೭೯. ಶ್ರೀ ಲಲಿತಾ ಸಹಸ್ರನಾಮ ೨೮೧ರಿಂದ ೨೮೬ನೇ ನಾಮಗಳ ವಿವರಣೆ

೭೯. ಶ್ರೀ ಲಲಿತಾ ಸಹಸ್ರನಾಮ ೨೮೧ರಿಂದ ೨೮೬ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೮೭ - ೨೮೯

Nijājñā-rūpa-nigamā निजाज्ञा-रूप-निगमा (287)

೨೮೭. ನಿಜಾಜ್ಞಾ-ರೂಪ-ನಿಗಮಾ

            ದೇವಿಯು ತನ್ನ ಆಜ್ಞೆಗಳನ್ನು ವೇದಗಳ ಮೂಲಕ ವ್ಯಕ್ತಪಡಿಸುತ್ತಾಳೆ. ವೇದಗಳ ಆಧಾರದ ಮೇಲೆ ರಚಿಸಲ್ಪಟ್ಟ ಗ್ರಂಥಗಳು ಯಾವ ಕೆಲಸಗಳನ್ನು ಮಾಡಬೇಕು, ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದನ್ನು ವಿಧಿಸುತ್ತವೆ. ಈ ವಿಧವಾದ ಕೆಲಸಗಳು ಅಥವಾ ಕರ್ತವ್ಯಗಳು ಹಿಂದಿನ ನಾಮದಲ್ಲಿ ತಿಳಿಸಿರುವಂತಹ ವರ್ಗೀಕರಣದ ಆಧಾರದ ಮೇಲೆ ಅವಲಂಭಿಸಿವೆ. ಒಬ್ಬ ಮನುಷ್ಯನು ವೇದಗಳಲ್ಲಿ ಪ್ರತಿಪಾದಿಸಿರುವ ಎಲ್ಲರ ಕರ್ತವ್ಯಗಳನ್ನು ಮಾಡಿದರೆ ಅದರಲ್ಲಿ ಪರಿಪೂರ್ಣತೆ ಇರುವುದಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಯು ವೈದ್ಯಕೀಯ, ನ್ಯಾಯಶಾಸ್ತ್ರ (ಕಾನೂನು) ಮತ್ತು ಆರ್ಥಿಕ ವಿಷಯಗಳಲ್ಲಿ ಏಕಕಾಲಕ್ಕೆ ನಿಪುಣನಾಗಿರಲಾರ. ಒಬ್ಬನು ತನ್ನ ಕ್ಷೇತ್ರದಲ್ಲಿ ಕುಶಲತೆಯನ್ನು ಪಡೆಯಬೇಕಾದರೆ ಅವಶ್ಯಕವಾಗಿ ಹೆಚ್ಚು ಅನುಭವವನ್ನು ಹೊಂದಿರಬೇಕು. ೨೮೬ನೇ ನಾಮದಲ್ಲಿ ಪ್ರಸ್ತಾವಿಸಿರುವ ವಿಷಯಕ್ಕೆ ಇದೇ ಕಾರಣವಾಗಿದೆ. ವೇದಗಳು ಸ್ವಯಂ ಆಗಿ ಇಂತಹ ವಿಷಯಗಳನ್ನು ಹೆಚ್ಚಾಗಿ ಚರ್ಚಿಸುವುದಿಲ್ಲವಾದರೂ (ವೇದಗಳ ಕರ್ಮ ಕಾಂಡಗಳು ಕೆಲವಷ್ಟು ಸ್ಥೂಲ ಕರ್ತವ್ಯಗಳನ್ನು ಚರ್ಚಿಸುತ್ತವೆಯಾದರೂ) ವೇದಗಳ ಉದ್ಗ್ರಂಥಗಳಾದ ಶಾಸ್ತ್ರ ಮತ್ತು ಪುರಾಣಗಳು ಒಬ್ಬನು ಕೈಗೊಳ್ಳಬೇಕಾದ ಕ್ರಿಯೆಗಳನ್ನು ಸ್ಪಷ್ಟವಾಗಿ ಹೇಳುತ್ತವೆ (ಪ್ರಾಯಶ್ಚಿತ್ತ ಕ್ರಿಯೆಗಳು) ಮತ್ತು ಯಾವ ಯಾವ ಕರ್ಮಗಳನ್ನು ಮಾಡಬೇಕು ಮತ್ತು ಮಾಡಬಾರದು (ಕರ್ಮ ಫಲದ ಮೇಲೆ ದುಃಷ್ಪರಿಣಾಮವನ್ನು ಉಂಟುಮಾಡುವ ಕ್ರಿಯೆಗಳು ಮತ್ತು ಅದರ ಪ್ರತಿಕ್ರಿಯೆಗಳು) ಎಂದು ವಿವರಿಸುತ್ತವೆ. ಆದರೆ ಶಾಸ್ತ್ರಗಳು ವೇದಕಾಲೀನದಲ್ಲವುಗಳೆಂದೂ ಅವುಗಳನ್ನು ಕಾಲಾನಂತರದಲ್ಲಿ ರಚಿಸಲಾಯಿತೆಂದೂ ಮತ್ತು ಅವುಗಳು ವೇದೋಪನಿಷತ್ತುಗಳ ಪ್ರಮುಖವಾದ ಉಪದೇಶಗಳನ್ನು ಆಧರಿಸಿಲ್ಲ ಎನ್ನುವುದು ಬಹುತೇಕ ಜನರ ಆಭಿಪ್ರಾಯವಾಗಿದೆ. ಈ ವಾದವನ್ನು ಬಹುತೇಕ ಒಪ್ಪಿಕೊಳ್ಳಬಹುದು, ಏಕೆಂದರೆ ಈ ಶಾಸ್ತ್ರ, ಪುರಾಣಗಳು ಆತ್ಮಸಾಕ್ಷಾತ್ಕಾರವನ್ನು ಹೊಂದುವುದು ಹೇಗೆನ್ನುವುದನ್ನು ನಿರ್ಧಿಷ್ಠವಾಗಿ (ವಿಶೇಷವಾಗಿ) ಉಪದೇಶಿಸುವುದಿಲ್ಲ. ಆದ್ದರಿಂದ ಇದರ ಮೂಲಕ ಅರ್ಥವಾಗುವುದೇನೆಂದರೆ ದೇವಿಯು ವೇದಗಳ ಮೂಲಕ ನೇರವಾಗಿ ವಿಧಿಸಿರುವ ಆಜ್ಞೆಗಳಿಗೂ ಮತ್ತು ಶಾಸ್ತ್ರಗಳ ಮೂಲಕ ಪರೋಕ್ಷವಾಗಿ ವಿಧಿಸಿರುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಈ ನಾಮವು ದೇವಿಯು ವೇದಗಳ ಮೂಲಕ ಕೊಟ್ಟ ಆಜ್ಞೆಗಳನ್ನಷ್ಟೇ ತಿಳಿಸುತ್ತದೆ. ಶಾಸ್ತ್ರಗಳನ್ನು ಅನುಸರಿಸುವುದು ಒಬ್ಬನ ದೃಷ್ಟಿಕೋನ, ಸಂಪ್ರದಾಯ ಮತ್ತು ವಂಶಾವಳಿಯ ಮೇಲೆ ಅವಲಂಭಿತವಾಗಿದೆ. ವೇದಗಳಲ್ಲಿ ಪರಿಣಿತರಾದ ಋಷಿ ಮುನಿಗಳಿಗೆ ಮಾತ್ರವೇ ವೇದಗಳ ಮೂಲಕ ದೇವಿಯು ತನ್ನ ಆಜ್ಞೆಗಳನ್ನು ತಿಳಿಸುತ್ತಾಳೆ. ಇಂತಹ ಯೋಗ್ಯರಾದ ಋಷಿ ಮುನಿಗಳಿಂದ ವಿವಿಧ ಶಾಸ್ತ್ರ ಗ್ರಂಥಗಳು ರಚಿಸಲ್ಪಟ್ಟವು ಎಂದು ನಂಬಲಾಗಿದೆ. ಶಾಸ್ತ್ರಗಳು ಒಬ್ಬ ವ್ಯಕ್ತಿಯು ಧರ್ಮ ಮಾರ್ಗವನ್ನು ಅನುಸರಿಸಲು ಮೊದಲು ಪ್ರೇರೇಪಿಸಿ ತನ್ಮೂಲಕ ಆಧ್ಯಾತ್ಮ ಮಾರ್ಗದಲ್ಲಿ ಮುಂದುವರೆಯುವಂತೆ ಮಾಡುತ್ತವೆ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ.

