೭೧. ಶ್ರೀ ಲಲಿತಾ ಸಹಸ್ರನಾಮ ೨೫೭ರಿಂದ ೨೬೩ನೇ ನಾಮಗಳ ವಿವರಣೆ

೭೧. ಶ್ರೀ ಲಲಿತಾ ಸಹಸ್ರನಾಮ ೨೫೭ರಿಂದ ೨೬೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೫೭ - ೨೬೩

Jāgariṇī जागरिणी (257)

೨೫೭. ಜಾಗರಿಣೀ

               ಮೂರು ಹಂತಗಳಾದ ಎಚ್ಚರ, ಕನಸು ಮತ್ತು ದೀರ್ಘನಿದ್ರಾವಸ್ಥೆ (ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ) ಇವುಗಳನ್ನು ಈ ನಾಮದಿಂದ ಪ್ರಾರಂಭಿಸಿ ೨೬೩ನೇ ನಾಮದವರೆಗೆ ಚರ್ಚಿಸಲಾಗಿದೆ.

             ದೇವಿಯು ಎಲ್ಲಾ ಜೀವಿಗಳಲ್ಲಿ ಜಾಗೃತಾವಸ್ಥೆಯಲ್ಲಿ ಇರುತ್ತಾಳೆ. ಶಿವ ಸೂತ್ರವು (೧.೮) ಹೀಗೆ ಹೇಳುತ್ತದೆ, "ಜ್ಞಾನಂ ಜಾಗೃತ್". ಜಾಗೃತ್ ಸ್ಥಿತಿಯನ್ನು ಈ ವಿಧವಾಗಿ ವಿವರಿಸಲಾಗಿದೆ - ಇದು ಬಾಹ್ಯ ವಸ್ತುಗಳ ನೇರ ಸಂಪರ್ಕದಿಂದ ಪ್ರಜ್ಞೆಯು ಹೊಂದಿದ ಜ್ಞಾನವಾಗಿದೆ. ಇಲ್ಲಿ ವಿಷಯವು (ಮನಸ್ಸು) ವಸ್ತುವಿನೊಂದಿಗೆ (ಭೌತಿಕ ಪ್ರಪಂಚದೊಂದಿಗೆ) ನೇರ ಸಂಪರ್ಕವನ್ನು ಹೊಂದಿರುವುದರಿಂದ ಅದು ಗ್ರಹಣೇಂದ್ರಿಯಗಳ (ಪಂಚೇಂದ್ರಿಯಗಳ) ಮೂಲಕ ಜ್ಞಾನವನ್ನು ಪಡೆಯತ್ತದೆ.

               ಹಿಂದಿನ ನಾಮದಲ್ಲಿ, ದೇವಿಯನ್ನು ವಿಶ್ವರೂಪಾ ಎಂದು ಕರೆಯಲಾಗಿದೆ. ಆಕೆಯ ವಿಶ್ವರೂಪವು ಎಲ್ಲಾ ಜೀವಿಗಳಲ್ಲಿ ಜಾಗೃತ್ ಅವಸ್ಥೆಯಲ್ಲಿ ಅಸ್ತಿತ್ವದಲ್ಲಿರುತ್ತದೆ. ಈ ನಾಮ ಮತ್ತು ಇನ್ನು ಮುಂದೆ ಬರುವ ನಾಮಗಳು ದೇವಿಯ ಸರ್ವಾಂತರಯಾಮಿತ್ವ ಲಕ್ಷಣವನ್ನು ಕುರಿತು ಹೇಳುತ್ತವೆ.

Svapantī स्वपन्ती (258)

೨೫೮. ಸ್ವಪಂತೀ

              ದೇವಿಯು ಸ್ವಪ್ನಾವಸ್ಥೆಯಲ್ಲಿಯೂ ಇರುತ್ತಾಳೆ. ಸ್ವಪ್ನಾವಸ್ಥೆಯಲ್ಲಿ ಅಂದರೆ ಕನಸಿನ ಹಂತದಲ್ಲಿ [REM (Rapid Eye Movement) ಎಂದು ಕರೆಯಲಾಗುವ ಹಂತದಲ್ಲಿ] ಕಣ್ಣಾಲಿಗಳ ತೀವ್ರ ಚಲನೆಯು ಮುಂದುವರೆಯುತ್ತದೆ ಆದರೆ ಅದು ಬಹಳ ನಿಧಾನವಾಗಿ ಇರುತ್ತದೆ. ಬಾಹ್ಯ ವಸ್ತುಗಳಿಂದ ಗಳಿಸಲ್ಪಟ್ಟ ಜ್ಞಾನವು ಮನಸ್ಸಿಗೆ ವರ್ಗಾಯಿಸಲ್ಪಟ್ಟು ಅದು ಮನಸ್ಸಿನಲ್ಲಿ ಅಚ್ಚುಗಳನ್ನು ಮೂಡಿಸುತ್ತದೆ. ಸ್ವಪ್ನಾವಸ್ಥೆಯಲ್ಲಿ ಈ ಅಚ್ಚುಗಳು ರೂಪಾಂತರ ಹೊಂದಿ ಅರ್ಧಪ್ರಜ್ಞಾವಸ್ಥೆಯಲ್ಲಿ ಕನಸುಗಳಾಗಿ ಹೊರಹೊಮ್ಮುತ್ತವೆ. ಕನಸು ಎಂದರೆ ಈ ಜನ್ಮದಲ್ಲಿಯಾಗಲೀ ಅಥವಾ ಹಿಂದಿನ ಜನ್ಮಗಳಲ್ಲಾಗಲೀ ನಾವು ಸಾಧಿಸಲಾಗದೇ ಇದ್ದ ವಿಷಯಗಳ ಕುರಿತು ಮನಸ್ಸು ಕೈಗೊಳ್ಳುವ ಆಲೋಚನೆಗಳೇ ಆಗಿವೆ. ಕನಸು ಎನ್ನುವುದು ಒಂದು ಕಾಲಾವಧಿಯಲ್ಲಿ ಮಾಡಿದ ಒಟ್ಟು ಆಲೋಚನೆಗಳ ಸಂಗ್ರಹಾಗಾರವಾಗಿದೆ. ಆಲೋಚನೆಗಳು ಆಲೋಚನೆಗಳಾಗಿಯೇ ಇರುತ್ತವಾದ್ದರಿಂದ ಈ ಹಂತದಲ್ಲಿ ಅವುಗಳಿಗೆ ಯಾವುದೇ ವಿಧವಾದ ಅಡಚಣೆಗೆ ಆಸ್ಪದವಿಲ್ಲ. ಆಲೋಚನೆಗಳು ಕ್ರಿಯಗಳಾಗಿ ಪರಿವರ್ತನೆಯಾಗುವುದಿಲ್ಲ. ಮನಸ್ಸಿನಲ್ಲಿ ಪಡಿಮೂಡಿದ ಆಲೋಚನೆಗಳು ಗುರುತುಗಳಾಗಿಯೇ ಉಳಿದು ಬಿಡುತ್ತವೆ. ಮನಸ್ಸಿನ ಮೇಲೆ ಆದ ಈ ಗುರುತುಗಳು ಮನೋಪರಿಧಿಯ ಸುತ್ತಲೂ ತಿರುಗುತ್ತಿರುತ್ತವೆ. ಈ ಹಂತದಲ್ಲಿ ಮನಸ್ಸು ಯಾವುದೇ ವಿಧವಾದ ಗ್ರಹಣೇಂದ್ರಿಯಗಳೊಂದಿಗೆ ಸಂಪರ್ಕ ಹೊಂದಿರುವುದಿಲ್ಲ. ಇಲ್ಲಿ ಗ್ರಹಣೇಂದ್ರಿಯಗಳು ಒಳಗೊಂಡಿಲ್ಲದೇ ಇರುವುದರಿಂದ, ವ್ಯಕ್ತಿಯು ಯಾವುದೇ ವಿಧವಾದ ವಸ್ತುಗಳೊಂದಿಗೆ ನೇರವಾದ ಸಂಪರ್ಕವನ್ನು ಹೊಂದಿರುವುದಿಲ್ಲ. ಎಚ್ಚರದ ಸ್ಥಿತಿಯಲ್ಲಿ ಗಳಸಿಕೊಂಡ ಜ್ಞಾನದ ಆಧಾರದ ಮೇಲೆ ಈ ಹಂತದಲ್ಲಿ ಪ್ರಜ್ಞೆಯು ರೂಪಾಂತರ ಹೊಂದುತ್ತದೆ. ಆದ್ದರಿಂದ ಬಹುತೇಕ ಕನಸುಗಳು ನಮಗೆ ತಿಳಿದ ವಸ್ತುಗಳ ಸುತ್ತಲೇ ಇರುತ್ತವೆ. ಈ ಹಂತದಲ್ಲಿ ಸ್ಥೂಲದಿಂದ ಸೂಕ್ಷ್ಮವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯು ಆರಂಭವಾಗುತ್ತದೆ. ಮನಸ್ಸು ಕನಸಿನ ಸ್ಥಿತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ ಅದು ನಿಷ್ಕ್ರಿಯವಾಗಿದ್ದು ಕನಸುಗಳನ್ನು ಕೇವಲ ಸಾಕ್ಷಿಭೂತವಾಗಿ ನೋಡುವ ಕೆಲಸವನ್ನು ಮಾಡುತ್ತದೆ. ಸರಿಯಾಗಿ ಇದೇ ಹಂತವನ್ನು ಮನಸಿನ ಮೇಲೆ ಒಡಮೂಢುವ ಯಾವುದೇ ವಿಧವಾದ ವಸ್ತುತಃ ಗುರುತುಗಳಿಂದ ವಿಚಲಿತನಾಗದೇ, ಒಬ್ಬನು ಎಚ್ಚರದ ಸ್ಥಿತಿಯಲ್ಲಿ ಗಳಿಸಬೇಕು. ಇದುವೇ ಆತ್ಮಸಾಕ್ಷಾತ್ಕಾರದಲ್ಲಿ ಅಂತಿಮ ಹಂತವಾಗುತ್ತದೆ. ಈ ಹಂತವನ್ನು ಹೊಂದಲು ದೇವಿಯೇ ಕಾರಣಳಾಗುತ್ತಾಳೆ.

