1 2 3 4 ಗೆಟ್ ಆನ್ ದ ಜಿಮ್ ಫ್ಲೋರ್







ಆಫೀಸಿನಿಂದ ಸಂಜೆ ಮನೆಗೆ ಹೊರಡುವ ಸಮಯ ಬಾಸ್ನಿಂದ ಕರೆ ಬಂತು ಅಂದರೆ ಓವರ್ ಟೈಮ್ ಕೆಲಸವಿದೆ ಎಂದೇ ಲೆಕ್ಕ. ಏನಾದರಾಗಲಿ, ಎಷ್ಟೇ ಕೆಲಸ ಕೊಡಲಿ, ಎಲ್ಲಾ ಮುಗಿಸಿ ಒಂಬತ್ತು ಗಂಟೆ ಮೇಲೆಯೇ ಮನೆಗೆ ಹೋಗುವುದು ಎಂದು ನಿರ್ಧಾರ ಮಾಡಿ ಬಾಸ್ ಬಳಿ ಹೋದೆನು.
"ಗಣೇಶ್, ಬಹಳ ಸಂತೋಷದ ವಿಷಯ ಕೇಳಿದೆ. ಅಪಾರ್ಟ್ಮೆಂಟ್ನಲ್ಲಿ ಜಿಮ್ ಇನಾಗರೇಶನ್ ಮಾತ್ರ ಮಾಡುವುದಲ್ಲ- ದಿನವೂ ಒಂದು ಗಂಟೆ ಜಿಮ್ ಮಾಡಿ. ನೀವು ಸ್ಲಿಮ್ ಆದರೆ, ನಿಮ್ಗೆ ವರ್ಷಕ್ಕೆರಡು ರಿವಾಲ್ವಿಂಗ್ ಚೇರ್ ಪರ್ಚೇಸ್ ಮಾಡುವ ಹಣ ನಮಲ್ಲಿ ಉಳಿಯುವುದು..ಹ್ಹ.ಹ್ಹ..ಹ್ಹಾ.."
ಈ ಬಾಸ್ಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು. ಕಸ್ಟಮರ್ಗಳು ಯಾರು ಬಂದರೂ, ನನ್ನ ಗಾತ್ರ, ಆಕಾರ ನೋಡಿ, ನನ್ನನ್ನೇ ಬಾಸ್ ಎಂದು ತಿಳಕೊಳ್ಳುವರು. ಚೆನ್ನಾಗಿ ತಿಂದು ದೇಹ ಬೆಳಸುವುದು ಬಿಟ್ಟು, ದಿನಾ ನನ್ನನ್ನು ಹಾಸ್ಯ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುವರು. ಅವರ ಊಟ ನೋಡಿದರೆ ನನ್ನ ಉಗುರಿಗೂ ಸಾಲದು. ಮಾತ್ರೆ, ಕ್ಯಾಪ್ಸೂಲ್ನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಅದಕ್ಕೇ ಅವರು ಕ್ಯಾಪ್ಸೂಲ್ ತರಹ ಇದ್ದರೆ, ಮುದ್ದೆ ತಿನ್ನುವ ನಾನು ಮುದ್ದಾಗಿದ್ದೇನೆ. :)
