೧೦೫. ಲಲಿತಾ ಸಹಸ್ರನಾಮ ೩೯೬ರಿಂದ ೩೯೭ನೇ ನಾಮಗಳ ವಿವರಣೆ

೧೦೫. ಲಲಿತಾ ಸಹಸ್ರನಾಮ ೩೯೬ರಿಂದ ೩೯೭ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೯೬-೩೯೭

Parameśvarī परमेश्वरी (396)

೩೯೬. ಪರಮೇಶ್ವರೀ

            ದೇವಿಯು ಪರಮೋನ್ನತ ಪರಿಪಾಲಕಳಾಗಿದ್ದಾಳೆ. ಆಕೆಯು ಎರಡು ವಿಧವಾಗಿ ಪರಮೋನ್ನತಳು, ಒಂದು ಸ್ವತಃ ಆಕೆಯಿಂದಾಗಿ ಮತ್ತು ಎರಡನೆಯದು ಆಕೆಯು ಪರಶಿವನ ಸಂಗಾತಿಯಾಗಿರುವುದರಿಂದ. ಶಿವನು ಪರಮೇಶ್ವರನಾದರೆ ಆತನ ಪತ್ನಿಯು ಪರಮೇಶ್ವರೀ. ವಿಷ್ಣು ಸಹಸ್ರನಾಮ ೩೭೭ ಸಹ ಪರಮೇಶ್ವರಃ - ಅದನ್ನು ವಿಷ್ಣುವು ದಕ್ಷ ಆಡಳಿತಗಾರ ಎಂದು ವ್ಯಾಖ್ಯಾನಿಸಲಾಗಿದೆ.

            ಭಗವದ್ಗೀತೆಯ ೧೩ನೇ ಅಧ್ಯಾಯದ ೨೭ನೇ ಶ್ಲೋಕವು, "ಸಮಸ್ತ ಪ್ರಾಣಿಗಳಲ್ಲಿಯೂ ಸಮಾನವಾಗಿರುವವನೂ, ನಶ್ವರ ವಸ್ತುಗಳಲ್ಲಿ ಅವಿನಾಶಿಯಾಗಿರುವವನೂ ಆದ ಪರಮೇಶ್ವರನನ್ನು ಯಾವನು ನೋಡುತ್ತಾನೆಯೋ ಅವನೇ (ನಿಜವಾಗಿ) ನೋಡುತ್ತಾನೆ" ಎಂದು ಹೇಳುತ್ತದೆ.

Mūlaprakṛtiḥ मूलप्रकृतिः (397)

೩೭೯. ಮೂಲಪ್ರಕೃತಿಃ

          ಈ ನಾಮವು ಹಿಂದಿನ ನಾಮಕ್ಕೆ ಕಾರಣವನ್ನು ಒದಗಿಸುತ್ತದೆ. ಆಕೆಯು ಪರಮೋನ್ನತ ಪಾಲನಾಕರ್ತಳಾಗಿದ್ದಾಳೆ (ಪರಮೇಶ್ವರೀ) ಏಕೆಂದರೆ ಆಕೆಯು ಮೂಲಾಧಾರವಾಗಿದ್ದಾಳೆ. ಪ್ರಕೃತಿಯನ್ನು ಅತ್ಯಂತ ಸಹಜವಾದ ಸ್ವಭಾವ ಎಂದು ವಿವರಿಸಬಹುದು. ಅದನ್ನು ಮಾಯೆ ಎಂದೂ ಕರೆಯಬಹುದು. ಪ್ರಕೃತಿಯು ವ್ಯಕ್ತಿಗತ ಆತ್ಮ, ಮನಸ್ಸು, ಬುದ್ಧಿ, ಮತ್ತು ಅಹಂಕಾರಗಳ ಸಂಕೀರ್ಣವಾಗಿದೆ. ವಾಸ್ತವವಾಗಿ ಆತ್ಮವು ರೂಪಾಂತರ ಹೊಂದಲು ಪ್ರಕೃತಿಯನ್ನು ಅವಲಂಬಿಸಿದೆ. ಪ್ರಕೃತಿಯು ಮೂರು ಗುಣಗಳಾದ ಸತ್ವ, ತಮೋ ಮತ್ತು ರಜಸ್ಸುಗಳನ್ನು ಒಳಗೊಂಡಿರುತ್ತದೆ ಮತ್ತು ಮೂರು ವಿಧವಾದ ಸೃಜನಾತ್ಮಕ ಚಟುವಟಿಕೆಗಳಾದ ಇಚ್ಛಾ, ಜ್ಞಾನ ಮತ್ತು ಕ್ರಿಯಾ (ಬಯಕೆ, ವಿವೇಕ ಮತ್ತು ಕಾರ್ಯ) ಶಕ್ತಿಗಳನ್ನು ಒಳಗೊಂಡಿರುತ್ತದೆ. ಜೀವವು ವಿಕಸನ ಹೊಂದುವ ಸಮಯದಲ್ಲಿ ಪ್ರಕೃತಿಯು ವ್ಯಕ್ತಿಗತ ಆತ್ಮಗಳನ್ನು ತನ್ನ ಬಂಧಿಸುವ ಶಕ್ತಿಗಳುಳ್ಳ ತ್ರಿಗುಣಗಳಿಂದ ಮತ್ತು ಮಾಯೆಯ ಕ್ರಿಯಾಶೀಲ ಚಟುವಟಿಕೆಗಳಿಂದ ಕಟ್ಟಿ ಹಾಕಿ ಆತ್ಮವು ರೂಪಾಂತರ ಹೊಂದುವಂತೆ ಮಾಡುತ್ತದೆ. ವೈಯ್ಯಕ್ತಿಕವಾಗಿ ಆತ್ಮವು ನಿಷ್ಕ್ರಿಯ ಅಥವಾ ಜಡ ವಸ್ತುವಾಗಿದ್ದು ಅದರೊಳಗೆ ಕರ್ಮಗಳು ಇಮಡಲು ಮತ್ತು ಅನಾವರಣಗೊಳ್ಳಲು ಅದು ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿದೆ.  

          ಪ್ರಕೃತಿಯು ಚಲನಶೀಲ ಶಕ್ತಿಯ ರೂಪದಲ್ಲಿರುತ್ತದೆಂದು ಹೇಳಲಾಗುತ್ತದೆ. ಇದನ್ನು ಮಾಯಾ ಅಥವಾ ಸಗುಣ ಬ್ರಹ್ಮ ಅಥವಾ ಶಕ್ತಿ ಅಥವಾ ಪರಮಾತ್ಮನ ವಿಮರ್ಶ ರೂಪವೆಂದು ಕರೆಯಲಾಗುತ್ತದೆ. ಈ ಚಲನಶೀಲ ಶಕ್ತಿಯಿಲ್ಲದೆ, ಸೃಷ್ಟಿ ಕ್ರಿಯೆಯು ಎಂದಿಗೂ ಸಾಧ್ಯವಿಲ್ಲ. ಸೃಷ್ಟಿ ಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವುದಲ್ಲದೆ ಪ್ರಕೃತಿಯು ಈ ಸೃಷ್ಟಿಯನ್ನು ಸುಸ್ಥಿತಿಯಲ್ಲಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಪಂಚದ ಉದ್ಭವದ ಸಮಯದಲ್ಲಿ, ಪರಮಾತ್ಮವೊಂದೇ ಅಸ್ತಿತ್ವದಲ್ಲಿತ್ತು. ಯಾವಾಗ ಮೂಲವು ಸೃಷ್ಟಿಯಾಗಿ ಮಾರ್ಪಡುತ್ತದೋ ಅದು ಮೊದಲು ಆಕಾಶವಾಗಿ ತದನಂತರ ವಾಯು, ಅಗ್ನಿ, ನೀರು ಮತ್ತು ಭೂಮಿಯಾಗಿ ಪರಿವರ್ತನೆಗೊಳ್ಳುತ್ತದೆ. ಭೂಮಿಯಿಂದ ಸಸ್ಯಗಳು, ಪ್ರಾಣಿಗಳು, ಮನುಷ್ಯರು ಮೊದಲಾದವು ಅನಾವರಣಗೊಳ್ಳುತ್ತವೆ. ಇದು ತೈತ್ತರೀಯ ಉಪನಿಷತ್ತಿನ (೨.೧) ಸಾರವಾಗಿದೆ.

          ಅಮೂರ್ತ ರೂಪದಲ್ಲಿ ಪ್ರಕೃತಿಯನ್ನು ಅವ್ಯಕ್ತಾ (ನಾಮ ೩೯೮) ಎಂದು ಕರೆಯಲಾಗುತ್ತದೆ. ಪ್ರಕೃತಿಯ ಈ ಹಂತದಲ್ಲಿ ಎಲ್ಲಾ ಮೂರು ಗುಣಗಳು ಸಮತೋಲನ ಸ್ಥಿತಿಯಲ್ಲಿರುತ್ತವೆ. ಪ್ರಕೃತಿಯಲ್ಲಿನ ಈ ತ್ರಿಗುಣಗಳ ಸಮತೋಲನ ಸ್ಥಿತಿಯಲ್ಲಿ ಯಾವುದೇ ವಿಧವಾದ ವ್ಯತ್ಯಯವುಂಟಾದಲ್ಲಿ ಅದು ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳ ಉಗಮಕ್ಕೆ ದಾರಿ ಮಾಡಿಕೊಡುತ್ತದೆ. ಇದರೊಂದಿಗೆ ಅಹಂಕಾರ ಮತ್ತು ಬುದ್ಧಿಗಳು ಸಮ್ಮಿಳಿತವಾದಾಗ ಮುಂದಿನ ಸೃಷ್ಟಿಯು ಉಂಟಾಗುತ್ತದೆ. ಆದ್ದರಿಂದ ಪ್ರಕೃತಿಯು ಎಲ್ಲಾ ಸೃಷ್ಟಿ ಕಾರ್ಯಗಳಿಗೆ ಮೂಲಾಧಾರವಾಗಿದೆ. ಇದನ್ನು ಸಗುಣ ಬ್ರಹ್ಮವೆಂದೂ ಕರೆಯಲಾಗುತ್ತದೆ. ಇದನ್ನೇ ’ಪ್ರಕಾಶ-ವಿಮರ್ಶ-ಮಹಾ ಮಾಯಾ ಸ್ವರೂಪಿಣೀ’ ಅಥವಾ ಶಕ್ತಿ ಎಂದು ಕರೆಯುತ್ತಾರೆ. ಶಿವನು ಸಂಪೂರ್ಣವಾಗಿ ತನ್ನ ಸೃಷ್ಟಿ ವಿಷಯವನ್ನು ಕೈಗೊಳ್ಳಲು ಸಂಪೂರ್ಣವಾಗಿ ಶಕ್ತಿಯ ಮೇಲೆ ಅವಲಂಬಿತನಾಗಿರುವುದರಿಂದ, ಆಕೆಯನ್ನು ಶಿವನ ಸಂಗಾತಿಯೆಂದು ಹೇಳಲಾಗಿದೆ. ಈ ಅವ್ಯಕ್ತಾ ಹಂತದ ಹಿಂದೆ ನಿರ್ಗುಣ ಬ್ರಹ್ಮವಿದೆ. ಕಠೋಪನಿಷತ್ತು ಹೇಳುತ್ತದೆ (೩. ೧೦), "ಆತ್ಮವು ಆಲೋಚನೆ ಮತ್ತು ಮಾತಿಗೆ ಅತೀತವಾಗಿದೆ; ನಯನಗಳು ಅದನ್ನು ಗ್ರಹಿಸಲಾರವು" . ಆದ್ದರಿಂದ ಪರಬ್ರಹ್ಮವೇ ಸೃಷ್ಟಿಗೆ ಮೂಲವಾಗಿದ್ದಾನೆ ಏಕೆಂದರೆ ಅವನಿಗೆ ಅತೀತರಾಗಿರುವವರು ಯಾರೂ ಇಲ್ಲ. ಶಕ್ತಿಯನ್ನು ಮೂಲ ಪ್ರಕೃತಿ ಎನ್ನುತ್ತಾರೆ ಏಕೆಂದರೆ ಆಕೆಯು ಪರಬ್ರಹ್ಮದ ಭಾಗವಾಗಿದ್ದಾಳೆ ಅಥವಾ ಪರಬ್ರಹ್ಮದ ವಿಮರ್ಶ ರೂಪವಾಗಿದ್ದಾಳೆ; ಅದಿಲ್ಲದಿದ್ದರೆ ಸೃಷ್ಟಿ ಕಾರ್ಯವು ಎಂದಿಗೂ ಸಾಧ್ಯವಿರಲಿಲ್ಲ.

          ಛಾಂದೋಗ್ಯ ಉಪನಿಷತ್ತು (೬. ೨.೩.) ಹೇಳುತ್ತದೆ, "ಅಸ್ತಿತ್ವವು (ಪರಬ್ರಹ್ಮವು) ನಿರ್ಧರಿಸಿತು, ನಾನು ಅನೇಕವಾಗುತ್ತೇನೆ" - ಇದು ಪ್ರಕೃತಿಯನ್ನು ಸೂಚಿಸುತ್ತದೆ. ಮುಂಡಕ ಉಪನಿಷತ್ತು (೧.೧.೮) ಸಹ ಕಠೋಪನಿಷತ್ತಿನ ಮತ್ತು ಛಾಂದೋಗ್ಯ ಉಪನಿಷತ್ತಿನ ಈ ಹೇಳಿಕೆಗಳನ್ನು ದೃಢ ಪಡಿಸುತ್ತದೆ. ಅದು ಹೇಳುತ್ತದೆ, "ಬ್ರಹ್ಮವು ತಪಸ್ಸಿನಿಂದ ಬೆಳೆಯುತ್ತದೆ". ಈ ಧರ್ಮಗ್ರಂಥಗಳು ಏನನ್ನಾದರೂ ಹೇಳಲಿ, ಪ್ರಕೃತಿಯು ಸೃಷ್ಟಿಯ ಮೂಲವಾಗಿದ್ದು; ಪರಬ್ರಹ್ಮವು ಸೃಷ್ಟಿ ಕ್ರಿಯೆಯನ್ನು ಕೈಗೊಳ್ಳಲು ಮತ್ತು ಈ ಬ್ರಹ್ಮಾಂಡವನ್ನು ಸುಸ್ಥಿರವಾಗಿಡಲು ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತವಾಗಿದೆ. ಇದೇ ಈ ನಾಮದ ಅರ್ಥವಾಗಿದೆ.

ಆತ್ಮ ಮತ್ತು ಪ್ರಕೃತಿಯ ಕುರಿತ ಹೆಚ್ಚಿನ ವಿವರಣೆಗಳು:

            ದೇವರ ಸೃಷ್ಟಿಯಲ್ಲಿ ಅನಂತ ಆತ್ಮಗಳು (ಪುರುಷ’ಗಳು) ಇವೆ ಮತ್ತವು ಜೀವಿಗಳಾಗಿ ರೂಪ ತಾಳುತ್ತವೆ. ಈ ಜೀವಿಗಳು ಯಾವುದೇ ಸಮಯದಲ್ಲಿ ಯಾವುದೇ ವಿಧವಾದ ಬದಲಾವಣೆಗಳನ್ನು ಹೊಂದುವುದಿಲ್ಲ. ಅವುಗಳಿಗೆ ಯಾವುದೇ ವಿಧವಾದ ಬಲವಿಲ್ಲ ಮತ್ತವು ಜಡ ಸ್ವಭಾವವನ್ನು ಹೊಂದಿವೆ. ಅವುಗಳು ಪರಮಾಣುಗಳಿಗಿಂತಲೂ ಚಿಕ್ಕವು ಎಂದು ಹೇಳಲ್ಪಡುವುದರಿಂದ ಅವುಗಳನ್ನು ಶಕ್ತಿಯುತವಾದ ಸೂಕ್ಷ್ಮದರ್ಶಕಗಳ ಮೂಲಕವೂ ನೋಡಲಾಗುವುದಿಲ್ಲ. ವೈದ್ಯಕೀಯವಾಗಿ ಆತ್ಮದ ಇರುವಿಕೆಯನ್ನು ನಿರೂಪಿಸಲಾಗದಿದ್ದರೂ ಸಹ, ಆ ತತ್ವವನ್ನು ವಿಶ್ಲೇಷಿಸಲು ಸಾಕಷ್ಟು ಸಂಶೋಧನೆಗಳು ನಡೆದಿವೆ. ಆತ್ಮವು ದೈವೀ ರಹಸ್ಯವೆಂದು ಪರಿಗಣಿತವಾಗಿರುವುದರಿಂದ, ವೈದ್ಯಕೀಯ ಸಂಶೋಧನೆಗಳ ಫಲಿತಾಂಶಗಳು ನಿಖರವಾಗಿರುತ್ತವೆ ಎಂದು ಹೇಳಲಾಗದು. ಆದರೆ ವೈದ್ಯಕೀಯ ರಂಗವನ್ನು ಹೊರತು ಪಡಿಸಿದ ಸಂಶೋಧನೆಗಳು ಆತ್ಮವನ್ನು ಒಕ್ಕೊರಲಿನಿಂದ ವಿವರಿಸಿವೆ. ಆತ್ಮವು ಸರ್ವವ್ಯಾಪಿಯಾಗಿರುವ ಪರಬ್ರಹ್ಮದ ಸಾರಂಶದ ಪ್ರತಿಬಿಂಬವಾಗಿದೆ ಎಂದು ಪರಿಗಣಿಸಲಾಗಿದೆ. ಈ ಹೇಳಿಕೆಯು ಆತ್ಮಗಳಿಗೆ ಶಕ್ತಿಯಿಲ್ಲ ಮತ್ತು ತಮ್ಮದೇ ಆದ ಇ‌ಚ್ಛಾಶಕ್ತಿ ಇಲ್ಲವೆನ್ನುವುದನ್ನು ನಿರೂಪಿಸಲು ಹೊರಟಂತಿದೆ. ಈ ಪರಬ್ರಹ್ಮ ಮತ್ತು ಆತ್ಮ ಇವುಗಳ ಸಂಗತಿಯನ್ನು ಚಂದ್ರನು ಸೂರ್ಯನಿಂದ ಪಡೆಯುವ ಬೆಳಕಿನ ಉದಾಹರಣೆಯಿಂದ ವಿವರಿಸಬಹುದು. ಚಂದ್ರನಿಂದ ಹೊಮ್ಮುವ ಬೆಳಕು ಭ್ರಮೆಯಾಗಿದ್ದು ಅದು ನೋಡುಗರಿಗೆ ಚಂದ್ರನಿಗೆ ಸ್ವತಃ ಬೆಳಕಿದೆ ಎಂದು ನಂಬಿಸುತ್ತದೆ. ಆದರೆ ವಾಸ್ತವ ಸಂಗತಿ ಏನೆಂದರೆ ಚಂದ್ರನು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾನೆ ಮತ್ತು ಅದು ಸ್ವಯಂಪ್ರಕಾಶಕನಲ್ಲ. ಆದ್ದರಿಂದ, ಹೆಚ್ಚು ಕಡಿಮೆ, ಆತ್ಮ ಮತ್ತು ಪರಮಾತ್ಮ (ಬ್ರಹ್ಮವು) ಒಂದರಿಂದ ಒಂದು ಪ್ರತ್ಯೇಕವಲ್ಲ, ಆದರೂ ಸಹ ಅವುಗಳ ನಡುವೆ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಬಹುಶಃ ಒಂದು ಪ್ರಮುಖವಾದ ಬೇಧವೆಂದರೆ ಅದು ಕರ್ಮ. ಬ್ರಹ್ಮವು ಕರ್ಮದಿಂದ ಬಂಧಿತವಾಗುವುದಿಲ್ಲ ಆದರೆ ವ್ಯಕ್ತಿಗತ ಆತ್ಮಗಳು ಕರ್ಮಗಳಿಂದ ಬಂಧನಕ್ಕೊಳಗಾಗುತ್ತವೆ. ಇನ್ನೊಂದು ವಿಧವಾದ ಚಿಂತನೆಯನ್ನು ಹೊಂದಿರುವ ಪಂಗಡವೂ ಇದೆ (ಮೀಮಾಂಸದ ಎರಡನೆಯ ಮತ್ತು ಅತೀ ಮಹತ್ವದ ಭಾಗವಾದ ವೇದಾಂತದ ಅಂದರೆ ವೇದಗಳ ಅಂತಿಮ ಸಾರ ಅಥವಾ ವೇದಗಳ ಅಂತಿಮ ಭಾಗದಲ್ಲಿ ಬರುವ ಉಪನಿಷತ್ತುಗಳ ಬೋಧನೆಗಳ ಸಾರವಾದ ವೇದಾಂತ ತತ್ವದಿಂದ ಹೊರಹೊಮ್ಮಿದ ಮೂರು ಪ್ರಮುಖ ಶಾಖೆಗಳಲ್ಲೊಂದು); ಅದರ ಪ್ರಕಾರ ಪರಬ್ರಹ್ಮವು ವ್ಯಕ್ತಿಗತ ಆತ್ಮದ ರೂಪಧಾರಣೆ ಮಾಡಿ, ವ್ಯಕ್ತಿಗಳು ಕರ್ಮನಿರತರಾಗಲು ಅನುವು ಮಾಡಿದರೂ ಸಹ ತಾನು ಎಲ್ಲಾ ಕರ್ಮಗಳು ಮತ್ತು ಕರ್ಮಫಲಗಳಿಗೆ ಸಂಭಂದವಿಲ್ಲದಂತೆ ಇರುತ್ತದೆ. ಪುರುಷ ಎನ್ನುವ ಶಬ್ದವನ್ನು ಸಾಂಖ್ಯ ತತ್ವದ ಅನುಯಾಯಿಗಳು ಬಳಸುತ್ತಾರೆ (ಸಾಂಖ್ಯವು ಮೂರು ಪ್ರಮುಖ ಹಿಂದೂ ಸಿದ್ಧಾಂತಗಳಲ್ಲೊಂದಾಗಿದ್ದು; ಅದು ೨೫ ತತ್ವಗಳನ್ನು ಪ್ರತ್ಯೇಕವಾಗಿ ಗುರುತಿಸುತ್ತದೆ ಅವುಗಳಲ್ಲಿ ಇಪ್ಪತ್ಮೂರು ತತ್ವಗಳು ಮೂಲ ಪ್ರಕೃತಿಯಿಂದ ಅಥವಾ ಪ್ರಥಮ ಸೃಷ್ಟಿ ಮಾಡುವ ವಸ್ತುವಿನಿಂದ ರೂಪಾಂತರ ಹೊಂದಿದ ಬುದ್ಧಿ, ಅಹಂಕಾರ, ಐದು ತನ್ಮಾತ್ರಗಳು, ಪಂಚ ಮಹಾಭೂತಗಳು, ಮನಸ್ಸು ಮೊದಲಾದವುಗಳಾದರೆ; ಇದರಲ್ಲಿ ಇಪ್ಪತ್ತೈದನೆಯದೇ ಪುರುಷವಾಗಿದೆ) ಮತ್ತು ಆತ್ಮವೆನ್ನುವ ಶಬ್ದವನ್ನು ವೇದಾಂತ ಶಾಖೆಯ ಪ್ರತಿಪಾದಕರು ಬಳಸುತ್ತಾರೆ. ಇವೆರಡೂ ಉಲ್ಲೇಖಿಸುವುದು ಜೀವಾತ್ಮಗಳನ್ನೇ. ಎಲ್ಲಿಯವರೆಗೆ ಸ್ಥೂಲ ಶರೀರವು ಸಕ್ರಿಯವಾಗಿರುತ್ತದೆಯೋ ಅಲ್ಲಿಯವರೆಗೆ ಆತ್ಮವು ಅದರಲ್ಲಿ ಇರುತ್ತದೆ. ಒಮ್ಮೆ ಸ್ಥೂಲ ಶರೀರವು ಸತ್ತ ನಂತರ ತನ್ನ ಕಾರ್ಯವನ್ನು ನಿಲ್ಲಿಸಿದಾಗ, ಆತ್ಮವು ಪ್ರಾಣದೊಂದಿಗೆ ಅಥವಾ ಜೀವ ಶಕ್ತಿಯೊಂದಿಗೆ ಶರೀರವನ್ನು ತ್ಯಜಿಸುತ್ತದೆ. ಆತ್ಮದ ವಿಧಿಯನ್ನು, ಅದು ಎಲ್ಲಿಗೇ ಹೋದರೂ ಅದರೊಳಗೆ ಅಡಕವಾಗಿರುವ ಕರ್ಮ ನಿಯಮವು ನಿರ್ಧರಿಸುತ್ತದೆ. ಕರ್ಮವೆನ್ನುವುದು ವಿಮಾನದಲ್ಲಿನ ಧ್ವನಿ ಮುದ್ರಕ (VOICE BOX)ದಂತೆ ಎಲ್ಲಾ ವಿಧವಾದ ಕ್ರಿಯೆಗಳನ್ನು ಮತ್ತು ಆಲೋಚನೆಗಳನ್ನು ದಾಖಲಿಸುತ್ತದೆ. ಯಾರಾದರೂ ಒಬ್ಬರು ತಾನು ಯಾರಿಗೂ ತಿಳಿಯದಂತೆ ಒಂದು ಕೆಲಸವನ್ನು ಮಾಡುತ್ತಿದ್ದೇನೆಂದುಕೊಳ್ಳುವಾಗ ಅವನು ಒಂದು ಸಂಗತಿಯನ್ನು ಮರೆಯಬಾರದು ಅದೇನೆಂದರೆ ಅವನು ಮಾಡಿದ್ದೆಲ್ಲವೂ ಕರ್ಮದ ಖಾತೆಯಲ್ಲಿ ದಾಖಲಾಗುತ್ತಾ ಹೋಗುತ್ತದೆ. ಒಂದು ವಿಷಯವನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕು, ಅದೇನೆಂದರೆ ಕರ್ಮವೆನ್ನುವುದು ನಮ್ಮ ಮನಸ್ಸು ಕೈಗೊಂಡ ವಿವಿಧ ರೀತಿಯ ನಿರ್ಧಾರಗಳಾಗಿದ್ದು ಅವು ಸತ್ತ ನಂತರ ಅಂತಿಮವಾಗಿ ಆತ್ಮದ ಗತಿಯನ್ನು ನಿರ್ಧರಿಸುತ್ತವೆ.  ಆದ್ದರಿಂದ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವುದು ಮತ್ತು ದೃಢವಾಗಿ ಆಧ್ಯಾತ್ಮದ ಹಾದಿಯಲ್ಲಿ ಸಾಗುವುದು ಕರ್ಮದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕ ಕ್ರಿಯೆಗಳೆಂದು ಪರಿಗಣಿತವಾಗಿವೆ. ಕರ್ಮದ ಖಾತೆಯು ಕೇವಲ ಚಾರಿತ್ರಿಕ ದಾಖಲೆಯಷ್ಟೇ ಅಲ್ಲ ಅದು ಬಹು ಹಿಂದೆ ಮರೆತು ಹೋದ ವಿಕಾಸದ ಅಂಶಗಳನ್ನೂ ಸಹ ಹೊಂದಿರುತ್ತದೆ. ಆದ್ದರಿಂದ ಅಂತಿಮವಾಗಿ ಆತ್ಮವು ಅದರ ಕರ್ಮ ಖಾತೆಯಲ್ಲಿರುವ ಕರ್ಮ ಶೇಷಕ್ಕನುಗುಣವಾಗಿ ಶರೀರದಲ್ಲಿನ ಕ್ರಿಯಗಳನ್ನು ಅನಾವರಣಗೊಳಿಸುತ್ತದೆ. ಈ ಸಂದರ್ಭದಲ್ಲಿ ಆತ್ಮವು ಯಾವುದೇ ವಿಧವಾದ ಬದಲಾವಣೆ ಅಥವಾ ರೂಪಾಂತರವನ್ನು ಹೊಂದುವುದಿಲ್ಲ ಏಕೆಂದರೆ ಅದು ಕೇವಲ ಬ್ರಹ್ಮದ ಅಥವಾ ಪರಮಾತ್ಮನ ಪ್ರತಿಬಿಂಬವಾಗಿರುವುದರಿಂದ. ಆತ್ಮವು ಪ್ರಕೃತಿಯೊಂದಿಗೆ ಸಂಯೋಗವನ್ನು ಹೊಂದಿದಾಗ ಮಾತ್ರವೇ ಅದು ರೂಪಾಂತರ ಹೊಂದಲು ಸಾಧ್ಯ.

           ಪ್ರಕೃತಿ: ಆತ್ಮ ಅಥವಾ ಪುರುಷವು ಪ್ರಕೃತಿಯೊಂದಿಗೆ ಪ್ರತಿಕ್ರಿಯಿಸಿದಾಗ ಮಾತ್ರವೇ ರೂಪಾಂತರ ಹೊಂದಬಲ್ಲುದು, ಇದನ್ನೇ ಸಹಜ ಸ್ವಭಾವ ಅಥವಾ ಸ್ವಯಂ ಅನಾವರಣಗೊಳ್ಳುವ ಕ್ರಿಯೆ ಎಂದು ಕರೆಯಲಾಗುತ್ತದೆ. ಈ ವಿಶ್ಲೇಷಣೆಯೊಂದೇ ಪ್ರಕೃತಿಯ ಲಕ್ಷಣವನ್ನು ವಿವರಿಸಲು ಸಾಕು. ಪ್ರಕೃತಿಯೊಂದೇ ಸೃಷ್ಟಿ ಕ್ರಿಯೆಯ ಅನಾವರಣಗೊಳ್ಳುವಿಕೆಯಲ್ಲಿ ಪಾತ್ರ ವಹಿಸುತ್ತದೆ. ಯಾವಾಗ ಆತ್ಮವು ಪ್ರಕೃತಿಯೊಂದಿಗೆ ಸಹಯೋಗವನ್ನು ಹೊಂದಿರುತ್ತದೆಯೋ ಆಗ ಮಾತ್ರವೇ ಅದು ಪ್ರಥಮವಾಗಿ ಸೂಕ್ಷ್ಮವಾದ ಅಭೌತಿಕ ವಸ್ತುವಾಗಿ ಅನಾವರಣಗೊಂಡು ತದನಂತರ ಸ್ಥೂಲರೂಪವನ್ನು ಅನಾವರಣಗೊಳಿಸುತ್ತದೆ. ಈ ಸ್ಥೂಲ ರೂಪವನ್ನು ಮೂರು ವಿಶಾಲವಾದ ಭಾಗಗಳಾಗಿ ವಿಭಜಿಸಬಹುದು; ಅವೆಂದರೆ ಸ್ಥೂಲ, ಸೂಕ್ಷ್ಮ ಮತ್ತು ಕಾರಣ. ವಾಹನೊಂದರ ಚಕ್ರದ ಟೈರಿಗೆ ಇವನ್ನು ಹೋಲಿಸಬಹುದು. ಆ ಟೈರಿಗೆ ರಬ್ಬರಿನಿಂದ ಮಾಡಲ್ಪಟ್ಟ ಹೊರ ಹೊದಿಕೆ ಇರುತ್ತದೆ ಮತ್ತು ಅದರೊಳಗೆ ಟ್ಯೂಬು ಇರುತ್ತದೆ ಮತ್ತು ಅದರೊಳಗೆ ಗಾಳಿಯು ತುಂಬಿಕೊಂಡಿರುತ್ತದೆ. ಒಂದು ಕಾರು ಈ ಮೂರೂ ವಸ್ತುಗಳ ಸಂಯೋಜಿತ ಪೂರಕ ಕ್ರಿಯೆಯಿಲ್ಲದಿದ್ದರೆ ಮುಂದೋಡಲಾಗದು. ಹೊರಗಿನ ಟೈರು ಸ್ಥೂಲ ಶರೀರವಾದರೆ, ಗಾಳಿಯನ್ನು ಹಿಡಿದಿಟ್ಟುಕೊಂಡಿರುವ ಟ್ಯೂಬು ಸೂಕ್ಷ್ಮ ಶರೀರವಾಗಿದೆ ಮತ್ತು ಅದರೊಳಗಿರುವ ಕಾಣಿಸದೇ ಇರುವ ಗಾಳಿಯು ಕಾರಣ ಶರೀರವಾಗಿದೆ. ಇದೇ ವಿಧವಾಗಿ ಈ ಮೂರು ರೂಪಗಳಿಲ್ಲದಿದ್ದರೆ ಅಸ್ತಿತ್ವವು ಸಾಧ್ಯವಿಲ್ಲ. ವಾಸ್ತವವಾಗಿ ಈ ಮೂರು ಶರೀರಗಳು, ಪ್ರಜ್ಞೆಯ ವಿವಿಧ ಹಂತಗಳ ಪ್ರತಿಬಿಂಬಗಳಾಗಿವೆ. ಈ ಮೂರು ಶರೀರಗಳನ್ನು ನಮ್ಮ ಪ್ರಜ್ಞೆಯ ಸ್ತರಗಳನ್ನು ಮಾರ್ಪಡಿಸಿಕೊಂಡು, ಉತ್ತಮ ಪಡಿಸಿಕೊಂಡು ಮತ್ತು ಶುದ್ಧವಾಗಿಸಿಕೊಂಡಾಗ ಮಾತ್ರವೇ ಗುರುತಿಸಬಹುದು. ನಮ್ಮ ಪ್ರಜ್ಞೆಯ ಸ್ತರವು ಎಷ್ಟು ಪರಿಶುದ್ಧವಾಗುತ್ತದೆಯೋ ಅಷ್ಟು ಉನ್ನತವಾಗಿ ನಮ್ಮ ಆಧ್ಯಾತ್ಮಿಕ ಸ್ತರವು ಇರುತ್ತದೆ ಮತ್ತು ಅದಕ್ಕೆ ತಕ್ಕಂತೆ ಉತ್ತಮವಾದ ಶರೀರವಿರುತ್ತದೆ. ಈ ಮೂರು ವಿಧವಾದ ಶರೀರಗಳು ಪ್ರಕೃತಿಯ ಪ್ರತಿಫಲನಗಳಾಗಿವೆ ಮತ್ತು ಈ ಪ್ರತಿಫಲನವನ್ನು ಮಾಯೆ ಅಥವಾ ಭ್ರಮೆ ಎಂದು ಕರೆಯಲಾಗಿದೆ.

           ಸ್ಥೂಲ ಶರೀರವು ಭೌತಿಕ ಪ್ರಪಂಚವನ್ನು ಪ್ರತಿಫಲಿಸಿದರೆ, ಸೂಕ್ಷ್ಮ ಶರೀರವು ಪ್ರಾಣ ಶಕ್ತಿಗಳನ್ನು ಪ್ರತಿಫಲಿಸುತ್ತದೆ ಮತ್ತು ಕಾರಣ ಶರೀರವು ಕಾರಣ ