ರಾಜಸ್ಥಾನವೆಂಬ ಸ್ವರ್ಗದ ತುಣುಕು- 6 : ರಾಜಪೂತ ಹೋ ಕೆ ಭೀಕ್ ಲೇತೆ ಹೋ ಕ್ಯಾ, ಸುವ್ವರ್.. ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು- 6 : ರಾಜಪೂತ ಹೋ ಕೆ ಭೀಕ್ ಲೇತೆ ಹೋ ಕ್ಯಾ, ಸುವ್ವರ್.. ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು- ರಾಜಪೂತ ಹೋ ಕೆ ಭೀಕ್ ಲೇತೆ ಹೋ ಕ್ಯಾ, ಸುವ್ವರ್..
         ನಮ್ಮನ್ನೆಲ್ಲ ಖುಷಿಯ ಕುಂಚದಲ್ಲಿ ಅದ್ದಿ ಸೂರ್ಯ ಮುಳುಗಿದನಲ್ಲವೇ.  ಮುಳುಗುತ್ತಲೇ  ಸೂರ್ಯ ಪಡುವಣ  ದಿಂಗಂತದಲ್ಲಿ ರಂಗಿನ ಓಕುಳಿಯಾಡಿ ಬಿಟ್ಟ. ತನ್ನ ಬತಳಿಕೆಯಿಂದ  ಕಿರಣಗಳ ಬಾಣಗಳನ್ನು ನಮ್ಮೆಡೆಗೆ   ಓಕುಳಿಯ  ಬಣ್ಣಗಳ  ಮೂಲಕ ಎಲ್ಲೆಡೆಗೂ ಪಸರಿಸಿ, ತನ್ನ ವೀಳೆಯದೆಲೆ  ಜಗಿದ ಬಾಯಿಯಿಂದ. ನಕ್ಕನೇನೋ.......ಇದೇ  ಬಣ್ಣ  ಮುಗಿಲ ತುಂಬ ದಟ್ಟವಾಗಿ, ಮದರಂಗಿಯಂತೆ ಪಸರಿಸಿ,  ಮರಳ ಎದೆಯ ಮೇಲೆ  ಹೊಂಬಣ್ಣ ಹರಡಿ ಮಾಹೋಲಿಗೊಂದು ಸ್ವರ್ಣಮೆರುಗು ಬಂದುಬಿಟ್ಟಿತು. ಕ್ಷಣ ಕ್ಷಣವೂ ಬದಲಾಗುವ  ನೋಟಗಳು, ಮರಳ ಸ್ಯಾಂಡ್ ಡ್ಯೂನ್‍ಗಳ ನೆರಳುಗಳೇ ಕುಂಚಗಳಾಗಿ ಅದರ ಮೇಲಿನ ಗೆರೆಗಳಿಂದ ವಿಚಿತ್ರವಾದ ಆಕೃತಿಗಳನ್ನು ಮೂಡಿಸುವಲ್ಲಿ ಸ್ಫರ್ಧೆಗಿಳಿದಂತೆ,  ಬದಲಾಗುತ್ತಿದ್ದವು.  ಅನಿರ್ವಚನೀಯ ಆನಂದೋಬ್ರಹ್ಮ ವಿಸ್ಮಯ.
    ಆ ದೃಶ್ಯವನ್ನು ಕಣ್ದುಂಬಿಕೊಳ್ಳುತ್ತ ಮಂಗಾನೇರಿಯನ್ ಸೂಫಿ ಪ್ರತಿನಿಧಿ ಸ್ವರೂಪ್‍ಖಾನ್‍ನ ಫೋಕ್‍ ನ ಸರಗಮ್ ಸಂಗೀತಕ್ಕೆ ಮನಸೋತು ಕೇಳುತ್ತ ಕುಳಿತು ಬಿಟ್ಟಿದ್ದೆವು,   ಅಸದೃಶ ಕರ್ಣಾನಂದ, ಕಾಂತಿಯುತ ವೈಭವಪೂರ್ಣ ದೃಶ್ಯಗಳು, .. ಸೂರ್ಯಾಸ್ತವಾಗುತ್ತಿದ್ದಂತೆಯೇ, ಮಂದ ಮಂದವಾಗಿ  ಹೊಂಬಣ್ಣಗಳಾದಿಯಾಗಿ ಎಲ್ಲ ಬಣ್ಣಗಳು ಒಂದೊಂದಾಗಿ ಬಣ್ಣಗಣ್ಣನ್ನು   ಪಿಳುಕಿಸುತ್ತ ಪಿಳುಕಿಸುತ್ತ ಮರಳ ಒಡಲಿನಿಂದ ಕಳಚತೊಡಗಿದವು, ಹೆಂಗಳೆಯರು ಒಂದೊಂದಾಗಿ ತಮ್ಮ ಆಭರಣಗಳನ್ನು ಕಳಚುವ ಹಾಗೆ,..... ಕೊನೆಗೊಮ್ಮೆ ನಿರಾಭರಣ ಸುಂದರಿಯಾಗಿ ಮರಳು  ಈಗ ತನ್ನ ಮೂಲ ರೂಪದಲ್ಲಿ ನಮ್ಮ ಮುಂದೆ ತೆರೆದುಕೊಂಡಿತು.  ತನ್ನ ಶ್ವೇತಬಣ್ಣದಲ್ಲಿ ಒಣಹಾಕಿದ ಆಕಾಶದಂತೆ, ಸುರುಳಿ ಬಿಚ್ಚಿದ ಬಟ್ಟೆಯ ತಾಗೆಯಂತೆ, ಮಡಿಕೆ ಮಡಿಕೆಯಾಗಿ, ಉದ್ದಕ್ಕೂ ಬಿಚ್ಚಿಕೊಂಡಿತು, ಇಸ್ತ್ರೀ ತೀಡದಂತಿದ್ದ ಈ ಮಡಿಕೆಯ ಮರಳಬಟ್ಟೆ. ಅದೇನೋ ಹೇಳಲಾರದ ಆಹ್ಲಾದಕರ ಮನೋಲ್ಲಾಸವೊಂದರ ಮಾಹೋಲ್ ಸೃಷ್ಟಿಸಿ, ನಮ್ಮತ್ತ ನೋಡುತ್ತಿತ್ತು, ಮಗುವಾಗಿ, ನಗುವಾಗಿ,ಶಾಂತ ಸಾಗರವಾಗಿ...
      ಇನ್ನೂ ಸಂಜೆಯಾಗುತ್ತಿದ್ದಂತೆಯೇ  ಈಗ ತಣ್ಣಗೆ ಗಾಳಿ ಬೀಸತೊಡಗಿತು.  ಗಾಳಿ ಬರುವುದನ್ನೇ ಕಾಯುತ್ತಿದ್ದ ಮರಳೂ ಕೂಡ, ಅದು ತನಗೆ  ಸ್ಪರ್ಶಿಸಿದ ಕೂಡಲೇ ಅದರೊಡನೆ  ಹಾರಿ ಹಾರಿ ಬರತೊಡಗಿತು.  ತನ್ನ ಮನೆಯ  ಬಾಲಕ  ಶಾಲೆಯಿಂದ ಬಂದ ಕೂಡಲೇ ಬಿಚ್ಚಿದ ನಾಯಿಮರಿಯು  ಅವನೊಡನೆ  ಎಗರಾಡಿ, ತುಂಟಾಟ ಆಡುವಂತೆ, ...... ಅದೇ ನಾಯಿಮರಿಯು ಮನೆಗೆ ಬಂದ ಅಪರಿಚಿತ ಅತಿಥಿಗಳಿಗೆ ಮೈಮುಖಗಳ ತುಂಬ ಮೂಸುತ್ತ, ತನ್ನವರನ್ನಾಗಿ ಮಾಡಿಕೊಂಡು   ತೊಡೆಯಮೇಲೆ ಬೆಚ್ಚಗೆ ಕೂರುವಂತೆ,   ನಮ್ಮ ಮೈಮೇಲೆ ಎಲ್ಲೆಂದರಲ್ಲಿ ಮೂಸುತ್ತ,  ಮುಖ, ಕೈ, ಭುಜದ ಮೇಲೆ ಬಂದು ಕೂತುಕೊಳ್ಳುತ್ತ ನಮ್ಮನ್ನು ನೇವರಿಸಿ, ನೆಕ್ಕತೊಡಗಿತು, ಮುಗ್ಧ ಮರಳು. ......  ಈಗ ಅದು ನಮ್ನನ್ನು ಗುರುತಿಸಿ  ಪರಿಚಿತರ ಲಿಸ್ಟನಲ್ಲಿ ಹಾಕಿಕೊಂಡಿತ್ತು.. . ನನ್ನ ಕೈ ಮೈ ಮೇಲೆ ಏರಿ ನನ್ನ ಜೇಬಿನಲ್ಲೂ ಬಂದು ಕೂತಿತು, ಇವಳ ಮಡಿಲಲ್ಲಿ ಬೆಚ್ಚಗೆ ಮನೆಮಾಡುತ್ತಿತ್ತು..ಈ ಅನುಭೂತಿಯಿಂದ ನಮ್ಮೆಲ್ಲರ ಕಣ್ಣುಗಳಲ್ಲಿ ಮಿಂಚುಗಳು ಹೊಳಪಿಸಿದ್ದುದನ್ನು ಪರಸ್ಪರ ಗುರುತಿಸಿದೆವು. ಒಂದುರೀತಿ ಅನನ್ಯತೆ ಅನುಭವಕ್ಕೆ ಬಂದ ಗಳಿಗೆ ಅದು.
