ತೇಜಸ್ವಿ ಅವರ "ಪರಿಸರದ ಕತೆ"

ತೇಜಸ್ವಿ ಅವರ "ಪರಿಸರದ ಕತೆ"

 


ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ತೃಪ್ತಿ ಸಿಗಲಾರದು. ಅಥವಾ ನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕದಲ್ಲಿ ತೇಜಸ್ವಿಯವರು ಗುರುತಿಸಿ, ದಾಖಲಿಸಿರುವ ಪರಿಸರದ ವ್ಯಾಪಾರಗಳನ್ನು ಎಷ್ಟು ಬಾರಿ ಓದಿದರೂ ಬೇಸರವಾಗದು. ಬದಲಿಗೆ ಒಂದೊಂದು ಹೊಸ ಓದಿನಲ್ಲೂ, ಹೊಸ ಹೊಸ ಅರ್ಥಗಳು ಸ್ಪುರಿಸುವಂತಹ ಸಂದರ್ಭ ಈ ಪುಸ್ತಕದ ಓದಿನಲ್ಲಿ ಎದುರಾದೀತು.


ಮೂಲತ: ವಾರಕ್ಕೊಮ್ಮೆ ಬರೆದ ಲೇಖನಗಳ ಸಂಗ್ರಹವೇ "ಪರಿಸರದ ಕತೆ". ಇದರಲ್ಲಿ ಹಲವು ಬರಹಗಳು "ಲಂಕೇಶ್ ಪತ್ರಿಕೆ" ಯಲ್ಲಿ ಆಗಾಗ ಪ್ರಕಟವಾದವುಗಳು. ಆದ್ದರಿಂದಲೇ ಇರಬಹುದು, ಒಂದಕ್ಕೊಂದು ಅಷ್ಟೇನೂ ಸಂಬಂಧ ಹೊಂದಿರದ ಬಿಡಿ ಬರಹಗಳ ಸ್ವರೂಪ ಇಲ್ಲಿನ ಬರಹಗಳಿಗಿದೆ. ಆದರೆ, ಪರಿಸರದ ದೃಷ್ಟಿಯಿಂದ ನೋಡಿದರೆ, ಎಲ್ಲವೂ ಒಂದು ಹಂದರದೊಳಗೆ ಅಡಕವಾಗುವ ಗುಣವನ್ನು ಹೊಂದಿವೆ ಇಲ್ಲಿನ ಬರಹಗಳು. ಯಾವುದಕ್ಕೂ ಸಂಬಂಧಪಡದಂತೆ ಕಾಣುವ, ಅನುಭವ ಕಥನದ ರೂಪದಲ್ಲಿರುವ "ಕಿವಿಯೊಡನೆ ಒಂದು ದಿನ" ಲೇಖನವನ್ನೇ ತೆಗೆದುಕೊಳ್ಳಿ. ತನ್ನ ನಾಯಿಯಾದ "ಕಿವಿ"ಯ ಜೊತೆ ಲೇಖಕರು ಒಂದು ದಿನ ಕಳೆದ ಅನುಭವದ ವಿವರಗಳು ಅಲ್ಲಿವೆ. ಗೆಳೆಯರೊಡನೆ ನಡೆಸಿದ ಹಂದಿಬೇಟೆಯ ವಿವರಗಳೇ ಈ ಲೇಖನದ ತಿರುಳು. ಕಿವಿ ಎಂಬ ನಾಯಿಯನ್ನು ಮನುಷ್ಯನಿಗೆ ಸಮಾನವಾಗಿ ಪರಿಗಣಿಸುವ ವಿಚಾರ ಇಲ್ಲಿ ಮುಖ್ಯವಾಗಿ ಕಾಣಬರುತ್ತದೆ. ತೇಜಸ್ವಿಯವರು ಬೇರೊಂದು ಕಡೆ ಸಹಾ, ತನ್ನ ನಾಯಿಯನ್ನು ಮನುಷ್ಯನ ರೀತಿಯೇ ನೋಡುತ್ತಿದ್ದೆ ಎಂದು ಬರೆದುಕೊಂಡಿರುವರು. "ಹಂದಿಯನ್ನು ಹೊರಿಸಿದ್ದೇ ತಡ, ಶ್ರೀ ರಾಮ್ ಮತ್ತು ಕಿವಿ ಇಬ್ಬರೂ ಮಾಯವಾದರು. . . . . ನಾನು ವಾಪಸ್ ಹೋದಾಗ ದಾರಿಯಲ್ಲಿ ಕಿವಿ, ಶ್ರೀ ರಾಮ್ ಇಬ್ಬರೂ ಕಂಡರು. ಭೂತನ ಕಾಡು ತೋಟದ ಬೇಲಿ ಒಳಗೆ ಹಂದಿಯನ್ನು ಹೊತ್ತು ಹಾಕಿ, ಮರದ ನೆರಳಿನಲ್ಲಿ ನಿದ್ದೆ ಮಾಡುತ್ತಾ ಮಲಗಿದ್ದರು." ಇಲ್ಲಿ ಮನುಷ್ಯನನ್ನು ಮತ್ತು ಕಿವಿ ಎಂಬ ನಾಯಿಯನ್ನು ಸಂಬೋಧಿಸುವಾಗ ಸಮಾನರೀತಿಯಲ್ಲಿ ಪರಿಗಣಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ.


