DLI ಪುಸ್ತಕನಿಧಿ-ಮಹಾಭಾರತದ ಯಕ್ಷಪ್ರಶ್ನೆಯ ರಹಸ್ಯ , ಭಾರತದ ಸಮಸ್ಯೆಗಳು- ಶಂ.ಬಾ. ಜೋಷಿಯವರ ಪುಸ್ತಕ

DLI ಪುಸ್ತಕನಿಧಿ-ಮಹಾಭಾರತದ ಯಕ್ಷಪ್ರಶ್ನೆಯ ರಹಸ್ಯ , ಭಾರತದ ಸಮಸ್ಯೆಗಳು- ಶಂ.ಬಾ. ಜೋಷಿಯವರ ಪುಸ್ತಕ

ಚಿತ್ರ

ನಿಮಗೆ ಮಹಾಭಾರತದ ಯಕ್ಷಪ್ರಶ್ನೆಯ ಕಥಾಪ್ರಸಂಗವು ಗೊತ್ತಿರಬಹುದು. ಈ ಕಥೆಯ ವಿಶೇಷವೇನು ? ಅದರ  ಅರ್ಥವೇನು? ಅದು ಭಾರತದ ಸಮಾಜಕ್ಕೆ  ಹೇಗೆ ಪ್ರಸ್ತುತ ಎಂಬುದನ್ನು  ಕನ್ನಡದ ಮಹಾ ಚಿಂತಕ ಸಂಶೋಧಕ ಶಂಬಾರವರು  ಕಂಡುಕೊಂಡು ಭಾರತದ ಸ್ವಾತಂತ್ರ್ಯದ ಹೊತ್ತಿಗಿನ ಸಮಸ್ಯೆಗಳ ಹಿನ್ನೆಲೆಯಲ್ಲಿ  ಚರ್ಚಿಸಿದ್ದಾರೆ .  ಈ ಭಾಗವು  ಇಂದಿಗೂ, ಅಲ್ಲಲ್ಲ, ಎಂದಿಗೂ  ವಿಚಾರಮಾಡಲು ಯೋಗ್ಯವಾಗಿದೆ.

ಈ ಸಂಗತಿಯನ್ನು ಇಲ್ಲಿ ನಿಮಗಾಗಿ ಸಂಗ್ರಹಿಸಿದ್ದೇನೆ.

'ಶ್ರೀ ವ್ಯಾಸರು ಮಹಾಭಾರತದ ನಿಮಿತ್ತದಿಂದ ಮಾನವನ ಸನಾತನ ಇತಿಹಾಸವನ್ನು ಬರೆದಿರುವರು' ಎಂದು ಮಹಾತ್ಮಾ ಗಾಂಧಿಯವರು  ಒಂದೆಡೆ ಹೇಳಿದ್ದಾರೆ.

ಪಾಂಡವರು ವನವಾಸದಲ್ಲಿ ಇದ್ದಾಗ ಒಬ್ಬ ಬ್ರಾಹ್ಮಣನ ಅರಣಿ( ಅಂದರೆ  ಬಹುಶಃ ಬೆಂಕಿಯನ್ನು ಹೊತ್ತಿಸುವ ಚಕಮಕಿ ಕಲ್ಲುಗಳು ಇರಬಹುದು )  ಗಳನ್ನು ಒಂದು ಕೃಷ್ಣಸಾರಮೃಗವು ಕದ್ದುಕೊಂಡು ಓಡಿಹೋಯಿತು. ಬ್ರಾಹ್ಮಣನ ಅಗ್ನಿಹೋತ್ರವು ಎಂದಿಗೂ ಲೋಪವಾಗಬಾರದು. ಅರಣಿಗಳೇ ಹೋದುದರಿಂದ ಅತನ್ನ ಅಗ್ನಿಸೇವೆಯೇ ನಿಂತುಹೋಗುವ ಹೊತ್ತು ಬಂದಿದೆ. ಏನುಮಾಡಲಿ ಎಂದು ಅವನು ಧರ್ಮರಾಯನ ಮೊರೆಹೋದನು. ಕ್ಷಾತ್ರಧರ್ಮಕ್ಕನುಸಾರವಾಗಿ  ಧರ್ಮನು ಬ್ರಾಹ್ಮಣನ ಧರ್ಮಕಾರ್ಯಕ್ಕೆ ನೆರವಾಗುವುದು ತನ್ನ ಕರ್ತವ್ಯವೆಂದು ಬಗೆದು ತನ್ನ  ತಮ್ಮಂದಿರೊಡನೆ  ಅರಣಿಯನ್ನು ಹುಡುಕಿಕೊಂಡು ಬರಲು ಹೊರಟನು.

ಅದಕ್ಕಾಗಿ ಅಡವಿಯಲ್ಲಿ ಅಲೆಯುತ್ತಿದ್ದಾಗ ಅವರಿಗೆ ನೀರಡಿಕೆಯಾಯ್ತು. ಧರ್ಮರಾಜನು ಸಮೀಪದಲ್ಲಿ ಎಲ್ಲಾದರೂ ನೀರು ಇದೆಯೇ ಎಂಬುದನ್ನು ಮರವನ್ನೇರಿ ನೋಡಲು ನಕುಲನಿಗೆ ಹೇಳಿದನು. ಹತ್ತಿರದಲ್ಲಿಯೇ ಇರುವ ಒಂದು ಮರವನ್ನು ಏರಿ ಸುತ್ತಲೂ ನೋಡಿದಾಗ ಹತ್ತಿರದಲ್ಲೇ ಒಂದು ಸರೋವರವನ್ನು ಕಂಡನು. ಅಣ್ಣನ ಅಪ್ಪಣೆಯಂತೆ ನೀರು ತರಲು ಅಲ್ಲಿಗೆ ಹೋದನು.

