೩೯. ಶ್ರೀ ಲಲಿತಾ ಸಹಸ್ರನಾಮ ೯೮ನೇ ನಾಮದ ವಿವರಣೆ
http://www.manblunder.com/2009/08/lalitha-sahasranamam-98.html
Samayācāra-tatparā समयाचार-तत्परा (98)
೯೮. ಸಮಯಾಚಾರ-ತತ್ಪರಾ
ಲಲಿತಾಂಬಿಕೆಯನ್ನು ಕುಂಡಲಿನೀ ಚಕ್ರಗಳಲ್ಲಿ ಪೂಜಿಸುವುದು - ಮೂಲಾಧಾರ ಚಕ್ರದಿಂದ ಪ್ರಾರಂಭಿಸಿ ಸಹಸ್ರಾರದವರೆಗೆ ಸಾಗುವುದನ್ನು ‘ಸಮಯಾಚಾರ’ವೆಂದು ಕರೆಯುತ್ತಾರೆ. ಇದನ್ನು ಪೂರ್ವದಲ್ಲಿ ಶಿವನು ಉಮೆಗೆ ಉಪದೇಶಿಸಿದ್ದನೆಂದು ರುದ್ರಯಾಮಲವೆಂಬ ಪುರಾತನ ಶಾಸ್ತ್ರ ಗ್ರಂಥದಲ್ಲಿ ವಿವರಿಸಲಾಗಿದೆ. ಈ ನಾಮದ ಶಬ್ದಶಃ ಅರ್ಥವೇನೆಂದರೆ ಶ್ರೀ ಲಲಿತೆಯು ಸಮಾಯಾಚಾರ ಪೂಜೆಯನ್ನು ಇಷ್ಟಪಡುತ್ತಾಳೆ. ಈ ಪೂಜೆಯನ್ನು ಮಾನಸಿಕವಾಗಿ ಮಾತ್ರ ಮಾಡಬಹುದು. ಗುರುವಿನಿಂದ ದೀಕ್ಷೆ ಪಡೆಯುವುದು ಇದರಲ್ಲಿ ಪ್ರಥಮ ಹಂತವಾಗಿದೆ. ಗುರುವು ಶಿಷ್ಯನಿಗೆ ‘ಪೂರ್ಣ ಅಭಿಷೇಕ’ (ಮಂತ್ರ ಸ್ನಾನ) ಮಾಡಿಸುವುದರೊಂದಿಗೆ ಈ ದೀಕ್ಷೆಯು ಪೂರ್ಣಗೊಳ್ಳುತ್ತದೆ. ಗುರುವಿನ ದೀಕ್ಷೆಯ ದೆಸೆಯಿಂದ ಕುಂಡಲಿನೀ ಶಕ್ತಿಯು ಮೂಲಾಧಾರದಿಂದ ಮೇಲಿನ ಚಕ್ರಗಳಿಗೆ ಏರುತ್ತದೆ. ಗುರುವು ತನ್ನ ಶಿಷ್ಯನನ್ನು ಪ್ರತಿಯೊಂದು ಚಕ್ರದ ಮೂಲಕ ಸಾಗುವ ಪ್ರತಿಯೊಂದು ಹಂತದಲ್ಲೂ ಅವನಿಗೆ ಮಾರ್ಗದರ್ಶನ ನೀಡುತ್ತಾನೆ. ಶಿಷ್ಯನು ಒಂದು ಹಂತವನ್ನು ತಲುಪಿದ ಮೇಲೆ ಮುಂದಿನ ಹಂತಗಳಲ್ಲಿ ಸ್ವಂತವಾಗಿ ಮುಂದುವರೆಯುತ್ತಾನೆಂದು ನಂಬಿಕೆಯಾಗುವವರೆಗೆ ಗುರುವು ಅವನಿಗೆ ‘ಮಂತ್ರಸ್ನಾನ’ವನ್ನು ಮಾಡಿಸುವುದಿಲ್ಲ. ಶಿಷ್ಯನು ಸರಿಯಾದ ಮಾರ್ಗವನ್ನು ಅನುಸರಿಸುತ್ತಿದ್ದಾನೆಂದು ಗುರುವಿಗೆ ಮನವರಿಕೆಯಾಗುವವರೆಗೂ ಆತನು ಶಿಷ್ಯನಿಗೆ ಈ ವಿಧಿಯನ್ನು ಪೂರ್ಣಗೊಳಿಸುವುದಿಲ್ಲ. ಮಂತ್ರಸ್ನಾನದ ವಿಧಿಯು ಮುಗಿದ ನಂತರ ‘ಮಹಾವೇದ ಸಂಸ್ಕಾರ’ವೆಂಬ ಮತ್ತೊಂದು ವಿಧಿಯನ್ನು ಕೈಗೊಳ್ಳಬೇಕು. ಈ ಮಹಾವೇದ ವಿಧಿಯ ಸಂಸ್ಕಾರವನ್ನು ಕೇವಲ ವರ್ಷಕ್ಕೊಂದಾವರ್ತಿ ಮಾತ್ರವೇ ಬರುವ ಮಹಾನವಮಿಯ ದಿನದಂದೇ (ದಸರಾ ಮಹೋತ್ಸವದ ಒಂಭತ್ತನೇ ದಿವಸ) ಮಾಡಬೇಕು. (ಈ ಎಲ್ಲಾ ವಿಧಿಗಳನ್ನು ಪೂರೈಸಿದ ಮೇಲಷ್ಟೇ ಸಾಧಕನು ಒಂದು ಏಕಾಂತ ಸ್ಥಳಕ್ಕೆ ಹೋಗಿ ಸಮಯಾಚಾರ ಧ್ಯಾನವನ್ನು ಪ್ರಾರಂಭಿಸಬೇಕು; ಅಂದರೆ ಆರು ಚಕ್ರಗಳು ಮತ್ತು ಸಹಸ್ರಾರದ ಮೇಲೆ ಧ್ಯಾನವನ್ನು ಕೇಂದ್ರೀಕರಿಸಬೇಕು).
ಕುಂಡಲಿನಿಯನ್ನು ಎರಡು ವಿಸರ್ಜನಾಂಗಗಳ ಮಧ್ಯೆ ಇರುವ ಪ್ರದೇಶದಿಂದ ಜಾಗೃತಗೊಳಿಸಿ ಮೂಲಾಧಾರ ಚಕ್ರಕ್ಕೆ ಕೊಂಡೊಯ್ಯಬೇಕು. ಆಕೆಯು ಅಲ್ಲಿ ತನ್ನ ಸೂಕ್ಷ್ಮ ರೂಪದಲ್ಲಿ ಅಂದರೆ ‘ಮಂತ್ರ ರೂಪ’ದಲ್ಲಿ ಈ ಚಕ್ರದಲ್ಲಿ ಇರುತ್ತಾಳೆ. ಮೂಲಾಧಾರ ಚಕ್ರದಿಂದ ಅವಳನ್ನು ಅದರ ಮೇಲಿನ ಚಕ್ರವಾದ ಸ್ವಾಧಿಷ್ಟಾನ ಚಕ್ರಕ್ಕೆ ಒಯ್ಯಬೇಕು. ಇಲ್ಲಿ ಆಕೆಯನ್ನು ಮಾನಸಿಕವಾಗಿ ಪೂಜಿಸಬೇಕು. ಈ ಹಂತದಲ್ಲಿ ಆಕೆಯು ತನ್ನ ಅತಿಸೂಕ್ಷ್ಮ ರೂಪದಲ್ಲಿ ಅಂದರೆ ‘ಕಾಮಕಲಾ’ ರೂಪದಲ್ಲಿ ಇರುತ್ತಾಳೆ. ಈ ಹಂತದ ಪೂಜೆಯ ನಂತರ ಆಕೆಯು ಅಮೂಲ್ಯವಾದ ವಸ್ತ್ರಾಭರಣಗಳಿಂದ ಶೃಂಗರಿಸಲ್ಪಡುತ್ತಾಳೆ. ದೇವಿಗೆ ಸಂಬಂಧಪಟ್ಟ ಪ್ರತಿಯೊಂದೂ ಕೆಂಪು ಬಣ್ಣದ್ದಾಗಿರುತ್ತದೆ ಎನ್ನುವುದನ್ನು ನೆನಪಿಡಿ. ಇದಾದ ನಂತರ ಆಕೆಯನ್ನು ‘ಮಣಿಪೂರಕ ಚಕ್ರ’ಕ್ಕೆ ಒಯ್ಯಲಾಗುತ್ತದೆ. ಈ ಹಂತದಲ್ಲಿ ಸಾಧಕನ ಸ್ಥೂಲ ಶರೀರದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ಇದು ಅವನ ಸುತ್ತಮುತ್ತಲಿನ ಜನರ ಗಮನಕ್ಕೂ ಬರುತ್ತದೆ. ಈ ಹಂತದ ಪೂಜೆಯಲ್ಲಿ ದೇವಿಗೆ ಅರ್ಘ್ಯ, ಪಾದ್ಯ ಮೊದಲಾದವುಗಳನ್ನು ಅರ್ಪಿಸಲಾಗುವುದು. (ಅವಳ ಕೈ ಮತ್ತು ಕಾಲುಗಳನ್ನು ತೊಳೆಯುವುದು ಮೊದಲಾದುವು) ಮತ್ತು ಸಾಧಕನು ಅರ್ಪಿಸಿದ್ದನ್ನು ಆಕೆಯು ಸ್ವೀಕರಿಸುತ್ತಾಳೆ. ಇದಾದ ನಂತರ ದೇವಿಯು ಮೂರನೇ ನಾಮದಲ್ಲಿ ಪ್ರಸ್ತಾಪಿಸಿರುವ ಸಿಂಹಾಸನದಲ್ಲಿ ಆಲಂಕೃತಳಾಗುತ್ತಾಳೆ. ಈ ಹಂತದಲ್ಲಿ ದೇವಿಯು ತನ್ನ ಸೂಕ್ಷ್ಮಾತಿಸೂಕ್ಷ್ಮ ರೂಪವಾದ ’ಕುಂಡಲಿನೀ’ ರೂಪದಲ್ಲಿರುತ್ತಾಳೆ. ’ಕುಂಡಲಿನೀ’ ಶಕ್ತಿಯನ್ನು ಮಣಿಪೂರಕ (ನಾಭಿ) ಚಕ್ರದ ಹಂತದ ನಂತರವಷ್ಟೇ ಆ ಹೆಸರಿನಿಂದ ಕರೆಯಲು ಪ್ರಾರಂಭಿಸುವುದು. ಈ ಚಕ್ರವನ್ನು ದಾಟಿದ ಮೇಲೆ ಆಕೆಯು ಬಹಳ ಶಕ್ತಿಯುತಳಾಗುತ್ತಾಳೆ. ಇದು ಕೇವಲ ಮಾನಸಿಕ ಪೂಜೆಯಾಗಿದ್ದು ಇದು ಆಂತರ್ಯದಲ್ಲಿ ನಡೆಯುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
ಈ ಹಂತದ ನಂತರ ದೇವಿಯನ್ನು ಹೃದಯ ಚಕ್ರವಾದ ಅನಾಹತ ಚಕ್ರಕ್ಕೆ ಕೊಂಡೊಯ್ದು, ಅವಳಿಗೆ ವೀಳೆದೆಲೆಯನ್ನು (ಕರ್ಪೂರ ವೀಟಿಕಾ - ನಾಮ ೨೬) ಅರ್ಪಿಸಲಾಗುತ್ತದೆ. ಇದಾದ ನಂತರ ದೇವಿಯನ್ನು ವಿಶುದ್ಧಿ ಚಕ್ರಕ್ಕೆ ಕೊಂಡೊಯ್ದು ಅಲ್ಲಿ ಆಕೆಯನ್ನು ಆರತಿಯ ಮೂಲಕ ಪೂಜಿಸಲಾಗುತ್ತದೆ. ಆರತಿ ಎಂದರೆ ಶುದ್ಧ ತುಪ್ಪದಿಂದ ಹೊತ್ತಿಸಲ್ಪಟ್ಟ ವಿವಿಧ ರೀತಿಯ ದೀಪಗಳನ್ನು ಅವಳಿಗೆ ಅರ್ಪಣಾ ರೂಪದಲ್ಲಿ ತೋರಿಸುವುದು. ಪ್ರತಿಯೊಂದು ರೀತಿಯಾದ ಆರತಿಗೂ ತನ್ನದೇ ಆದ ವಿಶೇಷತೆಯಿದೆ. ಉದಾಹರಣೆಗೆ ’ಪಂಚ ಆರತಿ’ ಎಂದರೆ ಪಂಚಭೂತಗಳು; ಪೂರ್ಣ ಕುಂಭ ಆರತಿಯು ಪ್ರತಿಯೊಂದು ವಸ್ತುವು ಪೂರ್ಣದಿಂದ ಪ್ರಾರಂಭವಾಗಿ ಪ್ರತಿಯೊಂದೂ ಪೂರ್ಣದಲ್ಲಿಯೇ ಲೀನವಾಗುತ್ತದೆ ಎಂದು ಸಂಕೇತಿಸುತ್ತದೆ. ವಿಶುದ್ಧಿ ಚಕ್ರದಿಂದ ದೇವಿಯನ್ನು ಆಜ್ಞಾ ಚಕ್ರಕ್ಕೆ ಕೊಂಡೊಯ್ಯಲಾಗುತ್ತದೆ, ಇಲ್ಲಿ ಆಕೆಗೆ ಕರ್ಪೂರದ ಆರತಿಯನ್ನು ಸಮರ್ಪಿಸಲಾಗುವುದು. ಕರ್ಪೂರದಿಂದ ಮಾಡುವ ಈ ಆರತಿಗೆ ಬಹಳಷ್ಟು ಮಹತ್ವವಿದೆ (ಶುದ್ಧವಾದ ಕರ್ಪೂರವು ಈ ದಿನಗಳಲ್ಲಿ ಸಿಗುವುದು ದುರ್ಲಭ. ಶುದ್ಧವಾದ ಕರ್ಪೂರವು ದೊರೆಯದಿದ್ದಲ್ಲಿ ತುಪ್ಪದ ದೀಪವನ್ನು ಹಚ್ಚುವುದು ಒಳ್ಳೆಯದು ಏಕೆಂದರೆ ಇದು ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ಅಶುದ್ಧವಾದ ಕರ್ಪೂರದಿಂದ ಬರುವ ಮಸಿಯು ಪೂಜಾ ಕಾರ್ಯಗಳಲ್ಲಿ ಉತ್ಪನ್ನವಾಗುವ ಶುದ್ಧವಾದ ಶಕ್ತಿಯ ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ). ಇದಾದ ನಂತರ ದೇವಿಯನ್ನು ಸುವಾಸನಾಯುಕ್ತ ಪರಿಮಳಗಳಿಂದ ಮತ್ತು ಪುಷ್ಪಗಳ ಮಾಲೆಯಿಂದ ಅಲಂಕರಿಸಲಾಗುತ್ತದೆ. ಅವಳನ್ನು ಈ ಹಂತದಲ್ಲಿ ವಧುವಿನಂತೆ ಕಾಣಬೇಕು. ಇದಾದ ನಂತರ ಆಕೆಯನ್ನು ಶಿವನು ಕಾದು ಕುಳಿತಿರುವ ಸಹಸ್ರಾರಕ್ಕೆ ಒಯ್ಯಬೇಕು. ಯಾವಾಗ ಆಕೆಯು ಸಹಸ್ರಾರಕ್ಕೆ ಪ್ರವೇಶಿಸುತ್ತಾಳೆಯೋ ಆಗ ಅವರಿಬ್ಬರ ಸುತ್ತಲೂ ಒಂದು ಮುಸುಗನ್ನು ಇರಿಸಿ ಸಾಧಕನು ಅವಳು ಹಿಂತಿರುಗಿ ಬರುವವರೆಗೆ ಕಾಯುತ್ತಾನೆ. ಒಮ್ಮೆ ಆಕೆಯು ಸಹಸ್ರಾರದಿಂದ ಹಿಂದಿರುಗಿದ ನಂತರ ಆಕೆಯನ್ನು ಮತ್ತೆ ಮೂಲಾಧಾರಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
ಈ ನಾಮವು ದೇವಿಗೆ ಈ ವಿಧವಾದ ಪೂಜೆಯು ಇಷ್ಟವೆಂದು ತಿಳಿಸುತ್ತದೆ. ಕುಂಡಲಿನೀ ಧ್ಯಾನಕ್ಕೆ ಇಲ್ಲಿ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಕೇವಲ ಶಕ್ತಿ ಮಾತ್ರಳೇ ಒಬ್ಬರನ್ನು ಪರಬ್ರಹ್ಮನಾದ ಶಿವನಲ್ಲಿಗೆ ಕೊಂಡೊಯ್ಯಬಲ್ಲಳು. ಪರಬ್ರಹ್ಮನು ಶಿವನಾದರೆ ಶಕ್ತಿಯು ಮಾಯೆಯಾಗಿದ್ದಾಳೆ. ಈ ನಾಮಕ್ಕೆ ಇನ್ನೂ ಒಂದು ವಿಧವಾದ ವಿಶ್ಲೇಷಣೆಯು ಸಾಧ್ಯವಿದೆ. ಕುಂಡಲಿನಿಯು ಜೀವಾತ್ಮನನ್ನು ಪ್ರತಿನಿಧಿಸಿತ್ತದೆ; ಈ ಆತ್ಮವು ’ಕ್ರಿಯಾಶೀಲ ಶಕ್ತಿ’ಯಾಗಿದ್ದು ಅದರೊಳಗೆ ನಮ್ಮ ಕರ್ಮಗಳು ಅಡಕವಾಗಿವೆ. ಈ ವಿಧವಾದ ಆತ್ಮವು ಪರಮಾತ್ಮನಲ್ಲಿ ಅಥವಾ ಪರಬ್ರಹ್ಮದಲ್ಲಿ ಲೀನವಾಗುವುದನ್ನೇ ಶಿವ-ಶಕ್ತಿಯರ ಸಮಾಗಮವೆನ್ನುತ್ತಾರೆ. ಈ ನಾಮದಲ್ಲಿ ಜೀವಾತ್ಮವು ಪರಮಾತ್ಮದಲ್ಲಿ ಐಕ್ಯವಾಗುವುದನ್ನು ಚರ್ಚಿಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳಬೇಕೆಂದರೆ ಇಲ್ಲಿ ಕುಂಡಲಿನಿಯು ಸಹಸ್ರಾರವನ್ನು ಮುಟ್ಟಿದಾಗಲಷ್ಟೇ ಮುಕ್ತಿಯು ದೊರೆಯುತ್ತದೆ ಎನ್ನುವುದನ್ನು ವಿಶದ ಪಡಿಸಲಾಗಿದೆ. ಪರಬ್ರಹ್ಮದೊಂದಿಗೆ ನಿರಂತರವಾಗಿ ಸಂವಹನೆಯಲ್ಲಿ ಇರಬೇಕೆಂದರೆ ಸಮಯಾಚಾರ ಪದ್ಧತಿಯನ್ನು ಸತತವಾಗಿ ಅಭ್ಯಾಸ ಮಾಡಬೇಕು.