ಪರಿಸರದ ಕುರಿತ ಗಂಭೀರ ಸ್ವರೂಪದ ಬರಹಗಳಲ್ಲಿ ತಿಳಿಹಾಸ್ಯದ ಮೊನಚನ್ನು ಸೇರಿಸುವುದರಲ್ಲಿ ತೇಜಸ್ವಿ ಸಿದ್ಧಹಸ್ತರು. ಅವರ ಎಲ್ಲಾ ಬರಹಗಳಲ್ಲೂ ಮೊನಚಾದ ಹಾಸ್ಯ ಅಲ್ಲಲ್ಲಿ ಹಾಸುಹೊಕ್ಕಾಗಿ ಕಂಡುಬರುತ್ತದೆ. ಕೆಲವು ಲೇಖನಗಳನ್ನು ಓದಿ, ನಗು ತಡೆಯಲಾರದೆ ಬಿದ್ದು ಬಿದ್ದು ನಕ್ಕದ್ದೂ ಉಂಟು. ಅವರ ಲೇಖನಗಳಿಗೆ ತಲೆಬರಹಗಳನ್ನು ಸೂಚಿಸುವಾಗಲೂ ಹಾಸ್ಯ ಪ್ರಜ್ಞೆ ಕಾಣಬಹುದು. "ಗಾಡ್ಲಿ" ಎಂಬ ಲೇಖನವನ್ನು ತೆಗೆದುಕೊಂಡರೆ, ಗಾಡ್ಲಿ ಎಂದಾಕ್ಷಣ ಅದರ ಅರ್ಥ ಏನು ಎಂಬ ಕುತೂಹಲ ಮೂಡುವುದರ ಜೊತೆ, ಮುಗುಳ್ನಗೆಯೂ ಬಂದೀತು. "ಗಾಡ್ಲಿ" ಎಂಬುದು "ಗಾಡ್ಲಿಮ್ಯಾನ್" ಎಂಬುದರ ಹೃಸ್ವರೂಪ. ದೇವರಂಥ ಮನುಷ್ಯ ಎಂದು ಇಂಗ್ಲಿಷಿನಲ್ಲಿ, ಹುಲಿಹಂದಲು ದೊರೆ ಅವನನ್ನು ಕರೆದರಂತೆ. "ಅವರು ಕರೆದ ಈ ನಾಮಧೇಯವೇ ಪರ್ಮನೆಂಟ್ ಆಗಿ, ಹಳೆಯ ವಿವಾದಾಸ್ಪದ ಹೆಸರುಗಳಾದ, ಯಾಕುಬ್, ಜೇಕಬ್ ಗಳೆಲ್ಲ ಜನರಿಗೆ ಮರೆತೇ ಹೋದವು. ಗಾಡ್ಲಿ ಮ್ಯಾನ್ ಎನ್ನುವುದು ಕ್ರಿಯಾಪದವೋ, ನಾಮಪದವೋ, ಗುಣವಾಚಕವೋ ಎಂದೂ ಗೊತ್ತಿಲ್ಲದ ಹಳ್ಳಿಯವರು ಅದನ್ನೇ ನಾಮಪದ ಮಾಡಿ ಬಳಸಿದರು. ಅದರ ಸಂಕ್ಷಿಪ್ತ ರೂಪವೇ ಗಾಡ್ಲಿ" (ಪುಟ ೧೦೮) ಅವನು ದೇವರಂಥಾ ಮನುಷ್ಯ ಎಂಬುದಕ್ಕೆ ಪುರಾವೆಯಾಗಿ, ಮಂಗಗಳನ್ನು ಹಿಡಿಯಲು ಇಟ್ಟಿದ್ದ ದೊಡ್ಡ ಬೋನಿನೊಳಗೆ ಅವನೇ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡಿದ್ದು, ಒಂದೆರಡು ದಿನ ಕಾಡಿನ ಮಧ್ಯೆ ಅದೇ ಬೋನಿನಲ್ಲಿ ನಿರಾಹಾರಿಯಾಗಿದ್ದು, ಅರೆಜೀವ ಸ್ಥಿತಿಯಲ್ಲಿ ಕಂಡುಬಂದದ್ದು ಮೊದಲಾದ ವಿವರಗಳೂ ಓದುಗರಲ್ಲಿ ನಗೆಯುಕ್ಕಿಸದೇ ಇನ್ನೇನು ತಾನೆ ಮಾಡಿಯಾವು?


