ಭಾಗ - ೨೭ ಭೀಷ್ಮ ಯುಧಿಷ್ಠಿರ ಸಂವಾದ: ಹಿರಿಯಣ್ಣನ ಕರ್ತವ್ಯ!

ಭಾಗ - ೨೭ ಭೀಷ್ಮ ಯುಧಿಷ್ಠಿರ ಸಂವಾದ: ಹಿರಿಯಣ್ಣನ ಕರ್ತವ್ಯ!

       ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
      ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನಾವು ಐದು ಜನ ಸಹೋದರರು. ಅವರಲ್ಲಿ, ನಾನು ಎಲ್ಲರಿಗಿಂತಲೂ ದೊಡ್ಡವನು. ಸಹೋದರರಲ್ಲಿ ದೊಡ್ಡವನಾದವನು ತಮ್ಮಂದಿರೊಂದಿಗೆ ಹೇಗೆ ವ್ಯವಹರಿಸಬೇಕು? ತಮ್ಮಂದಿರು ಅಣ್ಣನೊಂದಿಗೆ ಹೇಗೆ ವ್ಯವಹರಿಸಬೇಕು? ನಮ್ಮದು ಸಮಷ್ಟಿ ಕುಟುಂಬ, ನಿಮಗೆ ತಿಳಿಯದೇ ಇರುವುದೇನಿದೆ. ಪರಸ್ಪರರಲ್ಲಿ ಕಲಹವು ಉಂಟಾಗದಂತೆ ನಾವು ನೆಮ್ಮದಿಯಿಂದ ಜೀವನ ಸಾಗಿಸುವ ಮಾರ್ಗವನ್ನು ತಿಳಿಸಿಕೊಡಬೇಕಾಗಿ ಪ್ರಾರ್ಥಿಸುತ್ತಿದ್ದೇನೆ."
      ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ನಿನ್ನ ಸಹೋದರರಲ್ಲಿ ನೀನು ಹಿರಿಯನಾದವನು, ಆದ್ದರಿಂದ ನೀನು ಹಿರಿಯನಂತೆಯೇ ವರ್ತಿಸಬೇಕು. ಗುರುವು ಹೇಗೆ ತನ್ನ ಶಿಷ್ಯರೊಂದಿಗೆ ವಾತ್ಸಲ್ಯದಿಂದ ವ್ಯವಹರಿಸುತ್ತಾನೋ, ಅದೇ ವಿಧವಾಗಿ ನೀನು ನಿನ್ನ ತಮ್ಮಂದಿರೊಂದಿಗೆ ವ್ಯವಹರಿಸಬೇಕು."
        "ಗುರುವಿನ ಆಲೋಚನೆ ಸಕ್ರಮವಾಗಿ ಇರದಿದ್ದರೆ ಶಿಷ್ಯರು ಗುರುವಿನ ಆಜ್ಞೆಯನ್ನು ಪಾಲಿಸುವುದಿಲ್ಲ. ಹಾಗೆಯೇ ಅಣ್ಣ ತಮ್ಮಂದಿರಲ್ಲಿ ಹಿರಿಯನಾದವನ ಆಲೋಚನೆಗಳು ವಕ್ರವಾಗಿದ್ದರೆ ತಮ್ಮಂದಿರು ಅಣ್ಣನಾದವನ ಆಜ್ಞೆಗೆ ಬದ್ಧರಾಗಿರುವುದಿಲ್ಲ. ಇದು ನಿಯಮವಾಗಿದೆ."
    "ದೊಡ್ಡವರ ಆಜ್ಞೆಯನ್ನು ಚಿಕ್ಕವರು ಶಿರಸಾವಹಿಸಿ ಪಾಲಿಸಬೇಕೆನ್ನುವುದನ್ನು ಬಲವಂತವಾಗಿ ಹೇರಲಾಗದು. ಭಕ್ತಿ ಗೌರವಗಳ ಕಾರಣದಿಂದಲೇ ಆಜ್ಞಾಪಾಲನೆಯು ಜರುಗಬೇಕು, ಅದು ಬಲವಂತದಿಂದ ಆಗಬಾರದು. ದೊಡ್ಡವರು ದೀರ್ಘದರ್ಶಿಗಳಾಗಿದ್ದರೆ ಚಿಕ್ಕವರೂ ಸಹ ದೀರ್ಘದರ್ಶಿಗಳಾಗಿರುತ್ತಾರೆ."
       "ಹಿರಿಯರ ಮಾತು ’ದಾರಿಯ ಬುತ್ತಿ’ ಅಥವಾ ’ದಾರಿದೀಪ’ ಎಂದು ಕಿರಿಯರು ಭಾವಿಸುವ ವಿಧದಲ್ಲಿ ದೊಡ್ಡವರ ನಡವಳಿಕೆ ಇರಬೇಕೆನ್ನುವುದು ಒಟ್ಟು ತಾತ್ಪರ್ಯ"
       "ಅದನ್ನು ಬದಿಗಿರಿಸಿದರೆ ಚಿಕ್ಕವರಾದ ನಿನ್ನ ತಮ್ಮಂದಿರು ಯಾವಾಗಲಾದರೂ ತಪ್ಪು ಮಾಡಬಹುದು. ಚಿಕ್ಕವರಾದ್ದರಿಂದ ತಪ್ಪುಗಳು ಉಂಟಾಗುತ್ತವೆ. ಅವುಗಳನ್ನು ಸರಿಪಡಿಸುವ ಬಾಧ್ಯತೆ ನಿನ್ನ ತಲೆಯ ಮೇಲೆಯೇ ಇರುತ್ತದೆ. ಹೇಗೆ ಸರಿಪಡಿಸಬೇಕು ಎನ್ನುವುದೇ ಪ್ರಶ್ನೆ"
       "ಸಹೋದರರಲ್ಲಿ ದೊಡ್ಡವನಾದ ನೀನು ಸಂದರ್ಭಕ್ಕನುಸಾರವಾಗಿ ಅಂಧನಾಗಿರಬೇಕು (ಕುರುಡ), ಜಡತ್ವದಿಂದ (ಮೊಂಡುತನ) ಕೂಡಿರಬೇಕು, ವಿದ್ವಾಂಸನಂತೆಯೂ ಇರಬೇಕು."
      "ಅಂದರೆ ತಮ್ಮಂದಿರು ಏನಾದರೂ ತಿಳಿಯದೆ ತಪ್ಪು ಮಾಡಿದರೆ ಅದನ್ನು ನೋಡಿಯೂ ನೋಡದಂತೆ ಇರಬೇಕು. ತಿಳಿದೂ ಸಹ ತಿಳಿಯದಂತಿರಬೇಕು. ಅಂಧತ್ವವೆಂದರೆ, ಜಡತ್ವವೆಂದರೆ ಇದೇ. ಅದೊಂದೇ ಸಾಲದು, ಅವರು ಮುಂದೆ ಮತ್ತೆ ಮತ್ತೆ ಅಂತಹ ತಪ್ಪುಗಳನ್ನು ಮಾಡದಂತಹ ರೀತಿಯಲ್ಲಿ ಅವರಿಗೆ ಬೇರೊಂದು ಸಂದರ್ಭವನ್ನು ಉಪಯೋಗಿಸಿಕೊಂಡು ಬುದ್ಧಿ ಹೇಳಬೇಕು. ವಿದ್ವಾಂಸನಂತೆ ವ್ಯವಹರಿಸುವುದೆಂದರೆ ಇದೇ ಆಗಿದೆ."
        "ನಾಲ್ವರೊಂದಿಗೆ ಕೂಡಿ ಬಾಳಬೇಕೆಂದುಕೊಳ್ಳುವ ವ್ಯಕ್ತಿ ಮನನ ಮಾಡಿಕೊಳ್ಳಬೇಕಾದ ರೀತಿ ಇದು. ಅದನ್ನು ಬದಿಗಿರಿಸಿ ತಪ್ಪು ಮಾಡಿದ್ದಾನೆಂದು ಹೇಳಿ ಏಕಾಏಕಿ ದಂಡಿಸಿದರೆ ಚಿಕ್ಕವನ ಹೃದಯವು ಘಾಸಿಗೊಳ್ಳುತ್ತದೆ. ತಮ್ಮ ಹೃದಯಕ್ಕೆ ಗಾಯವುಂಟಾದಾಗ, ಘಾಸಿಗೊಂಡವರು ತಮ್ಮ ವಿಷಯವನ್ನು ಇತರರೊಂದಿಗೆ ಹೇಳಿಕೊಳ್ಳಬಹುದು. ಆಗ ಕುಟುಂಬದ ವಿಷಯಗಳು ನಾಲ್ಕು ಜನರ ನಾಲಿಗೆಯ ಮೇಲೆ ಹರಿದಾಡುತ್ತವೆ. ಗುಟ್ಟಾಗಿರಬೇಕಾದ ಸಂಗತಿಗಳು ರಟ್ಟಾಗುತ್ತವೆ."
      "ಇದನ್ನು ನೋಡಿ ನಿಮ್ಮನ್ನು ಕಂಡರೆ ಆಗದವರು, ನಿಮ್ಮ ಸಿರಿಸಂಪದಗಳನ್ನು ನೋಡಿ ಈರ್ಷ್ಯೆ (ಹೊಟ್ಟೆಕಿಚ್ಚು) ಪಡುವವರು ನಿಮ್ಮಲ್ಲಿನ ವಿಭೇದಗಳನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ನಿಮ್ಮಲ್ಲಿ ನಿಮಗೆ ಹಗೆತನ, ಕಲಹಗಳನ್ನು ಹೊಸದಾಗಿ ಸೃಷ್ಟಿಸುತ್ತಾರೆ. ಆದ್ದರಿಂದ ಹೇಳುತ್ತಿದ್ದೇನೆ - ದೊಡ್ಡವನಾದವನು ಬಹಳಷ್ಟು ಸಮಯಸ್ಪೂರ್ತಿಯನ್ನು ಪ್ರದರ್ಶಿಸಬೇಕಾದ ಅವಶ್ಯಕತೆ ಇದೆ."