******
Comments
ಶ್ರೀಧರರೆ, ಸಮಯಾಚಾರ-ತತ್ಪರದ ಸಾರ:
ಶ್ರೀಧರರೆ, ಸಮಯಾಚಾರ-ತತ್ಪರದ ಸಾರ: ಜಾಗೃತ ಕುಂಡಲಿನಿಯ ಮೂಲಾಧಾರದಿಂದ-ಸಹಸ್ರಾರ-ಮತ್ತೆ ಮೂಲಾಧಾರಕೆ ಹಿಂತಿರುಗುವ ಪಯಣ, ತನ್ಮೂಲಕ ಆತ್ಮನ ಜತೆ ಪರಮಾತ್ಮನ ವಿಲೀನಕೆ ದಾರಿ ತೋರುವ ಮಾತಾಶಕ್ತಿಯ ಪೂಜಾ ವಿವರ. ಅದರ ಕವನ ಭಾವ ಇಲ್ಲಿದೆ:
೯೮. ಸಮಯಾಚಾರ-ತತ್ಪರ
ಊರ್ಧ್ವಾಭಿಮುಖ ಪಯಣವೆ ಮೂಲಾಧಾರದಿಂ ಸಹಸ್ರಾರ
ಸಮಯಾಚಾರಾರಂಭೆ ಜಾಗೃತ ಕುಂಡಲಿನಿ ಮೂಲಾಧಾರ
ಆರೋಹಣಾ ಸ್ವಾಧಿಷ್ಟಾನ ಮಣಿಪೂರಕ ಅನಾಹತ ವಿಶುದ್ಧಿ
ಆಜ್ಞಾಚಕ್ರ ಸಹಸ್ರಾರ ಶಿವಶಕ್ತಿ ಸಂಗಮ ಮತ್ತೆ ಸ್ವಸ್ಥಾನ ಪದಿ!
ಮಾಯೆ ಶಕ್ತಿ ಮಾತ್ರ ಸಮರ್ಥೆ ಶಿವ ಪರಬ್ರಹ್ಮನ ಸನ್ನಿಹಿತಕೆ
ಕುಂಡಲಿನಿಯೆ ಜೀವಾತ್ಮ ಕ್ರಿಯಾಶೀಲಶಕ್ತಾತ್ಮ ಕರ್ಮಸಂಚಿಕೆ
ಆತ್ಮ ವಿಲೀನ ಜೀವಾತ್ಮ ಪರಮಾತ್ಮದೆ ಶಿವ ಶಕ್ತಿ ಸಮಾಗಮೆ
ಮುಟ್ಟೆ ಕುಂಡಲಿನಿ ಸಹಸ್ರಾರೆ ಮುಕ್ತಿ ಸಂವಹನ ನಿರಂತರಮೆ!
ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರರೆ, ಸಮಯಾಚಾರ-ತತ್ಪರದ ಸಾರ: by nageshamysore
ಅಚರ ಶಕ್ತಿಯಿಂದ ಚರ ಶಕ್ತಿಯು
ಅಚರ ಶಕ್ತಿಯಿಂದ ಚರ ಶಕ್ತಿಯು ಬೇರೆಯಾಗಿ ಈ ಚರಾಚರ ಜಗತ್ತನ್ನು ಸೃಷ್ಟಿಸುವುದು; ಆ ಚರ ಶಕ್ತಿಯ ಅಂಶವು ಮತ್ತೊಮ್ಮೆ ಅಚರ ಶಕ್ತಿಯೊಂದಿಗೆ ಐಕ್ಯವಾಗುತ್ತದೆ. ಯಾರು ಇದನ್ನು ಸಾಧಿಸಬಲ್ಲರೋ ಅವರೇ ಮುಕ್ತರು! ಇದೇ ಸಮಯಾಚಾರ ಪೂಜೆಯ ಸಾರ; ಅದನ್ನು ಚೆನ್ನಾಗಿ ಬಿಂಬಿಸಿದ್ದೀರ, ನಾಗೇಶರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