೯/೧೧ ಕರುಳು ಹಿಂಡುವ ಸ್ಮಾರಕ ಭವನ

೯/೧೧ ಕರುಳು ಹಿಂಡುವ ಸ್ಮಾರಕ ಭವನ

 ಕಳೆದ ತಿಂಗಳು ನಾನು ವಿಶ್ವ ವಾಣಿಜ್ಯ ಕೇಂದ್ರವನ್ನು ನೋಡಲು ಹೋಗಿದ್ದೆ. ಸನಿಹದಲ್ಲಿಯೇ ಒಂದು ಶ್ರದ್ಧಾಂಜಲಿ ಭವನವನ್ನು ರೂಪಿಸಿರುವರು. ಅದೊಂದು ಪುಟ್ಟ ವಸ್ತು ಸಂಗ್ರಹಾಲಯವೂ ಆಗಿದೆ. ಒಳಗೆ ಹೋಗುತ್ತಿದ್ದ ಹಾಗೆ, ಬಲಗಡೆ ವಿಶ್ವ ವಾಣಿಜ್ಯ ಕೇಂದ್ರದ ಮಹತ್ವವನ್ನು ಸಾರುವ ಒಂದು ಡಾಕ್ಯುಮೆಂಟರಿ ಪ್ರದರ್ಶಿತವಾಗುತ್ತಿರುತ್ತದೆ. ನಂತರ ವಾಣಿಜ್ಯ ಕೇಂದ್ರದ ವಿವಿಧ ಗೋಡೆಯೆತ್ತರದ ಛಾಯಾಚಿತ್ರಗಳು. ಮುಂದುಗಡೆ ವಿ.ವಾ.ಕೇಂ ದ ಒಂದು ಮಾದರಿ. ಒಳ ಹೋಗುತ್ತಲೇ, ಕಟ್ಟಡ ಅವಶೇಷಗಳಿಂದ ಹೊರತೆಗೆದ ಮೊಬೈಲ್, ಟೋಪಿ, ಪರ್ಸ್, ಮಗುವಿನ ಆಟದ ಬೊಂಬೆ, ಐ.ಡಿ.ಕಾರ್ಡ್, ಕ್ರೆಡಿಟ್ ಕಾರ್ಡ್, ಸುಟ್ಟ ಬಟ್ಟೆಗಳು, ಕರಗಿರುವ ಲೋಹಗಳು, ಮುದ್ದೆಯಾಗಿರುವ ವಿಮಾನದ ಅವಶೇಷಗಳು....ನಂತರ ಒಂದು ಸಾಕ್ಷ್ಯ ಚಿತ್ರ. ಕುಸಿದ ಕೇಂದ್ರಗಳ ಅವಶೇಷಗಳನ್ನು ಹೊರತೆಗೆಯುವ ಕರುಳು ಕಲಕುವ ಭೀಕರ ದೃಶ್ಯಗಳು.

ಒಳಕೋಣೆಯಲ್ಲಿ ಒಂದು ಕಡೆ ದುರಂತದಲ್ಲಿ ಮಡಿದ ವೈಮಾನಿಕ ಸಿಬ್ಬಂದಿ, ವಿಮಾನ ಪ್ರಯಾಣಿಕರು, ಕಟ್ಟಡಗಳಲ್ಲಿದ್ದ, ಕೆಳಗಿದ್ದ ನಾಗರಿಕರು, ರಕ್ಷಿಸಲು ಹೋಗಿ ಜೀವ ತೆತ್ತ ಅಗ್ನಿಶಾಮಕದವರು, ಪೋಲೀಸರು...ಎಲ್ಲರ ಹೆಸರುಗಳು. ಮುಂದೆ ಭಾವಚಿತ್ರಗಳು...ಇಡೀ ಗೋಡೆಯ ತುಂಬಾ.....

ನೆಲಮಾಳಿಗೆಗೆ ಹೋಗುವ ಹಾದಿಯಲ್ಲಿ ಜಪಾನೀ ಮಕ್ಕಳು ಕಳುಹಿಸಿ ಕೊಟ್ಟಿರುವ ಕಾಗದದ ಕೊಕ್ಕರೆಗಳು ಗೊಂಚಲು ಗೊಂಚಲಾಗಿ ತೂಗುಬಿದ್ದಿದ್ದವು.

ಜಗತ್ತಿನ ವಿವಿದೆಡೆಯಿಂದ ಮಹನೀಯರು ಬರೆದಿದ್ದ ಪತ್ರಗಳು. ಚಿತ್ರಗಳು.... ಸನಿಹದಲ್ಲಿ ವಿಶಾಲ ಮೇಜುಗಳು. ಕುಳಿತುಕೊಳ್ಳಲು ಸಾಕಷ್ಟು ಕುರ್ಚಿಗಳು. ನಾನು ಕುಳಿತುಕೊಂಡೆ. ಅಲ್ಲಿ ಸತ್ತವರ ಆತ್ಮಕ್ಕೆ ಶಾಂತಿಯನ್ನು ಕೋರುವ, ಭಯೋತ್ಪಾದಕತೆಯನ್ನು ಖಂಡಿಸುವ, ನಮ್ಮ ಆಭಿಪ್ರಾಯವನ್ನು ತಿಳಿಸಲು ಅವಕಾಶವನ್ನು ಮಾಡಿಕೊಡುವ ಹಾಳೆಗಳು. ನಾನೂ ಒಂದು ಪತ್ರವನ್ನು ಕನ್ನಡದಲ್ಲಿ ಬರೆದೆ. ಪೆಟ್ಟಿಗೆಯಲ್ಲಿ ಹಾಕಿದೆ. ಒಂದು ಮೂಲೆಯಲ್ಲಿ ಕುಸಿದ ಕಟ್ಟಡವಿದ್ದ ಸ್ಥಳದಲ್ಲಿ ತಲೆಯೆತ್ತಲಿರುವ ಕಟ್ಟಡಗಳ ಗ್ರಾಫಿಕ್ ಚಿತ್ರ ಪರದೆಯ ಮೇಲೆ ಮೂಡಿ ಬರುತಿತ್ತು. ಭಾರ ಮನಸ್ಸಿನಿಂದ ಹೊರಬಂದೆ. ದ್ವಾರದಲ್ಲಿ ದುರಂತವನ್ನು ನೆನಪಿಸುವ ಟಿ ಷರ್ಟುಗಳು, ಪೆನ್ನುಗಳು, ಲಾಕೆಟ್‍ಗಳು....ಹೀಗೆ ಹಲವು ಸಂಸ್ಮರಣ ಸಾಮಾಗ್ರಿಗಳು! (ದುರಂತದಲ್ಲಿಯೂ ಎಂತಹ ವ್ಯವಹಾರ ಚತುರತೆ!?) ದುರಂತವನ್ನು ವಿವರಿಸುವ ಹಲವು ಪುಸ್ತಕಗಳು. ಒಂದು ಪುಸ್ತಕವನ್ನು ಕೊಂಡು ಹೊರಟು ಬಂದೆ. ಎದುರಿಗೆ ಪ್ರಪಾತದ ಹಾಗೆ ನೆಲವನ್ನು ಅಗೆದು ಹೊಸಕಟ್ಟಡಕ್ಕೆ ಬುನಾದಿಯನ್ನು ಹಾಕುತ್ತಿದ್ದರು..............(ನಾನು ತೆಗೆದ ಛಾಯಾಚಿತ್ರಗಳನ್ನು ಇಲ್ಲಿ ಅಪ್‍ಲೋಡ್ ಮಾಡಲು ಆಗುತ್ತಿಲ್ಲ.)                                                                                                                                                                                  

 

 

Rating
No votes yet

Comments