Theft Tech. ಕೋರ್ಸ್

Theft Tech. ಕೋರ್ಸ್

ಬೊಗಳೂರು, ನ.28- ತಾನು ದರೋಡೆ ಮಾಡಿಲ್ಲ ಎಂದು ಪೊಲೀಸನೊಬ್ಬ ಬೊಗಳೆ ರಗಳೆ ಬ್ಯುರೋ ಎದುರು ಬೊಗಳೆ ಬಿಟ್ಟಿದ್ದಾನೆ. (bogaleragale.blogspot.com)

ದರೋಡೆ ಆರೋಪದಲ್ಲಿ ಮುಖ್ಯ ಕನಿಷ್ಠ ಬಿಲ್ಲೆ ಬಂಧನಕ್ಕೊಳಗಾದ ಪ್ರಕರಣ ಇಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠರ ರಕ್ಷಣೆಯ ನಿಟ್ಟಿನಲ್ಲಿ ಧಾವಿಸಿದ ನಿಕೃಷ್ಟ ಬ್ಯುರೋ ಸಿಬ್ಬಂದಿಗೆ ವಿಶೇಷ ಸಂದರ್ಶನ ನೀಡಿದ ಮಹಾನ್ ಕನಿಷ್ಠ ಬಿಲ್ಲೆ, ತಾನು ಕಳ್ಳರನ್ನು ಹಿಂಬಾಲಿಸುತ್ತಿದ್ದೆನಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈಗಿನ ದಿನಗಳಲ್ಲಿ ಪೊಲೀಸ್ ಹುದ್ದೆಗಿಂತ ಕಳ್ಳರ ಹುದ್ದೆಯು ಮೇಲ್ಮಟ್ಟದ್ದಾಗಿದ್ದು, ಅವರಿಗೆ ಹೆಚ್ಚು ಸಂಪಾದನೆ ಇದೆ. ನಮಗೆ ಬೀದಿ ಬೀದಿಗಳಲ್ಲಿ ಕೈಯೊಡ್ಡುವಾಗ ಬರೇ ಹತ್ತಿಪ್ಪತ್ತು ರೂಪಾಯಿ ಕಮಾಯಿ ಆಗುತ್ತಿದೆ. ಹಾಗಾಗಿ ಭವ್ಯ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಳ್ಳತನದ ಕೋರ್ಸ್ ಮಾಡುತ್ತಿದ್ದೆ ಎಂದು ಸಂದರ್ಶನದಲ್ಲಿ ಅವರು ಉಗುಳಿದ್ದಾರೆ.

ತಾನು International Theft Technology ಕೋರ್ಸ್‌ಗೆ ಸೇರಿದ್ದೆ. ಇದರಲ್ಲಿ ಥಿಯರಿಗಿಂತಲೂ ಪ್ರಾಕ್ಟಿಕಲ್‌ಗೆ ಹೆಚ್ಚು ಆದ್ಯತೆ. ಹಾಗಾಗಿ ಪ್ರಯೋಗ ನಿರತನಾಗಿದ್ದಾಗ ತಾನು ಈ ಪ್ರಕರಣದಲ್ಲಿ ಅನ್ಯಾಯವಾಗಿ ಸಿಲುಕಿಹಾಕಿಕೊಂಡೆ ಎಂದವರು ಹೇಳಿದ್ದಾರೆ.

ಈ ಕಳ್ಳ ನನ್ಮಕ್ಳಿಗೆ ಸರಿಯಾಗಿ ಆಭರಣ ಹಿಡಿದುಕೊಳ್ಳುವುದು ಗೊತ್ತಿಲ್ಲ. ಆದುದರಿಂದ ಇಲ್ಲಿ ಸ್ವಲ್ಪ ಮಟ್ಟಿನಲ್ಲಿ ನನ್ನ ಪ್ರಯೋಗ ಯಶಸ್ವಿಯಾಗಿತ್ತು. ಆದರೆ ಅವರು ನಮ್ಮ ಠಾಣೆಗೇ ಮರಳಿ ಬಂದು ನಮ್ಮ ಮೇಲೆಯೇ ದೂರು ನೀಡುತ್ತಾರೆ ಎಂಬುದು ಯಾರಿಗೆ ತಿಳಿದಿತ್ತು ಎಂದು ಅವರು "ಎಡವಿದ್ದು ಎಲ್ಲಿ" ಎಂಬ ಮಾದರಿಯಲ್ಲಿ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದರು.

ಛೆ, ಇಂಥ ಕೋರ್ಸಿಗೆ ಸೇರಿದ್ರೆ ಪ್ರಯೋಗ ಮಾಡೋಕೂ ಜನಾ ಬಿಡ್ತಾ ಇಲ್ಲ. ನಾವು ನಮ್ಮ ಹೊಟ್ಟೆ ಪಾಡಿಗೆ ಇದನ್ನು ಕಲಿಯುತ್ತಾ ಇದ್ದೇವೆ. ಅವರಿಗೆಲ್ಲಾ ನಾವು ಹೆಚ್ಚು ಸಂಪಾದನೆ ಮಾಡುತ್ತೇವೆ ಎಂಬ ಬಗ್ಗೆ ಈರ್ಷ್ಯೆ ಇರಬೇಕು. ಇದಕ್ಕಾಗಿ ಅವರು ನಿಜವಾದ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

Rating
No votes yet