“ನಿಜವ ತಿಳಿಯೋಣ-3”

“ನಿಜವ ತಿಳಿಯೋಣ-3”

                                 

                              [ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ]

ವೇದವು ಸಂಸ್ಕೃತ ಭಾಷೆಯಲ್ಲಿದೆ, ಎಂದು ಅನೇಕರ ಭಾವನೆ. ಆದರೆ ವೇದವು ಸಂಸ್ಕೃತದಲ್ಲಿಲ್ಲ. ವೇದವು  ವೇದ ಭಾಷೆಯಲ್ಲಿದೆ. ಹೀಗೆಂದಾಗ  ಆಶ್ಚರ್ಯ ಆಗದಿರದು. ವೇದ ಭಾಷೆಗೆ ಸಂಸ್ಕೃತ ಹತ್ತಿರವಾಗಿರುವುದು ನಿಜ. ವೇದವನ್ನು ಸಂಸ್ಕೃತ ಶಬ್ಧಕೋಶದ ಸಹಾಯದಿಂದ  ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅರ್ಥವಾಗುವುದಿಲ್ಲ. ಕಾರಣ  ವೇದ ಭಾಷೆ ಮತ್ತು ಸಂಸ್ಕೃತ ಭಾಷೆ ಒಂದೇ ಅಲ್ಲ. ಆದರೆ ವೇದವನ್ನು ಅರ್ಥಮಾಡಿಕೊಳ್ಳುವಾಗ ಸಂಸ್ಕೃತವು   ಸ್ವಲ್ಪ ಸಹಾಯವಾದೀತು. ಆದರೆ ಅನೇಕರಿಗೆ ಆಗಿರುವ ಗೊಂದಲವೇ ಇದು.ಸಂಸ್ಕೃತ ಪದಕ್ಕೆ  ಇರುವ  ಅರ್ಥದಂತೆ ವೇದವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಗೊಂದಲವುಂಟಾಗಿ ವೇದ ಮಂತ್ರದ ಅರ್ಥ ವೆತ್ಯಾಸವಾಗುತ್ತದೆ.

ಉಧಾಹರಣೆಗೆ ಅಶ್ವ ಎನ್ನುವ ಶಬ್ಧದ ಬಗ್ಗೆ ವಿಚಾರಮಾಡೋಣ. ಸಂಸ್ಕೃತದಲ್ಲಿ   ಅಶ್ವ ಎಂದರೆ ಕುದುರೆ ಎಂದು ಅರ್ಥ.  ಆದರೆ ವೇದದಲ್ಲಿ ಎಲ್ಲೆಲ್ಲಿ ಅಶ್ವ ಎನ್ನುವ ಶಬ್ಧದ ಪ್ರಯೋಗವಿದೆ ಅಲ್ಲೆಲ್ಲಾ ನಾವು ಕುದುರೆ ಎಂದು ಅರ್ಥ ಮಾಡಿಕೊಂಡರೆ ತಪ್ಪಾಗುತ್ತದೆ. ಸಂಸ್ಕೃತ ಭಾಷೆಗೆ ಕುದುರೆ ಎನ್ನುವ ಅರ್ಥ ಸರಿಯಾಗಿದೆ. ಆದರೆ ವೇದದಲ್ಲಿ ಅಶ್ವ ಎನ್ನುವ ಪದ ಬಂದಾಗ ಅದರ ವ್ಯಾಪ್ತಿಯನ್ನು ನೋಡಬೇಕಾಗುತ್ತದೆ. ವೇದದಲ್ಲಿ ಅಶ್ವ ಎಂಬ ಶಬ್ಧ ಪ್ರಯೋಗವಾದಾಗ ಹೇಗೆ ಅರ್ಥ ಮಾಡಿಕೊಳ್ಳ  ಬೇಕು? ಅದಕ್ಕೆ ಬೇರೆಯೇ ರೀತಿ ಇದೆ.ಇದಕ್ಕೆ ವೇದಾಂಗ ಕ್ರಮ ಎನ್ನುತ್ತಾರೆ. ಆರ್ಶೇಯ ಕ್ರಮ ಎಂತಲೂ ಹೇಳಬಹುದು. ಆರ್ಶೇಯ ಎಂದರೆ ಋಷಿಮುನಿಗಳು ಕೊಟ್ಟ ಕ್ರಮ ಎಂದು ಅರ್ಥ.ಆರ್ಶೇಯ ಕ್ರಮದಲ್ಲಿ ವೈದಿಕ ವ್ಯಾಕರಣದ ಹಿನ್ನೆಲೆಯಲ್ಲಿ  ಅಶ್ವ ಎನ್ನುವ ಪದವನ್ನು ಅರ್ಥ ಮಾಡಿಕೊಳ್ಳಬೇಕು.ಈ ಕ್ರಮ ಹೇಗೆ ? ಅಲ್ಲಿ ಒಂದು ವ್ಯವಸ್ಥೆ ಇದೆ. ವೇದ ಮಂತ್ರದ ಯಾವುದೇ ಶಬ್ಧವು ವೈಜ್ಞಾನಿಕವಾಗಿ ನಿರ್ಮಿತವಾಗಿದೆ. ಇದನ್ನು ತಿಳಿದುಕೊಂಡಾಗ ಆ ಶಬ್ಧದ ಮಹತ್ವ ಅರ್ಥವಾಗುತ್ತದೆ.ಇದು ಹೇಗೆ ಎಂದು ನೋಡೋಣ.

ಕಮ್ಯುನಿಕೇಶನ್  ತಂತ್ರಜ್ಞಾನದ ಬಗ್ಗೆ ಇಂದು ಬಹಳ ಚರ್ಚೆ ನಡೆಯುತ್ತಿದೆ. ವೇದದಲ್ಲಿ  ಈ ಬಗ್ಗೆ ನೋಡೋಣ. ನನ್ನ ತಲೆಯಲ್ಲಿ ಮೂಡಿರುವ ವಿಚಾರವನ್ನು ನಿಮ್ಮ ತಲೆಗೆ ತಲುಪಿಸುವ ಕೆಲಸಕ್ಕೆ ಕಮ್ಯುನಿಕೇಶನ್ ಎಂದು ಹೇಳಬಹುದಲ್ಲವೇ? ಇದು ಹೇಗೆ ನಡೆಯುತ್ತದೆ? ಇದು ಮನೋ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರ. ಮೊದಲು ನಮ್ಮ ತಲೆಯಲ್ಲೊಂದು ಆಲೋಚನೆ ಬರುತ್ತದೆ.    ಅದು ಅಮೂರ್ತ. ಕೇವಲ ಭಾವನಾ ರೂಪದಲ್ಲಿದೆ.ಅದಕ್ಕೆ ಯಾವುದೇ ರೀತಿಯ ಆಕಾರ ರೂಪ ಇಲ್ಲ. ಈ ಅಮೂರ್ತ ಭಾವನೆಯನ್ನು ನಿಮ್ಮ ತಲೆಗೆ ತಲುಪಿಸಿದರೆ ಕಮ್ಯುನಿಕೇಶನ್ ಪೂರ್ಣವಾದಂತೆ. ಆದರೆ ಅಮೂರ್ತರೂಪದಲ್ಲಿ  ಆಲೋಚನೆಯನ್ನು ಇನ್ನೊಬ್ಬರಿಗೆ ತಲುಪಿಸಲು ಸಾಧ್ಯವಿಲ್ಲ. ಹಾಗಾಗಿ ಅಮೂರ್ತ ರೂಪದ ಭಾವನೆಯಮ್ಮು ಮೂರ್ತ ರೂಪಕ್ಕೆ ತರಬೇಕು. ಅದಕ್ಕೇನು ಮಾಡಬೇಕು?..... ಇದನ್ನು ಅಕ್ಷರರೂಪಕ್ಕೆ ತರಬೇಕು, ಅಥವಾ  ಶಬ್ಧದ  ರೂಪಕ್ಕೆ ತರಬೇಕು. ಇಂತಿಂತಾ ಅಕ್ಷರಗಳನ್ನು ಒಟ್ಟು ಸೇರಿಸಿದಾಗ ಹೀಗೆ ಅರ್ಥಮಾಡಿಕೊಳ್ಳಿ, ಎಂಬ ಒಂದು ವ್ಯವಸ್ಥೆ. ಉಧಾಹರಣೆಗೆ ನ್+ಆ ಮತ್ತು ಯ್+ಇ  ಹೀಗೆ ಅಕ್ಷರಗಳನ್ನು ಸೇರಿಸಿ “ನಾಯಿ” ಎಂಬ ಪದವನ್ನು ನಿರ್ಮಿಸಿ ನಿಮಗೆ ತಲುಪಿಸಿದಾಗ ನಿಮ್ಮ ಕಣ್ಮುಂದೆ ನಾಯಿ ಚಿತ್ರವನ್ನು ನೀವು ಕಲ್ಪಿಸಿಕೊಳ್ಳುವಿರಿ. ಹೀಗೆ ಇದು  ಅಮೂರ್ತದಲ್ಲಿದ್ದ ಭಾವನೆಯನ್ನು  ನಿಮಗೆ ಮೂರ್ತ ಸ್ವರೂಪದಲ್ಲಿ ಕಮ್ಯುನಿಕೇಟ್ ಮಾಡುವ ಒಂದು ವ್ಯವಸ್ಥೆ. ಅಥವಾ  ನನ್ನ ತಲೆಯಲ್ಲಿ ಬಂದ   ನಾಯಿಯ ಚಿತ್ರ ಒಂದನ್ನು ಬರೆದರೂ ನಿಮಗೆ ಅದು ಕಮ್ಯುನಿಕೇಟ್ ಆಗಲು ಸಾಧ್ಯ. ಹೀಗೆ ಅಮೂರ್ತದಿಂದ ಮೂರ್ತ ರೂಪಕ್ಕೆ ಬರಬೇಕಾದರೆ ಒಂದು ವ್ಯವಸ್ಥೆ ಇರಬೇಕು. ಆಗ ವಿಷಯವನ್ನು ತಿಳಿಸಲು ಸಾಧ್ಯವಾಗುತ್ತದೆ.

ಅಮೂರ್ತ ಭಾವನೆಯನ್ನು ಒಂದು ಪದದ ಮೂಲ ರೂಪಕ್ಕೆ ಲಿಂಕ್ ಮಾಡಬೇಕಾಗುತ್ತದೆ. ಆ ಮೂಲ ರೂಪಕ್ಕೆ “ಧಾತು” ಎನ್ನುತ್ತಾರೆ.  ಇಂತಹ ಧಾತುಗಳ ಪಟ್ಟಿಯಿಂದ    ನನ್ನ ಮನಸ್ಸಿನಲ್ಲಿ ಬಂದಿರುವ ವಿಚಾರಕ್ಕೆ ಸರಿಹೊಂದುವಂತಹ ಧಾತುವನ್ನು  ಆರಿಸಿಕೊಂಡು ಪದದ ರಚನೆ ಮಾಡಬೇಕಾಗುತ್ತದೆ. ಉಧಾಹರಣೆಗೆ ನನ್ನ ಮನಸ್ಸಿನಲ್ಲಿ  “ತಿನ್ನುವ “ ವಿಚಾರ ಮೂಡುತ್ತದೆ. ಅದನ್ನು ನಿಮಗೆ ಕಮ್ಯುನಿಕೇಟ್ ಮಾಡುವುದು ಹೇಗೆ? ಧಾತುಗಳ ಪಟ್ಟಿಯಲ್ಲಿ “ತಿನ್ನುವ “ ಎಂಬ ಭಾವನೆಗೆ ಸೂಕ್ತವಾದ ಧಾತುವನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೆ ಮಾಡಿದಾಗ ಸಿಗುವ ಧಾತು “ ಅಶ್” . 

ತಿನ್ನುವ ಪದದ ಮೂಲ ಧಾತು ಅಶ್. ಅಶ್ ಎಂದರೆ ಭಕ್ಷಣೆ ಎಂಬ ಅರ್ಥ  ಬರುತ್ತದೆ. ನಂತರ ಈ ಧಾತುವಿಗೆ  ಲಿಂಗ ವನ್ನು ಸೂಚಿಸುವ, ವಚನವನ್ನು ಸೂಚಿಸುವ, ವಿಭಕ್ತಿಯನ್ನು ಸೂಚಿಸುವ ಅಕ್ಷರಗಳನ್ನು ವೈದಿಕ ವ್ಯಾಕರಣಕ್ಕನುಗುಣ ವಾಗಿ    ಸೇರಿಸಿದಾಗ    “ಅಶ್ವ:”   ಎನ್ನುವ ಪದದ ರಚನೆಯಾಗುತ್ತದೆ. “ಅಶು ಭಕ್ಷಣೆ” ಯಿಂದ ಬರುವಂತಹ ಅಶ್ವ ಪದ ರಚನೆಗೆ ಹತ್ತಾರು ಮೆಟ್ಟಿಲುಗಳಿವೆ.ಈ ಹತ್ತಾರು ಮೆಟ್ಟಿಲುಗಳನ್ನು ಅಭ್ಯಾಸ ಮಾಡಿ ಒಂದು ಪದದ ರಚನೆಯಾಗುತ್ತದೆಯಾದ್ದರಿಂದ ಒಂದು ಪದದ ರಚನೆಯ ಹಿಂದೆ ಒಂದು ಕರಾರು ವಾಕ್ ವಿಜ್ಞಾನವಿದೆ. ಆದರೆ ಇಂಗ್ಳೀಶ್ ಭಾಷೆಯಲ್ಲಿ   ಸಿ ಯು ಟಿ ಕಟ್ ಎಂದಾದರೆ ಪಿಯುಟಿ  ಪುಟ್ ಎಂದು ಉಚ್ಚರಿಸಬೇಕು. ಸಿ ಯು ಟಿ ಕಟ್ ಎಂದು ಉಚ್ಚರಿಸಿದರೆ ಪಿಯುಟಿ  ಪಟ್ ಆಗಬಾರದೆ? ಇಲ್ಲ. ಅದು ಹಾಗೆಯೇ, ಇದು ಹೀಗೆಯೇ. ಒಂದು ನಿಯಮವೇ ಇಲ್ಲ.

ಈ ರೀತಿಯ ಸಮಸ್ಯೆಗಳು ಬಹುಪಾಲು ಎಲ್ಲಾ ಭಾಷೆಗಳಲ್ಲಿ ಕಾಣಿಸಿಕೊಂಡರೂ ವೇದ ಭಾಷೆಯಲ್ಲಿ ಇಂತಹ ಸಮಸ್ಯೆಗಳಿಲ್ಲ.ವೇದಭಾಷೆಯಲ್ಲಿನ ನಿಯಮಗಳಂತೆ ಅಚ್ಚುಕಟ್ಟಾಗಿ ಜಗತ್ತಿನ  ಯಾವ ಭಾಷೆಯಲ್ಲೂ ಇಲ್ಲ.ವೇದ ಭಾಷೆಯಲ್ಲಿನ ಪ್ರತಿಯೊಂದು ಪದದ ನಿರ್ಮಾಣದ ಹಿಂದೆ ಹೀಗೆ ಒಂದು ಸುಸ್ಥಿರ  ವ್ಯವಸ್ಥೆ ಇದೆ. ಧಾತು ಮತ್ತು ಅದಕ್ಕೆ ಹಲವಾರು ಆಯಾಮಗಳಿವೆ.ಒಂದು ನಾಮಪದವು  ಧಾತುವಿನ ಮೂಲ ರೂಪ,ಅದಕ್ಕೊಂದು ಲಿಂಗ,ವಚನ ಮತ್ತು ವಿಭಕ್ತಿ ಸೇರಿ ನಿರ್ಮಾಣವಾಗುತ್ತದೆ. ಒಂದು ಕ್ರಿಯಾ ಪದವು ರಚನೆಯಾಗಲು ಅದಕ್ಕೆ ವೇದ ಭಾಷೆಯಲ್ಲಿ ಲಿಂಗವನ್ನು ಸೇರಿಸುವುದಿಲ್ಲ. ಕನ್ನಡದಲ್ಲಾದರೆ  ಮಾಡುತ್ತಾನೆ, ಮಾಡುತ್ತಾಳೆ , ಎಂಬ ಕ್ರಿಯಾಪದಗಳಿದ್ದು  ಅದರಲ್ಲಿ ಲಿಂಗವು ಸೇರಿದೆ. ವೇದ ಭಾಷೆಯಲ್ಲಿ ಹಾಗೂ ಸಂಸ್ಕೃತದಲ್ಲೂ ಕೂಡ “ಕರೋತಿ”  ಎಂಬ ಪದವಿದ್ದು ಅದನ್ನು ಸ್ತ್ರೀ ಲಿಂಗದಲ್ಲಿ ಪ್ರಯೋಗಿಸಲು ಸಾ ಕರೋತಿ ಎಂದೂ ಮತ್ತು ಪುಲ್ಲಿಂಗದಲ್ಲಿ ಪ್ರಯೋಗಿಸಲು ಸ: ಕರೋತಿ, ಎಂದೂ ಪ್ರಯೋಗಿಸುತ್ತಾರೆ. ಅಂದರೆ ಕ್ರಿಯಾಪದದ ಜೊತೆ ಲಿಂಗವು ಸೇರಿಲ್ಲ. ಅದಕ್ಕೆ ಕಾರಣ ಹಲವು. ಒಂದು ಕ್ರಿಯಾಪದವು  ರಚನೆಯಾಗಲು ಅದಕ್ಕೆ   ವಚನ ಬೇಕು, ಯಾವ ಪುರುಷ, [ಪ್ರಥಮ ದ್ವಿತೀಯ, ಅನ್ಯ]ಎಂಬುದು ಬೇಕು, ಮೂರನೆಯ ಅಂಶ “ಕಾಲ”  ಬೇಕು. ಅಂದರೆ ಕ್ರಿಯೆ ಈಗ ನಡೆಯುತ್ತಿದೆಯೋ, ನಿನ್ನೆ ನಡೆದಿದೆಯೋ, ಇಂದು ನಡೆಯಲಿದೆಯೋ[ಭವಿಷ್ಯತ್ ಕಾಲ] ನಾಳೆ ನಡೆಯಲಿದೆಯೋ [ಅನಧ್ಯತನ  ಭವಿಷ್ಯತ್ ಕಾಲ] , ಭೂತಕಾಲದಲ್ಲೂ ಅಷ್ಟೆ. ಇಂದು ದಿನ ಆರಂಭದಿಂದ ಈವರಗೆ ನಡೆದಿರುವ ಕ್ರಿಯೆಗೆ ಹೇಳುವುದೇ ಬೇರೆ. ನಿನ್ನೆಮಧ್ಯ ರಾತ್ರಿ ಯವರಗೆ ನಡೆದ ಕ್ರಿಯೆಗೆ    ಹೇಳುವುದೇ ಬೇರೆ. ಅಂದರೆ ಒಂದು ಕ್ರಿಯಾಪದದ ನಿರ್ಮಾಣಕ್ಕೆ ಇಷ್ಟೆಲ್ಲಾ ಗಮನಿಸಿ ಸೂಕ್ತ ಅಕ್ಷರಗಳನ್ನು ಧಾತುವಿಗೆ ಜೋಡಿಸಿದಾಗ ಕ್ರಿಯಾಪದದ ನಿರ್ಮಾಣವಾಗುತ್ತದೆ. ಅಂದರೆ ಒಂದು “ಅಶ್ವ” ಎನ್ನುವ ಪದ ನಿರ್ಮಾಣದ ಹಿಂದೆ ಇಷ್ಟೆಲ್ಲಾ ಪ್ರಯತ್ನಗಳಿವೆ ಎಂಬುದು ನಮಗೆ ತಿಳಿದಿರಬೇಕು.

