೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೧೭ - ೩೨೧
Rakṣākarī रक्षाकरी (317)
೩೧೭. ರಕ್ಷಾಕರೀ
ಯಾರು ರಕ್ಷಿಸುತ್ತಾರೆಯೋ ಅವರು ರಕ್ಷಾಕರೀ. ದೇವಿಯು ಈ ಜಗತ್ತನ್ನು ಕಾಪಾಡುವವಳಾಗಿದ್ದಾಳೆ, ಆದ್ದರಿಂದ ಈ ನಾಮವು ಹೇಳಲ್ಪಟ್ಟಿದೆ. ಈ ನಾಮಕ್ಕೆ ಇನ್ನೊಂದು ವಿಧವಾದ ವ್ಯಾಖ್ಯಾನವೂ ಇದೆ. ಕೆಲವೊಂದು ಹೋಮಗಳಲ್ಲಿ ಸಸ್ಯಗಳನ್ನು ಆಹುತಿಯಾಗಿ ಅರ್ಪಿಸುವ ವಿಧಿಯಿದೆ. ಯಾವಾಗ ಅವು ಅಗ್ನಿ ಜ್ವಾಲೆಯಿಂದ ಭಸ್ಮವಾಗುತ್ತವೆಯೋ ಅವನ್ನು ಶೇಖರಿಸಿ ತಾಯಿತದಲ್ಲಿ ತುಂಬಿಸಿ, ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಆ ತಾಯಿತವನ್ನು ವ್ಯಕ್ತಿಯೊಬ್ಬನು ತನ್ನ ದೇಹದಲ್ಲಿ ಧರಿಸುತ್ತಾನೆ. ಈ ವಿಧವಾಗಿ ಭಸ್ಮವು ರಕ್ಷಣೆಗೋಸ್ಕರವಾಗಿ ಉಪಯೋಗಿಸಲ್ಪಡುವುದರಿಂದ ಆ ಅರ್ಥದಲ್ಲಿ ದೇವಿಯು ರಕ್ಷಕಿಯಾಗಿದ್ದಾಳೆ. ಎರಡನೆಯದಾಗಿ ಭಸ್ಮವು ಮೃತ ವ್ಯಕ್ತಿಯ ಭೌತಿಕ ಶೇಷವಾಗಿದೆ, ಈ ಅರ್ಥದಲ್ಲಿ ದೇವಿಯು ವಿನಾಶಕಳು. ಬ್ರಹ್ಮದ ಮೂರು ವಿಧವಾದ ಕ್ರಿಯೆಗಳಲ್ಲಿ ಎರಡನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ದೇವಿಯು ಯಾವ ವಿಧವಾಗಿ ಆಹುತಿಯ ರೂಪವಾಗಿರುತ್ತಾಳೆ ಎನ್ನುವುದನ್ನು ೫೩೫ ಮತ್ತ ೫೩೬ ನಾಮಗಳ ಚರ್ಚೆಯಲ್ಲಿ ನೋಡೋಣ.
Rākṣasaghnī राक्षसघ्नी (318)
೩೧೮. ರಾಕ್ಷಸಘ್ನೀ
ರಾಕ್ಷಸರ ಸಂಹಾರಕಳು ಎನ್ನುವುದು ಈ ನಾಮದ ಅರ್ಥ. "ಶಿಷ್ಟ ರಕ್ಷಣ ಮತ್ತು ದುಷ್ಟ ಶಿಕ್ಷಣಕ್ಕಾಗಿ ನಾನು ಯುಗ ಯುಗಗಳಲ್ಲಿಯೂ ಅವತಾರವೆತ್ತಿ ಬರುತ್ತೇನೆ ಮತ್ತು ಧರ್ಮವನ್ನು ಪರಿರಕ್ಷಿಸುತ್ತೇನೆ" ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೪.೮) ಹೇಳಿದ್ದಾನೆ. ಭಗವದ್ಗೀತೆಯ ಆ ಪ್ರಸಿದ್ಧ ಶ್ಲೋಕವು ಈ ರೀತಿಯಾಗಿದೆ:
परित्राणाय साधूनां विनाशाय च दुष्कृताम्।
धर्मसंस्थापनार्थाय सम्भवामि युगे युगे॥
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಇಲ್ಲಿ ರಾಕ್ಷಸರೆಂದರೆ ದುಷ್ಟ ಕೃತ್ಯಗಳು. ಯಾವಾಗ ದುಷ್ಟತನವು ಎಲ್ಲೆಡೆಯೂ ಅಸ್ತಿತ್ವದಲ್ಲಿರುತ್ತದೆಯೋ, ಆಗ ಮಹಾಪ್ರಳಯವುಂಟಾಗಿ ಈ ಜಗತ್ತಿನ ಸರ್ವನಾಶವಾಗಿ ಈ ಸೃಷ್ಟಿಯು ಪುನಃ ರಚಿಸಲ್ಪಡುತ್ತದೆ.
Rāmā रामा (319)
೩೧೯. ರಾಮಾ
ದೇವಿಯು ಸ್ತ್ರೀಯರ ಮೂರ್ತ ರೂಪವಾಗಿದ್ದಾಳೆ. ಲಿಂಗ ಪುರಾಣವು ಎಲ್ಲಾ ಪುರಷರು ಶಂಕರರಾಗಿದ್ದರೆ (ಶಿವನ ಸ್ವರೂಪವಾಗಿದ್ದರೆ) ಮಹಿಳೆಯರೆಲ್ಲಾ ಶಕ್ತಿ ದೇವತೆಯ ಸ್ವರೂಪರು ಎಂದು ಹೇಳುತ್ತದೆ. ಅದೇ ವಿಧವಾಗಿ ಸ್ತ್ರೀಯರನ್ನು ಗೌರವಿಸಬೇಕೆಂದು ಹೇಳಲಾಗಿದೆ. ಒಂದು ವೇಳೆ ಅವರನ್ನು ಕೀಳಾಗಿ ಕಂಡರೆ ಅಂತಹವರ ವಂಶವು ನಾಶವಾಗುತ್ತದೆ. ‘ರಮ್’ ಎಂದರೆ ಆನಂದ ಮತ್ತದು ಅಗ್ನಿ ಬೀಜವಾದ ’ರಂ’ (रं) ಆಗಿದೆ. ಅಗ್ನಿ ಬೀಜವು ಬಹಳಷ್ಟು ಶಕ್ತಿಯುತವಾದುದೆಂದು ಪರಿಗಣಿತವಾಗಿದೆ ಮತ್ತದನ್ನು ಇತರೇ ಬೀಜಗಳೊಂದಿಗೆ ಸಂಯುಕ್ತಗೊಳಿಸಿದಾಗ, ಆ ಸಂಯುಕ್ತ ಬೀಜಾಕ್ಷರವು ಎರಡನೇ ಬೀಜಾಕ್ಷರದ ಸುಪ್ತಶಕ್ತಿಯನ್ನು ಹೆಚ್ಚಿಸುತ್ತದೆ. ಅಗ್ನಿ ಬೀಜದೊಂದಿಗೆ ಇತರೇ ಬೀಜಗಳನ್ನು ಸೂಕ್ತವಾದ ವಿಧದಲ್ಲಿ ಸಂಯುಕ್ತಗೊಳಿಸಿದಾಗ ಅದು ಕೃಪೆಯನ್ನುಂಟು ಮಾಡುತ್ತದೆ. ಶಿವ ಮತ್ತು ಶಕ್ತಿಯರು ಸಹಸ್ರಾರದಲ್ಲಿ ಸಂಯೋಗ ಹೊಂದಿದಾಗ ಯೋಗಿಗಳು ಪರಮಾನಂದದಲ್ಲಿ ಮುಳುಗಿ ಸಂತೋಷಗೊಳ್ಳುತ್ತಾರೆ. ಅವರು ಈ ಹಂತದಲ್ಲಿ ಪರಮಾನಂದವನ್ನು ಹೊಂದುವುದರಿಂದ, ದೇವಿಯನ್ನು ರಾಮಾ ಎಂದು ಕರೆಯಲಾಗಿದೆ. (ದೈವೀ ಪುರುಷನಾದ ರಾಮನು ಯೋಗಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾನೆ ಆದ್ದರಿಂದ ಅವನನ್ನು ರಾಮ ಎಂದು ಕರೆಯಲಾಗಿದೆ).
Ramaṇa-lampaṭā रमण-लम्पटा (320)
೩೨೦. ರಮಣ-ಲಂಪಟ
ದೇವಿಯು ತನ್ನ ಸಂಗಾತಿಯಾದ ಶಿವನೊಡನೆ ಸಹಸ್ರಾರದಲ್ಲಿ ಇರುವ ಕ್ಷಣಗಳನ್ನು ಆನಂದಿಸುತ್ತಾಳೆ. ಆಕೆಯು ದಾಂಪತ್ಯ ಸುಖವನ್ನು ಅನುಭವಿಸುತ್ತಾಳೆ ಮತ್ತು ಆಕೆಯು ಶಿವನೊಂದಿಗೆ ಎಲ್ಲೆಡೆ ಆಡಲು ಬಯಸುತ್ತಾಳೆ. ದೇವಿಯು ಸ್ತ್ರೀಯರು ತಮ್ಮ ಪತಿಯರಿಗೆ (ರಮಣರಿಗೆ) ನಿಷ್ಠರಾಗಿರುವಂತೆ ಮಾಡುತ್ತಾಳೆ; ಏಕೆಂದರೆ ಅವಳು ಸ್ತ್ರೀಯ ಮೂರ್ತ ರೂಪವಾಗಿದ್ದಾಳೆ (ಹಿಂದಿನ ನಾಮ).
Kāmyā काम्या (321)
೩೨೧. ಕಾಮ್ಯಾ
ಕಾಮ್ಯಾ ಎಂದರೆ ದೇವಿಯನ್ನು ನೋಡಲು ಉತ್ಕಟವಾಗಿ ಬಯಸುವುದು. ಮುಕ್ತಿಯನ್ನು ಪಡೆಯ ಬಯಸುವವರು ಆಕೆಯ ಬಗ್ಗೆ ಆಸಕ್ತಿಯಿಟ್ಟುಕೊಂಡಿರುತ್ತಾರೆ. ಮುಕ್ತಿಯು ಕೇವಲ ಜ್ಞಾನದಿಂದ ಮಾತ್ರವೇ ಲಭ್ಯವಾಗುತ್ತದೆ ಮತ್ತು ದೇವಿಯೇ ಆ ಜ್ಞಾನವಾಗಿದ್ದಾಳೆ (ನಾಮ ೯೮೦). ಕೃಷ್ಣ ಪಕ್ಷದ ೧೨ನೇ ತಿಥಿಯನ್ನೂ ಸಹ ಕಾಮ್ಯಾ ಎನ್ನುತ್ತಾರೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 317-321 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ
ಶ್ರೀಧರರೆ, ೮೭. ಶ್ರೀ ಲಲಿತಾ ಸಹಸ್ರನಾಮದ ವಿವರಣಾ ಸಾರ, ತಮ್ಮ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೩೧೭ - ೩೨೧
___________________________________
೩೧೭. ರಕ್ಷಾಕರೀ
ಜಗವಾ ಪೊರೆವವಳಲ್ಲವೆ ದೇವಿ ವಿಸ್ಮಯ ನಡೆಸುವ ಪರಿ
ಹೋಮಾಹುತಿಗರ್ಪಿತ ಸಸಿ ಭಸಿತದಂತೆ ತಾಯಿತ ಸೇರಿ
ರಕ್ಷಿಸುತ ದುಷ್ಟಶಕ್ತಿ ಪೂರ ಧರಿಸಿರೆ ಅನವರತ ರಕ್ಷಾಕರೀ
ಭೌತಿಕ ಶೇಷ ವಿನಾಶಕ ರೂಪದಿ ಸ್ಥಿತಿಲಯಕೆ ಸರ್ವೇಶ್ವರಿ!
೩೧೮. ರಾಕ್ಷಸಘ್ನೀ
ದುಷ್ಟತನ ದೃಷ್ಕೃತ್ಯ ದಾನವರಾಜ್ಯ, ಮಿತಿ ಮೀರೆ ಅವತರಿಸಿ ತೇಜ
ಶಿಷ್ಟ ರಕ್ಷಣ ದುಷ್ಟ ಶಿಕ್ಷಣ ಯುಗಯುಗದಲು ಕಾಡಲು ರಕ್ಕಸ ಬೀಜ
ಹಾಹಾಕಾರ ದುಷ್ಟಾಚಾರವಿರಲೆಲ್ಲೆಡೆ, ಹೊತ್ತಾಗಿ ಮಹಾಪ್ರಳಯಾಗ್ನಿ
ಸರ್ವನಾಶ ಪುನರ್ಸೃಷ್ಟಿಯೊಟ್ಟಿಗೆ ರಕ್ಕಸರ ಸಂಹರಿಸುತ ರಾಕ್ಷಸಘ್ನಿ!
೩೧೯. ರಾಮಾ
ಸ್ತ್ರೀ ಮೂರ್ತರೂಪವೆ ದೇವಿ ಶಕ್ತಿಯಾಗಿ ನೆಲೆಸುತ ಪ್ರತಿ ಮಹಿಳೆಯಲ್ಲಿ
ದೇವೀ ಸ್ವರೂಪಿ ನಾರಿಗೌರವ, ಕಡೆಗಣಿಸಿದ ಪ್ರಕೃತಿ ಪುರುಷದಳಿವಲ್ಲಿ
'ರಂ' ಆನಂದಾಗ್ನಿ ಬೀಜಾಕ್ಷರ, ವರ್ಧನೆ ಸುಪ್ತಶಕ್ತಿ ಸಹಸ್ರಾರ ಸಂಭ್ರಮ
ಯೋಗಿ ಕಂಗಳಿಗಿತ್ತ ಹಬ್ಬ ಪರಮಾನಂದ, ಕಾರಣ ಶ್ರೀಲಲಿತೆ ರಾಮಾ!
೩೨೦. ರಮಣ-ಲಂಪಟ
ಗೀಳನ್ಹಿಡಿಯೆ ಲಂಪಟತನ, ಜೊತೆ ಸತಿಪತಿಗ್ಹಿಡಿಯಲೆ ಆಭರಣ
ಪರಮಾನಂದದ ದಿವ್ಯ ಕ್ಷಣ, ಸುಖ ದಾಂಪತ್ಯ ಸವಿ ಅವಿಸ್ಮರಣ
ಅಸೀಮ ಶಿವ ನಿಷ್ಠೆಯಲಾಡಿ ಶಕ್ತಿ, ಸಹಸ್ರಾರ ಮಿಲನ ಸಾಂಗತ್ಯ
ಸ್ತ್ರೀಮೂರ್ತರೂಪಿ ಸೋದಾಹರಣ, ರಮಣ ಲಂಪಟರಾಗಲಗತ್ಯ!
೩೨೧. ಕಾಮ್ಯಾ
ಉತ್ಕಟೇಚ್ಛೇ ಬಯಸುವಿಕೆ ಮಾನವಸಹಜ ಭಾವನೆ
ದೇವಿಯನು ಕಾಣಲು ಬೇಕು ಜ್ಞಾನ ದೀಕ್ಷಾ ಕಾಮನೆ
ಮುಕ್ತಿ ಮಾರ್ಗಕೆ ದೀಪ್ತಿ ಜ್ಞಾನ ದೀವಿಗೆಯ ಪಥ ರಮ್ಯ
ಕೋರಲು ಸುಜ್ಞಾನ ತಾನಾಗಿ ದೇವಿ ಲಲಿತೆ ಕಾಮ್ಯಾ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ by nageshamysore
ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ
ನಾಗೇಶರೆ,
ಈ ಕಂತಿನ ಮೊದಲನೇ ಕವನವೇ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದ ಮೇಲೆ ಉಳಿದವುಗಳ ಬಗ್ಗೆ ಹೇಳುವುದೇ ಬೇಡ ಅಷ್ಟೊಂದು ಚೆನ್ನಾಗಿವೆ. ಎಲ್ಲಾ ಚೆನ್ನಾಗಿದೆ ಎಂದ ಮೇಲೆ ಮತ್ತೇನು ಎನ್ನುತ್ತೀರ? ಒಂದೆರಡು ಸಣ್ಣ ತಪ್ಪುಗಳನ್ನು ಸರಿಪಡಿಸುವ ವಿನಹ ಈ ಕಂತಿನಲ್ಲಿ ಹೆಚ್ಚಿನ ಬದಲಾವಣೆ ಬೇಕಿಲ್ಲ :)
ನಾಮ ೩೧೯. ರಾಮಾ
ಸ್ತ್ರೀ ಮೂರ್ತರೂಪವೆ ದೇವಿ ಶಕ್ತಿಯಾಗಿ ನೆಲೆಸುತ ಪ್ರತಿ ಮಹಿಳೆಯಲ್ಲಿ
ದೇವೀ ಸ್ವರೂಪಿ ನಾರಿಗೌರವ, ಕಡೆಗಣಿಸಿದ ಪ್ರಕೃತಿ ಪುರುಷದಳಿವಲ್ಲಿ
ಕಡೆಗಣಿಸಿದ ಪ್ರಕೃತಿ ಪುರುಷದಳಿವಲ್ಲಿ - ಈ ನುಡಿಗಟ್ಟು ಏಕೋ ಅಸಮಂಜಸವೆನಿಸುತ್ತಿದೆ; ಸ್ವಲ್ಪ ಬದಲಾಯಿಸಲು ಪ್ರಯತ್ನಿಸಿ.
:
:
೩೨೧. ಕಾಮ್ಯಾ
ಉತ್ಕಟೇಚ್ಛೇ ಬಯಸುವಿಕೆ ಮಾನವಸಹಜ ಭಾವನೆ
ಉತ್ಕಟೇಚ್ಛೇ ಬಯಸುವಿಕೆ =ಉತ್ಕಟವಾಗಿ ಬಯಸುವಿಕೆ ಅಥವಾ ಉತ್ಕಟೇಚ್ಛೆ, ಬಯಸುವಿಕೆ ಮಾಡಿ. ಇಲ್ಲಿದಿದ್ದರೆ ಇಚ್ಛೆಯನ್ನೇ ಬಯಸಿದಂತೆ ಎನ್ನುವ ವಿಲಕ್ಷಣ ಅರ್ಥವನ್ನು ಕೊಡುವ ಸಾಧ್ಯತೆಯಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.
ವಿ.ಸೂ.: ನಿಮ್ಮನ್ನು ಸುಮ್ಮನೆ ಕುಳ್ಳಿರಸಲಿಚ್ಛಿಸದೆ ಮತ್ತೊಂದು ಕಂತನ್ನು ರಾತ್ರಿ ಸೇರಿಸಿದ್ದೇನೆ. ಈಗ ಮತ್ತೊಂದನ್ನು ಸೇರಿಸುತ್ತಿದ್ದೇನೆ. :)
In reply to ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ by makara
ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ
ಶ್ರೀಧರರೆ,
ಈ ತಿದ್ದುಪಡಿ ಹೊಂದಿಕೆಯಾದೀತೆ?
೩೧೯. ರಾಮಾ
ಸ್ತ್ರೀ ಮೂರ್ತ ರೂಪವೆ ದೇವಿ, ಶಕ್ತಿಯಾಗಿ ನೆಲೆಸಿ ಪ್ರತಿ ಮಹಿಳೆಯಲಿ
ನಾರಿ ಗೌರವಿಸೆ ದೇವಿ ಸಮ್ಮಾನ, ಅವಳಿರದೆ ಸೃಷ್ಟಿ ಸಂಭಾಳಿಸಲೆಲ್ಲಿ
'ರಂ' ಆನಂದಾಗ್ನಿ ಬೀಜಾಕ್ಷರ, ವರ್ಧಿಸಿ ಸುಪ್ತಶಕ್ತಿ ಸಹಸ್ರಾರ ಸಂಭ್ರಮ
ಯೋಗಿ ಕಂಗಳಿಗದೆ ಹಬ್ಬ ಪರಮಾನಂದ, ಕಾರಣ ಶ್ರೀಲಲಿತೆ ರಾಮಾ!
೩೨೧. ಕಾಮ್ಯಾ
ಉತ್ಕಟೇಚ್ಛೆ, ಬಯಸುವಿಕೆ ಮಾನವಸಹಜ ಭಾವನೆ
ದೇವಿಯನು ಕಾಣಲು ಬೇಕು ಜ್ಞಾನ ದೀಕ್ಷಾ ಕಾಮನೆ
ಮುಕ್ತಿ ಮಾರ್ಗಕೆ ದೀಪ್ತಿ ಜ್ಞಾನ ದೀವಿಗೆಯ ಪಥ ರಮ್ಯ
ಕೋರಲು ಸುಜ್ಞಾನ ತಾನಾಗಿ ದೇವಿ ಲಲಿತೆ ಕಾಮ್ಯಾ!
<<<<ವಿ.ಸೂ.: ನಿಮ್ಮನ್ನು ಸುಮ್ಮನೆ ಕುಳ್ಳಿರಸಲಿಚ್ಛಿಸದೆ ಮತ್ತೊಂದು ಕಂತನ್ನು ರಾತ್ರಿ ಸೇರಿಸಿದ್ದೇನೆ. ಈಗ ಮತ್ತೊಂದನ್ನು ಸೇರಿಸುತ್ತಿದ್ದೇನೆ. :)>>>>
- ಈಗ ನಿಮ್ಮ ಹಿಂದೋಡುವ ಸರದಿ ನನ್ನದೆಂದು ಕಾಣುತ್ತದೆ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ by nageshamysore
ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ
ನಾಗೇಶರೆ,
ಇದೀಗ ತಾನೇ ನೆಟ್ ತೆರೆದೆ, ಇನ್ನೂ ಏಕೋ ನೀವು ಪ್ರತಿಕ್ರಿಯೆ ನೀಡಿಲ್ಲ ಬಹುಶಃ ಕಾರ್ಯದ ಒತ್ತಡ ಹೆಚ್ಚಿರಬಹುದೇನೋ ಎಂದುಕೊಂಡೆ. ಅಷ್ಟರಲ್ಲೇ ನಿಮ್ಮ ಈ ಪ್ರತಿಕ್ರಿಯೆ ಸೇರಿಕೊಂಡುಬಿಟ್ಟಿದೆ. ಇರಲಿ, ಈಗ ನೀವು ಮಾಡಿರುವ ಸವರಣೆ ಚೆನ್ನಾಗಿವೆ; ಆದರೂ ಸ್ವಲ್ಪ ಇನ್ನೂ ಉತ್ತಮಪಡಿಸಬಹುದಿತ್ತೇನೋ ಎನ್ನುವ ಸಣ್ಣ ಅಳುಕೂ ಇಲ್ಲದಿಲ್ಲ. ಆಮೇಲೆ ನೋಡೋಣ; ಸಧ್ಯಕ್ಕೆ ಇವನ್ನೇ ಅಂತಿಮಗೊಳಿಸಿ.
ಧನ್ಯವಾದಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ by makara
ಉ: ೮೭. ಶ್ರೀ ಲಲಿತಾ ಸಹಸ್ರನಾಮ ೩೧೭ರಿಂದ ೩೨೧ನೇ ನಾಮಗಳ ವಿವರಣೆ
ಸರಿ ಶ್ರೀಧರರೆ, ಈ ರೂಪದಲ್ಲೆ ಅಂತಿಮ ಕೊಂಡಿ ಕೊಟ್ಟಿದ್ದೇನೆ. ಕೊನೆಗೆ ಮತ್ತೊಮ್ಮೆ ಎಲ್ಲವನ್ನು ಪರಾಂಬರಿಸಿ ನೋಡಿ ಅಂತಿಮಾಂತಿಮ ಪರಿಷ್ಕರಣೆಗೆ ಯತ್ನಿಸೋಣ (ವೆಬ್ ಸೈಟಿನಲ್ಲಿ) - ಆಗ ಹೊಸ ಹೊಳಹುಗಳು ಹೊಳೆಯುವ ಸಾಧ್ಯತೆಯಿರುತ್ತದೆ. ನೀವಂದ ಹಾಗೆ ಸ್ವಲ್ಪ 'ಬಿಜಿ' ಸಹ - ಜತೆಗೆ ಮಗನ ಪರೀಕ್ಷಾ ಸಮಯ ಶುರುವಾಗಿರುವುದರಿಂದ ಸ್ವಲ್ಪ ವೇಗ 'ಕುಂಠಿತ'ವಾಗುತ್ತಿದೆ. ಬಹುಶಃ ಇನ್ನು ಆರೇಳು ವಾರ, ನಿಮ್ಮ ಹಿಂದೆ ಓಡಬೇಕೆಂದು ಕಾಣುತ್ತಿದೆ :-)
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು