೨. ಲಲಿತಾ ಸಹಸ್ರನಾಮದ ವಿವರಣೆ - ಪ್ರಕಾಶ ಮತ್ತು ವಿಮರ್ಶ ರೂಪಗಳು
ಈ ಮಾಲಿಕೆಯ ಮೊದಲನೇ ಲೇಖನ - ೧. ಲಲಿತಾ ಸಹಸ್ರನಾಮದ ವಿವರಣೆಯಲ್ಲಿ ಪ್ರಕಾಶ ಮತ್ತು ವಿಮರ್ಶ ರೂಪದ ಉಲ್ಲೇಖವು ಬಂದಿದೆ. ಅದಕ್ಕೆ ಪೂರಕವಾಗಿರುವುದೇ ದೇವರ ಅನ್ವೇಷಣೆ – ೮ ಎನ್ನುವ ಶ್ರೀಯುತ ವಿ.ರವಿಯವರು ರಚಿಸಿರುವ ಈ ಲೇಖನ. ಮೂಲ ಲೇಖನದ ವಿವರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ. http://www.manblunder.com/2009/02/finding-god-viii.html
ದೇವರ ಅನ್ವೇಷಣೆ – ೮
ಮಾಯೆಯಿಂದ ಪಾರಾಗುವುದು ಅಷ್ಟು ಸುಲಭದ ಕೆಲಸವಲ್ಲ. ಒಂದು ನಾಯಿಯನ್ನು ನಾವು ಮುದ್ದಿನಿಂದ ಸಾಕಿಕೊಂಡಿದ್ದೇವೆ ಎಂದು ತಿಳಿಯಿರಿ; ಆಗ ಆ ನಾಯಿಯು ನಮಗೆ ಮಹಾನ್ ಆಗಿ ಕಾಣಿಸುತ್ತದೆ. ಅದು ನಮಗೆ ಅತ್ಯಂತ ಪ್ರೀತಿಪಾತ್ರದ್ದಾಗಿರುತ್ತದೆ ಆದ್ದರಿಂದ ಅದು ನಮ್ಮದೆಂದು ನಾವು ಹೇಳುತ್ತಾ ಹೋಗುತ್ತೇವೆ. ಆದರೆ ನಿಜವಾಗಿಯೂ ಅದು ನಮ್ಮದೇ? ನಾವು ಕೇವಲ ನಾಯಿಯನ್ನು ಸಾಕುತ್ತಿದ್ದೇವೆಯೇ ಹೊರತು ಅದು ನಮಗೆ ಸೇರಿದ್ದಲ್ಲ. ನಮ್ಮಂತೆ ಅದು ಕೂಡಾ ’ವಿಮರ್ಶ’ದಿಂದ ಉಂಟಾದ ಸೃಷ್ಟಿ. ನಾವು ಏನನ್ನು ತಿಳಿಯಲು ಬಯಸುತ್ತಿದ್ದೇವೆಂದರೆ ನಮ್ಮೊಳಗಿರುವ ಪರಮಾತ್ಮನನ್ನ. ಅದೇ ಪರಮಾತ್ಮನು ಆ ನಾಯಿಯೊಳಗೂ ಇದ್ದಾನೆ. ಈ ವಸ್ತುವು ನನ್ನದಲ್ಲ ಎಂದು ಅರಿಯುವಲ್ಲಿ ಇದು ಮೊದಲನೇ ಹೆಜ್ಜೆಯಾಗುತ್ತದೆ. ಇದೇ ರೀತಿಯಾಗಿ ನಾವು ಆಲೋಚಿಸುತ್ತಾ ಹೋದರೆ ನಮ್ಮ ಅಹಂಕಾರವು ನಾಶವಾಗುತ್ತದೆ, ಅಂದರೆ ’ನಾನು’ ಎನ್ನುವ ಅಂಶವು ನಾಶವಾಗುತ್ತದೆ. ಮುಂದಿನ ಹಂತವೇ ’ಇದು’ ಎನ್ನುವುದನ್ನು ನಾಶಮಾಡುವುದಾಗಿದೆ. ನಮಗೆ ಸೇರಿದ್ದು ಏನೂ ಇಲ್ಲ ಎಲ್ಲವೂ ವಿಮರ್ಶ ಅಥವಾ ಶಕ್ತಿಯ ಸೃಷ್ಟಿಯಾಗಿದೆ. ಒಂದು ವೇಳೆ ’ನಾನು’ ಮತ್ತು ’ಇದು’ ಎನ್ನುವ ಅಂಶಗಳು ನಾಶವಾದರೆ, ನಾವು