Taijasātmikā तैजसात्मिका (259)

೨೫೯. ತೈಜಸಾತ್ಮಿಕಾ

           ಹಿಂದಿನ ನಾಮದಲ್ಲಿ ಚರ್ಚಿಸಿದ ಕನಸಿನ ಸ್ಥಿತಿಯೊಂದಿಗೆ ವ್ಯಕ್ತಿಗತ ಜೀವಿಯು ಹೊಂದಿರುವ ಸಂಭಂದವನ್ನು ತೈಜಸ ಎಂದು ಕರೆಯುತ್ತಾರೆ. ಎಚ್ಚರದ ಸ್ಥಿತಿಯಲ್ಲಿ ಸ್ಥೂಲ ಶರೀರವು ಸಕ್ರಿಯವಾಗಿದ್ದು, ಕನಸಿನ ಹಂತದಲ್ಲಿ ಸೂಕ್ಷ್ಮ ಶರೀರವು ಸಕ್ರಿಯವಾಗಿರುತ್ತದೆ. ತೈಜಸವು ಪಂಚೇಂದ್ರಿಯಗಳು ಮತ್ತು ಪಂಚಪ್ರಾಣಗಳ ಸಹಾಯದಿಂದ ಅಹಂಕಾರದ ಸ್ಪಂದನೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ, ಅದರ ಪ್ರಜ್ಞೆಯು ಒಳಮುಖವಾಗಿ ಹರಿದು ಅದು ವಿಶೇಷವಾದ ಕನಸಿನ ನೆನಪುಗಳನ್ನು ಆನಂದಿಸುತ್ತದೆ. ತೈಜಸವು ಸೂಕ್ಷ್ಮ ಶರೀರದೊಂದಿಗೆ ಸಂಭಂದ ಹೊಂದಿರುವುದರಿಂದ ಅದು ಒಟ್ಟು   ಆತ್ಮಗಳ ಮೊತ್ತವಾಗಿರುವ ಹಿರಣ್ಯಗರ್ಭದೊಂದಿಗೆ ಅನುಭಂದವನ್ನು ಹೊಂದುತ್ತದೆ. ಯಾವಾಗ ವ್ಯಕ್ತಿಗತ ಪ್ರಜ್ಞೆಯು ಸ್ಥೂಲ ಶರೀರದಿಂದ ಹೊರಬಂದು ಸೂಕ್ಷ್ಮ ಶರೀರದೊಂದಿಗೆ ಗುರುತಿಸಿಕೊಳ್ಳುತ್ತದೆಯೋ ಆಗ ಎಚ್ಚರದ ಸ್ಥಿತಿಯು ಮಾಯವಾಗಿ ಕನಸಿನ ಸ್ಥಿತಿಯು ಏರ್ಪಡುತ್ತದೆ. ಈ ಹಂತದಲ್ಲಿ ಪ್ರಜ್ಞೆಯು ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳಿಗೆ (ಈ ನಾಲ್ಕನ್ನೂ ಒಟ್ಟಾಗಿ ಅಂತಃಕರಣವೆನ್ನುತ್ತಾರೆ) ಮಾತ್ರವೇ ಪರಿಮಿತವಾಗಿರುತ್ತದೆ. ತೈಜಸವು ತೇಜೋಮಯ (ನಾಮ ೪೫೨) ಶಬ್ದದಿಂದ ವ್ಯುತ್ಪತ್ತಿಯಾಗಿದೆ ಅದರ ಅರ್ಥವು ಬೆಳಕಿನ ಹೊಂಗಿರಣ, ಹೊಳೆಯುವುದು, ಪ್ರಕಾಶಿಸುವುದು ಆಗಿದೆ. ದೇವಿಯು ಈ ಹಂತದಲ್ಲಿ ರೂಪಾಂತರವನ್ನು ಹೊಂದುತ್ತಾಳೆ.

Suptā सुप्ता (260)

೨೬೦. ಸುಪ್ತಾ

              ಎಲ್ಲರಿಗೂ ತಿಳಿದಿರುವ ಮೂರನೇ ಹಂತವೇ ಸುಷುಪ್ತಿ ಇದು ದೀರ್ಘನಿದ್ರಾವಸ್ಥೆಯ ಹಂತ ಅಥವಾ ಪ್ರಜ್ಞಾಹೀನ ಸ್ಥಿತಿ. ಸುಷುಪ್ತಿಯಲ್ಲಿ ಒಬ್ಬನಿಗೆ ತನ್ನ ಸುತ್ತಲೂ ಏನು ನಡೆಯುತ್ತಿದೆ ಎನ್ನುವುದರ ಅರಿವು ಇರುವುದಿಲ್ಲ; ಈ ಹಂತದಲ್ಲಿ ಮನಸ್ಸೂ ಕೂಡಾ ವಿರಮಿಸುತ್ತದೆ. ಇಲ್ಲಿ ಹಿಂದಿನ ಹಂತದ ಯಾವುದೇ ವಿಧವಾದ ಶೇಷವು ಅನಭವಕ್ಕೆ ಬರುವುದಿಲ್ಲ. ಈ ಹಂತದಲ್ಲಿ ಕಣ್ಣಾಲಿಗಳ ತೀವ್ರ ಚಲನೆ (REM) ಎನ್ನುವುದು ಪೂರ್ತಿ ಇಲ್ಲದೇ ಹೋಗಬಹುದು ಅಥವಾ ಒಂದು ವೇಳೆ ಇದ್ದರೂ ಅದು ಬಹಳ ಅಲ್ಪ ಪ್ರಮಾಣದಲ್ಲಿರುತ್ತದೆ. ಈ ಹಂತದಲ್ಲಿ ಕಾರಣ ಶರೀರವೂ ವಿರಮಿಸುತ್ತದೆ. ಆದರೆ ದೇವಿಯು ಈ ಹಂತದಲ್ಲಿಯೂ ಇರುತ್ತಾಳೆ ಎನ್ನುವುದು ಅವಳ ಸರ್ವವ್ಯಾಪಕತ್ವತೆಯ ಗುಣವನ್ನು ದೃಢಪಡಿಸುತ್ತದೆ.

Prājñātmikā प्राज्ञात्मिका (261)

೨೬೧. ಪ್ರಾಜ್ಞಾತ್ಮಿಕಾ

              ದೇವಿಯು ಸುಷುಪ್ತಿ ಅಥವಾ ದೀರ್ಘನಿದ್ರಾವಸ್ಥೆಯಲ್ಲಿ ಪ್ರಾಜ್ಞಾತ್ಮಿಕಾ ಎಂದು ಕರೆಯಲ್ಪಡುತ್ತಾಳೆ. ಇದು ಹಿಂದಿನ ನಾಮದ ಮುಂದುವರಿಕೆಯಾಗಿದೆ. ಕಾರಣ ಶರೀರದಲ್ಲಿ ವ್ಯಕ್ತಿಗತ ಆತ್ಮ ಅಥವಾ ಜೀವಿಯು ರೂಪಾಂತರ ಹೊಂದುವುದನ್ನೇ ಪ್ರಜ್ಞಾ ಎಂದು ಕರೆಯಲಾಗಿದೆ. ಆದ್ದರಿಂದ, ಅದು ಒಟ್ಟು ಕಾರಣ ಶರೀರಗಳ ಮೊತ್ತವಾದ ಪರಬ್ರಹ್ಮದೊಂದಿಗೆ ಸಹಯೋಗ ಹೊಂದಿದೆ. ಪರಬ್ರಹ್ಮವು ಈ ಸಮಸ್ತ ಬ್ರಹ್ಮಾಂಡವನ್ನು ನಿಯಂತ್ರಿಸಿದರೆ, ಪ್ರಜ್ಞಾ ಎನ್ನುವುದು ಸೂಕ್ಷ್ಮ ಸ್ಥಾಯಿಯ ಮಟ್ಟದಲ್ಲಿ ವ್ಯಕ್ತಿಗತ ಜೀವಿಯನ್ನು ನಿಯಂತ್ರಿಸುತ್ತದೆ. ವಾಕ್ ದೇವಿಗಳು ಮೂರು ಸಹಜ ಸ್ಥಿತಿಗಳನ್ನು ವಿವರಿಸಿದ ನಂತರ ನಾಲ್ಕನೆಯ ಸ್ಥಿತಿಯಾದ ತುರಿಯಾವಸ್ಥೆಯನ್ನು ಕುರಿತಾಗಿ ವಿವರಿಸಲು ಹೊರಟಿದ್ದಾರೆ.

ಮೂರು ಸಹಜ ಸ್ಥಿತಿಗಳ ಕುರಿತಾಗಿ ಹೆಚ್ಚಿನ ವಿವರಗಳು - ಶಿವ ಸೂತ್ರದ ೧.೮,೯ & ೧೦ರಲ್ಲಿ ಹೇಳಿದಂತೆ.

                ज्ञानं जाग्रत् ಜ್ಞಾನಂ ಜಾಗ್ರತ್ (ಸೂತ್ರ ೮)

                स्वप्नो विकल्पाः ಸ್ವಪ್ನೋ ವಿಕಲ್ಪಾಃ (ಸೂತ್ರ ೯)

                अविवेको मायासौषुप्तम् ಅವಿವೇಕೋ ಮಾಯಾಸೌಷುಪ್ತಮ್ (ಸೂತ್ರ ೧೦)

                ಜ್ಞಾನವೆಂದರೆ ತಿಳುವಳಿಕೆ ಅಥವಾ ಅರಿವು. ಜಾಗ್ರತ್ ಎನ್ನುವುದು ಎಚ್ಚರದ ಸ್ಥಿತಿ ಅಥವಾ ಸಹಜ ಚಟುವಟಿಕೆಯ ಸ್ಥಿತಿಯಾಗಿದ್ದು ಇಲ್ಲಿ ಪ್ರಜ್ಞೆಯ ಸಂಪೂರ್ಣ ಅರಿವಿರುತ್ತದೆ (೮).

                ಸ್ವಪ್ನವೆಂದರೆ ಕನಸು. ವಿಕಲ್ಪವೆಂದರೆ ಆಂತರಿಕ ಗ್ರಹಿಕೆಯನ್ನು ಕುರಿತು ಹೇಳುತ್ತದೆ. ಬಾಹ್ಯ ಗ್ರಹಿಕೆಯು ಇಂದ್ರಿಯಗಳಿಂದ ಉಂಟಾದರೆ ಆಂತರಿಕ ಗ್ರಹಿಕೆಯು ಮನಸ್ಸಿನ ಮೂಲಕ ಉಂಟಾಗುತ್ತದೆ (೯).

                ವಿವೇಕವೆಂದರೆ ವಿವೇಚನೆ. ಅವಿವೇಕವೆಂದರೆ ವಿವೇಚನೆ ಇಲ್ಲದಿರುವುದು. ಮಾಯಾ ಎಂದರೆ ಭ್ರಮೆ. ಸೌಷುಪ್ತ ಎಂದರೆ ದೀರ್ಘನಿದ್ರೆ. ಸಹಜವಾಗಿಯೇ ವಿವೇಚನಾರಾಹಿತ್ಯ ಸ್ಥಿತಿಯು ದೀರ್ಘನಿದ್ರಾವಸ್ಥೆ ಅಥವಾ ಮಾಯಾವಸ್ಥೆಯಲ್ಲಿ ಸಂಭವಿಸುತ್ತದೆ (೧೦).

