೀರಕ್ಕೆ ಸಾವನ್ನುಂಟು ಮಾಡುವುದಿಲ್ಲವಂತೆ. ಆದರೆ ಇದು ಕುಂಡಲಿನೀ ಧ್ಯಾನದ ಉನ್ನತ ಹಂತಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿಯೇ ಮಹಾನ್ ಋಷಿಗಳ ಆಯುಷ್ಯವು ಅತೀ ಹೆಚ್ಚಿನದಾಗಿರುತ್ತದೆ.

        ಸುಧಾ ಸಿಂಧುವೆಂದರೆ ಶ್ರೀ ಚಕ್ರದ ಮಧ್ಯದಲ್ಲಿರುವ ಬಿಂದು. ಇದನ್ನು ಸೌಂದರ್ಯಲಹರಿಯ ಎಂಟನೇ ಶ್ಲೋಕದಲ್ಲಿಯೂ ಉಲ್ಲೇಖಿಸಲಾಗಿದೆ. ಈ ನಾಮಕ್ಕೆ ಅತ್ಯಂತ ಮಹತ್ವವಿದೆ ಏಕೆಂದರೆ ಇದು ಅಮೃತವರ್ಷಿಣೀ ಮತ್ತು ಬಿಂದುವನ್ನು ಕುರಿತಾಗಿ ಹೇಳುತ್ತದೆಯಾದ್ದರಿಂದ.

Kāmākṣī कामाक्षी (62)

೬೨. ಕಾಮಾಕ್ಷಿ

        ದೇವಿಗೆ ಸುಂದರವಾದ ಕಣ್ಣುಗಳಿವೆ. ಆ ಕಣ್ಣುಗಳಲ್ಲಿ ಕೃಪೆ, ಕರುಣೆ ಮತ್ತು ದಯೆಗಳು ತುಂಬಿರುತ್ತವೆ. ಆದ್ದರಿಂದಲೇ ಅವಳ ಕಣ್ಣುಗಳು ಅಷ್ಟು ಸುಂದರವಾಗಿವೆ. ಅವಳು ತನ್ನ ಭಕ್ತರ ಎಲ್ಲಾ ಕೋರಿಕೆಗಳನ್ನು ಕೇವಲ ನೋಟ ಮಾತ್ರದಿಂದಲೇ ಈಡೇರಿಸುತ್ತಾಳೆ. ಸಾಮಾನ್ಯವಾಗಿ ನಮ್ಮ ಆಲೋಚನೆಗಳು ನಮ್ಮ ಕಣ್ಣಿನ ಮೂಲಕ ಪ್ರತಿಫಲಿಸುತ್ತವೆ. ಕಾಮಾ ಎನ್ನುವುದು ಕಾ+ಮಾ ಎನ್ನುವ ಎರಡು ಬೀಜಾಕ್ಷರಗಳ ಸಂಧಿಯಿಂದ ಉಂಟಾಗಿದೆ. ‘ಕಾ’ ಎಂದರೆ ಸರಸ್ವತೀ ಮತ್ತು ‘ಮಾ’ ಎಂದರೆ ಲಕ್ಷ್ಮೀ. ಈ ಎರಡೂ ದೇವಿಯರು ಶ್ರೀ ಲಲಿತೆಯ ಎರಡು ಕಣ್ಣುಗಳೆಂದು ಹೇಳಲಾಗಿದೆ. ಕಾಮ ಎಂದರೆ ಶಿವನೆನ್ನುವ ಅರ್ಥವೂ ಇದೆ; ಇದರರ್ಥ ದೇವಿಯು ಶಿವನ ಕಣ್ಣಾಗಿದ್ದಾಳೆಂದು ಈ ನಾಮವು ತಿಳಿಸುತ್ತದೆ.

Kāmadāyinī कामदायिनी (63)

೬೩.ಕಾಮದಾಯಿನೀ

       ದೇವಿಯು ಕೋರಿದ್ದೆಲ್ಲವನ್ನೂ ಈಡೇರಿಸುತ್ತಾಳೆ. ಈ ನಾಮಕ್ಕೆ ಹಲವಾರು ರೀತಿಯ ವ್ಯಾಖ್ಯೆಗಳಿವೆ. ಕಾಮ ಎಂದರೆ ಶಿವನ ರೂಪವಾದ ಕಾಮೇಶ್ವರ. ದಾಯಿನಿ ಎಂದರೆ ಪ್ರಸಾದಿಸುವವಳು (ಕೊಡುವವಳು). ಈ ಮುಂಚೆ ತಿಳಿಸಿದಂತೆ ಶಕ್ತಿ ಮಾತ್ರವೇ ನಮ್ಮನ್ನು ಶಿವನಲ್ಲಿಗೆ ಕೊಂಡೊಯ್ಯಬಲ್ಲಳು ಏಕೆಂದರೆ ಅವನನ್ನು ನಾವು ನೇರವಾಗಿ ಸಂಪರ್ಕಿಸಲಾಗದು. ದೇವಿಯು ತನ್ನ ಭಕ್ತರನ್ನು ಪರಮ ಪ್ರಕಾಶ ರೂಪವಾದ ಮತ್ತು ನಿರ್ಗುಣ ಬ್ರಹ್ಮವಾದ ಶಿವನಲ್ಲಿಗೆ ಕೊಂಡೊಯ್ಯುತ್ತಾಳೆ.  ದೇವಿಯು ಶಿವನ ಸುತ್ತಲಿರುವ ಪರದೆಯಂತಿದ್ದು, ಈ ಪರದೆಯನ್ನು ಸರಿಸದ ಹೊರತು ನಮಗೆ ಶಿವನ ಸಾಕ್ಷಾತ್ಕಾರವಾಗದು. ಅವಳು ಇಚ್ಛಿಸಿದರಷ್ಟೇ ಈ ಪರದೆಯನ್ನು ತೆಗೆಯಲು ಸಾಧ್ಯ.

       ಸೃಷ್ಟಿಕರ್ತನಾದ ಬ್ರಹ್ಮನು ಅವಳ ಸರ್ವಶಕ್ತ ಗುಣಗಳನ್ನು ನೋಡಿ ‘ಕಾಮಾಕ್ಷಿ’ ಮತ್ತು ‘ಕಾಮೇಶ್ವರೀ’ ಎನ್ನುವ ಎರಡು ಬಿರುದುಗಳನ್ನು ಕೊಟ್ಟಿದ್ದಾನೆ. ಕೇವಲ ತನ್ನ ನೋಟ ಮಾತ್ರದಿಂದಲೇ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಬಲ್ಲ ಅವಳ ಸಾಮರ್ಥ್ಯಕ್ಕೆ ಬೆರಗಾಗಿ ಬ್ರಹ್ಮನು ಅವಳಿಗೆ ಈ ಬಿರುದುಗಳನ್ನು ಪ್ರದಾನ ಮಾಡಿದ್ದಾನೆ. ಈ ವಿಶ್ಲೇಷಣೆಯು ಅವಳ ವಿಮರ್ಶ ರೂಪವನ್ನು ಸಂಕೇತಿಸುತ್ತದೆ. ದಾಯಿನಿ ಎಂದರೆ ವಂಶಪಾರಂಪರ್ಯವಾಗಿ ಹೊಂದಿರುವುದು ಎಂದೂ ಅರ್ಥ. ಅವಳು ಶಿವನನ್ನು ವಂಶಪಾರಂಪರ್ಯವಾಗಿ ಹೊಂದಿದ್ದಾಳೆ ಎಂದರೆ ಶಿವನು ಅವಳಿಗೆ ಸೇರಿದವನಾಗಿದ್ದಾನೆ ಅಥವಾ ಶಿವನು ಅವಳ ಹಂಬಲವಾಗಿದ್ದಾನೆ. 

        ೫೯ನೇ ನಾಮವು ರಹಸ್ಯವಾಗಿ ವಾರಾಹಿ ದೇವಿಯನ್ನು ಉಲ್ಲೇಖಿಸುತ್ತದೆ, ೬೦ನೇ ನಾಮವು ಶ್ಯಾಮಲಾ ದೇವಿಯನ್ನು ಕುರಿತಾಗಿ ಹೇಳಿದರೆ, ೬೧ ಮತ್ತು ೬೨ನೇ ನಾಮಗಳು ಕಾಮಾಕ್ಷೀ ದೇವಿಯನ್ನು ಹೆಸರಿಸುತ್ತದೆ ಮತ್ತು ೬೩ನೇ ನಾಮವು ಮಹಾ ತ್ರಿಪುರ ಸುಂದರೀ ದೇವಿಯನ್ನು (ನಾಮ ೨೩೪ರಲ್ಲಿ ಉಲ್ಲೇಖಿಸಲಾಗಿರುವ ಶಕ್ತಿಯ ಇನ್ನೊಂದು ರೂಪ) ಕುರಿತಾಗಿ ಹೇಳುತ್ತದೆ. ಈ ಎಲ್ಲಾ ಉಲ್ಲೇಖಗಳು ಸೂಕ್ಷ್ಮಾತಿಸೂಕ್ಷ್ಮವಾಗಿವೆ. ಆಟವಿಕ ಎಂದರೆ ಮಹಾಪದ್ಮ ಎಂದು ಕರೆಯಲ್ಪಡುವ ಉನ್ನತ ಜಾತಿಯ ಆನೆಗಳು ವಾಸಿಸುವ ಅಡವಿಯಾಗಿದೆ. ವಾರಾಹೀ ದೇವಿಯು ಇಲ್ಲಿ ವಾಸಿಸುತ್ತಾಳಾದ್ದರಿಂದ ೫೯ನೇ ನಾಮವು ಪರೋಕ್ಷವಾಗಿ ಈ ದೇವಿಯನ್ನು ಉಲ್ಲೇಖಿಸುತ್ತದೆ. ಮಧುರೆಯನ್ನು ಕದಂಬ ವನವೆಂದೂ ಕರೆಯಲಾಗುತ್ತದೆ. ಇಲ್ಲಿನ ಸ್ಥಾನ ದೇವತೆಯಾದ ಮೀನಾಕ್ಷೀ ದೇವಿಯು ಮಂತ್ರಿಣೀ ದೇವಿ ಎಂದು ಕರೆಯಲ್ಪಡುವ ಶ್ಯಾಮಲಾ ದೇವಿಯ ಒಂದು ಅವತಾರವಾಗಿದ್ದಾಳೆ. ಆದ್ದರಿಂದ ೬೦ನೇ ನಾಮವಾದ ಕದಂಬವನವಾಸಿನೀ ಶ್ಯಾಮಲಾ ದೇವಿಯನ್ನು ಕುರಿತು ಹೇಳುತ್ತದೆ. ಕಾಂಚೀಪುರ ಅಥವಾ ಕಂಚಿಯಲ್ಲಿನ ಸ್ಥಾನ ದೇವತೆಯು ಕಾಮಾಕ್ಷೀ ದೇವಿಯಾಗಿದ್ದಾಳೆ ಮತ್ತು ಕಾಂಚೀಪುರವನ್ನು ಸುಧಾ-ಸಾಗರವೆಂದು ಕರೆಯಲಾಗುತ್ತದೆ. ಕಾಮಾಕ್ಷೀ ದೇವಿಯ ಗುಡಿಯ ಕಂಚೀಪುರದ ಮಧ್ಯದಲ್ಲಿರುವುದರಿಂದ ಆಕೆಯನ್ನು ಸುಧಾ-ಸಾಗರ ಮಧ್ಯಸ್ಥ (ನಾಮ ೬೧) ಎಂದು ಕರೆಯಲಾಗಿದೆ ಮತ್ತು ನಾಮ ೬೨- ಕಾಮಾಕ್ಷೀ ಆಗಿರುವುದರಿಂದ ಅದು ನೇರವಾಗಿಯೇ ಆಕೆಯನ್ನು ಸೂಚಿಸುತ್ತದೆ. ಕಾಮದಾಯಿನೀ ಎಂದರೆ ನಾವು ಬೇಡಿದ್ದನ್ನು ನೀಡುವವಳು ಎಂದು ಅರ್ಥ. ನಾವು ಬೇಡುವುದಾದರೂ ಏನನ್ನು? ನಮ್ಮ ಅಂತರಂಗದಲ್ಲಿ ಹುದುಗಿರುವ ಆಕೆಯ ಸಾಕ್ಷಾತ್ಕಾರವನ್ನೇ ಅಲ್ಲವೇ! ಗಾಢವಾದ ಧ್ಯಾನದಲ್ಲಿ ದೇವಿಯು ನಮಗೆ ಅವಳ ಮೂಲ ಸ್ವರೂಪವಾದ ಆತ್ಮಸ್ವರೂಪಿಣೀ ರೂಪದಲ್ಲಿ ವ್ಯಕ್ತವಾಗುತ್ತಾಳೆ. ಆತ್ಮ ಸ್ವರೂಪಿಣೀ ಎಂದರೆ ಆತ್ಮವಲ್ಲದೇ ಬೇರೇನೂ ಅಲ್ಲ ಮತ್ತು ಈ ಆತ್ಮವು ಮಹಾ-ತ್ರಿಪುರ-ಸುಂದರೀ ಆಗಿದೆ. ಆದ್ದರಿಂದ ೬೩ನೇ ನಾಮವು ಪರೋಕ್ಷವಾಗಿ ಮಹಾ-ತ್ರಿಪುರ-ಸುಂದರೀ ದೇವಿಯನ್ನು ಕುರಿತು ಹೇಳುತ್ತದೆ.

