’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...

’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...

೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು. ಹಾಡಿನಲ್ಲಿ ಕನ್ನಡವನ್ನು ಕೇಳಿದಾಗಲಂತೂ ಮೈ-ಪುಳುಕ. ಚಿಕ್ಕ ಮಕ್ಕಳಾಗಿದ್ದ ನಮಗೆ, ಭಾರತದ ಸಂಸ್ಕೃತಿಯ ಕನ್ನಡಿಯಂತಿದ್ದ ಈ ಹಾಡು ಕಣ್ಣಿಗೆ ಹಬ್ಬವೇ ಸರಿ.

ನೀವೆಲ್ಲ ಕೇಳಿರಬಹುದಾದ, ಈ ಹಾಡನ್ನು ಮತ್ತೊಮ್ಮೆ ಕೇಳಿಬಿಡಿ

ಇತ್ತೀಚಿಗೆ ಝೂಮ್ ಚಾನಲ್‍ನವರು, ಈ ಪ್ರಸಿದ್ಧ ಹಾಡನ್ನು ಹೊಸ ರೀತಿಯಲ್ಲಿ, ಹೊಸ ಧಾಟಿಯಲ್ಲಿ ಮಾಡಿದ್ದಾರೆ.
ಕೆಳಗಿನ ಎರಡು ಕಂತುಗಳಲ್ಲಿ ಕೇಳಿಬಿಡಿ: ಫಿರ್ ಮಿಲೇ ಸುರ್‍ನ ಮೊದಲ ಕಂತು ಇಲ್ಲಿದೆ:

ಎರಡನೇ ಕಂತು ಇಲ್ಲಿದೆ:

ಮಿಲೇ ಸುರ್ ಮೇರಾ ತುಮ್ಹಾರ ಹೊತ್ತಿಸಿದ ಕಿಡಿ-ದೇಶ ಭಕ್ತಿ, ಈ ಹಾಡಿನಲ್ಲಿ ನನಗೆ ಕಾಣಲಿಲ್ಲ. ಭಾರತದ ಸಂಸ್ಕೃತಿಯನ್ನು ಬಿಂಬಿಸುವುದಕ್ಕಿಂತ, ಚಲನಚಿತ್ರ ತಾರೆಯರಿಂದಲೇ ತುಂಬಿಸಿರುವ ಈ ಹಾಡನ್ನು ನೋಡಿದಾಗ, ಮಿಲೇ ಸುರ್ ಮೇರಾ ತುಮ್ಹಾರ ಹಾಡಿನ ಅಪಮಾನದಂತೇ ಕಾಣುತ್ತದೆ. ಭಾರತ ಸಂಸ್ಕೃತಿಯನ್ನು ಬಿಂಬಿಸಲು ಹೊರಟಿಲ್ಲವಾದಲ್ಲಿ, ನಿರ್ದೇಶಕರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿಯಲಿಲ್ಲ. ಇಡೀ ಹಾಡಿನಲ್ಲಿ ಗ್ಲಾಮರ್ ತುಂಬಿಸಿ, ಹಿಂದೆ ಪಡೆದ ಯಶಸ್ಸು ಮರುಕಳಿಸಬಹುದು ಎಂಬ ಎಣಿಕೆ ನಿರ್ದೇಶಕರಿಗೆ ಹೇಗಿತ್ತೋ ಕಾಣೆ. ಮುಂಚಿನ ಹಾಡಲ್ಲೂ ಚಿತ್ರತಾರೆಯರಿದ್ದರೂ, ಅದು ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು ಎಂದು ನನ್ನ ಅನಿಸಿಕೆ. ಈ ಹಾಡಿನ ಹೊಸ ಪ್ರಯತ್ನವೇಕೋ ನನಗೆ ದೊಡ್ಡ ವೈಫಲ್ಯದಂತೆ ತೋರುತ್ತದೆ...

ಕನ್ನಡದ ಭಾಗದ ಬಗ್ಗೆ ಒಂದಿಷ್ಟು:
ಪ್ರಕಾಶ್ ಪಡುಕೋಣೆ ಹಾಡುವಾಗ ನನಗೆ ನಲಿವು ತಂದರೆ, ಕನ್ನಡ ನಾಡಲ್ಲಿ ಹುಟ್ಟದ ಕವಿತಾ ಕೃಷ್ಣಮೂರ್ತಿ ಹಾಡಿದ್ದು ಪೆಚ್ಚನ್ನು ತಂದಿತು. ಚೆನ್ನೈನಲ್ಲಿ ಹುಟ್ಟಿದ ಎಲ್. ಸುಬ್ರಮಣಿಯಂ, ಬೆಂಗಳೂರಿನಲ್ಲಿ ನೆಲಸಿರುವವರು ಎಂಬ ವಿಷಯಕ್ಕೆ ಸಮಾಧಾನ ಪಟ್ಟಿಕೊಳ್ಳಬೇಕೇನೋ. ಹಾಡಿನಲ್ಲಿ ಬರುವ ಮಿಕ್ಕವರೆಲ್ಲ ಯಾರು ಎಂಬುದೇ ತಿಳಿಯಲಿಲ್ಲ. ಕರ್ನಾಟಕದಲ್ಲಿ ಹುಟ್ಟಿದ ಮೂವರು ಬಾಲಿವುಡ್‍ನ ಪ್ರಸಿದ್ಧ ನಟಿಯರು ಯಾರೂ ಕನ್ನಡದ ಭಾಗವನ್ನು ಹಾಡದಿದ್ದುದು ನನಗೆ ಅಚ್ಚರಿಯೇನು ತರಲಿಲ್ಲ. ಏಕೆಂದರೆ ಇವರೆಲ್ಲ ತಾವು ಕನ್ನಡಿಗರೂ ಎಂದು ಇದುವರೆಗೂ ಹೆಮ್ಮೆಯಿಂದ ಹೇಳಿಕೊಂಡಿದ್ದನ್ನೂ ಕಂಡೇ ಇಲ್ಲ. ದೀಪಿಕಾ ಪಡುಕೋಣೆಯಂತೂ, ಮಾಧ್ಯಮದವರೆಲ್ಲ ತನ್ನ ಊರಿನ ಹೆಸರನ್ನು ’ಪಡುಕೋಣ್’ ಎಂಬ ತಪ್ಪಾಗಿ ನುಡಿದರೂ ಇಂದಿನವರೆಗೂ ಸರಿಪಡಿಸದವಳು. ಇಂಥವರಿಂದ ಹೆಚ್ಚೇನು ಆಶಿಸಲಾಗುತ್ತದೆ, ಅಲ್ಲವೇ?

 

ಇನ್ನು ಸಾಹಿತ್ಯದ ಬಗ್ಗೆ ನೋಡುವ...ನಾನು ಮತ್ತೊಮ್ಮೆ ಈ ಹಾಡುಗಳನ್ನು ಕೇಳಿದರೆ, ಮೊದಲ ಬಾರಿಯ ಹಾಡಿನಲ್ಲಿರುವ, "ನನ್ನ ದನಿಗೆ ನಿನ್ನ ದನಿಯ, ಸೇರಿದಂತೆ ನಮ್ಮ ಧ್ವನಿಯ" ಎಂಬ ಸಾಹಿತ್ಯವೇನು ಹಿಡಿಸುವುದಿಲ್ಲ. ಅದೇಕೋ ಅರ್ಧಕ್ಕೆ ನಿಂತಂತೆ ಅನಿಸುತ್ತದೆ. ಎರಡನೆಯ ಪ್ರಯತ್ನದಲ್ಲಿ ಕವಿತಾ ಕೃಷ್ಣಮೂರ್ತಿ ಮತ್ತು ಸಂಗಡಿಗರು ಹಾಡುವ, "ಸ್ವರ ಸೇರಿದೆ ನಮ್ಮ ನಿಮ್ಮದೂ...ಆ ಸ್ವರವಾಗಲಿ ನಮ್ಮೆಲ್ಲರದೂ", ಮೊದಲಿಗಿಂತ ಪರವಾಗಿಲ್ಲ ಎನಿಸಿದರೂ, ಹೆಚ್ಚಾಗಿ ಮೆಚ್ಚೆನಿಸಲಿಲ್ಲ. ಹಾಡಿನ ಮೂಲ ಭಾವವನ್ನು ಹಿಡಿಯದೇ, ಪ್ರತಿ ಪದವನ್ನು ಅನುವಾದ ಮಾಡಿದಲ್ಲಿ ಈ ರೀತಿ ಆಗಬಹುದು ಎಂಬುದು ನನ್ನ ಅನಿಸಿಕೆ.

ಪ್ರತಿ-ಪದ ಅನುವಾದಿಸದೆ ಐಕ್ಯರಾಗವನ್ನು ಹೊಮ್ಮಿಸುವಾಸೆಯಿಂದ ಯೋಚಿಸುತ್ತಿದ್ದಾಗ ಹೊಳೆದ ಕನ್ನಡದ ಸಾಲುಗಳಿವು:

------

ಕೂಡಲಿ ಸ್ವರವು ಸ್ವರವು ಇಂದು, ಮೂಡಲಿ ಹೊಸ-ರಾಗವೊಂದು
ಸ್ವರದ ನದಿಗಳು ಎಲ್ಲೆಡೆಯಿಂದ ಹರಿದು ಕಡಲನು ಸೇರಲಿ..
ಮೇಘದ(ಮೋಡದ) ಸ್ವರೂಪ ಪಡೆದು, ಸ್ವರಗಂಗೆ ಭುವಿಗಿಳಿಯಲಿ...
ಓ...ಕೂಡಲಿ ಸ್ವರವು ಸ್ವರವು ಇಂದು, ಮೂಡಲಿ ಹೊಸ-ರಾಗವೊಂದು...
------

ಹೇಗಿದೆ? ನಿಮ್ಮ ಅನಿಸಿಕೆ ಹೇಳಿ...

--ಶ್ರೀ

Rating
No votes yet

Comments