‘ನಂಜುಂಡ’ವನಿಗೊಂದು ಪ್ರಶ್ನೆ

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ ಉರಿನಂಜ ನೀನದೆಂತು
ಕಂಡೆಯೋ? ಕೈಯಲ್ಲಿ ಹಿಡಿದೆಯೋ ಮಾಗಿದ್ದ ನೇರಳೆಯ ಹಣ್ಣೆನುತ್ತ ?
ನಾಲಿಗೆಯ ಮೇಲಿಟ್ಟು ನುಂಗಿದೆಯೊ ಔಷಧಿಯ ಗುಳಿಗೆಯಿರಬಹುದೆನ್ನುತ?
ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ? ನೀನೆ ನುಡಿಯೋ!
ಸಂಸ್ಕೃತ ಮೂಲ (ಆದಿ ಶಂಕರ, ಶಿವಾನಂದಲಹರಿ - ೩೨) :
ಜ್ವಾಲೋಗ್ರಸ್ಸಕಲಾಮರಾತಿ ಭಯದಃ ಕ್ಷ್ವೇಲ ಕಥಮ್ ವಾ ತ್ವಯಾ
ದೃಷ್ಟಃ ಕಿಂಚ ಕರೇ ಧೃತಃ ಕರತಲೇ ಕಿಂ ಪಕ್ವ ಜಂಬೂ ಫಲಮ್ ।
ಜಿಹ್ವಾಯಾಂ ನಿಹತಾಶ್ಛ ಸಿದ್ಧಘುಟಿಕಾ ವಾ ಕಂಠ ದೇಶೇ ಭೃತಃ
ಕಿಂ ತೇ ನೀಲ ಮಣಿವಿಭೂಷಣಮಯಂ ಶಂಭೋ ಮಹಾತ್ಮನ್ ವದ ॥
-ಹಂಸಾನಂದಿ
ಕೊ: ಸಮುದ್ರಮಥನದ ಸಮಯದಲ್ಲಿ ಅಮೃತ ಸಿಕುವ ಮೊದಲು ವಿಷ ಹುಟ್ಟಿತು. ಅದನ್ನು ಕುಡಿದು ಕಂಠದಲ್ಲಿ ಧರಿಸಿ ಶಿವನು ನೀಲಕಂಠನಾದ. ಹಾಗಾಗೇ ಕನ್ನಡದಲ್ಲಿ ಶಿವನಿಗೆ ‘ನಂಜುಂಡ’ನೆಂದು ಹೆಸರು. ನಂಜನಗೂಡಿನ ನಂಜುಂಡೇಶ್ವರ ಯಾರಿಗೆ ಗೊತ್ತಿಲ್ಲ? ಮೂಲದಲ್ಲಿರುವ ಶಂಭು ಎನ್ನುವ ಪದವನ್ನು ಅದಕ್ಕಾಗಿಯೇ ನಾನು ಅನುವಾದದಲ್ಲಿ ನಂಜುಂಡ ಎಂದು ಬದಲಿಸಿದ್ದೇನೆ.
ಕೊ.ಕೊ: ಶಿವರಾತ್ರಿಯ ಈ ಸಂದರ್ಭದಲ್ಲಿ ಒಂದು ಹೊಸ ಪದ್ಯ ಕಣ್ಣಿಗೆ ಬಿದ್ದು ಅದನ್ನು ಅನುವಾದ ಮಾಡಿದ್ದಾಯಿತು. ಮೂಲವು ಶಾರ್ದೂಲ ವಿಕ್ರೀಡಿತದಲ್ಲಿದೆ. ಅನುವಾದವೂ ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ. ಪ್ರತಿ ಸಾಲಿನಲ್ಲೂ ಐದು ಮಾತ್ರೆಯ ಆರು ಗಣಗಳೂ, ಮತ್ತೆ ಕೊನೆಯಲ್ಲೊಂದು ಗುರುವೂ ಇವೆ. ಪ್ರಾಸವನ್ನಿಟ್ಟಿಲ್ಲ.
ಕೊ.ಕೊ.ಕೊ. ಚಿತ್ರ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಗೋಡೆಯ ಮೇಲಿರುವ ಗಜಾಸುರ ಮರ್ದನ ಶಿವನ ಶಿಲ್ಪ. ನನ್ನ ಸ್ಯಾಮ್ಸಂಗ್ ಫೋನ್ ಕೃಪೆ