        ಈ ನಾಮದೊಂದಿಗೆ ದೇವಿಯ ಭೌತಿಕ ಅಥವಾ ಸ್ಥೂಲ ವರ್ಣನೆಯು ಕೊನೆಗೊಳ್ಳುತ್ತದೆ. ೬೪ರಿಂದ ೮೪ರವರೆಗಿನ ನಾಮಗಳು ರಾಕ್ಷಸನಾದ ಭಂಡಾಸುರನ ವಧೆಯನ್ನು ಕುರಿತಾಗಿ ಹೇಳುತ್ತವೆ. ಅಲ್ಲಿಂದ ಅವಳ ಪರಮೋನ್ನತ ರೂಪದ ಕುರಿತಾದ ವಿವರಣೆಯು ಹೇಳಲ್ಪಡುತ್ತದೆ ಮತ್ತು ಇವುಗಳ ಉಚ್ಛಾರಣೆಯು ಕೂಡಾ ಬಹಳ ರಹಸ್ಯಾತ್ಮಕವಾದುದಾಗಿದೆ. 

******

        ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 59 - 63 http://www.manblunder.com/2009/07/lalitha-sahasranamam.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
Average: 5 (1 vote)

Comments

Submitted by partha1059 Thu, 05/16/2013 - 15:08

ಸುಧಾ-ಸಾಗರ-ಮಧ್ಯಸ್ಥಾ >>> ಎನ್ನುವಾಗ ಮಹಾಲಕ್ಷ್ಮೀ ಸ್ವರೂಪಳು ಎನ್ನುವ ಅರ್ಥವನ್ನು ಮಾಡಬಹುದಲ್ಲವೆ

Submitted by makara Thu, 05/16/2013 - 22:31

In reply to by partha1059

ಪಾರ್ಥ ಸರ್,
ಖಂಡಿತವಾಗಿ ಸುಧಾ-ಸಾಗರ-ಮಧ್ಯಸ್ಥಾ ಎಂದಾಗ ದೇವಿಯು ಮಹಾಲಕ್ಷ್ಮೀ ಸ್ವರೂಪಳು ಎಂದು ಭಾವಿಸಬಹುದು, ಅದರಲ್ಲೇನೂ ತಪ್ಪಿಲ್ಲ. ಆದರೆ ಇಲ್ಲಿ ಹಾಗೆ ತಿಳಿಯುವುದಕ್ಕೆ ಹಿಂದಿನ ಮತ್ತು ಮುಂದಿನ ನಾಮಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ; ಹಾಗಾಗಿ ಇಲ್ಲಿ ಕಾಮಾಕ್ಷೀ ದೇವಿ ಎನ್ನುವುದೇ ಹೆಚ್ಚು ಸೂಕ್ತ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