೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೩೫ - ೩೩೭
Veda-vedyā वेद-वेद्या (335)
೩೩೫. ವೇದ-ವೇದ್ಯಾ
ದೇವಿಯನ್ನು ವೇದಗಳ ಮೂಲಕ ಅರಿಯಬಹುದು. ಎಲ್ಲಾ ವೇದಗಳು ಅಂತಿಮ ಸತ್ಯವಾದ ಬ್ರಹ್ಮದೆಡೆಗೆ ಕರೆದೊಯ್ಯುತ್ತವೆ. ಬ್ರಹ್ಮವು ವೇದಗಳ ಸ್ವರೂಪವಾಗಿದೆ.
ಭಗವದ್ಗೀತೆಯಲ್ಲಿ (೧೫.೧೫) ಶ್ರೀಕೃಷ್ಣನು ಹೇಳುತ್ತಾನೆ, "ಎಲ್ಲಾ ವೇದಗಳಿಂದಲೂ ನಾನು ತಿಳಿಯಲ್ಪಡಬೇಕಾದವನು ......ನಾನು ಎಲ್ಲಾ ವೇದಗಳನ್ನೂ ಬಲ್ಲವನಾಗಿದ್ದೇನೆ".
ವೇದಗಳನ್ನು ಕೇವಲ ಜ್ಞಾನದ ಮೂಲಕವಷ್ಟೇ ಅರಿಯಬಹುದು. ಬೇರೆ ವಿಧವಾಗಿ ಹೇಳುವುದಾದರೆ, ಒಬ್ಬನಿಗೆ ಜ್ಞಾನವಿದ್ದಲ್ಲಿ ಮಾತ್ರವೇ ಆತ್ಮಸಾಕ್ಷಾತ್ಕಾರವು ಸಾಧ್ಯವಾಗುತ್ತದೆ. ಬ್ರಹ್ಮವು ಜ್ಞಾನದ ಸಾರವಾಗಿದೆ. ವೇದ ಮತ್ತು ವೇದಾಂತಗಳಲ್ಲಿ ವ್ಯತ್ಯಾಸವಿದೆ. ವೇದಾಂತವು ಉಪನಿಷತ್ತುಗಳ ಬೋಧನೆಯನ್ನು ಕುರಿತಾಗಿ ಹೇಳುತ್ತದೆ. ಉಪನಿಷತ್ತುಗಳ ಅಧ್ಯಯನವು ಜ್ಞಾನಕ್ಕೆ ಬೇಕಾದ ಪ್ರೌಢಿಮೆಯನ್ನು ಒದಗಿಸಿತ್ತದೆ.
ಶ್ರೀ ಚಕ್ರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದ್ವಾರಗಳಿದ್ದು ಅವು ಪ್ರತಿಯೊಂದೂ ಒಂದೊಂದು ವೇದವನ್ನು ಪ್ರತಿನಿಧಿಸುತ್ತವೆಂದು ಹೇಳಲಾಗುತ್ತದೆ. ದೇವಿಯನ್ನು ವೇದಗಳ ಮೂಲಕ ತಿಳಿದುಕೊಳ್ಳುವುದನ್ನು ‘ಶುದ್ಧ ವಿದ್ಯಾ’ (ಪರಿಪೂರ್ಣ ಜ್ಞಾನ) ಎಂದು ಕರೆಯಲಾಗುತ್ತದೆ ಇದಕ್ಕೆ ವ್ಯತಿರಿಕ್ತವಾಗಿ ‘ಶ್ರೀ ವಿದ್ಯೆ’ಯು ಬಹುತೇಕ ಹೋಮ ಹವನಗಳಿಂದ ಕೂಡಿದೆ.
ವೇದಗಳ ಕುರಿತಾಗಿ ಹಲವಾರು ಉತ್ತಮವಾದ ವ್ಯಾಖ್ಯಾನ ಗ್ರಂಥಗಳು ದೊರೆಯುತ್ತವೆಯಾದರೂ, ವಾಸ್ತವ ಸಂಗತಿಯೇನೆಂದರೆ ವೇದಗಳು ಮಾನವನ ವಿಶ್ಲೇಷಣೆಗೆ ನಿಲುಕಲಾರದವುಗಳಾಗಿವೆ. ಒಬ್ಬರು ವೇದಗಳನ್ನು ನೋಡಿದಾಗ ಅವು ಕೆಲವು ಯಜ್ಞ-ಯಾಗಾದಿಗಳನ್ನು ಕುರಿತಾದ ಬಾಹ್ಯ ಆಚರಣೆಗಳ ಕಂತೆಯಾಗಿ ತೋರಬಹುದು ಆದರೆ ವಾಸ್ತವವಾಗಿ ಅದು ಹಾಗಿಲ್ಲ. ವೇದಗಳು ಹಲವಾರು ಅಂತರ್ಗತ ಸೂಕ್ಷ್ಮ ವ್ಯಾಖ್ಯಾನಗಳನ್ನು ವ್ಯಕ್ತಪಡಿಸುತ್ತವೆ ಮತ್ತು ಅಂತಹ ವ್ಯಾಖ್ಯಾನಗಳಿಂದಾಗಿಯೇ ಉಪನಿಷತ್ತುಗಳು ಹುಟ್ಟಿರುವುವು. ಉಪನಿಷತ್ತುಗಳು ಸರಳವಾಗಿ ಮಾತನಾಡುತ್ತವೆ ಮತ್ತು ನೇರವಾಗಿ ವಿಷಯವನ್ನು ಪ್ರಸ್ತಾಪಿಸುತ್ತವೆ. ಅವುಗಳು ಬ್ರಹ್ಮದ ಗುಣಲಕ್ಷಣಗಳನ್ನು ಸಕಾರಾತ್ಮಕ ಮತ್ತು ನಕಾರಾತ್ಮಕ ಹೇಳಿಕೆಗಳ ಮೂಲಕ ದೃಢಪಡಿಸಲು ಪ್ರಯತ್ನಿಸುತ್ತವೆ. ದೇವಿಯು ಈ ವೇದಗಳ ಸಾರವಾಗಿದ್ದಾಳೆ.
ವೇದಗಳ ಕುರಿತು ಹೆಚ್ಚಿನ ಮಾಹಿತಿ:
ವೇದಗಳು ಮಾನವ ಸಂತತಿಗೆ ಮಹತ್ವದ ಉದ್ಗ್ರಂಥಗಳಾಗಿವೆ. ಅವುಗಳು, ಆರ್ಯರ ಕಾಲದಲ್ಲಿ ಬಳಕೆಯಲ್ಲಿದ್ದ ಉಚ್ಛಮಟ್ಟದ ಪುರಾತನ ಸಂಸ್ಕೃತ ಭಾಷೆಯಲ್ಲಿವೆ. ವೇದಗಳ ಸೂತ್ರಗಳನ್ನು ವಿವಿಧ ಕೋನಗಳಿಂದ ವಿಶ್ಲೇಷಿಸಬಹುದು, ಉದಾಹರಣೆಗೆ ಸಾಹಿತ್ಯ, ಆಧ್ಯಾತ್ಮಿಕ, ಧಾರ್ಮಿಕ, ವ್ಯಾಕರಣ, ತತ್ವ-ಸಿದ್ಧಾಂತ ಮೊದಲಾದವು. ಇಂದು ವೇದಗಳ ವ್ಯಾಖ್ಯಾನಗಳ ಕುರಿತಾದ ಹಲವಾರು ಗ್ರಂಥಗಳು ಲಭ್ಯವಿದ್ದರೂ ಸಹ ಅವುಗಳು ವೇದಗಳ ಉದ್ದೇಶಿತ ಅರ್ಥವನ್ನು ಹೊಮ್ಮಿಸುತ್ತವೆ ಎನ್ನುವುದು ಅನುಮಾನದ ವಿಷಯವಾಗಿದೆ. ಇದು ಏಕೆಂದರೆ ಅವುಗಳು ದೋಷಪೂರಿತ ವ್ಯಾಖ್ಯಾನಗಳಿಂದ ಕೂಡಿವೆ ಎಂದಲ್ಲ ಅಥವಾ ವ್ಯಾಖ್ಯಾನಕಾರರ ಅಸಾಮರ್ಥ್ಯದಿಂದಾಗಲ್ಲ ಆದರೆ ಸ್ಥೂಲ ಹಾಗೂ ಸೂಕ್ಷ್ಮ ವಿಷಯಗಳನ್ನೂ ವೇದಗಳು ವ್ಯಕ್ತಮಾಡುವ ಅಸಾಧಾರಣ ಸಾಮರ್ಥ್ಯದಿಂದಾಗಿ. ವೇದಗಳನ್ನು ಸೂಕ್ಷ್ಮವಾಗಿ ಜಾಗರೂಕತೆಯಿಂದ ಓದಿಕೊಂಡಾಗ ಅದರಲ್ಲಿರುವ ಸೂತ್ರಗಳು ಸಾಧಕನ ದೇಹದ ಒಂದೊಂದೇ ಅಂಗಗಳನ್ನು ಸಾಂಕೇತಿಕವಾಗಿ ಬೇರ್ಪಡಿಸಿ ಅವುಗಳನ್ನು ಉಚ್ಛ ಮಟ್ಟದ ಶಕ್ತಿ ಕ್ಷೇತ್ರಗಳಿಗೆ ಸಮರ್ಪಿಸಿ ಶುದ್ಧೀಕರಿಸಿಕೊಳ್ಳಬಹುದೆನ್ನುವುದು ವಿಶದವಾಗುತ್ತದೆ. ವೇದಗಳು ಎಂದಿಗೂ ಪ್ರಾಣಿಗಳ ಭೌತಿಕ ವಧೆಯನ್ನು ಕುರಿತಾಗಿ ಬೋಧಿಸಿಲ್ಲ. ಆದರೆ ಪ್ರಾಣಿಗಳ ವಿವಿಧ ಅಂಗಗಳನ್ನು ಆಹುತಿಯಾಗಿ ಅರ್ಪಿಸಬೇಕೆಂದು ತಪ್ಪಾಗಿ ಅರ್ಥೈಸಲಾಗಿದೆ. ವೇದಗಳು ದೈವೀ ಸಂವಹನದಿಂದ ಹೊರಹೊಮ್ಮಿದವುಗಳು. ಬಹಳ ಕಾಲದವರೆಗೆ ಅವುಗಳು ಗ್ರಂಥ ರೂಪದಲ್ಲಿ ಬರೆಯಲ್ಪಟ್ಟಿರಲಿಲ್ಲ ಆದರೆ ಅವುಗಳು ಗುರುಮುಖೇನ ಅವರ ಶಿಷ್ಯರಿಗೆ ಬಾಯಿ ಮಾತಿನ ಮೂಲಕ ಹರಿದು ಬಂದವು. ಋಷಿ ಮುನಿಗಳು ಈ ಉಕ್ತ ಮೂಲದ ದಾರಿಯನ್ನು ಆರಿಸಿಕೊಂಡರು ಏಕೆಂದರೆ ಬಹುಶಃ ಅವರಿಗೆ ಇದರಿಂದಾಗಿ ಅದರಲ್ಲಿ ನುಸುಳಬಹುದಾದ ವಿಷಯ ವಿಕಾರಗಳನ್ನು ತಡೆಯಬಹುದೆನಿಸಿದ್ದರಿಂದ. ಬಹುತೇಕ ವೇದಗ್ರಂಥಗಳು ಸೂತ್ರ ರೂಪದಲ್ಲಿವೆ. ಇವುಗಳನ್ನು ಮಂತ್ರ ಸೂಕ್ತಗಳೆಂದು ಕರೆಯಲಾಗಿದ್ದು ಅವುಗಳ ಮುಖತಃ ಹರಿಯುವಿಕೆಯು ಉಚ್ಛಾರಣೆ ಮತ್ತು ಲಯಬದ್ಧತೆಯಲ್ಲಿ ಅಡಗಿದೆ. ವೇದಗಳ ಕೆಲವೊಂದು ಭಾಗಗಳು ಗದ್ಯ ರೂಪದಲ್ಲಿಯೂ ಇದ್ದು ಅವುಗಳನ್ನು ಬ್ರಾಹ್ಮಣಗಳೆಂದು ಕರೆಯುತ್ತಾರೆ. ಈ ಪಂಕ್ತಿಗಳು ಹೆಚ್ಚಾಗಿ ಯಜ್ಞ-ಯಾಗಾದಿಗಳ ಪ್ರಾಯೋಗಿಕ ಕ್ರಮಗಳ ಕುರಿತಾಗಿ ಹೇಳುತ್ತವೆ.
ನಾಲ್ಕು ವೇದಗಳಿದ್ದು ಅವುಗಳು ಕ್ರಮವಾಗಿ ಋಗ್,ಯಜುರ್, ಸಾಮ ಮತ್ತು ಅಥರ್ವವಾಗಿವೆ (ऋग्, यजुर्, साम, अथर्व). ಮೊದಲ ಮೂರು ವೇದಗಳನ್ನು ತ್ರಿವಿದ್ಯಾ (त्रिविद्या) ಅಂದರೆ ಅದರ ಶಬ್ದಶಃ ಅರ್ಥವು ಮೂರು ವಿಧವಾದ ಜ್ಞಾನ ಎನ್ನುವುದಾಗಿದೆ. ಅಥರ್ವಣ ವೇದವು ನಂತರದ ಕೃತಿಯಾಗಿದ್ದು ಅದನ್ನು ಇಲ್ಲಿ ಸೇರಿಸಲಾಗಿಲ್ಲ. ಮೊದಲ ಮೂರು ವೇದಗಳ ಮೂಲವು ಗೊತ್ತಿಲ್ಲ. ಆದರೆ ವಾಸ್ತವದ ಸಂಗತಿಯೇನೆಂದರೆ ಅವು ಕಾಲನ ಪರಿಮಿತಿಯನ್ನು ಅಧಿಗಮಿಸಿ ಈಗಿನ ಸಮಕಾಲೀನ ಜಗತ್ತಿನಲ್ಲಿ ಇಂದಿಗೂ ಪ್ರಸ್ತುತವಾಗಿವೆ. ವೇದಗಳನ್ನು ಶ್ರುತಿಗಳೆಂದೂ ಕರೆಯುತ್ತಾರೆ. ವೇದಗಳನ್ನು ಅವುಗಳ ಮೂಲ ರೂಪದಲ್ಲಿ ಅರ್ಥೈಸಿಕೊಳ್ಳಲು ಬಹಳ ಕಷ್ಟವೆಂದು ಹೇಳಲಾಗುತ್ತದೆ ಏಕೆಂದರೆ ಅವುಗಳನ್ನು ಸ್ವಯಂ ಭಗವಂತನೇ ಪುರಾತನ ಋಷಿ ಮುನಿಗಳಿಗೆ ಹೇಳಿದನೆನ್ನಲಾಗಿದೆ. ಋಷಿಗಳು ತಮ್ಮ ಪರಮೋನ್ನತ ಬ್ರಹ್ಮಾಂಡ ಮೇದಸ್ಸನ್ನು ಪರಮ ಚೈತನ್ಯದ ಜ್ಞಾನದೊಂದಿಗೆ ಮೇಳೈವಿಸಿ ದೇವರ ನುಡಿಗಳನ್ನು ವೇದಗಳನ್ನಾಗಿ ಸಂಯೋಜಿಸಿದ್ದಾರೆ. ಅವರು ಈ ಸೂತ್ರಗಳನ್ನು ಕಂಠಪಾಠ ಮಾಡಿ ಅದನ್ನು ಅವರ ಶಿಷ್ಯರಿಗೆ ಬಾಯಿ ಮುಖೇನ ಪ್ರವಹಿಸುವಂತೆ ಮಾಡಿದರು. ಒಂದು ವೇಳೆ ಋಷಿಗಳು ಅವನ್ನು ತಾಳೆಗರಿಗಳ ಮೂಲಕ ದಾಖಲಿಸಲು ಪ್ರಯತ್ನಿಸಿದ್ದರೆ ಅವುಗಳು ಈ ವೇಳೆಗಾಗಲೇ ಪ್ರಕೃತಿ ಮಾತೆಯ ದಾಳಿಗೆ ಸಿಲುಕಿ ನಾಶವಾಗಿರುತ್ತಿದ್ದವು ಅಥವಾ ಮಾರ್ಪಾಡು ಹೊಂದುತ್ತಿದ್ದವು. ದೇವರ ಮಾತಿನ ಮರ್ಮವನ್ನು ತಿಳಿಯುವುದು ಮಾನವನ ಶಕ್ತಿಗೆ ಮೀರಿದ ವಿಷಯವಾಗಿದೆ. ಆದ್ದರಿಂದ ಅದನ್ನು ಸ್ವಲ್ಪ ಮಟ್ಟಿಗೆ ಸುಗುಮಗೊಳಿಸಲು ವೇದಗಳನ್ನು ಹಲವಾರು ವಿಷಯಾಧಾರಿತ ವಿಭಾಗಗಳನ್ನಾಗಿ ಮಾಡಿ ಒಂದೊಂದು ವಿಭಾಗವನ್ನೂ ಆಯಾ ಕ್ಷೇತ್ರಗಳಲ್ಲಿ ಪರಿಣಿತರಾದವರು ವಿಶ್ಲೇಷಿಸಲು ಪ್ರಯತ್ನಿಸಿದರು. ಈ ಅಧ್ಯಯನವನ್ನೇ ವೇದಾಂಗವೆಂದು ಕರೆಯಲಾಗಿದ್ದು ಇದು ಪದೋಚ್ಛಾರಣೆ, ಯಜ್ಞಯಾಗಾದಿಗಳ ವಿಧಿಗಳು, ಭಾಷಾ ಪರಿಣಿತಿ, ವ್ಯಾಕರಣ, ಶಬ್ದೋತ್ಪತ್ತಿ, ಶಬ್ದಕೋಶ, ವಾಕ್ಯರಚನೆ (ಛಂದಸ್ಸು), ಖಗೋಳ ವಿಜ್ಞಾನ ಮತ್ತು ಜ್ಯೋತಿಷ್ಯಗಳನ್ನು ಒಳಗೊಂಡಿದೆ.
ಒಂದು ವೇಳೆ ವೇದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದ್ದರೆ, ಅವುಗಳ ದೀರ್ಘವಾದ ಅಧ್ಯಯನವನ್ನು ಕೈಗೊಳ್ಳುವ ಅವಶ್ಯಕತೆ ಉಂಟಾಗುತ್ತಿರಲಿಲ್ಲ! ವೇದಾಂಗಗಳು ಮೊದಲಿಗೆ ವಿವಿಧ ಪರಿಣಿತರ ವ್ಯಾಖ್ಯಾನಗಳನ್ನು ಸಮೀಕರಿಸಲು ಪ್ರಯತ್ನಿಸಿ ಅದರ ಮೂಲಕ ಮೊದಲು ವೇದಗಳ ಸ್ಥೂಲ ವ್ಯಾಖ್ಯಾನವನ್ನು ಅರಿತು ನಂತರ ಅದರ ಗೂಡಾರ್ಥಗಳನ್ನು ಅರಿಯಲು ಪ್ರಯತ್ನಸಿದವು. ಮಾನವ ಜೀವನದ ಹುಟ್ಟಿನಿಂದ ಆರಂಭಿಸಿ ಮರಣಿಸುವವರೆಗಿನ ಪ್ರತಿಯೊಂದು ಚಟುವಟಿಕೆಯನ್ನೂ ವೇದಗಳು ಚರ್ಚಿಸುತ್ತವೆ ಎನ್ನುವ ನಿರ್ಣಯಕ್ಕೆ ಬರಲಾಯಿತು. ಈ ನಿರ್ಣಯದಂತೆ ಅವುಗಳನ್ನು ಮೂರು ವಿಶಾಲ ಭಾಗಗಳನ್ನಾಗಿ ವಿಭಾಗಿಸಲಾಯಿತು, ಅವೆಂದರೆ ಜ್ಞಾನ, ಕರ್ಮ ಮತ್ತು ಉಪಾಸನೆ. ಇಲ್ಲಿ ಜ್ಞಾನವೆಂದರೆ ವಿವೇಕ ಮತ್ತದು ಸಾಹಿತ್ಯಕ ಅರ್ಥದ ಜ್ಞಾನವಲ್ಲ. ಸಾಮಾನ್ಯವಾಗಿ ಜ್ಞಾನವೆಂದರೆ ಕಲಿಕೆ ಮತ್ತು ತರ್ಕದಿಂದ (ಕಾರಣಗಳ ವಿಶ್ಲೇಷಣೆಯಿಂದ) ದೊರೆತ ಫಲಿತಾಂಶದ ಮಾನಸಿಕ ಗ್ರಹಿಕೆಯಾಗಿದೆ. ವಿವೇಕವೆಂದರೆ ಗಳಿಸಿಕೊಂಡ ಜ್ಞಾನವನ್ನು ಪ್ರಾಯೋಗಿಕವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ, ವಿವೇಚನೆ ಮತ್ತು ಅಂತದೃಷ್ಟಿಯನ್ನು ಹೊಂದುವುದಕ್ಕೆ ಉಪಯೋಗಿಸುವುದಾಗಿದೆ. ಆದ್ದರಿಂದ ವಿವೇಕವನ್ನು ಜ್ಞಾನಕ್ಕಿಂತ ಹಿರದಾದುದೆಂದು ಪರಿಗಣಿಸಲಾಗಿದೆ. ವೇದಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿವೇಕವನ್ನು ಗಳಿಸಿಕೊಳ್ಳಲು ಸೂಚನೆಗಳನ್ನೀಯುತ್ತವೆ. ವಿವೇಕವೆನ್ನುವುದು ಅನುಭವದಿಂದ ಪಡೆದುಕೊಂಡದ್ದು ಮತ್ತು ಅನುಭವಗಳು ಕರ್ಮಗಳನ್ನು ಮಾಡಲು ಸೂಚಿಸುತ್ತವೆ. ಕರ್ಮಗಳೆಂದರೆ ಕೆಲಸಗಳು ಅಥವಾ ಕ್ರಿಯೆಗಳು. ನಿರಂತರ ಕ್ರಿಯೆಯಿಂದ ಅನುಭವವು ಹೊಂದಲ್ಪಡುತ್ತದೆ ಮತ್ತು ಹಾಗೆ ಗಳಿಸಲ್ಪಟ್ಟ ಅನುಭವದಿಂದ ಒಬ್ಬನು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಭೇದಗಳನ್ನು ಅರಿಯಲು (ವಿವೇಚಿಸಲು) ಶಕ್ತನಾಗುತ್ತಾನೆ. ಮುಂದಿನದೇ ಉಪಾಸನೆ ಅಂದರೆ ಯಜ್ಞ ಯಾಗ ಮೊದಲಾದ ವಿಹಿತ ಕರ್ಮಗಳನ್ನು ಮಾಡುವುದು. ಉಪಾಸನೆಯು ಕರ್ಮಕ್ಕಿಂತ ಭಿನ್ನವಾಗಿದೆ. ಕರ್ಮವು ಕೇವಲ ದೈಹಿಕ ಅಸ್ತಿತ್ವಕ್ಕಾಗಿ ಕೈಗೊಳ್ಳುವ ಕೆಲಸಗಳನ್ನು ಸೂಚಿಸುತ್ತದೆ. ಆದರೆ ಉಪಾಸನೆಯೆಂದರೆ ದೈವ ಸಾಕ್ಷಾತ್ಕಾರ ಪಡೆಯಲು ಮಾಡಬೇಕಾಗಿರುವ ಕ್ರಿಯೆಗಳು. ವೇದಗಳು ದೇವರ ಕಲ್ಪನೆಗೆ ಲೆಕ್ಕವಿಲ್ಲದಷ್ಟು ವ್ಯಾಖ್ಯಾನಗಳನ್ನು ಕೊಡುತ್ತವೆ. ವೇದಗಳ ಮೂಲ ಉದ್ದೇಶವು, ಅವುಗಳು ಬ್ರಹ್ಮವೆಂದು ಕರೆಯುವ ದೈವದ ಸಾಕ್ಷಾತ್ಕರವನ್ನು ಪಡೆಯಬೇಕು ಎನ್ನುವುದಾಗಿದೆ. ಬ್ರಹ್ಮ ಸಾಕ್ಷಾತ್ಕಾರಕ್ಕೆ ಜ್ಞಾನ, ಕರ್ಮ ಮತ್ತು ಉಪಾಸನೆ ಈ ಮೂರೂ ವಿಷಯಗಳಲ್ಲಿ ಪರಿಣಿತಿಯನ್ನು ಪಡೆಯಬೇಕೆಂದು ಹೇಳುತ್ತವೆ. ಆದ್ದರಿಂದ ವೇದಗಳನ್ನು ಅವುಗಳ ವಿಶಿಷ್ಠ ಶೈಲಿಯಲ್ಲಿಯೇ ಖಂಡಿತವಾಗಿ ಅರಿತುಕೊಳ್ಳಬೇಕೆಂದು ವಿಧಿಸಲಾಗಿದೆ, ಏಕೆಂದರೆ ಅದರಲ್ಲಿರುವ ಸೂಕ್ತಿಗಳಿಗೆ ಸುಪ್ತವಾದ ವಿಶೇಷಾರ್ಥಗಳಿವೆ.
Vindhyācala-nivāsinī विन्ध्याचल-निवासिनी (336)
೩೩೬. ವಿಂಧ್ಯಾಚಲ-ನಿವಾಸಿನೀ
ದೇವಿಯು ವಿಂಧ್ಯಾಚಲ ಪರ್ವತಗಳಲ್ಲಿ ನಿವಸಿಸುತ್ತಾಳೆ. ದುರ್ಗಾ ಸಪ್ತಶತಿಯ (ಇದರಲ್ಲಿ ಭಗವದ್ಗೀತೆಯ ರೀತಿಯಲ್ಲಿ ೭೦೦ ಶ್ಲೋಕಗಳಿದ್ದು ಇದು ಮಾರ್ಕಂಡೇಯ ಪುರಾಣದ ಭಾಗವಾಗಿದೆ) ಹನ್ನೊಂದನೇ ಅಧ್ಯಾಯದ ೪೧ನೇ ಶ್ಲೋಕದಲ್ಲಿ, ದೇವಿಯು ಹೇಳುತ್ತಾಳೆ, "ನಾನು ನಂದಗೋಪನ (ಭಗವಾನ್ ಕೃಷ್ಣನ ತಂದೆಯ) ಮನೆಯಲ್ಲಿ ಜನಿಸುತ್ತೇನೆ ಮತ್ತು ವಿಂಧ್ಯ ಪರ್ವತಗಳಲ್ಲಿ ವಾಸಿಸುತ್ತೇನೆ, ಆ ಸಮಯದಲ್ಲಿ ನಾನು ಇಬ್ಬರು ರಾಕ್ಷಸರ (ಶುಂಭ ಮತ್ತು ನಿಶುಂಭರ) ಸಂಹಾರವನ್ನು ಮಾಡುತ್ತೇನೆ". ಈ ಶ್ಲೋಕವು ಕೃಷ್ಣನೇ ಲಲಿತಾಂಬಿಕೆಯೆಂದು ಗುರುತಿಸಲು ಬಹಳ ಸ್ಪಷ್ಟವಾದ ಪ್ರಮಾಣವನ್ನೊದಗಿಸುತ್ತದೆ. ಬಹುಶಃ ಈ ಸಹಸ್ರನಾಮದ ಹಲವಾರು ನಾಮಗಳು ಅವಳನ್ನು ವಿಷ್ಣುವಿನೊಂದಿಗೆ ಗುರುತಿಸಿರುವುದಕ್ಕೆ ಇದೇ ಕಾರಣವಾಗಿರಬಹುದು. ಆಕೆಯನ್ನು ವಿಷ್ಣುವಿನ ಸಹೋದರಿ ಎಂದು ಕರೆದಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಈ ಸಹಸ್ರನಾಮದ ೨೮೦ನೇ ನಾಮದಲ್ಲಿ ಆಕೆಯನ್ನು ಪದ್ಮನಾಭ ಸಹೋದರೀ ಎಂದು ಕರೆಯಲಾಗಿದೆ, ಪದ್ಮನಾಭನೆನ್ನುವುದು ವಿಷ್ಣುವಿನ ಹಲವಾರು ಹೆಸರುಗಳಲ್ಲೊಂದು.
Vidhātrī विधात्री (337)
೩೩೭. ವಿಧಾತ್ರೀ
ಧಾತ್ರೀ ಎಂದರೆ ತಾಯ್ತನ. ಆಕೆಯು ಶ್ರೀ ಮಾತೆ ಅಥವಾ ಪರಮ ಮಾತೆಯಾಗಿರುವುದರಿಂದ ಆಕೆಯು ಈ ಜಗತ್ತನ್ನು ಪೋಷಿಸುತ್ತಾಳೆ. ಧಾತ್ರೀ ಎಂದರೆ ಆಮ್ಲವೆಂದು ಕರೆಯಲ್ಲಪಡುವ ಬೆಟ್ಟದ ನೆಲ್ಲಿಕಾಯಿ (Embelica Officinalis) ಮತ್ತು ಈ ಸಂದರ್ಭದಲ್ಲಿ ದೇವಿಯು ನೆಲ್ಲಿಕಾಯಿಗಳನ್ನು ಇಷ್ಟಪಡುತ್ತಾಳೆ ಎಂದು ಅರ್ಥೈಸಬಹುದು. ಈ ಮರವನ್ನು ಲಕ್ಷ್ಮೀ ರೂಪದಲ್ಲಿರುವ ಪವಿತ್ರ ವೃಕ್ಷವೆಂದು ಭಾವಿಸಲಾಗಿದೆ. ಸೃಷ್ಟಿಕರ್ತನಾದ ಬ್ರಹ್ಮನನ್ನು ವಿಧಾತ್ರ ಎಂದು ಕರೆಯಲಾಗಿದೆ ಮತ್ತವನ ಸಂಗಾತಿಯು ವಿಧಾತ್ರಿಯಾಗಿದ್ದಾಳೆ. ಪರಮಶಿವನು ಬ್ರಹ್ಮನ ರೂಪದಲ್ಲಿ ಈ ಪ್ರಪಂಚವನ್ನು ಸೃಷ್ಟಿಸುತ್ತಾನೆ, ವಿಷ್ಣುವಾಗಿ ಇದನ್ನು ಪರಿಪಾಲಿಸುತ್ತಾನೆ ಮತ್ತು ರುದ್ರನಾಗಿ ಇದನ್ನು ಲಯಗೊಳಿಸುತ್ತಾನೆ. ಈ ಮೂರು ಹಂತಗಳಲ್ಲಿ ಅವನ ಸಂಗಾತಿಗಳನ್ನು ಅನುಕ್ರಮವಾಗಿ ಸರಸ್ವತೀ, ಲಕ್ಷ್ಮೀ ಮತ್ತು ರುದ್ರಾಣೀ ಎಂದು ಕರೆಯಲಾಗಿದೆ. ಈ ಸಹಸ್ರನಾಮದಲ್ಲಿ ಮುಂದೆ ಹಲವಾರು ನಾಮಗಳಿದ್ದು (೪೫೭, ೮೨೩, ೮೨೬ & ೯೮೫) ಅವುಗಳು ಸಹ ಇದೇ ಅರ್ಥವನ್ನು ಹೊಮ್ಮಿಸುತ್ತವೆ. ಆದರೆ ಒಬ್ಬರು ಅವುಗಳನ್ನು ಆಳವಾಗಿ ವಿಶ್ಲೇಷಿಸಿ ನೋಡಿದಾಗ ಈ ವಿವಿಧ ನಾಮಗಳೂ ಸಹ ಒಟ್ಟಾರೆಯಾಗಿ ಬೇರೆಯದೇ ಅರ್ಥಗಳನ್ನು ಕೊಡುತ್ತವೆ ಎನ್ನುವುದು ವಿಶದವಾಗುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 335-337 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಶ್ರೀಧರರೆ, ೯೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಸಾರ ತಮ್ಮ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೩೩೫ - ೩೩೭
೩೩೫. ವೇದ-ವೇದ್ಯಾ
ವೇದ ಸ್ವರೂಪಿ ಬ್ರಹ್ಮನೆಡೆಗೊಯ್ಯುವ ಜ್ಞಾನ, ದೇವಿಯನರಿಯೆ ಶುದ್ಧ
ಬ್ರಹ್ಮವೆ ಜ್ಞಾನದಸಾರ, ವೇದಜ್ಞಾನವಿರೆ ಆತ್ಮಸಾಕ್ಷಾತ್ಕಾರ ಶತಃಸಿದ್ದ
ವೇದಾಂತವೆ ಉಪನಿಷತ್ತು ಸರಳದೆ ಸೂಕ್ಷ್ಮವೇದ ವ್ಯಾಖ್ಯಾನ ನೀಡುತೆ
ಶ್ರೀಚಕ್ರದ ಚತುರ್ದ್ವಾರವೇದ ಶುದ್ದಜ್ಞಾನಕೆ ವೇದ-ವೇದ್ಯಾ ಒಲಿಯುತೆ!
೩೩೬. ವಿಂಧ್ಯಾಚಲ-ನಿವಾಸಿನೀ
ನಂದಗೋಪನ ಮನೆಯಲಿ ಜನಿಸಿ ಲಲಿತೆಯೆ ಕೃಷ್ಣನೆನಿಸಿ
ಶುಂಭ ನಿಶುಂಭರ ಸಂಹಾರಕೆ ವಿಂಧ್ಯ ಪರ್ವತದಲಿ ನೆಲೆಸಿ
ಲಲಿತಾಂಬಿಕೆ ನಿಗ್ರಹಿಸುತಲಿ ರಕ್ಕಸ ದಾನವರ ಅಟ್ಟಹಾಸ
ಕೃಷ್ಣನಾಗಿನ್ನಷ್ಟು ಮಾಡೆ ವಿಂಧ್ಯಾಚಲ-ನಿವಾಸಿನಿ ದುಷ್ಟನಾಶ!
೩೩೭. ವಿಧಾತ್ರೀ
ಜಗವನೆ ಪೋಷಿಸುವ ಮಾತೆ ಅವಳಲ್ಲವೆ ತಾಯ್ತನದೆ ಧಾತ್ರೀ
ಬೆಟ್ಟದಾ ನಲ್ಲಿ ಕಾಯಂತೆ ಕಹಿ ಕೊನೆಗೆ ಸಿಹಿಯಾಗುವ ಖಾತ್ರಿ
ಲಕ್ಷ್ಮಿ ರೂಪದ ಪವಿತ್ರವೃಕ್ಷ ದೇವಿಗೆ ನೆಚ್ಚು ನೆಲ್ಲಿ ಕಾಯಿ ಸೂತ್ರ
ತ್ರಿಮೂರ್ತಿ-ಸಂಗಾತಿ ರೂಪದೆ ತ್ರಿಕಾರ್ಯ ವಿಧಾತ್ರೀಯ ಗಾತ್ರ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by nageshamysore
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ನಾಗೇಶರೆ,
ಬೆಟ್ಟದಾ ನಲ್ಲಿ ಕಾಯಂತೆ ಕಹಿ ಕೊನೆಗೆ ಸಿಹಿಯಾಗುವ ಖಾತ್ರಿ
-ಇಲ್ಲಿ ನೆಲ್ಲಿಕಾಯಿ ಹುಳಿಸಿಹಿಯಾಗಬಹುದು. ಕಹಿ ಅಲ್ಲ.(ಜೀವನದ ಕಹಿ ನಂತರ ಸಿಹಿಯಾಗುವುದು ಎಂಬರ್ಥವೋ)
ಉಳಿದಂತೆ ಕವನ ಸೂಪರ್.
ಶ್ರೀಧರ್‌ಜಿ, ಧಾತ್ರಿ ಹವನದ ಬಗ್ಗೆ ಕೆಲವಿವರವಿಲ್ಲಿದೆ- http://www.sumadhwas...
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by ಗಣೇಶ
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಗಣೇಶ್ ಜಿ, ಆಯುರ್ವೇದದ ಪ್ರಕಾರ ಇದಕ್ಕೆ ಐದು ರುಚಿಗಳಿರುವುದಂತೆ (ಹುಳಿ, ಒಗರು, ಸಿಹಿ, ಕಹಿ, ಘಾಟು - ಆರನೆಯ ರುಚಿಯಾದ ಉಪ್ಪು ಮಾತ್ರ ಇಲ್ಲವಂತೆ - ಇದರಲ್ಲಿ ಹುಳಿ ಪ್ರಮುಖವಾದದ್ದು, ಮಿಕ್ಕೆಲ್ಲ ಸೆಕೆಂಡರಿ ಟೇಸ್ಟ್). ಈ ನಾಲ್ಕು ರುಚಿಯನ್ನು ಸೇರಿಸಿ ಹೇಳುವ ಸಂಯುಕ್ತ ಪದ ಹೊಳೆಯಲಿಲ್ಲ ; ಅದಕ್ಕೆ ಕಹಿ-ಸಿಹಿಯ ರೂಪವನ್ನು ಮಾತ್ರ ಉಳಿಸಿಕೊಂಡೆ (ನೀವು ಆಗಲೆ ಊಹಿಸಿದಂತೆ ಬಾಳಿನ ಸಿಹಿ ಕಹಿಗೆ ಸಮೀಕರಿಸಿ). ಹಲವು ರುಚಿಗಳನ್ನು ಒಟ್ಟುಗೂಡಿಸಿ ಹೇಳುವ ಯಾವುದಾದರೂ ಸಾಮಾನ್ಯ ಬಳಕೆಯ ಪದ ಇದೆಯೆ/ಗೊತ್ತಿದೆಯೆ? ಬಹುಶಃ ಶ್ರೀಧರರ ಪರಿಷ್ಕರಣೆಯ ನಂತರ ಇನ್ನಷ್ಟು ಸ್ಪಷ್ಟತೆ ಬರಬಹುದು.
Taste : Five Tastes (Sour, Astringent, Sweet, Bitter and Pungent). It does not contain Salty taste.
(http://ayurveda-fory...)
ನಿಮ್ಮ ಪ್ರಶ್ನೆಯಿಂದ ಮತ್ತೊಂದು ರೀತಿಯಲಿ ಚಿಂತಿಸಲು ಸಾಧ್ಯವಾಯ್ತು - ಅದನ್ನು ಬಳಿಸಿದ ಪರಿಷ್ಕೃತ ರೂಪ ಕೆಳಕಂಡಂತಿದೆ. ಇದು ಮೊದಲಿನದಕ್ಕಿಂತ ಸರಿಯೆನಿಸುವುದೆ?
೩೩೭. ವಿಧಾತ್ರೀ
ಜಗವನೆ ಪೋಷಿಸುವ ಮಾತೆ ಅವಳಲ್ಲವೆ ತಾಯ್ತನದೆ ಧಾತ್ರೀ
ಉಪ್ಪಿರದ ಬೆಟ್ಟದಾ ನಲ್ಲಿ ರುಚಿ ಕೊನೆಗೆ ಸಿಹಿಯಾಗುವ ಖಾತ್ರಿ
ಲಕ್ಷ್ಮಿ ರೂಪದ ಪವಿತ್ರವೃಕ್ಷ ದೇವಿಗೆ ನೆಚ್ಚು ನೆಲ್ಲಿ ಕಾಯಿ ಸೂತ್ರ
ತ್ರಿಮೂರ್ತಿ-ಸಂಗಾತಿ ರೂಪದೆ ತ್ರಿಕಾರ್ಯ ವಿಧಾತ್ರೀಯ ಗಾತ್ರ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by ಗಣೇಶ
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಗಣೇಶ್‌ಜಿ,
ಧಾತ್ರೀ ಹವನದ ಬಗೆಗಿನ ಬಹಳ ಉಪಯುಕ್ತ ಕೊಂಡಿಯನ್ನು ಒದಗಿಸಿದ್ದಕ್ಕೆ ಧನ್ಯವಾದಗಳು. ಅದರ ಮೂಲಕ ಇನ್ನೂ ಅನೇಕಾನೇಕ ವ್ರತ ಮತ್ತು ಹಬ್ಬಗಳ ಮಹತ್ವಗಳ ಕುರಿತು ತಿಳಿದುಕೊಳ್ಳುವಂತಾಯಿತು. ಕಾರ್ತೀಕ ಮಾಸದ ವನಭೋಜನದ ಪದ್ಧತಿ ಕರಾವಳಿ ಆಂಧ್ರದವರು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಅದರೆ ಉದ್ದೇಶ ನಿಮ್ಮ ಕೊಂಡಿಯ ಲೇಖನದಿಂದ ಹೆಚ್ಚು ಸ್ಪಷ್ಟವಾಯಿತು.
ನಾಗೇಶರ ಕವನದ ಕುರಿತಾಗಿ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ನಾಗೇಶರೆ,
ನಿಮ್ಮ ಕೊಂಡಿಯಿಂದ ಹಲವಾರು ವಿಷಯಗಳು ನನಗೆ ಸ್ಪುರಿಸಿದವು. ಅದೇನೆಂದರೆ ನಾವು ಆರು ರುಚಿಗಳಲ್ಲಿ ಐದು ರುಚಿಗಳುಳ್ಳ ಈ ಬೆಟ್ಟದ ನೆಲ್ಲಿಕಾಯಿಯನ್ನು ಉಪ್ಪಿನೊಂದಿಗೆ ಸೇವಿಸಿದಾಗ ನಮಗೆ ಎಲ್ಲಾ ರುಚಿಗಳ ಅರಿವಾಗುತ್ತದೆ. ವಿವರಣೆಯೊಂದರಲ್ಲಿ ಪರಬ್ರಹ್ಮವನ್ನು ಉಪ್ಪಿಗೆ ಹೋಲಿಸಿದ್ದು ಜ್ಞಾಪಕವಿದೆಯಲ್ಲವೇ? ಹಾಗಾಗಿ ಪಂಚರುಚಿಗಳುಳ್ಳ ದೇವಿಯ ಜೊತೆ ಶಿವನು ಒಂದುಗೂಡಿದಾಗ ಪರಬ್ರಹ್ಮದ ಸಂಪೂರ್ಣತೆಯ ಅರಿವಾಗುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಬಹುದು. ದೇವಿಯು ಪ್ರಕೃತಿ ಮತ್ತು ಶಿವನು ಪುರಷ. ಪ್ರಕೃತಿಯು ಎಲ್ಲಾ ರುಚಿಗಳನ್ನು ಹೊಂದಿದ್ದರೂ ಅದು ಉಪ್ಪಿನಂತಹ ಬ್ರಹ್ಮದ ರುಚಿಯಿಲ್ಲದಿದ್ದರೆ ಅಪೂರ್ಣ!
ಹೇಗೆ ಪಂಚರುಚಿಗಳು ಒಂದೇ ವಸ್ತುವಿನಲ್ಲಿ ಅಡಕವಾಗಿವೆಯೋ ಹಾಗೆಯೇ ಅನೇಕ ವಸ್ತುಗಳು ದೇವಿಯಲ್ಲಿ ಹುದುಗಿವೆ ಎಂದೂ ಸಹ ಈ ನಾಮವನ್ನು ಅರ್ಥೈಸಬಹುದೆನಿಸುತ್ತದೆ. ಇದರ ಬಗ್ಗೆ ವಿ. ರವಿಯವರನ್ನು ಕೇಳಿ ಸ್ಪಷ್ಟ ಪಡಿಸಿಕೊಳ್ಳುತ್ತೇನೆ. ಅಥವಾ ಆ ಒಂದು ವಸ್ತುವಿನಿಂದಲೇ ವಿವಿಧ ರುಚಿಗಳು ಅನಾವರಣಗೊಳ್ಳುವಂತೆ ಆಕೆಯ ವಿವಿಧ ರೂಪಗಳಾದ ಬ್ರಹ್ಮ, ವಿಷ್ಣು, ರುದ್ರ ಮತ್ತು ಅವರ ಸಂಗಾತಿಯರು ಅನಾವರಣಗೊಳ್ಳುತ್ತಾರೆನ್ನಬಹುದೇನೋ? ಅದಕ್ಕಾಗಿ ದೇವಿಯನ್ನು ವಿಧಾತ್ರೀ ಎಂದು ಕರೆದಿರಬಹುದು.
ಈ ಹಿನ್ನಲೆಯಲ್ಲಿ ವಿಧಾತ್ರೀ ಕವನವನ್ನು ಮಾರ್ಪಡಿಸಿದರೆ ಹೆಚ್ಚು ಅರ್ಥಬದ್ಧವಾಗುತ್ತದೆನಿಸುತ್ತದೆ. ಉಳಿದಂತೆ ಇನ್ನೆರಡು ಕವನಗಳು ವಿವರಣೆಯ ಸಾರವನ್ನು ರಸವತ್ತಾಗಿ ಹಿಡಿದಿಟ್ಟಿವೆ ಮತ್ತು ಅವುಗಳಲ್ಲಿ ಬದಲಾವಣೆ ಮಾಡಬೇಕೆನಿಸಿದ್ದೂ ಸಹ ಯಾವುದೂ ಇಲ್ಲ :)
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ.
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by makara
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಶ್ರೀಧರರೆ, ವಿಧಾತ್ರೀ ಯ ಹೊಸ ವಿವರಣೆಗೆ ಹೊಂದಿಸಲು ಈ ಎರಡು ಆವೃತ್ತಿ ಹೊಸೆದೆ. ಸೂಕ್ತವಿರುವುದಾ ನೋಡಿ, ಇಲ್ಲವಾದರೆ ಮತ್ತೆ ತಿದ್ದುಪಡಿ ಮಾಡೋಣ. ಹಾಗೆಯೆ ವೇದದ ಕುರಿತು ಹೊಸದಾಗಿ ಸೇರಿಸಿದ್ದೇನೆ. ಸೂಕ್ತ ಕಂಡರೆ ಅಂತಿಮ ಆವೃತ್ತಿಗೆ ಸೇರಿಸಬಹುದು.
ವಿಧಾತ್ರೀ-2
ಜಗವನೆ ಪೋಷಿಸುವ ಮಾತೆ ಅವಳಲ್ಲವೆ ತಾಯ್ತನದಾ ಧಾತ್ರೀ
ಪುರುಷ ಲವಣ ಪಂಚರುಚಿ ಪ್ರಕೃತಿ ಸೇರೆ ಸಂಪೂರ್ಣತೆ ಖಾತ್ರಿ
ತ್ರಿಮೂರ್ತಿ ಸಂಗಾತಿ ಅನಾವರಣ ನೆಲ್ಲಿ ರುಚಿಯೆ ಕಲೆತ ಸೂತ್ರ
ಪಂಚರುಚಿಯಂತೆ ವಸ್ತುಗಳಡಕ ಸಮಷ್ಟಿಯಾಗಿ ವಿಧಾತ್ರೀಗಾತ್ರ!
ವಿಧಾತ್ರೀ-3
ಐದು ರುಚಿಯ ಬೆಟ್ಟದ ನಲ್ಲಿ ಉಪ್ಪೊಂದಿಗೆ ಸವಿಯೆ ರುಚಿಯ ಮಲ್ಲಿ
ಪಂಚರುಚಿ ದೇವಿ ಶಕ್ತಿ, ಶಿವಲವಣ ಸೇರೆ ಪರಬ್ರಹ್ಮ ಪೂರ್ಣತೆಯಲಿ
ಪ್ರಕೃತಿಯಲಡಗಿದ್ದರು ಎಲ್ಲಾ ರುಚಿ, ಬ್ರಹ್ಮದಾ ಉಪ್ಪಿಲ್ಲದೆ ಅಪೂರ್ಣ
ನೆಲ್ಲಿಯಂತೆಲ್ಲ ವಿಧಾತ್ರೀಯಲಡಕ, ತ್ರಿಮೂರ್ತಿಸಂಗಾತಿ ಅನಾವರಣ!
ವೇದಗಳ ಕುರಿತು ಹೆಚ್ಚಿನ ಮಾಹಿತಿ:
_______________________________________________
ವೇದಸೂತ್ರದ ಹೂರಣ ಸಾಹಿತ್ಯಾಧ್ಯಾತ್ಮಿಕ ಧಾರ್ಮಿಕ ತತ್ವ ಸಿದ್ದಾಂತ ವ್ಯಾಕರಣ
ಸ್ಥೂಲಸೂಕ್ಷ್ಮ ವ್ಯಕ್ತಾವ್ಯಕ್ತ ವಿಷಯಗ್ರಹಣೆ ಜಾಗರೂಕತೆ ಸೂತ್ರವಾಗಿಹ ಸಂತುಲನ
ಭೌತಿಕ ವಧೆಯಲ್ಲ ಮಾನಸಿಕ ಶೋಧೆ ದೈವೀ ಸಂವಹನದೊಮ್ಮಿದ ಮಂತ್ರ ಸೂಕ್ತ
ಉಕ್ತಮುಖೇನ ಉಚ್ಚಾರಣೆ ಲಯಬದ್ಧತೆ ಋಷಿ ಮುನಿ ಶಿಷ್ಯರಿಗ್ಹರಿದ ವಿಕಾರ ಮುಕ್ತ!
ಋಗ್ ಯಜುರ್ ಸಾಮ ಅಥರ್ವ ಚತುರ್ವೇದ ಮೊದಲ ಮೂರೆ ತ್ರಿವಿದ್ಯಾಜ್ಞಾನ
ಶೃತಿ ಮೂಲ ರೂಪೆ ಕಠಿಣ, ಋಷಿಮುನಿಗಳಿಗ್ಹರಿದ ಭಗವಂತನ ನೇರ ಪ್ರಸರಣ
ಮೇಳೈವಿಸಿ ಚೈತನ್ಯ ಜತೆಯಾಗಿಸಿ ಲೌಕಿಕ ಜ್ಞಾನ ಬಾಯಿ ಪಾಠವಾಗಿಸೀ ವೇದ
ನಶಿಸದೆ ಪ್ರವಹಿಸಿ ವಿಷಯಾಧಾರಿತ ಸಂಕೀರ್ಣ ವೇದಾಂಗ ರೂಪೆ ಸರಳವಾದ!
ವೇದವಲ್ಲ ಸೀದಾಸಾದ ಸ್ಥೂಲ ವ್ಯಾಖ್ಯಾನದಿ ತೆರೆಯೆ ಗೂಢಾರ್ಥದ ಕದ
ಜ್ಞಾನ ಕರ್ಮ ಉಪಾಸನೆ ವಿಭೇದ ಬ್ರಹ್ಮ ಸಾಕ್ಷಾತ್ಕಾರ ಪಡೆಯಲು ಶುದ್ಧ
ಕಲಿಕೆ ತರ್ಕ ಗ್ರಹಿಕೆ ಜ್ಞಾನ ಪ್ರಾಯೋಗಿಕ ವಿವೇಚನೆ ಅನುಭವಾ ವಿವೇಕ
ಸಕ್ರಮ ಅಕ್ರಮ ಕರ್ಮಪಜ್ಞೆ, ಕರ್ಮಯಜ್ಞ ಯಾಗದಿ ಉಪಾಸನೆ ದೈವಿಕ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by nageshamysore
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ನಾಗೇಶರೆ,
ವಿಧಾತ್ರೀ ವಿವರಣೆಯ ಎರಡೂ ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಎರಡೂ ರೂಪಗಳೂ ಸಧ್ಯಕ್ಕೆ ಹಾಗೆಯೇ ಇರಲಿ. ಧಾತ್ರಿಯಲ್ಲಿನ ಐದು ರುಚಿಗಳು ಬಹುಶಃ ಪರಬ್ರಹ್ಮದ ಐದು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ, ಲಯ, ತಿರೋಧಾನ, ಮತ್ತು ಅನುಗ್ರಹ ಇವುಗಳನ್ನು ಸೂಚಿಸಬಹುದು (ಪಂಚಕೃತ್ಯ ಪರಾಯಣಾ - http://sampada.net/b... ನೋಡಿ) ಮತ್ತು ಹೆಚ್ಚಿನ ವಿವರಗಳಿಗೆ ನಾಮ ೨೩೨ ಮತ್ತು ೨೪೯, ೨೫೦ ಗಳನ್ನು ಸಹ ನೋಡಬಹುದು. ಮತ್ತು ಐದು ರುಚಿಗಳು ಪಂಚಭೂತಗಳನ್ನು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ತನ್ಮಾತ್ರಗಳನ್ನೂ ಸಹ ಪರೋಕ್ಷವಾಗಿ ಸೂಚಿಸಬಹುದು. ಇವುಗಳ ಕುರಿತ ಸ್ಪಷ್ಟನೆಯನ್ನು ವಿ.ರವಿಯವರಿಂದ ಪಡೆದ ನಂತರ ಅಂತಿಮಗೊಳಿಸಬಹದು.
ವೇದದ ಕುರಿತ ಪಂಕ್ತಿಗಳನ್ನು ನೋಡೋಣ.
೧) ವೇದಸೂತ್ರದ ........
:
:
ಉಕ್ತಮುಖೇನ ಉಚ್ಚಾರಣೆ ಲಯಬದ್ಧತೆ ಋಷಿ ಮುನಿ ಶಿಷ್ಯರಿಗ್ಹರಿದ ವಿಕಾರ ಮುಕ್ತ!
ಉಕ್ತ (ಹೇಳಿದ) ಎಂದರೆ ಉಚ್ಛಾರಣೆ ಎನ್ನುವ ಅರ್ಥವೇ ಬರುತ್ತದೆ. ಆದ್ದರಿಂದ ಇಲ್ಲಿ ಉಕ್ತಮುಖೇನ ಬದಲಿಗೆ ’ಮೌಖಿಕ’ ಎನ್ನುವ ಪದ ಬಳಸಿ ಅಲ್ಪ ಬದಲಾವಣೆ ಮಾಡಿದರೆ ಸರಿಹೋಗಬಹುದೆನಿಸುತ್ತದೆ.
೨) ಋಗ್ ಯಜುರ್ ಸಾಮ ಅಥರ್ವ ಚತುರ್ವೇದ ಮೊದಲ ಮೂರೆ ತ್ರಿವಿದ್ಯಾಜ್ಞಾನ
ಶೃತಿ ಮೂಲ ರೂಪೆ ಕಠಿಣ, ಋಷಿಮುನಿಗಳಿಗ್ಹರಿದ ಭಗವಂತನ ನೇರ ಪ್ರಸರಣ
ಶೃತಿ=ಶ್ರುತಿ ಮಾಡಿ; ಶೃತಿ ಎನ್ನುವುದು ಕಿವಿ ಎನ್ನುವ ಅರ್ಥ ಕೊಡುತ್ತದೆ.
(ಶ್ರುತಿ ಎಂದರೆ ಕೇಳಿದ್ದು; ವೇದಗಳನ್ನು ಕೇಳಿಯೇ ತಿಳಿದುಕೊಳ್ಳುತ್ತೇವಾದ್ದರಿಂದ ಅವಕ್ಕೆ ಆ ಹೆಸರು ಬಂದಿದೆ. ಆದ್ದರಿಂದ ವಿದ್ವಾಂಸರನ್ನು, ಜ್ಞಾನಿಗಳನ್ನು ಬಹುಶ್ರುತರು ಎಂದು ವರ್ಣಿಸುವ ಪರಿಪಾಠವಿದೆ. ವೇದಗಳು ದೈವ ವಾಣಿಯಾಗಿರುವುದರಿಂದ ಅವು ಕೇಳಿ ತಿಳಿಯಲ್ಪಟ್ಟವು. ಮತ್ತು ವೇದಗಳನ್ನು ಕೇವಲ ನಾವು ಕೇಳಿ ಬಲ್ಲೆವೇ ಹೊರತು, ಅವುಗಳನ್ನು ರಚಿಸಿದ ಕಾಲ ಸರಿಯಾಗಿ ಗೊತ್ತಿಲ್ಲ ಅಥವಾ ಜ್ಞಾಪಕ/ಸ್ಮೃತಿಯಲ್ಲಿ ಇಲ್ಲ. ಹಾಗಾಗಿ ಅವುಗಳು ಶ್ರುತಿಗಳು. ಶಾಸ್ತ್ರ, ಇತಿಹಾಸ, ಪುರಾಣಗಳು ಬರುತ್ತವೆ ಸ್ಮೃತಿಗಳು, ಏಕೆಂದರೆ ಇವು ಮಾನವರ ಜ್ಞಾಪಕವಿರುವ ಅಂದರೆ ಸ್ಮೃತಿಯಿರುವ ಕಾಲದಲ್ಲಿ ರಚಿಸಲ್ಪಟ್ಟವು. ಈ ವಿವರಣೆಗಳು ಇಲ್ಲಿ ಅನಾವಶ್ಯಕವೆನಿಸಿದರೆ ಅದಕ್ಕೆ ಕ್ಷಮೆ ಇರಲಿ; ಸುಮ್ಮನೇ ಹಾಗೇ ಜ್ಞಾಪಕ ಬಂದದ್ದರಿಂದ ಅವನ್ನು ಇಲ್ಲಿ ದಾಖಲಿಸಿದೆನಷ್ಟೆ).
ಮೇಳೈವಿಸಿ ಚೈತನ್ಯ ಜತೆಯಾಗಿಸಿ ಲೌಕಿಕ ಜ್ಞಾನ ಬಾಯಿ ಪಾಠವಾಗಿಸೀ ವೇದ
ನಶಿಸದೆ ಪ್ರವಹಿಸಿ ವಿಷಯಾಧಾರಿತ ಸಂಕೀರ್ಣ ವೇದಾಂಗ ರೂಪೆ ಸರಳವಾದ!
ಕಡೆಯ ಸಾಲಿನಲ್ಲಿ ಸ್ವಲ್ಪ ಅರ್ಥ ಪಲ್ಲಟವಾಗುತ್ತದೆನಿಸುತ್ತದೆ. ಅರ್ಥ ಪಲ್ಲಟವಾಗದಂತೆ ಸ್ವಲ್ಪ ಬದಲಾವಣೆ ಮಾಡಬಹುದೇನೋ ನೋಡಿ.
೩) ವೇದವಲ್ಲ ಸೀದಾಸಾದ ಸ್ಥೂಲ ವ್ಯಾಖ್ಯಾನದಿ ತೆರೆಯೆ ಗೂಢಾರ್ಥದ ಕದ
ಸೀದಾಸಾದ=ನೇರವಾದ (ಸೀದಾಸಾದ ಶಬ್ದವು) ಆಧ್ಯಾತ್ಮಿಕ ವಿಷಯಗಳಿಗೆ ಅಷ್ಟು ಸೂಕ್ತವೆನಿಸುವುದಿಲ್ಲ)
ಜ್ಞಾನ ಕರ್ಮ ಉಪಾಸನೆ ವಿಭೇದ ಬ್ರಹ್ಮ ಸಾಕ್ಷಾತ್ಕಾರ ಪಡೆಯಲು ಶುದ್ಧ
ಕಲಿಕೆ ತರ್ಕ ಗ್ರಹಿಕೆ ಜ್ಞಾನ ಪ್ರಾಯೋಗಿಕ ವಿವೇಚನೆ ಅನುಭವಾ ವಿವೇಕ
ಅನುಭವಾ=ಅನುಭವ
ಸಕ್ರಮ ಅಕ್ರಮ ಕರ್ಮಪಜ್ಞೆ, ಕರ್ಮಯಜ್ಞ ಯಾಗದಿ ಉಪಾಸನೆ ದೈವಿಕ!
ಸಕ್ರಮ ಅಕ್ರಮ ಶಬ್ದಗಳೆನೋ ಸರಿಯಾಗಿವೆ ಆದರೆ ಅಕ್ರಮ ಎಂದ ಕೂಡಲೇ ನಮ್ಮ ದೃಷ್ಟಿ ಇಂದಿನ ಹಗರಣಗಳತ್ತ ತಿರುಗುತ್ತದೆ ಆದ್ದರಿಂದ ಇದನ್ನು ಯುಕ್ತಾಯುಕ್ತ (ಯುಕ್ತ+ಅಯುಕ್ತ) ಮಾಡಿದರೆ ಸೂಕ್ತವಾಗಬಹುದು. ಆದರೂ ಸಹ ಕಡೆಯ ಸಾಲು ಸ್ವಲ್ಪ ಗೋಜಲೆನಿಸುತ್ತಿದೆ; ಏಕೆಂದರೆ, ’ಕರ್ಮಯಜ್ಞ ಯಾಗದಿ ಉಪಾಸನೆ ದೈವಿಕ’ ಈ ಪದಗಳು ಏಕೋ ಹೊಂದಾಣಿಕೆ ಆಗುತ್ತಾ ಇಲ್ಲ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by makara
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಶ್ರೀಧರರೆ ವೇದದ ಭಾಗಕ್ಕೆ, ನಿಮ್ಮ ಸಲಹೆ ಮತ್ತು ಮತ್ತೊಮ್ಮೆ ಓದಿ ಗ್ರಹಿಸಿದ ಅರ್ಥ ಸೇರಿಸಿ ಈ ರೂಪಕ್ಕೆ ತಿದ್ದುಪಡಿ ಮಾಡಿದ್ದೇನೆ. ಸೂಕ್ತ ಕಾಣುವುದೆ ನೋಡಿ. ವಿಧಾತ್ರಿಯ ರೂಪ ಹಾಗೆ ಉಳಿಸಿರುತ್ತೇನೆ, ಶ್ರೀಯುತ ರವಿಯವರ ಉತ್ತರ ಬರುವತನಕ. ಅದೇನೆ ಇದ್ದರೂ, ನನಗೀಗ ಇದ್ದಕ್ಕಿದ್ದ ಹಾಗೆ ಬೆಟ್ಟದ ನೆಲ್ಲಿಯ ಮೇಲೆ ಬಹಳ ಪ್ರೀತಿ ಬಂದುಬಿಟ್ಟಿದೆ!
ವೇದಗಳ ಕುರಿತು ಹೆಚ್ಚಿನ ಮಾಹಿತಿ:
_______________________________________________
ವೇದಸೂತ್ರದ ಹೂರಣ ಸಾಹಿತ್ಯಾಧ್ಯಾತ್ಮಿಕ ಧಾರ್ಮಿಕ ತತ್ವ ಸಿದ್ದಾಂತ ವ್ಯಾಕರಣ
ಸ್ಥೂಲಸೂಕ್ಷ್ಮ ವ್ಯಕ್ತಾವ್ಯಕ್ತ ವಿಷಯಗ್ರಹಣೆ ಜಾಗರೂಕತೆ ಸೂತ್ರವಾಗಿಹ ಸಂತುಲನ
ಭೌತಿಕ ವಧೆಯಲ್ಲ ಮಾನಸಿಕ ಶೋಧೆ ದೈವೀ ಸಂವಹನದೊಮ್ಮಿದ ಮಂತ್ರ ಸೂಕ್ತ
ಉಚ್ಚಾರಣೆ ಲಯಬದ್ಧ ಮೌಖಿಕವಿಧಾನ ಋಷಿಮುನಿಶಿಷ್ಯರಿಗೆ ಜ್ಞಾನ ವಿಕಾರಮುಕ್ತ!
ಋಗ್ ಯಜುರ್ ಸಾಮ ಅಥರ್ವ ಚತುರ್ವೇದ ಮೊದಲ ಮೂರೆ ತ್ರಿವಿದ್ಯಾಜ್ಞಾನ
ಶ್ರುತಿ ಮೂಲ ರೂಪೆ ಕಠಿಣ, ಋಷಿಮುನಿಗಳಿಗ್ಹರಿದ ಭಗವಂತನ ನೇರ ಪ್ರಸರಣ
ಮೇಳೈವಿಸಿ ಚೈತನ್ಯ ಜತೆಯಾಗಿಸಿ ಲೌಕಿಕಜ್ಞಾನ, ಬಾಯಿ ಪಾಠವಾಗಿಸೀ ವೇದ
ಸಂಕೀರ್ಣತೆ ಸರಳವಾಗಿಸಿ ವೇದಾಂಗ, ನಶಿಸದಂತೆ ಪ್ರವಹಿಸಿ ಜ್ಞಾನ ವಿಶಾರದ!
ವೇದವಲ್ಲ ಸರಳ ಸಿದ್ದ, ಸ್ಥೂಲ ವ್ಯಾಖ್ಯಾನದಿ ತೆರೆಯೆ ಗೂಢಾರ್ಥದ ಕದ
ಜ್ಞಾನ ಕರ್ಮ ಉಪಾಸನೆ ವಿಭೇದ, ಬ್ರಹ್ಮ ಸಾಕ್ಷಾತ್ಕಾರ ಪಡೆಯಲು ಶುದ್ಧ
ಕಲಿಕೆ ತರ್ಕ ಗ್ರಹಿಕೆಯೆ ಜ್ಞಾನ, ಪ್ರಾಯೋಗಿಕ ವಿವೇಚನಾನುಭವ ವಿವೇಕ
ಯುಕ್ತಾಯುಕ್ತದಿಂ ದೈಹಿಕಕರ್ಮ, ವಿಹಿತೋಪಾಸನೆ ಸಾಕ್ಷಾತ್ಕಾರಕಾರಕ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by nageshamysore
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ನಾಗೇಶರೆ,
ಬೆಟ್ಟದ ನೆಲ್ಲಿಕಾಯಿಗಾಗಿ ನವೆಂಬರ್ - ಕಾರ್ತೀಕ ಮಾಸದವರೆಗೆ ಕಾಯಲೇ ಬೇಕು. ಅರ್ಜೆಂಟಿದ್ದರೆ ನೆಲ್ಲಿಕಾಯಿ ಜಾಮ್ ಅಥವಾ ಚ್ಯವನಪ್ರಾಶವನ್ನು ಸವಿಯಬಹುದು ಬಿಡಿ. ನಿಮ್ಮ ಕೊಂಡಿಯಿಂದ ಈ ಬೆಟ್ಟದ ನೆಲ್ಲಿಯ ಕುರಿತ ಹೊಸ ವಿಚಾರಗಳು ತಿಳಿದುಬಂದವು. ಅದಕ್ಕಾಗಿ ಧನ್ಯವಾದಗಳು. ಉಳಿದಂತೆ ಈಗ ವೇದಗಳ ಕುರಿತ ಕವನಗಳು ಹೆಚ್ಚು ಸಮಂಜಸವೆನಿಸುತ್ತವೆ. ಒಂದು ವೇಳೆ ಏನಾದರೂ ಕಣ್ತಪ್ಪಿನಿಂದ ಮುದ್ರಾರಾಕ್ಷಸನ ಹಾವಳಿಯಾಗಿದ್ದರೆ ಅದನ್ನು ಮೂಲ ಬ್ಲಾಗಿನಲ್ಲಿ ಸರಿಪಡಿಸೋಣ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by makara
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಶ್ರೀಧರರೆ, ಆದರೂ ಈ ಕಂತಿನ ಅಂತಿಮ ಬಿಡುಗಡೆಗೆ 'ವಿಧಾತ್ರಿ'ಯ ಅನುಮಾನ ಬಗೆಹರಿಯುವವರೆಗೂ ಕಾಯಬೇಕಲ್ಲವೆ (ಶ್ರೀ ರವಿಯವರಿಂದ)?
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by nageshamysore
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ನಾಗೇಶರೆ,
ವೇದಗಳ ಕುರಿತು ಹೆಚ್ಚಿನ ಮಾಹಿತಿ - ಈ ಕವನಗಳ ಅಂತಿಮ ಪರಿಷ್ಕರಣೆಯಾದ ನಂತರ ಅವುಗಳನ್ನು ನಿಮ್ಮ ಬ್ಲಾಗಿನಲ್ಲಿ ಸೇರಿಸಲು ಹೇಳಿದ ದಿವಸವೇ ಶ್ರೀಯುತ ರವಿಯವರಿಂದ ಪಂಚರುಚಿ ಮತ್ತು ಉಪ್ಪಿನ ಕುರಿತಾದ ವಿಶ್ಲೇಷಣೆಗೆ ಅನುಮೋದನೆ ಸಿಕ್ಕಿದೆ. ಕಾರ್ಯಕ್ರಮಗಳ ನಡುವೆ ಇದನ್ನು ನಾನು ಗಮನಿಸಿರಲಿಲ್ಲ. ಅಂದ ಹಾಗೆ, ಪಂಚರುಚಿಗಳನ್ನು ಹೊಂದಿದ ಆಮ್ಲದ ವಿಶೇಷಗುಣದ ಕುರಿತ ನಿಮ್ಮ ಮಾಹಿತಿ ಕೊಂಡಿಗೆ ಮತ್ತು ಗಣೇಶರ ಧಾತ್ರೀ ಹವನದ ಕೊಂಡಿಗಳಿಗಾಗಿ ನಿಮ್ಮಬ್ಬರಿಗೂ ರವಿಯವರು, ತಮ್ಮ ಕೃತಜ್ಞತೆಯನ್ನು ತಿಳಿಸಿದ್ದಾರೆ. ಹಾಗಾಗಿ ವಿಧಾತ್ರೀ-೩ ಹೆಚ್ಚು ಸೂಕ್ತವೆನಿಸುವುದರಿಂದ ಅದನ್ನೇ ಅಂತಿಮಗೊಳಿಸಿ.
ವಿಧಾತ್ರೀ-3
ಐದು ರುಚಿಯ ಬೆಟ್ಟದ ನಲ್ಲಿ ಉಪ್ಪೊಂದಿಗೆ ಸವಿಯೆ ರುಚಿಯ ಮಲ್ಲಿ
ಪಂಚರುಚಿ ದೇವಿ ಶಕ್ತಿ, ಶಿವಲವಣ ಸೇರೆ ಪರಬ್ರಹ್ಮ ಪೂರ್ಣತೆಯಲಿ
ಪ್ರಕೃತಿಯಲಡಗಿದ್ದರು ಎಲ್ಲಾ ರುಚಿ, ಬ್ರಹ್ಮದಾ ಉಪ್ಪಿಲ್ಲದೆ ಅಪೂರ್ಣ
ನೆಲ್ಲಿಯಂತೆಲ್ಲ ವಿಧಾತ್ರೀಯಲಡಕ, ತ್ರಿಮೂರ್ತಿಸಂಗಾತಿ ಅನಾವರಣ!
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ by makara
ಉ: ೯೧. ಶ್ರೀ ಲಲಿತಾ ಸಹಸ್ರನಾಮ ೩೩೫ರಿಂದ ೩೩೭ನೇ ನಾಮಗಳ ವಿವರಣೆ
ಶ್ರೀಧರರೆ, ವಿಧಾತ್ರೀಯ ಈ ಆವೃತ್ತಿಯೊಂದಿಗೆ ಅಂತಿಮ ಕೊಂಡಿ ಬಿಡುಗಡೆ ಮಾಡುತ್ತಿದ್ದೇನೆ.
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು