‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

‘ನಗು’ ಪತ್ತೆಗೆ ವಿಶೇಷ ತನಿಖಾದಳದ ರಚನೆಗೆ ಆಗ್ರಹ

(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)

ಸದಾ ತಮ್ಮ ಬಿಳ್ ಬಿಳಿ ಹಲ್ಲುಗಳನ್ನು ಕಿರಿದುಕೊಂಡು ಕೆಮರಾದ ಫ್ಲಾಶುಗಳಿಗೆ ಫೋಸುಕೊಡುತ್ತಿದ್ದ ನಮ್ಮ ಸದಾನಂದ ಗೌಡರೆಂದರೆ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಅಚ್ಚುಮೆಚ್ಚು. ರಾಜಕಾರಣಿಗಳು ಎಂದರೆ ಮಾನ, ಮರ್ಯಾದೆ ಹಾಗೂ ಆತ್ಮ ಸಾಕ್ಷಿಯನ್ನು ಬಿಟ್ಟವರು ಎಂದು ಜನರು ಒಪ್ಪಿಕೊಂಡು ಆಗಿದೆ. ಆದರೆ ಅವರು ನಗುವನ್ನೂ ಬಿಟ್ಟು ಸರ್ವ ಪರಿತ್ಯಕ್ತರಾಗುತ್ತಿರುವ ಅನಾರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸದಾನಂದ ಗೌಡರು ಮುಖದ ಮೇಲೆ ಸದಾ ಸಾವಿರ ವೋಲ್ಟ್ ಬಲ್ಬಿನ ಕಾಂತಿಯನ್ನು ಹೊತ್ತು ಆಯಾಸವಿಲ್ಲದೆ ಓಡಾಡುತ್ತಿದುದು ನಗೆ ಸಾಮ್ರಾಟರಾಗಿಯಾಗಿ ನಾಡಿನ ಬಹುತೇಕ ‘ನಗೆ’ಜೀವಿಗಳ ನಾಳಿನ ಬದುಕಿನ ಆಶಾಕಿರಣವಾಗಿತ್ತು. ಮನುಷ್ಯ ಕುಲದ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವ ಏಕೈಕ ನೆಪವಾಗಿತ್ತು. ಆದರೆ ಈಗ ಆ ಒಂದು ಆಸರೆಯೂ ಕೈತಪ್ಪಿ ಹೋಗಿ ವಿಶ್ವಾಸಮತದ ಸಂದರ್ಭದಲ್ಲಿ ಕೈಕೊಟ್ಟ ಸಂಸದರಿಂದಾಗಿ ಡೋಲಾಯಮಾನ ಸ್ಥಿತಿಗೆ ತಲುಪುವ ಸರಕಾರದ ಹಾಗೆ ನಗೆ ಸಾಮ್ರಾಟರು ಕನಲಿಹೋಗಿದ್ದಾರೆ.

ಕರ್ನಾಟಕವೆಂಬ ದಕ್ಷಿಣ ಭಾರತದ ಕೋಟೆಯ ಬಾಗಿಲನ್ನು ಗುದ್ದಿ ತೆರೆದುಕೊಂಡು ಒಳಕ್ಕೆ ನುಗ್ಗಿದ ಮಾನ್ಯ ಮುಖ್ಯ ಮಂತ್ರಿ ಎಡಿಯೂರಿಯಪ್ಪನವರ ಹಿಂದೆ ಮುಂದೆ ಅಕ್ಕ ಪಕ್ಕದಲ್ಲಿದ್ದ ಕಾಂತಿಗೆ ಕಾರಣ ನಮ್ಮ ಸದಾ ಆನಂದ ಗೌಡರ ನೀಟಾಗಿ ಉಜ್ಜಿದ ಬಿಳುಪಾದ ಹಲ್ಲುಗಳು. ಕಮಲದ ಪಕ್ಷ ಬಳ್ಳಾರಿಯ ಧಣಿಗಳು ಎಬ್ಬಿಸಿದ ಧೂಳಿನ ನಡುವೆಯೂ ಪ್ರಕಾಶಮಾನವಾಗುವುದಕ್ಕೆ ಗೌಡ್ರ ಕೊಲ್ಗೇಟ್ ನಗುವೇ ಕಾರಣ. ಆದರೆ ಚುನಾವಣೆ ನಡೆದು ಬಿಜೆಪಿ ಅದ್ಯಾವ ಮಾಯದಲ್ಲೋ ಗೆದ್ದು ಬಿಟ್ಟು ಯಡಿಯೂರಿಯಪ್ಪನವರಿಗೆ ತಾವು ಕಾಣುತ್ತಿರುವುದು ಕನಸೋ, ನನಸೋ ತಿಳಿಯದೆ ತಾವು ಮುಖ್ಯಮಂತ್ರಿಯೋ, ವಿರೋಧ ಪಕ್ಷದ ನಾಯಕನೋ ಎಂದು ಗೊಂದಲವಾಗಿ ಮಾತಾಡಲು ಶುರು ಮಾಡಿದ್ದಾರೆ. ಮೊನಾಲಿಸಾ ನಗೆಯ ಹಿಂದಿನ ರಹಸ್ಯಗಳನ್ನು, ನಿಗೂಢತೆಯನ್ನು ಕಂಡು ಬೆಚ್ಚಿದ ಜನರು ಆಕೆಯ ನಗೆಯನ್ನೇ ನಾಶ ಮಾಡಲು ಹೊರಟಂತೆ ಒಂದು ಕಡೆಯಿಂದ ಬಳ್ಳಾರಿಯ ಟಿಪ್ಪರ್‌ಗಳು, ಪದ್ಮನಾಭನಗರದ ಶೋಕ ಗೀತೆಯೂ, ಅನಂತ ಅವಾಂತರಗಳೂ, ಪಕ್ಷ-ಏತಕ್ಕೆ ಎನ್ನುವ ಪಕ್ಷೇತರರು ಅವರ ‘ಮುಗ್ಧ’ ನಗೆಯ ಮೇಲೆ ದಾಳಿ ಮಾಡಿದ್ದಾರೆ. ಅವರ ಮುಖದ ಮೇಲಿನ ನಗೆಯನ್ನು ಹಾಡಹಗಲೇ ಕೊಲೆ ಮಾಡಿದ್ದಾರೆ.