Puṇyāpuṇya-phalapradā पुण्यापुण्य-फलप्रदा (288)

೨೮೮. ಪುಣ್ಯಾಪುಣ್ಯ-ಫಲಪ್ರದಾ

                ಪುಣ್ಯಾಪುಣ್ಯವು ಎರಡು ಶಬ್ದಗಳನ್ನು ಒಳಗೊಂಡಿದೆ ಪುಣ್ಯ ಮತ್ತು ಅಪುಣ್ಯ. ಪುಣ್ಯ ಎಂದರೆ ಒಳ್ಳೆಯ ಅಥವಾ ಸರಿಯಾದ, ಸದ್ಗುಣ, ಒಳ್ಳೆಯ ಕಾರ್ಯ, ಶ್ಲಾಘನೀಯ ಕಾರ್ಯ, ನೀತಿಯುಕ್ತ ಅಥವಾ ಧಾರ್ಮಿಕ ಕೆಲಸ ಮತ್ತು ಅಪುಣ್ಯವೆಂದರೆ ಭ್ರಮಾತ್ಮಕ (ತೋರಿಕೆಯ) ಪುಣ್ಯ. ಅಪುಣ್ಯವೆಂದರೆ ಖಚಿತವಾಗಿ ಪಾಪವಲ್ಲ. ಅಪುಣ್ಯವೆಂದರೆ, ಅಜ್ಞಾನದಿಂದ ಉಂಟಾದ ಕಾರ್ಯ ಹಾಗಾಗಿ ಇದು ಪಾಪದಷ್ಟು ಕೆಟ್ಟದ್ದಲ್ಲ. ಈ ವಿಧವಾದ ಭೇದವನ್ನು ವೇದಗಳ ಉಪದೇಶಗಳನ್ನು ಆಧರಿಸಿ ಮಾಡಲಾಗುತ್ತದೆ. ಬ್ರಹ್ಮಸೂತ್ರವು (೨.೧.೩೪) ಹೀಗೆ ಹೇಳುತ್ತದೆ, "ಯಾವುದೇ ವಿಧವಾದ ಪಕ್ಷಪಾತ ಅಥವಾ ಕ್ರೂರತ್ವವು ಇಲ್ಲ ಏಕೆಂದರೆ ಅವನು ಬೇರೆ ಅಂಶಗಳನ್ನು ಪರಿಗಣಿಸುತ್ತಾನಾದ್ದರಿಂದ. ಏಕೆಂದರೆ ವೇದಗಳು ಹಾಗೆ ನಿರೂಪಿಸುತ್ತವೆ."