ತೇಜಸ್ವಿಯವರ ಇಲ್ಲಿನ ಲೇಖನಗಳಲ್ಲಿ ಸಾಂದರ್ಭಿಕವಾಗಿ ಬರುವ ಸಂಭಾಷಣೆಗಳು ಕುತೂಹಲ ಹುಟ್ಟಿಸುತ್ತವೆ. ತಿಳಿಹಾಸ್ಯದ ಮಿಶ್ರಣದೊಂದಿಗೆ ಸಾಗುವ ಈ ಸಂಭಾಷಣೆಗಳ ಸ್ವರೂಪವಂತೂ ಪಕ್ಕಾ ಅಥೆಂಟಿಕ್ ಆಗಿ ಕಾಣುತ್ತವೆ. "ಎಂಕ್ಟನ ಪುಂಗಿ" ಲೇಖನದಲ್ಲಿ ಹಾವು ಹಿಡಿಯುವ ಎಂಕ್ಟ ಎಂಬಾತನೊಂದಿಗೆ ಲೇಖಕರು ಮಾತನಾಡುವ ಸಂಭಾಷಣೆಗಳನ್ನು ಎಷ್ಟು ಬಾರಿ ಓದಿದರೂ ಏಕತಾನತೆ ಕಾಣದು. ಹಾವು ಹಿಡಿಯುವವರ ವರಸೆಗಳೆಲ್ಲಾ ಈ ಸಂಭಾಷಣೆಗಳಲ್ಲಿ ದಾಖಲಾಗಿವೆ. ಮಾತುಗಳ ಮಧ್ಯೆ ಹೊರಬರುವ ಹಲವು ಅಚ್ಚರಿ ಎನಿಸುವ ವಿಷಯಗಳು ಲೇಖಕರಿಗೂ ಅಚ್ಚರಿ ತರುವ ಜೊತೆ, ಓದುಗರನ್ನೂ ಅಚ್ಚರಿಯ ಲೋಕಕ್ಕೆ ಕೊಂಡೊಯ್ಯುತ್ತವೆ. ಎಂಕ್ಟನು ಸಾಕಿದ್ದ ದಾಸರ ಹಾವು ಅವನನ್ನೇ ಒತ್ತಿ ಹಿಡಿದು ಸಾಯಿಸುವ ಹಂತಕ್ಕೆ ಬಂದ ವಿವರಗಳು ದಾಖಲಾಗುವ ಜೊತೆಗೇನೆ, ಎಂಗ್ಟನ ಹೆಂಡತಿಯು ಆಕಸ್ಮಿಕವಾಗಿ ಸತ್ತ ಹಿನ್ನೆಲೆಯಲ್ಲಿ ದಾಸರಹಾವಿನ ಕೈವಾಡವಿರಬಹುದೇ ಎಂಬ ಶಂಕೆಯೂ ಮೂಡುತ್ತದೆ. ಲೇಖನದ ಪೂರ್ತಿ ತಿಳಿಹಾಸ್ಯದ ಹೊನಲೇ ತುಂಬಿರುವ ಈ ಬರಹವು, ದಾಸರಹಾವಿನಿಂದ ಒದಗಿರಬಹುದಾದ ಅಪಾಯದ ವಾಸ್ತವದ ಎದುರು ದುರಂತ ಛಾಯೆಯನ್ನು ಓದುಗರಲ್ಲಿ ಮೂಡಿಸಿದರೂ ಅಚ್ಚರಿ ಇಲ್ಲ.


ನಮ್ಮ ಸುತ್ತಲಿನ ಪರಿಸರದ ವ್ಯಾಪಾರಗಳಲ್ಲಿ ಇಂದಿಗೂ ಅದೆಷ್ಟೋ ವಿವರಗಳನ್ನು ನಾವಿನ್ನೂ ಪೂರ್ತಿಯಾಗಿ ಅರಿತಿಲ್ಲ. "ಪರಿಸರದ ಕತೆ" ಯಲ್ಲಿ ಇರುವ ಒಂದು ಬರಹ "ಮೂಲಿಕೆ ಬಳ್ಳಿಯ ಸುತ್ತ" ದಲ್ಲಿ ಲೇಖಕರು ಅಚ್ಚರಿಯಿಂದ ದಾಖಲಿಸುವ ವಿವರಗಳು, ಆ ಬಳ್ಳಿಯ ರಹಸ್ಯಮಯ ಅಸ್ತಿತ್ವವನ್ನು ಮತ್ತು ಹಳ್ಳಿಯವರು ಆ ಬಳ್ಳಿಯ ಸುತ್ತಲೂ ಹಬ್ಬಿಸಿರುವ ಉಹಾಪೋಹಗಳ ಕೋಟೆಯನ್ನೇ ಬಿಚ್ಚಿಡುತ್ತದೆ. ವೈದ್ಯರು ವಾಸಿಮಾಡಲಾಗದ ರೋಗಗಳನ್ನು ಮೂಲಿಕೆ ಬಳ್ಳಿ ವಾಸಿ ಮಾಡುತ್ತದೆಂಬ ಹಳ್ಳಿ ಜನರ ಮೂಢ ನಂಬಿಕೆಯೋ, ನಂಬಿಕೆಯೋ ಒಂದೆಡೆಯಾದರೆ, ಮೂಲಿಕೆ ಬಳ್ಳಿಯಿಂದ ಹಲವು ರೋಗಗಳು ನಿಜಕ್ಕೂ ವಾಸಿಯಾಗುವ ವಾಸ್ತವಗಳು ಇನ್ನೊಂದೆಡೆ! ಅದರ ಗಡ್ಡೆಯ ಚೂರನ್ನು ಕುತೂಹಲಕ್ಕೆಂದು ಲೇಖಕರು ತಿಂದರಂತೆ. ಅದರಿಂದ ಆದ ಪರಿಣಾಮ ಅವರಿಗೇ ಅಚ್ಚರಿ ತಂದಿತು - " ನನಗೆ ಬಲಗಾಲು ಹಿಮ್ಮಡಿ ಅನೇಕ ದಿನಗಳಿಂದ ನೋಯುತ್ತಿತ್ತು. ಹೆಚ್ಚಿಗೆ ದೂರ ನಡೆದರೆ ಸಾಕು, ಕುಂಟಿಕೊಂಡೇ ನಡೆಯಬೇಕಿತ್ತು. ಇದರೊಡನೆ, ಈಚೆಗೆ ಹಿಮ್ಮಡಿ ಎಲುಬಿನ ಪಕ್ಕ ಒಂದು ದಪ್ಪ ಗಡ್ಡೆ ಎದ್ದಿತ್ತು. ಡಾಕ್ಟರು ಅದನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬೇಕೆಂದು ಹೇಳಿದ್ದರು. . . . . . ಆ ಗಡ್ಡೆ ಚೂರು ತಗೊಂಡು, ತಿಂದ ಮೇಲೆ ಎರಡು ದಿನಕ್ಕೆ ನೋಡುತ್ತೇನೆ. ಆ ಗಡ್ಡೆ ಎಲ್ಲಿತ್ತೆಂದು ಪತ್ತೆ ಮಾಡಲಾಗದಂತೆ ಮಂಗ ಮಾಯವಾಗಿತ್ತು. ಇದು ಮೂಲಿಕೆಬಳ್ಳಿಯ ಪ್ರಭಾವ ಎಂದು ಹೇಗೆ ಖಚಿತವಾಗಿ ಹೇಳಲಿ? ಕೇವಲ ಆಕಸ್ಮಿಕ ಇದ್ದರೂ ಇರಬಹುದು. ಅಥವಾ ಮೂಲಿಕೆ ಬೀಳಿನದೇ ಪ್ರಭಾವ ಎಂದಾದರೂ, ದೇಹದಲ್ಲಿ ಉಂಟಾಗುವ ಗಡ್ಡೆಗಳಲ್ಲಿ ಅನೇಕ ತರದವು ಇವೆ. ಇವುಗಳಲ್ಲಿ ಕೆಲವು ಗಡ್ಡೆಗಳ ಮೇಲೆ ಮಾತ್ರ ಮೂಲಿಕೆ ಬಳ್ಳಿ ಪ್ರಭಾವ ಬೀರಬಹುದು. ಇವುಗಳನ್ನೆಲ್ಲಾ ಯಾರು ಸಂಶೋಧಿಸುವರು?" (ಪುಟ ೧೨೨) ಈ ರೀತಿಯ ಜಿಜ್ಞಾಸೆಯನ್ನು ಓದುಗರಲ್ಲೂ ಹುಟ್ಟುಹಾಕುವ ಈ ಪುಸ್ತಕದ ಬರಹಗಳು, ಕನ್ನಡ ಸಾಹಿತ್ಯದಲ್ಲೇ ಅನನ್ಯ. (ಪರಿಸರದ ಕತೆ - ಪೂರ್ಣಚಂದ್ರ ತೇಜಸ್ವಿ. ಇಪ್ಪತ್ತೊಂದನೆಯ ಮುದ್ರಣ - ೨೦೧೦. ಪ್ರಕಾಶಕರು : ಪುಸ್ತಕ ಪ್ರಕಾಶನ, ಹ್ಯಾಂಡ್ ಪೋಸ್ಟ್, ಮೂಡಿಗೆರೆ)     - ಚಿತ್ರ ಕೃಪೆ: ಸಬಿಸಬಿ.ಕಾಮ್


 


 


 


 


 


 


 


 


 

Rating
Average: 4 (1 vote)

Comments