ತಾನೂ ನೀರುಕುಡಿದು ಅಣ್ಣಂದಿರಿಗೂ ಒಯ್ಯಬೇಕೆಂದು ಕೊಳದೊಳಗೆ ಬಾಗಿದನು. ಅಷ್ಟರಲ್ಲಿ  ಒಂದು ಬಾನುಲಿಯು ( ಅಂದರೆ ಆಕಾಶವಾಣಿ - ಇದು ಕನ್ನಡದ ಶಬ್ದ. ರೇಡಿಯೋ ಗೂ ಇವೇ ಶಬ್ದಗಳನ್ನು ಬಳಸುತ್ತಾರೆ. ಅಂದ ಹಾಗೆ 'ಅಕಾಶವಾಣಿ' ಶಬ್ದವನ್ನು ರೇಡಿಯೋಗೆ ಕೊಟ್ಟವರು ಯಾರು ನಿಮಗೆ  ಗೊತ್ತೇ ? ಮೈಸೂರಿನವರು !  - ಇರಲಿ ಕತೆಗೆ ಮರಳೋಣ)   ಕೇಳಿಸಿತು -' ತಮ್ಮಾ , ಈ ಜಲಾಶಯದ ಮೇಲಿನ ಒಡೆತನವು ನನ್ನದು , ನನ್ನ ಒಪ್ಪಿಗೆ ಇಲ್ಲದೆ ಇಲ್ಲಿ ಯಾರೂ ನೀರು ಕುಡಿಯಲಾಗದು.  ನಿನಗೆ ನೀರು ಬೇಕಾಗಿದ್ದರೆ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು' . ನಕುಲನು ಅದನ್ನು ಲೆಕ್ಕಿಸದೆ ನೀರು ಮೊಗೆಯಹೋದನು. ಆ ಗಳಿಗೆಯಲ್ಲಿ ( ತಕ್ಷಣ! ) ಅರಿವು ಹಾರಿ ನೆಲಕ್ಕುರುಳಿದನು.

ತಮ್ಮನು ಇನ್ನೂ ಬಾರದುದನ್ನು ನೋಡಿ ಧರ್ಮನು ಸಹದೇವನನು ಅಲ್ಲಿಗೆ ಕಳಿಸಿದನು. ಅವನು ಸಹದೇವನು ಅಲ್ಲಿ ಬಿದ್ದುದನ್ನು ನೋಡಿದನು. ಅವನಿಗೇ ಅದೇ ಮಾತು ಕೇಳಿಸಿದವು. ನೀರನ್ನು ದೊರಕಿಸುವ ಅವಸರದಲ್ಲಿ ಸಹದೇವನು ಅದನ್ನು ಲೆಕ್ಕಿಸಲಿಲ್ಲ . ನೀರು ಗಂಟಲಿಗೆ ಇಳಿವಷ್ಟರಲ್ಲಿ ಅವನೂ ಮೂರ್ಛಿತನಾಗಿ ಬಿದ್ದನು.

ಮುಂದೆ ಅರ್ಜುನನ ಸರದಿ. ತಾನು ಲೋಕೈಕವೀರನೆಂಬ ಹೆಮ್ಮೆ ಅವನಿಗೆ. ಮೊದಲು ನೀರು ಕುಡಿದು ನಂತರ ತಮ್ಮಂದಿರನ್ನು ಕೊಂದವರನ್ನು ನೋಡಿಕೊಳ್ಳುವೆನು ಎಂದು ನೀರು ಕುಡಿಯಹೋದನು. ಅವನಿಗೂ ಆ ಮಾತುಗಳು ಕೇಳಿಸಿದವು.  ಅರ್ಜುನನಿಗೆ ಸಿಟ್ಟು ಬಂದು ಕೂಡಲೆ ಎಲ್ಲ ದಿಕ್ಕಿಗೂ ಬಾಣಗಳ ಮಳೆಗರೆದನು. ಶಬ್ದವೇಧಿ ವಿದ್ಯೆಯನ್ನು ಪ್ರಯೋಗಿಸಲು ಪ್ರಯತ್ನಿಸಿದನು!  ಮತ್ತೆ ಕೇಳಿಸಿದ ಎಚ್ಚರಿಕೆಯ ನುಡಿಗಳನ್ನು ಲೆಕ್ಕಿಸದೆ ನೀರು ಕುಡಿಯಹೋದನು , ಅವನಿಗೂ ಅದೇ ಗತಿ ಆಯಿತು.

ಆಮೇಲೆ ಭೀಮನು , ಅವನದೂ ಅದೇ ಗತಿ.

ಕೊನೆಗೆ ಧರ್ಮನೇ ಬಂದನು. ತಮ್ಮಂದಿರು ಅರಿವುಗೆಟ್ಟು ಹೆಣಗಳಂತೆ ಬಿದ್ದುಕೊಂಡಿದ್ದರು. ಮೊದಲು ನೀರುಕುಡಿಯಬಯಸಿ ಆ ಸುಂದರ ಕೊಳದ ಬಳಿಗೆ ಹೋದನು. ಮತ್ತೆ ಆ ಸೊಲ್ಲು! ' ನನ್ನ ಪ್ರಶ್ನೆಗಳಿಗೆ  ಮಾರುಗೊಡದೆ ( 'ಉತ್ತರಿಸದೆ'  ಯ ಕನ್ನಡರೂಪ!) ನೀರು ಕುಡಿದವರು ಬದುಕಲಾರರು. ನೀನೂ ಒತ್ತಾಯದಿಂದ ನೀರು ಕುಡಿಯಹೋದರೆ ನಿನ್ನ ತಮ್ಮಂದಿರ ಸ್ಥಿತಿಯೇ ನಿನಗೂ ಬಂದೀತು. ' ಎಂಬ ಅಶರೀರವಾಣಿ ಕೇಳಿಸಿತು.

ಧರ್ಮನು ಪ್ರತಿಯಾಗಿ ಪ್ರಶ್ನಿಸಿದನು. ' ಹೇ ಅದೃಶ್ಯ ಶಕ್ತಿಯೇ!  ನೀನಾರು ? ನೀನಾವುದಾದರೂ  ದೇವಾಧಿದೇವತೆಯಾಗಿರಬೇಕು. ಅಲ್ಲದೆ ಇದ್ದರೆ ನನ್ನ ತಮ್ಮಂದಿರನ್ನು ಈ ಪರಿಯಾಗಿ ನೆಲಕ್ಕುರುಳಿಸುವ ಆರ್ಪು ಆವನಿಗೂ ಇಲ್ಲ . ನೀನಾರೆಂಬುದು ನನಗೆ ತಿಳಿಯಬಹುದೇ ? ( May I know who I am talking to? )'

(ಹುಡುಕು ಪದ: ಆರ್ಪು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

ಆರ್ಪು ನಾಮಪದ

(ದೇ) ೧ ಸಾಮರ್ಥ್ಯ, ಪರಾಕ್ರಮ ೨ ತೀವ್ರತೆ, ರಭಸ ೩ ಗಟ್ಟಿಯಾದ ಕೂಗು, ಗರ್ಜನೆ, ಆರ್ಭಟ)

ಧರ್ಮನ ಎದುರು  ಕೊಳದಲ್ಲಿ ಒಂದು ಬಕಪಕ್ಷಿಯು ಕಾಣಿಸಿಕೊಂಡಿತು.   ಆ ಸರೋವರದ ತೀರದಲ್ಲಿ ಶೈವಾಲ ಮತ್ತು ಮೀನಗಳನ್ನು ತಿಂದು ಬದುಕುವ ಬಕನು ತಾನು ಎಂಬ ಉತ್ತರವು ಬಂದಿತು. ಧರ್ಮನು ಮರಳಿ ನುಡಿದನು. ನೀನು ಕೇವಲ ಬಕನಲ್ಲ, ಮತ್ತಾರಾದರೂ ಒಂದು ಮಹಾಶಕ್ತಿಯಾಗಿರಲೇಬೇಕು. ಪ್ರತಿಯಾಗಿ ಒಂದು ಸೊಲ್ಲು ಕೇಳಿಬಂದಿತು. - 'ಇಕೊ! ನಾನೊಬ್ಬ ಯಕ್ಷ , ಈ ಕೊಳದ ಒಡೆಯ.' . ಧ್ವನಿ ಬಂದತ್ತ ಧರ್ಮನು ಹೊರಳಿದನು. ಅಲ್ಲಿ ಕೊಳದ ತಡಿಗೆ ಆತುಕೊಂಡ  ಒಂದು ಪರ್ವತಪ್ರಾಯವಾದ ಒಂದು ಭವ್ಯ ಮೂರ್ತಿ ಕಾಣಿಸಿತು. ತಾಲವೃಕ್ಷದಂತೆ ಎತ್ತರ ಶರೀರ, ಭಯಾನಕ ನೇತ್ರಗಳು, ಅಗ್ನಿಸೂರ್ಯನಂತೆ ಅಂಗಕಾಂತಿ, ಮೇಘಗಂಭೀರ ಧ್ವನಿ. ' ನನ್ನ ಪ್ರಶ್ನೆಗಳನ್ನು ಬಿಡಿಸುವಿಯಾದರೆ ನೀರು ಕುಡಿ' ಎಂದನು.

ಅವರಲ್ಲಿ ಹಲವು ಪ್ರಶ್ನೋತ್ತರಗಳು ನಡೆದವು. ಧರ್ಮನು,   ಯಕ್ಷನು ಒಡ್ಡಿದ  ತೊಡಕುಗಳಿಗೆ ತನಗೆ ತಿಳಿದ ನ್ಯಾಯವಾದ ಉತ್ತರಗಳನ್ನು ಕೊಟ್ಟನು. ಯಕ್ಷನು ಸಂತೋಷಪಟ್ಟು ' ನಿನ್ನ ತಮ್ಮಂದಿರಲ್ಲಿ ಬೇಕಾದ ಒಬ್ಬರನ್ನು  ಬದುಕಿಸಲು ಕೇಳು' ಎಂದನು. ನಕುಲನು ಜೀವಂತವಾಗಲಿ ಎಂದು ಧರ್ಮರಾಜನು ಹೇಳಿದನು. ಯಕ್ಷನು ಸೋಜಿಗಗೊಂಡಂತೆ, 'ಎಲಾ! ಇದೇನು ಮಾಡಿದೆ? ಅತುಲ ಪರಾಕ್ರಮಿ ಭೀಮನನ್ನು ಆಗಲಿ ಅಸದೃಶ ವೀರ ಅರ್ಜುನನನ್ನಾಗಲಿ ಬದುಕಿಸಲು ಹೇಳದೆ ತೀರ ಸಾಮಾನ್ಯ ಶಕ್ತಿಯ ನಕುಲನನ್ನೇಕೆ ಕೇಳಿಕೊಂಡೆ? ' ಎಂದು ವಿಚಾರಿಸಿಕೊಂಡನು.

  ಕೌರವರನ್ನು ಎದುರಿಸುವ ಹೊನೆಯ ನಾಳಿನ ಚಿಂತೆಯು ತಲೆ ತಿನ್ನುತ್ತಿದ್ದರೂ  ಯುಧಿಷ್ಠಿರನು ಭೀಮಾರ್ಜುನರನ್ನು ಬದುಕಿಸಲು ಪ್ರಾರ್ಥಿಸಲಿಲ್ಲ, ಕುಂತಿಯ ಒಬ್ಬ ಮಗನು ನಾನು ಜೀವಂತವಾಗಿರುವಂತೆ ನನ್ನ ಇನ್ನೊಬ್ಬ ತಾಯಿ ಮಾದ್ರಿಯ ಒಬ್ಬ ಮಗನೂ ಬದುಕುವುದು ಧರ್ಮವು. ನನ್ನ ಬೆನ್ನು ಬಿದ್ದ ತಮ್ಮಂದಿರೆಂಬ ಮೋಹದಿಂದ ಭೀಮಾರ್ಜುನರಲ್ಲಿ ಯಾರನ್ನಾದರೂ ಬದುಕಿಸಲು ಕೇಳಿದ್ದರೆ ನಾನು ತನ್ನ ಕರ್ತವ್ಯದಲ್ಲಿ ತಪ್ಪಿದಂತಾಗುತ್ತಿತ್ತು.  ಎಂದು ಯಕ್ಷನಿಗೆ  ತನ್ನ ಹೃದ್ಗತ್ವನ್ನು ತಿಳಿಸಿಹೇಳಿದನು.

ಯಕ್ಷನು ಇನ್ನೂ ಮೆಚ್ಚಿ ನಿನ್ನ ತಮ್ಮಂದಿರೆಲ್ಲ ಬದುಕಲಿ ಎಂದು ಹರಸಿ ಅವರೆಲ್ಲರೂ ನಿದ್ದೆಯಿಂದ ಎಚ್ಚತ್ತವರಂತೆ ಎದ್ದರು.  ಯಕ್ಷನು ಧರ್ಮರಾಜನಿಗೆ , ತಾನು ಸಾಮಾನ್ಯ ಯಕ್ಷನಲ್ಲ ; ಪ್ರತ್ಯಕ್ಷ ಯಮ-ಧರ್ಮರಾಯನೇ ಆಗಿದ್ದೇನೆಂದು ದರ್ಶನವಿತ್ತು ಅದೃಶ್ಯನಾದನು. ಅದೃಶ್ಯನಾಗುವ ಮೊದಲು ಆ ಬ್ರಾಹ್ಮಣನ ಕಳೆದ ಅರಣಿಗಳನ್ನು ಮರಳಿಸಿದನು. ತಾನೇ ಕೃಷ್ಣಸಾರಮೃಗದ ರೂಪದಿಂದ ಅವನ್ನು  ದೋಚಿಕೊಂಡು ಬಂದುದಾಗಿಯೂ ಒಳಗುಟ್ಟನ್ನು ವಿವರಿಸಿದನು.

ವ್ಯಾಸರು ಈ ಕಥೆಯ ರೂಪದಿಂದ ಒಂದು ಸನಾತನ ಸತ್ಯವನ್ನು ಲೋಕಕೆ ಅರುಹಿದ್ದಾರೆ. ಇದರಲ್ಲಿ ಕೆಲವು ಸಂಕೇತಗಳಿವೆ. ಆ ಸಂಕೇತಗಳ ಅರ್ಥವು ತಿಳಿದರೆ ಉಳಿದ ಕತೆಯ ಸ್ವಾರಸ್ಯವು ಚೆನ್ನಾಗಿ ಮನಸ್ಸಿಗೆ ಹೊಳೆಯುವುದು. ವಿಶ್ವಕರ್ಮ ನಿರ್ಮಿತ ಸರೋವರದಂತಹ ಆ ಜಲಾಶಯವೆಂದರೆ 'ಜೀವನ'-ಕಾಸಾರ . ಇಲ್ಲಿ ನೀರನ್ನು 'ಜೀವನ' ಎಂಬ ಅರ್ಥದಲ್ಲಿ ಬಳಸಿದ್ದಾರೆ.

ಮರವು ಮೀನಗಳು ಜೀವಿಗಳ ಪ್ರತೀಕ.ಮರವನ್ನು ಜೀವಿಯ ಸಂಸಾರಕ್ಕೆ ಹೋಲಿಸುವ ಸಂಪ್ರದಾಯವು ಅತ್ಯಂತ ಪುರಾತನವಾಗಿದೆ. ತೈತ್ತಿರೀಯ ಉಪನಿಷತ್ತಿನಲ್ಲಿ  'ನಾನು ಸಂಸಾರರೂಪಿ ವೃಕ್ಷದ ಅಂತರ್ಯಾಮಿಯಾಗಿ ಅದರ ಪ್ರೇರಕನಾಗಿದ್ದೇನೆ.' ಎಂದು ಬಂದಿದೆ. ಜತೆಗೆ ಭಗವದ್ಗೀತೆಯಲ್ಲಿನ ಅಶ್ವತ್ಥವೃಕ್ಷದ ವರ್ಣನೆಯನ್ನು ನೆನೆದುಕೊಳ್ಳಬಹುದು.

ಧರ್ಮನು ನಕುಲನಿಗೆ ಮರವನ್ನೇರಿ ನಿರೀಕ್ಷಿಸಿ ನೀರನ್ನು ಕಂಡು ಹಿಡಿಯಲು  ಹೇಳಿದ್ದಾನೆ. ಸಂಸಾರ ವೃಕ್ಷದ ತುದಿಯಲ್ಲಿ ನಿಂತು ಸಮ್ಯಕ್ ರೀತಿಯಿಂದ ನೋಡಿದಲ್ಲದೆ ಜೀವನಕಾಸಾರವು ಕಾಣಿಸದು.  ಆ ಸರೋವರದ ದಂಡೆಯಲ್ಲಿ ಪ್ರಾಣಿ ವನಸ್ಪತಿಗಳು ಇರುವುದು ನಕುಲನ ಕಣ್ಣಿಗೆ ಕಂಡಿರುತ್ತದೆ.