ನಿದ್ದೆಯಲ್ಲಿ ದೇಶದ ಬಗ್ಗೆ ಆಲೋಚಿಸುವ ‘ಕನಸು’ ಕಾಣುವ , ಮಾತಾಡುವಾಗ ಸದ್ದು ಎಲ್ಲೆಂಲ್ಲಿಂದ ಹೊರಡುತ್ತಿದೆ ಎಂದು ವಿಸ್ಮಯ ಚಕಿತರಾಗಿ ಕುಳಿತುಕೊಳ್ಳುವ ‘ನಗದ’ ನಾಯಕರುಗಳ ಕೈಯಲ್ಲಿ ಸಿಕ್ಕು ಕರ್ನಾಟಕದ ನಗೆಯೇ ಕಾಣೆಯಾದಂತಾಗುವ ಸಂದರ್ಭ ಬಂದಾಗ ನಾಡಿನ ಜನರು ಆನಂದ ಗೌಡರ ಮುಖವನ್ನು ಕಂಡು ತಮ್ಮ ಒಂದೆರೆಡಾದರೂ ಹಲ್ಲು ಬಿಡುತ್ತಿದ್ದರು. ಟಿವಿಯಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಜೋಲು ಮುಖಗಳ ನಡುವೆ ಹಸನ್ಮುಖಿಯನ್ನು ಕಂಡು ಜನರು ಹಗುರಾಗುತ್ತಿದ್ದರು. ಆದರೆ ನಾಡಿನ ದ್ರೋಹಿಗಳ ವ್ಯವಸ್ಥಿತ ಪಿತೂರಿಯಿಂದಾಗಿ ಮೊಗದಿಂದ ನಗುವು ಕಾಣೆಯಾಗಿದೆ. ಈ ಬಗ್ಗೆ ನಮ್ಮ ಮುಖ್ಯ ಮಂತ್ರಿಗಳು ಬಹು ಶೀಘ್ರವಾಗಿ ಗಮನ ಹರಿಸಬೇಕು. ಇಲ್ಲವಾದಲ್ಲಿ ಕರೆಂಟಿಲ್ಲದೆ ಕತ್ತಲೆಯಲ್ಲಿ ಹೊರಳಾಡುತ್ತಿರುವ ನಾಡು ನಗುವಿನ ಬೆಳಕಿಲ್ಲದೆ ನರಳಾಡಬೇಕಾದೀತು. ಈ ಕೂಡಲೇ ಉನ್ನತ ಮಟ್ಟದ ತನಿಖಾ ತಂಡವನ್ನು ನೇಮಕ ಗೊಳಿಸಿ ಆನಂದ ಗೌಡರ ನಗೆಯನ್ನು ಅಪಹರಿಸಿದ ಪಾತಕಿಗಳನ್ನು ಹುಡುಕಿ ತಂದು ಕಂಪ್ಯೂಟರಿನ ಮುಂದೆ ಕೂರಿಸಿ ನಗೆ ನಗಾರಿ ಡಾಟ್ ಕಾಮ್ ತೋರಿಸಿ ನಗುವ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಆನಂದ ಗೌಡರ ಸಾವಿರ ಕ್ಯಾಂಡಲ್ ನಗೆಯನ್ನು ಅವರ ಮುಖದ ಮೇಲೆ ಪುನರ್ ಪ್ರತಿಷ್ಠಾಪಿಸಬೇಕು ಎಂದು ನಗೆ ಸಾಮ್ರಾಟರು ಏಕ ಕಂಠದಲ್ಲಿ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

Rating
No votes yet