ನಾನು ನೋಡಿದ ಚಿತ್ರ-ಇನ್ ಬ್ರುಜ್

ನಾನು ನೋಡಿದ ಚಿತ್ರ-ಇನ್ ಬ್ರುಜ್

IMDb:  https://www.imdb.com/title/tt0780536/

 
 
 
 
 
 
 
  ಕ್ರೈಸ್ತ ಧರ್ಮದಲ್ಲಿ ಮನುಷ್ಯ ಸತ್ತ ನಂತರ ಸ್ವರ್ಗ ಅಥವಾ ನರಕ ಪ್ರಾಪ್ತಿಗೂ ಮುನ್ನ ಪರ್ಗಟೊರಿ(Purgatory) ಎಂಬಲ್ಲಿಗೆ ಹೋಗುತ್ತಾನೆ. ಅದು ಆ ಮನುಷ್ಯನ ಆತ್ಮ ಅಲ್ಲಿಂದ ಮುಂದೆ ಹೋಗುವ ಮುನ್ನ ಶುದ್ಧಿಯಾಗಲು ಮತ್ತು ಎಲ್ಲಿಗೆ ಎಂದು ನಿರ್ಧಾರವಾಗುವ ಸ್ಥಳ. ಇಂತಹ ಒಂದು ಸ್ಥಳ ತಲುಪಿದ ಆತ್ಮ, ಆ ಸಂದರ್ಭದಲ್ಲಿ ತಾನು ಕಳೆದ ಜೀವನದ ಎಲ್ಲ ಸತ್ಕಾರ್ಯ, ಕುಕರ್ಮಗಳನ್ನು ಲೆಕ್ಕ ಹಾಕಿ ಏನು ದಕ್ಕುವುದೋ ಎಂದು ಭಯದಿಂದ ನಿಲ್ಲುತ್ತದೆ. ಆದರೆ ಜೀವಂತ ಇದ್ದಾಗಲೇ ಇಂತ ಒಂದು ನಿರ್ಧಾರಕ್ಕೆ ಕಾಯಬೇಕಾಗಿ ಬಂದರೆ? ಇಂತಹ ಒಂದು ಸಂದರ್ಭವನ್ನು ಕಲ್ಪಿಸಿ ತೆಗೆದಿರುವ ಚಿತ್ರವೇ “ಇನ್ ಬ್ರುಜ್”. ಇದರ ನಿರ್ದೇಶಕ ಮಾರ್ಟಿನ್ ಮೆಕ್ಡಾನಾಫ್ (Martin McDonaugh).
  ರೇ(Ray) ಮತ್ತು ಕೆನ್(Ken) ಎಂಬ ಇಬ್ಬರು ಲಂಡನ್ನಿನ ಸುಪಾರಿ ಹಂತಕರು ಆಗಷ್ಟೇ ಒಂದು ಕೆಲಸ ಮುಗಿಸಿ ತನ್ನ ಬಾಸ್ ಹ್ಯಾರಿ(Harry) ಹೇಳಿದಂತೆ, ಆತ ಮುಂದಿನ ನಡೆ ತಿಳಿಸುವ ತನಕ ಬೆಲ್ಜಿಯಂ ದೇಶದ ಬ್ರುಜ್ ಎಂಬ ನಗರಕ್ಕೆ ತಲೆಮರೆಸಿಕೊಂಡಿರಲು ಬರುತ್ತಾರೆ. ರೇ ಯುವಕನಾಗಿದ್ದು, ಬ್ರುಜ್ ನ ನಿಧಾನ ಗತಿ ಆತನಿಗೆ ಊರಿಗೆ ಕಾಲಿಡುತ್ತಲೇ ಕಿರಿಕಿರಿಯುಂಟು ಮಾಡುತ್ತದೆ. ಆದರೆ ಅನುಭವಿ ಕೆನ್ ಮಾತ್ರ ಅಲ್ಲಿ ನೋಡಲು ಸಾಕಷ್ಟು ಹಳೆಯ ಐತಿಹಾಸಿಕ ಸ್ಥಳಗಳಿದ್ದು ಅವನ್ನು ನೋಡುತ್ತಾ ಮುಂದಿನ ಸೂಚನೆ ಬರುವವರೆಗೂ ಕಾಲ ಕಳೆಯಬಹುದು ಎಂದು ಹೇಳುತ್ತಾನೆ. ರೇಗೆ ಲಂಡನ್ನಿನ ಆ ಗಿಜಿಗುಡುವ, ಬಿಡುವಿಲ್ಲದ ಜನಜಂಗುಳಿ, ಸದಾ ಎಲ್ಲಾದರೂ ನಡೆಯುತ್ತಿರುವ ಪಾರ್ಟಿಗಳು, ಪಬ್ ಗಳನ್ನು ಬಿಟ್ಟಿರಲು ಇಷ್ಟವಿಲ್ಲ. ಇದರ ನಡುವೆ ಅವನ ಬಾಸ್ ಹ್ಯಾರಿಯ ಕರೆಗೂ ಕಾಯಬೇಕು. ಏಕೆಂದರೆ ಆತ ಕರೆ ಮಾಡಿದಾಗ ಯಾರೂ ಉತ್ತರಿಸದಿದ್ದರೆ ಹ್ಯಾರಿಗೆ ಕೋಪ ಬಂದು ಏನಾದರೂ ಮಾಡಬಹುದು ಎಂಬ ಭಯವೂ ಇತ್ತು. ಎರಡು ವಾರಗಳ ಕಾಲ ಈ ನಗರದಲ್ಲಿ ಕೆನ್ ನಂತಹ ಬೋರಿಂಗ್ ಮನುಷ್ಯನ ಜೊತೆ ಒಂದು ಸಾಧಾರಣ ಹೋಟೆಲ್ಲಿನಲ್ಲಿ ಕಾಲ ಕಳೆಯಬೇಕಲ್ಲ ಎಂದು ರೇ ದೂರುತ್ತಿದ್ದಾಗ ಕೆನ್ ಇದೆಲ್ಲ ರೇ ಕೆಲಸದಲ್ಲಿ ಮಾಡಿದ ಎಡವಟ್ಟಿನ ಪರಿಣಾಮ ಎಂದು ನೆನಪಿಸುತ್ತಾನೆ. ಆದರೆ ಕೆನ್, ರೇ ಈ ನಗರವನ್ನು ಒಮ್ಮೆ ನಿಧಾನಿಸಿ ನೋಡಿದರೆ ಅದರಲ್ಲಿನ ಸೌಂದರ್ಯವನ್ನು ಆಸ್ವಾದಿಸಬಹುದು ಎಂದು ಹೇಳುತ್ತಾನೆ. ಹೀಗೆ ಊರನ್ನು ಸುತ್ತಿ ಸಂಜೆ ಪಬ್ ಗೆ ಹೋಗಿ ಕುಡಿದು ಅಲ್ಲಿಂದ ಹೊಟೆಲ್ಲಿಗೆ ಬರುತ್ತಿದ್ದಾಗ ಯಾವುದೊ ಸಿನೆಮಾ ಚಿತ್ರೀಕರಣ ನಡೆಯುತ್ತಿರುತ್ತದೆ. ಅದನ್ನು ನೋಡುತ್ತಲೇ ರೇ ಕಣ್ಣರಳಿಸಿ ಕೆನ್ ನನ್ನು ಅತ್ತ ಕರೆದೊಯ್ಯುತ್ತಾನೆ. ಅಲ್ಲಿ ಒಬ್ಬ ಕುಳ್ಳನನ್ನು ಕುರಿತು ಏನೋ ಚಿತ್ರೀಕರಿಸುತ್ತಿರುತ್ತಾರೆ. ಆದರೆ ರೇ ಇದರ ನಡುವೆ ಒಂದು ಸುಂದರ ಹುಡುಗಿಯನ್ನು ನೋಡಿ ಆಕೆಯ ಬಳಿ ಹೋಗುವ ಮನಸುಮಾಡಿದಾಗ, ಕೆನ್ ಹೊತ್ತಾಯಿತು ಹೋಗುವ ಎಂದು ಕರೆಯುತ್ತಾನೆ. ಅದಕ್ಕೊಪ್ಪದ ರೇ ತಾನು ತಡವಾಗಿ ಬರುವುದಾಗಿ ಕೆನ್ ಗೆ ಹೊಟೆಲ್ಲಿಗೆ ಮರಳಲು ಹೇಳುತ್ತಾನೆ. ರೇ ನಿಧಾನವಾಗಿ ಚಿತ್ರೀಕರಣಕ್ಕೆ ಕಾವಲು ನಿಂತವರನ್ನು ತಪ್ಪಿಸಿ ಒಳ ಬಂದು ಆ ಹುಡುಗಿಯ ಬಳಿ ಮಾತಿಗೆ ನಿಲ್ಲುತ್ತಾನೆ. ತನ್ನನ್ನು ತಾನು ಪರಿಚಯಿಸಿಕೊಂಡು ಆಕೆಯ ಹೆಸರು ಕ್ಲೊಇ(Chloe) ಎಂದು ತಿಳಿದುಕೊಳ್ಳುತ್ತಾನೆ. ಹಾಗೇ ಮಾತನಾಡುತ್ತ ಮುಂದಿನ ರಾತ್ರಿ ತನ್ನೊಡನೆ ಊಟಕ್ಕೆ ಬರಲು ಆಹ್ವಾನಿಸುತ್ತಾನೆ. ಒಡನೆ ಒಪ್ಪದಿದ್ದರೂ ಆಕೆ ತನ್ನ ಫೋನ್ ನಂಬರ್ ಕೊಟ್ಟು ಹೋಗುತ್ತಾಳೆ.
  ಅತ್ತ ಹೊಟೆಲ್ಲಿಗೆ ಮರಳಿದ ಕೆನ್ ಗೆ ಹೊಟೆಲ್ ಒಡತಿ ಒಂದು ರೀತಿ ಸಿಟ್ಟಿನ ಮುಖಮಾಡಿಕೊಂಡು ಆತನಿಗಾಗಿ ಹ್ಯಾರಿಯಿಂದ ಬಂದ ಸಂದೇಶವನ್ನು ಕೊಡುತ್ತಾಳೆ. ಆ ಸಂದೇಶವನ್ನು ಓದಿದ ಕೆನ್ ಗೆ ಆಕೆ ಏಕೆ ಹಾಗೆ ಸಿಟ್ಟಿನ ಮುಖಮಾಡಿಕೊಂಡಿದ್ದಳು ಎಂದು ಅರ್ಥವಾಗುತ್ತದೆ. ಹ್ಯಾರಿ ತಾನು ಕರೆಮಾಡಿದಾಗ ಯಾರೂ ಇರದದ್ದಕ್ಕೆ ಬಯ್ದಿರುತ್ತಾನೆ. ಎರಡನೆಯದಾಗಿ ಆ ಹೊಟೆಲ್ಲಿನಲ್ಲಿ ಸಂದೇಶ ಬಿಡಲು ವಾಯ್ಸ್ ಮೇಲ್ ಇಲ್ಲವೆಂದೂ ತನ್ನ ಸಂದೇಶವನ್ನು ಓರ್ವ ರಿಸೆಪ್ಶನಿಸ್ಟ್ ಬಳಿ ಬಿಡಬೇಕಾಗಿ ಬಂದದ್ದಕ್ಕೆ ಸಿಟ್ಟುಮಾಡಿಕೊಂಡಿರುತ್ತಾನೆ. ಮೂರನೆಯದಾಗಿ, ಮರುದಿನ ತಾನು ಕರೆಮಾಡುವುದಾಗಿಯೂ, ಕರೆ ಸ್ವೀಕರಿಸಲು ಯಾರೂ ಇರದಿದ್ದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಎಚ್ಚರಿಸಿ ಸಂದೇಶದಲ್ಲಿ ತಿಳಿಸಿರುತ್ತಾನೆ. ಆತ ಸಂದೇಶದಲ್ಲಿ ಬಳಸಿದ ಒರಟು ಭಾಷೆಯಲ್ಲೇ ಹೊಟೆಲ್ ಒಡತಿ ಮರೀ(Marie) ಬರೆದುಕೊಂಡು ಕೆನ್ ಗೆ ಕೊಟ್ಟಿರುತ್ತಾಳೆ. ಅದನ್ನು ಓದಿದ ಕೆನ್ ಗೆ ಆಕೆ ಹ್ಯಾರಿಯ ಆ ಭಾಷೆ ಕೇಳಿ ಸಿಟ್ಟುಮಾಡಿಕೊಂಡಿರುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ. ಆ ಸಂದೇಶ ಅಡಿಯಲ್ಲಿ ಮರೀ ತಾನು ಹೊಟೆಲ್ ರಿಸೆಪ್ಶನಿಸ್ಟ್ ಅಲ್ಲವೆಂದೂ, ತನ್ನ ಪತಿಯೊಡನೆ ಈ ಹೊಟೆಲ್ಲಿನ ಸಹ ಒಡತಿಯೆಂದು ಬರೆದಿರುತ್ತಾಳೆ. ತನ್ನ ಕೋಣೆಗೆ ಕೆನ್ ಮರಳಿ ನಿದ್ರಿಸುತ್ತಾನೆ. ಆದರೆ ತಡವಾಗಿ ಬಂದ ರೇ ಸುಮ್ಮನೆ ಬಂದು ಮಲಗುವುದು ಬಿಟ್ಟು ಹಲ್ಲು ಉಜ್ಜುತ್ತ ತಾನು ಮರುದಿನ ಕ್ಲೊಇ ಜೊತೆ ಹೊರಹೋಗುವುದಾಗಿ ಕತೆ ಹೇಳುತ್ತಾ ಕೆನ್ ನಿದ್ದೆ ಹಾಳು ಮಾಡುತ್ತಾನೆ.
  ಮರುದಿನ ಬೆಳಗಿನ ತಿಂಡಿಗೆ ಕೂತಾಗ, ಕೆನ್ ಮರೀಯನ್ನು ಕರೆದು ಹ್ಯಾರಿಯ ಒರಟು ಮಾತಿಗಾಗಿ ಕ್ಷಮೆ ಕೇಳುತ್ತಾನೆ. ರೇ ಕೆಳಗಿಳಿದು ಬಂದಮೇಲೆ ಕೆನ್ ಆತನಿಗೆ ಹಿಂದಿನ ದಿನ ಹ್ಯಾರಿಯಿಂದ ಬಂದ ಸಂದೇಶವನ್ನು ಓದಿ ಹೇಳುತ್ತಾನೆ. ಅದಕ್ಕೆ ರೇ ಆತನ ಕರೆ ಸ್ವೀಕರಿಸಲು ಯಾರಾದರು ಒಬ್ಬರಿದ್ದರೆ ಸಾಲದೇ, ತಾನು ರಾತ್ರಿ ಕ್ಲೊಇ ಜೊತೆ ಊಟಕ್ಕೆ ಹೋಗುವುದಾಗಿ ಹಿಂದಿನ ರಾತ್ರಿಯೇ ಹೇಳಿದ್ದಾಗಿ ಕೆನ್ ಗೆ ಹೇಳುತ್ತಾನೆ. ಅದಕ್ಕೆ ಕೆನ್ ರೇನನ್ನು ಸಂಜೆಗೆ ಬಿಡಬೇಕಾದರೆ ತನ್ನೊಡನೆ ಊರು ಸುತ್ತಲು ಕರೆದಲ್ಲಿಗೆ ಬರಬೇಕೆಂದು ಷರತ್ತು ಹಾಕುತ್ತಾನೆ. ಅದಕ್ಕೆ ಒಪ್ಪಿ ರೇ ಕೆನ್ ಜೊತೆ ಬ್ರುಜ್ ನ ಪ್ರವಾಸಿ ಸ್ಥಳಗಳಿಗೆ ಹೋಗುತ್ತಾರೆ. ಬೆಸಿಲಿಕಾ ಆಫ್ ದಿ ಹೋಲಿ ಬ್ಲಡ್ ಗೆ ಹೋದಾಗ ಕೆನ್ ರೇಗೆ ಅಲ್ಲಿನ ವಿಶೇಷತೆ ವಿವರಿಸುತ್ತಾನೆ. ಹೋಲಿ ಕ್ರುಸೇಡ್ ನ ಸಮಯದಲ್ಲಿ ಫ್ಲೆಮಿಶ್ ನೈಟ್ ಒಬ್ಬ ಜೆರುಸಲೇಮ್ ನಿಂದ ಜೀಸಸ್ ನ ರಕ್ತದ ಕೆಲ ಹನಿಗಳನ್ನು ತಂದಿದ್ದು ಆ ಹನಿಗಳನ್ನು ಅಲ್ಲಿ ಒಂದು ಬಟ್ಟಲಲ್ಲಿ ಇಟ್ಟಿರುವುದಾಗಿ ಹೇಳುತ್ತಾನೆ. ಜಗತ್ತಿನಲ್ಲಿ ಕೊಲಾಹಲವಾದಾಗಲೆಲ್ಲ ಆ ಒಣಗಿದ ರಕ್ತದ ಹನಿಗಳು ಮತ್ತೆ ದ್ರವ್ಯ ಸ್ಥಿತಿಗೆ ತಲುಪುತ್ತವೆ ಎಂಬ ಪ್ರತೀತಿಯಿದೆ ಎಂದು ಹೇಳುತ್ತಾನೆ. ಆದರೆ ಇದರ ಬಗ್ಗೆ ಆಸಕ್ತಿ ತೋರದ ರೇ ಬಗ್ಗೆ ಕೆನ್ ಸಿಟ್ಟು ಮಾಡಿಕೊಳ್ಳುತ್ತಾನೆ. ರೇ ಹೊರಬಂದು ಪಬ್ಲಿಕ್ ಬೆಂಚ್ ಮೇಲೆ ಕೂತು ತಾನು ಬ್ರುಜ್ ಗೆ ಬರಲು ಕಾರಣವಾದ ಆ ಕೊಲೆಯ ಬಗ್ಗೆ ಯೋಚಿಸುತ್ತ ಕೂರುತ್ತಾನೆ. ಚರ್ಚ್ ನಲ್ಲಿ ಪಾದ್ರಿಯೊಬ್ಬರನ್ನು ಕೊಲ್ಲಲು ಹೋದಾಗ ಆತನನ್ನು ಹಿಂಬಾಲಿಸುತ್ತಾ ಗುಂಡು ಹಾರಿಸಿದಾಗ ಒಂದು ಗುಂಡು ಅಲ್ಲೇ ರೇ ಕಣ್ಣಿಗೆ ಕಾಣದೆ ನಿಂತಿದ್ದ ಚಿಕ್ಕ ಹುಡುಗನ ತಲೆಗೆ ತಗುಲಿ ಆ ಹುಡುಗ ಪಾದ್ರಿಯ ಜೊತೆ ಸಾಯುತ್ತಾನೆ. ಇದನ್ನು ನೋಡಿ ನಡೆದದ್ದನ್ನು ನಂಬಲಾಗದೆ ಅಲ್ಲೇ ನಿಂತಿದ್ದ ರೇನನ್ನು ಕೆನ್ ಪೊಲೀಸರು ಬರುವ ಮುನ್ನ ಅಲ್ಲಿಂದ ಕರೆದೊಯ್ದಿರುತ್ತಾನೆ. ಅಂದಿನಿಂದ ಆ ಹುಡುಗನ ಸಾವಿಗೆ ತಾನು ಕಾರಣನಾದೆನಲ್ಲ ಎಂದು ಪಾಪಪ್ರಜ್ಞೆಯಿಂದ ಕೊರಗುತ್ತಿರುತ್ತಾನೆ. ಕೆನ್ ಬಂದು ಆರ್ಟ್ ಮ್ಯೂಸಿಯಂಗೆ ಕರೆದೊಯ್ದು ಅಲ್ಲಿ ಬೈಬಲ್ ಕುರಿತಾದ ಚಿತ್ರಗಳನ್ನು ರೇಗೆ ತೋರಿಸುತ್ತಾ ಹೋಗುತ್ತಾನೆ. ಒಂದು ಚಿತ್ರದ ಮುಂದೆ ನಿಂತು ಅದು ಯಾವುದರ ಬಗ್ಗೆ ಬರೆಯಾಲಾಗಿದೆ ಎಂದು ರೇ ಕೇಳಿದಾಗ ಕೆನ್ ಅದು ಜಡ್ಜ್ ಮೆಂಟ್ ದಿನದ ಕುರಿತಾಗಿದ್ದು, ಮನುಷ್ಯನ ಭೂಮಿಯ ಕಡೆ ದಿನ ಕಳೆದ ಬಳಿಕ ಅವನು ಹೋಗುವ ಸ್ಥಳಗಳ ಬಗ್ಗೆ ಚಿತ್ರಿಸಲಾಗಿದೆ ಎಂದು ವಿವರಿಸುತ್ತಾನೆ. ಇದನ್ನೆಲ್ಲಾ ನೀನು ನಂಬುತ್ತಿಯಾ ಎಂದು ರೇ ಕೇಳಿದಾಗ ಕೆನ್ ತನಗೆ ಗೊತ್ತಿಲ್ಲವೆಂದೂ, ಚಿಕ್ಕವರಿದ್ದಾಗಿನಿಂದಲೂ ಒಳ್ಳೆಯದು ಕೆಟ್ಟದ್ದರ ಬಗ್ಗೆ ಕೊಟ್ಟ ಕಲ್ಪನೆಯೇ ಈಗಲೂ ಇದೆ ಎಂದು ಹೇಳುತ್ತಾನೆ. ಅದರ ಆಧಾರದ ಮೇಲೆ ತಾನು ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾನೆ. ಆದರೂ ತಾನು ಮಾಡುವ ಕೆಲಸದ ಬಗ್ಗೆ ಮರೆತಿಲ್ಲವೆಂದೂ, ಕೆಲಸದುದ್ದಕ್ಕೂ ಕೆಟ್ಟ ಜನಗಳನ್ನೇ ಕೊಲ್ಲುತ್ತಾ ಬಂದಿದ್ದರೂ ಒಮ್ಮೆ ಯಾರನ್ನೋ ಕೊಲ್ಲಲು ಹೋದಾಗ ಆತನನ್ನು ಉಳಿಸಲು ಬಂದ ಆತನ ಸಹೋದರನನ್ನೂ ಕೊಲ್ಲಬೇಕಾಗಿ ಬಂದದ್ದರ ಬಗ್ಗೆ ನೆನೆದು ತನ್ನಿಂದಾದ ಪಾಪದ ಬಗ್ಗೆ ರೇಗೆ ಹೇಳುತ್ತಾನೆ. ಇದನ್ನು ಕೇಳಿ ರೇ ತಾನು ಆ ಪುಟ್ಟ ಹುಡುಗನನ್ನು ಕೊಂದಿದ್ದರ ಬಗ್ಗೆ ಮತ್ತೆ ನೆನೆದು ತಾನೊಬ್ಬ ಆತನನ್ನು ಕೊಲ್ಲದಿದ್ದರೆ ಆ ಹುಡುಗ ಏನಾಗುತ್ತಿದ್ದನೋ ಎಂದು ಹೇಳುತ್ತಾನೆ. ಈಗ ಆ ಪಾಪವನ್ನು ತಾನು ಬದುಕಿರುವವರೆಗೂ ಹೊರಬೇಕು ಎಂದೂ ಅದನ್ನು ಕಳೆದುಕೊಳ್ಳಲು ಸಾವೊಂದೇ ದಾರಿ ಎಂದು ಹೇಳುತ್ತಾನೆ. ಅದಕ್ಕೆ ಕೆನ್ ಅವನನ್ನು ತಡೆದು ಅಂತಹ ಯೋಚನೆ ಮಾಡುವುದರಿಂದ ಪ್ರಯೋಜನವಿಲ್ಲವೆಂದು ಸಮಾಧಾನಪಡಿಸುತ್ತಾನೆ.
  ಹೊಟೆಲ್ಲಿಗೆ ಮರಳಿದ ನಂತರ ರೇ ಸಂಜೆಯ ಡಿನ್ನರ್ ಗೆ ತಯಾರಾಗುತ್ತಾನೆ. ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿಕೊಳ್ಳುತ್ತಿದ್ದಾಗ, ಮುಖದಲ್ಲಿ ಪಾಪಪ್ರಜ್ಞೆಯ ಸಣ್ಣ ಎಳೆ ಕಾಣಿಸಿಕೊಂಡು ತಾನು ಅನುಭವಿಸುತ್ತಿರುವ ಈ ಸುಖಕ್ಕೆ ತಾನು ಯೋಗ್ಯನೇ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ನಂತರ ಡಿನ್ನರ್ ಗೆ ತೆರಳುತ್ತಾನೆ. ಹೊಟೆಲ್ಲಿನಲ್ಲಿ ಕ್ಲೊಇ ಜೊತೆ ಮಾತನಾಡುತ್ತ ಆಕೆ ಬಿಡುತ್ತಿದ್ದ ಸಿಗರೆಟ್ ಹೊಗೆಯ ಕಾರಣ ಪಕ್ಕದ ಟೇಬಲ್ಲಿನವನ ಜೊತೆ ಜಗಳವಾಗಿ ಅವನ ಮುಖಕ್ಕೆ ಹೊಡೆದು ರೇ ಕ್ಲೊಇ ಕರೆದುಕೊಂಡು ಅಲ್ಲಿಂದ ಹೊರನಡೆಯುತ್ತಾನೆ.
  ಅತ್ತ ಹ್ಯಾರಿಯ ಕರೆಗಾಗಿ ಕೆನ್ ಕಾಯುತ್ತ ಕುಳಿತಿರುತ್ತಾನೆ. ಹ್ಯಾರಿ ಕರೆ ಮಾಡಿ ರೇ ಅಲ್ಲಿದ್ದರೆ ಒಂದರ್ಧ ಘಂಟೆ ಹೊರಕಳಿಸಲು ಕೆನ್ ಗೆ ಹೇಳುತ್ತಾನೆ. ರೇ ಅಲ್ಲಿನ ವಾತಾವರಣ ಇಷ್ಟಪಟ್ಟನೆ ಎಂದು ಕೇಳಿದಾಗ, ಕೆನ್ ತನಗೆ ಅನಿಸಿದ್ದನ್ನು ರೇ ಹೇಳಿದ್ದು ಎಂದು “ನನಗೆ ಗೊತ್ತು ನಾನು ಎಚ್ಚರವಿದ್ದೇನೆ ಎಂದು. ಆದರೂ ಎಲ್ಲಾ ಕನಸಿನಂತೆ ಕಾಣುತ್ತಿದೆ” ಎಂದು ಹ್ಯಾರಿಗೆ ಹೇಳುತ್ತಾನೆ. ನಂತರ ಹ್ಯಾರಿ ಬ್ರುಜ್ ನಲ್ಲಿ ಒಂದು ಕೆಲಸವಿದ್ದು, ತಾನು ಹೇಳುವ ಒಂದು ಜಾಗಕ್ಕೆ ಹೋಗಿ ಗನ್ ಪಡೆದುಕೊಳ್ಳಲು ಹೇಳುತ್ತಾನೆ. ಯಾವ ಕೆಲಸ ಎಂದು ಕೆನ್ ಕೇಳಿದಾಗ ಸಿಟ್ಟಾಗುವ ಹ್ಯಾರಿ ರೇ ಒಳ್ಳೆ ಹುಡುಗನಾಗಿದ್ದರೂ ಚರ್ಚ್ ನಲ್ಲಿ ಆ ಚಿಕ್ಕ ಹುಡುಗನನ್ನು ಕೊಂದದ್ದು ಸರಿಯಲ್ಲವೆಂದು ಅದರ ಜಾಡು ಹತ್ತಿ ಪೊಲೀಸರು ತಮ್ಮ ಬಳಿ ಬಾರದಂತೆ ಮಾಡಬೇಕಾದರೆ ರೇನನ್ನು ಕೊಲ್ಲಲೇಬೇಕು ಎಂದು ಹ್ಯಾರಿ ಹೇಳುತ್ತಾನೆ. ಹಾಗಾಗಿಯೇ ರೇ ಸಾಯುವ ಮುನ್ನ ಸಂತೋಷಪಡಲಿ ಎಂದು ಬ್ರುಜ್ ಗೆ ಕಳಿಸಿದ್ದಾಗಿ ಹ್ಯಾರಿ ಹೇಳುತ್ತಾನೆ. ಇದನ್ನು ಕೇಳಿದ ಕೆನ್ ಅವಾಕ್ಕಾಗಿ ನಿಲ್ಲುತ್ತಾನೆ. ಕೆಲಸ ಮುಗಿದ ಮೇಲೆ ಮಧ್ಯಾಹ್ನ ತನಗೆ ಕರೆ ಮಾಡುವಂತೆ ಹ್ಯಾರಿ ಹೇಳುತ್ತಾನೆ. ಕರೆ ಮುಗಿಸುವ ಮುನ್ನ ರೇ ಬ್ರುಜ್ ಬಗ್ಗೆ ಹೇಳಿದ್ದನ್ನು ಮತ್ತೆ ಹೇಳುವಂತೆ ಕೆನ್ ಗೆ ಹೇಳುತ್ತಾನೆ. ಅದಕ್ಕೆ ಕೆನ್, “ನನಗೆ ಗೊತ್ತು ನಾನು ಎಚ್ಚರವಿದ್ದೇನೆ ಎಂದು. ಆದರೂ ಎಲ್ಲಾ ಕನಸಿನಂತೆ ಕಾಣುತ್ತಿದೆ” ಎಂದು ಉತ್ತರಿಸುತ್ತಾನೆ. ಆದರೆ ಈ ಬಾರಿ ಅದನ್ನು ಹೇಳಿದಾಗ ಅದರ ಅರ್ಥ ಬೇರೆಯದೇ ಆಗಿರುತ್ತದೆ. ಏನೂ ಮಾಡಲು ತೋಚದೆ ಕೆನ್ ಪಬ್ ಗೆ ಬಂದು ಕೂತು ಕುಡಿಯಲು ತೊಡಗುತ್ತಾನೆ. ರೇ ಕ್ಲೊಇ ಜೊತೆ ಆಕೆಯ ಮನೆಗೆ ಹೋದಾಗ ಅಲ್ಲಿಗೆ ಹಠಾತ್ತನೆ ಬರುವ ಆಕೆಯ ಪಾರ್ಟ್ನರ್ ರೇ ನನ್ನು ಕ್ಲೊಇ ಜೊತೆ ನೋಡಿ ಗನ್ ತೋರಿಸಿ ಹೆದರಿಸುತ್ತಾನೆ. ಆಗ ಕ್ಲೊಇ ರೇಗೆ ಹೆದರದಂತೆ ಧೈರ್ಯ ಹೇಳಿ ತಾವಿಬ್ಬರೂ ಬ್ರುಜ್ ಗೆ ಬರುವ ಪ್ರವಾಸಿಗರನ್ನು ಹೀಗೇ ದೋಚುವುದಾಗಿ ಹೇಳುತ್ತಾಳೆ. ಆದರೆ ರೇಗೆ ಹಾಗೇನೂ ಮಾಡುವುದಿಲ್ಲ ಎಂದು ಹೇಳಿ ತನ್ನ ಪಾರ್ಟ್ನರ್ ಎರಿಕ್ ಗೆ ಗನ್ ಕೆಳಗಿಳಿಸಲು ಹೇಳುತ್ತಾಳೆ. ಆದರೆ ಆಕೆಯ ಮಾತು ಕೇಳದೆ ರೇಗೆ ಗನ್ ತೋರಿಸಿದಾಗ ರೇ ಅವನ ಗನ್ ಕಸಿದುಕೊಂಡು ಅವನ ಕಣ್ಣಿಗೆ ಹೊಡೆಯುತ್ತಾನೆ. ಗನ್ನಿನಲ್ಲಿ ನಕಲಿ ಗುಂಡು(blank) ಇದ್ದ ಕಾರಣ ಎರಿಕ್ ಕಣ್ಣಿಗೆ ಮಾತ್ರ ಗಾಯವಾಗಿ ಅಲ್ಲೇ ಒದ್ದಾಡುತ್ತಾ ಬೀಳುತ್ತಾನೆ. ಕ್ಲೊಇ ಅವನ ಒದ್ದಾಟ ನೋಡಲಾರದೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ರೇಗೆ ಹೇಳಿ ಅಲ್ಲಿಂದ ಹೋಗುತ್ತಾಳೆ. ನಡೆದ್ದಿದ್ದರ ಬಗ್ಗೆ ಬೇಸರ ಮಾಡಿಕೊಳ್ಳದಂತೆಯೂ ತನಗೆ ಮತ್ತೆ ಕರೆ ಮಾಡುವಂತೆ ರೇಗೆ ಹೇಳಿ ಹೋಗುತ್ತಾಳೆ. ರೇ ಅವರಿಬ್ಬರೂ ಹೋದ ನಂತರ ಕ್ಲೊಇ ಬಚ್ಚಿಟ್ಟಿದ್ದ ಹೆರೊಯಿನ್, ಕೊಕೇನ್ ಮತ್ತು ಅಸಲಿ ಗುಂಡುಗಳನ್ನು ತೆಗೆದುಕೊಂಡು ಅಲ್ಲಿಂದ ಕೆನ್ ಇದ್ದ ಪಬ್ ಗೆ ಬರುತ್ತಾನೆ. ರೇ ಬಳಿ ಕೊಕೇನ್ ಇದ್ದದ್ದನ್ನು ಕಂಡು ಕೆನ್ ತನಗೂ ಸ್ವಲ್ಪ ಕೊಡುವಂತೆ ಕೇಳಿ ಅದನ್ನು ಸೇವಿಸಿಬರಲು ಹೋಗುತ್ತಾನೆ. ಅಷ್ಟರಲ್ಲಿ ರೇ ಅಲ್ಲೇ ಕೂತಿದ್ದ ಚಿತ್ರೀಕರಣದ ವೇಳೆ ಕಂಡ ಆ ಕುಳ್ಳನನ್ನು ಕಂಡು ಅವನಿಗೂ ತನ್ನ ಬಳಿ ಇರುವ ಮಾದಕ ವಸ್ತುವಿನ ಬಗ್ಗೆ ತಿಳಿಸಿ ಆತನ ರೂಮಿಗೆ ಎಲ್ಲರೂ ಹೋಗುತ್ತಾರೆ. ಮತ್ತೆ ರೇ, ಕೆನ್ ಇಬ್ಬರೂ ಅಲ್ಲಿ ಜಗಳ ಮಾಡಿಕೊಂಡು ಬಂದು ತಮ್ಮ ರೂಮು ಸೇರುತ್ತಾರೆ.
  ಮಾರನೆ ದಿನ ಬೆಳಗ್ಗೆಯೇ ಎದ್ದು ಕೆನ್ ಹ್ಯಾರಿ ಹೇಳಿದ ಜಾಗಕ್ಕೆ ಗನ್ ತರಲು ಹೋಗುತ್ತಾನೆ. ಇತ್ತ ರೇ ಮತ್ತೆ ಸತ್ತ ಆ ಹುಡುಗನನ್ನು ನೆನೆದು ಹಾಸಿಗೆಯಲ್ಲೇ ಅಳುತ್ತ ಮಲಗಿರುತ್ತಾನೆ. ಯೂರಿ ಎಂಬ ವ್ಯಕ್ತಿ ಕೆನ್ ಗೆ ಗನ್ ಕೊಟ್ಟು ಅಲ್ಲಿ ಪಾರ್ಕ್ ನಲ್ಲಿ ಯಾವುದಾದರೂ ಸಂದಿಗಳೊಂದರಲ್ಲಿ ರೇನನ್ನು ಕೊಂದರೆ ಯಾರಿಗೂ ತಿಳಿಯುವುದಿಲ್ಲ ಎಂದು ಹೇಳುತ್ತಾನೆ. ಸರಿ ಎಂದು ಹೇಳಿ ಕೆನ್ ಮತ್ತೆ ಹೊಟೆಲ್ಲಿಗೆ ಬರುತ್ತಾನೆ. ಹೊಟೆಲ್ ಒಡತಿ ಕೆನ್ ನನ್ನು ಕರೆದು ಆತನ ಗೆಳೆಯ ಹೊರಗೆ ಪಾರ್ಕ್ ಕಡೆಗೆ ಹೋದನೆಂದೂ ಯಾಕೋ ವಿಚಲಿತಗೊಂಡಂತಿದ್ದ ಎಂದು ಹೇಳುತ್ತಾಳೆ. ವಿವರಣೆ ಕೇಳಿದಾಗ ರೇ ತನ್ನ ಹುಟ್ಟಲಿರುವ ಮಗುವಿನ ಬಗ್ಗೆ ಕೇಳಿ ತನ್ನ ಬಳಿ ಇದ್ದ 200ಯುರೊಗಳನ್ನು ಮಗುವಿಗಾಗಿ ಕೊಟ್ಟು ಹೊರಟು ಹೋದನೆಂದು ಹೇಳುತ್ತಾಳೆ. ತನಗೆ ಆತ ಕೊಟ್ಟ ದುಡ್ಡನ್ನು ಕೆನ್ ಗೆ ಕೊಟ್ಟು ರೇಗೆ ಅದನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾಳೆ. ಕೆನ್ ಏನೂ ಮಾತನಾಡದೆ ದುಡ್ಡನ್ನು ಪಡೆದು ರೇ ಹುಡುಕಿ ಪಾರ್ಕ್ ಕಡೆಗೆ ಹೋಗುತ್ತಾನೆ. ಅಲ್ಲಿ ಮರೆಯಲ್ಲಿ ನಿಂತು ರೇ ಒಬ್ಬನೇ ಇರುವುದನ್ನು ಖಚಿತಪಡಿಸಿಕೊಂಡು ಗನ್ ಹೊರತೆಗೆದು ಮನದಲ್ಲೇ ತನ್ನನ್ನು ಕ್ಷಮಿಸುವಂತೆ ರೇನನ್ನು ಕೇಳಿಕೊಂಡು ನಿಧಾನವಾಗಿ ರೇನತ್ತ ಹೆಜ್ಜೆ ಇಡುತ್ತ ನಡೆಯುತ್ತಾನೆ. ನಡೆಯುತ್ತಾ ನಡೆಯುತ್ತಾ ರೇ ಹತ್ತಿರವಾಗುತ್ತಿದ್ದಂತೆ ಮೆಲ್ಲಗೆ ಕೈ ಮುಂದೆ ಮಾಡಿ ರೇ ತಲೆಗೆ ಗುರಿಯಿಡುತ್ತಾನೆ. ಅಷ್ಟರಲ್ಲಿ ರೇ ತಾನೇ ಒಂದು ಗನ್ ಹೊರತೆಗೆದು ತನ್ನ ತಲೆಗೆ ಇರಿಸಿಕೊಂಡು ಗುಂಡು ಹಾರಿಸಿಕೊಳ್ಳುವುದರಲ್ಲಿದ್ದಾಗ ಕೆನ್ ಕೂಗಿ ಆತನನ್ನು ತಡೆಯುತ್ತಾನೆ. ಗಾಬರಿಗೊಂಡ ರೇ ಎದ್ದು ಹಿಂತಿರುಗಿ ನೋಡಿದಾಗ ಕೆನ್ ಕೈಯಲ್ಲಿ ಗನ್ ಹಿಡಿದು ನಿಂತಿರುತ್ತಾನೆ. ಕೆನ್ ಇಲ್ಲೇನು ಮಾಡುತ್ತಿದ್ದೀಯೆಂದು ರೇ ಕೇಳಿದಾಗ  ತಾನು ಅಲ್ಲೇ ಮರೆಯಲ್ಲಿ ನಿಂತಿದ್ದಾಗಿಯೂ, ರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ತಡೆಯಲು ಬಂದೆನೆಂದು ಹೇಳುತ್ತಾನೆ. ಆದರೆ ಕೆನ್ ಕೈಯಲ್ಲಿ ಗನ್ ಇದ್ದದ್ದು ನೋಡಿ ಇದೇಕೆ ನಿನ್ನ ಕೈಯಲ್ಲಿ ಗನ್ ಇದೆಯೆಂದು ಪ್ರಶ್ನೆ ಕೇಳಿದರೂ ಥಟ್ಟನೆ ಎಲ್ಲ ಅರ್ಥವಾದಂತೆ ಕೆನ್ ಹೀಗೇಕೆ ಮಾಡಿದೆಯೆಂದು ಕೇಳುತ್ತಾನೆ. ಸುಮ್ಮನೆ ಬಿಟ್ಟಿದ್ದರೆ ತಾನೇ ಸಾಯುತ್ತಿದ್ದೆನಲ್ಲ ಎಂದು ಹೇಳುತ್ತಾನೆ. ಅದಕ್ಕೆ ಕೆನ್ ಆತನನ್ನು ಸಾಯಲು ಬಿಡುವುದಿಲ್ಲ ಎಂದು ಹೇಳಿದಾಗ ರೇ ಆತ್ಮಹತ್ಯೆ ಮಾಡಿಕೊಳ್ಳಲು ಬಿಡದೆ ಕೊಲ್ಲಲು ಬಂದದ್ದು ಎಂತಹ ನ್ಯಾಯ ಎಂದು ಪ್ರಶ್ನಿಸುತ್ತಾನೆ. ನಿಧಾನವಾಗಿ ವಿವರಿಸುವುದಾಗಿ ಆತನನ್ನು ಕೂರಿಸಿಕೊಂಡು ಕೆನ್ ರೇಗೆ ಎಲ್ಲ ಹೇಳುತ್ತಾನೆ. ತಾನು ರೇನನ್ನು ಕೊಲ್ಲದೆ ದುಡ್ಡು ಕೊಟ್ಟು ಎಲ್ಲಿಗಾದರೂ ದೂರ ಕಳಿಸುವುದಾಗಿ ಹೇಳುತ್ತಾನೆ. ಅದಕ್ಕೆ ರೇ ಮತ್ತೆ ಹುಡುಗನನ್ನು ನೆನೆದು ಅದೊಂದು ಕೆಲಸ ಮಾಡದೇ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅಳತೊಡಗುತ್ತಾನೆ. ತನಗೆ ಸಾಯುವುದು ಬಿಟ್ಟು ಬೇರೆ ಮಾರ್ಗವಿಲ್ಲವೆಂದು ರೇ ಹೇಳಿದಾಗ, ಕೆನ್ ಆತ ಸತ್ತು ಏನೂ ಪ್ರಯೋಜನವಿಲ್ಲವೆಂದೂ, ಇಲ್ಲೇ ಇದ್ದು ಈ ಕೆಲಸ ಬಿಟ್ಟು ಏನಾದರೂ ಒಳ್ಳೆಯದನ್ನು ಮಾಡುವಂತೆ ಹೇಳಿ ಸಮಾಧಾನಪಡಿಸುತ್ತಾನೆ. ನಂತರ ಒಂದು ಟ್ರೇನ್ ಹತ್ತಿಸಿ ಕಳಿಸುತ್ತಾನೆ.