'ಜೀವನ'ಕಾಸಾರದ ಸ್ವಾಮಿತ್ವವು ಮೊದಲಿನಿಂದಲೂ ತನಗೆ ಸೇರಿದ್ದೆಂದು ಯಕ್ಷನು ಹೇಳುವನು. ಈ ಯಕ್ಷನೆಂದರೆ 'ಕಾಲ' (Time-spirit) ಎಂಬುದು ನಿಸ್ಸಂದಿಗ್ಧವಾಗಿದೆ. ಇದೇ ಯಕ್ಷನು ಧರ್ಮನಿಗೆ ಬಕ-ರೂಪದಲ್ಲಿ ಕಾಣಿಸಿಕೊಂಡನೆಂಬುದೂ ಅರ್ಥವತ್ತಾಗಿದೆ. ಸರೋವರದಲ್ಲಿನ ಶೈವಾಲ ಮತ್ತು ಮೀನಗಳನ್ನು ತಿಂದು ತಾನು ಬದುಕುವದಾಗಿ ಆ ಬಕವು ಹೇಳುವುದು ಅದಕ್ಕೇ.  ಜೀವಿಗಳೆಲ್ಲರೂ ಕಾಲವಶರು. ಕಾಲಪುರುಷನು ಕಾಲಕಾಲಕ್ಕೆ ಕೆಲವೊಂದು ಸಮಸ್ಯೆಗಳನ್ನು ಒಡ್ಡುವನು. ಆ ಸಮಸ್ಯೆಗಳನ್ನು ಬಿಡಿಸದೆ ಯಾರಿಗೂ ಜೀವಿಸುವ ಅರ್ಹತೆ ಇಲ್ಲ. 'ಜೀವನ' ಬೇಕಾದವರು ಕಾಲಪುರುಷನು ಒಡ್ಡಿದ ಪ್ರಶ್ನೆಗಳನ್ನು ಮೊದಲು ಬಿಡಿಸಲೇಬೇಕು. ಇಲ್ಲವಾದರೆ ಹೇಗೂ ಮೊದಲು ಬದುಕುವಾ ಎಂದು ಒತ್ತಾಯದಿಂದ ಜೀವನ-ಕಾಸಾರದೊಳಗಿನ ನೀರು ಕುಡಿಯಹೋದರೆ ಅವರು ನೆಲಕ್ಕೆ ಉರುಳುವದೇ ಖಂಡಿತ.

ಕಾಲನು ಯಮ-ಧರ್ಮನು. ಕಾಲವು ಲೋಕವನ್ನು ನಿ-ಯಮಬದ್ಧವಾಗಿ ಇಟ್ಟಿದೆ.

ಲೋಕವು ಯಾವ ನಿಯಮ- ಎಂದರೆ ಧರ್ಮ, Law - ಗಳಿಂದ ಬದ್ಧವಾಗಿದೆಯೋ ಅವನ್ನು ಮೀರಿ ನಡೆಯುವುದರಿಂದ ಆತ್ಮನಾಶ, ಸಾವು. ಅವನ್ನು ಅನುಸರಿಸುವುದರಿಂದಲೇ ಬದುಕು , ಕಲ್ಯಾಣ. ಈ ಬಗೆಯ ಬದುಕಿಗಾಗಿ ಹೆಣಗುವವನು, ಹೋರುವವನು ಯಕ್ಷನ ಅಥವಾ ಯಮಧರ್ಮನ ಒಲುಮೆಗೆ ಪಾತ್ರನಾಗಿ ಸಾವಿನಿಂದ ಪಾರಾಗುವನು ಎಂದರೆ ಅಮರನಾಗುವನು , ಲೋಕದ ಹೃದಯದಲ್ಲಿ ಸ್ಥಾನವನ್ನು ಪಡೆದು ಮರಣವನ್ನು ಗೆಲ್ಲುವವನು.  ಆ ನಿಯಮ ಮೀರಿ ಬದುಕಿದವರೆಲ್ಲ ಜೀವನ್ಮೃತರಂತೆ  - ಬದುಕಿಯೂ ಸತ್ತವರಂತೆ - ಜೀವಿಸುವುದರಲ್ಲಿ ಸಂದೇಹವಿಲ್ಲ.

ಇದುವೇ ಮೇಲಿನ ಯಕ್ಷನ ರೂಪಕದ ಸಾರವಾಗಿದೆ. ಈ ಕಾರಣದಿಂದಲೇ  ಯುಧಿಷ್ಠಿರನು  ಕೊನೆಗೆ ಆ ಯಕ್ಷರೂಪಿ ಯಮನಲ್ಲಿ ಹೀಗೆ ಬೇಡಿಕೊಂಡನೆಂದು ವ್ಯಾಸರು ವರ್ಣಿಸಿದ್ದಾರೆ.

"ಲೋಭ, ಮೋಹ, ಕ್ರೋಧಗಳನ್ನು ಗೆದ್ದು ನನ್ನ ಮನಸು ಸದಾ ದಾನ, ತಪಸ್ಸು, ಸತ್ಯದಲ್ಲಿ ಸ್ಥಿರವಾಗಲಿ" ಎಂದು ಬೇಡಿಕೊಂಡಿದ್ದಾನೆ.  ಇದೇ ಅಮರಧರ್ಮ, ಈ ಅಮರಧರ್ಮವನ್ನು ಯಾರು ಎಷ್ಟು ಅಳವಡಿಸಿಕೊಳ್ಳುತ್ತಾರೋ ಅಷ್ಟು ಅವರು ಅಮೃತತ್ವವನ್ನು ಪಡೆಯುವರು.

ಧರ್ಮನ ಉತ್ತರಗಳನ್ನು ಕೇಳಿ ಸಂತುಷ್ಟನಾದ ಯಕ್ಷನು ವರವನ್ನು ಬೇಡು ಎಂದಾಗ ಧರ್ಮನು ಯಾರನ್ನು   ಬದುಕಿಸಲು ಕೇಳಿಕೊಂಡನು ?  'ನ-ಕುಲ' ನನ್ನು ( fallen , downtrodden . oppressed or depressed')

 

ಅಗ್ನಿಯ ಉಪಾಸನೆ, ಸೂರ್ಯೋಪಾಸನೆ ಎಂದರೆ ಜ್ಞಾನೋಪಾಸನೆ ಎಂದು 'ಅಗ್ನಿವಿದ್ಯೆ' ಎಂಬ ಚಿಕ್ಕ ಹೊತ್ತಿಗೆಯಲ್ಲಿ ನಾನು ಈ ಮೊದಲೆ ವಿವರಿಸಿದ್ದೇನೆ. ಬ್ರಾಹ್ಮಣನು ಅಗ್ನಿಹೋತ್ರವನ್ನು ಬಿಡಲಾಗದು, ಎಂಬುದರ ಅರ್ಥವು ಅವನು ಆಜನ್ಮ ಜ್ಞಾನ-ಜಿಜ್ಞಾಸುವಾಗಿ ಸ್ವಾಧ್ಯಾಯದಲ್ಲಿಯೇ ನಿರತನಾಗಿರಬೇಕೆಂಬುದಾಗಿದೆ.  'ಚಿದಗ್ನಿಕುಂಡ' ( ಚಿತ್ ಅಂದರೆ ಮನಸ್ಸು ) ದಲ್ಲಿ ಅಗ್ನಿಯನ್ನು ಯಾವಾಗಲೂ ಜಾಗೃತವಾಗಿಡುವುದು ಅವನ ಆದ್ಯ ಕರ್ತವ್ಯವಾಗಿದೆ.  ವಿಚಾರ ಮನನಗಳಿಂದ ಈ ಅಗ್ನಿಯನ್ನು ಪಡೆಯಬೇಕು.  ಅಂದರೆ ಅರೆದು, ಉಜ್ಜಿ , = ಚರ್ಚೆ, ವಿಮರ್ಶೆ ,ವಿವೇಕ, ವಿಚಾರಾದಿಗಳಿಂದ ಅಗ್ನಿಸಾಧನೆ ಮಾಡಿಕೊಳ್ಳುವ ಹದವನ್ನೇ ಮರೆತ ಬ್ರಾಹ್ಮಣನ ಅಗ್ನಿ ಉಪಾಸನೆಯು ಲೋಪವಾಗಿ ಆತನು ತೇಜಸ್ಸನ್ನೇ ಕಳೆದುಕೊಳ್ಳುತ್ತಾನೆ. 

ಕಾಲಪ್ರವಾಹದಲ್ಲಿ ಬ್ರಾಹ್ಮಣನು , ಅರೆವ ಸಾಧನವಾದ ಅರಣಿಯನ್ನೇ ಕಳೆದುಕೊಂಡನು. ಕಾಲನು ದೋಚಿಕೊಂಡೊಯ್ದನು. ಅದನ್ನು ಮರಳಿ ಪಡೆಯಲು ಬ್ರಾಹ್ಮಣನು ಧರ್ಮನಲ್ಲಿ ಮೊರೆಯಿಟ್ಟನು.  ಜ್ಞಾನೋಪಾಸಕ ಮತ್ತು ರಾಜ್ಯಶಾಸಕರೊಳಗಿನ ಈ ಅನ್ಯೋನ್ಯ ಸಂಬಂಧವು ನಿಕಟ ಸಹಕಾರದ್ದಾಗಿದ್ದರೇ ಅದು ಅವರಿಗೂ ಲೋಕಕ್ಕೂ ಕಲ್ಯಾಣಕರವೆಂಬ ಸೂಚನೆಯೂ ಈ ಕಥೆಯಲ್ಲಿದೆ.

ವಿಚಾರಮಂಥನದ ಅರೆದು ಅರಿತುಕೊಂಬ ಆಂತರಿಕ ಸಾಧನವನ್ನು ಕಳೆದುಕೊಂಡ ಬ್ರಾಹ್ಮಣನು ಜೀವನ್ಮೃತನು , ಯಕ್ಷನು ಒಡ್ಡಿದ ಕಾಲಿಕ ಪ್ರಶ್ನೆಗಳ್ನ್ನು ಬಿಡಿಸಲು ಆಗದೆ  ವೀರರೂ ಪರಾಕ್ರಮಿಗಳೂ ಸತ್ತಂತೆ ಬಿದ್ದುಕೊಂಡಿರುವಾಗ ಇನ್ನುಳಿದವರ ಪಾಡೇನು?   ಆ ಕಾಲದ ಪ್ರಶ್ನೆಗಳಿಗೆ  ಉತ್ತರವನ್ನು ಕೊಡದೆ ಯಾರಿಗೂ ಜೀವಂತವಾಗಿ ಬದುಕುವುದೇ ಸಾಧ್ಯವಿಲ್ಲ ಎಂಬುದೇ  ಈ ಯಕ್ಷಪ್ರಶ್ನೆ ಕಥೆಯ ರಹಸ್ಯವಾಗಿದೆ.

 

 

 

