೯೩. ಲಲಿತಾ ಸಹಸ್ರನಾಮ ೩೪೧ರಿಂದ ೩೪೫ನೇ ನಾಮಗಳ ವಿವರಣೆ

೯೩. ಲಲಿತಾ ಸಹಸ್ರನಾಮ ೩೪೧ರಿಂದ ೩೪೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೪೧ - ೩೪೫

Kṣetra-svarūpā क्षेत्र-स्वरूपा (341)

೩೪೧. ಕ್ಷೇತ್ರ-ಸ್ವರೂಪಾ

          ಮುಂದಿನ ಕೆಲವು ನಾಮಗಳು ದೇವಿಯ ಕ್ಷೇತ್ರ ರೂಪವನ್ನು ಕುರಿತು ಚರ್ಚಿಸುವುದರಿಂದ ಕ್ಷೇತ್ರವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಕ್ಷೇತ್ರ ಎನ್ನುವುದು ಭೌತಿಕ ದೇಹವಾದರೆ, ಕ್ಷೇತ್ರಜ್ಞ ಎನ್ನುವುದು ಆತ್ಮವಾಗಿದೆ. ಕ್ಷೇತ್ರ ಎನ್ನವುದು ಮೂವತ್ತಾರು ತತ್ವಗಳಿಂದ ರಚಿಸಲ್ಪಟ್ಟಿದೆ (ಕೆಲವರು ಕೇವಲ ಇಪ್ಪತ್ತನಾಲ್ಕು ತತ್ವಗಳನ್ನಷ್ಟೇ ಪರಿಗಣಿಸುತ್ತಾರೆ). ಭಗವದ್ಗೀತೆಯಲ್ಲಿ ಒಂದು ಪ್ರತ್ಯೇಕವಾದ ಅಧ್ಯಾಯವೇ (೧೩ನೇ ಅಧ್ಯಾಯವಾದ ಕ್ಷೇತ್ರ ಕ್ಷೇತ್ರಜ್ಞ ಯೋಗ) ಇದಕ್ಕೆ ಮೀಸಲಾಗಿರಸಲಾಗಿದೆ. ಶ್ರೀಕೃಷ್ಣನು ಆ ಅಧ್ಯಾಯವನ್ನು, "ಈ ದೇಹವನ್ನು ಕ್ಷೇತ್ರವೆಂದು (ಎಲ್ಲಿ ಕರ್ಮಗಳು ಉತ್ಪನ್ನವಾಗುತ್ತವೆಯೋ ಮತ್ತು ಅನುಷ್ಠಾನಗೊಳ್ಳುತ್ತವೆಯೋ) ಕರೆಯುತ್ತಾರೆ ಮತ್ತು ಯಾವುದು ಇದನ್ನು ಗ್ರಹಿಸುತ್ತದೆಯೋ ಅದನ್ನು ಕ್ಷೇತ್ರಜ್ಞ ಎಂದು ಕರೆಯುತ್ತಾರೆ" ಎಂದು ಆರಂಭಿಸುತ್ತಾನೆ. ಲಿಂಗ ಪುರಾಣವೂ ಸಹ, "ತ್ರಿಪುರಗಳನ್ನು ನಾಶಪಡಿಸುವವನ (ಶಿವನ) ಪ್ರಿಯತಮೆಯು; ದೇವಿಯು (ಶಕ್ತಿಯು) ಕ್ಷೇತ್ರವಾಗಿದ್ದಾಳೆ ಮತ್ತು ಭಗವಂತನು (ಶಿವನು) ಕ್ಷೇತ್ರಜ್ಞನಾಗಿದ್ದಾನೆ" ಎಂದು ಹೇಳುತ್ತದೆ. ಕ್ಷೇತ್ರವು ಸ್ಥೂಲವಾಗಿದ್ದರೆ, ಕ್ಷೇತ್ರಜ್ಞವು ಸೂಕ್ಷ್ಮವಾಗಿದೆ. ಕ್ಷೇತ್ರಕ್ಕೆ ನಾಶವುಂಟು, ಆದರೆ ಕ್ಷೇತ್ರವನ್ನು ಅರಿಯುವವನು ಅಂದರೆ ಕ್ಷೇತ್ರಜ್ಞನು ನಿತ್ಯ ನಿರಂತರನಾಗಿದ್ದು ನಾಶವಿಲ್ಲದ್ದಾಗಿದೆ.