                ಏನು ಬಿತ್ತುತ್ತೇವೆಯೋ ಅದನ್ನೇ ಕೊಯ್ಲು ಮಾಡುತ್ತೇವೆ. ಈ ವಿಧವಾದ ಕರ್ಮಗಳಿಂದ ಉಂಟಾದ ಫಲಿತಾಂಶಗಳನ್ನು ಒಬ್ಬನ ಕರ್ಮದ ಖಾತೆಗೆ ವರ್ಗಾಯಿಸಲ್ಪಡುತ್ತವೆ. ಕರ್ಮಖಾತೆಯ ಫಲವೆಂದರೆ ಪುನರ್ಜನ್ಮ ಮತ್ತು ಅದರೊಂದಿಗೆ ಅನುಭವಿಸಬೇಕಾದ ದುಃಖ ಹಾಗು ಯಾತನೆಗಳು. ಈ ವಿಧವಾದ ಕರ್ಮಫಲಗಳು ದೇವಿಯ ಆಜ್ಞೆಯಂತೆ ಜಮೆಯಾಗುತ್ತವೆ ಏಕೆಂದರೆ ಆಕೆಯು ಕರ್ಮದ ಅಧಿದೇವತೆಯಾಗಿದ್ದಾಳೆ.

               ಬ್ರಹ್ಮಸೂತ್ರ (೩.೨.೭) ಇದನ್ನು ದೃಢಪಡಿಸುತ್ತದೆ. ಅದು ಹೀಗೆ ಹೇಳುತ್ತದೆ, “फलमत् उपपतेः - ಫಲಮತ್ ಉಪಪತೇಃ" ಅಂದರೆ ಕರ್ಮದ ಫಲವು ಅವನಿಂದ ಕೊಡಮಾಡಲ್ಪಡುತ್ತದೆ, ಏಕೆಂದರೆ ಇದು ತರ್ಕಬದ್ಧವಾದ ಸ್ಥಿತಿಯಾಗಿದೆ."

Śruti-sīmanta-sindūrī-kṛta-pādābja-dhūlikā श्रुति-सीमन्त-सिंधूरी-कृत-पादाब्ज-धूलिका (289)

೨೮೯. ಶ್ರುತಿ-ಸೀಮಂತ-ಸಿಂಧೂರೀ-ಕೃತ-ಪಾದಾಬ್ಜ-ಧೂಲಿಕಾ

           ಈ ನಾಮವು ದೇವಿಯನ್ನು ಅತ್ಯುನ್ನತವಾದ ಪರಬ್ರಹ್ಮವೆಂದು ವರ್ಣಿಸುತ್ತದೆ. ವೇದಗಳನ್ನು ಗ್ರಂಥಗಳಲ್ಲೆಲ್ಲಾ ಅತ್ಯಂತ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ. ಈ ನಾಮದಲ್ಲಿ ನಾಲ್ಕು ದೇವಿಯರನ್ನು ನಾಲ್ಕು ವೇದಗಳ ಮೂರ್ತ ರೂಪವಾಗಿ ಪರಿಗಣಿಸಲಾಗಿದೆ. ಯಾವಾಗ ಈ ದೇವಿಯರು ಲಲಿತಾಂಬಿಕೆಗೆ ಗೌರವ ಸಲ್ಲಿಸುವ ಸಲುವಾಗಿ ನಡುಬಾಗಿ ತಮ್ಮ ಶಿರಗಳನ್ನು ಅವಳ ಪಾದದ ಬಳಿಯಲ್ಲಿರುಸುತ್ತಾರೆಯೋ, ಆಗ ದೇವಿಯ ಪಾದಧೂಳಿಯ ಕಣಗಳು ಅವರ ಬೈತಲೆಗಳಿಗೆ ಅಂಟಿಕೊಳ್ಳುತ್ತವೆ. ಕೆಂಪು ಬಣ್ಣದ ಹೊಂಗಿರಣಗಳನ್ನು ಪ್ರತಿಫಲಿಸುವ ಆ ಕಣಗಳಿಂದಾಗಿ ಅವರ ಶಿರಗಳು ಸುಮಂಗಲಿಯರು ಧರಿಸುವ ಸಿಂಧೂರದಂತೆ ಶೋಭಿಸುತ್ತವೆ. ಇಲ್ಲಿ ಧೂಳು ಎನ್ನುವುದನ್ನು ಸಾಂಕೇತಿಕವಾಗಿ ಬಳಸಲಾಗಿದೆ (ಧೂಳು ಎನ್ನುವುದರ ಅರ್ಥವು ಈ ಸಂದರ್ಭದಲ್ಲಿ ಈ ರೀತಿಯಾಗಿದೆ).