              ಈ ಮೂರು ಸೂತ್ರಗಳನ್ನು ಒಟ್ಟಿಗೇ ಗಣನೆಗೆ ತೆಗೆದುಕೊಳ್ಳುತ್ತಾರೆ ಏಕೆಂದರೆ ಅವುಗಳು ದಿನನಿತ್ಯದ ಸಹಜ ಕ್ರಿಯೆಗಳನ್ನು ಕುರಿತಾಗಿ ಅನುಕ್ರಮವಾಗಿ ಹೇಳುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರಜ್ಞೆಯ ಈ ಮೂರೂ ಸ್ಥಿತಿಗಳನ್ನು ತಪ್ಪದೇ ಸ್ವಲ್ಪ ಹೆಚ್ಚೂಕಡಿಮೆ ಪ್ರತಿನಿತ್ಯವೂ ಹೊಂದುತ್ತಲೇ ಇರುತ್ತಾನೆ. ಮೊದಲನೆಯ ಸ್ಥಿತಿಯು ಸಹಜ ಚಟುವಟಿಕೆಯನ್ನು ಕುರಿತು ಹೇಳುತ್ತದೆ; ಅದಿಲ್ಲದೇ ಹೋದರೆ ಯಾವುದೇ ವಿಧವಾದ ಕ್ರಿಯೆಗಳು ನಡೆಯುವುದಿಲ್ಲ. ಇಲ್ಲಿ ಪಂಚೇಂದ್ರಿಯಗಳು ಪ್ರಧಾನ ಪಾತ್ರವನ್ನು ಪೋಷಿಸುತ್ತವೆ. ಎರಡನೇ ಹಂತವು ಕನಸಿನ ಸ್ಥಿತಿಗೆ ಒಳಪಡುವ ಹಂತವಾಗಿದ್ದು ಇದು ದೀರ್ಘನಿದ್ರಾವಸ್ಥೆಯ ಮುಂಚಿನ ಹಂತವಾಗಿದೆ. ಇಲ್ಲಿ ಮಾನಸಿಕ ಚಟುವಟಿಕೆಗಳ ಪಾತ್ರವು ಮುಖ್ಯವಾಗಿರುತ್ತದೆ, ಏಕೆಂದರೆ ಕನಸುಗಳು ಮನಸಿನ ಮೂಲಕವೇ ಅನಾವರಣಗೊಳ್ಳುತ್ತವೆ. ಸಾಮಾನ್ಯ ಪ್ರಜ್ಞೆಯ ಕಡೆಯ ಹಂತವು ದೀರ್ಘನಿದ್ರಾವಸ್ಥೆಯ ಹಂತವಾಗಿದ್ದು ಈ ಹಂತದಲ್ಲಿ ಮನಸ್ಸಿನ ಚಟುವಟಿಕೆಯೂ ಸಹ ಇರುವುದಿಲ್ಲ ಅಥವಾ ನಿರ್ಬಂಧಿತವಾಗಿರುತ್ತದೆ.

              ಮೊದಲನೆಯ ಹಂತದಲ್ಲಿ ಮನಸ್ಸು ಪಂಚೇಂದ್ರಿಯಗಳ ಮೂಲಕ ಒಳಗೆ ಬಂದ ಮಾಹಿತಿಯನ್ನು ಆಧರಿಸಿ ಸ್ಪಂದಿಸುತ್ತದೆ. ಈ ಹಂತದಲ್ಲಿ ಮನಸ್ಸು ಅತ್ಯಂತ ಚಟುವಟಿಕೆಯಿಂದ ಕೂಡಿರುತ್ತದೆ ಏಕೆಂದರೆ ಈ ಹಂತದಲ್ಲಿ ವ್ಯಕ್ತಿಯು ಸಂಪೂರ್ಣ ಅರಿವಿನಿಂದ ಕೂಡಿರುವುದರಿಂದ ಅಥವಾ ಪ್ರಜ್ಞೆಯ ಸ್ಥಿತಿಯಾದ ಎಚ್ಚರದ ಸ್ಥಿತಿಯಲ್ಲಿರುವುದರಿಂದ ಅನೇಕಾನೇಕ ಪ್ರಚೋದಕಗಳನ್ನು ಮನಸ್ಸು ಒಳಬರಮಾಡಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ಮನಸ್ಸು ಹಾಗೂ ಪಂಚೇಂದ್ರಿಯಗಳು ಒಂದನ್ನೊಂದು ಪರಸ್ಪರ ಅವಲಂಭಿಸಿರುತ್ತವೆ. ಮನಸ್ಸು ಹಾಗೂ ಪಂಚೇಂದ್ರಿಯಗಳ ನಡುವೆ ಸಂವಹನವು ಅತ್ಯಂತ ತ್ವರಿತವಾಗಿ ಮತ್ತು ಅವ್ಯಾಹತವಾಗಿ ನಡೆಯತ್ತದೆ. ಪಂಚೇಂದ್ರಿಯಗಳು ಮನಸ್ಸಿನ ಮೇಲೆ ಚಿರಕಾಲ ಉಳಿಯುವ ಗ್ರಹಿಕೆಗಳನ್ನು ಅಚ್ಚು ಮಾಡುತ್ತವೆ; ಇವನ್ನೇ ಆಲೋಚನೆಗಳೆಂದು ಕರೆಯಲಾಗಿದೆ ಮತ್ತು ಇವುಗಳು ಪ್ರಜ್ಞೆಯ ಎರಡನೇ ಹಂತವಾದ ಸ್ವಪ್ನದ ಸ್ಥಿತಿಯಲ್ಲಿ ಕನಸುಗಳಾಗಿ ಅನಾವರಣಗೊಳ್ಳುತ್ತವೆ; ೯ನೇ ಸೂತ್ರದಲ್ಲಿ ಹೇಳಿರುವಂತೆ.

              ಪ್ರಜ್ಞೆಯ ಮೂರನೆಯ ಹಂತವು ಒಂದು ವಿಧವಾದ ಭ್ರಮೆಯ ಸ್ಥಿತಿ ಏಕೆಂದರೆ ದೀರ್ಘನಿದ್ರಾವಸ್ಥೆಯ ಈ ಹಂತದಲ್ಲಿ ಒಬ್ಬನು ತನ್ನ ಹುಟ್ಟಿನಿಂದ ಬಂದ ಸಹಜ ಸ್ವಭಾವಗಳನ್ನು ಮರೆತು ಹೋಗುತ್ತಾನೆ. ಅವನ ಮನಸ್ಸು ಮತ್ತು ಇಂದ್ರಿಯಗಳೆರಡೂ ಸಂಪೂರ್ಣವಾಗಿ ವಿರಮಿಸುತ್ತಿರುತ್ತವೆ. ೧೦ನೆಯ ಸೂತ್ರವು ಈ ಹಂತವನ್ನು ಮಾಯೆ ಅಥವಾ ವಂಚನೆಗೊಳಪಡಿಸುವ ಹಂತದೊಂದಿಗೆ ಹೋಲಿಸುತ್ತದೆ. ಮಾಯೆಯ ಮುಸುಕಿನಿಂದಾಗಿ ಒಬ್ಬನು ತನ್ನ ನಿಜವಾದ ಹುಟ್ಟು ಗುಣವನ್ನು ಮರೆತು ಹೋಗುತ್ತಾನೆ. ಈ ಮಾಯೆಯಿಂದಾಗಿಯೇ ಒಬ್ಬನು ಕೆಳಜಾರಿ ಪಾತಾಳದಷ್ಟು ಆಳವಾದ ಬಂಧನಕ್ಕೊಳಗಾಗುವುದಲ್ಲದೇ ಆಸೆಗಳಿಗೆ ದಾಸನಾಗುತ್ತಾನೆ. ‘ತ್ರೈಕ ಸಿದ್ಧಾಂತದ’ ಪ್ರಕಾರ ಮಾಯೆಯೂ ಕೂಡಾ ಶಿವನ ಇಚ್ಛೆಯಾಗಿದೆ ಮತ್ತು ಇದನ್ನೇ ಅದ್ವೈತ ತತ್ವವೂ ಕೂಡಾ ಅನುಮೋದಿಸುತ್ತದೆ. ಈ ಎಲ್ಲಾ ಹಂತಗಳೂ ಯಾವಾಗಲೂ ಜೊತೆಯಾಗಿರುತ್ತವೆ ಆದರೆ ಅವುಗಳಲ್ಲಿ ಒಂದು ಮಾತ್ರ ಪ್ರಧಾನವಾಗಿರುತ್ತದೆ. ಇದು ಕೂಡಾ ತ್ರಿಗುಣಗಳಂತೆ. ಎಲ್ಲಾ ಗುಣಗಳೂ ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿರುತ್ತವೆ, ಆದರೆ ಅವುಗಳಲ್ಲಿ ಒಂದು ಮಾತ್ರ ಪ್ರಮುಖವಾಗಿರುತ್ತದೆ. ಇದೇ ತತ್ವವು ಪಂಚಭೂತಗಳಾದ ಆಕಾಶ, ವಾಯು ಮೊದಲಾದವುಗಳಿಗೂ ಅನ್ವಯಿಸುತ್ತದೆ. ಆದರೆ ೧೦ನೇ ಸೂತ್ರದಲ್ಲಿ ಮಹತ್ವವಾದ ವಿಷಯವು ಅಡಕವಾಗಿದೆ. ದೀರ್ಘನಿದ್ರಾವಸ್ಥೆಯ ಈ ಸ್ಥಿತಿಯಲ್ಲಿ ಉನ್ನತ ಸ್ತರದ ಪ್ರಜ್ಞೆಯು ಅಸ್ತಿತ್ವದಲ್ಲಿರುವುದಿಲ್ಲ ಅಥವಾ ಅದು ಅಜ್ಞಾನಕ್ಕೆ ಸರಿಸಮಾನವಾಗಿರುತ್ತದೆ ಎಂದು ಅದು ಹೇಳುತ್ತದೆ.