ಸಂದರ್ಭಾನುಸಾರ ವೇದಮಂತ್ರದ ಒಂದು ಪದದ ಅರ್ಥವ್ಯಾಪ್ತಿ ಎಷ್ಟು ವಿಶಾಲವಾಗಿದೆ ಎಂಬುದನ್ನು ಮುಂದೆ ಅರ್ಥ ಮಾಡಿಕೊಳ್ಳೋಣ. ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನಾವು ಪದದ ನಾನಾ ಅರ್ಥಗಳನ್ನು ಅಧ್ಯಯನ ದೃಷ್ಟಿಯಿಂದಲೇ ತಾಳ್ಮೆಯಿಂದ ಓದಬೇಕಾಗುತ್ತದೆ. ಈಗ ಅಶ್ವ ಪದದ ಮೂಲಕ್ಕೆ ಹೋಗಿ ನೋಡೋಣ.ಮೂಲದಲ್ಲಿ ಇರುವುದಾದರೂ ಏನು…”ಅಶ್ ಭಕ್ಷಣೆ” ಅಂದರೆ ಯಾವ್ಯಾವುದು ತಿನ್ನುತ್ತದೋ ಅದಕ್ಕೆಲ್ಲಾ ಅಶ್ವ: ಪದವನ್ನು ಬಳೆಸಬಹುದು. ಕಾರಣ ಅಶ್ ಎಂದರೆ ತಿನ್ನುವುದು ಎಂದು ಅರ್ಥ. ಕುದುರೆಗೆ ಮಾತ್ರ ಅಶ್ವ:  ಎಂದು ಹೇಳಬೇಕಾಗಿಲ್ಲ. ಯಾವ್ಯಾವುದು ತಿನ್ನುತ್ತದೋ ಅದೆಲ್ಲಾ ಅಶ್ವವೇ ಆಗಿದೆ. ಗ್ರಹಿಸುವುದು ಎಂದರೂ ಕೂಡ  ತಿನ್ನುವುದು ಎಂದೇ ಅರ್ಥ. ಹೀಗೆಂದಾಗ ಸ್ವಲ್ಪ ಅಚ್ಚರಿ ಆಗದಿರದು.  ಹೊಟ್ಟೆಗೆ ಸ್ವೀಕರಿಸಿದರೆ ಮಾತ್ರ ತಿನ್ನುವುದು ಎಂಬುದು ರೂಢಿಯಲ್ಲಿದೆ. ಆದರೆ ಕಣ್ಣಿನ ಮೂಲಕ ನೋಡಿದ್ದು, ಕಿವಿಯ ಮೂಲಕ ಕೇಳಿದ್ದು ಎಲ್ಲವೂ ತಿನ್ನುವುದೇ ಆಗಿದೆ. ಹೊಟ್ಟೆಯ ಹಸಿವಿಗೆ ಆಹಾರವನ್ನು ಬಾಯಿಯ ಮೂಲಕ  ತಿಂದರೆ,  ಒಂದು ದೃಶ್ಯವನ್ನು ಗ್ರಹಿಸಲು ಕಣ್ಣು,ಒಂದು ಶಬ್ಧವನ್ನು ಗ್ರಹಿಸಲು ಕಿವಿ…ಇವೆಲ್ಲವೂ ಮಾಡುವ ಕೆಲಸವೂ ತಿನ್ನುವುದೇ ಆಗಿದೆ.ಅಂದರೆ ತಿನ್ನುವ ಕೆಲಸ ಮಾಡುವ ಬಾಯಿ, ಕಣ್ಣು, ಕಿವಿ ಎಲ್ಲವನ್ನೂ ಅಶ್ವ: ಎಂದೇ ಹೇಳಬಹುದು.ಹೀಗೆ ಒಂದು ಪದದ ಅರ್ಥದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು.

 ವೇದ ಮಂತ್ರಗಳಲ್ಲಿ ಹಲವು  ಪದಗಳ ಅರ್ಥವ್ಯಾಪ್ತಿಯನ್ನು ಬಹಳ ವಿಸ್ತಾರವಾಗಿ ಬಳಸಿರುವುದು ಕಂಡುಬರುತ್ತದೆ. ರೂಢಿಯಲ್ಲಿ ಅಶ್ವ ಎಂದರೆ ಕುದುರೆ ಎಂಬುದು ಸರಿ. ಆದರೆ ವೇದದಲ್ಲಿ ತಿನ್ನುವ ಎಂಬ ಅರ್ಥವ್ಯಾಪ್ತಿಯಲ್ಲಿ ಅಶ್ವ ಪದವನ್ನು ನೋಡಿದಾಗ ಒಂದು ವಿವರಣೆಯನ್ನು ನಾವು ಕಾಣಬಹುದು” ಯಾವುದು ದಾರಿಯನ್ನು ತಿನ್ನುತ್ತದೋ ಅದು ಅಶ್ವ. ಅಂದರೆ ಈ ನಾಲ್ಕು ಕಾಲಿನ ಕುದುರೆಯೇ ಆಗಿದೆ.ಅಂದರೆ ವೇದವನ್ನು ಅರ್ಥ ಮಾಡಿಕೊಳ್ಳುವಾಗ “ಅಶ್ವ” ಎಂಬ ಪದವನ್ನು ಕೇವಲ ಕುದುರೆ ಎಂದು ಅರ್ಥ ಮಾಡಿಕೊಂಡರೆ ವೇದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆಯಾಯ ಸಂದರ್ಭಕ್ಕನುಗುಣವಾಗಿ ವಿಶಾಲವಾದ ಅರ್ಥ ವ್ಯಾಪ್ತಿಯಲ್ಲಿ ಯಾವುದು ಹೊಂದುತ್ತದೋ ಅದೇ ಅರ್ಥವನ್ನು ಅನ್ವಯಿಸಿದಾಗ ಮಾತ್ರ ವೇದ ಮಂತ್ರವನ್ನು ಅರ್ಥೈಸಿಕೊಳ್ಳಲು  ಸಾಧ್ಯ.ಇನ್ನೊಂದು ಅರ್ಥವನ್ನು ನೋಡಿದಾಗ ಇನ್ನೂ ಆಶ್ಚರ್ಯ ಆಗದೆ ಇರದು. ಅದೇನೆಂದರೆ ಅಶ್ವ ಎಂದರೆ  ಸೂರ್ಯನ ಕಿರಣ ಎಂದೂ ಅರ್ಥೈಸಲಾಗಿದೆ. ಸಮುದ್ರದ ಮೇಲೆ ಬೀಳುವ ಸೂರ್ಯನ ಕಿರಣದಿಂದ ನೀರು ಆವಿಯಾಗಿ ಮೋಡವಾಗುವಾಗ ಸೂರ್ಯನ ಕಿರಣವು ನೀರನ್ನು ತಿಂದಂತಾಯ್ತು. ಹಾಗಾಗಿ ಸೂರ್ಯನ ಕಿರಣಕ್ಕೂ ಅಶ್ವ ಎನ್ನಬಹುದು. ಆದರೆ ಸೂರ್ಯನು ಏಳು ಕುದುರೆಯ ರಥದಲ್ಲಿ ಬರುತ್ತಾನೆಂದು  ರೂಢಿಯಲ್ಲಿದೆ. ಅಶ್ವ ಎಂಬ ಪದಕ್ಕೆ ಇಷ್ಟೇ ಅಲ್ಲ,ಇನ್ನೂ ಸ್ವಾರಸ್ಯ ವಾಗಿರುವ ಅರ್ಥಗಳಿವೆ. ಮುಂದಿನ ವಾರ ನೋಡೋಣ.