ಸುಲಭವಾಗಿ ಈ ಮುಂಚೆ ತಿಳಿಸಿದ ೨೪ ತತ್ವಗಳನ್ನು ಇಲ್ಲವಾಗಿಸಿಕೊಳ್ಳಬಹುದು, ಏಕೆಂದರೆ ಈ ಹಂತದಲ್ಲಿ ನಮ್ಮ ಮನಸ್ಸು, ಬುದ್ಧಿ, ಅಹಂಕಾರ, ನಾನು ಎನ್ನುವ ಪ್ರಜ್ಞೆ (’ಚಿತ್ತ’) ಇವೆಲ್ಲವೂ ಒಂದು ಪ್ರತ್ಯೇಕ ವಸ್ತು (ಇದು) ನಮಗೆ ಸೇರಿದ್ದಲ್ಲ ಎನ್ನುವುದನ್ನು ಮನಗಾಣುತ್ತೇವಾದ್ದರಿಂದ. ಈಗ ನಾವು ಯಾವುದರ ಒಡೆಯರೂ ಅಲ್ಲವೆನ್ನುವ ನಿರ್ಧಾರಕ್ಕೆ ಬರಬಹುದು. ಎಲ್ಲವೂ ಶಕ್ತಿಗೆ ಸಂಭಂದಪಟ್ಟದ್ದು. ವಿಷಯಾಧಾರಿತ ರೂಪಾಂತರವು ಈ ಹಂತದಲ್ಲಿ ನಾಶವಾಗುತ್ತದೆ. ವಸ್ತು ಆಧಾರಿತ ’ಇದುವೇ ನಾನು’ ಎನ್ನುವುದು ಉಳಿಯುತ್ತದೆ. ಇದನ್ನೇ ಪ್ರಕೃತಿ ಎನ್ನುವುದು. ಇದು ಮೂರು ಗುಣಗಳಿಂದ ಕೂಡಿದೆ, ಅವೆಂದರೆ ಸತ್ವ, ರಜಸ್ಸು ಮತ್ತು ತಮಸ್ಸು. ಅವುಗಳು ಮೂರು ವಿಧವಾದ ಶಕ್ತಿಗಳಿಂದ ಉದ್ಭವವಾಗುತ್ತವೆ ಅವೆಂದರೆ ಇಚ್ಛಾ, ಜ್ಞಾನ ಮತ್ತು ಕ್ರಿಯಾ. ನಮ್ಮ ಬಳಿ ಏನೂ ಇಲ್ಲವೆಂದಾದ ಮೇಲೆ ಇನ್ನು ಯಾವುದೇ ರೀತಿಯ ವಸ್ತುವಿನ ಪ್ರಶ್ನೆಯೇ ಉದ್ಭವಿಸವುದಿಲ್ಲ ಅಲ್ಲವೇ? ಯಾವಾಗ ವಸ್ತುವೇ ಇಲ್ಲವೆಂದ ಮೇಲೆ ಇನ್ನು ’ಇದು’ ಎನ್ನುವ ಪ್ರಶ್ನೆ ಎಲ್ಲಿಯದು. ಆದ್ದರಿಂದ ಇಲ್ಲಿ ವಿಷಯ ಮತ್ತು ವಸ್ತು ಎರಡೂ ಅಂಶಗಳು ಇಲ್ಲವಾಗುತ್ತವೆ.
ಯಾವಾಗ ವಿಷಯ ಮತ್ತು ವಸ್ತುಗಳ ಇರುವಿಕೆಯು ಇಲ್ಲವಾಗುತ್ತದೆಯೋ ಆಗ ಇಚ್ಛೆಯ ಪ್ರಶ್ನೆಯೇ ಉದ್ಭವಿಸದು ಅಥವಾ ಮೂರು ಶಕ್ತಿಗಳಾದ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳ ಪ್ರಸಕ್ತಿಯೇ ಉಂಟಾಗದು. ಇಲ್ಲಿ ೩೬ ತತ್ವಗಳಲ್ಲಿ ೩೪ ತತ್ವಗಳು ನಾಶವಾಗಿವೆ. ಕೇವಲ ನಮಗೆ ಸಂಭಂದಪಟ್ಟದ್ದು ಏನೂ ಇಲ್ಲ ಎನ್ನುವುದನ್ನು ಅರಿತುಕೊಳ್ಳುವುದರಿಂದ ನಾವು ನಮ್ಮನ್ನು ಪರಮಾತ್ಮನೊಂದಿಗೆ ಗುರುತಿಸಿಕೊಳ್ಳಲು ಅಡ್ಡಿಯಾಗುತ್ತಿದ್ದ ೩೪ ತತ್ವಗಳನ್ನು ತೆಗೆದುಹಾಕಲು ಸಾಧ್ಯವಾಗಿದೆ. ಈಗ ಕೇವಲ ಪ್ರಕಾಶ ಮತ್ತು ವಿಮರ್ಶ ಎನ್ನುವ ಎರಡು ತತ್ವಗಳು ಮಾತ್ರವೇ ಉಳಿದುಕೊಳ್ಳುತ್ತವೆ. ಈ ಎಲ್ಲಾ ೩೪ ತತ್ವಗಳನ್ನು ’ವಿಮರ್ಶ’ವು ಸೃಷ್ಟಿಸುವುದಲ್ಲದೆ ತನ್ನ ಅಂಕೆಯಲ್ಲಿರಿಸಿಕೊಳ್ಳುತ್ತದೆ. ವಿಮರ್ಶವು ಮಾಯೆಯನ್ನುಂಟು ಮಾಡುವ ಏಕೈಕ ಕಾರಣವಾಗಿರುವುದರಿಂದ ನಾವು ವಿಮರ್ಶವನ್ನು, ’ವಿಮರ್ಶ ಮಹಾ ಮಾಯಾ ಸ್ವರೂಪಿಣಿ’ ಎಂದು ಕರೆಯಬಹುದು. ಏಕೆ ಮಹಾ ಮತ್ತು ಮಾಯೆ ಮತ್ತು ಶಕ್ತಿಗಳನ್ನು ಸ್ತ್ರೀ ರೂಪದಲ್ಲಿ (ಲಿಂಗದಲ್ಲಿ) ನೋಡಬೇಕು.? ಏಕೆಂದರೆ, ದೇವಿಯು ಈ ವಿಶ್ವವನ್ನು ಸೃಷ್ಟಿಸುವುದಷ್ಟೇ ಅಲ್ಲ ಅದನ್ನು ಪೋಷಿಸುತ್ತಾಳೆ ಕೂಡಾ. ಈಗ ನಾವು ’ಮಹಾ ಮಾಯಾ ಸ್ವರೂಪಿಣಿ’ಯನ್ನು ತಿಳಿದುಕೊಳ್ಳುತ್ತಿದ್ದೇವೆ. ಮುಂದಿನ ಹಂತವೇ ನಾವು ಪ್ರಕಾಶಾ ಅಂದರೆ ಸ್ವಯಂ ಬೆಳಗುತ್ತಿರುವುದರ ಬಗ್ಗೆ ತಿಳಿದುಕೊಳ್ಳುವುದು. ಈ ಪ್ರಕಾಶವನ್ನು ತಿಳಿದುಕೊಳ್ಳುವುದೇ ನಮ್ಮ ಅಂತಿಮ ಗುರಿಯಾಗಿದೆ.
ಈ ಮುಂಚೆ ನಾವು ತಿಳಿದುಕೊಂಡಂತೆ ವಿಮರ್ಶವು ಪ್ರಕಾಶದ ಸೃಷ್ಟಿಯಷ್ಟೇ . ಪ್ರಕಾಶವು ವಿಮರ್ಶಗೆ ಸೃಷ್ಟಿ, ಸ್ಥಿತಿ, ಭ್ರಮೆ, ಗ್ರಹಿಕೆ ಮತ್ತು ವಿಶ್ವವನ್ನು ಪ್ರಸಾದಿಸುವ ಕೆಲಸವನ್ನು ಕೊಟ್ಟಿದೆ. ವಿಮರ್ಶೆಯಿಲ್ಲದೆ ಪ್ರಕಾಶವು ಈ ಕೆಲಸವನ್ನು ಮಾಡಲಾರದು. ಪ್ರಕಾಶವು ಯಾವಾಗಲೂ ಒಬ್ಬಂಟಿಯಾಗಿದ್ದು ಅದಕ್ಕೆ ಯಾವುದೇ ಜೊತೆಗಾರ ಅಥವಾ ತನ್ನಂತಹ ಇನ್ನೊಂದಿಲ್ಲ. ಅದು ಆದಿ ಮತ್ತು ಅನಾದಿ. ಅಂದರೆ ಅದುವೇ ಪ್ರಥಮ ಮತ್ತು ಅದೊಂದೇ ಇದೆ. ಯಾವಾಗಲೂ ಎರಡನೆಯದಿದ್ದರೆ ಮಾತ್ರ ಸೃಷ್ಟಿ ಕ್ರಿಯೆಯು ಸಾಧ್ಯವಾಗುತ್ತದೆ; ಒಂದೇ ಇದ್ದಾಗ ಸೃಷ್ಟಿ ಕಾರ್ಯವು ಸಾಧ್ಯವಾಗದು. ಇದೇ ತತ್ವ ಇಲ್ಲಿಯೂ ಕೂಡಾ ಅನ್ವಯವಾಗುತ್ತದೆ. ಯಾವಾಗ ವಿಮರ್ಶವು ಪ್ರಕಾಶದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆಯೋ ಆಗ ಅದು ಪರಿಪೂರ್ಣವಾಗುತ್ತದೆ. ಈ ಹಂತದಲ್ಲಿ ನಾವು ವಿಮರ್ಶವನ್ನು "ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣಿ" ಎನ್ನಬಹುದು. ಇಲ್ಲಿ ವಿಮರ್ಶವು ಇನ್ನೂ ಪ್ರಕಾಶದೊಂದಿಗೆ ಇದೆ; ಆದ್ದರಿಂದ ಅದನ್ನು ಪರಿಪೂರ್ಣವೆನ್ನಬಹುದು. ಸಾಮಾನ್ಯವಾಗಿ ನಾವು ಶಕ್ತಿಯ ಮೂಲಕ ಹೋದರೆ ಮಾತ್ರ ಬ್ರಹ್ಮದ ಸಾಕ್ಷಾತ್ಕಾರವಾಗುತ್ತದೆ ಎನ್ನುತ್ತಾರೆ. ಇಲ್ಲಿ ಒಂದು ವಾದವಿದೆ ಅದೇನೆಂದರೆ, ಕೇವಲ ಶಕ್ತಿಯೊಂದೇ ತನ್ನ ವಿಮರ್ಶ ರೂಪ ಅಥವಾ ಚಿತಿ ರೂಪದಿಂದ ಬ್ರಹ್ಮಸಾಕ್ಷಾತ್ಕಾರಕ್ಕೆ ಕೊಂಡೊಯ್ಯಬಲ್ಲುದು. ಇಲ್ಲಿ ಶಕ್ತಿ ಸ್ತ್ರೀ ಲಿಂಗವಾಗಿದ್ದರೆ ಬ್ರಹ್ಮವು ಪುರುಷ ಲಿಂಗವಾಗಿದೆ. ಬ್ರಹ್ಮನಿಲ್ಲದಿದ್ದರೆ ಶಕ್ತಿಯು ಕಾರ್ಯನಿರ್ವಹಿಸಲಾರದು ಮತ್ತು ಶಕ್ತಿಯಿಲ್ಲದಿದ್ದರೆ ಬ್ರಹ್ಮವು ಕ್ರಿಯಾಶೀಲವಾಗಿರಲಾರದು. ಎರಡೂ ಪರಸ್ಪರ ಒಂದನ್ನೊಂದು ಅವಲಂಭಿಸಿವೆ. ಆದ್ದರಿಂದ ಯಾವಾಗ ಶಕ್ತಿಯು ಬ್ರಹ್ಮದೊಂದಿಗೆ ಇರುವುದೋ ಆಗ ಮಾತ್ರ ಅದನ್ನು ಪರಿಪೂರ್ಣವೆನ್ನುತ್ತಾರೆ.
Comments
ಶ್ರೀಧರ್ ಬಂಡ್ರಿ ಯವರಲ್ಲಿ
ಶ್ರೀಧರ್ ಬಂಡ್ರಿ ಯವರಲ್ಲಿ ನಮಸ್ಕಾರಗಳು, ತಮ್ಮ ಲಲಿತಾ ಸಹಸ್ರನಾಮದ ವಿವರಣೆ ಹೀಗೇ ಮುನ್ದುವರೆಯಲಿ ಹಾಗೂ ತಾವು
ವೃತ್ತಿಯಿಂದ ಕೃಷಿ ವಿಬಾಗ ದವರು ಎ0ದು ತಿಳಿದು ತಮ್ಮಲ್ಲಿ ಒ0ದು ವಿಷಯ ತಿಳಿಯ ಬೇಕಾಗಿತ್ತು ತಮ್ಮನ್ನು ಯಾವರೀತಿಯಲ್ಲಿ ಬೇಟಿಯಾಗಬಹುದು. ನೀಳಾ
In reply to ಶ್ರೀಧರ್ ಬಂಡ್ರಿ ಯವರಲ್ಲಿ by neela devi kn
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು ನೀಳಾ ಅವರೆ. ನನ್ನ ಮಿಂಚಂಚೆ ವಿಳಾಸವು ಹೀಗಿದೆ - sridharbandri@gmail.com ನೀವು ಇದರ ಮೂಲಕ ನನ್ನನ್ನು ಸಂಪರ್ಕಿಸಬಹುದು. ಅಥವಾ ನನ್ನ ಫೇಸ್ ಬುಕ್ ಅಕೌಂಟ್ - sridharbandri ಇದರ ಮೂಲಕವೂ ಸಹ ಸಂಪರ್ಕಿಸಬಹುದು.