         ಶ್ರೀ ಕೃಷ್ಣನು ೧೩ನೇ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಾ ಹೀಗೆ ಹೇಳುತ್ತಾನೆ, "ಯಾರು ಕ್ಷೇತ್ರ ಮತ್ತು ಕ್ಷೇತ್ರಜ್ಞದ ವ್ಯತ್ಯಾಸವನ್ನು ತಿಳಿಯುತ್ತಾರೆಯೋ ಮತ್ತು ಈ ಪ್ರಕೃತಿ ಮತ್ತವಳ ಉತ್ಪನ್ನಗಳಿಂದ ಮುಕ್ತಿ ಪಡೆಯುವ ಸಿದ್ಧಾಂತವನ್ನು ಅರಿಯುತ್ತಾರೆಯೋ ಅವರು ಪರಮೋನ್ನತವಾದ ಮತ್ತು ನಿತ್ಯನಾದ ಆತ್ಮನನ್ನು ಹೊಂದುತ್ತಾರೆ (ಸೇರುತ್ತಾರೆ)."

          ದೇವಿಯು ಇಂತಹ ಕ್ಷೇತ್ರ ರೂಪದಲ್ಲಿರುವಳೆಂದು ಹೇಳಲಾಗಿದೆ. ಈ ನಾಮದ ಅರ್ಥವೇನೆಂದರೆ ದೇವಿಯು ಈ ಸಮಸ್ತ ಪ್ರಪಂಚದ ಎಲ್ಲಾ ಸ್ಥೂಲರೂಪಗಳ ಸ್ವರೂಪವಾಗಿದ್ದಾಳೆ ಎನ್ನುವುದು.

Kṣtreśī क्ष्त्रेशी (342)

೩೪೨. ಕ್ಷೇತ್ರೇಶೀ

          ಕ್ಷೇತ್ರಜ್ಞನ (ಶಿವನ) ಹೆಂಡತಿಯು ಕ್ಷೇತ್ರೇಶೀ (ಶಕ್ತಿ) ಆಗಿದ್ದಾಳೆ. ಇದು ಭೈರವ ಮತ್ತು ಭೈರವೀಯಂತೆ. ಯಾವಾಗಲೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ ಶಿವ ಮತ್ತು ಶಕ್ತಿಯರಲ್ಲಿ ಭೇದವಿಲ್ಲ ಎನ್ನುವುದು. ಅಥವಾ ಆಕೆಯು ಎಲ್ಲಾ ಕ್ಷೇತ್ರಗಳ ಈಶ್ವರೀ (ಒಡತಿ) ಎಂದು ಹೇಳಬಹುದು (ಆಗ ಇದು ಹಿಂದಿನ ನಾಮದ ಮುಂದುವರಿಕೆಯಾಗುವು ಸಾಧ್ಯತೆಯಿದೆ).

 Kṣetra-kṣetrajña-pālinī क्षेत्र-क्षेत्रज्ञ-पालिनी (343)