    ಇನ್ನು ಹೆಚ್ಚು ಹೊತ್ತು ಇದ್ದರೆ, ಗಾಳಿ ಜೋರಾಗಿ ಕಣ್ಣುಗಳಲ್ಲಿ ಮರಳು ಹೋಗಿ ತೊಂದರೆಯಾಗಬಹುದು ಎಂದು 'ಅಬ್‍ಹಮೇಂ  ಜಾನಾ ಪಡೇಗಾ ಸರ್, ಆಜ್ ಕುಛ್ ಜಾದಾ ಹೀ  ಹವಾ ಚಲ್ ರಹಾ ಹೈ' (ಇಂದು ಸ್ವಲ್ಪ  ಹೆಚ್ಛೇ ಗಾಳಿ ಬೀಸುತ್ತಿದೆ, ಈಗ ನಾವು ಹೊರಡುವುದೇ ಲೇಸು )'ಎಂದ ಕಿರಿಯ ಮಾವುತ.
            ಸರಿ ಎಂದು ಅವರ ಸಲಹೆಯಂತೆ   ನಮ್ಮ ಸಫಾರಿ ಮರಳಲು ಸಿದ್ಧವಾಯಿತು. ಇಷ್ಟೊತ್ತಿಗಾಗಲೇ ಉಳಿದ ಪ್ರವಾಸಿಗರೂ ಕೂಡ ಆಗಲೇ ಬಹಳಷ್ಟು ಜನ ಮರಳಿದ್ದರು.  ಈ ಒಂಟೆ ಸಫಾರಿ ಎಂದರೆ, ಮರಳುಗಾಡಿನಲ್ಲಿ ಸುಮಾರು 8-10 ಕಿಮೀಗಳಷ್ಟು   ದೂರ ಹೋಗಿ ಅಲ್ಲಿಂದ ಮರಳಿ ಮುಂದೆ ಇನ್ನೊಂದು ಪೂರ್ವನಿಗದಿತ ಸ್ಥಳಕ್ಕೆ ಬಂದು ತಲುಪುತ್ತಾರೆ. ಒಂದು ಲೂಪ್ ತರಹದ ಪಯಣ.
     ಕುರುಚಲು ಕಂಟಿಗಳ ಒಣ ಬಂಜರು ಮರಳ ಎದೆಯಲ್ಲಿ ದಾರಿಯಂತಹದೊಂದು ಮೂಡಿದಂತಿದ್ದ, ದಾರಿಯಲ್ಲದ ದಾರಿಯ ಮುಖಾಂತರ ಮರಳುವಾಗ ಎರಡುಮೂರು ಕಡೆಗಳಲ್ಲಿ ಜಿಂಕೆಗಳ ಹಿಂಡುಗಳು, ಅಲ್ಲಲ್ಲಿ  ನವಿಲುಗಳು, ವಿಧ ವಿಧದ ಹಕ್ಕಿಗಳು ಕಂಡವು. ಜಿಂಕೆಗಳಂತೂ ಸಾಕಷ್ಟು, ಸಮೀಪಿಸಿ ಹೋದಾಗ ಮಾತ್ರ ದೂರ ಓಡಿದವು..
    ಇನ್ನಷ್ಟು ಮುಂದೆ ಮುಂದೆ ಚಲಿಸಿದಾಗ, ಅಲ್ಲಿ ಒಂದು ಜಾಲಿಯ ಮರಕ್ಕೆ ಕಟ್ಟಲಾದ ಒಂಟೆಯೊಂದನ್ನು ಮಾವುತ ತೋರಿಸಿದ. ಅದು ಇದರ ಗೆಳತಿ ಎಂದು ಹೇಳಿ, ಅದರತ್ತ ಕೂಗಿದ. ಅದು ನಮ್ಮನ್ನು ನೋಡಿ, ಕಟ್ಟಿದಲ್ಲೇ ಓಲಾಡತೊಡಗಿತು. ನೋಡ ನೋಡುತ್ತಿದ್ದಂತೆಯೇ, ಪೂರ್ಣಿಮಾ ಹಾಗು ಅನೂಷಾ ಕುಳಿತ ಒಂಟೆ ಹಗೂರಾಗಿ,ಅದರತ್ತ ತಿರುಗಿ ಚಲಿಸತೊಡಗಿತು. ಫಕ್ಕನೆ 70 ರ ಮಾವುತ ಇಪ್ಪತ್ತರವನಾಗಿ, ಜಗ್ಗಿ ಅದನ್ನು ನಿಲ್ಲಿಸಿದ.  ಅದರ ಕೊರಳ ಮೇಲೆ ಸವರುತ್ತ ಅದರೊಡನೆ ಮಾತನಾಡತೊಡಗಿದ. ಅದೂ ಕೂಡ ಕತ್ತೆತ್ತಿ, ಅದರ ಗೆಳತಿಯೆಡೆಗೊಮ್ಮೆ ಕೆಣೆಯಿತು. ಅದರೊಡನೊಮ್ಮೆ ನಜರು ಮಿಳಿಸಿ ಓಲಾಡಿತು, ಅಷ್ಟೆ.  ಮತ್ತೆ ಏನೂ ಜರುಗಿಲ್ಲವೇನೋ ಎಂಬಂತೆ ಮುನ್ನಡೆಯಿತು. ನಾವು ತಲುಪಬೇಕಾದ  ಸ್ಥಳ ಬಂತು. ಅಲ್ಲಿ  ನಮ್ಮನ್ನು ಬರಮಾಡಿಕೊಳ್ಳಲು ನಮ್ಮ ನಮ್ಮ ವಾಹನಗಳು ಬಂದಿದ್ದವು. . ಕೆಳಗೆ ಇಳಿದು ಇಬ್ಬರೂ ಮಾವುತರಿಗೆ  ಪ್ರೀತಿಯಿಂದ ಭಕ್ಷೀಸು ನೀಡಿ ಅವರಿಗೆ ಧನ್ಯವಾದ ಹೇಳಿದೆವು.
    ಅರೆ! ಇವರೆಲ್ಲಿಂದ ಬಂದರು ಎಂದು ಆಶ್ಚರ್ಯದಿಂದ ಅಲ್ಲಿ ನಿಂತ ಪುಟ್ಟ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಯಿತು. ಸಮೀಪದಲ್ಲೆ ಇದ್ದ  ನಾಲ್ಕು ಮನೆಗಳ 'ಢಾಣಿ'(ಹ್ಯಾಬಿಟೇಶನ್) ಹುಡುಗರು ಅವರು.  ನಾಲ್ಕೂ ಜನ ಮಕ್ಕಳು ಕಿವಿಗಳಲ್ಲಿ ವಿಧ ವಿಧದ ಲೋಲಾಕುಗಳನ್ನು ಧರಿಸಿ ಮುದ್ದು  ಮುದ್ದಾಗಿದ್ದರು. ತೆಳ್ಳಗೆ ಬೆಳ್ಳಗೆ ವಯಸ್ಸಿಗೂ ಮೀರಿದ ಎತ್ತರದಲ್ಲಿ. ಮುದ್ದು ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ, ಅವರತ್ತ ನಕ್ಕು ಪ್ರೀತಿಯಿಂದ,  ಪುಟ್ಟ ಹುಡುಗನೊಬ್ಬನಿಗೆ ಕರೆದು ಇವಳ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಬಿಸ್ಕೀಟ್ ಪ್ಯಾಕೆಟ್‍ವೊಂದನ್ನು ಅವನ ಕೈಗಿಟ್ಟೆ, ಈ ಮಾವುತರತ್ತ ನೋಡುತ್ತ ಬೇಡವೆಂದ.  ಆದರೂ ಒತ್ತಾಯ ಮಾಡಿ ಪ್ರೀತಿಯಿಂದ ಬೇಡವೆನ್ನಬಾರದು ಎಂದು ಹೇಳಿ ಅವನಿಗೆ ಅದನ್ನು ಒತ್ತಾಯದಿಂದ ಕೊಟ್ಟೆ. ಒಂದು ರೀತಿ ಅಂಜುತ್ತ ತೆಗೆದುಕೊಂಡಿತು ಮಗು. ಕೂಡಲೇ ಮಾವುತ ಜೋರುದನಿಯಲ್ಲಿ ಅವನಿಗೆ ,' ರಾಜಪೂತ ಹೋ ಕೆ ಭೀಕ್ ಲೇತೇ ಹೋ  ಕ್ಯಾ , ಸುವ್ವರ್'(ರಾಜಪೂತನಾಗಿ ಭಿಕ್ಷೆಯನ್ನು ಸ್ವೀಕರಿಸುವೆಯಾ, ಹಂದಿಯಂತವನೇ) ಎಂದು ಆ ಬಾಲಕನ ಕೆನ್ನೆಗೆ ಛಟೀರನೇ ಬಾರಿಸಿಬಿಟ್ಟ. ಭಯವಾಗಿ ಶಾಕ್ ಆಯಿತು. 'ನಹೀಂ ಭಯೀ ಸಾಬ್, ಹಮ್ ಪ್ಯಾರ್ ಸೆ ದಿಯೇ ಹೈಂ, ಭೀಕ್ ಮತ್ ಸಮಝನಾ' (ಇಲ್ಲ ಇಲ್ಲ ಭಾಯೀ ಸಾಬ್, ಪ್ರೀತಿಯಿಂದೆ ನಾನೇ ನೀಡಿರುವೆ, ಭಿಕ್ಷೆ ಎಂದು ತಿಳಿದುಕೊಳ್ಳಬೇಡಿ')ಎಂದೆ. ನನಗೆ ಅರಿವಿಲ್ಲದಂತೆ ನನ್ನ ದನಿಯೂ ನಡುಗುತ್ತಿತ್ತು.. ಮಾವುತ ನನ್ನಡೆಗೆ ತಿರುಗಿ, 'ವೊ ತೊ ಠೀಕ್ ಹೈ ಸರ್ ಜಿ,  ಆಜ್ ಆಪ್ ಪ್ಯಾರ ಸೇ ಹೀ ದೇ ರಹೇ ಹೋ, ಸಹಿ ಹೈ, ಮಗರ್ ಕಲ್ ಔರ್ ಲೋಗ್ ಇಧರ ಆಜಾಯೆಂಗೆ, ತಬ್ ಇನ್ ಕೆ ನಜರ್  ಉನ್‍ಕೆ ಹಾಥೋಂ ಕೊ ದೇಖೇಗಾ, ಬಾದ್ ಮೇಂ ಆದತ್ ಪಡ್ ಜಾಯೇಗಿ  ಇಸ್ ಲಿಯೆ' (ಅದೇನೋ ಸರಿ ಸರ್, ನಾಳೆ ಇನ್ನೊಬ್ಬರು ಇಲ್ಲಿ ಬರುತ್ತಾರೆ ಆವಾಗ ಇವರ  ನಜರುಗಳು ಅವರ ಕೈಗಳನ್ನೇ ನೋಡುತ್ತವೆ, ಭಿಕ್ಷೆ ಒಂದು ಅಭ್ಯಾಸವಾಗಿಬಿಡುತ್ತದೆ ಅದಕ್ಕೆ )ಎಂದ. ಅವನ ದೂರ ದೃಷ್ಟಿಗೆ, ಸ್ವಾಭಿಮಾನಕ್ಕೆ ತಲೆದೂಗಿದೆ. ನನ್ನ ತಪ್ಪು ಅರಿವಾಗಿತ್ತು. ನಿಮ್ಮದೂ ಮಾತು ಸರಿ ಇದೆ. 'ಮಾಫ ಕರನಾ ಭಾಯೀ ಸಾಬ್, ಗಲತೀ ಮೇರಾ ಥಾ' ಎಂದೆ. ಪುಕ್ಕಟೆ ಕೊಟ್ಟರೂ ತೆಗೆದುಕೊಳ್ಳಬಾರದೆಂಬ ಬದುಕಿನ ಮೂಲ ಪಾಠ ಅವನ ಮಾತಿನಲ್ಲಿತ್ತು. ಇಂತಹ ಕೊಡುಗೆಗಳು ರಟ್ಟೆಗಳನ್ನೇ ಕಸಿದುಕೊಂಡಾವು ಎಂಬ ಬದುಕಿನ ಕಾಳಜಿ ಅವನದಾಗಿತ್ತು.   ಆ ಬಾಲಕನ ಹತ್ತಿರ ಹೋಗಿ ತಲೆ ಸವರಿ, 'ಸಾರೀ ಮಾಯ್ ಚೈಲ್ಡ್ ' ಎಂದೆ. ಇವಳ ಕಣ್ಣುಗಳೂ  ಕೂಡ ಆ ಏಟಿಗೆ ಒದ್ದೆಯಾಗಿ ತಲ್ಲಿಣಿಸಿದ್ದವು.
      ಹೂಂಂ... ಇರಲಿ,......ನಮ್ಮ ಇನೋವಾದಲ್ಲಿ ಕುಳಿತು ನಮ್ಮ ರೆಸಾರ್ಟ್‍ನತ್ತ ಹೊರಟೆವು. ನಾವು ಒಳ ಹೋಗುವಾಗ ಸಮೀಪದಲ್ಲೇ ಸುಂದರವಾದ ನವಿಲು ಜೋಡಿಯೊಂದು ತಮ್ಮದಟ್ಟ  ನೀಲಿಬಣ್ಣಗಳಲ್ಲಿ ಬಲು ಚಂದವಾಗಿ ಕಂಡವು. ಒಳ ಹೋಗುತ್ತಲೇ ನಮ್ಮನ್ನು ಅದೇ ನಮ್ಮ ಬಾಲ್ಯದ ಗೆಳೆಯರು 'ಗುಬ್ಬಚ್ಚಿಗಳು' ಸ್ವಾಗತಿಸಿದೆವು.. ಅಲ್ಲಿ ಎಲ್ಲ ಕಡೆಗೂ ಅವು ತಮ್ಮ ಚಿಲಿಪಿಲಿಯಿಂದ ಗಮನ ಸೆಳೆದವು.
       ನಮಗೊದಗಿಸಿದ ಟೆಂಟ್‍ನಲ್ಲಿ ಒಂದು ಡಬಲ್‍ಕಾಟ್ ಬೆಡ್,  ಬಾತ್ ರೂಮ್, ಹೊರಗೆ ಕೂತು ವಿದ್ಯಮಾನಗಳನ್ನು ವೀಕ್ಷಿಸಲು ಎರಡು ಮೂರು ಖುರ್ಚಿಗಳನ್ನು ಹಾಕಿ ಸಣ್ಣ ವೆರಾಂಡಾ ಇತ್ತು. ವಿದ್ಯುತ್, ಜನರೇಟರ್, ಕಮೋಡ್ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿತ್ತು.  ಹೊರಗೆ ರೆಸಾರ್ಟ್ ಮಧ್ಯದಲ್ಲಿ ಚಹದ ಕಿತ್ತಲಿಯೊಂದಿಗೆ, ಚಿಪ್ಸ್, ಬ್ರೆಡ್ ಪೀಸ್, ಬಿಸ್ಕಿಟ್ ಇಟ್ಟು ನಮಗೆ  ಚಹ ಕುಡಿಯಲು ಆಹ್ಹಾನಿಸಿದರು. ನಮಗೆ ಎಷ್ಟು ಬೇಕೋ ಅಷ್ಟನ್ನು ಸೇವಿಸಿದೆವು.  ನಂತರ ಬಾತರೂಂಗೆ  ತೆರಳಿ ಮುಖ ತೊಳೆಯೋಣವೆಂದು ಒಂದು ಮಗ್‍ನಲ್ಲಿ ನಲ್ಲಿನೀರು ಹಿಡಿದು ಮುಖ ತೊಳೆಯುತ್ತ ಬಾಯಿಗೆ ಹಾಕಿಕೊಂಡೆ, ಅಯ್ಯಯ್ಯೋ!  ಸಮುದ್ರ ನೀರಿಗಿಂತ ಹತ್ತು ಪಟ್ಟು ಉಪ್ಪು. 'ಖಾರೇ ಪಾನೀ' ಎನ್ನುವರು ಇದಕ್ಕೆ, ಇದರ ಬಗ್ಗೆ ಕೇಳಿದ್ದೆ, ಇಂದು ಸಾಕ್ಷಾತ್ ಅನುಭವಿಸಿದ್ದೆ. ಬಾಯಿಯಲ್ಲಿ ಹಾಕುವ ಹಾಗಿಯೇ ಇಲ್ಲ.  ಮುಖವೆಲ್ಲ ಉರಿಯತೊಡಗಿತು.  ಅನಿವಾರ್ಯವೆನಿಸಿ 50 ರೂಪಾಯಿ ಕೊಟ್ಟು ಖರೀದಿಸಿದ, ಮಿನರಲ್ ವಾಟರ್‍ನ ಬಾಟಲಿಯಿಂದ ತುಸು ನೀರು ತೆಗೆದುಕೊಂಡು  ಮುಖಮಾರ್ಜಿಸಿದೆ. ಇವರಿಗೂ  ಅದರ ಬಗ್ಗೆ ಹೇಳಿದ್ದರಿಂದ ಇವರೂ ಹಾಗೆಯೇ ಮಾಡಿದರೆನ್ನಿ.
    ಸಂಜೆಯ  ಫೈರ್ ಕ್ಯಾಂಪ್ ಸಂಗೀತ ಕಾರ್ಯಕ್ರಮಕ್ಕೆ  ಹಾಡುಗಾರರು, ನರ್ತಕಿಯರು ಬಂದಿದ್ದರು. ಎಲ್ಲ ತಯಾರಿಯಾಗಿ ಏಳುವರೆಗೆಲ್ಲಾ  ಸಂಗೀತ ಕಾರ್ಯಕ್ರಮ ಶುರುವಾಯಿತು.   ತಣ್ಣಗೆ ಚಳಿ ದಟ್ಟವಾಗತೊಡಗಿತ್ತು. ನಟ್ಟ ನಡುವೆ ಉರಿಯುವ ಫೈರ್ ಕ್ಯಾಂಪ್‍ನ ಬೆಳಕಿನಲ್ಲಿ   ಈ ನೆಲದ ಜನಪದೀಯ ಹಾಡುಗಾರರಾದ ಮಿರಾಸಿ (ಮಂಗಾನಿಯರ್) ಹಾಡುಗಾರರು,  ಪಿಯಾನೋ, ಕರತಾಲ್ ಹಾಗೂ ಢೋಲ್‍ಗಳನ್ನು  ಮುದವಾಗಿ ನುಡಿಸುತ್ತ , ಮೊದಲು ರಾಜಸ್ಥಾನದ ವೆಲ್‍ಕಮ್ ಸಾಂಗ್, 'ಕೇಸರಿಯಾ ಬಾ¯ಮ್ ಸಾ, ಅವೋ..ಪಧಾರೋ  ಮ್ಹಾರೇ ದೇಸ' ದಿಂದ ಚಾಲನೆ ನೀಡಿದರು. ಮೂರ್ನಾಲ್ಕು  ಹಾಡುಗಳಾದ ನಂತರ ಅವರ ಹಾಡಿಗೆ ಕಾಲಬೇಲಿಯನ್ ನರ್ತಕಿಯರು ವಿವಿಧ ಆಕರ್ಷಕ ಸ್ಟೆಪ್‍ಗಳಲ್ಲಿ  ಹೆಜ್ಜೆಹಾಕುತ್ತ  ಕುಣಿದು ಮನತಣಿಸಿದರು. ಹಾಗೂ  ಅವರ ಘೂಮರ್, ಮಯೂರಿ ನೃತ್ಯಗಳು ಬಲು ಆಕರ್ಷಿಸಿದವು.  ಶತಮಾನಗಳ ಸಂಸ್ಕøತಿಯ ಈ ಜನಪದೀಯ ಹಾಡು, ನೃತ್ಯಗಳನ್ನು ನೋಡಿ, ನಮ್ಮ ದೇಶದ ಸಂಸ್ಕøತಿಯ ಶ್ರೀಮಂತಿಕೆಯ  ಬಗ್ಗೆ ಹೆಮ್ಮೆ ಎನಿಸಿತು.. . ಉಂಗುರಗಳನ್ನು ನೆಲದ ಮೇಲಿಟ್ಟು ಅವುಗಳನ್ನು ನೃತ್ಯಮಾಡುತ್ತ ಹಿಂದಕ್ಕೆ ಬಾಗಿ ಕಣ್ಣುಗಳಿಂದ ಎತ್ತಿಕೊಳ್ಳುವ ಪರಿ ಅದ್ಭುತ. ಈ ಕಲಾವಿದರು ಅಲ್ಲಿ ನೆರೆದ ಯಾರನ್ನೂ ಬಿಡದೇ  ಪ್ರೀತಿಯಿಂದ  ಕರೆದುಕೊಂಡು  ಒಂದೆರಡು ಸಿಂಪಲ್ ಸ್ಟೆಪ್ಸ್ ಹೇಳಿಕೊಟ್ಟು ಕುಣಿಸುತ್ತಾರೆ.
   ಅದುವರೆಗೂ ಹಾಡು ಕುಣಿತಗಳಲ್ಲಿ ಮೈಮರೆತಿದ್ದ ನಮಗೆಲ್ಲ ಈಗ ಈ  ಹಾಡುಗಾರರು ರಾಜಸ್ಥಾನದ ಅಸಲು ಮಿಟ್ಟಿಯ ಸುಮಧುರವಾದ ಜನಪದೀಯ ಸಂಗೀತವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನ ಗೆದ್ದರು, ನನಗೆ ಅಷ್ಟೊಂದು ಸುರೀಲಾ ಹಾಡು ಕೇಳಿ ತಡೆಯುವುದಾಗಲಿಲ್ಲ,  ಆ ಮಿರಾಸಿ, ಮೋಡಿಯ ಸಂಗೀತಗಾರನ ಹತ್ತಿರ ಹೋಗಿ, ಅವನನ್ನು ಅಭಿನಂದಿಸಿದೆ. 'ಅಭೀತಕ್ ಮಹಫಿಲ್ ಮಾಹೋಲ್ ಕಿ ಗುಲಾಮ್ ಥೀ, ಆಪ್ ತೊ ಮಾಹೋಲ್ ಕೊ ಗುಲಾಮ್ ಬನಾದಿಯಾ' ವಾಹ್. ಭಯೀ  ವಾಹ್'  ('ಇದುವರೆಗೂ ಈ ಸಭೆಯೊಂದು ವಾತಾವರಣದ ಗುಲಾಮನಾಗಿತ್ತು ನೀವು ಈ ವಾತಾವರಣವನ್ನೇ ಗುಲಾಮನನ್ನಾಗಿಸಿದಿರಿ')ಎಂದು ತಬ್ಬಿ ಅಭಿನಂದಿಸಿದೆ.   ಅವರೆಲ್ಲರ ವೇಷಭೂಷಣಗಳೆಲ್ಲ  ಬಣ್ಣಗಳಲ್ಲಿ  ಅದ್ದಿದಂತೆ, ಅವರ ಕಲೆಗಳೂ ಕೂಡ ಬಣ್ಣಗಳನ್ನೇ ಮೆತ್ತಿಕೊಂಡಿವೆ. ನೃತ್ಯಗಾತಿಯರ ಕಾಲ್ಗೆಜ್ಜೆಗಳ ಕುಣಿತಗಳ ಲಯನಾದಕ್ಕೆ  ಎದ್ದ ಮಣ್ಣು ಹುಡಿಗಳೊಂದಿಗೆ,  ಬಣ್ಣದ ಮೆರುಗಿನೊಂದಿಗೆ ಅವರ ಮೈಸುಗಂಧ, ಅತ್ತ ಗಾನ ಗಂಧ ತೇಲಿ  ಬರುತ್ತಿತ್ತು.
   ಮಗಳು ಅನೂಷಾ ಇಷ್ಟೊಂದು ಚನ್ನಾಗಿ ಡ್ಯಾನ್ಸ್ ಮಾಡುತ್ತಾಳೆಂದು ತಿಳಿಯಲು  ಕಾಲಬೇಲಿಯನ್‍ ನೃತ್ಯಗಾತಿಯರೇ ಬಂದು ತೋರಿಸಬೇಕಾಯಿತು. ಎಲ್ಲಿಯೂ ಓಪನ್ ಅಪ್ ಆಗುವುದೇ ಇಲ್ಲ ನಾವು. ಅವಳು ಇಷ್ಟು ಚನ್ನಾಗಿ ನೃತ್ಯ ಮಾಡುತ್ತಾಳೆಂದರೆ ಅವಳಿಗೆ ಚಿಕ್ಕವಳಿದ್ದಾಗ  ಡ್ಯಾನ್ಸ್ ಸ್ಕೂಲ್‍ಗೆ  ಸೇರಿಸಬೇಕಿತ್ತೇನೋ. ಮುಂಬಯಿಯಿಂದ ಬಂದ ಸುಮಾರು ಹತ್ತು ಯುವಕರ ದಂಡೊಂದು ತುಂಬ ಚನ್ನಾಗಿ ಬಾಲಿವುಡ್ ಪ್ರದರ್ಶಿಸಿತು.. ಅಮೇರಿಕೆಯ ಕುಟುಂಬವೊಂದು ಠಾಕೂರ ಶೈಲಿಯಲ್ಲಿ ಗಾದಿ, ತೆಕ್ಕೆಯಲ್ಲಿ ವಿರಮಿಸಿ ಗ್ಲಾಸ್‍ನ್ನು ಕೈಲಿ ಹಿಡಿದು  ಸುರಾಪಾನದೊಂದಿಗೆ  ಆನಂದಿಸುತ್ತಿದ್ದರು.  ಆಸಕ್ತರಿಗೆ ಸುರಾಪಾನದ ವ್ಯವಸ್ಥೆ  ಇರುತ್ತದೆ. ಅದರ ಮಜಾ ಸವಿಯುತ್ತ  ಡಬಲ್ ಮಜಾ ಪಡೆಯುವ ಭಾಗ್ಯ ನನ್ನಂಥವರಿಗೂ!
     ರಾತ್ರಿ ಹನ್ನೊಂದೂವರೆಗೂ ನಡೆದಿತ್ತು ಹಾಡು ಕುಣಿತಗಳು. ಸಾವಕಾಶವಾಗಿ ಹನಿ ಹನಿಯಾಗಿ  ಉದುರಿದ  ಮಳೆ  ಜೋರಾಗಿಯೇ ಸುರಿಯತೊಡಗಿತು. ಅವರಿಗೆಲ್ಲ ಖುಷಿಯೋ ಖುಷಿ.  ಮೊದಲೇ ಚಳಿ ತಡೆಯುವುದಾಗುತ್ತಿರಲಿಲ್ಲ, ತಣುವಿಗೆ ನಮ್ಮ ಕೈಗಳೇ ನಮ್ಮ ಸಂಪರ್ಕದಲ್ಲಿ ಇದ್ದಂತೆ ತೋರುತ್ತಿರಲಿಲ್ಲ. ಅಂತಹದರಲ್ಲಿ ಮಳೆಯಿಂದ ಇನ್ನೂ ಚಳಿ ಹೆಚ್ಚು ಅನಿಸಿತು.  ಜೀವನನಲ್ಲೇ ವಿನೂತನ ಅನುಭವ ಪಡೆದು, ರಾತ್ರಿಯ  ಭೋಜನದೊಂದಿಗೆ ಎಲ್ಲರಿಗೂ  ಶುಭರಾತ್ರಿ ಹೇಳಿ ನಮ್ಮ ನಮ್ಮ ರಜಾಯಿಗಳಲ್ಲಿ ಬೆಚ್ಚನೆಯ ನಿದ್ದೆಗೆ ಜಾರಿದೆವು.  
      ಹಿಂದಿನ ದಿನ  ಕ್ಯಾಂಪ್‍ಫೈರ್ ನಲ್ಲಿ ಪರಿಚಿತರಾಗಿದ್ದ, ನಮ್ಮ ಪಕ್ಕದ ಟೆಂಟ್‍ನಲ್ಲಿ ಆಂಧ್ರಮೂಲದ ಟೆಕ್ಕಿ ದಂಪತಿಯಿದ್ದರು. ಬೆಳಿಗ್ಗೆ ನಮಗೆ ಕೂಗಿ ವಾಕಿಂಗ್ ಹೋಗೋಣವೇ ಎಂದು ಕೇಳಿದರು. ಅಷ್ಟರಲ್ಲಾಗಲೇ ರೆಡಿಯಾಗಿದ್ದ ನಾವು ಅವರೊಂದಿಗೆ   ಸುಮಾರು ಎರಡು ಕಿಮೀಗಳಷ್ಟು ದೂರದಲ್ಲಿದ್ದ,  ಎತ್ತರದ  ಕುರುಚಲು ಮರಳ ಬೆಟ್ಟದ ಕಡೆಗೆ ವಾಕಿಂಗ್ ಹೊರಟೆವು.  ಅದ್ಭುತ ಅನುಭವ. ಮುಂಜಾನೆಯ ಚುಮು ಚುಮು ಬೆಳಕು, ತಣ್ಣಗಿನ ವಾತಾವರಣ, ವಿಹಂಗಮ ನೋಟ, ಇನ್ನೂ ತೂಕಡಿಸುತ್ತಿರುವಂತೆ ಮಲಗಿದ ಮರಳ ಹಾಸಿಗೆ,  ಅದನ್ನು ಎಚ್ಚರಗೊಳಿಸಲೋ ಏನೋ ಎಂಬಂತೆ ಮೈನಾಗಳು, ಬುಲ್‍ಬುಲ್, ಗುಬ್ಬಚ್ಚಿಗಳ ಕಲರವ, ಅಲ್ಲಲ್ಲಿ ಮರಳ ಮೇಲೆ. ತುಸು ಮುಂದೆ ಹೋಗುತ್ತಲೇ ನವಿಲುಗಳೆರಡು ಸಣ್ಣದಾದ ಪೊದೆಹಿಂದೆ ಅಡಗಿಕೊಂಡವು.  ದಿನ್ನೆಯ ಮೇಲೆ ತಲುಪುವಷ್ಟರಲ್ಲಿ ಎಲ್ಲರಿಗೂ ಏದುಸಿರು. ಅಷ್ಟು ಎತ್ತರವಿತ್ತು, ಬರಿಗಣ್ಣಿಗೆ ಅನಿಸಿರಲೇ ಇಲ್ಲ.  ಸುತ್ತ ಎತ್ತಲೂ ಸಣ್ಣ ಸಣ್ಣ ಪೊದೆಗಳಷ್ಟೆ, ಉಳಿದಂತೆ ಮರಳೇ ಮರಳು, ದೂರ ದೂರಕ್ಕೂ. ಇಲ್ಲಿಂದ ಪಾಕಿಸ್ತಾನದ ಬಾರ್ಡರ್ ಸುಮಾರು ನಲವತ್ತೈದು-ಐವತ್ತು ಕಿಮೀ ಗಳಾಗುತ್ತದೆಂದು ನೆನ್ನೆ ಹೇಳಿದ್ದರು. ಇಲ್ಲಿಂದ ಸುಮಾರು ದೂರದವರೆಗೂ  ಕಣ್ಣಿಗೆ ಮಬ್ಬು ಮಬ್ಬು ಅನಿಸುವವರೆಗೂ ಮರಳ ಹಾಸಿಗೆಯ ಮಡಿಕೆಗಳೇ ಇರುವುದರಿಂದ ದೂರದಲ್ಲೆಲ್ಲೋ ನಮಗೂ ಕಂಡಿರಬಹುದೇನೊ, ಅಥವಾ ನಮ್ಮನ್ನು ಅದು ನೋಡಿರಬಹುದೇನೋ, ಗೊತ್ತಿಲ್ಲ, ಮದುಮಗಳಿಗೆ ಅರುಂಧತಿ ನಕ್ಷತ್ರವನ್ನು ತೋರುತ್ತಾರಲ್ಲ ಹಾಗೆ ಇದು.
      ಇತ್ತ ಕಡೆಯಿಂದ ಹಿಂದುಸ್ತಾನಿ ರಾಗಗಳನ್ನು, ಮಂಗಾನಿಯರ್, ಲಂಗದಾ ಜನಪದೀಯ ಜನರ ಹಾಡುಗಳನ್ನು  ಹೊತ್ತು ಗಾಳಿ ಅತ್ತ ಬೀಸಿದರೆ, ಅಲ್ಲಿಂದ ಅರೇಬಿಯನ್ , ಪರ್ಶಿಯನ್, ಸೂಫಿ, ಕವ್ವಾಲಿಗಳನ್ನು ಮೈವೆತ್ತ ಗಾಳಿ ಇತ್ತ ಬೀಸುತ್ತದೆ. ನಿಸರ್ಗದ ಕೊಡಕೊಳ್ಳುವಿಕೆ,. ಎಲ್ಲವುಗಳನ್ನೂ ಸವಿಯುವ ಭಾಗ್ಯ ಮರಳ ಆತ್ಮಕ್ಕೆ.  ಅದಕ್ಕೆ ಸರಹದ್ದಿನ ಪರಿವೆಯಿಲ್ಲ. 'ಪಂಛಿ ನದಿಯಾಂ ಪವನ್ ಕೆ ಝೋಕೆ, ಕೋಯೀ ಸರಹದ್ ನಾ ಇಸೇ ರೋಕೆ' ಜಾವೇದ್ ಅಖ್ತರ್ ಸಾಲು ಇಲ್ಲಿ ಬಲು ಪ್ರಸ್ತುತ. ಬಹಶ: ಪಾರಿಜಾತ ಮರಗಳನ್ನು ಅಲ್ಲಿ ನೆಟ್ಟರೆ, ಎಲ್ಲ ಹೂಗಳೂ ಸರಹದ್ದು ದಾಟಿಯೇ ಬೀಳುತ್ತವೇನೋ, ಆಗ ರುಕ್ಮಿಣೀ ಸತ್ಯಭಾಮೆಯರ ಜಗಳ, '''ನನ್ನ ಮನೆಯ ಹೂಗಳನ್ನು ಕದ್ದು ಆಯ್ದು ತಂದಿರುವೆ, ಮಾನವಂತೆ ಏನೇ ನೀನು....""ಸಧ್ಯ ಅವುಗಳನ್ನು ನೆಡುವುದು ಬೇಡ ಬಿಡಿ.
        ಇಲ್ಲಿ ಎತ್ತ ನೋಡಿದರೂ ಮರಳ ಹಾಸಿಗೆಯೇ. ನಾವು ಉಳಿದುಕೊಂಡ ಟೆಂಟ್‍ಗಳು ಮಕ್ಕಳ ಆಟಿಗೆಯಂತೆ ಕಾಣುತ್ತಿದ್ದವು.  ಇಲ್ಲಿಂದ ಕೆಳಗೆ ಸಾಲು ಸಾಲಾಗಿ ಕುರಿ ಆಡುಗಳ ಹಿಂಡು  ಚಲಿಸುತ್ತಿದ್ದುದು ಚಂದ ಕಾಣುತ್ತಿತ್ತು.,  ಅದು ಚಲಿಸುತ್ತಿದ್ದುದನ್ನು ಹಾಗೆಯೇ ನೋಡುತ್ತ ನೋಡುತ್ತ ಆನಂದಿಸುತ್ತ ಕುಳಿತೆವು, 'ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ, ಯಾವ ತಡೆಯೂ ನಿಮಿಗಿಲ್ಲ, ನಿಮ್ಮ ಭಾಗ್ಯ ನಮಗಿಲ್ಲ' ಪಿಬಿಎಸ್ ಹಾಡೊಂದನ್ನು ಗುಣುಗುಣಿಸಿದೆ. ಬಹುಶ: ಕುರಿಗಳು ಸಂಜೆಯವರೆಗೂ ಹೋಗುವುದು ಕಾಣುತ್ತಿತ್ತೇನೋ! ತುಸು ಹೊತ್ತು ಸೂರ್ಯೋದಯವಾಗುವವರೆಗೂ ಅಲ್ಲಿದ್ದು ಕ್ಯಾಂಪನತ್ತ ಮರಳಿದೆವು.  ಮರಳುವಾಗ ಇನ್ನು ಇಲ್ಲಿಂದ ಹೋಗಬೇಕಲ್ಲ ಎಂಬ ಕಸಿವಿಸಿ, ಬಿಟ್ಟು ಹೋಗದ ಬಯಕೆಗೆ ನಿರಾಸೆ.  ಟೆಂಟ್‍ಗಳಿಗೆ ಬಂದು ಬಿಸಿನೀರಿನ ಸ್ನಾಣ ಮಾಡಿಕೊಂಡು ರೆಡಿಯಾಗಿ  ಅಲ್ಲಿಯ ಪರಿಚಾರಕರಿಗೆ ಧನ್ಯವಾದ ಹೇಳಿದೆ. ಆಗ ತಾನೇ ಹೊರಗಿನಿಂದ ಬಂದ ಅದರ ಮಾಲೀಕ, ಹೆಸರು, ಶೈತಾನ್ ಸಿಂಗ್, 'ನಾಮ್ ಬಹುತ್ ಖತರನಾಕ್  ಹೈ ಸರ್, ಮಗರ್ ದಿಲ್ ಸೆ  ಇನ್ಸಾನ್ ಹೂಂ' ಎಂದು ಹೇಳಿ ನಕ್ಕ. ಅವರೆಲ್ಲರಿಗೆ ತುಂಬು ಹೃದಯದ ವಿದಾಯ ಹೇಳಿ, ಮರಳಿಗೊಂದು ಸಲಾಮ್ ಹೇಳಿ, ಮಂಗಾನಿಯರ್ ಹಾಡುಗಳನ್ನು, ಕಾಲಬೇಲಿಯನ್ ಸುಂದರಿಯರ ನೃತ್ಯಗಳನ್ನು ಹೊತ್ತು,   ಮನಸಿಲ್ಲದ ಮನಸ್ಸಿನಿಂದ  ಮತ್ತೆ ಖಂಡಿತ ಬರುವೆ ಎಂದು ಹೇಳಿ ಅಲ್ಲಿಂದ ಹೊರಟೆವು. ಗಾಡಿಯಲ್ಲಿ ಸುಮ್ಮನೆ ಒಂದು ಸಾರಿ ಹಿಂದೆ ನೋಡಿದೆ, ಇವಳು ಸಣ್ಣ ಕರಚೀಫ್‍ನಲ್ಲಿ ಒಂದೇನೋ ಪುಟ್ಟ  ಗಂಟನ್ನು ಗುಟ್ಟಾಗಿ ಬ್ಯಾಗಿನಲ್ಲಿ ಇಡುತ್ತಿದ್ದಳು, ಅದೇನು ಎಂದು ಕೇಳಿದೆ, ತೋರಿಸಿ ಕೈಗೆ ಕೊಟ್ಟಳು, ಓ ಮರಳು! , ನಾನೂ ನನ್ನ ಜೇಬಿನಿಂದ ತೆಗೆದು ಪ್ಲಾಸ್ಟಿಕ್ಕಿನ  ಸಣ್ಣಚೀಲವೊಂದನ್ನು ಅವಳಿಗೆ ಕೊಟ್ಟು ತೆಗೆದಿಡಲು  ಅವಳ ಕೈಗೆ ಕೊಟ್ಟೆ, ನಕ್ಕು ಎರಡೂ ಗಂಟುಗಳನ್ನು ಒಂದೆಡೆ ಜತನವಾಗಿ ಬ್ಯಾಗಿನಲ್ಲಿ  ಆಭರಣವಿಟ್ಟಂತೆ ಅಕ್ಕರೆಯಿಂದ ಇಟ್ಟುಕೊಂಡಳು,  ನಾವು ಮರಳನ್ನು ಬಿಟ್ಟು ಬಂದಿರಲಿಲ್ಲ, ನಮ್ಮೊಡನೆ ಕರೆತಂದಿದ್ದೆವು, ಮನೆಯ ಮುದ್ದಿನ ನಾಯಿಯಂತೆ, ಅನಾಮತ್ತಾಗಿ ಎತ್ತಿಕೊಂಡು!
     ಇಲ್ಲಿಂದ ಮುಂದೆ ನಮ್ಮ ಪ್ರಯಾಣ ಜೈಸಲ್ಮೇರ್‍ನತ್ತ ಹೊರಟಿತು. ಸುತ್ತ ಬರಡು ಮರಳ ದಿನ್ನೆಗಳು, ಕಂಟಿ ಪೊದೆಗಳು. ಹಿಂದಿನ ರಾತ್ರಿ ಮಳೆಯಾಗಿದ್ದುದರಿಂದ ಇನ್ನೂ ತಂಪಾದ ವಾತಾವರಣ. ಮೋಡ ಮುಸುಕಿತ್ತು.  ತುಸು ದೂರ ಹೋದೊಡನೆ ಕೆಲ ಒಂಟೆಗಳನ್ನು ಮೇಯಲು ಬಿಟ್ಟಿದ್ದರು, ಸುಮಾರು  ಇಪ್ಪತ್ತು ಮೂವತ್ತು , ಎಲ್ಲೆಂದರಲ್ಲಿ ವಿರಳವಾದ ಮರಗಳಿಗೆ ಬಾಯಿನೀಡಿ ಮೇಯುತ್ತಿದ್ದವು.  ಇನ್ನಷ್ಟು ಮುಂದೆ ಬರಲು ದಾರಿಯ ಪಕ್ಕದಲ್ಲೇ ನೀಲಗಾಯಿಗಳು ಕಂಡುಬಂದವು. ಥೇಟ್ ನಮ್ಮ ಹಸು ತರಹವೇ. ಆದರೆ ಸಮೀಪಿಸಿದರೆ ಓಡಿ ಹೋಗುತ್ತವೆ ಇಲ್ಲವೇ ಬೆನ್ನುಹತ್ತಿ ಇರಿಯುತ್ತವೆ ಎಂದ ಸರವನ್.
              ಜೈಸಲ್ಮೇರ್‍ಗೆ ತಲುಪಿ ಅಲ್ಲಿಯ 'ಮೇರು ಹಿಲ್'ನ ಮೇಲೆ ಕಟ್ಟಿದ ಸೋನಾರ್ ಕಿಲಾ ನೋಡಲು ಹೋದೆವು. ಜೈಸಲ್ಮೇರ್‍ಗೆ ಗೋಲ್ಡನ್ ಸಿಟಿ ಎನ್ನುವರು,  ಜೈಪುರ ಪಿಂಕ್ ಸಿಟಿ ಆದರೆ ಇದು ಗೋಲ್ಡನ್, ಮುಂದೆ ಜೋಧಪುರ ಬ್ಲು ಸಿಟಿ. ಹೀಗೆ ಒಂದೊಂದು ಬಣ್ಣಗಳಿಂದಲೂ ಅವುಗಳನ್ನು ಗುರುತಿಸುತ್ತಾರೆ. ಜೈಸಲ್ಮೇರ್‍ನ ಬಹುತೇಕ ಕಟ್ಟಡಗಳು  ಬಂಗಾರ ವರ್ಣಗಳ ಕಲ್ಲುಗಳಿಂದ ಕಟ್ಟಿರುವುದರಿಂದ ಇದಕ್ಕೆ ಈ ಹೆಸರು.  ಎಲ್ಲಾ ಕಟ್ಟಡಗಳಿಗೂ ಬಾಲ್ಕನಿಗಳಿರುವುದರಿಂದ, 'ಸಿಟಿ ಆಫ್ ಬಾಲ್ಕನೀಸ್' ಎಂಬ ಅನ್ವರ್ಥನಾಮವೂ ಇದಕ್ಕಿದೆ.
             ಮಹಾರಾವಲ ಜೈಸಲ್ ಸಿಂಗ್ ಇದನ್ನು ಕ್ರಿಶ 1156 ರಲ್ಲಿ ಕಟ್ಟಿಸಿದ. ಜೈಸಲ್ಮೇರ್ ಮುಖಾಂತರವೇ ಸಿಲ್ಕರೂಟಿನ ಕಾರವಾನ್ ಸಾಗಬೇಕಿತ್ತು. ಸಿಲ್ಕ ರೂಟಿನ ಮುಖಾಂತರ ಸಿಂಧ, ಅಪಘಾನಿಸ್ಥಾನ, ಆಫ್ರಿಕಾ, ಇಜಿಪ್ತ ಹಾಗೂ ಅಲ್ಲಿಂದ ಯುರೋಪು, ಹಾಗೂ ಇತ್ತ ಪೂರ್ವಕ್ಕೆ ದೆಹಲಿ, ಚೈನಾಗಳಿಗೆ  ವ್ಯಾಪಾರ ವಹಿವಾಟುಗಳ ಭೂ ದಾರಿಯಾಗಿತ್ತು. 1293ರಲ್ಲಿ ದೆಹಲಿಯ ದೊರೆ ಅಲ್ಲಾವುದ್ದೀನ್ ಖಿಲ್ಜಿ ಇದರ ಮೇಲೆ ದಂಡೆತ್ತಿ ಬಂದು ರಾಜ್ಯವನ್ನು ಗೆದ್ದು, ಮಾಂಡಲೀಕರನ್ನಾಗಿಸಿದ. ಮುಂದೆ ಮುಘಲ್ ದೊರೆ  ಶಹಾಜಹಾನನಿಗೆ ನಿಷ್ಠವಾಯಿತು ಈ ರಾಜ್ಯ.. ಒಮ್ಮೆ ಮೊಘಲ್ ಆಡಳಿತ ಕುಸಿದ ಮೇಲೆ ಇಂಡೋ ಮರಾಠಾ ಯುದ್ಧವಾಗುವರೆಗೂ ಮರಾಠರೊಂದಿಗೆ ಜೋಡಿಸಿಕೊಂಡಿತ್ತು. ನಂತರ ಬ್ಟಿಟಿಷ ಆಡಳಿತ ಸ್ವಾತಂತ್ರ್ಯ ಲಭಿಸುವವರೆಗೂ.
    ರಾಜಸ್ಥಾನದಲ್ಲಿ ಒಂದೊಂದು ರಾಜಪರಿವಾರವನ್ನು ಒಂದೊಂದು ಬಿರುದಿನಿಂದ ಕರೆಯಲಾಗುತ್ತದೆ.  ಜೈಪುರದ ರಾಜನಿಗೆ ಸವಾಯಿ ಎಂದರೆ, ಜೋಧಪುರ ರಾಜನಿಗೆ ಮಹಾರಾಜ ಪಟ್ಟ, ಉದಯಪುರದ ರಾಜರಿಗೆ ಮಹಾರಾಣಾ ಎಂದಾದರೆ, ಜೈಸಲ್ಮೇರ್ ರಾಜನಿಗೆ ಮಹಾರಾವಲ್ ಎಂದು ಸಂಬೋಧಿಸಲಾಗುತ್ತದೆ..
      ಅರಮನೆಯು ಬಹುದೊಡ್ಡದಾದರೂ, ಅಂದಿನ  ಜೈಸಲ್ಮೇರ ಮಂತ್ರಿ ಮಾಗಧರು ಬಹುತೇಕರು ಅದರಲ್ಲೇ ವಾಸವಾಗಿದ್ದಾರೆ..ಜೈಸಲ್ಮೇರದ ಜನಸಂಖ್ಯೆ ಎಪ್ಪತ್ತೈದು ಸಾವಿರವಾದರೆ ಅದರ ಇಪ್ಪತ್ತೈದು ಸಾವಿರ ಜನ ಆ ಅರಮನೆಯ ವಿವಿಧ ಮಹಲುಗಳಲ್ಲಿ ಹಂಚಿಕೆಮಾಡಿಕೊಂಡು ವಾಸವಾಗಿದ್ದಾರೆ.  ಮುಖ್ಯ ಅರಮನೆ ಹೊರತುಪಡಿಸಿ ಉಳಿದ ಭಾಗಗಳು, ಹೋಟಲ್, ಮಳಿಗೆ, ಅಂಗಡಿ ಮುಂಗಟ್ಟು ಹಾಗೂ ವಾಸಸ್ಥಳಗಳಾಗಿವೆ. ಅರಮನೆಯ ಒಳಗೆ ಅಪೂರ್ವವಾದ ಶಿಲ್ಪಕಲೆ ಹೊಂದಿದ ಜೈನಮಂದಿರವಿದೆ. ಅಸದೃಶ ಕಲಾವೈಭವ.  ಎಲ್ಲ ತೀರ್ಥಂಕರರ ಮೂರ್ತಿಗಳು ಅಲ್ಲಿವೆ.  ನಿತ್ಯ ಪೂಜೆಗೊಳ್ಳುತ್ತವೆ. ಅದರ ಹೊಸ್ತಿಲಿನ ಮೇಲೆ ಚೈನಾದ ಡ್ರಾಗನ್ ಶಿಲ್ಪವನ್ನು ಕೆತ್ತಲಾಗಿದೆ. ಸಿಲ್ಕರೂಟಿನ ಮುಖಾಂತರ ವ್ಯಾಪಾರ ವಹಿವಾಟು ನಡೆಯುತ್ತಿದ್ದರೂ, ಸಂಸ್ಕøತಿಯ ವಿನಿಮಯವೂ  ಕೂಡ ಆಗುತ್ತಿದ್ದುದು ಇಲ್ಲಿ ಉಲ್ಲೇಖನೀಯ. ಇದೇ ಮಂದಿರದ ಚಪ್ಪಡಿ ಕಲ್ಲುಗಳಲ್ಲಿ ಸಮುದ್ರ ಪಾಚಿಯ ಅಂಶವನ್ನು ಪತ್ತೆ ಹಚ್ಚಲಾಗಿದ್ದು, ಅದರಲ್ಲಿ ಇನ್ನೂ ಬ್ಯಾಕ್ಟೀರಿಯಾಗಳು ಜೀವಂತವಾಗಿವೆ ಎಂದು ಕೆಲ ಕಲ್ಲುಗಳನ್ನು ತೋರಿಸಿದ ಗೈಡ್ ಜೋಷಿ. ಅಂದರೆ ಹಿಂದೊಮ್ಮೆ ಅಲ್ಲಿ ಸಮುದ್ರವಿತ್ತು ಎಂಬುದರ ಕುರುಹು ಅದು.   
  ರಾಜರ ಕಾಲದ ಭಾರಿ ಮೀಸೆಯ ಸಿಪಾಹಿ ತುಳಸಿದಾಸ ಈಗ ಮಂದಿರದ ಕಾವಲುಗಾರರಲ್ಲೊಬ್ಬ. ಅವನ ಜೊತೆ ಫೋಟೋ ತೆಗೆದುಕೊಂಡೆವು ಸ್ವಾತಂತ್ರ್ಯ ಪೂರ್ವ ಕಾಲದ ಜೀವಂತ ನಿದರ್ಶನ ಅವನು.  
     ಜೈಸಲ್ಮೇರ್ ಕೇವಲ ಒಂದು ಮುನಸೀಪಾಲಟಿಯಷ್ಟೆ ಆದರು ಅದಕ್ಕೆ ಜಿಲ್ಲೆಯ ಸ್ಥಾನಮಾನ ನೀಡಿಲಾಗಿದೆ. ಭಾರತದ ದೊಡ್ಡ ಜಿಲ್ಲೆಗಳಲ್ಲಿ ಒಂದು ಇದು. ಪೂರ್ವ ಪಶ್ಚಿಮವಾಗಿ 270 ಕಿಮಿ ಗಳಿದ್ದರೆ, ಉತ್ತರ ದಕ್ಷಿಣಗಳಲ್ಲಿ 186 ಕಿಮೀಗಳ ವ್ಯಾಪ್ತಿ ಹೊಂದಿದೆ.
      ಇಲ್ಲಿಂದ ಮುಂದೆ  ಅಂದಿನ ಪ್ರಧಾನ ಮಂತ್ರಿಯಾದ ದೀವಾನ ನತಮಲ್ ಹವೇಲಿಗೆ ನಡೆದೆವು ಇದು ಅರಮನೆಯಿಂದ ಅಲ್ಲೇ ಸಮೀಪದಲ್ಲೇ ಇದೆ. ಇದನ್ನು ಇಬ್ಬರು ಹಾಥಿ ಮತ್ತು ಲುಲು ಎಂಬ ಕುಶಲಕರ್ಮಿ ಸಹೋದರರು ಕಟ್ಟಿದ್ದಾರೆ, ಮುಖ್ಯದ್ವಾರದ ಎಡ ಹಾಗೂ ಬಲ  ಭಾಗಗಳು ತದ್ರೂಪು,. ಆದರೂ ಏಕಕಾಲದಲ್ಲಿ ಇಬ್ಬರೂ ಒಂದೊಂದು ಕಡೆಯಿಂದ ಕಟ್ಟುತ್ತ ಬಂದಿದ್ದರಿಂದ ಹಾಗೂ ಅಂದಿನ ಕಾಲದಲ್ಲಿ ನಿಖರ ಉಪಕರಣಗಳು ಅವರಿಗೆ ಲಭ್ಯವಿಲ್ಲದ್ದರಿಂದ ದಿಟ್ಟಿಸಿ ನೋಡಿದಲ್ಲಿ ಕೆಲ ಏರುಪೇರುಗಳನ್ನು ಗುರುತಿಸಬಹುದಾದರೂ ಅವರು ನಿರ್ಮಿಸಿದ ಕಲಾಕೃತಿಗಳು, ಜಾಲರಿಗಳು ಅದ್ವಿತೀಯವೆಂದೇ ಹೇಳಬಹುದು.  ಆ ಗೋಡೆಗಳ ಮೇಲೆ ಕಾರು, ಫ್ಯಾನ್‍ಗಳ ಚಿತ್ರಗಳಿವೆ. ಸಿಲ್ಕರೂಟಿನ ಪಯಣಿಗರಿಂದ ಕೇಳಿ ತಿಳಿದು ಚಿತ್ರಿಸಿದ ಕಲಾಕೃತಿಗಳು ಅವು. ಖುದ್ದಾಗಿ ಕಾರು, ಫ್ಯಾನುಗಳನ್ನು ಅವರೆಂದೂ ನೋಡಿರಲೇ ಇಲ್ವವಂತೆ.
          ಇಲ್ಲಿಂದ ತುಸು ದೂರದಲ್ಲಿರುವ 'ಪಟವೋಂ ಕಿ  ಹವೇಲಿ'ಕಡೆಗೆ ತೆರಳಿದೆವು. ಇದನ್ನು ಗುಲಾಮ್‍ಚಂದ ಎಂಬ ಸಿಲ್ಕರೂಟಿನ ವ್ಯಾಪಾರಿ ತನ್ನ ಐದು ಮಕ್ಕಳಿಗಾಗಿ ಐದು ಅಂತಸ್ತುಗಳಲ್ಲಿ ಕಟ್ಟಿಸಿದ್ದಾನೆ. ಇದು ಐದು ಬೇರೆ ಬೇರೆಯೇ ಆದ ಐದು ಪ್ರತ್ಯೇಕ ಹವೇಲಿಗಳ ಕಾಂಪ್ಲೆಕ್ಷ ಆದರೆ ಎಲ್ಲಿಯೂ ಪ್ರತ್ಯೇಕತೆಗಳು ಕಂಡುಬರುವುದಿಲ್ಲ.  ಗುಲಾಮ್‍ಚಂದನು  ಸಿಲ್ಕರೂಟಿನ ಅಪಘಾನಿಸ್ತಾನದಿಂದ ಚೈನಾವರೆಗೆ ಸುಮಾರು ಮೂರುನೂರು ಟ್ರೇಡಿಂಗ್ ಶಾಪ್‍ಗಳನ್ನು ಹೊಂದಿದ್ದನಂತೆ. ಇದರ ಮೊದಲ ಹವೇಲಿ 1805 ರಲ್ಲಿ ನಿರ್ಮಾಣವಾಯಿತು. ಮುಂದಿನ ಅರವತ್ತು ವರ್ಷಗಳವರೆಗು ಉಳಿದ ಅಂತಸ್ತುಗಳು  ನಿರ್ಮಾಣವಾದವು. ಇದರ  ನಿಪುಣ ಶಿಲ್ಪಕಾರರಿಗೆ ಸಲಾಮ್ ಹೇಳಲೇಬೇಕು. ಒಂದೊಂದು ಜಾಲರಿಗಳಲ್ಲಿ, ಕಮಾನುಗಳಲ್ಲಿ , ಕಂಬಗಳಲ್ಲಿ ಅಪೂರ್ವವೆನ್ನಬಹುದಾದ ಕಲಾಕೃತಿಗಳು ರಾರಾಜಿಸುತ್ತವೆ. ಒಂದು ಇಂಚು ಕೂಡ ಜಾಗ ಬಿಟ್ಟಿಲ್ಲ.
      ಮರುಭೂಮಿಯ ಬಂಜರು ನಾಡಿನಲ್ಲಿ ನೂರಾರು ಮರೀಚಿಕೆಗಳಲ್ಲಿ ಒಂದು ಓಯಾಸಿಸ್ ಸಿಗುವ ಹಾಗೆ, ಬಂಜರು ನೆಲದಲ್ಲಿ ಹಸಿರು, ಹೂವುಗಳು ಲಭ್ಯವಿಲ್ಲದ್ದುದರ ಕೊರತೆ ಆಗಬಾರÀದೆಂದು ಕಂಬ ಕಮಾನುಗಳಲ್ಲಿ ಬಣ್ಣದ ಕಲಾಕೃತಿಗಳು, ಆಭರಣಗಳು, ಕಾವ್ಯಕನ್ನಿಕೆಯರು  ಮನಕ್ಕೆ  ಮುದನೀಡುವಂತೆ ಹಸಿರಿನ ಕೊರತೆ ಆಗದಮತೆ ಕೆತ್ತಿದ್ದಾರೆ. ಇಡೀ ಹವೇಲಿ ಒಂದು ದೃಶ್ಯ ಕಾವ್ಯ.  ಶಿಲ್ಪಕಲೆಯ ಅಪ್ರತಿಮತೆ ಮೆರೆದ ಪರಿ ಅದ್ಭುತ.  ಇನ್ನೂ ಅಲ್ಲಿಯ ಕಿಟಕಿಗಳ ಜಾಲರಿಗಳಲ್ಲಿ  ಗುಲಾಮ್ ಚಂದನ ಹೆಂಗಳೆಯರು ಇಣಿಕುತ್ತಿದ್ದಾರೆ . ಏಕೆಂದರೆ  ಎರಡು ಕಟ್ಟಡಗಳಲ್ಲಿ ಅವರು ಇನ್ನೂ ವಾಸವಾಗಿದ್ದಾರೆ..ಈ ಒಂದು ಹವೇಲಿಗೆ ಅರವತ್ತು ಬಾಲ್ಕನಿಗಳು ಇರುವುದು , 'ಸಿಟಿ ಆಫ್ ಬಾಲ್ಕನೀಸ್' ಅನ್ವರ್ಥತೆಯನ್ನು ತೋರುತ್ತದೆ.
     ಮುಂದಿನ ಪ್ರಯಾಣಕ್ಕೆ ತೊಂದರೆಯಾಗಬಾರದೆಂದು ಜೈಸಲ್ಮೇರ್ ಎಂಬ ಮರಳರಾಣಿಗೆ ತಲೆಬಾಗಿ ವಂದಿಸಿ,  ಧನ್ಯವಾದ ಅರ್ಪಿಸಿ, ಅಲ್ಲಿಂದ ಬೀಳ್ಕೊಂಡೆವು.

 

Rating
No votes yet

Comments

ಭಲ್ಲೆ ಜಿ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ರಾಜಪೂತರ ಸ್ವಾಭಿಮಾನ ಮಾತಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ರೀತಿ ಮೆಚ್ಚುಗೆಯಾಯಿತು. ವಂದನೆಗಳು ಸರ್

Submitted by kavinagaraj Tue, 06/30/2015 - 09:06

ಅವರ ಸ್ವಾಭಿಮಾನಕ್ಕೆ ಒಂದು ನಮನ!
ಪ್ರವಾಸವನ್ನು ಅನುಭವಿಸುತ್ತಾ ಸಾಗಿ, ನಮಗೂ ಅದರ ರಸದೌತಣ ಬಡಿಸುತ್ತಿರುವುರು ಅಭಿನಂದನೀಯ, ಇಟ್ನಾಳರೇ.

ಮಾನನೀಯ ಹಿರಿಯ ಲೇಖಕ, ಚಿಂತಕ ಕವಿನಾಗರಾಜ್ ಸರ್, ವಂದನೆಗಳು. ತಮ್ಮ ಎಂದಿನ ಪ್ರೇರೇಪಣೆ ನನ್ನಂತಹರಿಗೆ ನಿಜಕ್ಕೂ ಇನ್ನಷ್ಟು ಬರೆಯಲು ಪ್ರೇರಣೆ ನೀಡುತ್ತದೆ, ಧನ್ಯವಾದಗಳು ಸರ್,....

Submitted by H A Patil 1 Fri, 07/03/2015 - 13:44

ಲಕ್ಷ್ಮೀಕಾಂತ ಇಡ್ನಾಳರವರಿಗೆ ವಂದನೆಗಳು
ಈ ನಿಮ್ಮ ಪ್ರವಾಸ ಕಥನದ ಬಗೆಗೆ ಎಷ್ಟು ಬರದರೂ ಕಡಿಮೆಯೆ ರಾಜಸ್ಥಾನದ ಕುರಿತು ಬರಿ ಭೌತಿಕವಾಗಿ ಅಲ್ಲ ಅದರ ಅಂತರ ಅತ್ಮವನ್ನೆ ತೆರೆದು ತೋರಿದ್ದೀರಿ. ಅಲ್ಲಿನ ಇತಿಹಾಸ ಕಲೆ ಪರಂಪರೆಗಳ ಕುರಿತು ನೀಡಿದ ಮಾಹಿತಿಗಳು ನಿಮ್ಮ ಸ್ಪರ್ಶಪದಿಂದ ಅಕ್ಷರ ರೂಪ ಪಡೆದು ಓದುಗನನ್ನು ತಣಿಸಿದೆ ಬಹಳ ಸುಂದರವಾದ ಒಂದು ಪ್ರವಾಸ ಧಿಡೀರನೆ ಕೊನೆಗೊಂಡು ಸುಂದರ ಕನಸಿನಿಂದ ಹೊರ ಬಂದಂತೆ ಅಯಿತು , ಸಾರ್ಥಕ ಪ್ರವಾಸ ಕಥನ ನೀಡಿದ್ದೀರಿ ಧನ್ಯವಾದಗಳು.

ಹಿರಿಯ ಚಿಂತಕ ಸಮಾಜಮುಖಿ ಲೇಖಕರಾದ ಹನುಮಂತ ಅನಂತ ಪಾಟೀಲ ಸರ್, ತಮ್ಮ ಮೆಚ್ಚುಗೆಯ ಪ್ರೀತಿಯ ಹಿರಿಯ ನುಡಿಗಳಿಗೆ ಶರಣು ಸರ್, ವಂದನೆಗಳು