ondishtu baraha

ondishtu baraha

ನನ್ನ ಕನಸಿನಲ್ಲಿ ಅನಂತಮೂರ್ತಿ

ಅನಂತಮೂರ್ತಿ ರಾಜ್ಯ ಸಭೆಯ ಚುನಾವಣೆಗೆ ಸ್ಪರ್ಧಿಸಿದ್ದರಲ್ಲ, ಆಗ ನನಗೊಂದು ಕನಸು ಬಿತ್ತು.ಅವರು ಕೋಲಾರದ ಟೇಕಲ್‌ ರೋಡಿನ ಮೂಲೆಯೊಂದರಲ್ಲಿ, ನಮ್ಮ ಮನೆಯ ಹತ್ತಿರವೇ ಒಂದು ದಿನಸಿ ಅಂಗಡಿ ತೆರೆದಿದ್ದರು.ನನಗೋ ಆ ದೇಶ, ಈ ದೇಶ ಸುತ್ತಿ ಸಾಹಿತ್ಯ, ಸಂಸ್ಕೃತಿ ಮಾತಾಡಿ ಬರೆದುಕೊಂಡಿರುವ ಅನಂತಮೂರ್ತಿ ಇದೇಕೆ ಹೀಗೆ ಮಾಡಿದರು ಅಂತ ಕುತೂಹಲ. ಪಾಪ,ಜಾಗತೀಕರಣದ ವ್ಯಾಪಾರದ ವಿಚಾರ ಮಾತ್ರ ಮಾತಾಡಿ ಗೊತ್ತಿರುವ ಅನಂತಮೂರ್ತಿ ಇಲ್ಲಿ ಏನು ವ್ಯಾಪಾರ ಮಾಡುತ್ತಾರೆ? ಟೋಪಿ ಹಾಕಿಸಿಕೊಂಡು ಮೈಸೂರಿನ ಕುವೆಂಪು ನಗರದ ಮನೆಗೋ ಬೆಂಗಳೂರಿನ ಡಾಲರ್ಸ್ ಕಾಲೋನಿ ಮನೆಗೋ ವಾಪಸ್‌ ಹೋಗ್ತಾರೇನೋ ಅಂತ ದುಃಖ. ಗುರುತಿನ ನನ್ನ ಹಾಗೇ ಅದೂ ಇದೂ ಬರೆಯುವವರಲ್ಲಿ ವಿಚಾರಮಾಡಿದೆ. ಅವರು ನಾವು ಆತ್ಮಸಾಕ್ಷಿ ಇಲ್ಲದ ಅನಂತಮೂರ್ತಿ ಇಟ್ಟಿರೋ ಅಂಗಡೀಲಿ ಏನಾದರೂ ಕೊಳ್ಳೋದಿರಲಿ ಆ ರೋಡಲ್ಲಿ ಹೋಗೋರಿಗೂ ಆ ಕಡೆ ಹೋಗಬೇಡಿ ಅಂತ ಹೇಳ್ತಿದ್ದೀವಿ ಅಂದುಬಿಟ್ಟರು. ಯಾರು ಎತ್ತಲಾದರೂ ಹೋಗಲಿ ಅನಂತಮೂರ್ತಿನ ಕಂಡು ಮಾತಾಡಿಸಿ ಒಂದಿಷ್ಟು ದಿನಸಿ ಸಾಮಾನು ಅಲ್ಲಿಂದಲೇ ತರೋಣ ಅಂತ ಹೆಂಡತೀನ ಕರೆದುಕೊಂಡು ಅಂಗಡೀಗೆ ಹೋದೆ. ಅನಂತಮೂರ್ತಿ ಗಲ್ಲಾದಲ್ಲಿ ಕೂರದೆ ಬಾಗಿಲಲ್ಲಿ ನಿಂತಿದ್ದರು.ಗಿರಾಕಿ ಇರಲಿಲ್ಲ. ಯಾಕೆ ಸಾರ್‌ ಈ ಬಿಸಿನೆಸ್‌ ನಿಮಗೆ ಹೊಂದುತ್ತೋ ಅಂತ, ಬರಕೊಂಡು ದೇಶ ಸುತ್ತಿಕೊಂಡು ಇರದೆ ಈ ವಯಸ್ಸಿನಲ್ಲಿ ಇದೆಂತ ಆಸಕ್ತಿ ಅಂತ ಕೇಳಿದೆ. ಅನಂತಮೂರ್ತಿ ನಕ್ಕು, ಏನಾದರೂ ಹೊಸತು ಮಾಡೋಣ ಅಂತ ಅನ್ನಿಸಿತು.ಕನ್ನಡದ ನೆಲದಲ್ಲಿ ಬೆಳೆಯೋದನ್ನ, ತಯಾರಾಗೋದನ್ನ ಕನ್ನಡದ ಜನಕ್ಕೆ ಕೊಡೋಣ ಅಂತ ಯೋಚನೆ ಬಂತು ಅದಕ್ಕೆ ಇದು ಅಂದರು. ಒಳಗೆ ಹೋಗಿ ನೋಡಿದೆ. ಎಲ್ಲ ಚಿಕ್ಕಂದಿನಲ್ಲಿ ಕಂಡ ಮಾಲೂರಿನ ಅಶ್ವತ್ಥಶೆಟ್ಟಿ ಅಂಗಡಿ ಹಾಗೆ.ಬೆಲೇನೂ ಹಾಗೇ ಸಲೀಸು.ಆದರೆ ಹೆಂಡತಿ ಮಾತ್ರ ಏನೇನೂ ಚೆನ್ನಾಗಿಲ್ಲ. ಎಲ್ಲ ಜಿನುಗು ಜಿನುಗು. ಒಂದರಲ್ಲೂ ಚಾಯಿಸ್‌ ಇಲ್ಲ.ಫುಡ್‌ವರ್ಲ್ಡ್ ತರಾನೆ ಇರೋ ಅಂಗಡಿ ಎಂ.ಜಿ.ರೋಡಲ್ಲಿ ಓಪನ್‌ ಆಗಿದೆ. ಎಲ್ಲಾ ಪ್ರಾವಿಶನ್‌ ಐಟಂಸ್‌ ಸಿಕ್ಕುತ್ತೆ.ಇದಕ್ಕಿಂತ ಅಲ್ಲಿ ಬಯ್‌ ಒನ್‌ ಟೇಕ್‌ ಒನ್‌ ಫ್ರೀ ಆಫರ್‌ಗಳು ಬೇರೆ ಇರುತ್ತವೆ. ಆ ಅಂಗಡಿಯೋನು ಹೋದ ಕೂಡಲೇ ಕೂಲ್‌ ಡ್ರಿಂಕ್ ಕೊಡ್ತಾನೆ. ಕೊನೆಯಲ್ಲಿ ಒಂದು ಅಂಕಲ್‌ ಚಿಪ್ಸ್ ಇಲ್ಲ ಹಲ್ದಿರಾಂಸ್‌ ನಮ್ಕೀನ್‌ ಕಾಂಪ್ಲಿಮೆಂಟ್ ಕೊಡ್ತಾನೆ.ಅದನ್ನ ಬಿಟ್ಟು ಅನಂತಮೂರ್ತಿ ಅಂಗಡಿ ಇಟ್ಟಕೂಡಲೆ ಇಲ್ಲಿರೋದೇ ತರ್ತೀನಿ ಅಂತೀರಲ್ಲ, ನಿಮ್ಮ ಬುದ್ಧಿಗೆ ಅದೇನು ಕೊಡಬೇಕೋ.ನೀವು ತಾನೇ ಏನು ಮಾಡ್ತೀರಿ, ಆ ಅನಂತಮೂರ್ತಿ ತರಾನೆ ನಿಮ್ಮದೂ ಕಾಮನ್‌ ಸ್ಕೂಲ್‌ ಬುದ್ಧಿ ಅಂದಳು. ಆಚೆ ಬರೋವಾಗ ಅನಂತಮೂರ್ತಿ ಕೇಳಿದರು, ಏನನ್ನಿಸುತ್ತೆ ಅಂತ. ಭಾಳ ಒಳ್ಳೆ ಪ್ರಯತ್ನ ಅಂದೆ, ನಮ್ಮ ಬರೀ ಕೈ ನೋಡಿದ ಅವರ ದೃಷ್ಟಿ ತಪ್ಪಿಸಿ. ಆಮೇಲೆ ಅಂತ ನನ್ನ ಗಮನ ಸೆಳೆದು ಅನಂತಮೂರ್ತಿ ಹೇಳಿದರು: “ನಿನ್ನೆ ನಂಗಲಿ ಚಂದ್ರಶೇಖರ್‌ ಬಂದಿದ್ದರು. ‘ಭಾಳ ಒಳ್ಳೆ ಪ್ರಯತ್ನ. ನೀವು ಇದರ ಜೊತೆ ಶತಾವರಿ, ಮಂಗುರುಳ್ಳಿ, ಇಲಿಕಿವಿ ಸೊಪ್ಪು, ಸೊಗದೇಬೇರು ಮುಂತಾದವನ್ನೆಲ್ಲ ಇಡಿ. ಬೆಟ್ಟದ ಮೇಲೆ ನನ್ನ ಗುರುತಿನೋರು ಇದಾರೆ, ತಂದುಕೊಡ್ತಾರೆ’ಅಂದರು. ನೀವೇನಂತೀರಿ?”