ಮುಂದೆ ಶಂ.ಬಾ. ಅವರು ಭಾರತವು ಏಳನೇ ಶತಮಾನದಿಂದ  ಭಾರತವು ಬದುಕಿಯೂ ಸತ್ತಂತೆ ಇರುವುದನ್ನೂ ಅದರ  ಕಾರಣಗಳನ್ನೂ  ಚರ್ಚಿಸಿ  ಪರಿಹಾರಗಳನ್ನೂ  ಅದಕ್ಕೆ ಸೂಚಿಸುತ್ತಾರೆ.  ಅರ್ಯ ದ್ರಾವಿಡರು ಬೆರೆತರು, ಹೂಣರು , ಶಕರು ಮುಂತಾದ ಅನೇಕ ವಿದೇಶೀಯರನ್ನು ನಮ್ಮ ಸಮಾಜವು ಅರಗಿಸಿಕೊಂಡಿತು ,ಅವರು ಇಲ್ಲಿಯೇ ನೆಲೆಸಿ  ನಮ್ಮಲ್ಲಿ ಬೆರೆತರು. ಆದರೆ ಇದು ಮುಸಲ್ಮಾನರ  ಜತೆ ಸಾಧ್ಯವಾಗಲಿಲ್ಲ .  ಉಂಡ ಅನ್ನವು ಅರಗದೆ ಇದ್ದರೆ ಅನಾರೋಗ್ಯವು ಹೇಗೆ ಆಗುವುದೋ ಹಾಗೆ ನಮ್ಮ ದೇಶದ ಗತಿಯಾಗಿದೆ. ದೇಶವು ನಿರ್ಜೀವವಾಗುತ್ತ ನಡೆಯಿತು. ಸ್ವಾತಂತ್ರ್ಯ  ಕಳೆದುಕೊಂದು ಪರಾವಲಂಬಿ ಆಯಿತು.  ಮಹಾಭಾರತವನ್ನ್ನು ಪಾರಾಯಣ ಮಾಡುವ ನಾವು ಅದರ ರಹಸ್ಯವನ್ನು ತಿಳಿದು ಅದರಂತೆ ಬದುಕದೆ ಹೋಗಿ ಬದುಕಿಯೂ ಸತ್ತಂತೆ ಆದೆವು. ಕಾಲರೂಪಿಯಾದ ಯಕ್ಷನು ಕಾಲಕಾಲಕ್ಕೆ ಒಡ್ಡುವ ತೊಡಕುಗಳನ್ನು ಪ್ರಶ್ನೆಗಳನ್ನು ತಿಳಿದುಕೊಂಡು ಬಿಡಿಸುವ ಪ್ರಯತ್ನಪಟ್ಟಿದ್ದರೆ ನಮಗೆ ಈ ಸ್ಥಿತಿ ಬರುತ್ತಿದ್ದಿಲ್ಲ. ತಲೆಯುಳ್ಳವರೂ ತೋಳ್ಬಲದವರೂ ಸಂಕುಚಿತದೃಷ್ಟಿಯವರಾಗಿ ತಮ್ಮ ನ-ಕುಲರನ್ನು ಮೇಲಕ್ಕೆತ್ತುವುದನ್ನು ಕಡೆಗಣಿಸಿದರು.   ಅದು ತಮ್ಮ ಆದ್ಯ ಕರ್ತವ್ಯ ಎಂಬುದನ್ನು ಮರೆತರು.  ಅದಕ್ಕೇ ಶಿಕ್ಷೆಯೇ ನಮ್ಮ ದೇಶದ ಪರಾವಲಂಬನದ ದಾಸ್ಯದ ಸ್ಥಿತಿ.  

 

ಈ ಬಗೆಯಾಗಿ ೧೯೪೮ರಲ್ಲಿ  ಚಿಂತಿಸುವ ಶಂ.ಬಾ. ಅವರು  ಧರ್ಮರಾಯನಂತೆ ಕಾಲನ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟು ಇದೀಗ ಒಬ್ಬ ಮಹಾತ್ಮನು  ನಮ್ಮನ್ನು ಚೇತರಿಸಿ ಎದ್ದು ನಿಲ್ಲುವಂತೆ ಮಾದಿದ್ದಾನೆ. ಆತನ ತಪಪ್ರಭಾವದಿಂದ ಭಾರತವು ಸ್ವಾತಂತ್ರ್ಯವನ್ನು ಪಡೆದಿದೆ.  ಆದರೆ ಇದೀಗ ಹೊಸ ಹೊಸ ಸಮಸ್ಯೆಗಳು ನಮ್ಮ  ಮುಂದೆ ಆಯೆಂದು ಬಾಯ್ತೆರೆದಿವೆ . ಅವುಗಳಿಗೆ ಸರಿಯಾದ ಉತ್ತರವು ದೊರೆತರೆ ಸರಿ ಇಲ್ಲವಾದರೆ ಮತ್ತೆ ಕಾಲನ ಬಾಯಲ್ಲಿ ಬೀಳುವ ಹೆದರಿಕೆಯು ತಪ್ಪಿದ್ದಲ್ಲ ಎಂದು  ‌ಅ ಸಮಸ್ಯೆಗಳನ್ನು-  ಸ್ವ್ವಾತಂತ್ರ್ಯ - ಪ್ರಜಾಪ್ರಭುತ್ವದ ಗುರಿಗಳು, ಜಾತೀಯತೆ ,  ಜಾತಿಭೇದ, ಮುಂತಾದವನ್ನು ಅವಕ್ಕೆ ಪರಿಹಾರಗಳನ್ನು ಮುಂದೆ ಚರ್ಚಿಸುತ್ತಾರೆ ಶಂ. ಬಾ. ಜೋಶಿಯವರು.

 

ಈ ಪುಸ್ತಕವನ್ನು ನೀವು ಓದಬೇಕೆನಿಸಿದರೆ   ಅಂತರ್ಜಾಲದಲ್ಲಿ  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಲ್ಲಿ ಇಲ್ಲಿ ಇದೆ.

 

Rating
No votes yet

Comments

Submitted by ಗಣೇಶ Sun, 12/29/2013 - 00:35

ಮಿಶ್ರಿಕೋಟಿಯವರೆ,
ಮಹಾಭಾರತದ ಯಕ್ಷಪ್ರಶ್ನೆಗೆ ಧರ್ಮರಾಯ ಉತ್ತರಿಸಿದರೆ, ’ಭಾರತ’ದ ಲಕ್ಷ ಪ್ರಶ್ನೆಗೆ ಶಂಬಾರವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
--ಮಹಾಭಾರತವನ್ನ್ನು ಪಾರಾಯಣ ಮಾಡುವ ನಾವು ಅದರ ರಹಸ್ಯವನ್ನು ತಿಳಿದು ಅದರಂತೆ ಬದುಕದೆ ಹೋಗಿ ಬದುಕಿಯೂ ಸತ್ತಂತೆ ಆದೆವು. ಕಾಲರೂಪಿಯಾದ ಯಕ್ಷನು ಕಾಲಕಾಲಕ್ಕೆ ಒಡ್ಡುವ ತೊಡಕುಗಳನ್ನು ಪ್ರಶ್ನೆಗಳನ್ನು ತಿಳಿದುಕೊಂಡು ಬಿಡಿಸುವ ಪ್ರಯತ್ನಪಟ್ಟಿದ್ದರೆ ನಮಗೆ ಈ ಸ್ಥಿತಿ ಬರುತ್ತಿದ್ದಿಲ್ಲ. ತಲೆಯುಳ್ಳವರೂ ತೋಳ್ಬಲದವರೂ ಸಂಕುಚಿತದೃಷ್ಟಿಯವರಾಗಿ ತಮ್ಮ ನ-ಕುಲರನ್ನು ಮೇಲಕ್ಕೆತ್ತುವುದನ್ನು ಕಡೆಗಣಿಸಿದರು.
----ಈವಾಗ ಮೇಲಕ್ಕೆತ್ತುತ್ತಿರುವರಲ್ಲಾ..

