’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ

’ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು’ - ಒಂದು ಸಂಗೀತ ಕಚೇರಿ

ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹೆಚ್ಚಿಗೆ ಇದ್ದೇ ಇತ್ತು. ಅದು ಹೇಗೇ ಇರಲಿ, ಅಂದರೆ ಇಂದು ಒಂದು ಕರ್ನಾಟಕ ಸಂಗೀತ ಕಚೇರಿಗೆ ಹೋದರೆ ಹೆಚ್ಚಾಗಿ ಭಕ್ತಿ ಪ್ರಧಾನ ರಚನೆಗಳನ್ನು ಕೇಳುವ ಸಾಧ್ಯತೆಯೇ ಹೆಚ್ಚು ಅನ್ನುವುದೇನೋ ನಿಜ.


ಈಗ ರಾಜಾಸ್ಥಾನಗಳಿಲ್ಲವಲ್ಲ- ಆದರೆ ಅದರ ಬದಲು ವಿಶೇಷ ಸಂದರ್ಭಗಳಲ್ಲಿ ಮನೆಗಳಲ್ಲೇ ಕಚೇರಿ ನಡೆಸುವ ಪದ್ಧತಿ ಬೆಳೆದು ಬಂದಿದೆ. ಇಂತಹ ಮನೆ-ಕಚೇರಿಗಳು ಸಭೆಯಲ್ಲಿ ನಡೆವ ಕಚೇರಿಗಳಿಗಿಂತ ಒಂದು ರೀತಿಯ ಆಪ್ತ ಅನುಭವವನ್ನೂ ನೀಡುತ್ತವೆ.

ಹೀಗೇ, ಹೋದ ತಿಂಗಳು ನಮ್ಮ ಮನೆಯಲ್ಲೊಂದು ಸಂಗೀತ ಕಚೇರಿ ಇಟ್ಟುಕೊಂಡಿದ್ದೆವು. ಸುಮ್ಮನೆ ಒಂದು ಕಚೇರಿ ಮಾಡುವ ಬದಲು ಯಾವುದಾದರೊಂದು ವಿಶೇಷ ವಿಷಯವನ್ನಾಯ್ಕೆಮಾಡಿಕೊಂಡರೆ ಚೆನ್ನಾಗಿರುತ್ತೆ ಅನ್ನಿಸಿತು. ಹಾಗಾಗಿ ಅವತ್ತಿನ ಕಚೇರಿಗೆ ಆಯ್ಕೆ ಮಾಡಿಕೊಂಡ ವಿಷಯ ’ಕರ್ನಾಟಕದ ದೇಗುಲಗಳು’.

ಒಂದು ಕಚೇರಿಗೆಂದು ಹಾಡುಗಳನ್ನು ಆಯುವುದು ಕಷ್ಟವಾದ ಕೆಲಸವೇ. ಏಕೆಂದರೆ ರಾಗ-ತಾಳಗಳ ಸಮತೋಲನ, ವಿಳಂಬ-ದುರಿತ ಗತಿಯ ರಚನೆಗಳ ಸಮತೋಲಮ್ನ, ಬೇರೆ ಬೇರೆ ರಚನಾಕಾರರ ರಚನೆಗಳ ಸಮತೋಲನ, ವರ್ಣ, ಕೃತಿ, ತಿಲ್ಲಾನ,ದೇವರನಾಮ - ಇತ್ಯಾದಿ ರಚನೆಗಳ ವೈವಿಧ್ಯ - ಇವೆಲ್ಲ ಇರಲೇಬೇಕಾಗುತ್ತೆ. ಇಲ್ಲವಾದರೆ ಕಚೇರಿ ಕಳೆಗಟ್ಟುವುದಿಲ್ಲ. ಈ ರೀತಿ ವಿಷಯಾಧಾರಿತ ಕಚೇರಿ(thematic concert)ಗಳಲ್ಲಂತೂ ಈ ಕಳೆಗಟ್ಟಿಸುವ ಕೆಲಸ ಇನ್ನೂ ಕಷ್ಟ. ಈ ಕೆಲಸವನ್ನು ಹಾಡುಗಾರ್ತಿ ಜಯಂತಿ ಉಮೇಶ್ ಅವರು ಸಮರ್ಥವಾಗಿ ನಿರ್ವಹಿಸಿದರು. ಅವರ ಜೊತೆ ಪಕ್ಕವಾದ್ಯದಲ್ಲಿದ್ದ ಪಿಟೀಲು - ಲಕ್ಷ್ಮೀ ಬಾಲಸುಬ್ರಮಣ್ಯ; ಮೃದಂಗ - ರವೀಂದ್ರ ಭಾರತಿ, ಕಚೇರಿ ಯಶಸ್ಸನ್ನು ಕಾಣಲು ನೆರವಾದರು.