“ಏನಿಲ್ಲ. ಈ ಊರಲ್ಲಿ ಅದನ್ನೆಲ್ಲ ತಿನ್ನೋರು ಇದ್ದದ್ದು ನಂಗಲಿ ಚಂದ್ರಶೇಖರ್‌ ಮಾತ್ರ. ಆದರೆ ಅವರು ಈಗ ಇರೋದು ಹೊಸಕೋಟೇಲಿ” ಅಂದೆ. ಅನಂತಮೂರ್ತಿ ಏನೋ ಹೇಳಲು ಬಾಯಿ ತೆರೆದರು. ಅಷ್ಟು ಹೊತ್ತಿಗೆ ಕರೆಂಟು ಹೋಗಿ, ಸೊಳ್ಳೆ ಕಡಿದು ಎಚ್ಚರವಾಗಿ ಹೋಯಿತು.

ವಿಳಾಸ:
ಆರ್‌.ವಿಜಯರಾಘವನ್‌
ಸೀನಿಯರ್‌ ಮೇನೇಜರ್‌ ಪ್ರಗತಿ ಗ್ರಾಮೀಣ ಬ್ಯಾಂಕ್‌ ಗೀತಾ ರಸ್ತೆ, ರಾಬರ್ಟಸನ್‌ಪೇಟೆ
ಕೆ.ಜಿ.ಎಫ್‌-563122

ಮುರಖಬಾದ ಮಖಾಮತ್‌ಗಳು

ನನ್ನ ಮುಂದಿದೆ ಹೀಗೆ ಪೀಡಿಸುವ ಅಲೆಮಾರಿ ಮನಸ್ಸೊಂದು
ಹಿಂದೆಲ್ಲಾ ನಾನು ಈಗಿನ ಹಾಗೆಯೇ ಕೇಳಿಕೊಂಡಿದ್ದೇನೆ
ಮನಸ್ಸನ್ನು ಮುಂದಿಟ್ಟುಕೊಂಡು ಪ್ರಶ್ನೆ ಮಾಡಿದ್ದೇನೆ ಪ್ರಶ್ನೆಯೇ ಎಂಬುದು ಈಗ ಉಳಿದಿರುವ ಪ್ರಶ್ನೆ ಅದೊಂದು ರೀತಿ ಅಂಗೈನಲ್ಲಿ ಲಿಂಗವಿಟ್ಟುಕೊಂಡು ಅಲೆಮಾರಿ ಮನಸ್ಸೆಂಬ ಅನಂಗನ ಜೊತೆ
ದಿಕ್ಕಿಲ್ಲದೆ ಓಡಿಯಾಡಿದಂತೆ;
ಕೊನೆಯಿರದ ಸುಳ್ಳಿನ ಜೊತೆ
ಸುರತಕ್ಕೆ ತೊಡಗಿದಂತೆ.

ನಿದ್ದೆ ಎಚ್ಚರಗಳ ನಡುವಿನಲ್ಲಿ ಕಾಲವನ್ನು ಬಂದಿಸಿಟ್ಟ
ಓ ಕಾಲವೇ, ನಾನು ನೋಡಿದ್ದೇನೆ,
ನೋಡಿದ್ದೇನೆ ತಿಳಿದಿರುವುದನ್ನೆ
ತಿಳಿವು ಸಿಕ್ಕಿತೇ ನೋಡಿದ್ದಕ್ಕೆ?
ನಿದ್ದೆ ಬಂದಿತೇ ಅಡ್ಡಿ
ಅರಿವಿನ ಜೊತೆಯ ಅನುಸಂಧಾನಕ್ಕೆ

ಆಡಿ ಗೆದ್ದಿದ್ದೇನೆ ನಿದ್ದೆಯ ಜೊತೆಗೊಂದಾಟ,
ಆಡಿ ಸೋತಿದ್ದೇನೆ ಅರಿವಿನ ಜೊತೆಗಿನ್ನೊಂದಾಟ

ಬೋಧೆಯಾಗಿದೆ, ನಿದ್ದೆ ಕಳೆಯುವ ಕಾಲ
ಹರಿದ ಮಬ್ಬಿನ ದುಪ್ಪಟಿಯ ಕೆಳಗೆ
ನಿದ್ದೆ ಹೋದ ನೆಲ
ಕೆಡವುತ್ತಿಲ್ಲ ಯಾವ ಅನೆಚ್ಚರವೂ ಕೆಳಗೆ ಎತ್ತಿ ನಿಲ್ಲಿಸುತ್ತಿಲ್ಲ
ಯಾವ ಅರಿವೂ ನೆಟ್ಟ ನೇರ
ನನ್ನ ಅಂತರ್ಬೋಧೆಗೆ ನಾನೇ ಸಾಕ್ಷಿ ನಿಂತಿರುವವರೆಗೆ
ಬೆನ್ನು ಕಣ್ಣಿನ ನಡುವೆ ಅಂತರ ಹೋಗುವುದಿಲ್ಲ ಶಂಸಿ ದೀನ್‌
ಕ್ರಮಿಸುವ ದಾರಿ ಮಾತ್ರವೇ ದಾರಿ ಕಾಬಾಕ್ಕೆ ಅಥವಾ ಮತ್ತೊಂದಕ್ಕೆ
ಅರಿವಾಯಿತು ನಿಲ್ಲಲಾರದೆ ಹೋದದ್ದೇಕೆ ಕಾಲು ಇರುವಷ್ಟು ಕಾಲವೂ ನಾನು ನೀನು

(ಮರಖಬಾ: ಧ್ಯಾನ
ಮಖಾಮತ್‌ಗಳು: ಧ್ಯಾನದ ಹಾದಿಯಲ್ಲಿನ ಘಟ್ಟಗಳು)

ರೂಮಿಯ 4 ದಿವಾನ್‌ಗಳು
1
ಅನುದಿನದ ಹಾಗೆಯೇ
ಈ ದಿನವೂ ನಾವು ಕೆಟ್ಟು ಹೋಗಿದ್ದೇವೆ ಸುರೆಯಿಂದ ತೆರೆಯಬೇಡ ಚಿಂತೆಗಳ ಕದವನ್ನು, ಎತ್ತಿಕೋ ವೀಣೆಯನು
ಪ್ರಾರ್ಥನೆಗೆ ನೂರು ವಿಧ,ತಲೆಬಾಗುವುದು, ಸಾಷ್ಠಾಂಗವೆರಗುವುದು ಆ ಪ್ರಿಯಕರನ ಸೊಬಗೋ ಅವನಿಗೆ,
ಯಾವನ ಪ್ರಾರ್ಥನೆಯು ಸೊಬಗೋ ಅವನಿಗೆ

2

ನೀನು ತಿನ್ನಬಹುದು ಒಳ್ಳೊಳ್ಳೆಯ ಸವಿದಿನಿಸನ್ನು,
ಒಳ್ಳೆಯ ಹುರಿದ ಮಾಂಸವನ್ನು
ಮತ್ತೆ ಕುಡಿಯಲೂಬಹುದು ಅತ್ಯುತ್ಕೃಷ್ಟ ಮಧುವನ್ನು
ತಿಳಿ, ಕನಸಿನಲ್ಲಿ ನೀನು ಕುಡಿದೆ, ಮನದಣಿಯೆ ನೀರನ್ನು
ನಿದ್ರೆಯಿಂದೆದ್ದಾಗ ನೀನಿನ್ನೂ ಬಾಯಾರಿದವನು
ಕನಸಿನಲ್ಲಿ ಕುಡಿದ ನೀರು ಯಾತಕ್ಕೂ ಬಾರದು

3

ಗುಲಾಬಿ ತೋಟದಲ್ಲಿ ಅಡ್ಡಾಡಲು ಹೋದೆ ಪ್ರಿಯತಮೆಯ ಕೂಡಿ
ಗುಲಾಬಿಯೊಂದರ ಮೇಲೆ ಹರಿಯಿತು ನೋಟ
ನಿಂತು ನೋಡಿದೆ, ಪರಿವೆಯಿರದೆ
ನನ್ನ ಪ್ರಿಯತಮೆ, ಛೇಡಿಸಿದಳು
ನಾಚಿಕೆಯಾಗಬೇಕು ನಿನಗೆ
ಇಗೋ ಇಲ್ಲಿವೆ, ನನ್ನ ಕೆನ್ನೆಗಳು
ಹುಚ್ಚ ಗುಲಾಬಿ ಹೂಗಳ ನೋಡುತ್ತಿರುವೆ

4

ಓ ಮದಿರೆಯ ಬಟ್ಟಲನು ತುಂಬುವವನೇ,
ಮೊದಲು ನೀ ಮದಿರೆಯನ್ನಿತ್ತ ಪಾತ್ರೆಯಿಂದ ಇನ್ನೆರಡು ಬಟ್ಟಲು ತುಂಬಿಕೊಡು,
ಅನಂತವಾಗಲಿ ನನ್ನ ಆನಂದ ಗುಟ್ಟಾಗಿರಲಿ ಅದರ ಸವಿ ಇನ್ನೊಮ್ಮೆ ನೀನೇನಾದರೂ
ಅದರ ಮುಚ್ಚಳವ ತೆರೆದೆಯಾದರೆ ಕುಡಿಕುಡಿದು ಹಾಳಾಗುವಂತೆ ಮಾಡು ನನ್ನ

ರೂಮಿಯೇ ಹೇಳಿದ್ದು
ನಾನು ಏನು ಮಾಡುತ್ತಿದ್ದೇನೆ ಎನ್ನುವುದು ನನಗೆ ಗೊತ್ತು ಎಂದು ನೀನು ಭಾವಿಸುತ್ತೀಯೇನು? ಒಂದೋ ಎರಡೋ ಉಸಿರಾಡಿದ್ದಕ್ಕೆ ನಾನು ನಾನಾದೆನೇನು? ದೌತಿಯೊಂದು ತಾನು ಬರೆಯುತ್ತಿರುವುದೇನೆಂದು
ಅಥವಾ ಚೆಂಡೊಂದು ತಾನು ಇನ್ನು ಉರುಳಲಿರುವುದು
ಎಲ್ಲೆಂದು ತಿಳಿದಂತೆ ಇದು

ದೇವರ ಮನುಷ್ಯ ____ರೂಮಿ

ದೇವರ ಮನುಷ್ಯ ಕುಡಿದಿರುತ್ತಾನೆ ಹೆಂಡ ಮುಟ್ಟದೆಯೆ ಅವನು ಉಂಡು ಸಂತೃಪ್ತನಾಗಿರುತ್ತಾನೆ ಮಾಂಸವಿಲ್ಲದೆಯೆ ಹುಚ್ಚನಾಗಿರುತ್ತಾನೆ, ಗೊಂದಲದಲ್ಲಿ ಅವನಿಗೆ ಅನ್ನ ಬೇಡ, ನಿದ್ದೆ ಬೇಡ
ಅವನು ದರ್ವೇಶಿಯ ವಸ್ತ್ರಗಳ ಹೊದ್ದ ಅರಸ ಪಾಳುಬಿದ್ದ ಜಾಗದಲ್ಲಿ ಅಡಗಿದ ಸಂಪತ್ತು
ಅವನು ಗಾಳಿಯಲ್ಲ, ನೀರಲ್ಲ - ಅನಂತ ಸಾಗರ
ನಿರಭ್ರ ಗಗನದಿಂದ ಮುತ್ತಿನ ಮಳೆಗರೆಯುವವನು ನೂರು ಚಂದಿರ ನೂರು ಗಗನಗಳ ಉಳ್ಳವನು ನೂರು ಸೂರ್ಯರು ಅವನಿಗೆ
ಓ ಶಂಸಿ ದೀನ್‌
ದೇವರ ಮನುಷ್ಯ ಜ್ಞಾನಿಯಾಗಿರುತ್ತಾನೆ ಸತ್ಯದ ಅರಿವಿಂದ
ಪುಸ್ತಕದಿಂದ ಅವನು ಕಲಿತದ್ದಿಲ್ಲ. ಅತೀತನವನು ಧರ್ಮಾತೀತ, ಸನ್ಮಾರ್ಗಿ ಅವನಿಗೋ ಸರಿ ತಪ್ಪುಗಳೊಂದೆ ಸಂಭ್ರಮಿಸುವರು ಅವನನ್ನು
ಶಂಸಿ ದೀನ್‌, ಕಾಣನವನು
ಸದಾ ಮರೆಯಾಗಿರುವ ಅವನನ್ನು
ಹೋಗು ಹುಡುಕು
ಹೋಗು ಅವನನ್ನು ಕಾಣು

ಶಂಸಿ ದೀನ್‌ ಮತ್ತು ಸ್ವಗತದಲ್ಲಿ ನಾನು

ನೀನು ಹಿಂಬಾಗಿಲ ತೆರೆದು ಹೇಳದೆ ಹೋದಾಗ
ಯಾವತ್ತಿಗೂ ದೂರ ಹೋದದ್ದೆಂದು ನಾನು ತಿಳಿದಿರಲಿಲ್ಲ
ನನ್ನ ಶಂಸಿ ದೀನ್‌, ನನಗೆ ಗೊತ್ತಿರಲಿಲ್ಲ
ನಿನಗೆ ಕರೆ ಬಂದುದು ಎಲ್ಲಿಂದ

ಸದಾ ಮರೆಯಾಗಿರುವ ದೇವರ ಮನುಷ್ಯನನ್ನು ಹುಡುಕುವುದು, ಕಾಣುವುದು ಪರಮ ಗುರಿ ಅಂತ ನಿನಗೆ ಹೇಳಿದ್ದೆ, ನಾನೇ
ಹಾಗೆ ಹುಡುಕಲು ಹೋದವನು ಬರುವನೇ ಇಲ್ಲವೇ ಎಂಬ ಸಂಶಯ ನನ್ನ ಕಾಡಿರಲಿಲ್ಲ ಮತ್ತು ನಿನಗೆ ಕರೆ ಬಂದುದು ಎಲ್ಲಿಂದ
ಎಂತಲೂ ನನಗೆ ತಿಳಿಯಲೇ ಇಲ್ಲ

ನೀನು ತೆರೆದು ಹೋದ ಹಿಂಬಾಗಿಲನ್ನು ಮುಚ್ಚದೆ ಅದೆಷ್ಟೋ ಕಾಲ ಬಿಟ್ಟಿದ್ದೆ ಶಂಸ್‌
ಬಳಿಕ ಆ ಹಿಂಬಾಗಿಲಿನ ಮೂಲಕವೇ ಹೊರಟಿದ್ದೆ ನೀನು ಹುಡುಕಲು ಹೋದ ದಾರಿ ತೆರೆದೀತೆಂದು ಡಮಾಸ್ಕಸ್‌ನ ಖಾಲಿಬೀದಿಗಳಲ್ಲಿ ಹುಡುಕಾಟದಲ್ಲಿ
ಅದೆಷ್ಟು ಕಾಲ ಅಲೆದಲೆದು, ನೋಡಿ ಕೇಳಿ ದಣಿದು ನವೆದಿದ್ದೆ.
ನಿನ್ನ ಹಿಂಬಾಲಿಸಿದ ಕರಿನೆರಳು ಕಾಣಲಿಲ್ಲ
ಕೊನೆಗೆ ಅರ್ಥವಾಯಿತು ಶಂಸಿ ದೀನ್‌
ಅದು ಹೇಗೆ ವ್ಯರ್ಥ ಹುಡುಕಾಟಗಳು ಅರ್ಥಗಳಾಗಿ ಬದಲಾಗಿಬಿಡುತ್ತವೆ ತತ್ತ್ವದ ಅರಳು ಮಾತುಗಳಲ್ಲಿ ಅದು ಹೇಗೆ ಅವು ನವಿರು ಮನಸ್ಸುಗಳ ದಾರಿ ತಪ್ಪಿಸಿ ಸಿಗದೆಲ್ಲ ವಸ್ತುಗಳ ದಾಸ್ಯಕ್ಕೆ ನಮ್ಮನ್ನು ಸೆಳೆದುಬಿಡುತ್ತವೆ

