ಮಧುರ ಒಲವಿನ ರಾಗ

ಮಧುರ ಒಲವಿನ ರಾಗ

ಮಧುರ ಒಲವಿನ ರಾಗ

 

ಹೊಳೆವ ಚಂದ್ರನ ಮೊಗವು ಚುಕ್ಕೆಗಳ ಬಾನಲ್ಲಿ

ಸಖಿಯ ಸುಂದರ ನೆನಪು ನೀಡಿತಿಲ್ಲಿ

ಕರೆವ ಕೋಗಿಲೆ ದನಿಯು, ತಂಗಾಳಿ ಬೀಸಲ್ಲಿ

ಇನಿಯನುಸಿರಿನ ಬಿಸುಪು ತೀಡಿತಿಲ್ಲಿ

 

ಪುಟಿವ ಪ್ರಣಯದ ನಾದ ಮೈ ಮನದ ಆಳದಲೂ

ಪ್ರೇಮ ಭಾವದ ಮಳೆಯ ಸುರಿಸಿತಲ್ಲ

ಮಿಡಿವ ನಿನ್ನಯ ವೀಣೆ ನನ್ನೆದೆಯ ತಾಳದಲೂ 

ಮಧುರ ಒಲವಿನ ರಾಗ ನುಡಿಸಿತಲ್ಲ

 

ಹಸಿರು ಅರಳುವ ಉಸಿರಲಿಳೆಯ ಸಂಭ್ರಮದೊಡಲು

ಇನಿಯಾಸರೆಕರೆಯ ನೆನಪಿನಲ್ಲಿ

ನವಿರು ಪ್ರೇಮದ ಹೊನಲು, ಮನವು ಹರುಷದ ಕಡಲು

ಪ್ರಿಯ ಸಖಿಯ ಸವಿನೋಟದೊನಪಿನಲ್ಲಿ

 

ಬದುಕಿ ಪ್ರೇಮದ ನೆರಳಹರಡಿಸುತಲೆಲ್ಲೆಲ್ಲೂ

ಬದುಕಿನುಬ್ಬರವಿಳಿತದಂತ್ಯದಲ್ಲೂ

ಬರಲಿ ಪ್ರೀತಿಯ ಹೊನಲು ಈ ಇಳೆಯಲೆಲ್ಲೆಲ್ಲೂ

ಇರಲಿ ಪ್ರೇಮವು ಸಹಜ ಹರಹಿನಲ್ಲೂ

 

Rating
No votes yet