ದೇವನನು ಬಂಧಿಸಲು ಹೊರಟ ಲಿಪಿಕಾರ...

ದೇವನನು ಬಂಧಿಸಲು ಹೊರಟ ಲಿಪಿಕಾರ...

ದೇವನನು ಬಂಧಿಸಲು ಹೊರಟ ಲಿಪಿಕಾರ...

 

ಸುಟ್ಟ ಕಟ್ಟಿಗೆ ಇದ್ದಿಲನ್ನು ನುಣ್ಣಗೆ ಅರೆದು,
ಕಿತ್ತು  ಒಣಗಿಸಿದ ತಾಳೆಯ ಪತ್ರಗಳ ಕೊರೆದು,
ಒಟ್ಟುಗೂಡಿಸಿ, ಪತ್ರಗಳ ದಾರದೊಳು ಕಟ್ಟಿ,
ಭಕ್ತಿಯೊಳಗೆಡಬಲದೊಳೆಮ್ಮ ಕೆನ್ನೆಯ ಮುಟ್ಟಿ,
ಕುಂಕುಮಾದಿಗಳಿಂದ, ಗಂಧ ದೂಪಗಳಿಂದ,
ಪುಷ್ಪಮಾಲೆಗಳಿಂದ, ಸಕಲ ಮಂತ್ರಗಳಿಂದ,
ಕೊರೆವ ಚಳಿ, ಸುರಿವ ಮಳೆಗಳನೊಂದು ಲೆಕ್ಕಿಸದೆ,
ಮಡಿಯುಟ್ಟು, ಮೂಗೆರೆಗಳನು ಹಣೆಯ ಮೇಲಿರಿಸಿ,
ದೇವನನು ಬಂಧಿಸಲು ಹೊರಟ ಲಿಪಿಕಾರ...
 

ಕಂಡುದನು ಕಂಡಂತೆ ಚಿತ್ರಿಸಲು ಬಯಸುತ್ತ,
ಮಿನುಗಿ ತಾ ಮರೆಯಾದ ನೋಟವನು ಹುಡುಕುತ್ತ,
ಇಂಪಾಗಿ ಕೇಳಿದುದ ಗಾನದೊಳು ಬೆರೆಸುತ್ತ,
ಮುಟ್ಟಿ ನೋಡಿದುದನ್ನು ಶಿಲೆಯೊಳಗೆ ಕೆತ್ತುತ್ತ,
ಪದಗುಚ್ಚಗಳ ಕೂಡಿ ಬರೆದ ಪದ್ಯಗಳಲ್ಲಿ,
ವಿಧವಿಧದ ಛಂದಸ್ಸು, ಶಬ್ದ ರೀತಿಗಳಲ್ಲಿ,
ದೇವನನು ಬಂಧಿಸಲು ಹೊರಟ ಲಿಪಿಕಾರ...

ಬಂಧಿಸುವ ಬೆಮೆಯಲ್ಲೆ ಬಂಧಿಖಾನೆಯ ಕಟ್ಟಿ,
ಬೀಗ ಮಾಡಿಸಿಯದಕೆ ಗುಡಿಯೆಂದು ಹೆಸರಿಟ್ಟಿ,
ಪರಿಕಿಸದೆ ಗಂಡೆಂದು ಬಗೆದು ಶಿಲೆಯೊಳು ಕಡೆದು,
ಗಂಡುಡುಗೆ, ಗಂಡೆದೆಗೆ ಜನಿವಾರವನು ಕೊರೆದು,
ದೇವನನು ಬಂಧಿಸಲು ಹೊರಟ ಲಿಪಿಕಾರ...

ಗಂಡಿಗೊಬ್ಬಳು ಹೆಣ್ಣು, ಸಾಲದಿರೆ ಮತ್ತೆರಡು.
ಹೆಂಡಿರಿರೆ ಪುತ್ರಂದಿರಿರಬೇಕು ಒಂದೆರಡು.
ಮನೆ ಚಾಕರಿಗೆ ಬೇಕು ನೂರೆಂಟು ಸೇವಕರು,
ಉಸಿರಾಡಿಸುವ  ಗಾಳಿಗೂ ಗಾಳಿ ಸೇವೆ!

ಅರಳಿನಿಂತಿಹ ತಾವರೆಗೆ ಮಲ್ಲಿಗೆಯ ಹಾರ!
ಹಣ್ಣುಕಾಯ್ಗಳ ಬಿಟ್ಟ ಮರಕೆ, ಫಲ ಉಪಹಾರ!
ಅಮಳಗಂಗೆಯ ತೊಳೆಯೆ ಊರ ಕೆರೆ ಕೊಳೆ ನೀರು!
ಹೂವಿನೊಳು ಪಸರಿಸುವ ಗಂಧಕ್ಕೆ ಪನ್ನೀರು!
ಜಗದ ಕೊಳೆ ತೊಳೆವವಗೆ ತಲೆಗೆ ಅಭಿಷೇಕ..!

 

 

 

Rating
No votes yet

Comments