            ಉಪನಿಷತ್ತುಗಳನ್ನು ವೇದಗಳ ಮುಖ್ಯಭಾಗಗಳೆಂದು ಪರಿಗಣಿಸಲಾಗಿದೆ ಏಕೆಂದರೆ ಅವು ನಮಗೆ ಬ್ರಹ್ಮಸಾಕ್ಷಾತ್ಕಾರದ ಮಾರ್ಗಗಳನ್ನು ಮತ್ತು ರೀತಿಗಳನ್ನು ಕುರಿತಾಗಿ ಉಪದೇಶಿಸುತ್ತವೆ. ಈ ಉಪನಿಷತ್ತಗಳೂ ಸಹ ಪರಬ್ರಹ್ಮದ ಪೂರ್ಣಸ್ವರೂಪವನ್ನು ವಿವರಿಸಲು ಅಸಮರ್ಥವಾಗಿವೆ. ಅವುಗಳಲ್ಲಿನ ವಿವರಣೆಗಳು ಅಲ್ಲಗಳೆಯುವಿಕೆ (ನಕಾರಾತ್ಮಕ) ಮತ್ತು ದೃಢೀಕರಣದ (ಸಕಾರಾತ್ಮಕ) ಹೇಳಿಕೆಗಳ ಮೂಲಕವಷ್ಟೇ ನಡೆಯುತ್ತದೆ. ವೇದಗಳದ್ದೂ ಸಹ ಇದೇ ಪರಿಸ್ಥಿತಿ. ವೇದಗಳಲ್ಲಿಯೂ ಸಹ ಬ್ರಹ್ಮದ ಪರಿಪೂರ್ಣವಾದ ಅಥವಾ ದೋಷರಹಿತ ವಿವರಣೆಯು ಕಂಡುಬರುವುದಿಲ್ಲ. ಇದು ಏಕೆಂದರೆ ಬ್ರಹ್ಮವು ಸಾಮಾನ್ಯ ಮಾನವನ ಬುದ್ಧಿಮತ್ತೆಗೆ ನಿಲುಕದ ವಿಷಯವಾಗಿದೆ. ಈ ವೇದಗಳನ್ನು ಈ ದೇವಿಯರು ಪ್ರತಿನಿಧಿಸುವುದರಿಂದ ಅವರುಗಳು ದೇವಿಯನ್ನು ಶಬ್ದಗಳ ಮೂಲಕ ವರ್ಣಿಸಲು ತಾವು ಅಸಹಾಯಕರಾಗಿರುವುದಕ್ಕೆ ಸಂಕೋಚಪಟ್ಟುಕೊಳ್ಳುತ್ತಾರೆ. ಅವರುಗಳು ದೇವಿಯ ಪಾದಧೂಳಿಯನ್ನು ತಮ್ಮ ಬೈತಲೆಯಲ್ಲಿ ಧರಿಸಿ ತಮಗೆ ಅವಳ ಪಾದಧೂಳಿಯನ್ನು ತಲೆಯಲ್ಲಿ ಧರಿಸುವ ಮೂಲಕ ದೊರೆಯುವ ಅಲ್ಪ ಜ್ಞಾನದಿಂದಾಗಿ (ಪರಬ್ರಹ್ಮದ ಅಥವಾ ಅವಳ ಬಗೆಗಿನ ಜ್ಞಾನಕ್ಕಾಗಿ) ತೃಪ್ತಿ ಪಟ್ಟುಕೊಳ್ಳುತ್ತಾರೆ.

             ಸೌಂದರ್ಯ ಲಹಿರಿಯ ಎರಡನೇ ಹಾಗು ಮೂರನೇ ಶ್ಲೋಕಗಳು ಅವಳ ಪಾದಗಳನ್ನು ಹೀಗೆ ವರ್ಣಿಸುತ್ತವೆ. "ನಿನ್ನ ಪಾದಪದ್ಮಗಳಿಂದ ಬೀಳುವ ಸೂಕ್ಷ್ಮ ಕಣಗಳನ್ನು ಸಂಗ್ರಹಿಸಿ ಬ್ರಹ್ಮ, ವಿಷ್ಣು ಮತ್ತ ಶಿವ ಇವರುಗಳು ತಮ್ಮ ಕರ್ತವ್ಯಗಳನ್ನು ಮಾಡುತ್ತಾರೆ". ಅದರ ಮುಂದಿನ ಶ್ಲೋಕವು ಹೇಳುತ್ತದೆ, "ನಿನ್ನ ಪಾದಪದ್ಮದ ಧೂಳಿನ ಕಣಗಳು ಅಜ್ಞಾನಿಗಳ ಆಂತರಿಕ ಅಂಧಕಾರವನ್ನು ಹೋಗಲಾಡಿಸಲು ಸಹಾಯಕವಾಗಿವೆ".

            ೨೮೭ ಹಾಗೂ ೨೮೮ನೇ ನಾಮಗಳು ವೇದಗಳ ಕರ್ಮಕಾಂಡವನ್ನು ಕುರಿತು ಹೇಳಿದರೆ ಈ ನಾಮವು ಅವುಗಳ ಜ್ಞಾನಕಾಂಡದ ಕುರಿತಾಗಿ ಹೇಳುತ್ತದೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 287-289 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Mon, 08/05/2013 - 03:12

ಶ್ರೀಧರರೆ, ತಲೆ ಬರಹದಲ್ಲಿನ ನಾಮಾವಳಿ ಸಂಖ್ಯೆ '೨೮೭ ರಿಂದ ೨೮೯ ನೇ ನಾಮಗಳ ವಿವರಣೆ' ಅಂದಿರಬೇಕಿತ್ತು (೨೮೧ರಿಂದ ೨೮೬ನೇ ಆಗಿಬಿಟ್ಟಿದೆ - ಹಿಂದಿನ ಕಂತಿನ ಕಾಪಿ ಹಾಗೆ ಉಳಿದುಕೊಂಡುಬಿಟ್ಟಿದೆಯೆಂದು ಕಾಣುತ್ತದೆ). ಆದರೆ ಒಳಗಿನ ವಿವರಣೆಯೆಲ್ಲ ಸರಿಯಾಗಿದೆ (೨೮೭  ರಿಂದ ೨೮೯ ನೇ ನಾಮಗಳ ವಿವರಣೆ)
ತಿದ್ದುಪಡಿ:  ೭೯. ಶ್ರೀ ಲಲಿನಾಮಾವಳಿ ಸಂಖ್ಯೆ  ೨೮೭  ರಿಂದ ೨೮೯ ನೇ ನಾಮಗಳ ವಿವರಣೆ

ನಿಮ್ಮ ಮಾತು ನಿಜ ನಾಗೇಶರೆ,
ಈ ’ಕಟ್ಟು-ಪೇಸ್ಟು’ ಯುಗದಲ್ಲಿ ಈ ವಿಧದ ಅಚಾತುರ್ಯಗಳು ಆಗುತ್ತಾ ಇರುತ್ತವೆ. ಮೊದಲೆಲ್ಲಾ ಲೇಖನವನ್ನು ಸೇರಿಸಿದವರು ನಂತರ ಅವುಗಳನ್ನು ತಿದ್ದಲು (edit) ಮಾಡಲು ಸಂಪದದಲ್ಲಿ ಒಂದು ಅವಕಾಶವಿತ್ತು. ಆದರೆ ಈಗ ಆ ಸೌಲಭ್ಯವಿಲ್ಲದೇ ಇರುವುದರಿಂದ ನಿರ್ವಾಹಕರ ಗಮನಕ್ಕೆ ಇಂತಹ ಸಂಗತಿಗಳು ಬಂದರೆ ಮಾತ್ರ ಅವನ್ನು ತಿದ್ದಲು ಅವಕಾಶವಿರುತ್ತದೆ. ಇಲ್ಲದಿದ್ದರೆ ಇವು ಹಾಗೆಯೇ ಉಳಿದುಕೊಂಡು ಬಿಡುತ್ತವೆ :((

Submitted by nageshamysore Mon, 08/05/2013 - 19:09

ಶ್ರೀಧರರೆ, ಲಲಿತಾ ಸಹಸ್ರನಾಮ ೨೮೭ - ೨೮೯ರ ಸಾರದ ಪ್ರಯತ್ನ, ತಮ್ಮ ಪರಿಷ್ಕರಣೆಗೆ :-)

ಲಲಿತಾ ಸಹಸ್ರನಾಮ ೨೮೭ - ೨೮೯
_________________________________________

೨೮೭. ನಿಜಾಜ್ಞಾ-ರೂಪ-ನಿಗಮಾ 
ವೇದ ಪಾರಂಗತ ಋಷಿಮುನಿಗಳಿಗೆ, ದೇವಿ ಆಜ್ಞೆಗಳೆಲ್ಲ ವೇದ ಮುಖೇನ
ಶಾಸ್ತ್ರ ಗ್ರಂಥ ರಚನೆ ಪ್ರೇರೇಪಣೆ, ಆಧ್ಯಾತ್ಮಕೆ ಧರ್ಮ ಮಾರ್ಗದ ಸಾಧನ
ವರ್ಗಾನುಸಾರ ಕರ್ಮಾನುಗ್ರಹಣ, ನಿಪುಣತೆಗನುಗುಣ ಶಾಸ್ತ್ರ ಪುರಾಣ             
ಸಮ್ಮತಾಸಮ್ಮತ ನಿಯಾಮಾನುಮಾನಕ್ರಿಯೆ ವೇದಾಧಾರ ಗ್ರಂಥಋಣ!

