BMTC - ಬೆಂಗಳೂರು "ಮಹಾರಾಜರ" ಸಾರಿಗೆ ನಿಗಮ

BMTC - ಬೆಂಗಳೂರು "ಮಹಾರಾಜರ" ಸಾರಿಗೆ ನಿಗಮ

ಒಂದು ಹಾಸ್ಯ ಪ್ರಸಂಗ ಗೊತ್ತುಂಟೆ ಸ್ವಾಮೀ ನಿಮಗೆ? ೫೦ ಮಂದಿಯನ್ನು ಹೊತ್ತು ಸಾಗಿಸ ಬಲ್ಲ ಬಸ್ಸೊಂದಿದೆ. ಇಂಧನದೆ ಬೆಲೆ ಲೀಟರಿಗೆ ೧ ರೂ ಏರಿದರೆ, ಈ ಬಸ್ಸಿನಲ್ಲಿ ಚೀಟಿಯ ಬೆಲೆ ತಲೆಗೆ ೧ ರೂಯಂತೆ ಏರುತ್ತದೆ.  ಇನ್ನೂ ಕೇಳಿ. ಕಿ.ಮಿ ಗೆ ತಲೆಗೆ ೧ ರೂ ಕೇಳುತ್ತಾರೆ. ಇನ್ನೂ ಕೇಳಿ. ಇಂಧನದ ಬೆಲೆ ಇಳಿದರೆ ಈ ಬಸ್ಸಿನ ಚೀಟಿಯ ಬೆಲೆ ಇಳಿಯುವುದಿಲ್ಲ. ನಿರ್ವಾಹಕನಿಗೆ ಚಿಲ್ಲರೆಯ ತೊಂದರೆಯಾಗುತ್ತದಂತೆ. ಇದು ಯಾವ ಲೋಕದ ಗಣಿತ ಶಾಸ್ತ್ರ ಸ್ವಾಮೀ. ಹೇಗೆ ತರ್ಕ ಮಾಡುವುದು ಇದನ್ನು. ತರ್ಕಶಾಸ್ತ್ರವೇ ಬಿದ್ದು ಹೋಗಿದೆ ಇಲ್ಲಿ. ಏಕೆ ಬಿದ್ದಿದೆ ಅಂದರೆ ಇದು ನಿರ್ಣಯವಾಗುವುದು ಉನ್ನತ ಅಧಿಕಾರಿ, ಮಂತ್ರಿಗಳ ಸಭೆಯಲ್ಲಿ. ಇದು ಹಾಸ್ಯ. ಇದನ್ನು ಇಲ್ಲಿಗೆ ಬಿಡಿ. ಇನ್ನು ವಾಸ್ತವಿಕತೆಗೆ ಬರುವ.

ನಾನು ಇದು ವರೆಗೂ ವಿವರಿಸಿದ್ದು ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬೆ.ಮ.ಸಾ.ಸಂ) ಬಸ್ಸಿನ ದರ. ಇದೇ ಬೆಲೆ ಏರಿಕೆ ಬೇರೆ ರಾಜ್ಯಗಳಲ್ಲಿ ಆಗಿದ್ದಿದ್ದರೆ ಬಸ್ಸಿನೊಡನೆ ಆ ಅಧಿಕಾರಿ ಮಂತ್ರಿಗಳನ್ನು ಸುಡುತ್ತಿದ್ದರು. ಮಾದಲಿ ಬಿಡಿ. ನಾವು ಸೌಜನ್ಯರು. ಎಲ್ಲದರಲ್ಲೂ ಸೌಜನ್ಯ ತೋರಿಸುತ್ತೇವೆ. ಕಷ್ಟ ನಮ್ಮ ಮನೆಯ ಬಾಗಿಲಿಗೆ ಬರುವ ತನಕ ಅದು ನಮ್ಮ ಕಷ್ಟವಲ್ಲ ಎಂದು ಭಾವಿಸುವ ಜನರು ನಾವು.

ಬಹಳಷ್ಟು ಐ.ಟಿ ಜನರಿಗೆ ಈ ಬೆಲೆಯೇರಿಕೆ ಕಿಂಚಿತ್ತೂ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರುಗಳು ಬಸ್ಸಿನಲ್ಲೇ ಓಡಾಡುವುದಿಲ್ಲ. ಇದು ಪರಿಣಾಮ  ಬೀರುತ್ತಿರುವುದು ದಿನಗೂಲಿ ಜನರ ಮೇಲೆ, ನಗರದ ಸುತ್ತ ಇರುವ ಗ್ರಾಮೀಣ ಜನರ ಮೇಲೆ ಹಾಗು ಮಧ್ಯಮ ದರ್ಜೆಯ ಜನರ ಮೇಲೆ. ಬರುವ ೨೦೦೦ರೂ ಸಂಭಳದಲ್ಲಿ ಕನಿಷ್ಟ ೫೦೦ರೂ ಬಸ್ಸಿಗೆ ಬೇಕು. ಆಲೋಚನೆ ಮಾಡಿ ಸ್ವಾಮೀ. ತರಕಾರಿ, ಹಣ್ಣು, ದಿನಸಿ ಗಳ ಬೆಲೆ ಗಗನಕ್ಕೇರುತ್ತಿದೆ. ಹಣದುಬ್ಬರ ಈಗ ೭%. ಜೀವನ ನಡೆಸುವುದು ಸುಲಭವೇ? ಇದಕ್ಕೆ ನಮ್ಮ ತರ್ಕಶಾಸ್ತ್ರದಲ್ಲಿ "Good Inflation predicts Healthy Economy" ಅನ್ನುತ್ತಾರೆ. ಎಂಥಾ ವಿಪರ್ಯಾಸ ಕಣ್ರಿ.

ವಿಷಯಕ್ಕೆ ಮರಳಿ ಬರುವ. ಈ ಪಟ್ಟಿ ನೋಡಿ, ಗಮನಿಸಿ್, ಎಚ್ಚೆತ್ತುಕೊಳ್ಳಿ. (ಶಿವಮೊಗ್ಗೆ, ಚಿಕ್ಕಮಗಳೂರು, ದಾವಣಗೆರೆ, ಚೆನ್ನೈ ನಗರಗಳ ಬಸ್ಸಿನ ದರ ಇದೆ)

ದೂರ       ಬೆಂಗಳೂರಲ್ಲಿ      ಬೇರೆ ನಗರಗಳಲ್ಲಿ

೩ ಕಿ.ಮೀ        ರೂ ೫            ರೂ ೨ - ರೂ ೩

೬ ಕಿ.ಮೀ        ರೂ ೭            ರೂ ೩ - ರೂ ೫

೯ ಕಿ.ಮೀ        ರೂ ೮            ರೂ ೫ - ರೂ೭

ಪುನಹ ಹೇಳಬಯಸುತ್ತೇನೆ. ೫೦ ಮಂದಿ ಹೊರಬಲ್ಲ ಬಸ್ಸಿನಲ್ಲಿ ಕಿ.ಮೀ ೧ ರೂ ದರ ನಿಗದಿ ಮಾಡುವ ಆ ಸಭೆಯ ಸದಸ್ಯರಿಗೆಲ್ಲಾ ಬುದ್ಧಿಭ್ರಮಣೆಯಾಗಿರಬೇಕು ಕಣ್ರಿ. ನಾವು ಕಟ್ಟುವ ತೆರಿಗೆಯಲ್ಲಿ ಅವರೆಲ್ಲಾ ಕಾರು ಪಡೆದು ಓಡಾಡುತ್ತಾರೆ. ಅದಕ್ಕಾದರೂ ನೀಯತ್ತು ಬೇಡವೇ ಭೋಳಿ ಮಕ್ಕಳಿಗೆ?

ನಮ್ಮ ಮಹಾನಗರಿಯಲ್ಲಿ ಜನರಲ್ಲಿಲ್ಲದ ಒಗ್ಗಟ್ಟೇ ಇದಕ್ಕೆಲ್ಲಾ ಕಾರಣ. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಎಲ್ಲರೂ ಸೇರಿ ಒಂದು ಶಾಂತಿಯುತವಾದ ಪ್ರತಿಭಟನೆಯನ್ನೋ, ಅಥವಾ ಸರ್ಕಾರಕ್ಕೆ ಒಂದು ಮನವಿ ಪತ್ರವನ್ನೋ ಸಿದ್ಧಮಾಡಬೇಕು. ಈ ಮಾಹಿತಿ ತಲುಪಿಸಿ. ನಿಮ್ಮ ಸ್ನೇಹಿತರನ್ನೆಲ್ಲ ಸೇರಿಸಿ.

ಬೆ.ಮ.ಸಾ.ಸಂ ಮಹಾಜನರ ಸಾರಿಗೆ. ಮಹಾರಾಜರ ಸಾರಿಗೆ ಆಗಲು ಬಿಡಬಾರದು.

ಇಂತೀ,

ಅನುಪ್ ಮಲೆನಾದು

Rating
No votes yet

Comments