            ಇದನ್ನೇ ಇನ್ನೊಂದು ರೀತಿಯಾಗಿ ಹೇಳಬೇಕೆಂದರೆ, ಅವಿದ್ಯೆ ಅಥವಾ ಅಜ್ಞಾನವು ದೀರ್ಘನಿದ್ರಾವಸ್ಥೆಯಲ್ಲದೇ ಬೇರೆಯಲ್ಲ; ಈ ಹಂತದಲ್ಲಿ ಮಾನಸಿಕ ಚಟುವಟಿಕೆಯಾಗಲಿ ಅಥವಾ ದೈಹಿಕ ಚಟುವಟಿಕೆಗಳಾಗಲಿ ಇರುವುದಿಲ್ಲ. ಈ ಮೂರು ಸೂತ್ರಗಳಲ್ಲಿ ದೈನಂದಿನ ಪ್ರಜ್ಞೆಯ ಹಂತಗಳನ್ನು ಕುರಿತಾಗಿ ಮಾತ್ರವೇ ಚರ್ಚಿಸಲಾಗಿದೆ. ಪ್ರಜ್ಞೆಯ ಇದಕ್ಕೂ ಉನ್ನತ ಹಂತಗಳಾದ ತುರ್ಯಾ ಮತ್ತು ತುರೀಯಾತೀತ ಅವಸ್ಥೆಗಳನ್ನು ಕುರಿತಾಗಿ ಮುಂದೆ ಚರ್ಚಿಸೋಣ.

              ಮೇಲೆ ಚರ್ಚಸಿರುವ ವಿಷಯಗಳು ಸಾಮನ್ಯ ಮಾನವರಿಗೆ ಅನ್ವಯಿಸುತ್ತವೆ; ಆದರೆ ಯೋಗಿಗಳು ಇದಕ್ಕೆ ಹೊರತಾಗಿದ್ದಾರೆ. ಅವರ ಪ್ರಜ್ಞೆಯ ಸ್ಥಿತಿಯು ಸಾಮಾನ್ಯ ಮನುಜರಿಗಿಂತ ಬಹಳಷ್ಟು ಭಿನ್ನವಾಗಿರುತ್ತದೆ. ಯೋಗಿಗಳೆಂದರೆ ಸ್ಥೂಲ ಹಾಗೂ ಸೂಕ್ಷ್ಮಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಆ ಹಂತದಲ್ಲಿ ನಿರಂತರವಾಗಿ ಇರಬಲ್ಲ ಶಕ್ತಿಯುಳ್ಳವರು. ಯೋಗಿ ಎಂದರೆ ಜೋಡಿಸುವವನು ಅಥವಾ ಒಂದು ಮಾಡುವವನು. ಅವರ ಚಿತ್ತವು ಯಾವಾಗಲೂ ಲಕ್ಷ್ಯದೆಡೆಗೆ ಕೇಂದ್ರೀಕೃತವಾಗಿರುತ್ತದೆ. ಅವರು ಜಾಗೃತಾವಸ್ಥೆಯಲ್ಲಯೂ ಸಹ ಅಂತಿಮ ಸತ್ಯವಾದ ಶಿವನೊಂದಿಗೆ ಸಂಪರ್ಕವಿಟ್ಟುಕೊಂಡಿರುತ್ತಾರೆ. ಅವರ ಪಂಚೇಂದ್ರಿಯಗಳು ಒಳಗಿರುವ ಶಿವನನ್ನು ರಕ್ಷಿಸುವ ಕವಚವಾಗಿ ಕೇವಲ ಅವನ ಸ್ಥೂಲ ಶರೀರವನ್ನು ನಿರ್ವಹಣೆ ಮಾಡಲಿಕ್ಕಾಗಿ ಇರುತ್ತವೆ. ಯಾವುದೇ ವಿಧವಾದ ಸ್ಥೂಲ ವಿಷಯಗಳೆಡೆಗೆ ಅವನು ಲಕ್ಷ್ಯ ಕೊಡುವುದಿಲ್ಲ ಅಥವಾ ಆಸಕ್ತಿಯುಳ್ಳವನಾಗಿರುವುದಿಲ್ಲ. ಅವನ ಮನಸ್ಸಿನ ಮೇಲೆ ಯಾವುದೇ ವಿಧವಾದ ಬಾಹ್ಯ ವಿಷಯಗಳ ಗುರುತುಗಳು ಮೂಡದೇ ಇರುವುದರಿಂದ ಅವನು ತನ್ನ ಕನಸಿನ ಸ್ಥಿತಿಯಲ್ಲಿಯೂ ಸಹ ಶಿವನೊಂದಿಗೆ ಸಹಯೋಗ ಹೊಂದಿರುತ್ತಾನೆ. ಅವನ ಆಂತರಿಕ ಗ್ರಹಿಕೆಗಳೂ ಕೂಡಾ ಯಾವುದೇ ವಿಧವಾದ ಗಮನಾರ್ಹವಾದ ಬದಲಾವಣೆಗಳನ್ನು ಹೊಂದುವುದಿಲ್ಲ ಮತ್ತದು ಶಿವನ ಹೊರತಾಗಿ ಬೇರೆ ವಿಧವಾದ ಕನಸುಗಳನ್ನು ಮೂಢಿಸಲು ಅಸಮರ್ಥವಾಗಿರುತ್ತವೆ. ಅವನ ಇಂದ್ರಿಯಗಳೂ ಸಹ ತಮ್ಮ ನಿರ್ದೇಶಿತ ಕಾರ್ಯಗಳನ್ನು ಕೈಗೊಳ್ಳದೇ ಇರುವುದರಿಂದ ಅವುಗಳು ಅವನ ಮನಸ್ಸಿನ ಮೇಲೆ ಶಿವನ ಹೊರತಾಗಿ ಯಾವುದೇ ವಿಧವಾದ ಪರಿಣಾಮವನ್ನುಂಟು ಮಾಡಲಾರವು. ಯಾವುದೇ ವಿಧವಾದ ವಿಕಾರಗಳಿಲ್ಲದೇ ಅವನ ಪ್ರಜ್ಞೆಯು ದೀರ್ಘನಿದ್ರಾವಸ್ಥೆಯ ಹಂತದಲ್ಲಿ ಸಮಾಧಿ ಸ್ಥಿತಿಯನ್ನು ತಲುಪುತ್ತದೆ ಅವನು ತನ್ನ ಸ್ವ-ಇಚ್ಛೆಯ ಮೇರೆಗೆ ಸಮಾಧಿ ಹಂತಕ್ಕೆ ಹೋಗಬಲ್ಲ ಮತ್ತು ಅವನು ವಾಸ್ತವವಾಗಿ ಬಹುತೇಕ ಅದೇ ಸ್ಥಿತಿಯಲ್ಲಿರುತ್ತಾನೆ. ಸಮಾಧಿಯನ್ನು ಎಲ್ಲಾ ವಿಧವಾದ ಮಾನಸಿಕ ಕ್ರಿಯೆಗಳನ್ನು ನಿರ್ಬಂಧಿಸುವುದರ ನಿರಂತರ ಅಭ್ಯಾಸದ ಮೂಲಕ ಹೊಂದಬಹುದು ಮತ್ತು ಈ ಹಂತದಲ್ಲಿ ಮನಸ್ಸು ಕೇವಲ ವಿಕಾರವಿಲ್ಲದ ಗುರುತುಗಳನ್ನಷ್ಟೇ (ನೆನಪುಗಳನ್ನಷ್ಟೇ) ಉಳಿಸಿಕೊಳ್ಳುತ್ತದೆ. ಪರ್ಯಾಯ ವಸ್ತುವು ಪರಿಗಣನೆಗೆ ಸಿಕ್ಕಾಗ ಮಾತ್ರ ವಿವಿಧ ರೀತಿಯ ಗ್ರಹಿಕೆಗಳನ್ನು ಹೊಂದಲು ಸಾಧ್ಯ. ಆದರೆ ಈ ಹಂತದಲ್ಲಿ ಅವನಿಗೆ ಪರ್ಯಾಯ ವಸ್ತುವು ಪರಿಗಣನೆಗೆ ದೊರೆಯುವುದಿಲ್ಲ; ಏಕೆಂದರೆ ಅವನು ಶಿವನನ್ನೇ ಎಲ್ಲಾ ಎಂದು ತಿಳಿಯುತ್ತಾನದ್ದರಿಂದ. ಅವನು ತಾನು ಶಿವನಿಂದ ಪ್ರತ್ಯೇಕನಲ್ಲವೆಂದು ಮನಗಂಡಿರುತ್ತಾನೆ. ಅವನಿಗೆ ತಿಳಿಯಲ್ಪಡಬೇಕಾಗಿರುವುದು, ತಿಳಿದವನು ಮತ್ತು ಅದನ್ನು ಹೊಂದಲು ಇರುವ ಲಕ್ಷ್ಯ ಇದಾವುದೂ ಬೇರೆಯಲ್ಲ. ಅವನು ಶಿವನ ಮೇಲೆ ನಿರಂತರವಾದ (ಅಡೆತಡೆಯಿಲ್ಲದ/ಎಡೆಯಿಲ್ಲದ) ಚಿತ್ತವನ್ನು ಕೇಂದ್ರೀಕರಿಸುತ್ತಾನೆ. ಅವನು ಉನ್ನತ ಸ್ಥಾಯಿಗಳಾದ ತುರ್ಯಾ ಮತ್ತು ತುರೀಯಾತೀತ ಹಂತಗಳನ್ನು ತನ್ನ ಸ್ವಂತ ಇಷ್ಟದಂತೆ ಹೊಂದಬಲ್ಲ ಮತ್ತವನು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ವರ್ಗಾವಣೆಗೊಳ್ಳುವುದನ್ನು ಬಹಳ ಸುಲಭವಾಗಿ ಮಾಡಬಲ್ಲ. ಈ ಹಂತವನ್ನು ಹೊಂದಲು ಅವನ ಸ್ವೇಚ್ಛಾಚಾರಿಯಾದ ಮನಸ್ಸು ಪ್ರಧಾನವಾದ ಭೂಮಿಕೆಯನ್ನು ಪೋಷಿಸಿರುತ್ತದೆ.

Turyā तुर्या (262)

೨೬೨. ತುರ್ಯಾ

           ಇದು ಪ್ರಜ್ಞೆಯ ನಾಲ್ಕನೆಯ ಹಂತವಾಗಿದೆ; ಇದು ಸ್ವಯಂಪ್ರೇರಿತವಾಗಿ ಅನುಭವಕ್ಕೆ ಬಾರದು. ಇದನ್ನು ಧ್ಯಾನದ ಮೂಲಕವಷ್ಟೇ ಹೊಂದಬೇಕು ಮತ್ತು ಈ ಹಂತವು ಮೊದಲಿನ ಮೂರು ಹಂತಗಳಲ್ಲಿ ಯಾವುದರೊಂದಿಗೂ ಸಂಬಂಧವನ್ನು ಹೊಂದಿಲ್ಲ. ಎಚ್ಚರದ ಸ್ಥಿತಿಯಲ್ಲಿ ನಮ್ಮ ಪಂಚೇಂದ್ರಿಯಗಳು ಪ್ರಜ್ಞೆಯೊಂದಿಗೆ ಸಹಯೋಗ ಹೊಂದಿರುತ್ತೇವೆ. ಕನಸಿನ ಹಂತದಲ್ಲಿ ನಮ್ಮ ಮನಸ್ಸು ಪ್ರಜ್ಞೆಯೊಂದಿಗೆ ಸಹಯೋಗವನ್ನು ಹೊಂದಿರುತ್ತದೆ. ಮೂರನೆಯ ಹಂತವಾದ ಕನಸುರಹಿತ ಸ್ಥಿತಿಯಲ್ಲಿ ಪ್ರಜ್ಞೆಗೆ ಯಾವುದೇ ವಿಧವಾದ ಪಾತ್ರವಿರುವುದಿಲ್ಲ ಏಕೆಂದರೆ ಈ ಹಂತದಲ್ಲಿ ಮನಸ್ಸು ವಿರಾಮದಲ್ಲಿರುತ್ತದೆ. ಆದರೆ ತುರ್ಯಾದಲ್ಲಿ ಪ್ರಜ್ಞೆಯ ಅರಿವಾಗಬೇಕಾದರೆ ಒಬ್ಬನು ತನ್ನ ಮನಸ್ಸನ್ನು ತರಬೇತುಗೊಳಿಸಿಕೊಳ್ಳಬೇಕು. ಇದು ಕೇವಲ ಸಾಧನೆಯಿಂದ ಮಾತ್ರವೇ ಸಾಧ್ಯವಾಗುತ್ತದೆ. ಈ ಹಂತದಲ್ಲಿ ಒಬ್ಬನು ಪರಬ್ರಹ್ಮ ಅಥವಾ ಆತ್ಮನಾಗಿರುವುದಿಲ್ಲ; ಆದರೆ ಒಬ್ಬನು ಮುಂದಿನ ಹಂತಕ್ಕೆ ಸಾಗಬಲ್ಲನಾದರೆ ಅವನು ತುರಿಯಾತೀತ ಅವಸ್ಥೆಯನ್ನು ಹೊಂದಿ ಪರಬ್ರಹ್ಮದೊಂದಿಗೆ ಐಕ್ಯತೆಯನ್ನು ಹೊಂದಬಹುದು. ಒಂದು ವೇಳೆ ಅವನು ತುರ್ಯಾವಸ್ಥೆಯಿಂದ ಕೆಳಗೆ ಬಿದ್ದರೆ (ಅಧಃಪತನ ಹೊಂದಿದರೆ) ಅವನು ಮತ್ತೇ ಪ್ರಾಪಂಚಿಕ ಬಂಧನಗಳಲ್ಲಿ ಸಿಲುಕಿ ಮತ್ತದರ ದುಃಖ ಮತ್ತು ಯಾತನೆಗಳಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ದೇವಿಯು ತುರ್ಯಾವಸ್ಥೆಯ ರೂಪದಲ್ಲಿಯೂ ಇರುತ್ತಾಳೆ.

            ಪ್ರಜ್ಞೆಯ ತುರ್ಯಾವಸ್ಥೆಯ ಹಂತವು ಪ್ರಜ್ಞೆಯ ಉಳಿದ ಮೂರು ಹಂತಗಳನ್ನು ಸಾಕ್ಷೀಭೂತವಾಗಿ ನೋಡುತ್ತದೆ (ದೀರ್ಘನಿದ್ರಾವಸ್ಥೆಯಲ್ಲಿ, ಪ್ರಜ್ಞೆಯು ನಿಷ್ಕ್ರಿಯವಾಗಿರುತ್ತದೆ). ಪ್ರಜ್ಞೆಯು ಮೊದಲಿನ ಮೂರು ಹಂತಗಳಲ್ಲಿ ಬದಲಾವಣೆಗೆ ಒಳಪಡುತ್ತದೆ. ಆದರೆ ತುರ್ಯಾವಸ್ಥೆಯಲ್ಲಿ ಕೇವಲ ಪ್ರಜ್ಞೆ ಮಾತ್ರವೇ ಇದ್ದು ಅದು ಇದುವರೆಗೆ ತನ್ನ ಅನುಭವಕ್ಕೆ ಬರದೇ ಇರುವ ತನಗಿಂತ ಉನ್ನತವಾದದ್ದರ ಕುರಿತಾಗಿ ನಿರೀಕ್ಷಿಸುತ್ತದೆ. ಆದ್ದರಿಂದ ಈ ಹಂತದಲ್ಲಿ ಸಾಮಾನ್ಯ ಪ್ರಜ್ಞೆಯ ಅಸ್ತಿತ್ವವಿರುವುದಿಲ್ಲ. ಯಾವಾಗ ನಾವು ಪ್ರಜ್ಞೆಯ ಕುರಿತಾಗಿ ಮಾತನಾಡುತ್ತೇವೆಯೋ ಆಗ ಲಕ್ಷ್ಯ (ಗುರಿ) ಮತ್ತು ಅದನ್ನು ಹೊಂದುವವನ ಕುರಿತಾಗಿ ಹೇಳುತ್ತೇವೆ. ಆದರೆ ಇಲ್ಲಿ ಗುರಿ ಮತ್ತು ಅದನ್ನು ಹೊಂದುವವನು ಇರುವುದಿಲ್ಲ ಮತ್ತು ವಾಸ್ತವವಾಗಿ ಏನೂ ಇರುವುದಿಲ್ಲ. ’ಏನೂ ಇಲ್ಲದಿರುವಿಕೆ’ಯ ಈ ಹಂತವು ಪ್ರಜ್ಞೆಯ ರೂಪಾಂತರದ ಹಂತಕ್ಕೆ ಕೊಂಡೊಯ್ಯುತ್ತದೆ. ಬಹುಶಃ ಇದನ್ನು ಮೊಳಕೆಯೊಡೆಯಲು ಸಿದ್ಧವಿರುವ ಬೀಜದ ಸ್ಥಿತಿಯೆಂದು ವ್ಯಾಖ್ಯಾನಿಸಬಹುದು. ಹೀಗೆ ಸಿದ್ದವಾದ ಪ್ರಜ್ಞೆಯು ಒಂದೇ ವಸ್ತುವಿನ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುವತ್ತ ಸಾಗುತ್ತದೆ ಅದು ಬ್ರಹ್ಮವನ್ನು ಕುರಿತಾಗಿ ತಿಳುದುಕೊಳ್ಳಲು ಉತ್ಸುಕವಾಗಿರಬಹುದು ಅಥವಾ ಅದರೊಂದಿಗೆ ತಾದಾತ್ಮ್ಯವನ್ನು ಹೊಂದುವುದೂ ಆಗಿರಬಹುದು. ಈ ಸ್ಥಿತಿಯಲ್ಲಿ ಅಂತಿಮ ಹಂತವನ್ನು ಇನ್ನೂ ಸೇರಬೇಕಾಗಿದೆ ಎನ್ನುವುದನ್ನು ಗಮನಿಸಿ.

ಶಿವಸೂತ್ರದಲ್ಲಿ (೧.೭) ಪ್ರಸ್ತಾವಿಸಿರುವ ಹಾಗೆ ತುರ್ಯಾದ ಬಗ್ಗೆ ಇನ್ನಷ್ಟು ವಿವರಗಳು:

              “ಜಾಗ್ರತ್ಸ್ವಪ್ನಸುಷುಪ್ತಭೇದೇ ತುರ್ಯಾಭೋಗಸಂಭವಃ (ಸೂತ್ರ ೧.೭)”

               ಪ್ರಜ್ಞೆಯ ಮೂರು ಹಂತಗಳಿವೆ; ಅವೆಂದರೆ ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ. ಇವು ಮೂರೂ ಹಂತಗಳು ಸಾಮಾನ್ಯ ಮನುಜನ ಪ್ರಜ್ಞಾವಸ್ಥೆಗಳಾಗಿವೆ. ಭೇದ ಎಂದರೆ ವ್ಯತ್ಯಾಸ. ಈ ಮೂರು ವಿಧವಾದ ಸಾಮಾನ್ಯ ಪ್ರಜ್ಞೆಯ ಹಂತಗಳಿಗಿಂತ ಉನ್ನತವಾದ ಇನ್ನರಡು ಹಂತಗಳಿವೆ. ಅವೆರಡರಲ್ಲಿ ಈ ಸೂತ್ರವು ಪ್ರಜ್ಞೆಯ ನಾಲ್ಕನೆಯ ಆಯಾಮವಾದ ತುರ್ಯಾದ ಕುರಿತಾಗಿ ಚರ್ಚಿಸುತ್ತದೆ. ಆಭೋಗ ಎಂದರೆ ಆನಂದದ ಸ್ಥಿತಿ (ಅಭೋಗ ಎಂದರೆ ಆನಂದವಿಲ್ಲದಿರುವಿಕೆ). ಸಂಭವಃ ಎಂದರೆ ಇರುವಿಕೆ.

