‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ
ದೇವದಾಸಿಯ ನಾಜೂಕಯ್ಯ, ಸದಾರಮೆಯ ಕಳ್ಳ, ಮಕ್ಮಲ್ ಟೋಪಿಯ ನಾಣಿ, ಭ್ರಷ್ಟಾಚಾರದ ದಫೇದಾರ್, ನಡುಬೀದಿಯ ನಾರಾಯಣ - ಇವರೆಲ್ಲರ ಜೊತೆ ಒಮ್ಮೆ ಮಾತನಾಡಬೇಕೆನಿಸಿತು. ಕೂಡಲೇ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರೆಸಿದೆವು. ಕರ್ನಾಟಕ ರಾಜ್ಯೋತ್ಸವ ಸಮಯಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರು ಬೇಕೆ?
ನಮಸ್ಕಾರ ಸರ್ ಎನ್ನುತ್ತಲೇ, ಬಹಳ ಪರಿಚಯ ಇರುವವರ ಹಾಗೇ ಆತ್ಮೀಯವಾಗಿ ಬೆನ್ನ ಮೇಲೆ ಕೈಯಾಡಿಸಿ, ನಿಮ್ಮ ಕಾರ್ಯಕ್ರಮ ಚೆನ್ನಾಗಿ ಬರ್ತಾ ಇದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಸಾದನ ಕೊಠದಿಗೆ ಬರುತ್ತಾ ಇದ್ದ ಹಾಗೆ ಚಪ್ಪಲಿಯನ್ನು ಕಳಚಿದರು. ಪ್ರಸಾದನ ಸಾಮಾಗ್ರಿಗಳ ಬಳಿ ಹೋಗಿ, ಒಂದು ಚೂರು ಬಣ್ಣವನ್ನು ಬೆರಳ ತುದಿಯಿಂದ ತೆಗೆದುಕೊಂಡು ಕನ್ನಡಿಯ ಮೇಲೆ ಶ್ರೀಕಾರವನ್ನು ಬರೆದು, ನರಸಿಂಹನ ಧ್ಯಾನ ಮಾಡಿ, ಬಣ್ಣ ಹಚ್ಚಿಕೊಳ್ಳಲು ಕೂತರು.
ಕಾರ್ಯಕ್ರಮದಲ್ಲಿ ನಾನು ಕೇಳಲಿರುವ ಪ್ರಶ್ನೆಗಳನ್ನು ಮುಂಚಿತವಾಗಿ ತಿಳಿಯಬಯಸಲಿಲ್ಲ. ಮಾಸ್ಟರ್ ಹಿರಣ್ಣಯ್ಯ ಅವರನ್ನು ರಂಗದ ಮೇಲೆ ನೋದಿಧ್ಧೆ. ಚಿತ್ರದಲ್ಲಿ ನೋಡಿದ್ದೆ. ಟಿವಿಯಲ್ಲಿ ನೋಡಿದ್ದೆ. ಇಷ್ಟು ಹತ್ತಿರದಿಂದ ಮಾತನಾದಿದ್ದು ಇದೇ ಮೊದಲು. ರಾಜಕಾರಣಿಗಳ ಜನ್ಮ ಜಾಲಾಡುವುದರಲ್ಲಿ ಸಿದ್ಢಹಸ್ತರಾದ ಇವರ ಬಗ್ಗೆ ನನ್ನ ಒಂದು ಅಸಮಾಧಾನ ಇತ್ತು. ಹಿರಣ್ಣಯ್ಯನವರು ತಮ್ಮ ‘ಕಪಿಮುಷ್ಟಿ‘ ನಾತಕವನ್ನು ಆಡುವಾಗ ಅದನ್ನು ನಿಲ್ಲಿಸಲು ಶ್ರೀಮತಿ ಇಂದಿರಾಗಾಂಧಿಯವರು ಪ್ರಯತ್ನಿಸಿದ್ದರು. ಅದನ್ನು ಹಿರಣ್ಣಯ್ಯನವರು ಸಮರ್ಥವಾಗಿ ಎದುರಿಸಿದ್ದರು. ಆದರೆ ಅವರ ಮೊಮ್ಮೊಗಳಿಗೆ ‘ಪ್ರಿಯದರ್ಶಿನಿ‘ ಎಂದು ಶ್ರೀಮತಿ ಗಾಂಧಿಯವರ ಹೆಸರನ್ನೇ ಇಟ್ಟಿದ್ದರು. ನನಗೆ ಇದೊಂದು ಒಗಟಾಗಿತ್ತು! ಈ ಬಗ್ಗೆ ಪ್ರಶ್ನೆ ಕೇಳಿದೆ.
‘ಶ್ರೀಮತಿ ಗಾಂಧಿಯವರ ಗಂಡು ಧೈರ್ಯವನ್ನು ನಾನು ಮೆಚ್ಚುತ್ತೇನೆ. ಗುಣಕ್ಕೆ ಮತ್ಸರವೇ? ಅವರ ಹೆಸರನ್ನು ನನ್ನ ಮೊಮ್ಮೊಗಳಿಗೆ ಇಟ್ಟಿದ್ದೇನೆ‘ ಎಂದರು.
ಹಿರಣ್ಣಯ್ಯನವರು ಥಮ್ಮ ನಾಟಕಗಳಲ್ಲಿ ಲಂಚವನ್ನು, ಭ್ರಷ್ಟಾಚಾರವನ್ ತೀವ್ರವಾಗಿ ಖಂಡಿಸಿದವರು. ಅವರು ತಮ್ಮ ನಿಜ ಬದುಕಿನಲ್ಲಿ ಎಂದಾದರು ಲಂಚ ಕೊಡುವಂತಹ ಪ್ರಸಂಗ ಬಂದಿತೆ ಎಂದು ಪ್ರಶ್ನಿಸಿದೆ. ಅದಕ್ಕವರು ನಾನು ಎಂದೂ ಲಂಚವನ್ನು ಕೊಟ್ಟಿಲ್ಲ. ಆದರೆ ನನ್ನ ಪರವಾಗಿ ಬೇರೆಯವರು ಕೊಟ್ಟಿರಬಹುದು ಎಂದರು.
ಇಂತಹ ಹಲವು ಒಳನೋಟಗಳನ್ನು ನೀಡುವ ಕಾರ್ಯಕ್ರಮ ಇದೇ ರಾಜ್ಯೋತ್ಸವದ ದಿನದಂದು ‘ಚಂದನ‘ದಲ್ಲಿ ರಾತ್ರಿ ೯.೩೦ಕ್ಕೆ ಪ್ರಸಾರವಾಗುತ್ತಿದೆ. ದಯವಿಟ್ಟು ಒಮ್ಮೆ ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
-ಡಾ.ನಾ.ಸೋಮೇಶ್ವರ
Comments
ಉ: ‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