‘ ದಿ ಎಕ್ಷಾಮಿನೀ ಇಸ್ ಬೆಟರ್ ದ್ಯಾನ್ ದಿ ಎಕ್ಷಾಮಿನರ್’!

‘ ದಿ ಎಕ್ಷಾಮಿನೀ ಇಸ್ ಬೆಟರ್ ದ್ಯಾನ್ ದಿ ಎಕ್ಷಾಮಿನರ್’!

ಮೊನ್ನೆ ಹುಬ್ಬಳ್ಳಿ ಹತ್ತಿರ ಅಂಚಟಗೇರಿ ಹತ್ತಿರ ತೋಟದಲ್ಲಿ ಒಂದು ಆತ್ಮೀಯ ವನಭೋಜನದ ಔತಣ ಕೂಟಕ್ಕೆ ಹಾಜರಾಗಿ, ಆತ್ಮೀಯರೆಲ್ಲ ಸೇರಿದ, ಭೋಜನ ಕೂಟದಲ್ಲಿ ಸುಗ್ರಾಸ ಭೋಜನದ ಜೊತೆಗೆ ಆತ್ಮೀಯ ಚರ್ಚೆಗಳಲ್ಲಿ ಭಾಗವಹಿಸಿದೆ.  ನನ್ನ ಉದ್ಯಮಿ ಸ್ನೇಹಿತರು, ಸಲಹಾಕಾರರಾಗಿರುವ ಈ ಸ್ನೇಹಿತರಂತಿರುವ ಹಿರಿಯರು ಬಹಳ ಆತ್ಮೀಯತೆಯಿಂದ ನನಗೂ, ನನ್ನ ಮಿತ್ರರೆಲ್ಲರಿಗೂ ಕರೆದುಕೊಂಡು ಬರಲು ನನಗೆ ಆತ್ಮೀಯ ಸಲುಗೆಯಿಂದ ಆದೇಶಿಸಿದ್ದುದನ್ನು ಚಾಚೂ ತಪ್ಪದೇ ಪಾಲಿಸಿದ್ದೆ. ನನ್ನ ಜೊತೆಯಲ್ಲಿ ಧಾರವಾಡದ ಹಿರಿಯ  ವಿಧ್ವಾಂಸರನ್ನು, ನಿವೃತ್ತ ಸಾಹಿತಿಗಳನ್ನು ಕರೆದುಕೊಂಡು ಹೋಗಿದ್ದರಿಂದ, ಸಹಜವಾಗಿ ಮಾತು ಕತೆಗಳು, ಹಿರಿಯರ ತಮ್ಮ ಅಂದಿನ ದಿನಗಳಿಗೆ ಹೊರಳಿದವು.  
    ಮಾತುಗಳೇನೋ ನಿರರ್ಗಳವಾಗಿ ನಡೆದೇ ಇದ್ದವು. ನಿವೃತ್ತ ಸೀನಿಯರ್ ಪ್ರೊಫೆಸರ್ ಎಂದೋ, ಎಂ. ಅಕಬರ್ ಅಲಿಯವರಂಥ ಉದ್ಧಾಮ ಸಾಹಿತಿಗಳ ಸಂಗದಲ್ಲಿಯೂ ಹಲವಾರು ವರ್ಷಗಳವರೆಗೆ ಸಾಹಿತ್ಯವನ್ನು ಅಭ್ಯಸಿಸಿ, ಚರ್ಚಿಸಿರುವುದರಿಂದಲೋ, ಎರಡೆರಡು ಭಾಷೆಗಳಲ್ಲಿ ಅಂದಿನ ಕಾಲದ ಎಂ.ಎ.  ಮುಗಿಸಿದ್ದ ಹಿರಿಯರು ಸಾಹಿತ್ಯದ, ಸಾಹಿತಿಗಳ ಕುರಿತು ನಿರರ್ಗಳವಾಗಿ, ಪುಂಖಾನು ಪುಂಖವಾಗಿ ಹೇಳುತ್ತಲೇ ಇದ್ದರು. ಅವರಾಡಿದ ಕೆಲವು ಮಾತುಗಳು ನನ್ನ ಎದೆಗೆ ನಾಟಿದಂತೆ ಇದ್ದವುಗಳನ್ನು ಹಂಚಿಕೊಳ್ಳಬಯಸುತ್ತೇನೆ.
