’ಚುಕ್ಕಿ’ಯೊಡನೆ ಚಕ್ಕಂದ

’ಚುಕ್ಕಿ’ಯೊಡನೆ ಚಕ್ಕಂದ

RangoliRangoli’ಚುಕ್ಕಿ’ಯೊಡನೆ ಚಕ್ಕಂದ ನಾನು ಈ ದಿನ ಹೇಳಬಯಸುವುದು ಅತ್ಯಂತ ಕಿರಿಯದಾದ ’ಚುಕ್ಕಿ’ಯ ಬಗ್ಗೆ. "ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು" ಎಂಬ ಗಾದೆ ಮಾತು ನನ್ನ ಈ ಬರವಣಿಗೆಗೆ ಸ್ಫೂರ್ತಿ. ಕಲಿತವರು ಮಾತ್ರ ಏನನ್ನಾದರು ಬರೆಯಲು ಸಾಧ್ಯ. ಆದರೆ ಚುಕ್ಕಿ,ಗೆರೆಗಳನ್ನು ಬರೆಯಲು ಅನಕ್ಷರಸ್ಥರಿಂದಲೂ ಸಾಧ್ಯ.ಜೀವನದಲ್ಲಿ ಪ್ರತಿಯೊಬ್ಬರೂ ಅಂದರೆ ಹಳ್ಳಿಮುಕ್ಕನಿರಲಿ, ವಿದ್ವಾಂಸನಿರಲಿ, ಪ್ರಪಂಚದ ಯಾವಮೂಲೆಯಲ್ಲಾದರೂ ವಾಸವಾಗಿರಲಿ,ಯಾವ ಭಾಷಿಕನಾದರೂ ಅಗಿರಲಿ ಚುಕ್ಕಿಯನ್ನಿಟ್ಟಿರಲೇಬೇಕು ಅಥವ ನೋಡಿರಲೇಬೇಕು.ದೇಶ-ಭಾಷೆಗಳ ಗಡಿಮೀರಿ ನಿಂತಿರುವುದೇ ಚುಕ್ಕಿಯ ಹೆಗ್ಗಳಿಕೆ.ಗಣಿತಶಾಸ್ತ್ರದಲ್ಲಿ ವಿಶ್ವದೆಲ್ಲೆಡೆ (೦) ಎಂದೇ ಗುರುತಿಸುವಂತೆ ಸಾಹಿತ್ಯದಲ್ಲಿ ಚುಕ್ಕಿ(.)ಯನ್ನು ಪೂರ್ಣವಿರಾಮವಾಗೇ ಬಳಸುತ್ತಾರೆ.ಈಗ ನಿಮಗೆ ಚುಕ್ಕಿಯ ಮಹತ್ವದ ಅರಿವಾಗಿರಬೇಕಲ್ಲವೇ?

ಬೆಳಗ್ಗೆ ಎದ್ದೊಡನೆ ಮುಂಬಾಗಿಲಿನಲ್ಲಿ ಹೆಂಗೆಳೆಯರು ಬಿಡಿಸಿದ ಚುಕ್ಕಿರಂಗೋಲಿ ಸ್ವಾಗತಿಸುವಂತೆ ರಾತ್ರಿಯಾದರೆ ಬಾನಂಗಳದಲ್ಲಿ ಮಿನುಗುವ ಚುಕ್ಕಿಗಳು ಕಣ್ಣುಮಿಟುಕಿಸಿ ನಮಗೆ ಶುಭರಾತ್ರಿ ಹೇಳುತ್ತವೆ. ಜಾನಪದಗಾರರು, ನಮ್ಮ ಹಿರಿಯರು ಅಷ್ಟೇಕೆ ಹಳ್ಳಿಗಳಲ್ಲಿ ಈಗಲೂ ಸಹ ನಕ್ಷತ್ರಗಳಿಗೆ ಚುಕ್ಕಿಯೆಂದೇ ಕರೆಯುತ್ತಾರೆ.ವಿಜ್ಞಾನ ಶುಕ್ರಗ್ರಹವೆಂದು ಗುರುತಿಸಿರುವ ಗ್ರಹವನ್ನು ನಮ್ಮ ಹಿಂದಿನವರು ಬೆಳ್ಳಿಚುಕ್ಕಿ ಎಂದು ಕರೆದಿದ್ದಾರೆ.

ಇನ್ನು ಸಾಹಿತ್ಯಲೋಕದಲ್ಲಿ ಚುಕ್ಕಿಯ ಹಿರಿಮೆ ಏನಿರಬಹುದು ನೋಡೋಣ. ಸಾಹಿತ್ಯದಲ್ಲಿ ಚುಕ್ಕಿ ಎಂದರೆ ಒಂದು ಬಿಂದುಚಿಹ್ನೆ ಅಂದರೆ ಪೂರ್ಣವಿರಾಮ. ಒಂದು ವಾಕ್ಯ ಪೂರ್ಣವಾಯಿತು ಎಂದು ತಿಳಿಸಲು ಚುಕ್ಕಿಯನ್ನು ಬಳಸುತ್ತೇವೆಂದಾಯಿತು. ಯಾವುದೇ ವಿಷಯ ಬರೆಯುವಾಗ ಪೂರ್ಣವಿರಾಮ ಅಂದರೆ ಚುಕ್ಕಿ ಹಾಕುವುದು ಸ್ವಲ್ಪ ವ್ಯತ್ಯಾಸವಾದರೂ ವಾಕ್ಯದ ಅರ್ಥ ಅನರ್ಥವಾಗುವ ಸಾಧ್ಯತೆಯಿದೆ.ಆದ್ದರಿಂದ ಬರವಣಿಗೆಗಾರರು ಚುಕ್ಕಿಯ ಬಗ್ಗೆ ಬಹಳ ಎಚ್ಚರದಿಂದಿರಬೇಕು. ಚುಕ್ಕಿ ಎಂದು ನಿರ್ಲಕ್ಷ್ಯಸಲ್ಲದು.ಇದಲ್ಲದೆ ಪ್ರಶ್ನಾರ್ಥಕಚಿಹ್ನೆ(?) ಮತ್ತು ಆಶ್ಚರ್ಯಸೂಚಕಚಿಹ್ನೆ(!)ಗಳಲ್ಲೂ ಕೆಳಗೆ ಚುಕ್ಕಿ ಬಳಸುತ್ತಾರೆ.

ಈಗ ನಮ್ಮ ಪುರಾಣದತ್ತ ಗಮನಿಸೋಣ. ರಾಕ್ಷಸರ ಗುರುವಾದ ಶುಕ್ರಾಚಾರ್ಯರಿಗೆ ’ಚುಕ್ಕಿ’ಎಂದು ಹೆಸರಿತ್ತಂತೆ. ಇವರ ಶಿಷ್ಯರಿಗೆ ಅಂದರೆ ದೈತಾಕಾರದ ರಾಕ್ಷಸರಿಗೆ ’ಚುಕ್ಕಿಗುವರ’ರು ಎಂದೆನ್ನುತ್ತಿದ್ದರಂತೆ! ತಮಾಷೆಯಾಗಿದೆ ಅಲ್ಲವೆ?

ಕಲಾಲೋಕದಲ್ಲೊಮ್ಮೆ ಕಣ್ಣೋಡಿಸೋಣ ಬನ್ನಿ. ಚುಕ್ಕಿ ಸೇರಿಸಿ ಚಿತ್ರ ಬರೆಯುವುದೂ ಸಹ ಒಂದು ಅದ್ಭುತ ಕಲೆ. ಆರಂಭದಲ್ಲಿ ಚುಕ್ಕಿ ಇಟ್ಟು ನಂತರ ಅವುಗಳನ್ನು ತನ್ನ ಜಾಣ್ಮೆಯಿಂದ ಸೇರಿಸಿ ರಂಗವಲ್ಲಿ ಬಿಡಿಸುವುದು ನಮ್ಮ ನಾರಿಯರಲ್ಲಿರುವ ಕಲಾತ್ಮಕತೆಗೆ ನಿದರ್ಶನ.ನಾವೆಲ್ಲರೂ ಅಜ್ಜಿಯರ ಕೈಗಳಲ್ಲಿ ಹಚ್ಚೆ ಹಾಕಿರುವುದನ್ನು ನೋಡೇ ಇರುತ್ತೇವೆ.ಸೂಜಿಯ ಮೊನೆಯಲ್ಲಿ ಹಸಿರುಬಣ್ಣ ಸೇರಿಸಿ ಒಂದೊಂದೇ ಚುಕ್ಕಿಗಳನ್ನು ಚುಚ್ಚಿ ಹಚ್ಚೆ ಬಿಡಿಸಿರುತ್ತಾರೆ.ಟೈಪ್ರೈಟರ್ ಮತ್ತು ಕಂಪ್ಯೂಟರ್ ಗಳಲ್ಲಿ ಸಹ ಕೇವಲ ಚುಕ್ಕಿ ಸೇರಿಸಿ ಚಿತ್ರ ಬರೆದಿರುವುದನ್ನು ನಾವು ಈಗಲೂ ಕಾಣುತ್ತೇವೆ. ’ಚುಕ್ಕಿಕಲೆ"ಗೊಂದು ಭಕ್ತಿಪೂರ್ವಕ ನಮನ.

ಆಧುನಿಕ ಯುಗಕ್ಕೆ ಬಂದರೆ ಚುಕ್ಕಿಯ ಮಹತ್ವ ಇನ್ನೂ ಒಂದು ತೂಕ ಹೆಚ್ಚಾದಂತೆ ತೋರುತ್ತಿದೆ.ಇದು ಕಂಪ್ಯೂಟರ್ ಯುಗ. ಇಲ್ಲಿ ಎಲ್ಲವೂ ಚುಕ್ಕಿಮಯ. ಏಕೆಂದರೆ ಅಂತರ್ಜಾಲದ ವಿಳಾಸದಲ್ಲಿ .ಕಾಂ(ಡಾಟ್ ಕಾಂ) ಎಂದಿರಲೇಬೇಕು. ಇಲ್ಲಿ ಚುಕ್ಕಿ ಇಟ್ಟೇ ನಾವಿರುವ ವಿಳಾಸ ಅಥವ ನಾವಿರುವ ಜಾಗ ತಿಳಿಸಬೇಕು. ಡಾಟ್ ಕಾಂ ಎನ್ನುವುದನ್ನು ಲೇಖಕರೊಬ್ಬರು "ಚುಕ್ಕಿವಾಣಿ" ಎಂದು ಸುಂದರವಾಗಿ ಭಾಷಾಂತರಿಸಿದ್ದಾರೆ. ಹೇಗಿದೆ ಚುಕ್ಕಿಯ ಮಹಿಮೆ.

ಶಾಲಾಕಾಲೇಜಿನ ದಿನಗಳಲ್ಲಿ ಮಾಸ್ತರರ ಪಾಠ ಬೋರೆನಿದಾಗ ಹಿಂದಿನ ಬೆಂಚಿನಲ್ಲಿ ಕುಳಿತು ಚುಕ್ಕಿ ಸೇರಿಸುವ ಆಟ ಆಡುತ್ತಿದ್ದುದನ್ನು ಮರೆಯಲು ಸಾಧ್ಯವೆ? ಆ ದಿನಗಳನ್ನು ನೆನಸಿಕೊಂಡರೆ ಚುಕ್ಕಿಗೊಂದು ಸೆಲ್ಯೂಟ್ ಹೇಳಲೇಬೇಕೆನ್ನಿಸುತ್ತದೆ. ನಿಮ್ಮ ಆನುಭವವೂ ಇದಕ್ಕಿಂತ ಭಿನ್ನವಾಗೇನೂ ಇಲ್ಲವೆಂದುಕೊಳ್ಳುತ್ತೇನೆ. ಏಕೆಂದರೆ ಚಿಕ್ಕವರಾಗಿದ್ದಾಗ ಎಲ್ಲರೂ ಈ ಆಟದ ಆನಂದವನ್ನು ಅನುಭವಿಸಿಯೇ ಇರುತ್ತಾರೆ.

ಇನ್ನೊಂದು ವಿಷಯ ನಿಮಗೆ ಗೊತ್ತೆ? ಈಗಿನ ಕಾಲದ ಹುಡುಗಿಯರ ಹಣೆ ಗಮನಿಸಿದ್ದೀರಾ? ಮಿರಿಮಿರಿ ಮಿಂಚುವ ಚುಕ್ಕಿಯಂತಹ ಬಿಂದಿ ಎರಡು ಹುಬ್ಬುಗಳ ಮಧ್ಯೆ ಇಣುಕಲೋ ಬೇಡವೋ ಎಂದು ಕಂಡುಬರುತ್ತದೆ. ಎಲ್ಲವೂ ಕಾಲಮಹಿಮೆ ಅಲ್ಲ ಚುಕ್ಕಿಮಹಿಮೆ ಎನ್ನೋಣ ಅಲ್ಲವೇ?

ಕನ್ನಡ ನಿಘಂಟಿನಲ್ಲಿ ’ಚುಕ್ಕಿ’ಗೆ ಅಲ್ಪ, ಕೆಲಸಕ್ಕೆಬಾರದವನು ಎಂಬ ಅರ್ಥವೂ ಇದೆ. ಆದರೆ ಚುಕ್ಕಿಯ ಬಗ್ಗೆ ಇಷ್ಟೆಲ್ಲಾ ತಿಳಿದ ನಂತರ ಚುಕ್ಕಿಯನ್ನು ಅಲ್ಪ, ಕೆಲಸಕ್ಕೆಬಾರದವನು ಎನ್ನಲು ನನಗಂತೂ ಮನಸ್ಸಾಗುತ್ತಿಲ್ಲ. ನಿಮಗೇನನ್ನಿಸುತ್ತಿದೆ?ಚುಕ್ಕಿಯ ಈ ಬರಹಕ್ಕೆ ನಾನಿನ್ನು ಪೂರ್ಣವಿರಾಮ ಅಂದರೆ ಚುಕ್ಕಿ ಇಡುತ್ತೇನೆ. ’ಚುಕ್ಕಿ’ಯ ಬಗ್ಗೆ ಇನ್ನೂ ಮಹತ್ವದ್ದೇನಾದರು ನಿಮಗೆ ಹೊಳೆದರೆ ಪಟ್ಟಿಮಾಡಲು ಮರೆಯದಿರಿ.

Rating
No votes yet

Comments