ನಿನ್ನ ನೆರಳು ಸೋಂಕದ ನಾನು
ಅರಿವಿನ ಆಘಾತ ಕಳೆದು ಸ್ಮೃತಿಯ ಕಣಜದ ಗೂಡಿನೊಳಹೊಕ್ಕ ನಾನು
ನನ್ನ ನೆರಳು ಸೋಂಕದ ನಿನ್ನ ಪಾದಕ್ಕೆ
ಎರಗಿದ್ದೇನೆ ಶಂಸಿ ದೀನ್‌
ಅಂದಿನ ಪುಳಕ ಹಾಗೇ ಇದೆ ಅದೇ ಡಮಾಸ್ಕಸ್‌ನ ಬೀದಿಯಲ್ಲಿ ನಿನ್ನನ್ನು ಹುಡುಕಿ
ಪರಸ್ಪರ ಪಾದಕ್ಕೆರಗಿದಾಗಿನ ಅಂದಿನ ಸ್ಪರ್ಶದ ಪುಲಕ

ಆಫ್ಘನ್ನರು

ಅದೆಷ್ಟು ಬೇಗನೆ ಕಲಿತುಬಿಟ್ಟರು ಅವರು ದಿನಕ್ಕೊಂದೂರಿಗೆ ಗುಳೇ ಹೋಗುವುದನ್ನು ಬಿಡು ಬಯಲಿನಲ್ಲಿ ಭಯವನ್ನು ಹೊದ್ದು ಮಲಗುವುದನ್ನು ಮರದ ಕಾಲುಗಳ ಕಟ್ಟಿಕೊಂಡು ಬದುಕನ್ನು ಎಳೆಯುವುದನ್ನು ಕೋಲಿನಾಸರೆಯ ಕ್ರಮವನ್ನು
ಅದೆಷ್ಟು ಬೇಗ ಕಲಿತುಬಿಟ್ಟಿದ್ದರು ಅವರು ನೆತ್ತರ ಹೊಳೆಯ ಜಲಪಾತದ ಸದ್ದಲ್ಲಿ ಮದ್ದು ಗುಂಡುಗಳ ಖವ್ವಾಲಿಯನ್ನು ಅಫೀಮಿನ ಮತ್ತಲ್ಲಿ ಬಾಂಬುಗಳ ಸಿಡಿತಲೆಗೆ ಮೈ ಒಡ್ಡುವುದನ್ನು

ಕಲಿತುಬಿಟ್ಟಿದ್ದಾರೆ ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಸದ್ದಿಗೆ ಕಾಯುವುದನ್ನು ಯಾರಾದರೂ ಕಾಯುತ್ತಿರುತ್ತಾರೆ ಮೇಲೆ ಹಾರುವ ಹೆಲಿಕಾಪ್ಟರಿಗಾಗಿ,
ಗುರಿಮಾಡಿ ಇಲ್ಲವೆ ಸೆರಗೊಡ್ಡಿ ಏನಾದರೂ ಬೀಳಬಹುದು ಮೇಲೆ ಹಾರಾಡುವ ಹೆಲಿಕಾಪ್ಟರಿನಿಂದ
ಗುರಿಮಾಡಿದ್ದು ಅಥವ ಒಗೆದದ್ದು

Rating
No votes yet

Comments