‘ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತ’

‘ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತ’

ಅವತ್ತು, ಪೀರ್‌ಬಾಷಾ ಅವರ ಮಾತೃಭೂಮಿಕವನ ಬಹಳಷ್ಟು ಜನರಿಗೆ ಅರಗಿಸಿಕೊಳ್ಳುವುದು ಕಷ್ಟ ಎಂದು ಗೆಳೆಯ ಕುಮಾರ್ ತಮ್ಮ ಬ್ಲಾಗಿನಲ್ಲಿ ಹೇಳಿದ್ದರು.

ಮೊನ್ನೆ ಸಂಚಯ ೭೭ನೇ ಸಂಚಿಕೆ ಕೈಗೆ ಬಂದಾಗ ಅದರಲ್ಲಿ ಪೀರ್ ಬಾಷಾ ಅವರ ಒಂದು ಕನನ ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತಎಂಬ ಕವನ ಗಪ್‌ನೆ ಸೆಳೆಯಿತು....ಇದೂ ಸಹ ಕೆಲವರಿಗೆ ಅರಗಿಸಿಕೊಳ್ಳಲು.....

ನಿಸಾರ್ ಅವರ ನಿಮ್ಮೊಡನಿದ್ದೂ ನಿಮ್ಮಂತಾಗದಪದ್ಯಕ್ಕಿಂತ ಇದು ಇನ್ನೂ ಹೆಚ್ಚಿನ ಶಾಕ್ ನೀಡುತ್ತದೆ...ಕಾಲಘಟ್ಟ- ಸಾಮಾಜಿಕ ಒತ್ತಡಗಳು..ಇಂಥ ಅಭಿವ್ಯಕ್ತಿಗೆ ಕಾರಣ ಇರಬಹುದು... ನೀವೂ ಓದಿ...ಹೇಳಿ...

 

ಅಕ್ಕ ಸೀತಾ

ನಿನ್ನಂತೆ ನಾನೂ ಶಂಕಿತ

ನಿನ್ನ ಪಾತಿವ್ರತ್ಯದಂತೆಯೇ ನನ್ನ ದೇಶಭಕ್ತಿ

ಸಾಬೀತುಪಡಿಸುವುದಾದರೂ ಹೇಗೆ ಹೇಳು

ಶೀಲ!

ಯಾವ ಸಾಕ್ಷಿಗಳನ್ನು ತರುವುದೆಲ್ಲಿಂದ

ನಮ್ಮ ಮನೆಯಲ್ಲೇ ನಾವು ನಿರಾಶ್ರಿತರು

ತುಂಬಿದ ನಾಡೊಳಗೆ ಪರಕೀಯರು

ನಮ್ಮ ನೆತ್ತರಿನಿಂದ ಅವರು

ನೆಮ್ಮದಿಯ ಕಿತ್ತುಕೊಂಡಿದ್ದಾರೆ

ಅಪವಾದದ ಅಸ್ತ್ರಗಳಿಂದ ಹೃದಯ ಗಾಯಗೊಳಿಸಿದ್ದಾರೆ.

ಅಕ್ಕ ಸೀತಾ

ಶಂಕೆಯ ಸಾಮ್ರಾಜ್ಯದಲ್ಲಿ

ಬೇಹುಗಾರರದ್ದೇ ಮೇಲುಗೈ

ನಿನ್ನನ್ನು ಕಾಡಿಗಟ್ಟಿದ ಗೂಢಚಾರರೇ

ನನ್ನ ಕನಸುಗಳಿಗೂ ಕಾವಲಿದ್ದಾರೆ

ರಾಮರಾಜ್ಯದ ರಾಜಧರ್ಮ

ನಮ್ಮನ್ನು ನಡುಬೀದಿಯಲ್ಲಿ ಸುಡುತ್ತಿದೆ

ಕಳಂಕದ ಕಿರೀಟ ತೊಡಿಸಿ

ನಮ್ಮನ್ನು ಕಾಡಿಗಟ್ಟಲಾಗುತ್ತಿದೆ

ಇವರ ಕ್ರೌರ್ಯದೆದಿರು

ವಿಷಜಂತು, ಪ್ರಾಣಿಗಳೂ ಸೌಮ್ಯವಲ್ಲವೇ

ಅಕ್ಕ ಸೀತಾ

ಈ ನರಕ ರಾಜ್ಯದ ಅಶ್ವಮೇಧದ ಕುದುರೆ

ಕಟ್ಟಲು ಯಾರನ್ನು ಕಾಯುವುದು

ನಿನ್ನ ನೋವು ನನಗಲ್ಲದೇ

ಇನ್ನಾರಿಗೆ ಅರ್ಥವಾದೀತು

ನನ್ನ ನೋವು ನಿನ್ನಲ್ಲಿಲ್ಲದೆ

ಇನ್ನಾರ ಬಳಿ ಹೇಳಲಾದೀತು.

ಅಕ್ಕ ಸೀತಾ

ನಾವು ಈ ನೆಲದ ಮಕ್ಕಳು

ಪರೀಕ್ಷೆಯೆಂಬ ಪಿತೂರಿಯ

ಬೆಂಕಿಯಲ್ಲೇಕೆ ನಾವು ಬೇಯಬೇಕು

ಬೆನ್ನಿಗೆ ಬಾಣ ಬಿಡುವ

ಶೌರ್ಯವೇಕೆ ನಮ್ಮನ್ನಾಳಬೇಕು.

ಅಕ್ಕ ಸೀತಾ

ನೀ ಬಿಟ್ಟು ಹೋದ

ಕೆಲಸ ಇನ್ನೂ ಬಾಕಿ ಇದೆ

ಈ ಬೆಂಕಿ ಮಕ್ಕಳ ಬೂದಿಯಾಗಿಸಲು

ನೆಲದ ಮಕ್ಕಳ ದಂಡೇ ಇದೆ

ಗಡಿಗಳಿಲ್ಲದ ನಾಡು ಕಟ್ಟುವ ಛಲ ಇದೆ.

ಕಾಲವೇ

ಏಳೇಳು ಕಾಲಕ್ಕೂ

ನನ್ನ ಅಕ್ಕತಂಗಿಯರನ್ನು

ಸೀತೆಯರನ್ನಾಗಿಸಬೇಡ

ಕಳಂಕ ಬೆಂಕಿಯಲ್ಲಿ

ನಮ್ಮನ್ನು ಬೇಯಿಸಬೇಡ.

Rating
No votes yet