Rating
No votes yet

Comments

Submitted by nageshamysore Sat, 08/03/2013 - 19:06

ನಿಜವ ತಿಳಿಯೋಣ - 3

ಹರಿಹರಪುರ ಶ್ರೀಧರರೆ, ಈ ಬಾರಿಯ ವಿವರಣೆ ಚೆನ್ನಾಗಿ ಬಿಂಬಿತವಾಗಿದೆ (ಉದಾಹರಣೆಗೆ ಅಮೂರ್ತದಿಂದ ಮೂರ್ತವಾಗುವ ಬಗೆ). ನನ್ನ ಪಾಮರ ಭಾಷೆಯಲ್ಲಿ ನಾ ಹಿಡಿದಿಟ್ಟ ಸಾರ ಈ ಕೆಳಕಂಡ ಪದ್ಯ ರೂಪದಲ್ಲಿದೆ - ನಾಗೇಶ ಮೈಸೂರು

ವೇದ ಭಾಷೆಯ ವೈವಿಧ್ಯ, ಮಿಕ್ಕೆಲ್ಲ ಭಾಷೆ ಮೀರಿದ ಸಮೃದ್ಧ
ವೇದಾಂಗ ಆರ್ಶೇಯ ಕ್ರಮ, ಮೂಲಧಾತು ಜತೆಗೆ ಕ್ರಮಬದ್ದ
ಚಿಂತನೆ ಅಮೂರ್ತ ಭಾವ, ಸೇರೆ ಸರಿ ಧಾತು ಜತೆ ಸಂಕಲನ
ವಿಂಗ ವಚನ ವಿಭಕ್ತಿ, ವೈದಿಕ ವ್ಯಾಕರಣದಾ ಪರಿಪಕ್ವ ವಿಜ್ಞಾನ!

ಅಶ್ವ ಪದದ 'ಅಶ್' ಧಾತುವಿನರ್ಥ, ತಿನ್ನುವುದೆಲ್ಲಕು ಸನ್ನಿಹಿತಾ
ಜ್ಞಾನೇಂದ್ರಿಯ ಗ್ರಹಿಕೆಗಳೆಲ್ಲ, ಉದರಭಕ್ಷಣೆಯಂತೆ ತಿನ್ನೊ ಅರ್ಥ
ಪಥಭಕ್ಷಕ ಕುದುರೆ ಅಶ್ವ, ನೀರಾವಿ ಕುಡಿವ ಸೂರ್ಯಕಿರಣ ಅಶ್ವ
ಕುಹರ ಕರ್ಣ ನಾಸಿಕ ನೇತ್ರಾಶ್ವ, ಜ್ಞಾನಭಕ್ಷಿಸೊ ಮನಕದೇ ವಿಶ್ವ!

Submitted by makara Sun, 08/04/2013 - 09:01

ಶ್ರೀಧರ್ ಸಾರ್,
ವೇದದಲ್ಲಿನ ನಿಜವ ತಿಳಿಯುವುದು ಎಷ್ಟು ಕಷ್ಟವಾದುದು ಎನ್ನುವುದನ್ನು ಬಹಳ ಸರಳವಾಗಿ ಅಶ್ವ ಪದದ ಮೂಲಕ ತಿಳಿಸಿಕೊಟ್ಟ ನಿಮ್ಮ ಗುರುಗಳಿಗೆ ಮತ್ತು ಅವರ ವಿವರಣೆಗೆ ಎಳ್ಳಷ್ಟೂ ಚ್ಯುತಿಬಾರದಂತೆ ಸುಂದರವಾಗಿ ಬರವಣಿಗೆಯಲ್ಲಿ ಮೂಡಿಸಿರುವ ನಿಮಗೂ ಅನಂತಾನಂತ ವಂದನೆಗಳು.