ಕರ್ನಾಟಕದ ಹಲವಾರು ದೇವಾಲಯಗಳ/ಅಲ್ಲಿರುವ ದೇವ-ದೇವಿಯರ ಬಗ್ಗೆಯ ರಚನೆಗಳು ಈ ಕಚೇರಿಯಲ್ಲಿ ಮೂಡಿಬಂದವು. ಮೈಸೂರಿನ ಚಾಮುಂಡೇಶ್ವರಿ, ಶ್ರೀರಂಗಪಟ್ಟಣದ ರಂಗನಾಥ, ಕೊಲ್ಲೂರ ಮೂಕಾಂಬಿಕೆ, ಶೃಂಗೇರಿ ಶಾರದೆ, ಉಡುಪಿ ಕೃಷ್ಣ,ದೇವರಾಯನದುರ್ಗದ ನರಹರಿರಾಯ ಮೊದಲಾದವರ ಸ್ಮರಣೆಯೂ ಆಯಿತು. ಆಯಾ ದೇವಾಲಯಗಳ ಬಗ್ಗೆ ಹಾಡುತ್ತಿದ್ದ ಹಾಗೇ ನಾನು ಗೋಡೆಯ ಮೇಲೆ ಮೂಡಿಸುತ್ತಿದ್ದ ದೇವಾಲಯಗಳ ಬಗ್ಗೆ ಒಂದಷ್ಟು ಮಾಹಿತಿ, ಚಿತ್ರಗಳು ಇರುವ ಚಿತ್ರ ಸರಣಿಯನ್ನು ಅಂದಿನ ಕೇಳುಗರು ಮೆಚ್ಚಿದರು! ಒಟ್ಟಿನಲ್ಲಿ ಆರನೇ ಶತಮಾನದಿಂದ ಆರಂಭವಾಗುವ ಕರ್ನಾಟಕದ ದೇವಾಲಯ ಪರಂಪರೆಗೆ ಒಂದು ಕಿರುನೋಟವನ್ನು ನೀಡಲು ಈ ಕಚೇರಿ ಯಶಸ್ವಿಯಾಯಿತು.

ಈ ಚಿತ್ರ ಸರಣಿಯನ್ನು ನೋಡಲು ಆಸಕ್ತಿ ಇದ್ದವರು ಇಲ್ಲಿ ಚಿಟಕಿಸಿ: https://docs.google.com/fileview?id=0B0Ii4Rbou0yTYjgwY2YyYTEtMTE5YS00YmEzLWFkNDgtN2EwNmFkM2IzNjRl&authkey=CMDmr6QC&hl=en


ಮೇಲುಕೋಟೆಯ ಮೇಲೆ ಇದ್ದ ಪುತಿನ ಅವರ ರಚನೆಯೊಂದು ವಿಶಿಷ್ಟವಾಗಿತ್ತೆನಿಸಿ ಅದರ ಸಾಲುಗಳನ್ನು ಇಲ್ಲಿ ಬರೆಯುತ್ತಿರುವೆ.


ಹಣ್ಣಿನಿಂ ತರು ನಮ್ರ ಮೋಡ ಹನಿಯಿಂ ನಮ್ರ
ನೆರೆದ ಸಿರಿಯೊಳು ಪುಣ್ಯ ಪುರುಷ ನಮ್ರ
ಜ್ಞಾನಿ ಅರಿವಿಂ ನಮ್ರ ಆರ್ತನಳಲಿಂ ನಮ್ರ
ನೆಲೆಯರ್ತಿಗಿಂಬಾಗಿ ಭಕ್ತ ನಮ್ರ



ಎಂದು ಮೊದಲಾಗುವ ಈ ಕವಿತೆ ಕೊನೆಗೆ "ಎಲ್ಲರಲಹಮನು ಕಳೆದು ವೃದ್ಧಮಾದೀ ಗುಡಿಯು" ಎಂದು ಆ ’ಮಲೆಯ ದೇಗುಲ’ವನ್ನೇ ಸ್ತುತಿಸಿ, "ಇಲ್ಲಿ ಮಣಿದವನೆಲ್ಲೆಲ್ಲು ಸಟೆದು ನಿಲ್ಲುವ ಇಲ್ಲಿ ಮೈಕುಗ್ಗಿದವ ಎಲ್ಲೆಲ್ಲು ನೇರ ನಡೆವ!" ಎನ್ನುತ್ತ ದೇವರಿಗಿಂತ ದೇವಾಲಯವನ್ನೇ ಮಿಗಿಲಾಗಿಸುತ್ತೆ!

-ಹಂಸಾನಂದಿ

Rating
No votes yet

Comments