    ಅಂದಿನ ಕಾಲದ ಉದ್ಧಾಮ ಪಂಡಿತ, ವಾಗ್ಮಿ ಕೆಸಿಡಿ ಕಾಲೇಜಿನ ಪ್ರೊಫೆಸರರಾದ ಕುಂದಣಗಾರರು, ಒಮ್ಮೆ ಎಂ.ಎ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ಸಂದರ್ಭದಲ್ಲಿ ಒಂದು ಉತ್ತರ ಪತ್ರಿಕೆಯ ಮೌಲ್ಯಮಾಪನ ಮುಗಿಸಿ, ಅದರ ಮೇಲೆ ಹೀಗೆ ಶರಾ ಬರೆದರು. ‘ ದಿ ಎಕ್ಷಾಮಿನೀ ಇಸ್ ಬೆಟರ್ ದ್ಯಾನ್ ದಿ ಎಕ್ಷಾಮಿನರ್’! ಎಂತಹ ಬಹುದೊಡ್ಡ ಮನಸ್ಸು, ವ್ಯಕ್ತಿತ್ವ. ಕುಂದಣಗಾರರದು. ತಾವೇ ಯಾರಿಗೂ ಕಡಿಮೆ ಇಲ್ಲದ ಉದ್ಧಾಮ ಪಂಡಿತರು, ಒಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಮೇಲೆ ಹೀಗೆ ಬರೆಯುತ್ತಾರೆಂದರೆ, ಅವರ ಪ್ರಾಮಾಣಿಕತೆ, ಅಪೂರ್ವ ವಿದ್ವತ್ ಪ್ರೇಮವನ್ನು ಕೊಂಡಾಡಲೇಬೇಕು. ಆ ವಿದ್ಯಾರ್ಥಿ ಆ ಸಂದರ್ಭದಲ್ಲಿ ಯಾರು ಎಂದು ಕುಂದಣಗಾರರಿಗೂ ಗೊತ್ತಿರಲಿಲ್ಲ, ಮುಂದೊಂದು ದಿನ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ, ಡಾ. ಆರ್ ಸಿ ಹಿರೇಮಠ ಅವರೇ ಆ ವಿದ್ಯಾರ್ಥಿ.
   ಅದೇ ಕುಂದಣಗಾರರು ಒಮ್ಮೆ ಯಾವುದೋ ಕೆಲಸಕ್ಕೆ ಒಬ್ಬ ಬಹುಮಾನ್ಯ, ಬಹುದೊಡ್ಡ ವಿಧ್ವಾಂಸರ ಹತ್ತಿರ ಚರ್ಚಿಸಲು, ಅವರ ಮನೆಕಡೆಗೆ ತೆರಳಿದಾಗ, ಇವರು ಹತ್ತಿರ ಬರುವುದನ್ನು ಗ್ರಹಿಸಿದ ಆ ದೊಡ್ಡ ವಿಧ್ವಾಂಸರು ಇವರು ನೋಡ ನೋಡುತ್ತಲೇ ಎದ್ದು ಒಳನಡೆದಿದ್ದನ್ನು , ಎಷ್ಟು ಕಾದರೂ ಹೊರ ಬಾರದೇ ಇದ್ದುದನ್ನು ಆತ್ಮೀಯರ ಹತ್ತಿರ ಬಹು ನೋವಿನಿಂದ ಹೇಳಿಕೊಳ್ಳುತ್ತಿದ್ದರು ಎಂದು ಹಿರಿಯರು ಹೇಳಿದಾಗ, ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ವಿಷಾಧವೊಂದು ಸುಳಿದು ಮರೆಯಾಯಿತು. ಇಂದು ನಾಡಿಗೆ ನಾಡೇ ಬಹುದೊಡ್ಡ ವಿಧ್ವಾಂಸರೆಂದು , ಅವರ ವಿಧ್ವಾಂಸತೆಯಲ್ಲಿ ಯಾವ ಕಮ್ಮಿಯೂ ಇಲ್ಲ ಬಿಡಿ,  ಅವರನ್ನು ನೆನೆಯುತ್ತದಾದರೂ , ಅಂತಹ ಮನುಷ್ಯ ತನ್ನ ವೈಯಕ್ತಿಕ ಜೀವನವನ್ನು ಎಷ್ಟೊಂದು ಸಂಕುಚಿತತೆಯನ್ನು  ಆಚರಿಸುತ್ತಿದ್ದರು ಎಂದು ಹೇಳಿ, ನಾವು ತಿಳಿದುಕೊಂಡ ಹಾಗೆ ಕೆಲವರು ಇರುವುದಿಲ್ಲ, ಬಹಳ ಗೌರವವಿರಿಸಿಕೊಂಡವರೇ ಹೀಗೆ ವರ್ತಿಸಿದಾಗ ಆಗುವ ಆ ನೋವು ಹೇಳಲಿಕ್ಕೆ ಬಾರದು  ಎಂದು ವಿಷಾದದಿಂದ ಹೇಳುತ್ತಲೇ ಇದ್ದರು. ಇತಿಹಾಸದಲ್ಲಿ ಮುಂದೊಂದು ದಿನ ನಾನು ಕುಬ್ಜನಾದೇನು ಅನ್ನುವ ಭಯ ಕೂಡ ಇವರಿಗೆ ಅರಿವಿಗೇ ಬಾರದೇ ಹೋಯಿತು ನೋಡಿ ಎಂದರು. ಅನೇಕ ಗುಂಪುಗಾರಿಕೆಗಳಿಂದ, ಸಮೃದ್ಧವಾಗಿ ಬೆಳೆಯಬೇಕಾದ ಕನ್ನಡ ಸಾಹಿತ್ಯ, ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳದೇ , ಬೇರೆ ಆಯಾಮದಲ್ಲಿ ಸೀಮಿತವಾಗಿ ಅಷ್ಟೆ ಬೆಳೆಯುತ್ತ ಹೋಯಿತು ಎಂದು ವಿಶ್ಲೇಷಿಸಿದರು.
   ಮೊನ್ನೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ , ಗೀತಾ ಕುಲಕರ್ಣಿಯವರ ಸಮಗ್ರ ಸಾಹಿತ್ಯದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾಡೋಜ ಪಾಪು, ಕೂಡ ಇಂತಹ ಮಾತುಗಳನ್ನೇ ಆಡಿದ್ದುದು ನೆನಪಾಯಿತು.  ಬಹುತೇಕ ದೊಡ್ಡವರೆನಿಸಿಕೊಂಡಿರುವವರು ಸಮೀಪದಿಂದ ನೋಡಿದಾಗ  ನಾವೆಲ್ಲ ತಿಳಿದುಕೊಂಡ ಹಾಗೆ ದೊಡ್ಡವರೂ ಆಗಿರುವುದಿಲ್ಲ, ಹಾಗೂ ದೊಡ್ಡತನ ಮೆರೆಯುವವರೂ ಆಗಿರುವುದಿಲ್ಲ ಎಂದಾಗ ಒಳಗಿನ ಕೊಳಕು ನಿಚ್ಚಳವಾಗಿ ಕಂಡಹಾಗನಿಸಿತ್ತು. ಗೀತಾ ಕುಲಕರ್ಣಿ ಅವರು ಕಂಡ ಕಷ್ಟಗಳನ್ನು ಅನುಕಂಪ ಪೂರಿತವಾಗಿ ವಿವರಿಸಿ, ದೊಡ್ಡವರೆನಿಸಿಕೊಂಡವರು ದೊಡ್ಡವರಾಗಿರುವುದಿಲ್ಲ ಎಂದು ತುಸು ವ್ಯಗ್ರವಾಗಿಯೇ ನುಡಿದರು.  ನನಗೆ ಬಹಳಷ್ಟು ವಿಷಯಗಳು ಗೊತ್ತಿವೆ ಅದರೆ ಅವುಗಳನ್ನು ನಾನು ಹೇಳಲಾರೆ ಎಂದು ಪಾಪು ನುಡಿದಿದ್ದುದು ಹಲವಾರು ಇಂತಹ ವಿಷಯಗಳಿಗೆ ಕನ್ನಡಿ ಹಿಡಿಯುವಂತಿದ್ದವು.
ದೊಡ್ಡವರ ಹತ್ತಿರ ಹೋಗುವಾಗ, ನೆನಪಿರಲಿ, ಎಲ್ಲರೂ ದೊಡ್ಡವರಾಗಿರುವುದಿಲ್ಲ!

Rating
No votes yet