Happy Journey

Happy Journey

ರವಿ ತನ್ನ ಎಡಗೈಗೆ ಕಟ್ಟಿರುವ ಗಡಿಯಾರದ ಕಡೆಗೆ ನೋಡುತ್ತ "ಸಮಯ ರಾತ್ರಿ ೯.೪೫ ಆಗಲೇ ಆಗಿಹೋಯಿತು, ಓ ಹಂಪಿ ರೈಲು ಬರಲು ಇನ್ನು ಕೆಲವೇ ನಿಮಿಷಗಳು ಉಳಿದಿವೆ" ಎಂದೆನ್ನುಕೊಳ್ಳುತ್ತಾ ತುರುಸಾಗಿ ಯಶವಂತಪುರದ ರೈಲ್ವೇ ನಿಲ್ದಾಣದ ಕಡೆಗೆ ಹೊರಟ. ಟಿಕೆಟನ್ನು ಪಡೆದುಕೊಂಡು ಮನೆಯ ಬಗ್ಗೆ ಯೋಚನೆ ಮಾಡುತ್ತಾ ಅಕ್ಕನ ಮಕ್ಕಳಾದ ಅಂಜು ಹಾಗು ಭೂಮಿ ಯರ ತುಂಟ ಚೇಷ್ಟೆಯನ್ನು ನೆನೆಯುವಷ್ಟರಲ್ಲಿಯೇ ರೈಲು ಆಗಮಿಸಿತ್ತು.
ಶನಿವಾರವಾದುದರಿಂದ ಎಲ್ಲಾ ಬೋಗಿಗಳಲ್ಲೂ ಜನರು ತುಂಬಿದ್ದರು. ಹುಬ್ಬಳ್ಳಿಯ ಬೋಗಿಗಳಲ್ಲಿ ಜನ ಕಡಿಮೆ ಇದ್ದುದರಿಂದ ರವಿ ಓಡಿ ಹುಬ್ಬಳ್ಳಿಯ ಬೋಗಿಯನ್ನು ಹತ್ತಿ ಸೀಟನ್ನು ಹಿಡಿಯಬೇಕಾಯಿತು. ಎದುರು ಬದಿಯ ಸೀಟಿನಲ್ಲಿ ಒಂದು ಕುಟುಂಬವು ಬೀಡುಬಿಟ್ಟಿತ್ತು. ಆ ಕುಟುಂಬದಲ್ಲಿ ಗಂಡ-ಹೆಂಡತಿ ಹಾಗು ಮಗುವೊಂದು ಇತ್ತಾದರೂ ನಾಲ್ಕು ಸೀಟುಗಳನ್ನು ಅವರೇ ಆಕ್ರಮಿಸಿದ್ದರು. ಸೀಟನ್ನು ಹುಡುಕುತ್ತ ಬಂದ ಜನ, ಅದನ್ನು ನೊಡಿಯೊ ಮನಸ್ಸಿನಲ್ಲಿ ಬೈದುಕೊಳ್ಳುತ್ತಾ ಅಲ್ಲಿ ಕುಳಿತುಕೊಳ್ಳದೇ ಹೋದವರು ಬಹಳ.
ಯಲಹಂಕ ರೈಲ್ವೇನಿಲ್ದಾಣ ಬರುತ್ತಲೇ ಜನರು ಬೋಗಿಯೊಳಕ್ಕೆ ನುಗ್ಗಿ ಸೀಟಿಗಾಗಿ ಹುಡುಕುತ್ತಾ ಪರಿತಪಿಸುವ ದೃಶ್ಯ ಸಾಮಾನ್ಯವಾದರೂ ಪ್ರತಿದಿನ ಇಂತಹ ದೃಶ್ಯಗಳನ್ನು ನೋಡೋದು ರವಿಗೆ ಅದು ಸಾಮಾನ್ಯವೇ!. ಹೀಗೇ ಸೀಟಿಗಾಗಿ ಹುಡುಕುತ್ತಾ ಬಂದ ಒಬ್ಬ ಯುವಕ ಆ ಕುಟುಂಬವಿದ್ದ ಕಡೆ ಒಬ್ಬರು ಕುಳಿತುಕೊಳ್ಳುವಷ್ಟು ಜಾಗವಿದ್ದದರಿಂದ ಅಲ್ಲಿಯೇ ಕುಳಿತುಕೊಂಡ. ಆಗ ಆ ಕುಟುಂಬದ ಮಹಾನುಭಾವ ಅ ಯುವಕನ ಮೇಲೆ ರೇಗಾಡುತ್ತಾ " ಹೆಂಗಸು ಕಾಣಿಸಿದಳೆಂದು ಇಲ್ಲಿ ಕುಳಿತುಕೊಂಡೆಯೇನೋ? ಬದಮಾರ್ಷ, ಬೇರೆ ಎಲ್ಲಿಯೊ ಜಾಗಸಿಗಲಿಲ್ಲವೇ?" ಅವನ ಮಾತುಗಳನ್ನು ಕೇಳಿ ಆ ಯುವಕ ತಬ್ಬಿಬ್ಬಾದನಲ್ಲದೆ, ಕೋಪಾವಿಷ್ಟನಾಗಿ ಅವನನ್ನು ಆ ಯುವಕ ತರಾಟೆಗೆ ತೆಗೆದುಕೊಂಡ. ರೈಲು ಹೊರಡುತ್ತಿದ್ದಂತೆ ಅವರ ಜಗಳವೂ ಮುಂದುವರೆದಿತ್ತು. ರವಿಗೆ ಆ ಕುಟುಂಬದ ಯಜಮಾನನ ಮಾತುಗಳನ್ನು ಕೇಳಿ ಯುವಕನ ಜೊತೆಗೂಡಿ ಜಗಳಕ್ಕಿಳಿಯಬೇಕಾಯಿತು. ಕೊನೆಗೂ ಅವರಿಬ್ಬರನ್ನು ಸಮಾಧಾನ ಪಡಿಸುವಷ್ಟರಲ್ಲಿ ರವಿಗೆ ಸಾಕು ಸಾಕಾಗಿತ್ತು.
ಆ ಕುಟುಂಬದ ಯಜಮಾನನ ಸಂಕುಚಿತ ಸ್ವಭಾವಕ್ಕೆ ಏನು ಹೇಳಬೇಕೆಂದು ರವಿಗೆ ಅರ್ಥವಾಗಲಿಲ್ಲ." ನಾವು ಅಲ್ಪಸಂಖ್ಯಾತರು, ನಮ್ಮ ಮೇಲೆ ದೌರ್ಜನ್ಯಮಾಡುವಿರಾ, ನನ್ನ ಹೆಂಡತಿಯನ್ನು ಅವಮಾನಿಸುವುದಕ್ಕಾಗಿ ಬೇರೆಡೆ ಜಾಗವಿದ್ದರೂ ಇಲ್ಲಿ ಬಂದು ಜಗಳ ಮಾಡುತ್ತಿರುವುರಾ...ಇತ್ಯಾದಿ..."ಗೊಣಗಾಡುತ್ತಿದ್ದ. ಅದ್ಯಾವುದನ್ನೂ ಲೆಕ್ಕಿಸದೇ ಆ ಯುವಕ ಹಾಗು ರವಿ ಕೋಪಾವಿಷ್ಟರಾಗಿ ಸಮ್ಮನೇ ಕುಳಿತುಕೊಳ್ಳಬೇಕಾಯಿತು.
" ನಾವು ಭಾರತೀಯರು ಹೀಗೆ ವಿನಾಕಾರಣ ಜಗಳವಾಡುತ್ತಾ ಹೋದರೆ ಅದರ ಪರಿಣಾಮ ಏನಾಗಬಹುದು ನೀವೇ ಯೋಚಿಸಿ. ಮೊದಲು ನಾವು ಭಾರತೀಯರೆಂಬ ಮಧುರ ಭಾವನೆ ನಮ್ಮ ಮನಸ್ಸುಗಳಲ್ಲಿ ಬರಬೇಕು. ನಾನು ಹಿಂದು,ಅಲ್ಪಸಂಖ್ಯಾತ..ಇನ್ಯಾವುದೋ ಜಾತಿಯವನು,ಮತದವನು,ಧರ್ಮದವನು ಎಂಬ ಸಂಕುಚಿತ ಮನೋಭಾವಗಳನ್ನು ತೊಡೆದು ಹಾಕುವುದಾದರೂ ಹೇಗೆ? ಸರ್ಕಾರದ ಪಕ್ಷಪಾತ ನೀತಿ ಜನರ ಮನಸ್ಸುಗಳಲ್ಲಿ ವಿಭಜನೆಯ ಬೀಜವನ್ನು ಬಿತ್ತುತ್ತಿರುವಾಗ ಆಂಗ್ಲರ ’ಒಡೆದು ಆಳುವ ನೀತಿ"ಯನ್ನು ಸರ್ಕಾರಗಳು ಏಕೆ ಪಾಲಿಸುತ್ತಿವೆ? ’ಹೇಗೆ ರಾಜನೋ ಹಾಗೇ ಪ್ರಜೆಗಳು’ ಎನ್ನುವ ಗಾದೆ ರವಿಯ ಮನದಲ್ಲಿ ಮೊಡಿದರೆ,ಕೋಪದ ಆವೇಗದಲ್ಲಿ ಬುಸುಗುಡುತ್ತಿದ್ದ ಆ ಕುಟುಂಬದ ಯಜಮಾನ ಟಿಕೆಟಿನ ಮೇಲೆ ಬರೆದ ’ಹ್ಯಾಪಿ ಜರ್ನಿ’ ಓದುತ್ತಾ ಆ ಯುವಕ ಹಾಗು ರವಿಯ ಮೇಲೆ ಕೆಂಡಕಾರುತ್ತಿದ್ದ. ರವಿ ತನ್ನ ಊರು ಬಂತೆಂದು ಯುವಕನಿಗೆ ತನ್ನ ಸೀಟನ್ನು ಬಿಟ್ಟುಕೊಡುತ್ತಾ,ಯುವಕನಿಗೆ ಶುಭಕೋರುತ್ತಾ, ಬೋಗಿಯ ಬಾಗಿಲಿಗೆ ಬಂದು ನಗುನಗುತ್ತಾ ಆಹ್ವಾನಿಸುತ್ತಿದ್ದ ಹುಣ್ಣಿಮೆಯ ಚಂದ್ರನನ್ನು ನೋಡುತ್ತಾ, ನಿಂತ ರೈಲಿನಿಂದ ಇಳಿದು ಮನೆಯಕಡೆ ಹೆಜ್ಜೆಹಾಕುತ್ತಿದ್ದಂತೆಯೇ ರೈಲ್ವೇ ನಿಲ್ದಾಣದ ಗಡಿಯಾರ ಹನ್ನೆರಡಾಯಿತೆಂದು ಶಬ್ದಮಾಡುತ್ತಿತ್ತು.ರವಿ ಕತ್ತಲಲ್ಲಿ ರೈಲ್ವೇ ಹಳಿಯ ಮೇಲೆ ನಡೆಯುತ್ತಾ ಮನೆಯ ಕಡೆ ಹೆಜ್ಜೆಹಾಕಿದ.

Rating
No votes yet

Comments