"ಆಯ್ತು ಸರ್, ನನ್ನಿಂದಾಗುವಷ್ಟು ಪ್ರಯತ್ನ ಪಡುವೆ." ಎಂದು ಹೇಳಿ ಹೊರಬಂದೆ. ಇದೆಲ್ಲಾ ನನ್ನ "ಪ್ರಾಣ ಹಿಂಡುತಿ"ಯ ಕೆಲಸ. ಬಾಸ್ಗೂ ಫೋನ್ ಮಾಡಿ, ನಾನು ಆಫೀಸ್ ಕೆಲಸ ಎಂದು ಹೇಳಿ, ಜಿಮ್ ತಪ್ಪಿಸಿಕೊಳ್ಳದಂತೆ ಮಾಡಿದ್ದಾಳೆ. ಇರಲಿ. ಅವಳು ಸೇರಾದರೆ, ನಾನು ಸವ್ವಾಸೇರು. ಪಾರ್ಕ್ಗೋ ಮಾಲ್ಗೋ ಹೋಗಿ, ಸುತ್ತಾಡಿ, ಟ್ರಾಫಿಕ್ನಲ್ಲಿ ಸಿಕ್ಕಿಬಿದ್ದೆ ಎಂದರಾಯಿತು, ಅಂತ ಆಲೋಚಿಸಿ, ನನ್ನ ಸ್ಕೂಟರ್ ಸ್ಟಾರ್ಟ್ ಮಾಡಿದೆ. "ಮಂತ್ರಿ ಮಾಲ್" ಬಳಿ ಇಳಿಯುತ್ತಿರುವಾಗಲೇ, "ಒನ್ ಟೂ ತ್ರೀ ಫೋರ್ ಗೆಟ್ ಆನ್ ದ ಡ್ಯಾನ್ಸ್ ಫ್ಲೋರ್" ಮೊಬೈಲ್ ರಿಂಗಾಯಿತು.ನನ್ನ "ಗ್ರಹ ಮಂತ್ರಿ"ಯದೇ ಕರೆ. ಹಿಂತಿರುಗಿ ನೋಡಿದಾಗ ನನ್ನ ಕಲೀಗ್ ಆಗತಾನೇ ನನ್ನನ್ನು ನೋಡಿದಂತೆ, ನಮಸ್ಕಾರ ಮಾಡಿ, ಬೈಕ್ ತಿರುಗಿಸಿ ಹೋದನು. ಸೇರೂ ಬೇಡ, ಸವ್ವಾನೂ ಬೇಡ, ಇನ್ನು ಮನೆಗೆ ಹೋಗುವುದೇ ಉತ್ತಮ. ಅಲ್ಲಿ ತಲೆ ಉಪಯೋಗಿಸಿ, ಜಿಮ್ ತಪ್ಪಿಸಲು ಏನಾದರೂ ದಾರಿ ಹುಡುಕಿದರಾಯಿತು, ಅಂತ ಮನೆಗೆ ಹೊರಟೆ.
ಫ್ಲಾಟ್ ಬಳಿ ಬಂದಾಗ ಯಾರೂ ಕಾಣಿಸಲಿಲ್ಲ. ಜಿಮ್ ಕಡೆ ನೋಡಿದೆ-ಅಲ್ಲೂ ಯಾರು ಇಲ್ಲ! ಬಹುಷಃ ಜಿಮ್ ಇನಾಗರೇಶನ್ ಮುಂದೆ ಹಾಕಿರಬೇಕು, ಅಂತ ಖುಶಿಯಲ್ಲಿ ನನ್ನ ಫ್ಲೋರ್ಗೆ ಹೋದರೆ.........ಎಲ್ಲಾ ನನ್ನನ್ನು ಸ್ವಾಗತಿಸಲು ಅಲ್ಲೇ ಜಮಾಯಿಸಿದ್ದರು! ಪೆಚ್ಚಾದರೂ ತೋರಿಸಿಕೊಳ್ಳದೇ, "ಸ್ವಲ್ಪ ಆಫೀಸಲ್ಲಿ ತಡವಾಯಿತು" ಎಂದೆ.
"ನಮಗೂ ಗೊತ್ತಾಯಿತು" ಎಂದು ನಕ್ಕರು. "ಐದೇ ನಿಮಿಷ, ಬಂದೆ" ಎಂದು ಮನೆ ಒಳಗೆ ಹೋದೆ. ಒಳಗೇ ಕುದಿಯುತ್ತಿರುವ ಸಿಟ್ಟನೆಲ್ಲಾ ಸೇರಿಸಿ-"ಅಲ್ವೇ.., ನಿನಗೆ ಬುದ್ಧಿ ಉಂಟೇನೇ? ಗಂಡನ ಹಿಂದೆ ಗೂಢಾಚಾರನನ್ನು ಬಿಟ್ಟಿದ್ಯಲ್ಲಾ? ನೀನು ನನ್ನ ಹೆಂಡತಿಯಾ,ಅಲ್ಲಾ ವೈರಿಯಾ?" ಎಂದೆಲ್ಲಾ ಸಿಕ್ಕಾಪಟ್ಟೆ ಬೈಯಲು ಬಾಯಿ ತೆರೆದು-" ಕಾಫಿ ಕೊಡ್ತೀಯಾ? ತಿನ್ನಲು ಏನು ಮಾಡಿದ್ದೀ" ಅಂದೆ.
"ಏನೂ ಇಲ್ಲ.. ಹೊರಗೆ ಕಾಯ್ತಾ ಇದ್ದಾರೆ, ಬೇಗ ಜಾಗಿಂಗ್ ಡ್ರೆಸ್ ಹಾಕಿ ಹೊರಡಿ" ಅಂದಳು ಜೋರಾಗಿ.
"ಮೆತ್ತಗೆ ಮಾತಾಡೇ.. ಹೊಲಿಗೆ ಎಲ್ಲಾ ಬಿಚ್ಚಿದೆಯಲ್ಲಾ..ಹೇಗೆ ಹಾಕಲಿ?" ಅಂದೆ.
"ನೀವು ಹೀಗೆ ದಪ್ಪಗಾಗುತ್ತಾ ಇದ್ದರೆ ಹರಿಯದೇ ಇದ್ದೀತಾ? ಹೊಲಿದಿಟ್ಟೀದ್ದೇನೆ. ಹಾಕ್ಕೊಂಡು ಹೋಗಿ" ಅಂದಳು.
ಜಾಗಿಂಗ್ ಡ್ರೆಸ್ ಹಾಕಿಕೊಂಡು ಕನ್ನಡಿ ಎದುರು ನಿಂತೆ. ಎಷ್ಟು ಪ್ರಯತ್ನ ಪಟ್ಟರೂ ಮುಖದಲ್ಲಿ ನಗುವೇ ಬರುತ್ತಿಲ್ಲ. ಅಳು ಮುಖದಲ್ಲಿ ಹೇಗೆ ಹೊರಹೋಗಲಿ.. " ರೀ........ನಿಮ್ಮನ್ನು ಫಿಲ್ಮ್ ಶೂಟಿಂಗ್ಗೆ ಕರಕೊಂಡು ಹೋಗುತ್ತಿಲ್ಲ. ಬೇಗ ಹೊರಡಿ"
"ಅಲ್ವೇ..ನನ್ನ ವಯಸ್ಸಿಗೆ ಈ ಜಿಮ್ ಎಲ್ಲಾ ಸರಿ ಅಲ್ಲ. ಹೇಗೂ ಬೆಳಗ್ಗೆ ಪಾರ್ಕ್ನಲ್ಲಿ ಜಾಗಿಂಗ್ ಮಾಡುತ್ತೀನಲ್ಲಾ?"
"ಪಾರ್ಕಲ್ಲಾ? ಭಟ್ರ ಹೋಟಲಲ್ಲಾ?"
"!!" "ಅದಾ..ನಾನು ಬೋಣಿ ಮಾಡಿದರೆ ವ್ಯಾಪಾರ ಚೆನ್ನಾಗಿರುತ್ತೆ ಅಂದದ್ದಕ್ಕೆ ಕೆಲವು ಸಲ ಹೋಗಿದ್ದೆ. ಭಟ್ರ ಹೋಟಲ್ ವಿಷಯ ನಿನಗ್ಯಾರೇ ಹೇಳಿದ್ದು?"
"ಅದೆಲ್ಲಾ ನಂತ್ರ ಮಾತನಾಡೋಣ, ಈಗ ಹೊರಡಿ." ಎಂದು ದರದರ ಎಳಕೊಂಡು ಬಂದು, ಬಾಗಿಲ ಬಳಿ ಪ್ರೀತಿಯಿಂದ ಕಳುಹಿಸಿದಳು.
ನಮ್ಮ ಫ್ಲಾಟ್. ಎಲ್ಲಾ ನಮ್ಮವರೇ..ಅವರವರ ಮನೆಯಲ್ಲಿ ಏನೇ ಸ್ವೀಟ್ ಮಾಡಿದರೂ ನನಗೂ ಮರೆಯದೇ ತಂದು ಕೊಡುತ್ತಾರೆ. ಜಿಮ್ ಇನಾಗರೇಶನ್ ನೀವೇ ಮಾಡಬೇಕು ಅಂದಾಗ ಖುಷಿಯಲ್ಲಿ ಒಪ್ಪಿದ್ದೆ- ಇಷ್ಟು ಬೇಗ ಜಿಮ್ ರೆಡಿಯಾಗಬಹುದು ಅಂದುಕೊಂಡಿರಲಿಲ್ಲ :(
ಜಿಮ್ ಬಳಿ ಹೋದಾಗ, ಹಿಂದಿನ ದಿನ ಇಂಟರ್ನೆಟ್ನಿಂದ ಸಂಗ್ರಹಿಸಿ ಬರೆದಿದ್ದ "ಯುವಜನರಿಗೆ ಜಿಮ್ನ ಆವಶ್ಯಕತೆ" ಭಾಷಣದ ಚೀಟಿಯನ್ನು ಕಿಸೆಯಿಂದ ತೆಗೆದೆ. ಚೀಟಿಯನ್ನು ನನ್ನ ಕೈಯಿಂದ ಎಳಕೊಂಡು, "ಭಾಷಣ ನೋಟಿಸ್ ಬೋರ್ಡ್ನಲ್ಲಿ ಹಾಕುತ್ತೇವೆ" ಎಂದು- ನನ್ನನ್ನು ಒಂದು ಮೆಷಿನ್ ಎದುರು ನಿಲ್ಲಿಸಿದರು. ಅದೋ ಗಲ್ಲಿಗೇರಿಸುವ ಯಂತ್ರದಂತೇ ಇತ್ತು! ಎರಡು ಧಾಂಡಿಗರು ನನ್ನ ಅಕ್ಕಪಕ್ಕ ನಿಂತು, ನಾನು ಶರ್ಟ್ನಲ್ಲೆ ಬೆವರು ಒರೆಸುವುದನ್ನು ನೋಡಿ, "ಹೆದರಬೇಡಿ ಅಂಕ್ಲ್, ನಾವು ಹೇಳಿಕೊಡುತ್ತೇವೆ. ಎಲ್ಲಾ ಮೆಷಿನ್ಗಳಲ್ಲಿ ಐದೈದು ನಿಮಿಷ ಮಾಡಿದರಾಯಿತು" ಎಂದರು."ಹೇ..ಭಯವೇನು ಇಲ್ಲ. ಐದೇನು ಹದಿನೈದು ನಿಮಿಷ ಮಾಡುವೆ!" ಪಾಪಿ ನಾಲಗೆ ನಾನು ಯೋಚಿಸುವ ಮೊದಲೇ ಹೇಳಿತು. ನಂತರ ಸುತ್ತಲೂ ನೋಡಿದೆ..ವಿವಿಧ ರೀತಿಯ ಚಕ್ರಗಳು..ನಿಜವಾಗಿ "ಚಕ್ರವ್ಯೂಹ"ದಲ್ಲಿ ಸಿಕ್ಕಿಬಿದ್ದಿದ್ದೆ. ಒಂದೊಂದೇ ಯಂತ್ರ ಹತ್ತಿದ ಮೇಲೆ ಗೊತ್ತಾಯಿತು, ಹದಿನೈದು ಬಿಡಿ, ಎರಡು ನಿಮಿಷನೇ ಎಷ್ಟು ದೂರದಲ್ಲಿದೆ ಎಂದು! ಬೆವರು ಧಂಡಿಯಾಗಿ ಹರಿಯುತ್ತಿತ್ತು. ಕೈ ಕಾಲು ನನ್ನ ಸ್ವಾಧೀನದಲ್ಲೇ ಇಲ್ಲಾಆ.., ಮುಖ ಒರೆಸಲು ಟವಲ್ ತಂದುಕೊಟ್ಟರೆ..ಕೈಯಿಂದ ಎತ್ತಲಾಗಲಿಲ್ಲ.........
ದಿನವೂ ಇದೇ ಕತೆ. ಮಧ್ಯರಾತ್ರಿಯಲ್ಲಿ "ಸಂಪದ" ಹಾಯಾಗಿ ಸುತ್ತುತ್ತಿದ್ದವನಿಗೆ, ಈಗ ಎಂಟು ಗಂಟೆಗೇ ಕಣ್ಣುರೆಪ್ಪೆ ತೆರೆಯಲೂ ಆಗದಷ್ಟು ನಿದ್ರೆ.
ವಾರದ ನಂತರ ಎಲ್ಲರೂ ಸೇರಿದರು. ವೈಯಿಂಗ್ ಸ್ಕೇಲ್ ತರಿಸಿ, ನನ್ನನ್ನು ಅದರ ಮೇಲೆ ನಿಲ್ಲಿಸಿ ತೂಕ ನೋಡಿದರು..
"ಎಷ್ಟು ಕೆ.ಜಿ. ಕಮ್ಮಿಯಾಯಿತು?" ಅಂದೆ.
"೩ ಕೆ.ಜಿ.!" ಮಿತ್ರರೆಲ್ಲಾ ಸೇರಿ ತಲೆಕೆರೆದುಕೊಂಡು ಹೇಳಿದರು-"ಜಾಸ್ತಿಯಾಗಿದೆ!!"
ನಾನೇ ಸಮಾಧಾನಪಡಿಸಿದೆ-"ಮೊದಲು fat ಮಾತ್ರ ಜಾಸ್ತಿಯಾಗುತ್ತಿತ್ತು. ಈಗ ಮಸ್ಲ್ ವೈಟೂ ಜಾಸ್ತಿಯಾಯಿತು" ಮುಗುಳ್ನಕ್ಕು ಕಡೆಗಣ್ಣಲಿ ಹೆಂಡತಿಯತ್ತ ನೋಡಿದೆ.
Comments
ಉ: 1 2 3 4 ಗೆಟ್ ಆನ್ ದ ಜಿಮ್ ಫ್ಲೋರ್
ವಿಘ್ನ ವಿನಾಶಕೆ ಗಣೇಶನ ಬೇಡೆ ಪೂಜೆ, ಯಗ್ನ
ಮಾಡಿಸಲ್ಹೊರಟರೆ ನೋಡಿಸಿ ಒಳ್ಳೆ ತಿಥಿ, ಲಗ್ನ
ಜನರೆಳೆತರೆ ಕೋರಿ, ಜಿಮ್ಮನುದ್ದರಿಸೊ ಗಣೇಶ
ಜಿಮ್ಮಿಗು ಚಳ್ಳೆ ಹಣ್ಣು ತಿನಿಸುವ ಭಾರಿ ಮೋಸ!