             ಈ ಸೂತ್ರವು ಪ್ರಜ್ಞೆಯ ಮೊದಲ ಮೂರು ಹಂತಗಳಲ್ಲಿ ಕೂಡ ಆನಂದದ ಸ್ಥಿತಿಯಾದ ನಾಲ್ಕನೆಯ ಹಂತವಾದ ತುರ್ಯಾವು ಇರುತ್ತದೆ ಎಂದು ಹೇಳುತ್ತದೆ. ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ರೂಪಾಂತರಕ್ಕೆ ಒಳಗಾದಾಗ ಒಂದು ಹಂತದಲ್ಲಿ ಭೌತಿಕ ಪ್ರಜ್ಞೆ ಹಾಗೂ ಆಧ್ಯಾತ್ಮಿಕ ಪ್ರಜ್ಞೆಗಳು ಒಂದೆಡೆ ಕೂಡುವ ಜಾಗವಿರುತ್ತದೆ. ಈ ಜಾಗದಿಂದ ಪ್ರಾರಂಭಿಸಿ ಯಾವಾಗ ಒಬ್ಬನು ಆಧ್ಯಾತ್ಮಿಕ ಪಥದಲ್ಲಿ ಮುಂದುವರೆಯುತ್ತಾನೆಯೋ ಆಗ ಅವನ ಅಹಂಕಾರವು ಕರಗುತ್ತಾ ಬರುತ್ತದೆ. ಯಾವಾಗ ಒಬ್ಬನ ಅಹಂಕಾರವು ಕರಗುತ್ತಾ ಹೋಗುತ್ತದೆಯೋ ಆಗ ಅದು ಆತ್ಮವನ್ನು ಬ್ರಹ್ಮಾಂಡ ಪ್ರಜ್ಞೆಯೆಡೆಗೆ ಕೊಂಡೊಯ್ಯುತ್ತದೆ ಆಗ ಪರಬ್ರಹ್ಮದ ಸರ್ವಾಂತರಯಾಮಿತ್ವವು ಅನಾವರಣಗೊಳ್ಳುತ್ತಾ ಹೋಗುತ್ತದೆ. ಧ್ಯಾನದಲ್ಲಿ ಇದನ್ನೇ ಕರಾರುವಾಕ್ಕಾಗಿ ಅಭ್ಯಾಸ ಮಾಡಬೇಕು. ಪ್ರಜ್ಞೆಯ ನಾಲ್ಕನೆಯ ಹಂತವು ನಿತ್ಯದ ಪ್ರಜ್ಞಾವಸ್ಥೆಗಳಲ್ಲಿಯೂ ಇರುತ್ತದೆ ಆದರೆ ಒಬ್ಬನು ಅಜ್ಞಾನ ಮತ್ತು ಅಹಂಕಾರಗಳಿಂದ ಆವರಿಸಲ್ಪಟ್ಟಿರುವುದರಿಂದ ಇದು ಬೆಳಕಿಗೆ ಬರುವುದಿಲ್ಲ. ಯಾವಾಗ ಅಹಂಕಾರವು ಕರಗುತ್ತಾ ಹೋಗುತ್ತದೆಯೋ ಆಗ ಅಜ್ಞಾನದ ಪೊರೆಯೂ ಮಾಯವಾಗುತ್ತಾ ಹೋಗಿ ಅದು ಅತ್ಮಸಾಕ್ಷಾತ್ಕರಕ್ಕೆ ದಾರಿ ಮಾಡಿ ಕೊಡುತ್ತದೆ. ಈ ವಿಧವಾದ ರೂಪಾಂತರವು ತುರ್ಯಾವಸ್ಥೆಯಲ್ಲಿ ಉಂಟಾಗುತ್ತದೆ.

          ತುರ್ಯಾವಸ್ಥೆಯು ವ್ಯಾಖ್ಯಾನಕ್ಕೆ ನಿಲುಕದ್ದು, ಕಲ್ಪನೆಗೆ ಸಿಲುಕದ್ದು ಮತ್ತು ವಿವರಸಲಾಗದ್ದು; ಇಲ್ಲಿ ಹಲವು ವಿಧವಾದ ಇಂದ್ರಿಯ ಗ್ರಹಿಕೆಗಳು ಶಿವನ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತವೆ. ಮಾಂಡೂಕ್ಯ ಉಪನಿಷತ್ತು (೭) ಹೀಗೆ ಹೇಳುತ್ತದೆ, " ತುರ್ಯಾವೆನ್ನುವುದು ಆಂತರಿಕವಾಗಿ ಏನು ನಡೆಯುತ್ತದೆನ್ನುವುದನ್ನು ಹೇಳುವ ಪ್ರಜ್ಞೆಯಲ್ಲ ಮತ್ತದು ಬಾಹ್ಯವಾಗಿ ಏನು ನಡೆಯುತ್ತಿದೆ ಎಂದು ಹೇಳುವ ಪ್ರಜ್ಞೆಯೂ ಅಲ್ಲ". ಅದು ಯಾವುದೇ ವಿಧವಾದ ವಸ್ತುಗಳ ನಡುವೆ ಇರುವಂಥಹುದ್ದಲ್ಲ. ಹಾಗೆಂದು ಅದು ಪ್ರಜ್ಞೆಯ ಮುದ್ದೆಯೂ ಅಲ್ಲ. ಅದು ಎಲ್ಲಾ ವಸ್ತುಗಳಲ್ಲಿ ಒಂದೇ ಬಾರಿಗೆ ಲಭ್ಯವಾಗುವ ಪ್ರಜ್ಞೆಯೂ ಅಲ್ಲ ಮತ್ತದು ನಿಃಷ್ಪ್ರಜ್ಞೆಯೂ ಅಲ್ಲ. ಅದು ಅಗೋಚರವಾದದ್ದು ಮತ್ತದು ಯಾವುದೇ ವಿಧವಾಗಿ ಉಪಯೋಗಿಸುವಂಥಹುದ್ದಲ್ಲ, ಅದು ಯಾವುದೇ ವಿಧವಾದ ಕರ್ಮೇಂದ್ರಿಯಗಳಿಗೆ ಅಥವಾ ಗ್ರಹಣೇಂದ್ರಿಯಗಳಿಗೆ ಅಥವಾ ಆಲೋಚನೆಗೆ ನಿಲುಕಲಾರದ್ದು. ಅದರಲ್ಲಿ ಕೇವಲ ಆತ್ಮಪ್ರಜ್ಞೆ ಮಾತ್ರವೇ ಇದ್ದು ಅದು ಎಲ್ಲಾ ವಿಧವಾದ ಪ್ರಾಪಂಚಿಕತೆಯಿಂದ ಮುಕ್ತವಾಗಿರುವಂಥಹದ್ದು. ಅದು ಶಾಂತಿ ಮತ್ತು ಎಲ್ಲಾ ವಿಧವಾದ ಒಳ್ಳೆಯದರ ಮೂರ್ತರೂಪವಾಗಿದ್ದು ಅದು ಅದ್ವಿತೀಯವಾದದ್ದು".

              ಪ್ರಜ್ಞೆಯ ನಾಲ್ಕನೆಯ ಹಂತವು ಎಲ್ಲಾ ಮನುಷ್ಯರ ಮೂರು ದೈನಂದಿನ ಪ್ರಜ್ಞಾವಸ್ಥೆಗಳಲ್ಲಿ ಯಾವಾಗಲೂ ಸಾಕ್ಷೀಭೂತದಂತಿರುತ್ತದೆ. ಇದು ಮೊದಲ ಮೂರು ಹಂತಗಳ ಪ್ರಜ್ಞೆಗೆ ವಿರುದ್ಧವಾಗಿದೆ; ಏಕೆಂದರೆ ಅವು ಒಂದು ಸಮಯದಲ್ಲಿ ಒಂದು ಮಾತ್ರವೇ ಇರಬಲ್ಲವು ಅಂದರೆ ಏಕಕಾಲದಲ್ಲಿ ಅವೆಲ್ಲವೂ ಒಟ್ಟಾಗಿ ಇರಲಾರವು. ಒಬ್ಬನು ಎಚ್ಚರವಾಗಿರುವಾಗ ಅವನು ನಿದ್ರಿಸಲಾರ ಮತ್ತು ಅವನು ಕನಸು ಕಾಣುತ್ತಿರಬೇಕಾದರೆ ಅವನು ಎಚ್ಚರದಿಂದಿರಲಾರ ಮತ್ತವನು ದೀರ್ಘನಿದ್ರೆಯಲ್ಲಿರುವಾಗ ಅವನು ಎಚ್ಚರವಾಗಿರಲಾರ ಅಥವಾ ಕನಸು ಕಾಣಲಾರ. ಆದರೆ ತುರ್ಯಾವು ಈ ಮೂರು ಹಂತದ ಪ್ರಜ್ಞೆಗಳಲ್ಲಿ ಉಪಸ್ಥಿತವಾಗಿರುತ್ತದೆ ಆದರೆ ಅದನ್ನು ಮಾಯೆಯು ಮರೆಮಾಚಿ ಅದು ಅನುಭವಕ್ಕೆ ಬಾರದಂತೆ ಮಾಡುತ್ತದೆ. ತುರ್ಯಾವಸ್ಥೆಯು ಧ್ಯಾನದ ಉನ್ನತ ಹಂತಗಳಲ್ಲಿ ಮಾತ್ರವೇ ಅನುಭವಕ್ಕೆ ಬರುತ್ತದೆ. ಪ್ರಾಥಮಿಕ ಹಂತದ ಧ್ಯಾನವು ಕೇವಲ ಭೂಮಿಕೆಯನ್ನು ಸಿದ್ಧಪಡಿಸಿ ಶಿವನ ಸಾಕ್ಷಾತ್ಕಾರಕ್ಕೆ ಸರಿಯಾದ ಬುನಾದಿಯನ್ನು ಒದಗಿಸುತ್ತವೆ. ಹೀಗೆ ಹಾಕಿದ ಮೂಲಪ್ರಜ್ಞೆಯ ಬುನಾದಿಯು ದುರ್ಬಲವಾಗಿದ್ದಲ್ಲಿ ಅತ್ಯಂತ ಪ್ರಬಲನಾದ ಶಿವನು ಆವಿರ್ಭಾವಗೊಳ್ಳಲಾರ. ಯಾವಾಗ ಪೂರ್ವ ಸಿದ್ಧತೆಯ ಕೆಲಸಗಳು ಪೂರ್ಣಗೊಳ್ಳುತ್ತವೆಯೋ ಆಗ ತುರ್ಯಾವು ಪ್ರಜ್ಞೆಯನ್ನು ಆಧಿಗಮಿಸಿತ್ತದೆ ಮತ್ತು ಅಲ್ಲಿಂದ ಮುಕ್ತಿಯು ಪ್ರಾರಂಭವಾಗುತ್ತದೆ. ಇದರ ಅರ್ಥ ಈ ದೇಹವು ನಶಿಸುತ್ತದೆ (ಸಾಯುತ್ತದೆ) ಎಂದಲ್ಲ, ಆದರೆ ನಮ್ಮ ಪ್ರಜ್ಞೆಯು ಪೂರ್ವ ಸಿದ್ಧತೆಯ ಕೆಲಸದಿಂದಾಗಿ ಪರಿಶುದ್ಧವಾದಾಗ ಅದು ತುರ್ಯಾವು ಪ್ರಜ್ಞೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಸುಲಭವಾಗಿಸುತ್ತದೆ. ಈ ಹಂತದಲ್ಲಿ ಅವನು ಮೊದಲ ಮೂರೂ ಹಂತಗಳನ್ನು ಅನುಭವಿಸಿದರೂ ಸಹ ಅವನ ಪ್ರಜ್ಞೆಯ ಸ್ವರೂಪವು ಸಂಪೂರ್ಣವಾಗಿ ರೂಪಾಂತರ ಹೊಂದಿರುವುದರಿಂದ ಅದು ಶಿವನೆಡೆಗೆ ಹತ್ತಿರ ಹತ್ತಿರಕ್ಕೆ ಹೋಗಿ ಅದು ಶಿವನ ಅಂತಿಮ ಸಾಕ್ಷಾತ್ಕಾರವನ್ನು ಯಾವಾಗ ಬೇಕಾದರೂ ಹೊಂದಲು ಅನುವಾಗಿರುತ್ತದೆ.

