ಹೂವೆ ಹೂವೇ ನಿನ್ನ ಚೆಲುವಿಗೆ ಕಾರಣವೇನೆ ?!!

ಹೂವೆ ಹೂವೇ ನಿನ್ನ ಚೆಲುವಿಗೆ ಕಾರಣವೇನೆ ?!!

           ಸೂರ್ಯನ ಪ್ರಕಾಶ ಚಂದ್ರನ ಬಣ್ಣ ಎರಡನ್ನೂ ಮೇಳೈಸಿಕೊಂಡ ಚೆಂಡು ಹೂವು ಒಂದು ಅಪರೂಪದ ಹೂವು ಈ ಹೂವಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಇಂಗ್ಲೀಷಿನಲ್ಲಿ "ಮಾರಿಗೋಲ್ಡ್" ಎಂದೂ ಹಿಂದಿಯಲ್ಲಿ "ಗೆಂದ ಫೂಲ್" ಎಂದು ಕರೆಯಲ್ಪಡುವ ಚೆಂಡು ಹೂವು ಹಲವುಬಣ್ಣಗಳಲ್ಲಿ ಲಭ್ಯ. ಬಿಳಿ,ಕಿತ್ತಳೆ,ಹಳದಿ,ಕೆಂಪು ಇತ್ಯಾದಿ.ದೀಪಾವಳಿ ದಸರಾ ಹಬ್ಬಗಳಿಗಾಗಿ ಹೊಲ ತೋಟಗಳ ಮೂಲೆಯಲ್ಲಿ ಬೆಳೆಯುತ್ತಿದ್ದ ಚೆಂಡು ಹೂವು ಈಗ ವಾಣಿಜ್ಯಬೆಳೆಯಾಗಿ ಕೃಷಿಕರ ಬದುಕನ್ನು ಬೆಳಗಿಸುತ್ತಿದೆ.
           ಚೆಂಡು ಹೂವು ಬರೀ ಗೃಹಾಲಂಕಾರಕ್ಕೆ ಮಾತ್ರ ಬಳಸಲ್ಪಡದೇ  ಬಹೂಪಯೋಗಿಯಾಗಿದೆ. ನೈಸರ್ಗಿಕ ಬಣ್ಣಗಳ  ತಯಾರಿಕೆಯಲ್ಲಿ ಮತ್ತು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಉಪಯುಕ್ತವಾಗಿದೆ.

ಚೆಂಡು ಹೂವಿನ ಟೀ ತಯಾರಿಕಾ ವಿಧಾನ:- ಪಾತ್ರೆಯಲ್ಲಿ ಒಂದು ಲೋಟ ನೀರು ಕುದಿಸಿ ಅದಕ್ಕೆ ೧-೨ ಚಮಚ  ಒಣಗಿಸಿದ ಚೆಂಡು ಹೂವಿನ ದಳಗಳನ್ನು ಸೇರಿಸಿ.ಮುಚ್ಚಿಡಿ.ನಂತರ ಸೋಸಿದ  ಚಹಾಕ್ಕೆ ಅರ್ಧ ಚಮಚ ಸಕ್ಕರೆ ,ಚಿಟಿಕೆ ದಾಲ್ಚಿನ್ನಿ ಪುಡಿ ಸೇರಿಸಿ ಸೇವಿಸಿ.                               
            ಚೆಂಡು ಹೂವಿನ ಟೀ ಮಾಡಿ ಕುಡಿದರೆ ಅಥವಾ ಅದರ ರಸವನ್ನು ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.  ಅಲ್ಲದೆ ಹೃದಯ ಸ್ಥಂಭನಕ್ಕೆ ಕಾರಣವಾಗುವ ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ಸ್ಥಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಹಿಂದಿರುವ ಹಳದಿ ಪಿಗ್ಮೆಂಟ್ ವಯಸ್ಸಾಗುತ್ತಿದ್ದಂತೆ ಕಡಿಮೆಯಾಗುವುದರಿಂದ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತದೆ. ಚೆಂಡು ಹೂವಿನಲ್ಲಿರುವ "ಲುಟೇನ್" ಅಂಶವನ್ನು ಹೊಂದಿರುವ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ದೃಷ್ಟಿದೋಷವನ್ನು ನಿವಾರಿಸಬಹುದು. 
              ಕರುಳಿನ ಉರಿಯೂತ, ಅತಿಸಾರಗಳಿಗೆ ಸಹ ಉಪಯುಕ್ತವಾಗಿದೆ.  ಚೆಂಡು ಹೂವಿನ ದಳಗಳನ್ನು ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ಸಂಗ್ರಹಿಸಿಟ್ಟುಕೊಂಡು ಚರ್ಮಕ್ಕೆ ಹಚ್ಚುವ ಮೂಲಕ  "ಎಕ್ಸಿಮಾ"ದಂತಹ ಚರ್ಮದ ಕಾಯಿಲೆಗಳನ್ನೂ ಗುಣಪಡಿಸಬಹುದಾಗಿದೆ  ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಡುತ್ತಾರೆ. 
               ತನ್ನ ಆಕರ್ಷಕ ಬಣ್ಣ, ಸೌಂದರ್ಯಗಳಿಂದ ನಮ್ಮ ಕಣ್ಮನ ತಣಿಸುವುದರ ಜೊತೆಗೆ ನಮ್ಮ ದೈಹಿಕ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತಿರುವ ಚೆಂಡು ಹೂವಿನ ಚೆಲುವಿಗೆ ಚೆಂಡು ಹೂವೇ ಸಾಟಿಯಲ್ಲದೆ ಬೇರೆಯಾರಿಲ್ಲಾ!!!! 
ಕಮಲ ಬೆಲಗೂರ್. 
 

Rating
No votes yet