       "ದೊಡ್ಡವನಾದವನು ದುಷ್ಟನಾದರೆ ಅದು ಕುಟುಂಬ ನಾಶಕ್ಕೆ ಹೇತುವಾಗುತ್ತದೆ. ದುರ್ಯೋಧನನನ್ನು ನೋಡಿರುವೆಯಷ್ಟೆ!"
      "ಉಳಿದಂತೆ ತಮ್ಮಂದಿರಾದವರು ಅಣ್ಣನನ್ನು ಗೌರವದಿಂದ ಕಾಣಬೇಕಾದ ಬಾಧ್ಯತೆಯೂ ಇದೆ. ತಂದೆಯು ಮರಣಿಸಿದರೆ, ಅಣ್ಣನೇ ತಮ್ಮಂದಿರ ಪಾಲಿಗೆ ತಂದೆಯಾಗಿ ಕರ್ತವ್ಯ ನಿರ್ವಹಿಸಬೇಕು. ಅವರನ್ನು ಪೋಷಿಸುವ ಬಾಧ್ಯತೆ, ವಿದ್ಯಾಬುದ್ಧಿಗಳನ್ನು ಕಲಿಸುವ ವ್ಯವಸ್ಥೆ ಮಾಡುವುದಲ್ಲದೆ ಅವರನ್ನು ಸರಿದಾರಿಗೆ ಕೊಂಡೊಯ್ಯುವ ಬಾಧ್ಯತೆಯೂ ಸಹ ದೊಡ್ಡವನದೆ ಆಗಿರುತ್ತದೆ."
     "ಇದೇ ವಿಧವಾಗಿ ತಮ್ಮಂದಿರು ಅಣ್ಣನನ್ನು ಗೌರವವಾಗಿ ನೋಡಬೇಕಾದದ್ದು ಕುಟುಂಬದಲ್ಲಿ ಅತ್ಯಂತ ಅವಶ್ಯಕವಾದದ್ದು. ಅಣ್ಣನಾದವನು ಒಂದು ವೇಳೆ ಸಮರ್ಥನಾಗದೇ ಇದ್ದರೂ, ಸುಗುಣಶೀಲನಾಗದೇ ಇದ್ದರೂ ಸಹ ತಮ್ಮಂದಿರಿಗೆ ಗೌರವಾರ್ಹವಾದವನು ಎನ್ನುವ ಸಂಗತಿಯನ್ನು ಅವರು ಮರೆಯಬಾರದು."
     "ಧರ್ಮಜನೆ! ಕುಟುಂಬ ವ್ಯವಸ್ಥೆ ಎನ್ನುವುದು ಸಮಾಜದಲ್ಲಿ ಬಹಳ ಕೀಲಕವಾದದ್ದು. ಎಲ್ಲದಕ್ಕೂ ಅದು ಮೂಲಾಧಾರ, ಎಲ್ಲದಕ್ಕೂ ಅದು ತಳಪಾಯ, ಎಲ್ಲದಕ್ಕೂ ಅದು ದೃಷ್ಟಾಂತವಾಗಿದೆ. ಉದಾಹರಣೆಗೆ ಪಾಠಶಾಲೆಯು ಒಂದು ಕುಟುಂಬ, ಉದ್ಯಮವು ಒಂದು ಕುಟುಂಬ. ಹೀಗೆ ಕುಟುಂಬವನ್ನು ಉದಾಹರಣೆಯಾಗಿ ತೆಗೆದುಕೊಂಡು ನಡೆಯುವ ಸಮಾಜದಲ್ಲಷ್ಟೆ ಸುಖಶಾಂತಿಗಳು ನೆಲಸುತ್ತವೆ."
      "ನೀನು ಕುಟುಂಬದಲ್ಲಿನ ಹಿರಿಯ, ಆದ್ದರಿಂದ ನೀನು ಜಾಣತನದಿಂದ ವ್ಯವಹರಿಸಿದರೆ ನಿನ್ನ ಕುಟುಂಬಕ್ಕೆ ಕ್ಷೇಮ ಮತ್ತು ಲೋಕಕ್ಕೂ ಅದು ಕ್ಷೇಮವನ್ನುಂಟು ಮಾಡುತ್ತದೆ."
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ  ಭಾಗ - ೨೬ ಭೀಷ್ಮ ಯುಧಿಷ್ಠಿರ ಸಂವಾದ: ಶ್ರೀಕೃಷ್ಣ ಭೂದೇವಿ ಸಂವಾದ ಅಥವಾ ಪಂಚಯಜ್ಞಗಳು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/node/48507

Rating
No votes yet

Comments

Submitted by makara Wed, 11/14/2018 - 06:46

ಈ ಲೇಖನದ ಮುಂದಿನ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AE-...