  ಅತ್ತ ರೇ ಟ್ರೇನ್ ಹತ್ತಿ ಹೋಗುತ್ತಿದ್ದಂತೆ ಕೆನ್, ಹ್ಯಾರಿಗೆ ಕರೆ ಮಾಡಿ ತಾನು ರೇನನ್ನು ಮುಗಿಸದೆ ಉಳಿಸಿ ಕಳಿಸಿದೆನೆಂದು ಹೇಳುತ್ತಾನೆ. ತಾನು ಇದರ ಪರಿಣಾಮ ಎದುರಿಸಲು ಸಿದ್ಧನಾಗಿದ್ದು ತನ್ನ ಹೊಟೆಲ್ ರೂಮಿನಲ್ಲಿ ಕಾಯುವುದಾಗಿ ಹೇಳಿ ಕರೆ ಕಟ್ ಮಾಡುತ್ತಾನೆ. ಇದರಿಂದ ಕುಪಿತನಾಗುವ ಹ್ಯಾರಿ ಬಾಯಿಗೆ ಬಂದಂತೆ ಬಯ್ದು ತನ್ನ ಹೆಂಡತಿ ಮಕ್ಕಳಿಗೆ ತಾನು ಒಂದು ಕೆಲಸದ ನಿಮಿತ್ತ ಬ್ರುಜ್ ಗೆ ಹೋಗಬೇಕಾಗಿದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಇತ್ತ ಕೆನ್ ತನ್ನ ಕೋಣೆಯಲ್ಲಿ ತನಗಾಗಿ ಬರುತ್ತಿರುವ ಹ್ಯಾರಿಗಾಗಿ ಕಾಯುತ್ತ ಸಿದ್ಧನಾಗುತ್ತಾನೆ. ಎಲ್ಲದಕ್ಕೂ ವಿದಾಯ ಹೇಳಿ ನಿರಾಳವಾದಂತೆ ರೇ ಟ್ರೇನ್ ನಲ್ಲಿ ಕೂತಿದ್ದಾಗ, ಊರು ಬಿಟ್ಟು ಕೊಂಚ ದೂರ ಸಾಗಿದ ಮೇಲೆ ಟ್ರೇನ್ ನಿಲ್ಲುತ್ತದೆ. ಏಕೆಂದು ರೇ ನೋಡುತ್ತಿದ್ದಂತೆ ಒಬ್ಬ ಪೋಲಿಸಿನವ ಬಂದು ರೇನನ್ನು ಪ್ರಶ್ನಿಸಿ ಹಿಂದಿನ ರಾತ್ರಿ ಮಾಡಿಕೊಂಡ ಜಗಳದ ಬಗ್ಗೆ ಆತನನ್ನು ಬಂಧಿಸುತ್ತಿರುವುದಾಗಿ ಹೇಳಿ ಮರಳಿ ಬ್ರುಜ್ ಗೆ ಕರೆದೊಯ್ಯುತ್ತಾನೆ. ಹ್ಯಾರಿ ಬ್ರುಜ್ ತಲುಪಿ ಯೂರಿ ಬಳಿ ಹೋಗಿ ಗನ್ ಪಡೆಯುತ್ತಾನೆ. ಆಗ ಹಿಂದಿನ ರಾತ್ರಿ ರೇ ನಿಂದ ಗುಂಡು ಹಾರಿಸಿಕೊಂಡು ಕಣ್ಣು ಕಳೆದುಕೊಂಡ ಎರಿಕ್ ಅಲ್ಲೇ ಇದ್ದು ನಡೆದದ್ದನ್ನು ಹ್ಯಾರಿಗೆ ವಿವರಿಸುತ್ತಾನೆ. ಹ್ಯಾರಿಗಾಗಿ ರೇನನ್ನು ಹುಡುಕುವುದಾಗಿ ಹೇಳುತ್ತಾನೆ. ಅಲ್ಲಿಂದ ಹೊರಡುವ ಹ್ಯಾರಿ ಕೆನ್ ಇದ್ದಲ್ಲಿಗೆ ಬಂದು ಆತನನ್ನು ಭೇಟಿಯಾಗುತ್ತಾನೆ. ತನ್ನ ಆಣತಿಯನ್ನು ಮೀರಿ ರೇನನ್ನು ಬಿಟ್ಟು ಕಳಿಸಿದ್ದಕ್ಕೆ ಕೆನ್ ಗೆ ಬಯ್ಯುತ್ತಾನೆ. ಆದರೆ ಕೆನ್ ರೇ ಒಳ್ಳೆಯ ಹುಡುಗನೆಂದು, ಆತ ಬದಲಾಗಬಲ್ಲ ಎಂದು ಹೇಳುತ್ತಾನೆ. ಅದಕ್ಕೊಪ್ಪದ ಹ್ಯಾರಿ ಚಿಕ್ಕ ಹುಡುಗನನ್ನು ಕೊಂದ ಕೂಡಲೆ ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ತಾನೂ ಅಲ್ಲೇ ಗುಂಡು ಹೊಡೆದುಕೊಂಡು ರೇ ಸಾಯಬೇಕಿತ್ತು ಆದರೆ ಅವನು ಹಾಗೆ ಮಾಡಲಿಲ್ಲ, ಹಾಗಾಗಿ ಅವನು ಸಾಯಬೇಕಿದ್ದುದೇ ಸರಿ ಎಂದು ವಾದಿಸುತ್ತಾನೆ. ಕೊನೆಗೆ ಕೆನ್ ಈಗ ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲವೆಂದು ಹೇಳಿ ಹ್ಯಾರಿಗೆ ಬಂದ ಕೆಲಸ ಮುಗಿಸಲು ಹೇಳುತ್ತಾನೆ. ನಂತರ ಇಬ್ಬರೂ ಅಲ್ಲಿಯೇ ಹತ್ತಿರ ಇದ್ದ ಗೋಪುರವೊಂದಕ್ಕೆ ಹೋಗುತ್ತಾರೆ. ಇತ್ತ ರೇನನ್ನು ಜೈಲಿನಿಂದ ಜಾಮೀನು ಕೊಟ್ಟು ಕ್ಲೊಇ ಬಿಡಿಸಿಕೊಂಡು ಹ್ಯಾರಿ, ಕೆನ್ ಇದ್ದ ಗೋಪುರದ ಕೆಳಗೆ ಒಂದು ರೆಸ್ಟಾರೆಂಟ್ ಗೆ ಬಂದು ಕೂರುತ್ತಾರೆ. ಗೋಪುರದಲ್ಲಿ ಹ್ಯಾರಿ ಕೆನ್ ನನ್ನು ಮುಗಿಸಲು ಗನ್ ಎತ್ತುತ್ತಿದ್ದಂತೆ, ಕೆನ್ ತನ್ನ ಗನ್ ಕೆಳಗಿರಿಸಿ ಹ್ಯಾರಿಯ ಮೇಲೆ ತನಗೆ ಗೌರವವಿದ್ದು ತಾನು ಮಾತ್ರ ಏನೂ ಮಾಡದೆ ಸುಮ್ಮನೆ ನಿಲ್ಲುವುದಾಗಿ ಹೇಳಿ ನಿಲ್ಲುತ್ತಾನೆ. ಇದನ್ನು ನೋಡಿ ಹ್ಯಾರಿ ವಿಚಲಿತನಾಗಿ ಕೆನ್ ನನ್ನು ಸಾಯಿಸದೇ ಅವನು ಅಲ್ಲಿಯ ತನಕ ತನಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬರಿ ಅವನ ಕಾಲಿಗೆ ಗುಂಡು ಹೊಡೆಯುತ್ತಾನೆ. ಕೆಳಗೆ ರೇ ಮತ್ತು ಕ್ಲೊಇ ಕೂತಿದ್ದಾಗ ಕುಳ್ಳ ಮತ್ತೆ ಸ್ಕೂಲ್ ಸಮವಸ್ತ್ರದಲ್ಲಿ ಅವರ ಬಳಿ ಬಂದಾಗ ಇಬ್ಬರೂ ಅವನನ್ನು ನೋಡಿ ನಗುತ್ತಾರೆ. ಚಿತ್ರದ ದೃಶ್ಯವೊಂದಕ್ಕಾಗಿ ಈ ಬಟ್ಟೆ ಧರಿಸಿದ್ದೇನೆ ಎಂದು ಆ ಕುಳ್ಳ ವಿವರಿಸಿ ಅವರ ಬಳಿ ಇನ್ನೊಂದಿಷ್ಟು ಮಾತನಾಡಿ ಹೊರಡುತ್ತಾನೆ. ಅವನು ಅತ್ತ ಹೋಗುತ್ತಿದ್ದಂತೆ ಎರಿಕ್ ಇವರಿಬ್ಬರನ್ನೂ ನೋಡಿ ಹ್ಯಾರಿಗೆ ಎಚ್ಚರಿಸಲು ಗೋಪುರದ ಕಡೆ ಹೋಗುತ್ತಾನೆ. ನಿಧಾನವಾಗಿ ಮೆಟ್ಟಿಲು ಇಳಿದು ಬರುತ್ತಿದ್ದ ಹ್ಯಾರಿ, ಕೆನ್ ಎರಿಕ್ ಕೂಗಿ ರೇ ಬಗ್ಗೆ ಹೇಳುತ್ತಿದ್ದಂತೆ, ಹೊಡೆದಾಡಿ ಕಡೆಗೆ ಹ್ಯಾರಿ ಕೆನ್ ಮೇಲೆ ಮತ್ತೊಂದು ಗುಂಡು ಹಾರಿಸಿ ಕ್ಷಮೆ ಕೇಳಿ ಮೆಟ್ಟಿಲು ಇಳಿಯತೊಡಗುತ್ತಾನೆ. ಹ್ಯಾರಿಯನ್ನು ಹೇಗಾದರೂ ತಡೆಯಬೇಕು, ಆಗದಿದ್ದರೆ ತಾನು ಸತ್ತಾದರೂ ಸರಿ ರೇಗೆ ಎಚ್ಚರಿಸಬೇಕು ಎಂದು ಕೆನ್ ಮತ್ತೆ ಮೆಟ್ಟಿಲು ಹತ್ತಿ ಗೋಪುರದ ಮೇಲಿಂದ ತಾನು ಅಷ್ಟು ಇಷ್ಟ ಪಟ್ಟ ಆ ನಗರವನ್ನು ಕಡೆಯ ಬಾರಿ ನೋಡಿ ಕಣ್ತುಂಬಿಸಿಕೊಂಡು ಹಾರುತ್ತಾನೆ. ಹಾರುವ ಮುನ್ನ ಕೆಳಗೆ ಯಾರೂ ಇರಬಾರದು ಎಂದು ಮೊದಲು ಕೆಳಗೆ ಚಿಲ್ಲರೆ ಬೀಳಿಸಿ ಜನರನ್ನು ಎಚ್ಚರಿಸಿ ಹಾರುತ್ತಾನೆ. ಆತ ಬಿದ್ದ ತಕ್ಷಣ ಅದನ್ನು ನೋಡಿದ ರೇ ಅತ್ತ ಬಂದು ನೋಡಿದಾಗ ಕೆನ್ ಕೊನೆಯುಸಿರೆಳೆಯುತ್ತ ರೇಗೆ ಅಲ್ಲಿಂದ ತಪ್ಪಿಸಿಕೊಂಡು ಓಡುವಂತೆ ಹೇಳುತ್ತಾನೆ. ಅಷ್ಟರಲ್ಲೇ ಕೆಳಗೆ ಬರುವ ಹ್ಯಾರಿ ಕೆಳಗೆ ಕೆನ್ ಸತ್ತುಬಿದ್ದಿರುವುದನ್ನು ನೋಡಿ ದುಃಖಿತನಾದರೂ ರೇನನ್ನು ಅಟ್ಟಿಸಿಕೊಂಡು ಓಡುತ್ತಾನೆ. ಅಲ್ಲಿಂದ ರೇ ಈ ಮುನ್ನ ತಾನಿದ್ದ ಹೊಟೆಲ್ಲಿಗೆ ಬರುತ್ತಾನೆ. ಅವನಿದ್ದ ಹೊಟೆಲ್ ವಿಳಾಸ ಗೊತ್ತಿದ್ದ ಹ್ಯಾರಿ ಅವನನ್ನು ಹುಡುಕಿ ಅಲ್ಲಿಗೆ ಬರುತ್ತಾನೆ. ಆದರೆ ಗಾಬರಿಯಿಂದ ಓಡಿಬಂದ ರೇ ಮರೀ ಬಳಿ ಕೀಲಿಕೈ ಪಡೆದು ತನ್ನ ರೂಮಿಗೆ ಹೋಗಿ ಅಡಗಿಕೊಳ್ಳುತ್ತಾನೆ. ನಂತರ ಅವನನ್ನು ಅಟ್ಟಿಸಿಕೊಂಡು ಬಂದ ಹ್ಯಾರಿಯನ್ನು ನೋಡಿ ಮರೀ ರೇ ರೂಮಿಗೆ ಹೋಗಲು ಬಿಡುವುದಿಲ್ಲ. ಗರ್ಭಿಣಿ ಹೆಂಗಸನ್ನು ಕೊಲ್ಲುವಷ್ಟು ಕ್ರೂರಿ ತಾನಲ್ಲ, ಹಾಗಾಗಿ ದಾರಿ ಬಿಡುವಂತೆ ಹ್ಯಾರಿ ಗದರಿಸುತ್ತಾನೆ. ಅಷ್ಟರಲ್ಲಿ ರೇ, ಹ್ಯಾರಿ ಅಲ್ಲಿಗೆ ಬಂದದ್ದು ಗೊತ್ತಾಗಿ ಹ್ಯಾರಿಗೆ ಅಲ್ಲಿ ಶೂಟ್ ಮಾಡಿ ಮರೀಗೆ ಹಿಂಸೆ ಮಾಡುವುದರ ಬದಲು ತಾನು ಕಿಟಕಿಯಿಂದ ಹೊಟೆಲ್ ಹಿಂದಿನ ಕಾಲುವೆಯಲ್ಲಿ ಬೀಳಲು ಪ್ರಯತ್ನಿಸುವುದಾಗಿಯೂ, ತಾನು ಅಷ್ಟರಲ್ಲಿ ಬೇಕಾದರೆ ಹೊಟೆಲ್ ಸುತ್ತಿ ಬಂದು ತನ್ನನ್ನು ಶೂಟ್ ಮಾಡಬಹುದು ಎಂದು ಹೇಳುತ್ತಾನೆ. ಅದಕ್ಕೊಪ್ಪುವ ಹ್ಯಾರಿ ಮೂರು ಎಣಿಸಿ ಇಬ್ಬರೂ ಅಲ್ಲಿಂದ ಓಡುತ್ತಾರೆ. ರೇ ಕಿಟಕಿಯಿಂದ ನೇರ ಕಾಲುವೆಯಲ್ಲಿ ಹೋಗುತ್ತಿದ್ದ ದೋಣಿಗೆ ಹಾರುತ್ತಾನೆ. ಹಾರುವಾಗ ಗನ್ ಕೈ ಜಾರಿ ಕೆಳಗೆ ಬೀಳುತ್ತದೆ. ಅಷ್ಟರಲ್ಲಿ ಅತ್ತ ಧಾವಿಸುವ ಹ್ಯಾರಿ ರೇ ಮೇಲೆ ಗುರಿಯಿಟ್ಟು ಗುಂಡು ಹಾರಿಸುತ್ತಾನೆ. ಗುಂಡು ನೇರ ರೇನ ಹೊಟ್ಟೆ ಸೀಳುತ್ತದೆ. ರೇ ಮತ್ತೆ ದೋಣಿಯಿಂದ ಇಳಿದು ಎದ್ದು ಬಿದ್ದು ಹ್ಯಾರಿಯಿಂದ ದೂರ ಹೋಗಲು ಪ್ರಯತ್ನಿಸುತ್ತಾನೆ. ಹೀಗೆ ಹೋಗುತ್ತಾ ಹೋಗುತ್ತಾ ಕುಳ್ಳನ ಚಿತ್ರ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಬರುತ್ತಾನೆ. ಅಲ್ಲಿ ರೇ ಹೀಗೆ ಗುಂಡೇಟು ತಿಂದು ಒದ್ದಾಡುತ್ತ ಬರುತ್ತಿದ್ದನ್ನು ಗಮನಿಸುವ ಕುಳ್ಳ ಅವನ ಕಡೆ ನಡೆಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸುವ ಹ್ಯಾರಿ ಮತ್ತೆ ರೇ ಬೆನ್ನಿಗೆ ಗುರಿಯಿಟ್ಟು ನಿಲ್ಲುತ್ತಾನೆ. ರೇ ಶಾಲಾ ಸಮವಸ್ತ್ರ ಧರಿಸಿದ್ದ ಕುಳ್ಳನನ್ನು ನೋಡಿ “ಲಿಟ್ಟಲ್ ಬಾಯ್” ಎಂದು ಕೂಗುತ್ತಾನೆ. ಅದಕ್ಕೆ ಹಿಂದೆ ನಿಂತಿದ್ದ ಹ್ಯಾರಿ “ಹೌದು, ಲಿಟ್ಟಲ್ ಬಾಯ್” ಎಂದು ಹೇಳಿ ಮತ್ತೆ ರೇಗೆ ಗುಂಡು ಹೊಡೆಯುತ್ತಾನೆ. ಗುಂಡೇಟು ತಿಂದು ರೇ ಬಿದ್ದಾಗಲೇ ಹ್ಯಾರಿಗೆ ತಾನು ಒಂದು ಚಿಕ್ಕ ಹುಡುಗನಿಗೆ ಗುಂಡು ಹೊಡೆದಿದ್ದೇನೆಂದು ಗೊತ್ತಾಗುವುದು. ಆಗ ಹ್ಯಾರಿಗೆ ರೇ ಇಷ್ಟು ದಿನ ಅನುಭವಿಸಿದ ಪಾಪ ಪ್ರಜ್ಞೆಯ ಅರಿವು ಆಗುತ್ತದೆ. ರೇ ಇದ್ದ ಸಂದರ್ಭದಲ್ಲಿ ತಾನಿದ್ದಿದ್ದರೆ ತಾನು ಗುಂಡು ಹೊಡೆದುಕೊಂಡು ಅಲ್ಲೇ ಸಾಯುತ್ತಿದ್ದೆ ಎಂದು ತಾನು ಹಿಂದೆ ಹೇಳಿದಂತೆ ಈಗ ಹ್ಯಾರಿ ತನ್ನ ಬಾಯಿಗೆ ಗನ್ ಹಿಡಿದು ನಿಲ್ಲುತ್ತಾನೆ. ಅಷ್ಟರಲ್ಲಿ ರೇ ಹ್ಯಾರಿಯನ್ನು ಅದು ಚಿಕ್ಕ ಹುಡುಗನಲ್ಲ ಕುಬ್ಜ ವಯಸ್ಕ ಎಂದು ಎಚ್ಚರಿಸಲು ಪ್ರಯತ್ನಿಸಿದರೂ ಹ್ಯಾರಿ ತಾನು ತನ್ನ ಸಿದ್ಧಾಂತಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿ ಬಾಯಿಗೆ ಗುಂಡು ಹೊಡೆದುಕೊಂದು ಅಲ್ಲೇ ಸತ್ತುಬೀಳುತ್ತಾನೆ. ಅಲ್ಲಿಗೆ ಧಾವಿಸುವ ಪ್ಯಾರ ಮೆಡಿಕ್ಸ್ ನವರು ರೇನನ್ನು ಹೊತ್ತು ಅಂಬುಲೆನ್ಸ್ ನಲ್ಲಿ ಮಲಗಿಸಿ ಆಸ್ಪತ್ರೆಯ ಕಡೆಗೆ ಒಯ್ಯುತ್ತಾರೆ. ಆಗ ರೇ ತನ್ನ ಮನದಲ್ಲಿ “ಲಂಡನ್ನಿಗೆ ಮರಳಿ ಅಲ್ಲಿ ಓರ್ವ ಚರ್ಚ್ ಮದರ್ ನ ಬಳಿ ಮಾಡಿದ್ದೆಲ್ಲವನ್ನೂ ಹೇಳಿಕೊಂಡು ಆಕೆ ಕೊಡುವ ಶಿಕ್ಷೆ ಏನಾದರೂ ಸರಿಯೇ, ಜೈಲು, ಸಾವು ಏನಾದರು ಸರಿಯೇ ಅನುಭವಿಸಲು ಸಿದ್ಧ” ಎಂದುಕೊಳ್ಳುತ್ತಾನೆ. “ಏಕೆಂದರೆ ಕನಿಷ್ಠ ಪಕ್ಷ ಜೈಲಿನಲ್ಲಾಗಲಿ, ಸಾವಿನಲ್ಲಾಗಲಿ ನಾನು ಬ್ರುಜ್ ನಲ್ಲಿ ಇರುವುದಿಲ್ಲ. ಈಗ ಅನಿಸುತ್ತೆ, ನರಕ ಎಂದರೆ ಬ್ರುಜ್ ನಂತಹ ಜಾಗದಲ್ಲಿ ಅನಂತ ಕಾಲ ಕಳೆಯುವುದು ಎಂದು. ಈಗ ನಾನು ಸಾಯಬಾರದು ಎಂದು ಆಶಿಸುತ್ತೇನೆ. ಈಗ ನಾನು ಸಾಯಬಾರದು ಎಂದು ಆಶಿಸುತ್ತೇನೆ.” ಅಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಸಾವಿಗೆ ಹತ್ತಿರ ಬಂದಾಗ ಪ್ರಾಯಶ್ಚಿತ್ತ ಮಾಡಿಕೊಳ್ಳದೆ ತಾನು ಹೀಗೆ ಸತ್ತರೆ ಬ್ರುಜ್ ನಂತಹ ಪರ್ಗಟೊರಿಯಲ್ಲೇ ಕಾಲ ಕಳೆಯಬೇಕಾದೀತು ಎಂದೂ, ರೇ ಕಡೆಗೂ ಕೆನ್ ತನಗಾಗಿ ಒದಗಿಸಿಕೊಟ್ಟ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಆದರೆ ರೇ ಉಳಿಯುತ್ತಾನೋ ಅಥವಾ ಸಾಯುತ್ತಾನೋ ಎಂಬುದು ಚಿತ್ರದ ಕೊನೆಯಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ. ಬಹುಶಃ ನಿರ್ದೇಶಕ ವೀಕ್ಷಕರು ತಮ್ಮ ಮನಸ್ಥಿತಿಗೆ ತಕ್ಕಂತೆ ರೇನನ್ನು ಕಾಣುವಂತೆ ಹಾಗೆ ಪ್ರಶ್ನೆಯಾಗಿಯೇ ಉಳಿಸಿದ್ದಾರೆ ಎಂದು ನನಗನ್ನಿಸುತ್ತದೆ.
  ಈ ಚಿತ್ರದಲ್ಲಿ ರೇ, ಕೆನ್ ಮತ್ತು ಹ್ಯಾರಿಯ ಪಾತ್ರ ಸೃಷ್ಟಿ ತುಂಬಾ ಸ್ವಾರಸ್ಯಕರವಾಗಿದೆ. ಪರ್ಗಟೊರಿ ತಲುಪಿದ ಆತ್ಮ(ರೇ) ಸ್ವರ್ಗಕ್ಕೋ ನರಕಕ್ಕೋ ಎಂದು ನಿರ್ಧರಿಸಲು ಏಂಜೆಲ್(ಕೆನ್) ಮತ್ತು ಡೀಮೆನ್(ಹ್ಯಾರಿ) ಹೊಡೆದಾಡುತ್ತಿರುತ್ತಾರೆ. ಬ್ರುಜ್ ನಗರವೇ ಆ ಪರ್ಗಟೊರಿ. ರೇ ತನ್ನ ಪಾಪದಿಂದ ಮುಕ್ತನಾಗಲು, ಪ್ರಾಯಶ್ಚಿತ್ತ ಪಡೆಯಲು ಅವಕಾಶ ಕಲ್ಪಿಸುವ ಕೆನ್, ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎನ್ನುವ ಹ್ಯಾರಿ. ನಿರ್ದೇಶಕ ಈ ಕಲ್ಪನೆಯನ್ನು ಚಿತ್ರದಲ್ಲಿ ನವಿರಾದ ಹಾಸ್ಯದೊಂದಿಗೆ ಅನಾವರಣಗೊಳಿಸಿದ್ದಾರೆ. ನಾನು ಮೇಲೆ ಎಲ್ಲೂ ಹಾಸ್ಯದ ಬಗ್ಗೆ ವಿವರಿಸದೇ ಹೋದರೂ ಚಿತ್ರ ಡಾರ್ಕ್ ಕಾಮಿಡಿ ವರ್ಗ ಸೇರುವಂತದ್ದು. ರೇ ಪಾತ್ರದಲ್ಲಿ ಕಾಲಿನ್ ಫ್ಯಾರೆಲ್(Colin Farrell), ಕೆನ್ ಪಾತ್ರದಲ್ಲಿ ಬ್ರೆಂಡನ್ ಗ್ಲೀಸನ್(Brendon Gleeson) ಮತ್ತು ಹ್ಯಾರಿಯ ಪಾತ್ರದಲ್ಲಿ ರಾಲ್ಫ್ ಫಿಯೆನ್(Ralph Fiennes) ಸೊಗಸಾಗಿ ನಟಿಸಿದ್ದಾರೆ.
-ವಿಶ್ವನಾಥ್

 

Rating
No votes yet