೩೪೩. ಕ್ಷೇತ್ರ-ಕ್ಷೇತ್ರಜ್ಞ-ಪಾಲಿನೀ

          ಕ್ಷೇತ್ರ-ಕ್ಷೇತ್ರಜ್ಞ-ಪಾಲಿನೀ ಎಂದರೆ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎರಡನ್ನೂ ರಕ್ಷಿಸುವವಳು. ಅಂದರೆ ಆಕೆಯು ಎರಡನ್ನೂ ರಕ್ಷಿಸುತ್ತಾಳೆಂದರೆ ಸ್ಥೂಲ ಶರೀರ ಮತ್ತು ಆತ್ಮ ಇವೆರಡನ್ನೂ ರಕ್ಷಿಸುತ್ತಾಳೆ. ಕ್ಷೇತ್ರಜ್ಞ-ಪಾಲಿನೀ ಎಂದರೆ ಆಕೆಯು ಆತ್ಮದ ರಕ್ಷಕಿಯಾಗಿರಬಹುದು ಅಥವಾ ಆಕೆ ಶಿವನ ರಕ್ಷಕಿಯಾಗಿರಬಹುದು. ಆಕೆಯು ಶಿವನ ಹೆಂಡತಿಯಾಗಿರುವುದರಿಂದ ಆಕೆಗೆ ಖಂಡಿತವಾಗಿಯೂ ಅವನನ್ನು ರಕ್ಷಿಸುವ ಬಾಧ್ಯತೆಯಿದೆ. ಆಕೆಯು ಜಗನ್ಮಾತೆಯಾಗಿರುವುದರಿಂದ ಅವಳಿಗೆ ತನ್ನ ಮಕ್ಕಳನ್ನು ರಕ್ಷಿಸುವ ಹೊಣೆಯೂ ಇದೆ. ಆದ್ದರಿಂದ ಶಿವನನ್ನು ವಿಶ್ವದ ತಂದೆಯೆಂದೂ ಮತ್ತು ಶಕ್ತಿಯನ್ನು ವಿಶ್ವದ ತಾಯಿಯೆಂದೂ ಕರೆಯಲಾಗಿದೆ. (ಕವಿ ಕಾಳಿದಾಸನು ತನ್ನ ಕೃತಿಯಾದ ರಘುವಂಶದಲ್ಲಿ, "ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ - जगतः पितरौ  वन्दे पार्वति परमेश्वरौ " ಎಂದು ಹೇಳಿದ್ದಾನೆ.

Kṣaya-vṛddhi-vinirmuktā क्षय-वृद्धि-विनिर्मुक्ता (344)

೩೪೪. ಕ್ಷಯ-ವೃದ್ಧಿ-ವಿನಿರ್ಮುಕ್ತಾ

          ದೇವಿಯು ಬೆಳವಣಿಗೆ ಮತ್ತು ವಿನಾಶಗಳಿಗೆ ಅತೀತವಾಗಿದ್ದಾಳೆ. ಇವೆಲ್ಲವೂ ಮರ್ತ್ಯರಿಗೆ ಸಂಭಂದಿಸಿದವುಗಳು. ಒಬ್ಬರು ಈ ನಾಮದ ಸುಂದರತೆಯನ್ನು ಗಮನಿಸಬೇಕು. ೩೪೧ನೇ ನಾಮದಲ್ಲಿ ದೇವಿಯನ್ನು ಸ್ಥೂಲ ದೇಹವಾದ ಕ್ಷೇತ್ರ-ಸ್ವರೂಪಾ ಎಂದು ಸಂಭೋದಿಸಲಾಗಿತ್ತು. ೩೪೨ನೇ ನಾಮದಲ್ಲಿ ಆಕೆಯನ್ನು ಕ್ಷೇತ್ರೀ ಅಂದರೆ ಕ್ಷೇತ್ರಜ್ಞನ (ಶಿವನ) ಹೆಂಡತಿ ಎಂದು ಸಂಭೋದಿಸಲಾಗಿದ್ದರೆ, ಅದರ ಮುಂದಿನ ನಾಮವಾದ ೩೪೩ರಲ್ಲಿ ಆಕೆಯನ್ನು ಕ್ಷೇತ್ರ ಮತ್ತು ಕ್ಷೇತ್ರಜ್ಞ (ದೇಹ ಮತ್ತು ಆತ್ಮ) ಇವೆರಡರ ಪಾಲಕಿ ಎಂದು ಕರೆಯಲಾಗಿದ್ದರೆ ಈ ನಾಮದಲ್ಲಿ ವಾಕ್-ದೇವಿಗಳು ಆಕೆಯನ್ನು ಬೆಳವಣಿಗೆ ಮತ್ತು ವಿನಾಶಗಳೆರಡೂ ಇಲ್ಲದವಳೆಂದು ಸಂಭೋದಿಸುತ್ತಿದ್ದಾರೆ ಇವು ಪರಬ್ರಹ್ಮದ ಲಕ್ಷಣಗಳಾಗಿವೆ.  ದೇವಿಯನ್ನು ಪರಬ್ರಹ್ಮವೆಂದು ನೇರವಾಗಿ ಕರೆಯದೇ ವಾಕ್-ದೇವಿಯರು ಆಕೆಯ ವಿವಿಧ ಕ್ರಿಯೆಗಳ ಮೂಲಕ ಆಕೆಯನ್ನು ಸಂಭೋದಿಸುತ್ತಿದ್ದಾರೆ.

         ಶ್ರೀ ಕೃಷ್ಣನು ಆತ್ಮವನ್ನು ಹೀಗೆ ವಿವರಿಸುತ್ತಾನೆ (ಭಗವದ್ಗೀತೆ ೨.೨೩), ಆತ್ಮವು ಎಂದಿಗೂ ಹುಟ್ಟುವುದಿಲ್ಲ ಅಥವಾ ಸಾಯುವುದಿಲ್ಲ; ಆದರೆ ಒಮ್ಮೆ ಅದು ಹುಟ್ಟಿದರೆ ಅದು ನಾಶವಿಲ್ಲದ್ದು, ನಿರಂತರವಾದದ್ದು ಮತ್ತು ಹುಟ್ಟು ಸಾವುಗಳಿಂದ ಮುಕ್ತವಾಗಿರುತ್ತದೆ......."

         ಬೃಹದಾರಣ್ಯಕ ಉಪನಿಷತ್ತು (೪.೪.೨೨), "ಅದು ಎಲ್ಲದರ ನಿಯಂತ್ರಕ.....ಅದು ಒಳ್ಳೆಯ ಕೆಲಸಗಳಿಂದ ಉತ್ತಮವಾಗಿ ಹಿಗ್ಗುವುದಿಲ್ಲ ಅಥವಾ ಕೆಟ್ಟ ಕಾರ್ಯಗಳಿಂದಾಗಿ ಕುಗ್ಗುವುದಿಲ್ಲ" ಎಂದು ಹೇಳುತ್ತದೆ.

Kṣetra-pāla-samarcitā क्षेत्र-पाल-समर्चिता (345)

೩೪೫. ಕ್ಷೇತ್ರ-ಪಾಲ-ಸಮರ್ಚಿತಾ

          ದೇವಿಯು ಕ್ಷೇತ್ರ ಪಾಲಕರಿಂದ ಪೂಜಿಸಲ್ಪಡುತ್ತಾಳೆ. ೩೪೧ನೇ ನಾಮದಲ್ಲಿ ಚರ್ಚಿಸಿರುವಂತೆ ಕ್ಷೇತ್ರವೆಂದರೆ ದೇಹವಾಗಿದೆ. ಪಾಲ ಎಂದರೆ ರಕ್ಷಕ. ಈ ದೇಹವು ಪಂಚಭೂತಗಳಿಂದ (ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ) ರಕ್ಷಿಸಲ್ಪಟ್ಟಿದೆ. ಈ ಪ್ರತಿಯೊಂದು ಧಾತುವೂ ಒಬ್ಬೊಬ್ಬ ದೇವತೆಗಳಿಂದ ಪ್ರತಿನಿಧಿಸಲ್ಪಡುತ್ತದೆ. ದೇವಿಯು ಇವರಿಂದ ಪೂಜಿಸಲ್ಪಡುತ್ತಾಳೆ. ಇದು ಹೆಚ್ಚು ಸಮಂಜಸವಾದ ವಿವರಣೆ ಎನಿಸುತ್ತದೆ.

         ಈ ನಾಮದೊಂದಿಗೆ ಒಂದು ಸ್ವಾರಸ್ಯಕರವಾದ ಕಥೆಯು ಹೆಣೆದುಕೊಂಡಿದೆ. ಧಾರುಕಾ ಎನ್ನುವ ರಾಕ್ಷಸನ ಸಂಹಾರಕ್ಕೆಂದು ಶಿವನು ಕಾಳಿ ಮಾತೆಯನ್ನು ಸೃಷ್ಟಿಸಿದನು. ಅವನನ್ನು ಕೊಂದ ನಂತರವೂ ದೇವಿಯ ಉಗ್ರತೆಯು ಶಮನಗೊಳ್ಳಲಿಲ್ಲವಂತೆ. ಸಮಸ್ತ ಪ್ರಪಂಚವೂ ಅವಳ ಪ್ರಕೋಪಕ್ಕೆ ಸಿಲುಕಿ ನಲುಗಿಹೋಯಿತು. ಅವಳ ಕೋಪವನ್ನು ಶಮನಗೊಳಿಸಲು ಸ್ವಯಂ ಶಿವನೇ ಶಿಶುವಿನ ರೂಪವನ್ನು ತಾಳಿದನು. ಎಷ್ಟಾದರೂ ಆಕೆ ಜಗದ ಮಾತೆಯಲ್ಲವೇ? ಆಕೆಯು ಆ ಶಿಶುವಿಗೆ ಹಾಲು ಕುಡಿಸಲು ಮೊದಲು ಮಾಡಿದಳು. ಆಕೆಯ ಸ್ತನ್ಯಪಾನ ಮಾಡುತ್ತಾ ಶಿವನು ಆಕೆಯ ಕೋಪವನ್ನೂ ಪಾನ ಮಾಡಿದನಂತೆ. ಆ ಶಿಶುವು ಈ ವಿಶ್ವವನ್ನು ಪ್ರಮಾದದಿಂದ ಕಾಪಾಡಿದ್ದಕ್ಕಾಗಿ ಅದನ್ನು ಕ್ಷೇತ್ರಪಾಲನೆಂದು ಕರೆಯಲಾಗಿದೆ. ದೇವಿಯು ಈ ಕ್ಷೇತ್ರಪಾಲನಿಂದ ಪೂಜಿಸಲ್ಪಟ್ಟಿದ್ದಳು.

         ಮಹಾ ಯಜ್ಞ-ಯಾಗಾದಿಗಳು ಜರುಗುವ ಸ್ಥಳಗಳನ್ನೂ ಸಹ ಕ್ಷೇತ್ರಗಳೆಂದು ಕರೆಯುತ್ತಾರೆ ಮತ್ತು ಅಂತಹ ಸ್ಥಳವನ್ನು ಕಾಪಾಡುವ ದೇವತೆಯನ್ನು ಕ್ಷೇತ್ರಪಾಲನೆಂದು ಕರೆಯುತ್ತಾರೆ ಮತ್ತು ದೇವಿಯು ಅವನಿಂದ ಪೂಜಿಸಲ್ಪಡುತ್ತಾಳೆ.  

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 341-345 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

ಧನ್ಯವಾದಗಳು ಗಣೇಶ್‌ಜಿ,
ನೀವು ಕೊಟ್ಟ ಕೊಂಡಿಯಿಂದ ಧಾರುಕಾಸುರನನ್ನು ವಧಿಸಿದ್ದು ಪರಶುರಾಮ ಮತ್ತು ಅವನು ರಾಕ್ಷಸನ ಮೇಲೆ ವಿಜಯ ಸಾಧಿಸುವುದಕ್ಕಾಗಿ ಶಿವನ ಆಣತಿಯ ಮೇರೆಗೆ ಭಗವತಿಯನ್ನು ಸ್ಥಾಪಿಸಿ ಪೂಜಿಸಿದ ಎನ್ನುವ ಹೊಸ ವಿಷಯವೊಂದು ಬೆಳಕಿಗೆ ಬಂತು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 08/16/2013 - 05:15

ಶ್ರೀಧರರೆ ೯೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಸಾರ ರೂಪ ತಮ್ಮ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೪೧ - ೩೪೫
_______________________________________

೩೪೧. ಕ್ಷೇತ್ರ-ಸ್ವರೂಪಾ 
ಕ್ಷೇತ್ರವೆನೆ ಭೌತಿಕ ದೇಹ ಮುವತ್ತಾರು ತತ್ವ, ಕ್ಷೇತ್ರಜ್ಞ ಆತ್ಮ ಮಹತ್ವ
ಕರ್ಮದುತ್ಪನ್ನ ಅನುಷ್ಠಾನ ದೇಹ ಕ್ಷೇತ್ರವ ಗ್ರಹಿಸುವಾತ್ಮ ಕ್ಷೇತ್ರಜ್ಞತ್ವ
ಸಮಸ್ತ ಸ್ಥೂಲರೂಪಿಣಿ ಕ್ಷೇತ್ರ ಸ್ವರೂಪಾ, ಸೂಕ್ಷ್ಮ ಕ್ಷೇತ್ರಜ್ಞ ರೂಪ ಶಿವ
ಪ್ರಕೃತಿಜನ್ಯ ಮಾಯಾಮುಕ್ತಿಯರಿವೆ, ಪರಮೋನ್ನತ ನಿತ್ಯಾತ್ಮಭಾವ!

೩೪೨. ಕ್ಷೇತ್ರೇಶೀ
ತ್ರಿಪುರನಾಶಕ ಕ್ಷೇತ್ರಜ್ಞ ಶಿವನ ಪ್ರಿಯತಮೆ ಶಕ್ತಿಯಾಗಿಹಳು ಕ್ಷೇತ್ರ
ಸ್ಥೂಲ ವಿನಾಶಿ ಕ್ಷೇತ್ರವನರಿತವ ಕ್ಷೇತ್ರಜ್ಞ ಅವಿನಾಶಿ ನಿತ್ಯ ನಿರಂತರ
ಸಕಲ ಕ್ಷೇತ್ರಗಳೊಡತಿ ಈಶ್ವರಿ ಭೈರವ ಸತಿ ಭೈರವೀ ಶಿವನಲಿ ಶಕ್ತಿ 
ಅಂತೆ ಕ್ಷೇತ್ರಜ್ಞಸತಿಯಾಗಿ ಕ್ಷೇತ್ರೇಶೀ ಲಲಿತಾಬ್ರಹ್ಮ ಭೇದರಹಿತಸ್ಥಿತಿ!

೩೪೩. ಕ್ಷೇತ್ರ-ಕ್ಷೇತ್ರಜ್ಞ-ಪಾಲಿನೀ 
ಜಗನ್ಮಾತಾಪಿತ ಪಾರ್ವತೀ ಪರಮೇಶ್ವರ ಪಾಲಿಸುತೆಲ್ಲಾ ಮಕ್ಕಳ
ಕ್ಷೇತ್ರ ಕ್ಷೇತ್ರಜ್ಞ ಪಾಲಿನೀ ರೂಪದಿ ರಕ್ಷಿಸುತ ಶರೀರ ಸೂಕ್ಷಾತ್ಮಗಳ
ಆತ್ಮ ಪೊರೆವವಳೆನ್ನೆ ಪರಮಾತ್ಮ ಪತಿ ಶಿವನ ಪೊರೆಯುವ ಕಾರ್ಯ
ನಡೆಸೆ ವ್ಯತ್ಯಯರಹಿತ, ಸೃಷ್ಟಿ ಸ್ಥಿತಿ ಲಯ ಪರಿಪಾಲನೆ ಆಂತರ್ಯ!

೩೪೪. ಕ್ಷಯ-ವೃದ್ಧಿ-ವಿನಿರ್ಮುಕ್ತಾ 
ಕ್ಷೇತ್ರ-ಸ್ವರೂಪಾ, ಕ್ಷೇತ್ರೀ, ಕ್ಷೇತ್ರ-ಕ್ಷೇತ್ರಜ್ಞ ಪಾಲಕಿ ಲಲಿತ
ವೃದ್ಧಿ ಕ್ಷಯವಿರದಾ ಪರಬ್ರಹ್ಮ ಕ್ಷಯ-ವೃದ್ಧಿ-ವಿನಿರ್ಮುಕ್ತಾ 
ಹುಟ್ಟು ಸಾವಿಂದ ಮುಕ್ತ ಅವಿರ್ಭವ ಅವಿನಾಶಿ ನಿರಂತರ
ನಿಯಂತ್ರಕವಾಗೆಲ್ಲಕು, ಹಿಗ್ಗದ ಕುಗ್ಗದ ನಿರ್ಲಿಪ್ತತೆ ಪಾತ್ರ!

೩೪೫. ಕ್ಷೇತ್ರ-ಪಾಲ-ಸಮರ್ಚಿತಾ 
ಧಾರುಕಾಸುರ ಸಂಹಾರಕೆ ಶಿವನಿಂದ ಕಾಳಿಮಾತೆಯ ಜನನ
ರಕ್ಕಸನ ತೀಡಿದುಗ್ರತೆ ಬಿಡದೆ ಜಗವ ಕಾಡಲೆಲ್ಲಿ ಉಪಶಮನ
ಶಿಶುವಾಗಿ ಸ್ತನಪಾನ ಶಿವ ಕುಡಿದೆಲ್ಲಾ ಕೋಪತಾಪ ತಣಿಸುತ
ಕ್ಷೇತ್ರಪಾಲ ಕ್ಷೇತ್ರರಕ್ಷಕರಿಂ ಪೂಜಿತೆ ಕ್ಷೇತ್ರ ಪಾಲ ಸಮರ್ಚಿತಾ!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಾಗೇಶರೆ,
ಈ ಕಂತಿನ ಕಾವ್ಯಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಕ್ಷೇತ್ರ-ಸ್ವರೂಪವನ್ನು ನೀವು ಹಿಡಿದಿಟ್ಟಿರುವ ಪರಿ ಅದ್ಭುತ. ಅನೇಕ ಸಾರಿ ಎನಿಸಿದಂತೆ ಇಂತಹ ತೊಡಕಿನ ವಿಚಾರಗಳನ್ನು ನೀವು ಕಾವ್ಯ ರೂಪದಲ್ಲಿ ಹೊಸೆದಿರುವುದನ್ನು ಓದುವುದೇ ಒಂದು ಸೊಗಸು. ಒಂದೆರಡು ಕಣ್ತಪ್ಪಿನಿಂದಾದ ಅಚ್ಚಿನ ದೋಷಗಳನ್ನು ಹೊರತು ಪಡಿಸಿದರೆ ಇದರಲ್ಲಿ ತಿದ್ದುಪಡಿ ಮಾಡಬೇಕಾಗಿರುವುದು ಮತ್ತೇನೂ ಇಲ್ಲವೆನಿಸುತ್ತಿದೆ.
೩೪೪. ಕ್ಷಯ-ವೃದ್ಧಿ-ವಿನಿರ್ಮುಕ್ತಾ
:
:
ಹುಟ್ಟು ಸಾವಿಂದ ಮುಕ್ತ ಅವಿರ್ಭವ ಅವಿನಾಶಿ ನಿರಂತರ
ಅವಿರ್ಭವ=ಆವಿರ್ಭಾವ
:
೩೪೫. ಕ್ಷೇತ್ರ-ಪಾಲ-ಸಮರ್ಚಿತಾ
:
:
ಶಿಶುವಾಗಿ ಸ್ತನಪಾನ ಶಿವ ಕುಡಿದೆಲ್ಲಾ ಕೋಪತಾಪ ತಣಿಸುತ
ಸ್ತನಪಾನ=ಸ್ತನ್ಯಪಾನ
:
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ,  ನೀವು ಸೂಚಿಸಿದ ತಿದ್ದುಪಡಿಗಳನ್ನು ಮಾಡಿ ಅಂತಿಮ ಕೊಂಡಿ ಬಿಡುಗಡೆ ಮಾಡಿದ್ದೇನೆ.

೩೪೪. ಕ್ಷಯ-ವೃದ್ಧಿ-ವಿನಿರ್ಮುಕ್ತಾ
ಕ್ಷೇತ್ರ-ಸ್ವರೂಪಾ, ಕ್ಷೇತ್ರೀ, ಕ್ಷೇತ್ರ-ಕ್ಷೇತ್ರಜ್ಞ ಪಾಲಕಿ ಲಲಿತ
ವೃದ್ಧಿ ಕ್ಷಯವಿರದಾ ಪರಬ್ರಹ್ಮ ಕ್ಷಯ-ವೃದ್ಧಿ-ವಿನಿರ್ಮುಕ್ತಾ
ಹುಟ್ಟು ಸಾವಿಂದ ಮುಕ್ತ ಆವಿರ್ಭಾವ ಅವಿನಾಶಿ ನಿರಂತರ
ನಿಯಂತ್ರಕವಾಗೆಲ್ಲಕು, ಹಿಗ್ಗದ ಕುಗ್ಗದ ನಿರ್ಲಿಪ್ತತೆ ಪಾತ್ರ!

೩೪೫. ಕ್ಷೇತ್ರ-ಪಾಲ-ಸಮರ್ಚಿತಾ
ಧಾರುಕಾಸುರ ಸಂಹಾರಕೆ ಶಿವನಿಂದ ಕಾಳಿಮಾತೆಯ ಜನನ
ರಕ್ಕಸನ ತೀಡಿದುಗ್ರತೆ ಬಿಡದೆ ಜಗವ ಕಾಡಲೆಲ್ಲಿ ಉಪಶಮನ
ಶಿಶುವಾಗಿ ಸ್ತನ್ಯಪಾನ ಶಿವ ಕುಡಿದೆಲ್ಲಾ ಕೋಪತಾಪ ತಣಿಸುತ
ಕ್ಷೇತ್ರಪಾಲ ಕ್ಷೇತ್ರರಕ್ಷಕರಿಂ ಪೂಜಿತೆ ಕ್ಷೇತ್ರ ಪಾಲ ಸಮರ್ಚಿತಾ!

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು