ದೂರದ ತೀರ...

ದೂರದ ತೀರ...

ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ್ಕಿದೆ. ಆಮೇಲೆ ಹೇಗೋ ಮಾಡಿ ಅಲ್ಲೇ ಇನ್ನೊಂದು ಕಂಪನಿಯಲ್ಲಿ ಕೆಲಸ ಹುಡುಕಿಕೊಂಡರೆ ಅಲ್ಲೇ ಖಾಯಂ ಆಗಿ ಸೆಟಲ್ ಆಗಿಬಿಡಬಹುದು... ಕೈ ತುಂಬಾ ಸಂಬಳ, ಒಳ್ಳೆಯ ವಾತಾವರಣ ಜೀವನ ಸೂಪರ್ ಆಗಿರತ್ತೆ ಎಂದು ನನ್ನದೇ ಆದ ಯೋಜನೆಗಳನ್ನು ಹಮ್ಮಿಕೊಂಡು ಊರಿನಲ್ಲಿ ಎಲ್ಲರಿಗೂ ಹೇಳಿ ಬೆಂಗಳೂರಿಗೆ ಹೊರಟಿದ್ದೆ. ಇನ್ನು ಮತ್ತೆ ಈ ಊರಿಗೆ ಯಾವಾಗ ಬರುವುದೋ ಗೊತ್ತಿಲ್ಲ ಎಂದು ಬೇಜಾರು ಆಗುತ್ತಿದ್ದರು ಅಲ್ಲಿ ದೂರದ ಅಮೇರಿಕಾ ಕೈ ಬೀಸಿ ಕರೆಯುತ್ತಿರುವ ಸಂತೋಷ ಆ ಬೇಜಾರನ್ನು ದೂರ ಮಾಡಿತ್ತು.
ಬಸ್ಸು ಊರನ್ನು ಬಿಟ್ಟು ಬೆಂಗಳೂರಿಗೆ ಹೋರಾಡಲು ಸಿದ್ಧವಾಗಿತ್ತು. ಅಷ್ಟರಲ್ಲಿ ಪಕ್ಕದ ಸೀಟಿನಲ್ಲಿ ಪರಿಚಯದ ವ್ಯಕ್ತಿಯೊಬ್ಬರು ಬಂದು ಕುಳಿತರು. ನನ್ನನ್ನು ನೋಡಿ ಏನಪ್ಪಾ ವೀಕೆಂಡ್ ಅಂತ ಊರಿಗೆ ಬಂದಿದ್ಯಾ? ಮತ್ತೆ ಮುಂದಿನ ವೀಕೆಂಡ್ ಗೆ ಇಲ್ಲಿಗೆ ಬರೋದಾ ಎಂದು ಕೇಳಿದರು..ನಾನು ಅವರ ಕಡೆ ನೋಡಿ ನಗುತ್ತಾ ಇಲ್ಲ ಅಂಕಲ್ ಮತ್ತೆ ಇನ್ಯಾವಾಗ ಈ ಕಡೆ ಬರೋದು ಗೊತ್ತಿಲ್ಲ... ನಾನು ಅಮೇರಿಕಾಗೆ ಹೊರಟೆ ನಾಳೆ.
ಅವರು ಆಶ್ಚರ್ಯಭರಿತರಾಗಿ ಏನು ಅಮೆರಿಕಾಗ?? ಎಷ್ಟು ದಿನಕ್ಕೆ ಹೋಗ್ತಿದೀಯಾ? ಒಬ್ಬನೇ ಹೋಗ್ತಿದೀಯಾ ಅಥವಾ ಕುಟುಂಬ ಸಮೇತವಾಗಿ ಹೋಗ್ತಿದೀಯಾ ಎಂದು ಕೇಳಿದರು.  ಹೌದು ಅಂಕಲ್...ದಿನ ಅಲ್ಲ ವರ್ಷಕ್ಕೆ ಹೋಗ್ತಿರೋದು...ಸಧ್ಯಕ್ಕೆ ಎರಡು ವರ್ಷ ಆಮೇಲೆ ಅಲ್ಲೇ ಇನ್ನೊಂದು ಕೆಲಸ ನೋಡಿಕೊಂಡು ಎಲ್ಲೇ ಸೆಟಲ್ ಆಗುವ ಆಲೋಚನೆ ಇದೆ. ಅದಕ್ಕೆ ಫ್ಯಾಮಿಲಿ ಸಮೇತ ಹೋಗ್ತಿದೀನಿ..
ಒಹ್ ಹೌದಾ ಮತ್ತೆ ನಿಮ್ಮಪ್ಪ ನನ್ನ ಬಳಿ ಹೇಳಲೇ ಇಲ್ಲ ಇದರ ಬಗ್ಗೆ. ಅವರು ಯಾವಾಗ ಬರ್ತಿದಾರೆ? ಅಯ್ಯೋ ಇಲ್ಲ ಅಂಕಲ್.. ನಾನು ನನ್ನ ಹೆಂಡತಿ ಮತ್ತೆ ಮಗು ಮಾತ್ರ ಹೋಗ್ತಿರೋದು.. ಅಪ್ಪ ಅಮ್ಮ ಬರ್ತಿಲ್ಲ...
ಅಲ್ಲಪ್ಪಾ ಮತ್ತೆ ಫ್ಯಾಮಿಲಿ ಜೊತೆ ಅಂದೇ... ಹಾ ಅಂಕಲ್ ಅದೇ ಹೇಳಿದ್ದು ಫ್ಯಾಮಿಲಿ ಜೊತೇನೆ... ನಾನು ಹೆಂಡ್ತಿ ಮತ್ತೆ ಮಗು...!!
ಓಹ್ ಹಾಗೋ..ಅಲ್ಲಪ್ಪಾ ಮತ್ತೆ ನೀನು ಅಲ್ಲೇ ಸೆಟಲ್ ಆಗಿಬಿಟ್ಟರೆ ಈ ವಯಸ್ಸಲ್ಲಿ ನಿಮ್ಮ ಅಪ್ಪ ಅಮ್ಮನ ಗತಿ ಏನೋ? ಮೊದಲೇ ನಿಮ್ಮಮ್ಮಂಗೆ ಅವಾಗವಾಗ ಹುಷಾರಿರಲ್ಲ. ನಾಳೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಯಾರೋ ನೋಡ್ತಾರೆ..
ಅಂಕಲ್ ನೀವು ಅದರ ಬಗ್ಗೆ ಏನೂ ಯೋಚನೆ ಮಾಡಬೇಡಿ, ಇಬ್ಬರ ಹೆಸರಲ್ಲೂ ಒಂದೊಂದು ಇನ್ಶೂರೆನ್ಸ್ ಮಾಡ್ಸಿದೀನಿ, ಮತ್ತೆ ಪ್ರತಿ ತಿಂಗಳೂ ತಪ್ಪದೆ ದುಡ್ಡು ಕಳಿಸ್ತೀನಿ, ಆಮೇಲೆ ಪ್ರತಿ ದಿನ ಫೋನ್ ಮಾಡಿ ಅವರ ಆರೋಗ್ಯ ವಿಚಾರಿಸ್ತೀನಿ.. ಇದಕ್ಕಿಂತ ಹೆಚ್ಚು ಇನ್ನೇನು ಮಾಡಬೇಕು ಹೇಳಿ ಎಂದು ಗರ್ವದಿಂದ ಹೇಳಿದೆ. ಅಷ್ಟಕ್ಕೂ ನಮ್ಮಪ್ಪ ಅಮ್ಮನಿಗೆ ಯಾವುದೇ ಚಿಂತೆ ಇಲ್ಲ ನಾನು ಹೋಗುತ್ತಿರುವುದಕ್ಕೆ... ಏಕೆಂದರೆ ಅವರೇ ಸಂತೋಷದಿಂದ ಕಳಿಸಿ ಕೊಟ್ಟರು.
ಅಲ್ಲಪ್ಪಾ ಅವರೇನೋ ಸಂತೋಷದಿಂದ ಕಳಿಸಿಕೊಟ್ಟರು... ಯಾಕೆ ಹೇಳು, ಯಾವ ತಂದೆ ತಾಯಿ ತಾನೇ ತಮ್ಮ ಮಕ್ಕಳು ಸಂತೋಷದಿಂದ ಇರಬಾರದು ಎಂದು ಭಾವಿಸುತ್ತಾರೆ. ಮಕ್ಕಳ ಸಂತೋಷವೇ ಅವರ ಸಂತೋಷ ಅಲ್ಲವೇ?? ಆದರೆ ಮಕ್ಕಳಾಗಿ ನೀವು ಸ್ವಲ್ಪ ಯೋಚಿಸಬೇಕು ಅಲ್ಲವೇ... ಅದೂ ಒಬ್ಬನೇ ಮಗ ಬೇರೆ ನೀನು... ಈ ವಯಸ್ಸಲ್ಲಿ ಅವರನ್ನು ಬಿಟ್ಟು ಹೋದರೆ ಅವರ ಗತಿ ಏನು? ನೀನು ಕಳಿಸೋ ದುಡ್ಡಿನಿಂದ ಅವರ ಜೀವನ ನಡೆಯುತ್ತದೆ ಅಷ್ಟೇ ಆದರೆ ನೀನಿದ್ದಷ್ಟು ಸಂತೋಷ ನೀನು ಕಳಿಸೋ ದುಡ್ಡಿನಲ್ಲಿ ಇರಲ್ಲ. ಇನ್ನು ನೀನು ಪ್ರತಿದಿನ ಕರೆ ಮಾಡಬಹುದು.. ಆದರೆ ಪಕ್ಕದಲ್ಲಿ ಕುಳಿತ ಹಾಗಾಗುವುದಿಲ್ಲ.. ಇನ್ನು ಇನ್ಶೂರೆನ್ಸ್...ಮನುಷ್ಯ ಇದ್ದಾಗ ಪ್ರಯೋಜನಕ್ಕೆ ಬಾರದೆ ಇಲ್ಲದೇ ಇದ್ದಾಗ ಬಂದರೆ ಏನು ಪ್ರಯೋಜನ... ಹೋಗಲಿ ಅದಕ್ಕೆ ಓಡಾಡುವುದಕ್ಕೆ ಆದರೂ ಮೈಯಲ್ಲಿ ಶಕ್ತಿ ಇರುವವರು ಒಬ್ಬರು ಬೇಡವೇ...
ನೋಡು ನೀನೇನೂ ಹೋಗಬೇಡ ಎನ್ನುತ್ತಿಲ್ಲ, ಹೋಗು ದುಡಿ, ದುಡ್ಡು ಮಾಡಿಕೊಂಡು ಮತ್ತೆ ಇಲ್ಲಿ ಬಂದು ಅಪ್ಪ ಅಮ್ಮನ ಆರೋಗ್ಯ ನೋಡಿಕೋ.... ಆಗ ಅವರಿಗೂ ಸ್ವಲ್ಪ ನೆಮ್ಮದಿ ಉಂಟಾಗುತ್ತದೆ. ಅದು ಬಿಟ್ಟು ಅಲ್ಲೇ ಸೆಟಲ್ ಆಗುವ ಯೋಚನೆ ಮಾಡಬೇಡ. ಕಡೆಗಾಲದಲ್ಲಿ ಅವರಿಗೂ ಆಸೆ ಇರಲ್ಲವೇ ಮಗ ಸೊಸೆ ಮಕ್ಕಳ ಜೊತೆ ಇರಬೇಕೆಂದು.... ಈಗಲಾದರೂ ಸ್ವಲ್ಪ ಯೋಚನೆ ಮಾಡಿ ಸ್ವಲ್ಪ ನಿನ್ನ ಆಲೋಚನೆ ಬದಲಿಸಪ್ಪ...
ಅವರ ಮಾತು ಕೇಳಿ ಮನಸಿನಲ್ಲಿ ಕೆಟ್ಟ ಕೋಪ ಬಂದರೂ ಅದನ್ನು ಆಚೆ ತೋರ್ಪಡಿಸಿಕೊಳ್ಳದೆ... ಅಂಕಲ್ ನಿಮ್ಮ ಮಗನೂ ವಿದೇಶದಲ್ಲಿ ಇದ್ದಾನಲ್ಲವೇ... ಅವನು ಹೋಗಿ ಎಷ್ಟು ವರ್ಷ ಆಯ್ತು... ನಿಮಗೂ ಅವನು ಒಬ್ಬನೇ ಮಗನಲ್ಲವೇ? ಈಗ ನೀವೂ ಆರಾಮಾಗಿ ಇಲ್ಲವೇ? ನನ್ನ ಮಾತುಗಳಿಂದ ಇನ್ನು ಅವರು ನನ್ನ ಬಳಿ ಮಾತಾಡುವುದಿಲ್ಲ ಎಂದುಕೊಂಡು ಅವರ ಉತ್ತರಕ್ಕಾಗಿ ಕಾದೆ...
ಅವರು ಒಂದು ನಿಮಿಷದ ದೀರ್ಘ ಮೌನದ ನಂತರ ಒಂದು ನಿಟ್ಟುಸಿರು ಬಿಟ್ಟು ತಮ್ಮ ಕನ್ನಡಕವನ್ನು ತೆಗೆದು ನನ್ನೆಡೆಗೆ ನೋಡಿ ಹೌದಪ್ಪ ನನ್ನ ಮಗನ ನಿರ್ಧಾರದಿಂದ ನಾವು ಅನುಭವಿಸುತ್ತಿರುವ ಸಂಕಟ ನೋವು ನಿನ್ನ ತಂದೆ ತಾಯಿಗೂ ಬರಬಾರದು ಎಂದೇ ನಾನು ಈ ಮಾತನ್ನು ಹೇಳಿದ್ದು. ನಾವು ಅನುಭವಿಸುತ್ತಿರುವ ನರಕ ಯಾವ ಶತೃಗೂ ಬೇಡ.
ಅವನು ನಮ್ಮನ್ನು ಬಿಟ್ಟು ೮ ವರ್ಷ ಆಯ್ತು, ಇದುವರೆಗೂ ಮೂರೋ ನಾಲ್ಕು ಬಾರಿ ಬಂದಿದಾನೆ ಅಷ್ಟೇ.. ಅದೂ ನಮ್ಮನ್ನು ನೋಡಲೆಂದೇ ಬಂದಿದ್ದಲ್ಲ... ಆಫೀಸಿನ ಕೆಲಸದ ಮೇಲೆ ಬಂದಾಗ ಹಾಗೆ ಬಂದು ನಮ್ಮನ್ನು ನೋಡಿ ಹೋಗಿದ್ದು ಅಷ್ಟೇ... ನಾನು ಗಂಡಸು ಇದೆಲ್ಲ ಏನೂ ಅನಿಸದೇ ಇರಬಹುದು... ಅನಿಸಿದರೂ ಆ ನೋವನ್ನು ಅದುಮಿಟ್ಟುಕೊಳ್ಳಬಹುದು... ಆದರೆ ತಾಯಿಯ ಹೃದಯ ಹಾಗಲ್ಲಪ್ಪಾ... ಒಳಗೇ ಕೊರಗಿ ಕೊರಗಿ ಹಣ್ಣಾಗಿ ಹೋಗಿದ್ದಾಳೆ.  ಇಲ್ಲಿಂದ ಹೋದವನು ಮೊದಮೊದಲು ಪ್ರತೀ ದಿನ ಫೋನ್ ಮಾಡುತ್ತಿದ್ದವನು ನಂತರ ವಾರಕ್ಕೊಂದು ದಿನ ಆಯ್ತು, ನಂತರ ತಿಂಗಳಿಗೆ ಒಂದು ದಿನ ಆಯ್ತು, ಬರಬರುತ್ತಾ ಅದೂ ಇಲ್ಲದೆ ಯಾವಾಗಲೋ ಒಮ್ಮೊಮ್ಮೆ ಮಾಡಲು ಶುರು ಮಾಡಿದ. ಆದರೆ ನಮಗೆ ಮನಸು ಕೇಳಲ್ವಲ್ಲ ಅದಕ್ಕೆ ನಾವೇ ಪದೇ ಪದೇ ಫೋನ್ ಮಾಡುತ್ತಿರುತ್ತೇವೆ. ಆಗಲೂ ಸರಿಯಾಗಿ ಮಾತಾಡಲ್ಲ... ಸೊಸೆ ಮಕ್ಕಳ ಬಗ್ಗೆ ನಾವು ಮಾತಾಡಲ್ಲ... ಏಕೆಂದರೆ ಸ್ವಂತ ಮಗನಾದವನಿಗೆ ಏನೂ ಅನಿಸದೇ ಇದ್ದದ್ದು ಇನ್ನು ಹೊರಗಿನಿಂದ ಬಂದವಳಿಗೆ ಹೇಗೆ ತಾನೇ ಆ ಭಾವನೆಗಳು ಮೂಡುತ್ತದೆ...
ವಯಸಾಗುತ್ತ ನಮ್ಮ ಆರೋಗ್ಯ ನಮ್ಮ ಕೈಲಿರುವುದಿಲ್ಲ... ಯಾವಾಗ ಏನಾಗುತ್ತದೋ ಎಂದು ಭಯವಾಗುತ್ತದೆ... ಅವಳಿಗೆ ಆರೋಗ್ಯ ಸರಿ ಇಲ್ಲದಿದ್ದರೆ ನಾನು ಆರೈಕೆ ಮಾಡುತ್ತೇನೆ, ನನಗೆ ಆರೋಗ್ಯ ಸರಿ ಇಲ್ಲದಿದ್ದರೆ ಅವಳು ಆರೈಕೆ ಮಾಡುತ್ತಾಳೆ... ಒಮ್ಮೊಮ್ಮೆ ಇಬ್ಬರಿಗೂ ಒಟ್ಟಿಗೆ ಆರೋಗ್ಯ ಕೆಡುತ್ತದೆ... ಆಗ ನಾವು ಯಾರ ಮೇಲೆ ಆಧಾರವಾಗುವುದು... ನಾವೇನೂ ಸದಾಕಾಲ ಇಲ್ಲೇ ಇರಿ ಎಂದು ಹೇಳಲ್ಲ... ಆದರೆ ನಮ್ಮ ಕೊನೆಗಾಲದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಸಮಯಕ್ಕೆ ಸರಿಯಾಗಿ ಬರುವ ಅಂತರದಲ್ಲಾದರೂ.... ಎನ್ನುವಷ್ಟರಲ್ಲಿ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು.
ಮುಂದಿನ ಪ್ರಯಾಣ ಪೂರ್ತಿ ಅವರು ಮೌನವಾಗಿ ಕಳೆದರು... ನಾನು ನಿದ್ರೆ ಮಾಡೋಣ ಎಂದುಕೊಂಡರೆ ಯಾಕೋ ಅವರು ಆಡಿದ ಮಾತುಗಳು ನಿದ್ರೆ ಮಾಡಲು ಬಿಡಲಿಲ್ಲ. ನನ್ನ ಯೋಚನೆಗಳು ನನ್ನನ್ನು ಬಾಲ್ಯಕ್ಕೆ ಕರೆದೊಯ್ದವು.. ಹಿಂದೊಮ್ಮೆ ಅಪ್ಪ ಯಾರ ಬಳಿಯೋ ಮಾತಾಡುತ್ತಿದ್ದ ಮಾತುಗಳು ನೆನಪಿಗೆ ಬಂದವು... ಒಮ್ಮೆ ಅಪ್ಪ ನಾನು ಅಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಗ ನನ್ನ ಪಾಡಿಗೆ ನಾನು ಆಟದಲ್ಲಿ ತೊಡಗಿದ್ದೆ ಅಮ್ಮ ಮತ್ತು ಅಪ್ಪ ಮಾತುಕತೆಯಲ್ಲಿ ತೊಡಗಿದ್ದರು ಅಚಾನಕ್ ಆಗಿ ಅವರು ಆಡಿದ ಮಾತುಗಳು ನನ್ನ ಕಿವಿಗೆ ಬಿದ್ದವು.
ಅಪ್ಪನನ್ನು ಅವರು ಕೇಳಿದರು... ಏನಪ್ಪಾ ಒಂದಕ್ಕೆ ಸಾಕ... ಅವನಿಗೆ ಇನ್ನೊಬ್ಬ ತಮ್ಮನನ್ನೋ ಅಥವಾ ತಂಗಿಯನ್ನೋ ಕೊಡಬಾರದೇ... ಅವನಿಗೂ ಸಂಬಂಧಗಳ ಬೆಲೆ ತಿಳಿಯುತ್ತದೆ, ಮತ್ತೆ ನಿನಗೂ ವಯಸಾದ ಕಾಲದಲ್ಲಿ ಒಬ್ಬ ಇಲ್ಲದಿದ್ದರೆ ಇನ್ನೊಬ್ಬರು ಯಾರಾದರೂ ಸಹಾಯಕ್ಕೆ ಆಗುತ್ತಾರೆ ಎಂದಾಗ ಅಪ್ಪ ಅವರಿಗೆ ಕೊಟ್ಟ ಉತ್ತರ ಆಗ ನನಗೆ ಏನೂ ಅನಿಸಿರಲಿಲ್ಲ... ಆದರೆ ಈಗ ಬಹಳ ಕಾಡುತ್ತಿದೆ.. ನೋಡಿ ನನಗೆ ಇನ್ನೊಂದು ಮಗು ಮಾಡಿಕೊಳ್ಳುವುದು ದೊಡ್ಡದಲ್ಲ... ಆದರೆ ನಾಳೆ ಅವರಿಬ್ಬರಿಗೂ ಹೊಂದಾಣಿಕೆ ಆಗದಿದ್ದರೆ ಏನು ಮಾಡುವುದು. ಅವರನ್ನು ಸಂಭಾಳಿಸುವುದರಲ್ಲೇ ಅರ್ಧ ಜೀವನ ಕಳೆದು ಹೋಗುತ್ತದೆ...ಮತ್ತೆ ನೀವಂದ ಹಾಗೆ ಕಡೆಗಾಲದಲ್ಲಿ ಯಾರಾದರೂ ಒಬ್ಬರು ಆಗುತ್ತಾರೆ ಎಂದಿರಲ್ಲ ಅದಕ್ಕೆ ನೀವು ಖಾತ್ರಿ ಕೊಡಬಲ್ಲಿರಾ?? ಸಾಧ್ಯ ಇಲ್ಲ ಅಲ್ಲವೇ... ಅದಕ್ಕೆ ಏನು ಮಾಡುತ್ತೀವೋ ಒಬ್ಬನಿಗೆ ಮಾಡೋಣ, ನಮ್ಮ ಪ್ರೀತಿಯನ್ನು ಹಂಚದೆ ಅದನ್ನು ಒಬ್ಬನಿಗೇ ಕೊಡೋಣ... ಇನ್ನು ನಮ್ಮನ್ನು ನೋಡಿಕೊಳ್ಳುವುದು ಅವನಿಗೆ ಬಿಟ್ಟದ್ದು, ಆ ಸಮಯಕ್ಕೆ ಅವನಿಗೆ ಒಳ್ಳೆ ಬುದ್ಧಿ ಇದ್ದಾರೆ ನಮ್ಮನ್ನು ನೋಡಿಕೊಳ್ಳುತ್ತಾನೆ ಇಲ್ಲದಿದ್ದರೆ ನಮ್ಮ ಹಣೆಬರಹ ಇಷ್ಟೇ ಎಂದು ಸುಮ್ಮನಾಗುವುದು...
ಅವರು ಅಂದು ಹೇಳಿದಂತೆಯೇ ನನಗೆ ಯಾವುದೇ ಕೊರತೆ ಬರದಂತೆ ನೋಡಿಕೊಂಡರು, ಪ್ರತಿಯೊಂದು ವಿಷಯದಲ್ಲೂ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟು ಬೆಳೆಸಿದರು. ಅವರಿಬ್ಬರೂ ಪ್ರೀತಿಯ ಆಗರ... ಎಂದೂ ನನಗೆ ಅದರ ಕೊರತೆ ಬರದಂತೆ ಜೋಪಾನವಾಗಿ ಬೆಳೆಸಿದರು... ಕೊನೆಗೆ ನನ್ನ ಮದುವೆಯ ವಿಷಯದಲ್ಲೂ ನಾನು ಇಷ್ಟ ಪಟ್ಟ ಹುಡುಗಿಯನ್ನು ಯಾವುದೇ ವಿರೋಧವಿಲ್ಲದೆ ಮದುವೆ ಮಾಡಿಕೊಟ್ಟರು... ಇವತ್ತು ನಾನು ಈ ಸ್ಥಿತಿಯಲ್ಲಿ ಇದ್ದೇನೆ ಎಂದರೆ ಅವರೇ ಕಾರಣ... ಆದರೆ ಇಂದು ನಾನು ತೆಗೆದುಕೊಂಡಿರುವ ನಿರ್ಧಾರ...
ಅಷ್ಟರಲ್ಲಿ ಬಸ್ಸು ಬೆಂಗಳೂರಿಗೆ ಬಂದಿತು, ನನ್ನ ಪಕ್ಕದಲ್ಲಿದ್ಡ ಅಂಕಲ್ ಆಗಲೇ ಇಳಿದು ಹೋಗಿದ್ದರು. ಬಹುಶಃ ನನ್ನ ಮೇಲಿನ ಬೇಸರಕ್ಕೆ ನನಗೆ ಹೇಳದೆ ಹೋಗಿದ್ದರು ಅನಿಸುತ್ತದೆ. ಅಷ್ಟರಲ್ಲಾಗಲೇ ಪತ್ನಿ ಫೋನ್ ಮಾಡಿದ್ದಳು.. ನಾನು ಬಸ್ಸಿನಲ್ಲಿ ನಡೆದ ವಿಷಯವನ್ನು ಅಲ್ಲೇ ಮರೆತು ಮನೆಗೆ ಬಂದೆ. ಬರುತ್ತಿದ್ದ ಹಾಗೆ ಸ್ನಾನ ಮಾಡಿ ಪ್ಯಾಕಿಂಗ್ ಮಾಡಲು ಶುರು ಮಾಡಿದೆ.
ಸಂಜೆ ಮನೆಯಿಂದ ಹೊರಟು ವಿಮಾನ ನಿಲ್ದಾಣಕ್ಕೆ ಬಂದು ಸೆಕ್ಯೂರಿಟಿ ಚೆಕ್ ಎಲ್ಲ ಮುಗಿಸಿ ಕುಳಿತಿದ್ದಾಗ ಪಕ್ಕದಲ್ಲಿ ಹೆಂಡತಿ ಮತ್ತು ಮಗ ಏನೇನೋ ಮಾತಾಡುತ್ತಿದ್ದರು. ಹೆಂಡತಿ ಮಗನನ್ನು ಕೇಳುತ್ತಿದ್ದಳು,,ನೀನು ದೊಡ್ಡವನಾದ ಮೇಲೆ ಏನು ಮಾಡುತ್ತೀಯಾ ಎಂದು... ಅದಕ್ಕವನು ತನ್ನ ಮುದ್ದಾದ ಮಾತಿನಲ್ಲಿ ನಾನು ಫಾರಿನ್ ಗೆ ಹೋಗುತ್ತೀನಿ ಎಂದು ಹೇಳಿದ. ಅದಕ್ಕೆ ಮತ್ತೆ ಅವಳು ನೀನೊಬ್ಬನೇ ಹೋಗ್ತೀಯೋ ಅಥವಾ ಅಪ್ಪ ಅಮ್ಮನ್ನ ಕರ್ಕೊಂಡು ಹೋಗ್ತೀಯೋ... ಎಂದು ಕೇಳಿದ್ದಕ್ಕೆ ಅವನು ಸ್ವಲ್ಪ ಹೊತ್ತು ಯೋಚಿಸುವಂತೆ ತನ್ನ ಕೈಯನ್ನು ಗಲ್ಲಕ್ಕೆ ಇಟ್ಟುಕೊಂಡು ಇಲ್ಲ ಎಂದ. ಕೂಡಲೇ ಅವನಮ್ಮ ಸಿಟ್ಟಾದಂತೆ ನಟಿಸಿ ನನ್ನ ಕಡೆ ನೋಡಿ, ನೋಡ್ರೀ ಇವನು ನಮ್ಮನ್ನು ಬಿಟ್ಟು ಫಾರಿನ್ ಗೆ ಹೋಗ್ತಾನಂತೆ ಎಂದು ಹೇಳಿದಳು... ನಾನು ಬಾಯ್ತೆರೆಯುವಷ್ಟರಲ್ಲಿ ನನ್ನ ಮಗ ಮುಂದೆ ಬಂದು... ಪಪ್ಪಾ ಕರೆಕ್ಟ್ ಅಲ್ವಾ ಪಪ್ಪಾ ನೀನು ನಿನ್ನ ಅಪ್ಪಾ ಅಮ್ಮನ್ನ ಕರ್ಕೊಂಡು ಬರ್ತಿಲ್ಲಾ ಅಲ್ವಾ... ನಾನು ಅದೇ ರೀತಿ ಅಮ್ಮಾ ಎಂದು ಮತ್ತೆ ಅವರಮ್ಮನ ಮುಂದೆ ಹೋದ...
ಅವನ ಮಾತು ಕೇಳಿ ರಪ್ಪೆಂದು ಯಾರೋ ಹೊಡೆದಂತೆ ಆಯಿತು... ನಾವೇನು ಕೊಡುತ್ತೇವೋ ನಮಗೂ ಅದೇ ಸಿಗುವುದು ಎಂಬ ಮಾತು ನೆನಪಿಗೆ ಬಂದು ಕೂಡಲೇ ಹೆಂಡತಿಯ ಮುಖ ನೋಡಿ... ಏನೇ ನಾನು ನನ್ನ ನಿರ್ಧಾರ ಬದಲಿಸಿದ್ದೇನೆ ಕಣೆ... ಎರಡು ವರ್ಷ ಮುಗಿದ ಕೂಡಲೇ ವಾಪಸ್ ಇಲ್ಲಿಗೇ ಬಂದು ಬಿಡೋಣ... ಅಲ್ಲಿ ಸೆಟಲ್ ಆಗುವುದು ಬೇಡ ಎಂದೆ. ಅವಳಿಗೆ ನನ್ನ ಮನದ ಭಾವನೆ ಅರ್ಥವಾಗಿ ನನ್ನ ಕೈಯನ್ನು ಮೃದುವಾಗಿ ಅದುಮಿದಳು.

Rating
No votes yet

Comments