೩೦. ಶ್ರೀ ಲಲಿತಾ ಸಹಸ್ರನಾಮ ೭೧ನೇ ನಾಮದ ವಿವರಣೆ

೩೦. ಶ್ರೀ ಲಲಿತಾ ಸಹಸ್ರನಾಮ ೭೧ನೇ ನಾಮದ ವಿವರಣೆ

ಲಲಿತಾ ಸಹಸ್ರನಾಮ ೭೧

Jvālāmālinikākṣipta-vahniprākāra-madhyagā ज्वालामालिनिकाक्षिप्त-वह्निप्राकार-मध्यगा (71)

೭೧. ಜ್ವಾಲಾಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ

       ಜ್ವಾಲಾಮಾಲಿನಿಯು ತಿಥಿ ನಿತ್ಯ ದೇವಿಯರಲ್ಲಿ ಒಬ್ಬಳಾಗಿದ್ದು ಆಕೆಯು ಅಗ್ನಿಯ ಒಂದು ಕೋಟೆಯನ್ನು ಕಟ್ಟಿದಳು ಅ ಕೋಟೆಯ ಮಧ್ಯದಲ್ಲಿ ಶ್ರೀ ಲಲಿತೆಯು ನಿವಸಿಸುತ್ತಾಳೆ. ತಿಥಿ ನಿತ್ಯ ದೇವಿಯರೆಂದರೆ ಚಾಂದ್ರಮಾನದ ಪ್ರತಿ ದಿನವನ್ನು ಪ್ರತಿನಿಧಿಸುವ ಒಬ್ಬೊಬ್ಬ ದೇವಿಯರಾಗಿದ್ದಾರೆ. ಹುಣ್ಣಿಮೆಯಿಂದ ಅಮವಾಸ್ಯೆ ಮತ್ತು ಅಮವಾಸ್ಯೆಯಿಂದ ಹುಣ್ಣಿಮೆಯ ನಡುವೆ ಹದಿನೈದು ದಿನಗಳಿದ್ದು ಹದಿನಾರನೇ ದಿನವು ಹುಣ್ಣಿಮೆ ಅಥವಾ ಅಮವಾಸ್ಯೆಯಾಗಿರುತ್ತದೆ. ಈ ಪ್ರತಿಯೊಂದು ದಿನವನ್ನೂ ಒಂದು ತಿಥಿಯೆಂದು ಕರೆಯುತ್ತಾರೆ ಮತ್ತು ಪ್ರತಿಯೊಂದು ತಿಥಿಯನ್ನೂ ಒಬ್ಬೊಬ್ಬ ದೇವಿಯು ಪರಿಪಾಲಿಸುತ್ತಾಳೆ. ಜ್ವಾಲಾಮಾಲಿನಿಯು ೧೪ನೇ ತಿಥಿ ಅಥವಾ ಚತುರ್ದಶಿಯ ಅಧಿದೇವತೆಯಾಗಿದ್ದಾಳೆ. ಲಲಿತಾಂಬಿಕೆಯು ಮಹಾ ನಿತ್ಯಾ ಎಂದು ಕರೆಯಲ್ಪಟ್ಟಿದ್ದಾಳೆ ಮತ್ತು ಆಕೆಯು ೧೬ನೇ ತಿಥಿಯಾದ ಹುಣ್ಣಿಮೆ ಮತ್ತು ಅಮವಾಸ್ಯೆ ಎರಡನ್ನೂ ಪ್ರತಿನಿಧಿಸುತ್ತಾಳೆ. ಈ ದೇವಿಯರನ್ನು ಸಂಪೂರ್ಣ ಒಳಗಿರುವ ತ್ರಿಕೋಣದಲ್ಲಿ ಪೂಜಿಸುತ್ತಾರೆ ಮತ್ತು ಒಂದೊಂದು ಪಾರ್ಶ್ವಕ್ಕೆ ಐದೈದು ತಿಥಿನಿತ್ಯ ದೇವಿಯರಿರುತ್ತಾರೆ.

      ಭಂಡಾಸುರನೊಂದಿಗಿನ ಯುದ್ಧದಲ್ಲಿ ಲಲಿತಾಂಬಿಕೆಯು ತನ್ನ ಸೈನ್ಯವನ್ನು ರಕ್ಷಿಸಲು ಜ್ವಾಲಾಮಾಲಿನಿ ದೇವಿಯನ್ನು ದೊಡ್ಡದಾದ ಕೋಟೆಯನ್ನು ಕಟ್ಟಲು ಆಜ್ಞಾಪಿಸಿದಳು. ಜ್ವಾಲಾಮಾಲಿನಿ ಎಂದರೆ ಶ್ರೀ ಚಕ್ರದಲ್ಲಿರುವ ಐದು ಶಕ್ತಿ ತ್ರಿಕೋಣಗಳು (ಕೆಳಮುಖವಾಗಿರುವುವು), ಅಕ್ಷಿಪ್ತ ಎಂದರೆ ಮಿಶ್ರವಾಗಿರುವುವು, ವಹ್ನಿ (ಇದೂ ಅಗ್ನಿಯೇ) ಪ್ರಾಕಾರವೆಂದರೆ ಶ್ರೀ ಚಕ್ರದಲ್ಲಿರುವ ನಾಲ್ಕು ಶಿವ ತ್ರಿಕೋಣಗಳು (ಮೇಲ್ಮುಖವಾಗಿರುವುವು) ಮತ್ತು ಮಧ್ಯಗಾ ಎಂದರೆ ಮಧ್ಯದಲ್ಲಿ ನಿವಸಿಸುವವಳು. ಶ್ರೀ ಲಲಿತೆಯು ಐದು ಶಕ್ತಿ ಚಕ್ರ ಮತ್ತು ನಾಲ್ಕು ಶಿವ ಚಕ್ರಗಳ ಮಧ್ಯದ ಕೇಂದ್ರದಲ್ಲಿ ವಾಸಿಸುತ್ತಾಳೆ. ಈ ಕೇಂದ್ರದ ಚುಕ್ಕೆಯನ್ನೇ ’ಬಿಂದು’ವೆಂದು ಕರೆಯುತ್ತಾರೆ (ನಾಮಾವಳಿ ೯೦೫).

      ಜ್ಞಾನಿ ಎಂದರೆ ತಿಳುವಳಿಕೆಯುಳ್ಳವನಾಗಿದ್ದು ಅವನು ಪರಬ್ರಹ್ಮನನ್ನು ಅರಿತವನಾಗಿದ್ದಾನೆ. ಆದ್ದರಿಂದ ಶ್ರೀಕೃಷ್ಣನು ತನಗೆ ಜ್ಞಾನಿಗಳು ಪ್ರಿಯವಾದವರೆಂದು ಹೇಳಿದ್ದಾನೆ. ಇವರೂ ಕೂಡಾ ಜನನ ಮರಣ ಚಕ್ರಗಳಿಗೆ ಸಿಲುಕುತ್ತಾರೆ ಏಕೆಂದರೆ ಅವರಿನ್ನೂ ಪರಬ್ರಹ್ಮದೊಂದಿಗೆ ಲೀನವಾಗಿರುವುದಿಲ್ಲ. ಆದರೆ ಅವರು ತಮ್ಮ ಪ್ರತಿಯೊಂದು ಜನ್ಮದಲ್ಲೂ ಬ್ರಹ್ಮವನ್ನು ಅರಿಯುತ್ತಾರೆ. ಜ್ಞಾನಿಯಾಗಿ ಅಗ್ನಿ ಜ್ವಾಲೆಗಳ ಮಧ್ಯದಲ್ಲಿರುವುದರಿಂದ ಆ ಜ್ವಾಲೆಗಳ ಬೆಳಕಿನಿಂದ ಅವನ ಅಂಧಕಾರವು (ಅಜ್ಞಾನವು) ನಾಶವಾಗುತ್ತದೆ. ಜ್ವಾಲಾಮಾಲ ಎಂದರೆ ಬೆಂಕಿಯ ಹಾರ. ಜ್ಞಾನಿಯು ಈ ಬೆಂಕಿಯ ಹಾರವನ್ನು ಧರಿಸಿರುವುದರಿಂದ ಅವನು ಬ್ರಹ್ಮವನ್ನು ಅರಿಯುತ್ತಾನೆ; ಎಕೆಂದರೆ ಅವನ ಕೊರಳಿನ ಸುತ್ತ ಇರುವ ಅಜ್ಞಾನಾಂಧಕಾರವನ್ನು ಅದು ನಾಶಗೊಳಿಸುತ್ತದೆ. ಜ್ಞಾನಿಗೆ ಬ್ರಹ್ಮದ ಸಾಕ್ಷಾತ್ಕಾರವಾದಾಗ ಅವನು ಈ ಜಗತ್ತಿನ ಸೃಷ್ಟಿಕರ್ತನ ಬಗ್ಗೆ ತಿಳುವಳಿಕೆಯುಳ್ಳವನಾಗುತ್ತಾನೆ (ಏಕೆಂದರೆ ಬ್ರಹ್ಮವು ಈ ಜಗತ್ತಿನ ಸೃಷ್ಟಿಕರ್ತನಾಗಿರುವುದರಿಂದ). ವಹ್ನಿ ಪ್ರಾಕಾರವೆಂದರೆ ಬೆಂಕಿಯಿಂದ ಆವರಿಸಲ್ಪಟ್ಟಿರುವುದು ಎಂದರ್ಥ. ಇಲ್ಲಿ ನಮಗೆ ಎರಡು ವಸ್ತುಗಳಿವೆ. ಅದರಲ್ಲೊಂದು ಜ್ಞಾನಿಯಾದರೆ ಮತ್ತೊಂದು ಬೆಂಕಿಯ ಜ್ವಾಲೆ. ಆ ಬೆಂಕಿಯ ಜ್ವಾಲೆಯಿಂದ ಹೊರಹೊಮ್ಮುವ ಕಿಡಿಗಳು ಸ್ವಲ್ಪ ಹೊತ್ತು ಪ್ರಜ್ವಲಿಸಿ ಮತ್ತೆ ಬೂದಿಯಾಗುತ್ತವೆ. ಆದರೆ ಆ ಬೆಂಕಿಯು; ಯಾವುದರಿಂದ ಆ ಕಿಡಿಗಳು ಹುಟ್ಟಿ, ಜೀವಿಸಿ ಮತ್ತು ನಾಶವಾಗುತ್ತವೋ ಅದನ್ನು ಗಮನಿಸುವ ಸಾಕ್ಷಿಯಾಗಿ ಉಳಿಯುತ್ತದೆ. ಅಂದರೆ ಈ ಬೆಂಕಿಯ ಜ್ವಾಲೆಯು ಕಿಡಿಗಳ ಚಟುವಟಿಕೆಗಳಿಗೆ ಕೇವಲ ಸಾಕ್ಷಿಯಾಗಿದ್ದುಕೊಂಡು ಅದು ಸ್ವತಃ ಆ ಕಿಡಿಗಳ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ಇಲ್ಲಿ ಬೆಂಕಿಯನ್ನು ಯಾವುದೇ ಕ್ರಿಯೆಗಳಿಂದ ವಿಚಲಿತನಾಗದೆ ತನ್ನ ಸುತ್ತಲೂ ಜರುಗುವ ಕ್ರಿಯೆಗಳಿಗೆ ಕೇವಲ ಸಾಕ್ಷಿಯಾಗುಳಿಯುವ ಪರಬ್ರಹ್ಮನಿಗೆ ಹೋಲಿಸಲಾಗಿದೆ. ’ಸ್ಪಂದ ಕಾರಿಕಾ’ದಲ್ಲಿ ಈ ಸಿದ್ಧಾಂತದ ಹೆಚ್ಚಿನ ವಿವರಗಳನ್ನು ನೋಡಬಹುದು (ಇದನ್ನು ಶಿವ ಸೂತ್ರದ ಮೇಲಿನ ವ್ಯಾಖ್ಯಾನವೆಂದೂ ಪರಿಗಣಿಸಬಹುದು ಏಕೆಂದರೆ ಇದು ದಿವ್ಯ ಚೇತನದ ಚರ ಶಕ್ತಿಯ ಕುರಿತಾಗಿ ಚರ್ಚಿಸುತ್ತದೆ). ಅದು ಎರಡು ಹಂತಗಳಿವೆ ಎಂದು ಹೇಳುತ್ತದೆ - ಒಂದು ಮಾಡುವವನು ’ಕರ್ತೃ’ (ವಿಷಯ) ಮತ್ತೊಂದು ’ಕ್ರಿಯೆ’ ಅಥವಾ ವಸ್ತು. ಇವೆರಡರಲ್ಲಿ ಕ್ರಿಯೆಯು ವಿನಾಶ ಹೊಂದುತ್ತದೆ ಏಕೆಂದರೆ ಅದು ವಸ್ತುವಿನೊಂದಿಗೆ ಸಂಭಂದ ಹೊಂದಿದೆ (ಬೆಂಕಿಯ ಕಿಡಿಗಳು), ಇಲ್ಲಿ ಕರ್ತೃವು ನಾಶವಾಗುವುದಿಲ್ಲ (ಬೆಂಕಿಯ ಜ್ವಾಲೆಗಳು). ಶಿವ ಸೂತ್ರವೂ ಕೂಡಾ ಜ್ಞಾನಿಗಳ ಈ ಹಂತವನ್ನು ದೃಢಪಡಿಸುತ್ತದೆ. ಶಿವಸೂತ್ರವು, ಈ ಜ್ಞಾನಿಗಳು ಶಿವಸ್ವರೂಪರು, ಆವರು ನಾಶಹೊಂದುವ ದೇಹದಲ್ಲಿದ್ದರೂ ಶಿವ-ಪ್ರಜ್ಞೆಯನ್ನು ಉಳಿಸಿಕೊಂಡಿರುತ್ತಾರೆ. ಈ ಜ್ಞಾನಿಗಳಿಗೆ ಇರುವ ಭೌತಿಕ ಕಾಯದಿಂದಾಗಿ ಅವರು ಶಿವನಿಗಿಂತ ಬೇರೆಯಾಗಿರುತ್ತಾರಷ್ಟೇ. ಈ ರೀತಿಯಾದ ಶಿವ ಪ್ರಜ್ಞೆಯನ್ನು ಅನುಭವಿಸುವ ಜ್ಞಾನಿಯು ತನ್ನ ಇರುವಿಕೆಗಾಗಿ ಯಾವುದೇ ವಿಧವಾದ ವಸ್ತುವಿನ ಮೇಲೆ ಅವಲಂಭಿತನಾಗಿರುವುದಿಲ್ಲ. ಇದರ ಅರ್ಥ ಎಲ್ಲಿಯವರೆಗೆ ಶಿವ ಪ್ರಜ್ಞೆಯು ಜಾಗೃತವಾಗಿರುತ್ತದೆಯೋ ಅಲ್ಲಿಯವರೆಗೆ ಜ್ಞಾನಿಯು ತನ್ನ ಇರುವಿಕೆಗಾಗಿ ಯಾವುದರ ಮೇಲೆಯೂ ಅವಲಂಭಿತನಾಗಿರುವುದಿಲ್ಲ. ಏಕೆಂದರೆ ಈ ಪ್ರಜ್ಞೆಯೇ ಅವನ ಜೀವಿಸುವಿಕೆಗೆ ಆಹಾರವಾಗಿರುತ್ತದೆ. 

          ಈ ನಾಮದ ಗೂಡಾರ್ಥವೇನೆಂದರೆ ಶ್ರೀ ಲಲಿತೆಯು ಮೂರು ವಿಧವಾದ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಕೈಗೊಳ್ಳುತ್ತಾಳೆ. ಅವಳು ಎಲ್ಲಾ ಕ್ರಿಯೆಗಳಿಗೆ ಕಾರಣಕರ್ತಳಾಗಿದ್ದರೂ ಕೂಡಾ ಅವಳು ಯಾವುದೇ ವಿಧವಾದ ವ್ಯಕ್ತಿಗತ ಕ್ರಿಯೆಗಳಲ್ಲಿ ಭಾಗಿಯಾಗುವುದಿಲ್ಲ ಆದರೆ ಆ ಕ್ರಿಯೆಗಳಿಗೆ ಸಾಕ್ಷೀ ಭೂತಳಾಗಿರುತ್ತಾಳೆ. ಇವೆಲ್ಲಾ ಪರಬ್ರಹ್ಮದ ಲಕ್ಷಣಗಳು ಆದ್ದರಿಂದ ಅವಳನ್ನು ಪರಬ್ರಹ್ಮವೆಂದು ಇಲ್ಲಿ ಬಿಂಬಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದದ್ದೇನೆಂದರೆ ಜ್ಞಾನಿಯು ಬಾಹ್ಯ ಕ್ರಿಯೆಗಳ ಮೇಲೆ ಅವಲಂಭಿತನಾಗಿರುವುದಿಲ್ಲ ಅಥವಾ ವಿಚಲಿತನಾಗುವುದಿಲ್ಲ ಅಥವಾ ಅವುಗಳೊಂದಿಗೆ ಸಂಭಂದವನ್ನು ಹೊಂದಿರುವುದಿಲ್ಲ ಏಕೆಂದರೆ ಅವನ ಪ್ರಜ್ಞೆಯು ಯಾವಾಗಲೂ ಬ್ರಹ್ಮನ ಬಗೆಗೇ ಇರುತ್ತದೆ.

ಜ್ಞಾನಿಯ ಕುರಿತಾಗಿ ಹೆಚ್ಚಿನ ವಿಷಯ:

         ಜ್ಞಾನಿ ಎಂದರೆ ವಿವೇಕದ ಮಾರ್ಗವನ್ನು ಕೈಗೊಳ್ಳುವವನಾಗಿದ್ದು ಅದನ್ನು ಜ್ಞಾನ ಮಾರ್ಗವೆನ್ನುತ್ತಾರೆ. ಜ್ಞಾನವೆಂದರೆ ತಿಳುವಳಿಕೆ ಅಥವಾ ಶುದ್ಧ ಚೈತನ್ಯ. ಮಹಾವಾಕ್ಯವಾದ ‘ಅಹಂ ಬ್ರಹ್ಮಾಸ್ಮಿ’ (ನಾನೇ ಬ್ರಹ್ಮ) ಎನ್ನುವುದನ್ನು  ’ನಾನು ಅವನೇ’ ಅಥವಾ ’ನಾನು ಅವನವನು’ ಎರಡು ರೀತಿಯಾಗಿ ಹೊಂದಬಹುದು. ಈ ಎರಡೂ ಬ್ರಹ್ಮಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುತ್ತವೆ ಆದರೆ ಬೇರೆ ಬೇರೆ ವಿಧಾನಗಳಲ್ಲಿ. ’ನಾನು ಅವನೇ’ ಎನ್ನುವುದು ಆತ್ಮವು ಪರಮಾತ್ಮದೊಂದಿಗೆ ಒಂದೇ ಆಗಿ ಗುರುತಿಸಿಕೊಂಡು ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುತ್ತದೆ. ಈ ಮಾರ್ಗವು ಬಹಳ ಕಠಿಣವಾಗಿದ್ದು ಅದನ್ನು ಅನುಸರಿಸುವುದು ಅಷ್ಟು ಸುಲಭವಲ್ಲ. ನಿರಂತರ ಪ್ರಯತ್ನ ಮತ್ತು ಶ್ರದ್ಧೆ ಈ ಮಾರ್ಗವನ್ನು ತುಳಿಯುವವರಿಗೆ ಬಹು ಅವಶ್ಯವಾಗಿದೆ. ಮತ್ತು ಒಬ್ಬನ ಬುದ್ಧಿವಂತಿಕೆ ಮತ್ತು ಒಬ್ಬನು ಬೆಳೆಸಿಕೊಳ್ಳುವ ನಿಜವಾದ ಭಕ್ತಿಯು ಇಲ್ಲಿ ಜೊತೆಯಾಗಿರಬೇಕಾದ್ದು ಅವಶ್ಯಕ. ಎರಡನೆಯದಾದ ’ನಾನು ಅವನವನು’ ಎನ್ನುವುದು ಮೊದಲನೆಯದಕ್ಕೆ ಹೋಲಿಸಿದರೆ ಸುಲಭವಾದ ಮಾರ್ಗ ಆದರೆ ಖಂಡಿತವಾಗಿ ಅದು ಕೀಳಾದ ವಿಧಾನವಲ್ಲ. ಇದು ಸ್ವಲ್ಪ ಸುತ್ತುಬಳಸಿನ ಹಾದಿಯಾದರೂ ಗುರಿ ಮಾತ್ರ ಒಂದೇ ಆಗಿದೆ. ಇದನ್ನೇ ಭಕ್ತಿ ಮಾರ್ಗವೆಂದಿದ್ದಾರೆ.

          ಕೆಲವರು ಭಕ್ತಿ ಮಾರ್ಗವು ಸುತ್ತು ಬಳಸಿನದಾದರೂ ಇದೇ ಅತ್ಯಂತ ಸೂಕ್ತವಾದ ಮಾರ್ಗವೆಂದು ಪ್ರತಿಪಾದಿಸುತ್ತಾರೆ; ಏಕೆಂದರೆ ಈ ಮಾರ್ಗವನ್ನು ಅನುಸರಿಸುವಾಗ ಒಬ್ಬನು ಎಲ್ಲಾ ವಿಧವಾದ ಅನುಭವಗಳನ್ನು ಹೊಂದುತ್ತಾನೆ. ಅವನು ಹೋಮ ಹವನಗಳ ಮೂಲಕ ಪ್ರಾರಂಭಿಸಿ ತದನಂತರ ಜಪ, ತಪಾದಿಗಳನ್ನು ಕೈಗೊಂಡು ಅಂತಿಮವಾಗಿ ಅಂತರ್ಗತವಾಗಿರುವ ಬ್ರಹ್ಮದ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಈ ಬದಲಾವಣೆಯು ಅನೇಕ ಜನ್ಮಗಳ ಮುಖಾಂತರ ಆಗುತ್ತದೆ. ನೇರವಾದ ಹಾದಿಯು ಬಹಳ ಕಠಿಣತಮವಾಗಿದ್ದು ಒಬ್ಬನಿಗೆ ಅತ್ಯಧಿಕ ಜ್ಞಾನವಿರಬೇಕು, ಅತ್ಯಂತ ದೃಢ ಇಚ್ಛಾ ಶಕ್ತಿ ಮತ್ತು ಮನಸ್ಸಿನ ನಿಗ್ರಹವಿರಬೇಕು. ನಿಜವಾದ ಜ್ಞಾನಿಯೆಂದರೆ, ಯಾರು ತನ್ನ ಮನಸ್ಸನ್ನು ವಿವೇಕಯುತವಾಗಿ ತನ್ನ ಆತ್ಮದ ಪರಮಾನಂದದೊಂದಿಗೆ ಮನಸ್ಸಿನ ಮಾರ್ಪಾಟುಗಳ ಮೂಲಕ (ನಿಧಾನವಾದ ಪರಿವರ್ತನೆಗಳ ಮೂಲಕ) ಏಕಗೊಳಿಸುತ್ತಾನೋ ಆವನೇ ನಿಜವಾದ ಜ್ಞಾನಿ ಏಕೆಂದರೆ ದೈವ ಸಾಕ್ಷಾತ್ಕಾರವು ಮನಸ್ಸಿನ ಪರಿಧಿಯೊಳಗೇ ಆಗುತ್ತದೆ.

******

         ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 71 http://www.manblunder.com/2009/08/lalitha-sahasranamam-71.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
Average: 4 (1 vote)

Comments

Submitted by nageshamysore Tue, 05/21/2013 - 08:45

ಜ್ವಾಲಮಾಲಿನಿಯ ವಿವರಣೆಯಡಿ, ಅಹಂ ಬ್ರಹ್ಮಾಸ್ಮಿಯ ಎರಡು ತರದ ವಿವರಣೆ ಚೆನ್ನಾಗಿ ನಿರೂಪಿತವಾಗಿದೆ ಶ್ರೀಧರರವರೆ - ಧನ್ಯವಾದಗಳು
- ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Tue, 05/21/2013 - 11:09

In reply to by nageshamysore

ನಾನೇನಿದ್ದರೂ ಉತ್ಸವ ಮೂರ್ತಿ, ಈ ಲೇಖನದ ಒಳ್ಳೆಯ ಅಂಶಗಳೆಲ್ಲಾ ಇದರ ಮೂಲ ಲೇಖಕರಾದ ಶ್ರೀಯುತ ವಿ. ರವಿಯವರಿಗೆ ಸಲ್ಲುತ್ತವೆ. ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು, ನಾಗೇಶ್ ಅವರೆ.

Submitted by nageshamysore Tue, 05/21/2013 - 17:43

In reply to by makara

ಉತ್ಸವ ಮೂರ್ತಿಗೆ ತಾನೆ ಜನ ಮೆರವಣಿಗೆ ಮಾಡಿಸಿ ಮೆರೆದಾಡಿಸೋದು ಶ್ರೀಧರರವರೆ :-)
ಅಂದ ಹಾಗೆ ಉತ್ಪ್ರೇಕ್ಷೆಯ ಮಾತಲ್ಲ - ಆಂಗ್ಲದಿಂದ ಭಾಷಾಂತರಗೊಂಡಿದ್ದು ಅಂತ ಅನಿಸದ ಹಾಗೆ, ಕನ್ನಡದಲ್ಲೆ ನೇರವಾಗಿ ಬರೆದದ್ದು ಅನ್ನುವಷ್ಟರಮಟ್ಟಿಗೆ ಭಾಷಾಂತರಿಸುತ್ತಿದ್ದೀರ. ಅದರ ಸಂಪೂರ್ಣ ಶ್ರೇಯಸ್ಸು ನಿಮಗೆ ಸಲ್ಲಬೇಕು! ಉತ್ಸವದ ಜತೆಗೆ ಉತ್ಸಾಹವು ತುಂಬಿ ತುಳುಕುವ ನಿಮ್ಮ ಬರಹದ ಕಸು ಹಾಗೆಯೆ ಮುಂದುವರೆಯಲಿ.
-ನಾಗೇಶ ಮೈಸೂರು, ಸಿಂಗಪುರದಿಂದ