’ಡ’ ರವರಿಗೊಂದು ಬಹಿರಂಗ ಪತ್ರ

’ಡ’ ರವರಿಗೊಂದು ಬಹಿರಂಗ ಪತ್ರ

’ಡ’ ರವರಿಗೊಂದು ಬಹಿರಂಗ ಪತ್ರ
ಹೆಚ್ಚಿಗೆ ಆಶ್ಚರ್ಯವೇನು ಬೇಡ. ’ಕರ್ನಾಟಕದ ಮಹಾಚೇತನ :ಭಕ್ತಿ ಭಂಡಾರಿ ಬಸವಣ್ಣನವರು’ ಗೆ ಬಂದ ಪ್ರತಿಕ್ರಿಯೆಯ ಹಿನ್ನಲೆಯಲ್ಲಿ ಈ ಪತ್ರವಷ್ಟೆ. ಹೆಚ್ಚೆಂದರೆ ’ನೀವು ಬಸವಣ್ಣನವರ ಜೀವನವನ್ನು ವೈಭವೀಕರಿಸಿದ್ದೀರಿ’ ಎಂಬ ಸಾದಾರಣ ಪ್ರತಿಕ್ರಿಯೆಯ ನಿರೀಕ್ಷಣೆಯ ಜಾಗದಲ್ಲಿ , ನೀವು ’ಬಸವಣ್ಣನವರಿಗೆ ಅಪಮಾನ” ಎಂದು ಪ್ರತಿಕ್ರಿಯೆ ಬರೆದಾಗ ನೀವು ಬರೆಯುತ್ತಿರುವ ಹಿನ್ನಲೆ ತಿಳಿಯದೆ ಆಶ್ಚರ್ಯವಾಯಿತು. ಕ್ರಮೇಣ ವಿಷಯದ ಬಗ್ಗೆ ನಿಮಗಿರುವ ಹೊಸದೃಷ್ಟಿಕೋನ ಎಲ್ಲದರ ಅರಿವಾಯಿತು. ಜೊತೆಜೊತೆಗೆ ಬಂದ ಎಲ್ಲ ಸಂಪದಿಗರ ಪ್ರತಿಕ್ರಿಯೆ ನೋಡುತ್ತ ವಿಷಯಗಳನ್ನೆಲ್ಲ ಓದುತ್ತಿರುವಂತೆ ನಾನು ಹಿನ್ನುಡಿಯಲ್ಲಿ ಬರೆದಿದ್ದ ’ಶ್ರೀ ಬಸವಣ್ಣನವರ ಜೀವನ ಹಾಗು ವಚನಗಳು’ ಕೆಲವಾರು ಡಾಕ್ಟರ್ ಪದವಿಗೆ ಸಾಕಾಗುವಷ್ಟು’ ಇದೆ ಅನ್ನುವ ಸಾಲುಗಳು ಅತಿಯೋಕ್ತಿಯೇನಲ್ಲ ಅನ್ನಿಸಿತು.

  ಸಂಪದಿಗರೊಬ್ಬರು ಈ ರೀತಿಯ ಸಂಶೋದನ ರೀತಿಯ ಪುಸ್ತಕ ಬರೆಯುತ್ತಿರುವುದು ಆಸಕ್ತಿದಾಯಕ ಹಾಗು ಸಂತೋಷಕೊಡುವ ವಿಷಯ. ಎಲ್ಲರು ಬಸವಣ್ಣನವರ ಜೀವನವನ್ನು ರೂಡಿಗತದಂತೆ ಅಭ್ಯಾಸ ಮಾಡಬೇಕಾದರೆ ನೀವು ಹೊಸದಿಕ್ಕಿನಿಂದ ನೋಡಿ ಬೇರೆ ರೀತಿಯಲ್ಲಿಯೆ ಅದನ್ನು ಪುಸ್ತಕದಲ್ಲಿ ಹೇಳಬೇಕೆಂದರೆ ಅದಕ್ಕೆ ಅಪಾರ ಅದ್ಯಯನ ,ಶ್ರಮ ನಿರೀಕ್ಷಿಸುತ್ತದೆ, ಜೊತೆಯಲ್ಲಿಯೆ ಅಷ್ಟೆ ಸಹನೆಯನ್ನು ಸಹ ! :-)

 ಒಮ್ಮೆ ಓದಿದ್ದೆ ಸಂಪೂರ್ಣ ಜಗತ್ತೆಲ್ಲ ಭೂಮಿ ಚಪ್ಪಟೆ ಎಂದು ನಂಬಿರುವಾಗ ಯಾರೊ ಒಬ್ಬ ಕೋಪರ್ನಿಕಸ್ ಆಗಲಿ ಗೆಲಿಲಿಯೋ ಆಗಲಿ ಭೂಮಿ ಚಪ್ಪಟೆಯಲ್ಲ ದುಂಡಗಿಗೆ ಎಂದು ಹೇಳಲು ಎಷ್ಟು ಆತ್ಮಶಕ್ತಿ ಬೇಕು! ಸಹನೆಯಿರಬೇಕು! ನಮ್ಮ ಯೋಚನೆಗಳಲ್ಲಿ ನಿಜವಾದ ’ಸತ್ಯ’ ವಿದ್ದರೆ , ’ಸತ್ವ’ ವಿದ್ದರೆ ಈ ಎಲ್ಲವನ್ನು ಮೀರಿ ನಿಲ್ಲುತ್ತದೆ.

 ’ಕರ್ನಾಟಕದ ಮಹಾಚೇತನ....’ ಲೇಖನಕ್ಕೆ  ಅಮೂಲ್ಯವಾದ ಎಷ್ಟೊ ಪ್ರತಿಕ್ರಿಯೆಗಳು ಬಂದವು,  
’ಕೇವೆಂ’,’ಸಿಂಚನ’,’ಅನಂತೇಶ’,’ಸಂಕೃ’ ಅಲ್ಲದೆ  ’ಡಾ||ಕಿರಣ್’ ಹಾಗು ಸಂಪದದ ಎಲ್ಲ ಮಿತ್ರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೊಂದು ಅಭಿಪ್ರಾಯ ಸಂಪೂರ್ಣ ನಿಮ್ಮ ಯೋಚನೆಯ ವಿಲೋಮ ದಿಕ್ಕಿನಲ್ಲಿತ್ತು,  
 ನಿಮ್ಮ ಪುಸ್ತಕದಲ್ಲಿ ಈ ಎಲ್ಲ ವಿಮರ್ಷೆಗಳನ್ನು ಅಲೋಚನೆಗಳನ್ನು  ಸ್ವೀಕರಿಸಿ ವಿಮರ್ಷಿಸಿ ಸಮಧಾನಕರ ಉತ್ತರಗಳನ್ನು ಕೊಡುತ್ತೀರೆಂದು ಆಶಿಸುತ್ತೇನೆ.

   ಪ್ರತಿಕ್ರಿಯೆಗಳಲ್ಲಿ ’ಗುರುತಿಸಿಕೊಳ್ಳುವಿಕೆ’ ಮುಂತಾದ ಪದಗಳನ್ನು ಗಮನಿಸಿದಾಗ, ಸಾಹಿತ್ಯ ಹಾಗು ವೈಚಾರಿಕ ಲೋಕದಲ್ಲಿ ’ಮತ್ತೊಂದು’ ಲೋಕವು ಪರದೆಯ ಹಿಂದಿರುವದರ ಸತ್ಯವು ಅನಾವರಗೊಳ್ಳುತ್ತದೆ.

   ವಿಷಯಕ್ಕೆ ಸಂಬಂಧಪಡದಂತೆ ಹೇಳಬೇಕೆಂದರೆ ’ವಾದದಿಂದ ವಾದ ಹುಟ್ಟುತ್ತದೆ , ನಾನು ಗೆಲ್ಲ ಬೇಕೆಂಬ ಅಭಿಮಾನದಲ್ಲಿ , ತರ್ಕ ಮುಗಿದಾಗ ವ್ಯಕ್ತಿ ನಿಂದನೆಗೆ ದಾರಿ ಮಾಡುತ್ತದೆ’. ಆದರೆ ಗೆಲ್ಲಲು ಉತ್ತಮ ಮಾರ್ಗವೆಂದರೆ ನಮ್ಮ ವಾದವನ್ನು ಉತ್ತಮ ರೀತಿಯಲ್ಲಿ ಎಲ್ಲವು ಒಪ್ಪುವಂತೆ ಮಂಡಿಸುವುದು. ನಮ್ಮ ವಾದದ ’ಮಂಡನೆ’ ಯಿಂದ ಮತ್ತೊಂದನ್ನು ’ಖಂಡಿಸು’ ವುದು ಉತ್ತಮ ಮಾರ್ಗ. ಇದು  ಸಾದ್ಯವಾದರೆ ಬಸವಣ್ಣನವರ ಜೀವನವನ್ನು ಬೇರೆಯೆ ಆದ ಹೊಸದೃಷ್ಟಿಕೋನದಿಂದ ನೋಡಲು ಎಲ್ಲರಿಗೂ ಸಾದ್ಯವಾಗುತ್ತದೆ. ಅಷ್ಟೆ ಅಲ್ಲ ನಿಮ್ಮ ಪುಸ್ತಕವು ಕರ್ನಾಟಕದ ಇತಿಹಾಸವನ್ನು ಮತ್ತೊಮ್ಮೆ ಪರಿಷ್ಕರಣ ದೃಷ್ಟಿಯಿಂದ ವೀಕ್ಷಿಸಲು ಕೈಮರವಾಗುತ್ತದೆ.

ಅಭಿಪ್ರಾಯ ವ್ಯಕ್ತಪಡಿಸಿ ಆ ಮೂಲಕ ನನ್ನ ಹಾಗು ಎಲ್ಲರ ತಿಳುವಳಿಕೆ ಬೆಳೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ನನ್ನ ಪುಟ್ಟ ಲೇಖನ ಎಲ್ಲರಿಗೂ ತಮ್ಮ ಅಮೂಲ್ಯ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಯಾದುದ್ದು ಸಂತೋಷ ಕೊಡುವ ವಿಚಾರ.
ವಂದನೆಗಳು
ನಿಮ್ಮ ಕೆಲಸಕ್ಕೆ ಶುಭಕೋರುತ್ತ ,
ನಿಮ್ಮ ಪುಸ್ತಕದ ಪ್ರಕಟಣೆಯ ನಿರೀಕ್ಷಣೆಯಲ್ಲಿ

ಪಾರ್ಥಸಾರಥಿ

 

Rating
No votes yet