ಅನ್ವೇಷಣೆ ಭಾಗ ೭

ಅನ್ವೇಷಣೆ ಭಾಗ ೭

ಎರಡು ದಿನಗಳ ನಂತರ ಮತ್ತೆ ಇನ್ಸ್ಪೆಕ್ಟರ್ ಫೋನ್ ಮಾಡಿದರು. ನನಗೆ ಫೋನ್ ರಿಸೀವ್ ಮಾಡಲು ಭಯವಾಗಿ ಅಪ್ಪನಿಗೆ ಫೋನ್ ಕೊಟ್ಟೆ. ಅಪ್ಪ ಹತ್ತು ನಿಮಿಷ ಮಾತಾಡಿ ಎಲ್ಲರನ್ನೂ ಒಮ್ಮೆ ನೋಡಿದರು. ರಿಪೋರ್ಟ್ ಬರುವ ಸುದ್ಧಿ ಗೊತ್ತಿದ್ದರಿಂದ ಜಾನಕಿ ಅಪ್ಪ ಅಮ್ಮ ಸಹ ನಮ್ಮ ಮನೆಯಲ್ಲಿ ಬಂದು ಕುಳಿತಿದ್ದರು. ಜಾನಕಿಯ ತಂದೆ ಅಪ್ಪನ ಬಳಿ ಹೋಗಿ ಏನಾಯ್ತು ಎಂದು ಕೇಳಿದ್ದಕ್ಕೆ.... ಅಪ್ಪ ತಲೆ ಅಲ್ಲಾಡಿಸಿ... ಅದು ಜಾನಕಿಯದ್ದೇ ದೇಹ ಎಂದು ದೃಢಪಡಿಸಿದ್ದಾರಂತೆ. ಬಂದು ದೇಹವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರು ಎಂದು ಹೇಳುತ್ತಿದ್ದ ಮನೆಯಲ್ಲಿ ದುಃಖದ ಕಟ್ಟೆ ಒಡೆದು ರೋದನ ಮುಗಿಲು ಮುಟ್ಟಿತ್ತು.

ಇಷ್ಟು ದಿವಸ ಬರೀ ನಾಪತ್ತೆ ಆಗಿದ್ದಾಳೆ ಎಂದುಕೊಂಡಿದ್ದ ಜಾನಕಿ ಇನ್ನು ಯಾವತ್ತು ನಮ್ಮ ಮುಂದೆ ಬರುವುದಿಲ್ಲ ಎಂಬ ಸತ್ಯವನ್ನು ಯಾರ ಕೈಲೂ ಸಹಿಸಿಕೊಳ್ಳಲು ಆಗಲಿಲ್ಲ. ಜಾನಕಿಯ ಜೀವನ ಈ ರೀತಿ ದುರಂತ ಅಂತ್ಯ ಕಂಡಿದ್ದು ಎಲ್ಲರಿಗೂ ಅತೀವ ದುಃಖ ಉಂಟು ಮಾಡಿತ್ತು. ಅಪ್ಪನಿಗೆ ಎಲ್ಲರನ್ನೂ ಸಮಾಧಾನ ಪಡಿಸುವಷ್ಟರಲ್ಲಿ ಸಾಕು ಸಾಕಾಗಿತ್ತು.

ಹೀಗೆ ಕೂತರೆ ಮುಂದಿನ ಕೆಲಸಗಳು ಆಗುವುದಿಲ್ಲ ಎಂದು ನನಗೆ ಮತ್ತು ಜಾನಕಿಯ ತಂದೆಗೆ ಹೇಳಿ ದೇಹವನ್ನು ತೆಗೆದುಕೊಂಡು ಬರಲು ಕರೆದುಕೊಂಡು ಹೋದರು. ಮನೆಯಲ್ಲಿ ಎಲ್ಲರೂ ಅಳುತ್ತಿದ್ದರೂ ನನ್ನ ಕಣ್ಣಿಂದ ಮಾತ್ರ ಒಂದು ಹನಿ ಸಹ ಉದುರಲಿಲ್ಲ. ನನ್ನ ಮನಸು ಒಂದು ರೀತಿ ಜಡವಾಗಿ ಹೋಗಿತ್ತು. ಜಾನಕಿಯ ಸಾವಿಗೆ ಕಾರಣ ಏನು ಮತ್ತು ಇತರ ವಿವರಗಳನ್ನು ತಿಳಿದುಕೊಳ್ಳಬೇಕಿತ್ತು. ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಇನ್ಸ್ಪೆಕ್ಟರ್ ನಮ್ಮನ್ನು ಬರಮಾಡಿಕೊಂಡರು. ಅಪ್ಪ ಮತ್ತು ಜಾನಕಿಯ ದೇಹ ತೆಗೆದುಕೊಂಡು ಹೊರಡೋಣ ಬಾ ಎಂದಾಗ ಅಪ್ಪ ನೀವು ಹೊರಡಿ ನಾನು ನಂತರ ಬರುತ್ತೇನೆ ಎಂದೆ.

ಅರ್ಜುನ್.... ದಯವಿಟ್ಟು ಬಾ, ಈಗ ನಿನ್ನ ಮನಸ್ಥಿತಿ ಸರಿ ಇಲ್ಲ.. ಈಗಾಗಲೇ ಜಾನಕಿಯನ್ನು ಕಳೆದುಕೊಂಡಿರುವ ನಮಗೆ ಇನ್ನೊಂದು ಆಘಾತ ತಡೆದುಕೊಳ್ಳುವ ಶಕ್ತಿ ಇಲ್ಲ. ದಯವಿಟ್ಟು ನಮ್ಮ ಜೊತೆ ಬಾ ಎಂದು ಬಲವಂತ ಮಾಡಿದರು.

ಅಪ್ಪ ನೀವೇನೂ ಹೆದರಬೇಡಿ... ನಾನೇನೂ ಮಾಡಿಕೊಳ್ಳುವುದಿಲ್ಲ. ನಿಮ್ಮ ಪಾಡಿಗೆ ನೀವು ಮುಂದಿನ ಕೆಲಸಗಳನ್ನು ಮುಂದುವರಿಸಿ. ನಾನು ಇನ್ಸ್ಪೆಕ್ಟರ್ ಜೊತೆ ಮಾತಾಡಿ ಬರುತ್ತೇನೆ ಎಂದು ಅವರನ್ನು ಕಳುಹಿಸಿ ಇನ್ಸ್ಪೆಕ್ಟರ್ ಜೊತೆ ಸ್ಟೇಷನ್ ಗೆ ಬಂದೆವು.

ಇನ್ಸ್ಪೆಕ್ಟರ್ ನನ್ನನ್ನೇ ಆಶ್ಚರ್ಯಕರವಾಗಿ ನೋಡುತ್ತಾ, ಮಿ ಅರ್ಜುನ್ Are you alright? ಎಂದು ಪ್ರಶ್ನಿಸಿದರು.

ಸರ್... ನಾನು ಸರಿಯಾಗೇ ಇದ್ದೀನಿ. ದಯವಿಟ್ಟು ನನಗೆ ಜಾನಕಿಯ ಸಾವಿನ ಕಾರಣಗಳು ತಿಳಿಸಿ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಏನೆಂದು ಬಂದಿದೆ? ಅವಳನ್ನು ಕೊಂಡಿರುವುದು ಖಂಡಿತ.... ಹೇಳಿ ನನ್ನ ಜಾನಕಿಯನ್ನು ಹೇಗೆ ಕೊಂದಿದ್ದಾರೆ?

ಅರ್ಜುನ್... ಈಗ ಏಕೆ ಆ ವಿಷಯಗಳು... ನೀವು ಮೊದಲು ಜಾನಕಿಯ ಕಾರ್ಯಗಳನ್ನು ಮುಗಿಸಿ ಬನ್ನಿ. ಆಮೇಲೆ ನಿಧಾನವಾಗಿ ಮಾತಾಡೋಣ. ನಿಮಗೆ ಏನೇನು ಮಾಹಿತಿ ಬೇಕೋ ಎಲ್ಲ ನಾನು ನೀಡುತ್ತೇನೆ.

ಸರ್... ನಾವು ಏನೇ ಮಾಡಿದರೂ ಜಾನಕಿ ಇನ್ನು ವಾಪಸ್ ಬರುವುದಿಲ್ಲ. ಆ ಸತ್ಯ ನಾನು ಅರಗಿಸಿಕೊಂಡಾಗಿದೆ. ದಯವಿಟ್ಟು ಜಾನಕಿಯ ಸಾವು ಹೇಗಾಗಿರುವುದು ಎಂಬ ಮಾಹಿತಿ ಕೊಡಿ.

ಸರಿ ಮಿ. ಅರ್ಜುನ್, ನೀವೇ ಅಷ್ಟು ದೃಢವಾಗಿರುವಾಗ ನನಗೇನೂ ಅಭ್ಯಂತರ ಇಲ್ಲ ಹೇಳಲು... ಬನ್ನಿ ವಿವರವಾಗಿ ಮಾತಾಡೋಣ.

ಅರ್ಜುನ್.... ಸಾಮಾನ್ಯವಾಗಿ ಇಂಥಹ ಪ್ರಕರಣಗಳಲ್ಲಿ ಎರಡು ಮೂರು ರೀತಿಯ ಕಾರಣಗಳಿಗೆ ಕೊಲೆ ನಡೆದಿರಬಹುದು ಎಂದು ಅನುಮಾನ ಪಡುತ್ತೇವೆ. ಮೊದಲನೆಯದಾಗಿ ದರೋಡೆ ಪ್ರಯತ್ನ, ಎರಡನೆಯದು ಪ್ರೀತಿಸಿ ಮೋಸ ಹೋದ ಹುಡುಗ ಕೊಲೆ ಮಾಡಿರಬಹುದು ಇನ್ನು ಮೂರನೆಯ ಅನುಮಾನ.... ನೀವು ತಪ್ಪು ತಿಳಿಯಬೇಡಿ... ಅತ್ಯಾಚಾರ ನಡೆಸಿ ಕೊಲೆ ಮಾಡಿರಬಹುದೆಂಬ ಅನುಮಾನ ಪಡುತ್ತೇವೆ. ಆದರೆ ಪೋಸ್ಟ್ ಮಾರ್ಟಂ ನಲ್ಲಿ ಆ ರೀತಿಯ ಯಾವುದೇ ಪ್ರಯತ್ನ ನಡೆದಿಲ್ಲ. ಆಕೆಯ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ.

ಇನ್ನು ದರೋಡೆ.... ಆಕೆಯ ಮೈಮೇಲಿದ್ದ ಒಡವೆಗಳು ಹಾಗೆಯೇ ಸುಟ್ಟು ಹೋಗಿದೆ, ಕೈಯಲ್ಲಿದ್ದ ಬಳೆಗಳು ಹಾಗೆಯೇ ಇದೆ. ಹಾಗಾಗಿ ಇದು ದರೋಡೆ ಪ್ರಕರಣವೂ ಅಲ್ಲ. ಇನ್ನು ಇರುವ ಕೊನೆಯ ಸಾಧ್ಯತೆ ಎಂದರೆ ಪ್ರೀತಿಸಿದ ಹುಡುಗ ಮೋಸ ಹೋಗಿ ದ್ವೇಷ ತೀರಿಸಿಕೊಳ್ಳಲು ಈ ಕೃತ್ಯ ನಡೆಸಿರಬಹುದು. ಆದರೆ ಅದಕ್ಕೆ ಪೂರಕವಾದ ಯಾವುದೇ ಆಧಾರ ನಮ್ಮ ಬಳಿ  ಇಲ್ಲ. ನಿಮಗೆ ಆ ರೀತಿಯ ಯಾವುದೇ ಅನುಮಾನಗಳು ಇದ್ದರೆ ಯಾರ ಮೇಲೆ ನಿಮ್ಮ ಅನುಮಾನ ಎಂದು ತಿಳಿಸಿ ನಾವು ವಿಚಾರಣೆ ನಡೆಸುತ್ತೇವೆ...

ಇನ್ಸ್ಪೆಕ್ಟರ್ ಹೇಳಿದ ಮಾತು ಕೇಳಿ ಏನೆಂದು ಹೇಳಬೇಕೋ ತಿಳಿಯಲಿಲ್ಲ. ಸರ್...ನನಗೆ ತಿಳಿದ ಮಟ್ಟಿಗೆ ಜಾನಕಿ ನನ್ನ ಬಳಿ ಯಾವುದೇ ವಿಷಯವನ್ನು ಮುಚ್ಚಿಟ್ಟಿಲ್ಲ. ಅವಳಿಗೆ ಆ ರೀತಿ ಯಾವುದೇ ಹಿನ್ನಲೆ ಇಲ್ಲ. ಇದ್ದಿದ್ದರೆ ಅವಳು ಖಂಡಿತ ನನ್ನ ಬಳಿ ತಿಳಿಸುತ್ತಿದ್ದಳು. ಇಲ್ಲ ಸರ್... ಖಂಡಿತ ಈ ಕಾರಣಕ್ಕಾಗಿ ಕೊಲೆ ನಡೆದಿರಲು ಸಾಧ್ಯವಿಲ್ಲ. ಸರ್.... ಕೊಲೆ ನಡೆದ ಜಾಗದಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲವ ಸರ್ ನಿಮಗೆ?

ಇಲ್ಲ ಅರ್ಜುನ್.... ಅವಳನ್ನು ಮುಂಚೆಯೇ ಕೊಲೆ ಮಾಡಿ ಆ ನಂತರ ಅಲ್ಲಿ ತಂದು ಸುಟ್ಟು ಹಾಕಿದ್ದಾರೆ.

ಸರ್... ದಯವಿಟ್ಟು ಆ ಜಾಗ ತೋರಿಸುತ್ತೀರಾ?

ಅರ್ಜುನ್.... ಒಂದು ಸ್ವಲ್ಪ ದಿವಸ ಇದೆಲ್ಲವನ್ನೂ ಮರೆತು ನೀವು ಸುಧಾರಿಸಿಕೊಳ್ಳಿ, ಆಮೇಲೆ ಇದರ ಬಗ್ಗೆ ಮುಂದುವರಿಯೋಣ. ಹೀಗೆ ಹೇಳುತ್ತೇನೆ ಎಂದು ತಪ್ಪು ತಿಳಿಯಬೇಡಿ. ಒಬ್ಬ ಸ್ನೇಹಿತನಾಗಿ ಈ ಮಾತನ್ನು ಹೇಳುತ್ತೇನೆ... ಈಗ ನೀವು ಏನು ಮಾಡಿದರೂ ಜಾನಕಿಯನ್ನು ಮತ್ತೆ ಜೀವಂತವಾಗಿ ವಾಪಸ್ ತರಲು ಸಾಧ್ಯವಿಲ್ಲ. ನಾವು ಈಗ ಆತುರ ಬಿದ್ದು ಈ ಕೇಸಿನ ಬಗ್ಗೆ ತನಿಖೆ ನಡೆಸಲು ಮುಂದಾದರೆ ಆರೋಪಿಗಳು ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಹಾಗೆಂದು ತಡಮಾಡಲು ಹೇಳುತ್ತಿಲ್ಲ. ಒಂದೆರೆಡು ವಾರ ಆದ ಮೇಲೆ ಮತ್ತೆ ತನಿಖೆ ಮುಂದುವರಿಸೋಣ.

ಸರ್.... ನೀವು ಹೀಗೆ ಮಾತಾಡುತ್ತೀರ ಎಂದು ನಾನು ಊಹಿಸಿರಲಿಲ್ಲ. ಸರ್, ಹೋಗಲಿ ನನಗೆ ಒಂದು ಸಹಾಯ ಮಾಡಿ.... ಆ ಜಾಗ ಒಂದನ್ನು ನನಗೆ ತೋರಿಸಿ ಸಾಕು. ಆಮೇಲೆ ನಾನು ನೀವು ಹೇಳಿದಂತೆ ಕೇಳುತ್ತೇನೆ.

Rating
No votes yet

Comments