20K ಒದೆತಗಳ ಸಂ-ಕ್ರಾಂತಿ
ಕನ್ನಡ ಕುಲ ಕೋಟಿಗೆ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಾಂತಿಯ ಶುಭಾಶಯಗಳು. (bogaleragale.blogspot.com)
ಓದುಗರ ಪ್ರೀತಿಯ ಒದೆತಗಳಿಂದಾಗಿ 2006 ಏಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಬೊಗಳೆಯು ಆಗಸ್ಟ್ ಅಂತ್ಯದ ವೇಳೆಗೆ 10 ಸಾವಿರ ಒದೆತಗಳನ್ನು ತಾಳಿಕೊಂಡಿದ್ದು, ಇದೀಗ ಬೊಗಳೆ ರಗಳೆ ಬ್ಯುರೋದ ಅರಿವಿಗೆ ಬಾರದೆ ನಮ್ಮ (ಚಪಾತಿ) ಹಿಟ್ಟಿನ ಕೌಂಟರ್ 20K ದಾಟಿಬಿಟ್ಟಿದೆ. ಇದೇ ವೇಳೆ ಲೇಖನಗಳ ಸಂಖ್ಯೆಯೂ ದ್ವಿಶತಕ ದಾಟಿದೆ.
ಇದಕ್ಕೆ ನಿಜವಾಗಿಯೂ ಕನ್ನಡ ನೆಟ್ಟೋದುಗರ ಮತ್ತು ಅನಿವಾರ್ಯ ಕಾರಣಗಳಿಗಾಗಿ "ಕನ್ನಡನಾಡು ಬಿಟ್ಟೋಡುಗರು" ಆಗಿರುವವರ ಸವಿಮನಸಿನ ನೆಟ್ಟೊದೆತಗಳೇ ಕಾರಣ.
ಆದರೆ ಕ್ರಿಸ್ಮಸ್ ರಜೆಯಿಂದಾರಭ್ಯ ಹೊಸ ವರ್ಷ ಬಂದು ಸಂಕ್ರಾಂತಿ ಬಂದೇಬಿಟ್ಟಿದ್ದರೂ, ಇತ್ತೀಚೆಗೆ ಸರಿಯಾಗಿ ಕಚೇರಿಗೆ ಹಾಜರಾಗದೆ, ಮೈಗಳ್ಳನಂತಾಗಿಬಿಟ್ಟಿರುವ ನಮ್ಮ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರ ಸಮೂಹದಲ್ಲೊಬ್ಬನಾಗಿ ತೂರಿಕೊಂಡಿರುವ ಅಸತ್ಯಾನ್ವೇಷಿಯು ಬೊಗಳೆ ಬಿಟ್ಟು ರಗಳೆ ಮಾಡುತ್ತಿದ್ದಾನೆ ಎಂದು ಓದುಗರು ದೂರಿರುವ ಹಿನ್ನೆಲೆಯಲ್ಲಿ ಅಸತ್ಯಾನ್ವೇಷಿಯನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಆತ ಬ್ಯುರೋಗೆ ಬೆದರಿಕೆ ಹಾಕಿದ್ದಾನೆ.
ಯಾರು ಉಗುಳಲಿ ಎಂದು
ನಾನು ಬೊಗಳುವುದಿಲ್ಲ
(ಸಂ-ಪಾದ-ಕರು ಸಂ-ಬಳ ಮಾತ್ರ ಕೊಡುವುದರಿಂದ)
ಬೊಗಳುವುದು ಅನಿವಾರ್ಯ ಕರ್ಮ ನನಗೆ !!
ಎಂದು ಆತ ಕವಿವರ್ಯರ ಕ್ಷಮೆ ಕೋರಿ ಸೂಚ್ಯವಾಗಿ ಬೆದರಿಕೆಯೊಡ್ಡಿರುವುದರಿಂದ ಅವನ ವೇತನವನ್ನು ಒಂದು ಪೈಸೆಗೆ ಏರಿಸಲಾಗಿದೆ ಎಂದು ತಿಳಿಸಲು ಬ್ಯುರೋ ವಿಷಾದಿಸುತ್ತದೆ.
ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ (ಸಭ್ಯತೆಯ ಮಿತಿಯಲ್ಲಿ) ಉಗುಳಬಹುದು ಎಂಬ ಅಲಿಖಿತ ನಿಯಮ ಅಳವಡಿಸಲಾಗಿದ್ದರೂ, ಇದುವರೆಗಿನ ಉಗುಳುವಿಕೆ ಅಥವಾ ಬೊಗಳುವಿಕೆಯಲ್ಲಿ ಯಾವುದು ಇಷ್ಟವಾಗಲಿಲ್ಲ ಎಂಬುದನ್ನು ನೆಟ್ಟೋದುಗರು ನಮ್ಮ ಬ್ಯುರೋದಲ್ಲಿ ಅಳವಡಿಸಲಾಗಿರುವ ಪ್ರಥಮಚಿಕಿತ್ಸೆ ಪೆಟ್ಟಿಗೆ (comment box)ಯಲ್ಲಿ ಚೀಟಿ ಬರೆದು ಹಾಕಲು ಕೋರಲಾಗಿದೆ. -ಸಂ