ಹಳ್ಳಿಯಿಂದ ಹಳ್ಳಿಗೆ...

ಹಳ್ಳಿಯಿಂದ ಹಳ್ಳಿಗೆ...

ಕೆಲಸ ಮುಗಿಸಿ ಮನೆಗೆ ಹೊರಟ ಕೂಡಲೇ ಜಿನುಗಲು ಆರಂಭವಾಯಿತು, ಸಣ್ಣಗೆ ತುಂತುರು ತುಂತುರು ಹನಿಯಿಂದ ಶುರುವಾದ ಮಳೆ ಕೆಲವೇ ನಿಮಿಷಗಳಲ್ಲಿ ಧೋ ಎಂದು ಸುರಿಯಲು ಆರಂಭವಾಯಿತು. ವಿಧಿಯಿಲ್ಲದೇ ಬಸ್ ತಂಗುದಾಣವೊಂದನ್ನು ಆಶ್ರಯಿಸಬೇಕಾಯಿತು. ಹಾಗೇ ಕುಳಿತು ಬೀದಿ ದೀಪದ ಬೆಳಕಿನಲ್ಲಿ ಬೀಳುತ್ತಿದ್ದ ಮಳೆಯನ್ನು ನೋಡುತ್ತಾ ನೆನಪಿನ ಸುರುಳಿ ಬಿಚ್ಚಿಕೊಂಡಿತು.
ಸಣ್ಣವರಿದ್ದಾಗ ಅಂದರೆ ತೀರಾ ಚಿಕ್ಕಮಕ್ಕಳಲ್ಲ...ಪ್ರೌಢಾವಸ್ಥೆಯ ದಿನಗಳವು.. ಮಳೆ ಎಂದರೆ ಅದೊಂಥರಾ ಖುಷಿ, ಅದೇನೋ ಆನಂದ... ಇನ್ನೇನು ಮೋಡ ಕವಿದು ಮಳೆ ಸುರಿಯುವುದು ಎನ್ನುವ ಸುಳಿವು ಸಿಗುತ್ತಿದ್ದಂತೆ ಬೇಕಂತಲೇ ಮನೆಯಿಂದ ಆಚೆ ಬಿದ್ದು ಹತ್ತಿರದ ಮೈದಾನಕ್ಕೆ ಓಡಿಬಿಡುತ್ತಿದ್ದೆವು. ಕೆಲವೊಮ್ಮೆ ಗಾಢವಾದ ಮೋಡಗಳು ನಮಗೆ ಮೋಸ ಮಾಡಿ ಮಳೆ ಬಾರದೇ ನಿರಾಶೆ ಮಾಡಿ ಬಿಡುತ್ತಿದ್ದವು. ಆದರೆ ಅಂತಹ ಸಂದರ್ಭಗಳು ಬಹಳ ವಿರಳ. ಯಾವಾಗಲೂ ನಮ್ಮ ನಿರೀಕ್ಷೆಯನ್ನು ಹುಸಿ ಮಾಡದೆ ಧೋ ಎಂದು ಮಳೆ ಸುರಿದೇ ಸುರಿಯುತ್ತಿತ್ತು.
ಮಳೆ ಶುರುವಾದ ಕೂಡಲೇ ಮಳೆಯಲ್ಲಿ ನೆನೆ ನೆನೆದು ತೊಪ್ಪೆಯಾಗಿ, ಮೈದಾನದಲ್ಲಿ ನಿಂತ ನೀರಲ್ಲಿ ಬರಿದೇ ನೀರಿನಲ್ಲಿ ಫುಟ್ ಬಾಲ್ ಒದೆಯುವಂತೆ ನೀರನ್ನು ಎದುರಿನವರ ಮೇಲೆ ಎಗರಿಸುತ್ತಾ ಅವರು ನಮ್ಮ ಎಗರಿಸಿದ ನೀರಿನಿಂದ ಮುಖ ಮುಚ್ಚಿಕೊಳ್ಳುತ್ತಾ, ಮಳೆ ನಿಲ್ಲುವವರೆಗೂ ಆಟ ಆಡುತ್ತಾ ನಂತರ ನಿಧಾನವಾಗಿ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೂ ಅದೇ ಆಟವಾಡುತ್ತಾ....ಗಾಳಿಗೆ ರಸ್ತೆಯಲ್ಲಿದ್ದ ಮರಗಳಿಂದ ಬಿದ್ದ ದೋಣಿಯಾಕಾರದ ಕಾಯಿಯನ್ನು (ಇಂದಿಗೂ ಆ ಮರದ ಹೆಸರು ಏನೆಂದು ಗೊತ್ತಿಲ್ಲ) ನೀರಿನಲ್ಲಿ ತೇಲಿಸುತ್ತಾ ಮನೆಗೆ ಬರುವ ವೇಳೆಗೆ ಅಮ್ಮನ ಸಹಸ್ರನಾಮಕ್ಕೆ ಸಿದ್ಧವಾಗಿರುತ್ತಿದ್ದೆವು.
ಮನೆಗೆ ಬರುತ್ತಿದ್ದ ಹಾಗೆ ಎಂದಿನಂತೆ ಅಮ್ಮನ ಬೈಗುಳದ ಜೊತೆಗೆ ಅಪ್ಪನೂ ತಮ್ಮ ದನಿ ಸೇರಿಸಿ ಬೈಯುತ್ತಾ ಟವೆಲ್ ನಲ್ಲಿ ತಲೆ ಒರೆಸಿಕೊಂಡು ಒದ್ದೆಯಾದ ಬಟ್ಟೆಯನ್ನು ಬಚ್ಚಲು ಮನೆಯಲ್ಲಿ ಹಿಂಡದೆ ಹಾಗೆ ಬಿಸಾಕಿ ಬೇರೆ ಬಟ್ಟೆ ಹಾಕಿಕೊಂಡು ಬಂದು ಅಮ್ಮ ಕೊಟ್ಟ ಬಿಸಿ ಬಿಸಿ ಕಾಫಿ ಹೀರುತ್ತಾ ಮನೆಯಾಚೆ ಬಂದು ಕಟ್ಟೆಯ ಮೇಲೆ ಕೂತು ಮಣ್ಣಿನ ವಾಸನೆ ಆಘ್ರಾಣಿಸುತ್ತಾ ಪಕ್ಕದಲ್ಲೇ ಹಬ್ಬಿದ್ದ ಚಪ್ಪರದ ಅವರೇಕಾಯಿ ಬಳ್ಳಿಯ ಎಳೆಗಳ ಮೇಲೆ ಕೂತಿದ್ದ ಹನಿಗಳನ್ನು ಕೈಯಿಂದ ಜಾಡಿಸುತ್ತಿದ್ದರೆ ಹೆಚ್ಚೂ ಕಮ್ಮಿ ಸ್ವರ್ಗದ ಅನುಭವವೇ ಸರಿ..
ಇನ್ನು ಹಳ್ಳಿಯ ವಿಷಯ ತೆಗೆದುಕೊಂಡರೆ ಮಳೆಗಾಲ ನಿಜಕ್ಕೂ ಸ್ವರ್ಗ ಸಮಾನ... ಹಳ್ಳಿಯ ಮಳೆ ವರ್ಣಿಸಲಸದಳ... ಅದನ್ನೂ ಅನುಭವಿಸಿಯೇ ತೀರಬೇಕು... ಹಳ್ಳಿಯಲ್ಲಿ ಮಳೆ ಬರುವುದಕ್ಕೆ ಮುನ್ನ ಏಳುವ ಮಣ್ಣಿನ ವಾಸನೆಗೆ ಸಮ ಯಾವ ಪರ್ಫ್ಯೂಮ್ ಕೂಡ ಸಾಟಿಯಿಲ್ಲ... ಯಾವುದೇ ಕಲ್ಮಶವಿಲ್ಲದ ಗಾಳಿಯ ಜೊತೆ ತೇಲಿ ಬರುತ್ತಿದ್ದ ಆ ಮಣ್ಣಿನ ವಾಸನೆ ಮೂಗಿಗೆ ತಲುಪಿದ ಕ್ಷಣಗಳಲ್ಲೇ ಮಳೆ ಆರಂಭವಾಗುತ್ತಿತ್ತು....
ತಣ್ಣನೆ ಬೀಸುತ್ತಿದ್ದ ಗಾಳಿಗೆ ಮೈ ಸೋಕಿದರೆ ಬೆನ್ನಹುರಿಯಲ್ಲಿ ಥಣ್ಣನೆ ಚಳುಕೊಂದನ್ನು ಮೂಡಿಸಿ ಹಲ್ಲುಗಳು ಅದುರಿತ್ತದ್ದರೂ ಒಳಗೆ ಹೋಗಬೇಕು ಎನಿಸುತ್ತಿರಲಿಲ್ಲ... ಬದಲಿಗೆ ಇನ್ನಷ್ಟು ಹೊತ್ತು ಆ ಮಳೆಯನ್ನು ಅನುಭವಿಸಬೇಕೆಂಬ ಹಂಬಲ ಹೆಚ್ಚಾಗುತ್ತಿತ್ತು. ಹಳ್ಳಿಯ ಮಳೆಗೆ ಎಷ್ಟೇ  ನೆಂದರೂ ಯಾರೂ ಬೈಯುತ್ತಿರಲಿಲ್ಲ... ಏಕೆಂದರೆ ಆ ಮಳೆಯಿಂದ ಯಾವುದೇ ಖಾಯಿಲೆ ಬರದೆಂಬ ನಂಬಿಕೆಯೇನೋ!! ಇನ್ನು ಮಳೆಗಾಲ ಬಂತೆಂದರೆ ಸುಮಾರು ಎಲ್ಲಾ ಹೊತ್ತಿನಲ್ಲೂ ಹಂಡೆಯ ಒಲೆ ಉರಿಯುತ್ತಲೇ ಇರುತ್ತಿತ್ತು. ಮಳೆ ಯ ಜೊತೆಗೆ ಆ ಒಲೆಯ ಕೊಳವೆಯಿಂದ ಬರುತ್ತಿದ್ದ ಹೊಗೆ, ಅದರ ಘಮಲು ಅದೊಂಥರಾ ಆನಂದ...
