panchaayati chunavane

panchaayati chunavane

ಪಂಚಾಯತಿ ಕಟ್ಟೆಗೆ ಗೆಲ್ಲುವ ಪರಿ
ಚಿಂತೆಯಾಗಿದೆ ಊರೊಳಗೆ !!
ಹಂಚುವುದೇನು ಮತ ಬಾಂಧವರಿಗೆ
ಪಂಚೆ ಸೀರೆಯೇ ಬೇರಿಹುದೇ !!

ಮತದಾನದ ಕ್ರಿಯೆ ರಾಜಕೀಯಕೆ
ಜೊತೆಯಾಗಿದೆ ಹುಚ್ಚಾಟದಲೇ !!
ಮಿತಿ ಮತಿಯರಿಯದ ಮತದಾರಿಕೆಗೆ
ಅತಿಯಮಲೇರಿದೆ ಈ ಮೊದಲೇ !!

ಜನತಂತ್ರದ ಸ್ವಾರಸ್ಯವನರಿಯದ
ಜನರಾಳಿದ ಪರಿಣಾಮವಿದು !!
ಕನಸಾಗಿದೆ ಮತವೆಂಬುದು ಜಾಣರ
ತನವಾಗುವ ಪರಿಯೋಗವದು !!

ಕೊಡುವದು ಪುಡಿ ಧನ ಕನಕಗಳಲ್ಲ
ಹೆಡಗೆಗಟ್ಟಲೆ ಘೋಷಣೆಯ !!
ಸುಡಿರೇತಕೆ ಬೇಕಿನ್ನೀ ಲೋಕಕೆ
ಕೊಡಿರಾದರೆ ಪ್ರಾಮಾಣಿಕವ !!

ದಯಮಾಡಿದ ಕೇಳಿರಿ ನೀವ್ ನಿಂತರೆ
ನಯವಾಗಿಯೆ ಮತದಾರರಿಗೆ !!
ಜಯಪಡೆದರೆ ಮಾಡುವುದನು ಗೈದರೆ
ಜಯವಿದೆ ಸೋತರು ಜನಪದಕೆ !!

ಗೆಲ್ಲಲು ನಾನಾ ತಂತ್ರವ ಬಲಿಯುತ
ಮಲ್ಲರಂತೆಯೇ ಹೆಣಗುವಿರಿ !!
ಸುಳ್ಳನು ಹೇಳಿಸಿ ಕಳ್ಳರ ಬಳಸುತ
ಚೆಲ್ಲಾಟಗಳನು ನಡೆಸುವಿರಿ !!

ಗೋಮುಖವ್ಯಾಘ್ರಗಳೆಂಬುದ ತೋರುತ
ಈ ಮಹೀತಳವಾಳುವಿರಿ !!
ಸಾಮಾನ್ಯರಿಗುಪದೇಶವ ಮಾಡುತ
ಸಮ್ಮಾನದ ಹಿರಿ ಹಿಗ್ಗುವಿರಿ !!

ಇನ್ನಾದರು ಸರಿಯಾಗಲಿ ಭಾರತ
ಸನ್ನಡತೆಯ ಜನತಂತ್ರದಲಿ !!
ಮುನ್ನಡೆಯಲಿ ಪ್ರತಿನಿಧಿಸುತಲಿರುತ
ಚೆನ್ನಾಗಲಿ ಜಯ ಮಂತ್ರದಲಿ !!

. - ಸದಾನಂದ

Rating
No votes yet

Comments

Submitted by ಗಣೇಶ Sun, 05/24/2015 - 21:00

ಜನತಂತ್ರದ ಸ್ವಾರಸ್ಯವನರಿಯದ ಜನರಾಳಿದ ಪರಿಣಾಮವಿದು ..ಸದಾನಂದರೆ, ಇನ್ನಾದರೂ ಸರಿಯಾಗಲಿ ಎಂಬುದು ಹಾರೈಕೆ-ನಮ್ಮೆಲ್ಲರದು. ಕವಿತೆ ಚೆನ್ನಾಗಿದೆ

Submitted by kavinagaraj Mon, 05/25/2015 - 08:52

ಲಾವಣಿಯ ರೀತಿ ಹಾಡಬಹುದು. ಚೆನ್ನಾಗಿದೆ.