Submitted by lpitnal Sun, 12/29/2013 - 09:41

ಶ್ರೀಕಾಂತರವರೇ, ಯಕ್ಷಪ್ರಶ್ನೆ ಶಂ ಬಾ ಅವರ ದೃಷ್ಟಿಕೋಣದಲ್ಲಿ, ತುಂಬ ವಿಚಾರಪೂರ್ಣ ಹಾಗೂ ಸಂಯಮಪೂರ್ಣವಾಗಿ ವಿಶ್ಲೇಷಿಸಿದ್ದು, ಮೆಚ್ಚುಗೆಯಾಯಿತು. ಎಲ್ಲಕ್ಕೂ ಕಾಲವೇ ಉತ್ತರಿಸುತ್ತದೆ ಎನ್ನುವುದೂ ಇದಕ್ಕೇನೊ.ಧನ್ಯವಾದಗಳು.

Submitted by makara Sun, 12/29/2013 - 18:55

@ಮಿಶ್ರಿಕೋಟಿಗಳೆ,
ಉತ್ತಮ ಪುಸ್ತಕದ ಕುರಿತಾದ ಲೇಖನಕ್ಕೆ ಧನ್ಯವಾದಗಳು. ಅಂದ ಹಾಗೆ ಅರಣಿ ಎಂದರೆ ಅಗ್ನಿಯನ್ನು ಉಂಟು ಮಾಡುವ ಕಟ್ಟಿಗೆಗಳು, ಚಕಮಕಿ ಕಲ್ಲಲ್ಲ. ಕೆಳಗಿನ ವಿವರಣೆ ನೋಡಿ.
ಹುಡುಕು ಪದ: ಅರಣಿ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ಅರಣಿ ನಾಮಪದ
(ಸಂ) ಯೋಗಾಗ್ನಿಯನ್ನು ಹುಟ್ಟಿಸಲು ಉಪಯೋಗಿಸುವ (ಬನ್ನಿ, ಅಶ್ವತ್ಥ) ಮರದ ಕಡ್ಡಿ
ದಾಸ ಸಾಹಿತ್ಯ ಕೋಶ
ಅರಣಿ -
ಹೂವು; ಯಾಗಕ್ಕೆ ಉಪಯೋಗಿಸುವ ಕೊರಡು; ಒಬ್ಬ ಋಷಿಯ ಹೆಸರು

ಶ್ರೀಧರ್ ಬಂಡ್ರಿಯವರೇ , ಅರಣಿಯ ಅರ್ಥವನ್ನು ಹುಡುಕಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಅವರಿಗೂ ಹಾಗೂ ಅನಿಸಿಕೆ ತಿಳಿಸಿದ ಗಣೇಶರಿಗೂ ಲಕ್ಷ್ಮೀಕಾಂತ ಇಟ್ನಾಳರಿಗೂ ವಂದನೆಗಳು

Submitted by shreekant.mishrikoti Sun, 01/12/2014 - 11:31

ಮೇಲಿನ ಬರಹವನ್ನು ಅಚ್ಚಿಸುವಾಗ ಕೆಲವು ತಪ್ಪುಗಳು -ನುಸುಳಿವೆ. ದಯವಿಟ್ಟು ತಿದ್ದಿಕೊಂಡು ಓದಿ
೧)ಮಾಘಗಂಭೀರ ಧ್ವನಿ. -> ಮೇಘಗಂಭೀರ ಧ್ವನಿ.
೨)ವ್ಯಾಸರು ಈ ಕಥೆಯ ರೂಪದಿಂದ ಒಂದು ಅನಾತನ ಸತ್ಯವನ್ನು ಲೋಕಕೆ ಅರುಹಿದ್ದಾರೆ. -> ವ್ಯಾಸರು ಈ ಕಥೆಯ ರೂಪದಿಂದ ಒಂದು "ಸನಾತನ ಸತ್ಯವನ್ನು" ಲೋಕಕೆ ಅರುಹಿದ್ದಾರೆ.
೩) ಹೇಗೂ ಮೊದಲು ಬದೂವಾ ಎಂದು ಒತ್ತಾಯದಿಂದ ಜೀವನ-ಕಾಸಾರದೊಳಗಿನ ನೀರು ಕುಡಿಯಹೋದರೆ
-> ಹೇಗೂ ಮೊದಲು ಬದುಕುವಾ ಎಂದು ಒತ್ತಾಯದಿಂದ ಜೀವನ-ಕಾಸಾರದೊಳಗಿನ ನೀರು ಕುಡಿಯಹೋದರೆ
೪)ಆಒಲಪ್ರವಾಹದಲ್ಲಿ ಬ್ರಾಹ್ಮಣನು , ಅರೆವ ಸಾಧನವಾದ ಅರಣಿಯನ್ನೇ ಕಳೆದುಕೊಂಡನು ->
ಕಾಲಪ್ರವಾಹದಲ್ಲಿ ಬ್ರಾಹ್ಮಣನು , ಅರೆವ ಸಾಧನವಾದ ಅರಣಿಯನ್ನೇ ಕಳೆದುಕೊಂಡನು