ಇನ್ನು ಮಳೆ ನಿಂತ ಮೇಲೆ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಾ ಹೊಲ ಗದ್ದೆಯ ಕಡೆ ಹೊರಟರೆ, ಭೂದೇವಿ ಹಸಿರು ಸೀರೆಯುಟ್ಟು ನಿಂತಿದ್ದಾಳೇನೋ ಎಂಬಂತೆ ಭಾಸವಾಗುತ್ತಿತ್ತು. ಆಗೆಲ್ಲಾ ಹಳ್ಳಿಯ ಕೆರೆಗಳು ಬತ್ತಿದ್ದೇ ನೆನಪಿಲ್ಲ. ಎಲ್ಲಾ ಕೆರೆಗಳು ನೀರು ತುಂಬಿ ಕೋಡಿ ಹರಿಯುತ್ತಿದ್ದವು. ಕೆರೆಗಳು, ಬಾವಿಗಳು, ನೀರಿನ ಹೊಂಡಗಳೇ ಸ್ವಿಮ್ಮಿಂಗ್ ಪೂಲ್ ಗಳು...ಯಾರದೋ ಹೊಲದ ಕಡಲೇಕಾಯಿ, ಇನ್ಯಾರದೋ ಹೊಲದ ಟೊಮಾಟೊಗಳು ನಮ್ಮ ದಾಳಿಗೆ ಬಲಿಯಾಗುತ್ತಿದ್ದವು.
ಈಗ ಅದೇ ಹಳ್ಳಿಯ ಕೆರೆಗಳು ಬರಡಾಗಿ ವರ್ಷಗಳೇ ಕಳೆದಿವೆ. ಸರಿಯಾಗಿ ಮಳೆಯಾಗಿ ಅದೆಷ್ಟು ವರ್ಷಗಳಾಯಿತೋ ನೆನಪೇ ಇಲ್ಲ. ಒಂದೊಮ್ಮೆ ಹಸಿರು ಸೀರೆ ಉಟ್ಟು ನಿಂತಿದ್ದ ಭೂರಮೆಯ ಸೀರೆ ಇಂದು ಕಡು ಕಂದು ಬಣ್ಣಕ್ಕೆ ತಿರುಗಿ ಕಳಾ ವಿಹೀನವಾಗಿ ನಿಂತಿದ್ದಾಳೆ. ಬಾವಿಗಳಲ್ಲಿ ತಳ ಕಾಣುತ್ತಿದೆ. ಹೊಲಗಳನ್ನು ನೋಡಿದರೆ ಮರುಕ ಉಂಟಾಗುತ್ತದೆ. ಮನೆಗಳೂ ಮನಸುಗಳೂ ಬದಲಾಗಿವೆ... ಸೆಗಣಿ ನೆಲ ಇದ್ದೆಡೆ ಟೈಲ್ಸ್ ಗಳು ಬಂದಿವೆ... ಹಂಡೆ ಒಲೆ ಇದ್ದೆಡೆ ಸೋಲಾರ್, ಗೀಸರ್ ಗಳು ಬಂದಿವೆ.
ಈಗಲೂ ಹಳ್ಳಿಯಲ್ಲೇ ಇದ್ದೇವೆ.... ಗ್ಲೋಬಲ್ ವಿಲೇಜ್ ನಲ್ಲಿ... ಇಲ್ಲೂ ಮಳೆ ಆಗುತ್ತದೆ... ಇಲ್ಲಿಯೂ ವಾಸನೆ ಬರುತ್ತದೆ... ಆದರೆ ಮಣ್ಣಿನ ವಾಸನೆಗೂ ಇಲ್ಲಿನ ವೃಷಭಾವತಿ ವಾಸನೆಗೂ ಅಜಗಜಾಂತರ ವ್ಯತ್ಯಾಸ...
ಅಷ್ಟರಲ್ಲಿ ಮಳೆ ನಿಂತು ಹಳ್ಳಿಯಲ್ಲದ ಹಳ್ಳಿಯ ಹಳ್ಳ ಬಿದ್ದ ರಸ್ತೆಯಲ್ಲಿ ಹಾವು ಏಣಿ ಆಟದಂತೆ ಗಾಡಿ ಓಡಿಸಿಕೊಂಡು ಮನೆಯ ಕಡೆ ಹೊರಟೆ...

Rating
No votes yet

Comments

Submitted by kavinagaraj Sat, 07/28/2018 - 22:03

ಪಟ್ಟಣದಲ್ಲಿರುವವರು ಇಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ. ಬೆಂಗಳೂರಿನಲ್ಲಿರುವವರಂತೂ ಈಗ ಮಳೆ ಎಂದರೆ ಭಯಪಡುತ್ತಾರೆ.