Sarvāvasthā-vivarjitā सर्वावस्था-विवर्जिता (263)

೨೬೩. ಸರ್ವಾವಸ್ಥಾ-ವಿವರ್ಜಿತಾ

              ಹಿಂದಿನ ನಾಮಗಳು ದೇವಿಯು ಎಲ್ಲಾ ಹಂತಗಳಲ್ಲಿ ಅಸ್ತಿತ್ವದಲ್ಲಿರುತ್ತಾಳೆಂದು ದೃಢಪಡಿಸಿದವು. ಈಗ ಆಕೆಯು ಈ ಮೂರು ಹಂತಗಳಿಗೆ ಅತೀತಳಾಗಿದ್ದಾಳೆ ಎಂದು ಹೇಳುವುದರ ಮೂಲಕ ಪರಬ್ರಹ್ಮದ ಇನ್ನೊಂದು ಲಕ್ಷಣವನ್ನು ಹೇಳಲಾಗಿದೆ. ಸಾಕ್ಷಾತ್ ದೇವಿಯೇ ಪರಬ್ರಹ್ಮವಾಗಿರುವುದರಿಂದ ಆಕೆಯು ನಮ್ಮೊಳಗೆ ಇದ್ದುಕೊಂಡು ಎಲ್ಲಾ ಹಂತಗಳಿಗೆ ಕೇವಲ ಸಾಕ್ಷಿಯಾಗಿರುತ್ತಾಳೆ ಆದರೆ ಅವಳು ಯಾವುದೇ ಹಂತದಲ್ಲೂ ಅವುಗಳೊಂದಿಗೆ ಸಂಬಂಧವನ್ನು ಹೊಂದಿರುವುದಿಲ್ಲ. ಏಕೆಂದರೆ ಬ್ರಹ್ಮಕ್ಕೆ ಗುಣ-ಲಕ್ಷಣಗಳಿರುವುದಿಲ್ಲ. ಮೊದಲ ನಾಲ್ಕು ಹಂತಗಳಲ್ಲಿ ಪ್ರಜ್ಞೆಯ ಅಸ್ತಿತ್ವವಿತ್ತು ಆದರೆ ಐದನೆಯ ಹಂತವಾದ ತುರ್ಯಾತೀತದಲ್ಲಿ ಪ್ರಜ್ಞೆ ಎನ್ನುವುದೇ ಇರುವುದಿಲ್ಲ, ಇದು ಪ್ರಜ್ಞೆಗೆ ಅತೀತವಾಗಿರುತ್ತದೆ. ಯಾವಾಗ ಈ ಹಂತವು ಹೊಂದಲ್ಪಡುತ್ತದೆಯೋ ಆಗ ಕೆಳಗಿನ ನಾಲ್ಕು ಹಂತಗಳಿಗೆ ಹಿಂದಿರುಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಬ್ಬನು ಕೆಲವು ಸಮಯದವರೆಗೆ ತುರ್ಯಾವಸ್ಥೆಯನ್ನು ಅನುಭವಿಸದ ಹೊರತು ಅವನು ಈ ತುರ್ಯಾತೀತ ಅವಸ್ಥೆಯನ್ನು ಹೊಂದಲಾರ. ಆಭ್ಯಾಸದಿಂದಲೇ ಸಕಲ ಕಾರ್ಯಗಳು ಸಿದ್ಧಿಸುತ್ತವೆ ಎನ್ನುವ ನಾನ್ನುಡಿಯು ಇಲ್ಲಿ ಅತ್ಯಂತ ಸೂಕ್ತವಾಗಿ ಅಡಕವಾಗುತ್ತದೆ. ಇಲ್ಲಿ  ದ್ವೈತವಿಲ್ಲ;  "ಸರ್ವಂ ಈಶ್ವರಮಯಂ ಜಗತ್" ಅಂದರೆ ಎಲ್ಲವೂ ಈಶ್ವರಮಯವಾಗಿದೆ ಅಥವಾ ಬ್ರಹ್ಮಮಯವಾಗಿದೆ. ವ್ಯಕ್ತಿಯು ಸ್ವಯಂ ಈಶ್ವರನೇ ಆಗುತ್ತಾನೆ. ಅವನು ಪ್ರಾರ್ಥನೆಯನ್ನು ಮಾಡುವುದಿಲ್ಲ, ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವುದಿಲ್ಲ, ಜಪ-ತಪಾದಿಗಳನ್ನು ಮಾಡುವುದಿಲ್ಲ ಅಥವಾ ಗುಡಿ-ಗುಂಡಾರಗಳಿಗೆ ಹೋಗುವುದಿಲ್ಲ, ಮತ್ತವನು ಯಾವುದೇ ವಿಧವಾದ ಯಜ್ಞ-ಯಾಗಾದಿಗಳನ್ನು ಸಹ ಮಾಡುವುದಿಲ್ಲ. ಅವನು ಏನು ಮಾಡಿದರೂ ಸಹ ಅದು ಶಿವನಿಗಾಗಿ ಮಾಡಲ್ಪಡುವುದು ಎಂದು ಅವನಿಗೆ ತಿಳಿದಿದೆ. ಅವನು ತಿಂದಾಗ ಶಿವನು ತಿನ್ನುತ್ತಾನೆ. ಅವನು ಸ್ನಾನ ಮಾಡಿದಾಗ ಶಿವನು ಸ್ನಾನ ಮಾಡುತ್ತಾನೆ. ಅಲ್ಲಿ ದ್ವೈತವಿಲ್ಲ, ಮಾಯೆಯಿಲ್ಲ ಮತ್ತು ಭೇದವಿಲ್ಲ. ಅವನು ಕೆಂಪು ಅಥವಾ ಬಿಳಿ ವಸ್ತ್ರಗಳನ್ನು ಉಡುವುದಿಲ್ಲ, ಅವನು ಯಾರಂತೆ ಬೇಕಾದರೂ ಉಡಿಗೆ ತೊಡಬಲ್ಲ. ಅವನು ನಮ್ಮಂಥೆ ನಡೆದಾಡುತ್ತಾನೆ ಮತ್ತು ಮಾತನಾಡುತ್ತಾನೆ. ಅವನನ್ನು ಶಿವನೆಂದು ಗುರುತಿಸಲು ಅತ್ಯಂತ ಕಠಿಣವಾದದ್ದು. ಶಿವನು ಎಲ್ಲೆಡೆ ಇರುವಂತೆ ಈ ಯೋಗಿಯೂ ಸಹ ನಮ್ಮೊಳಗೆ ಒಂದಾಗಿರುತ್ತಾನೆ. ಈ ಹಂತವು ಉಳಿದೆಲ್ಲಾ ಹಂತಗಳಿಗೆ ಅತೀತವಾಗಿರುತ್ತದೆ ಆದರೆ ದೇವಿಯು ಈ ಹಂತದಲ್ಲೂ ಉಪಸ್ಥಿತಳಾಗಿರುತ್ತಾಳೆ. ಇಲ್ಲಿ ಶಿವನೆಂದರೆ ಶಕ್ತಿಯೂ ಆಗಿದ್ದಾಳೆ.

              ಶಿವ ಸೂತ್ರಗಳು (೩.೨೭,೨೮ ಮತ್ತು ೨೯) ಈ ಹಂತವನ್ನು ತಲುಪಿದ ವ್ಯಕ್ತಿಯ ಲಕ್ಷಣಗಳನ್ನು ಅನಾವರಣಗೊಳಿಸುತ್ತವೆ. ಅವನು ಯಾವಾಗಲೂ ’ಪರಮೋನ್ನತವಾದ ನಾನು’ ಪ್ರಜ್ಞೆಯಿಂದ ತುಂಬಿದವನಾಗಿದ್ದು ಅವನು ಈ ವಿಧವಾಗಿ ಭಾವಿಸುತ್ತಾನೆ, "ನಾನು ಅತ್ಯುನ್ನತವಾದ ಆತ್ಮವಾಗಿದ್ದು ಮತ್ತು ನಾನು ಶಿವನಾಗಿದ್ದೇನೆ". ಆತ್ಮ ಜ್ಞಾನವು ಅವನಿಗೆ ದೊರತಿರುವ ವರವಾಗಿದ್ದು ಅದನ್ನು ಅವನು ಪಸರಿಸಬೇಕಾಗಿದೆ ಎನ್ನುವುದನ್ನು ಅವನು ಅರಿಯು‌ತ್ತಾನೆ. ಅವನು ಶಕ್ತಿಗಳ (ಸಿದ್ಧಿಗಳ) ಮೇಲೆ ಪ್ರಭುತ್ವವನ್ನು ಸಾಧಿಸಿ ಅವನು ಜ್ಞಾನ ಮತ್ತು ವಿವೇಕಗಳ ದಾಳವಾಗುತ್ತಾನೆ.

              ಮಹರ್ಷಿ ಪತಂಜಲಿಯು ಮನಸ್ಸಿನ ಪರಿಶುದ್ಧತೆಯ ಮಹತ್ವವನ್ನು ಕುರಿತು ತನ್ನ ಯೋಗ ಸೂತ್ರಗಳಲ್ಲಿ ಒತ್ತಿ ಹೇಳುತ್ತಾನೆ. ಅವನು ಹೇಳುತ್ತಾನೆ, (೧.೪೭),  ಭೇದವಿಲ್ಲದೆ ಗಮನವನ್ನು ಕೇಂದ್ರಿಕರಿಸುವುದು ಪರಿಶುದ್ಧವಾದ ಚಿತ್ತವಾಗಿದ್ದು ಅದು ದೃಢವಾಗಿ ಸ್ಥಿರವಾಗಿರುತ್ತದೆ. ಪ್ರಜ್ಞೆಯ ಶುದ್ಧವಾದ ರೂಪವು ‘ಧ್ಯಾತ್ಮಪ್ರಸಾದಃ’ ಎಂದು ಕರೆಯಲಾಗಿದೆ. ಮುಂದಿನ ಸೂತ್ರದಲ್ಲಿ (೧.೪೮) ಪತಂಜಲಿಯು ಹೀಗೆ ಹೇಳುತ್ತಾನೆ, "ಅದರಲ್ಲಿರುವ ಜ್ಞಾನವು ಸತ್ಯದಿಂದ ತುಂಬಿರುತ್ತದೆ". ಈ ಹಂತವು ಅಹಂಕಾರವಿಲ್ಲದ ಸ್ಥಿತಿಯಾಗಿದೆ. ಇದನ್ನು ಸತ್ಯವೆಂದು ಕರೆಯಲಾಗಿದೆ, ಏಕೆಂದರೆ ಈ ಹಂತಕ್ಕಿಂತ ಮುಂದೆ ಮತ್ತೇನೂ ಇಲ್ಲ. ದೇವಿಯು ಈ ಹಂತದಲ್ಲಿಯೂ ಇರುತ್ತಾಳೆ.