'ನಿಮ್ಮವರಿಗು' ಜಿಮ್ಮವರಿಗೂ ಇನ್ನೆಲ್ಲಿಯ ನಂಟು
ಉಂಡಾಡಿಗುಂಡರಾಗಿ ಸುತ್ತೆ ಸಿಕ್ಕಿತಲ್ಲಾ ಟಿಕೆಟ್ಟು
ಹೋಗಲಿಬಿಡಿ ಜಿಮ್ಮಿಗೆ ಇನ್ನು ಕೊಡಬೇಡಿ ತ್ರಾಸ
ಸಾಕು ಹಣ್ಣಂಫಲ ಪೂರಿ ಉಪ್ಪಿಟ್ಟಲೆ ಉಪವಾಸ :-)
ಉ: 1 2 3 4 ಗೆಟ್ ಆನ್ ದ ಜಿಮ್ ಫ್ಲೋರ್
ಓದುತ್ತ ಥಟ್ಟನೆ ನೆನಪಿಗೆ ಬಂದಿದ್ದು - 'ಜಿಮ್ಮಿ'ಗಲ್ಲು ಚಿತ್ರ ...!!ಶೀರ್ಷಿಕೆ ಮತ್ತು ಹಾಡು .. ತುತ್ತು ..... ಕೆ ..!!
ಹಿಂದೊಮ್ಮೆ ನೀವ್ ಬರೆದ ನಿಮ್ಮದೇ ಒಂದು ಬರಹದಲ್ಲಿನ 'ಜಿಮ್ಮಿಗೆ ಹೋಗಿ ಸಿಕ್ಸ್ ಪ್ಯಾಕ್ ಹಂದಿ' ಪದ ಪ್ರಯೋಗ ನೆನಪಿಗೆ ಬಂತು ..!!
ಕೊನೆಯಲ್ಲಿ ಭಾರ ಎತ್ತುವ ಆ ಸಲಕರಣೆ ಘಾಟ್ ಸೆಕ್ಚನ್ ರೋಡ್ ತರಹ ಆಗಿದ್ದೇಕೆ???
ಅಪಾರ್ಟ್ಮೆಂಟ್ಗಳಲ್ಲಿ ಒಳ್ಳೊಳ್ಳೆ ಜಿಮ್ ಇರುವವು ..
ಅಲ್ಲ್ಲಲ್ಲಿ ಕೆಲ ಪದ ಪ್ರಯೋಗಗಳು ಗಮನ ಸೆಳೆದವು ಮಜಾ ನೀಡಿದವು ..
ಶುಭವಾಗಲಿ
\।/
ಉ: 1 2 3 4 ಗೆಟ್ ಆನ್ ದ ಜಿಮ್ ಫ್ಲೋರ್
ಗಣೇಶ್,ನಿಮ್ಮ ಅನುಭವ ಚೆನ್ನಾಗಿದೆ.
ಸಾಮಾನ್ಯವಾಗಿ,
ಬಟ್ಟೆ ಒಗೆಯಲು ವಾಷಿಂಗ್ ಮಷಿನ್.
ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್.
ಮಹಡಿ ಹತ್ತಲು ಲಿಫ್ಟ್(ಮೊದಲ ಮಹಡಿ ಕೂಡ! )
ಪಕ್ಕದ ಬೀದಿ ಕಿರಾಣಿ ಅಂಗಡಿಗೆ ಹೋಗಲು ಸ್ಕೂಟಿ.
ಕಾರು ತೊಳೆಯಲು ಗ್ಯಾರೇಜು.
ಅಫೀಸಿನಲ್ಲಿ ಅನತಿ ದೂರದಲ್ಲಿ ಕುಳಿತಿರುವ ಸಹೋದ್ಯೋಗಿಯ ಜೊತೆ ಮಾತಾಡಲು ಎಕ್ಸ್ಟೆನ್ಷನ್ ಫೋನ್.
ಕೊನೆಗೆ ವ್ಯಾಯಾಮಕ್ಕಾಗಿ ಮಲ್ಟಿ ಸ್ಪೆಷಾಲಿಟಿ ಜಿಮ್ :-)