೨೮೮. ಪುಣ್ಯಾಪುಣ್ಯ-ಫಲಪ್ರದಾ 
ಬಿತ್ತಿದ್ದೆ ಬೆಳೆದು ಕೊಯ್ಲು, ಕರ್ಮ ಫಲಿತಕು ಲೆಕ್ಕವನಿಡಲು ಖಾತೆ
ಕರ್ಮಖಾತೆಯ ಬಡ್ಡಿ ಫಲ ಪುನರ್ಜನ್ಮ ಯಾತನೆ ದುಃಖದ ಕಂತೆ
ಕರ್ಮದಧಿದೇವತೆ ಲಲಿತೆ ಜಮೆಯಾಗಿಸಿರೆ ಪುಣ್ಯಾಪುಣ್ಯದಖಾತೆ
ವೇದೋಪದೇಶಾನುಸಾರ ಭೇಧ ನಿಷ್ಪಕ್ಷಪಾತ, ತರ್ಕಬದ್ಧ ಸಂಹಿತೆ!

೨೮೯. ಶೃತಿ-ಸೀಮಂತ-ಸಿಂಧೂರೀ-ಕೃತ-ಪಾದಾಬ್ಜ-ಧೂಲಿಕಾ 
ವೇದದ ಜ್ಞಾನಕಾಂಡ ಪಾದಪದ್ಮಕಣ, ಸೋಕೆ ಅಜ್ಞಾನತಮ ನಿರ್ಗಮನ
ವೇದರೂಪಿ ಚತುರ್ದೇವಿ ನಮನ, ಸುಮಂಗಲಿ ಸಿಂಧೂರದ ಕಣಾಭರಣ
ತ್ರಿಮೂರ್ತಿ ಸಹಿತ ಕಣ ಸಂಗ್ರಹಿಸುತ, ಪಾದ ಧೂಳಲೆ ಕರ್ತವ್ಯ ನಿರತ
ಪವಿತ್ರಗ್ರಂಥ ಪರಿಗಣಿತ ವೇದಕೂ, ಲಲಿತಾ ಪರಬ್ರಹ್ಮರೂಪೆ ಅತ್ಯುನ್ನತ!

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
P.S. ಕಟ್ ಪೇಸ್ಟ್ ಚೆಲ್ಲಟ ಸರಿಪಡಿಸಲಾಗದಿದ್ದರೂ, ಸದ್ಯಕ್ಕೆ ಪ್ರತಿಕ್ರಿಯೆಯಡಿ ತಿದ್ದುಪಡಿಯಿದೆಯಲ್ಲ , ಸದ್ಯಕ್ಕೆ ಸಾಕು ಬಿಡಿ :-)
 