            ಈ ನಾಮಗಳು ಅವಳ ಅ‌ತ್ಯುನ್ನತ ಸ್ಥಾಯಿಯನ್ನು ಪದೇ ಪದೇ ಒತ್ತಿ ಒತ್ತಿ ಹೇಳುತ್ತವೆ. ಇಲ್ಲಿ ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿರುವ ಏಕೈಕ ಅಂಶವೇನೆಂದರೆ ಶಿವ ಮತ್ತು ಶಕ್ತಿಯರಲ್ಲಿ ಯಾವುದೇ ವಿಧವಾದ ತಾತ್ವಿಕ ಭೇದವಿಲ್ಲ ಮತ್ತು ಒಬ್ಬರಿಲ್ಲದೆ ಇನ್ನೊಬ್ಬರು ನಿಷ್ಕ್ರಿಯರಾಗುತ್ತಾರೆ. ಅವರಿಬ್ಬರ ಒಂದುಗೂಡುವಿಕೆಯು ಸೃಷ್ಟಿಯನ್ನು ಉಂಟುಮಾಡುತ್ತವೆ. ಇದನ್ನೇ ಮುಂದಿನ ನಾಮದಲ್ಲಿ ಚರ್ಚಿಸಲಾಗಿದೆ.

******

            ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 257-263 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 07/19/2013 - 21:48

ಶ್ರೀಧರರೆ, ಲಲಿತಾ ಸಹಸ್ರನಾಮ ೨೫೭ - ೨೬೩ ತಮ್ಮ ಪರಿಷ್ಕರಣೆ / ಅವಗಾಹನೆಗೆ ಸಿದ್ದ :-) - ನಾಗೇಶ ಮೈಸೂರು

೨೫೭. ಜಾಗರಿಣೀ
ಪ್ರತಿ ಜೀವಿ ಜಾಗೃತ್ ಅವಸ್ಥೆಯಾಗಿ ದೇವಿ ವಿಶ್ವರೂಪಾ 
ಸರ್ವಾಂತರ್ಯಾಮಿತ್ವ ಲಕ್ಷಣ ಲಲಿತಾಬ್ರಹ್ಮ ಸ್ವರೂಪ
ವಿಷಯ ವಸ್ತು ಸಂಬಂಧ ಮನಸಂಪರ್ಕ ಭೌತಿಕಜಗಕೆ
ಜಾಗರಿಣೀ ಶ್ರೀ ಲಲಿತೆ ಪಂಚೇಂದ್ರಿಯ ಗ್ರಹಿತ ಜ್ಞಾನಕೆ!

೨೫೮. ಸ್ವಪಂತೀ
ಬಾಹ್ಯಗ್ರಹಿತ ಜ್ಞಾನದ ಅಚ್ಚು ಮನದೆ ರೂಪಾಂತರ ಸ್ವಪ್ನಾವಸ್ಥೆ
ಕನಸ ರೂಪೆ ಹೊಮ್ಮಿ ಜನ್ಮಾಂತರಾಲೋಚನೆ ಅರ್ಧಪ್ರಜ್ಞಾವಸ್ಥೆ
ಕಾಲಾವಧಿಯಾಲೋಚನೆಯುಗ್ರಾಣ ನಿಷ್ಕ್ರಿಯದೆ ಪರಿಭ್ರಮಣ
ಗ್ರಹಣೇಂದ್ರೀಯರಹಿತ ರೂಪಾಂತರ ಜಾಗೃತಜ್ಞಾನ ಸಕಾರಣ!

ಸ್ಥೂಲದಿಂದ ಸೂಕ್ಷ್ಮ ರೂಪಾಂತರ ಪ್ರಕ್ರಿಯೆ ಆರಂಭ
ಕನಸಿನ ಸ್ಥಿತಿ ಸಕ್ರೀಯ ನಿಷ್ಕ್ರಿಯ ಮನ ಸಾಕ್ಷೀಭೂತ
ಮನ ಜಂಜಾಟಕೆ ಅವಿಚಲತೆ ಎಚ್ಚರದಲೂ ಗಳಿಸುತೆ
ಆತ್ಮಸಾಕ್ಷಾತ್ಕಾರ ಕೊನೆಯ್ಹಂತಕೆ ಕಾರಣಳಾಗಿ ಲಲಿತೆ!

೨೫೯. ತೈಜಸಾತ್ಮಿಕಾ 
ಎಚ್ಚರದೆ ಸ್ಥೂಲ ಶರೀರ ಸಕ್ರೀಯ ಕನಸಿನ್ಹಂತದಿ ಸೂಕ್ಷ್ಮತೆ ಸಂಪೂರ್ಣ
ಜೀವಿ ಸೂಕ್ಷ್ಮಾ ಸಂಬಂಧ ತೈಜಸ ಸಕ್ರೀಯಕೆ ಇಂದ್ರಿಯಾ ಪಂಚಪ್ರಾಣ
ಅಹಂ ಸ್ಪಂದನಾಪ್ರಜ್ಞೆ ಅಂತರ್ಮುಖಿ ಹಿರಣ್ಯಗರ್ಭಾನುಬಂಧತೆ ಕನಸು
ಅಂತಃಕರಣ ಪರಿಮಿತ ಪ್ರಜ್ಞೆಗ್ಹಂತ ತೈಜಸಾತ್ಮಿಕಾ ರೂಪದಲವತರಿಸು!

೨೬೦. ಸುಪ್ತಾ 
ಸುಷುಪ್ತಿಯಲಿ ಧೀರ್ಘ ನಿದ್ರೆ ಪ್ರಜ್ಞಾಹೀನ ಅವಸ್ಥ
ಪರಿಸರದಿಂದಲೆ ಅದೃಶ್ಯ ವಿರಮಿಸಿ ಮನಸೆ ಸ್ವಸ್ಥ
ನಿಶ್ಯೇಷಾ ಪ್ರಜ್ಞಾ ಸ್ವಪ್ನಾವಸ್ಥೆ ಸ್ಥಬ್ದ ಕಣ್ಣಾಲಿ ನಿಶ್ಚಲಾ
ಸುಪ್ತಾರೂಪಿ ಲಲಿತೆ ಪ್ರಸ್ತುತೆ ಸರ್ವವ್ಯಾಪಿ ಸಕಲ!

೨೬೧. ಪ್ರಾಜ್ಞಾತ್ಮಿಕಾ 
ಸಮಸ್ತ ಬ್ರಹ್ಮಾಂಡ ನಿಯಂತ್ರಣಕೆ ಕಾರಣ ಪರಬ್ರಹ್ಮ
ವ್ಯಕ್ತಿಗತ ಜೀವಿಯ ಹತೋಟಿ ಸೂಕ್ಷ್ಮಸ್ಥಾಯಿಯ ಪ್ರಜ್ಞಾ
ರೂಪಾಂತರಿಸಿ ಪ್ರಜ್ಞೆ ಸಹಯೋಗ ಪರಬ್ರಹ್ಮದ ಜತೆಗೆ
ಧೀರ್ಘನಿದ್ರಾವಸ್ಥೆಯ ಪ್ರಾಜ್ಞಾತ್ಮಿಕಾ ಲಲಿತೆ ಸುಷುಪ್ತಿಗೆ!

೨೬೨. ತುರ್ಯಾ 
ಪ್ರಜ್ಞಾ ಚತುರ್ಥ ಹಂತ ಅನುಭವಕೆ ಬಾರದು ಸ್ವಯಂಪ್ರೇರಿತ
ಎಚ್ಚರದ ಪ್ರಜ್ಞೆ ಪಂಚೇಂದ್ರಿಯ ಕನಸಿನ ಪ್ರಜ್ಞೆ ಮನಸ ಸ್ವಗತ
ಕನಸುರಾಹಿತ್ಯ ಸ್ಥಿತಿ ಸ್ಥಬ್ದ ಪ್ರಜ್ಞಾ ವಿರಾಮದೆ ಮನ ವಿಶ್ರಾಮ
ತುರ್ಯಾಪ್ರಜ್ಞೆಗೆ ಸಾಧಕ ಶ್ರದ್ಧೆ ತುರಿಯಾತೀತಕೆಲ್ಲ ಸಂಗ್ರಾಮ!

ಪ್ರಜ್ಞಾವಸ್ಥೆ ಮೊದಲ ಮೂರ್ಹಂತಕೆ ತುರ್ಯಾವಸ್ಥೆ ಸಾಕ್ಷೀಭೂತ
ಬದಲಾಗೊ ಪ್ರಜ್ಞೆಯಲ್ಲ ಉನ್ನತ ಹೊಸ ಅನುಭವ ನಿರೀಕ್ಷಿಸುತ
ಗುರಿ ಸಾಧಕಭಾಧಕವಿರದೆ ರೂಪಾಂತರ ಹಂತ ಮೊಳಕೆ ಬೀಜ
ಬ್ರಹ್ಮಜ್ಞಾನ ತಾದತ್ಮ್ಯದತ್ತ ಒಂದೇ ಗಮನದಿ ಮುನ್ನುಗ್ಗುವ ಪ್ರಜ್ಞಾ!

೨೬೩. ಸರ್ವಾವಸ್ಥಾ- ವಿವರ್ಜಿತಾ
ಮಿಕ್ಕೆಲ್ಲ ಹಂತ ಮೀರಿದ ಅತೀತ ಪರಬ್ರಹ್ಮ ಲಲಿತೆ ಬರಿ ಸಾಕ್ಷೀಭೂತ
ತಾವರೆಗಂಟದ ನೀರಾಗಿ ಉಪಸ್ಥಿತ ಪ್ರಜ್ಞಾತೀತತೆ ಅವಸ್ಥೆ ಪ್ರಶ್ನಾತೀತ
ಸಾಧಕ ತಾನಾಗಿ ಶಿವ ಶಕ್ತಿ ಬ್ರಹ್ಮ ತಾದಾತ್ಮ್ಯತೆಯಲಿ ತುರ್ಯಾತೀತ
ದ್ವೈತವಿಲ್ಲದಿ ಹಂತಕು ಖಚಿತ ಲಲಿತೆಯಲ್ಲಿ ಸರ್ವಾವಸ್ಥಾ ವಿವರ್ಜಿತಾ!