ನಾಗೇಶರೆ, ಲಲಿತಾ ಸಹಸ್ರನಾಮ ೨೮೭ - ೨೮೯ರ ಕವನಗಳ ಪರಿಷ್ಕರಣೆಯನ್ನು ಸೂಚಿಸಿದ್ದೇನೆ. ಸೂಕ್ತವಾಗಿ ಬದಲಾವಣೆ ಮಾಡಲು ಕೋರುತ್ತಿದ್ದೇನೆ.
೨೮೭. ನಿಜಾಜ್ಞಾ-ರೂಪ-ನಿಗಮಾ
ವೇದ ಪಾರಂಗತ ಋಷಿಮುನಿಗಳಿಗೆ, ದೇವಿ ಆಜ್ಞೆಗಳೆಲ್ಲ ವೇದ ಮುಖೇನ
ಈ ಸಾಲಿನಲ್ಲಿ ವೇದ ಪಾರಂಗತ ಮತ್ತು ವೇದ ಮುಖೇನ ಸ್ವಲ್ಪ ಅಸಂಬದ್ಧವೆನಿಸುತ್ತದೆ. ಆದ್ದರಿಂದ, ವೇದ ಪಾರಂಗತ ಋಷಿಮುನಿಗಳಿಗೆ = ಬ್ರಹ್ಮತತ್ವವರಿತ ಋಷಿಮುನಿಗಳಿಗೆ ಎಂದು ಮಾರ್ಪಡಿಸಿ.
ಶಾಸ್ತ್ರ ಗ್ರಂಥ ರಚನೆ ಪ್ರೇರೇಪಣೆ, ಆಧ್ಯಾತ್ಮಕೆ ಧರ್ಮ ಮಾರ್ಗದ ಸಾಧನ
ಆಧ್ಯಾತ್ಮಕೆ ಧರ್ಮ ಮಾರ್ಗದ ಸಾಧನ=ಆಧ್ಯಾತ್ಮಿಕ ಧರ್ಮ ಮಾರ್ಗ ಸಾಧನ - ನಿಮ್ಮ ಆಶಯಕ್ಕೆ ಸರಿಹೊಂದಬಹುದೆನಿಸುತ್ತದೆ?
ವರ್ಗಾನುಸಾರ ಕರ್ಮಾನುಗ್ರಹಣ, ನಿಪುಣತೆಗನುಗುಣ ಶಾಸ್ತ್ರ ಪುರಾಣ
ಕರ್ಮಾನುಸಾರ, ನಿಪುಣತೆಗನುಗುಣ ವರ್ಗಾನುಗ್ರಹಣ, ಶಾಸ್ತ್ರ ಪುರಾಣ
ಸಮ್ಮತಾಸಮ್ಮತ ನಿಯಾಮಾನುಮಾನಕ್ರಿಯೆ ವೇದಾಧಾರ ಗ್ರಂಥಋಣ!
ನಿಯಾಮಾನುಮಾನಕ್ರಿಯೆ=ನಿಯಮಾನಿಯಮಕ್ರಿಯೆ
೨೮೮. ಪುಣ್ಯಾಪುಣ್ಯ-ಫಲಪ್ರದಾ
ಬಿತ್ತಿದ್ದೆ ಬೆಳೆದು ಕೊಯ್ಲು, ಕರ್ಮ ಫಲಿತಕು ಲೆಕ್ಕವನಿಡಲು ಖಾತೆ
ಕರ್ಮಖಾತೆಯ ಬಡ್ಡಿ ಫಲ ಪುನರ್ಜನ್ಮ ಯಾತನೆ ದುಃಖದ ಕಂತೆ
ಬಡ್ಡಿ=ಶೇಷ ಹೆಚ್ಚು ಸೂಕ್ತ ಪದ
ಕರ್ಮದಧಿದೇವತೆ ಲಲಿತೆ ಜಮೆಯಾಗಿಸಿರೆ ಪುಣ್ಯಾಪುಣ್ಯದಖಾತೆ
ವೇದೋಪದೇಶಾನುಸಾರ ಭೇಧ ನಿಷ್ಪಕ್ಷಪಾತ, ತರ್ಕಬದ್ಧ ಸಂಹಿತೆ!
ಭೇಧ=ಭೇದ
೨೮೯. ಶೃತಿ-ಸೀಮಂತ-ಸಿಂಧೂರೀ-ಕೃತ-ಪಾದಾಬ್ಜ-ಧೂಲಿಕಾ
ವೇದದ ಜ್ಞಾನಕಾಂಡ ಪಾದಪದ್ಮಕಣ, ಸೋಕೆ ಅಜ್ಞಾನತಮ ನಿರ್ಗಮನ
ಪಾದಪದ್ಮಕಣ, ಸೋಕೆ = ಪಾದಪದ್ಮಕಣ ಸೋಕೆ (ಅಲ್ಪ ವಿರಾಮ ಚಿಹ್ನೆಯ ಅವಶ್ಯಕತೆಯಿಲ್ಲವೆನಿಸುತ್ತದೆ)
ವೇದರೂಪಿ ಚತುರ್ದೇವಿ ನಮನ, ಸುಮಂಗಲಿ ಸಿಂಧೂರದ ಕಣಾಭರಣ
ವೇದರೂಪಿ ಚತುರ್ದೇವಿ = ಚರ್ತುವೇದರೂಪಿ ದೇವಿ ನಮನ, ಕಣಾಭರಣ=ಕಣಧಾರಣ; ಈ ಎರಡು ಶಬ್ದಗಳನ್ನು ಮಾರ್ಪಡಿಸಿ
ತ್ರಿಮೂರ್ತಿ ಸಹಿತ ಕಣ ಸಂಗ್ರಹಿಸುತ, ಪಾದ ಧೂಳಲೆ ಕರ್ತವ್ಯ ನಿರತ
=ತ್ರಿಮೂರ್ತಿ ಸಹಿತ ಪಾದ ಧೂಳಿನ ಕಣ ಸಂಗ್ರಹಿಸುತ ಕರ್ತವ್ಯ ನಿರತ
ಪವಿತ್ರಗ್ರಂಥ ಪರಿಗಣಿತ ವೇದಕೂ, ಲಲಿತಾ ಪರಬ್ರಹ್ಮರೂಪೆ ಅತ್ಯುನ್ನತ!
=ಕಡೆಯ ಸಾಲನ್ನು ಸ್ವಲ್ಪ ಬದಲಿಸಲು ಸಾಧ್ಯವೇ ನೋಡಿ; ಇಲ್ಲಿ ಪರಬ್ರಹ್ಮವು ಲಲಿತಾದೇವಿಯ ರೂಪದಲ್ಲಿದೆ ಆದ್ದರಿಂದ ಪರಬ್ರಹ್ಮಸ್ವರೂಪ ಲಲಿತಾ ಅತ್ಯುನ್ನತ ಆಗಬೇಕು. ಪವಿತ್ರಗ್ರಂಥ ಪರಿಗಣಿತ ವೇದಕೂ ಎಂದರೆ ಸಮಂಜಸವಾಗದು; ಏಕೆಂದರೆ ವೇದಗಳಿಗೆ ಹೋಲಿಕೆಯಿಲ್ಲ; ಅವೇ ಅಂತಿಮ ಗ್ರಂಥಗಳು.
ಆದ್ದರಿಂದ, "ಪರಮಪವಿತ್ರ ವೇದಗಳಿಗೂ ಪರಬ್ರಹ್ಮಸ್ವರೂಪ ಲಲಿತಾ ಅತ್ಯುನ್ನತ" ಎನ್ನುವುದು ಹೆಚ್ಚು ಸೂಕ್ತವಾದೀತು.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಈಗ ಮಂತ್ರ ಮುಗ್ದನಾಗುವ ಸರದಿ ನನ್ನದಾಗಿದೆ - ಎಷ್ಟು ಚೆನ್ನಾಗಿ ತಿದ್ದಿ ಸೂಕ್ತ ರೂಪ ಕೊಟ್ಟುಬಿಟ್ಟಿರಿ. ಓದುತ್ತಲೆ ಬರಿ 'ಕಟ್ ಪೇಸ್ಟಷ್ಟೆ' ನನ್ನ ಪಾಲಿಗುಳಿದದ್ದು :-)

ಈ ರೂಪಕ್ಕೆ ಅಂತಿಮ ಕೊಂಡಿ ಕೊಡುತ್ತೇನೆ. ಏನಾದರು ಸಣ್ಣ ಪುಟ್ಟ ಪರೀಷ್ಕರಣೆಯಿದ್ದರೂ ವೆಬ್ಸೈಟಿನಲ್ಲಿ ತಿದ್ದುಪಡಿಗೆ ತೊಂದರೆಯಿಲ್ಲವಾಗಿ ಪ್ರಕಟಿಸಿದರೂ ದೊಡ್ಡ ತೊಡಕಾಗುವುದಿಲ್ಲ.

೨೮೭. ನಿಜಾಜ್ಞಾ-ರೂಪ-ನಿಗಮಾ
ಬ್ರಹ್ಮತತ್ವವರಿತ ಋಷಿಮುನಿಗಳಿಗೆ, ದೇವಿ ಆಜ್ಞೆಗಳೆಲ್ಲ ವೇದ ಮುಖೇನ
ಶಾಸ್ತ್ರ ಗ್ರಂಥ ರಚನೆ ಪ್ರೇರೇಪಣೆ, ಆಧ್ಯಾತ್ಮಿಕ ಧರ್ಮ ಮಾರ್ಗದ ಸಾಧನ
ಕರ್ಮಾನುಸಾರ, ನಿಪುಣತೆಗನುಗುಣ ವರ್ಗಾನುಗ್ರಹಣ, ಶಾಸ್ತ್ರ ಪುರಾಣ
ಸಮ್ಮತಾಸಮ್ಮತ ನಿಯಮಾನಿಯಮಕ್ರಿಯೆ ವೇದಾಧಾರ ಗ್ರಂಥಋಣ!

೨೮೮. ಪುಣ್ಯಾಪುಣ್ಯ-ಫಲಪ್ರದಾ
ಬಿತ್ತಿದ್ದೆ ಬೆಳೆದು ಕೊಯ್ಲು, ಕರ್ಮ ಫಲಿತಕು ಲೆಕ್ಕವನಿಡಲು ಖಾತೆ
ಕರ್ಮಖಾತೆಯ ಶೇಷಫಲ ಪುನರ್ಜನ್ಮ ಯಾತನೆ ದುಃಖದ ಕಂತೆ
ಕರ್ಮದಧಿದೇವತೆ ಲಲಿತೆ ಜಮೆಯಾಗಿಸಿರೆ ಪುಣ್ಯಾಪುಣ್ಯದಖಾತೆ
ವೇದೋಪದೇಶಾನುಸಾರ ಭೇದ ನಿಷ್ಪಕ್ಷಪಾತ, ತರ್ಕಬದ್ಧ ಸಂಹಿತೆ!

೨೮೯. ಶೃತಿ-ಸೀಮಂತ-ಸಿಂಧೂರೀ-ಕೃತ-ಪಾದಾಬ್ಜ-ಧೂಲಿಕಾ
ವೇದದ ಜ್ಞಾನಕಾಂಡ ಪಾದಪದ್ಮಕಣ ಸೋಕೆ ಅಜ್ಞಾನತಮ ನಿರ್ಗಮನ
ಚರ್ತುವೇದರೂಪಿ ದೇವಿ ನಮನ, ಸುಮಂಗಲಿ ಸಿಂಧೂರದ ಕಣಧಾರಣ
ತ್ರಿಮೂರ್ತಿ ಸಹಿತ ಪಾದ ಧೂಳಿನ ಕಣ ಸಂಗ್ರಹಿಸುತ ಕರ್ತವ್ಯ ನಿರತ
ಪರಮ ಪವಿತ್ರ ವೇದಗಳಿಗೂ ಪರಬ್ರಹ್ಮ ಸ್ವರೂಪ ಲಲಿತಾ ಅತ್ಯುನ್ನತ!

ಧನ್ಯವಾದಗಳೊಂದಿಗೆ, 
- ನಾಗೇಶ ಮೈಸೂರು
 

ನಾಗೇಶರೆ,
ಮತ್ತಷ್ಟು ಟೇಕುಗಳನ್ನು ತೆಗೆದುಕೊಳ್ಳದೇ ಒಂದೇ ಬಾರಿ ಫೈನಲ್ ಕಟ್ ಮಾಡಿದಿರಲ್ಲ :))

ನಿಮ್ಮ ಈ ಸೊಗಸಾದ ಡೈರೆಕ್ಷನ್ನಿಗೆ ಒಂದೆ ಟೇಕೆ ಸಾಕು! ಕ್ಯಾಮರಾಮನ್ ರೀಲ್ ವೇಸ್ಟ್ ಮಾಡುವ ಅಗತ್ಯವೆ ಇರುವುದಿಲ್ಲ :-)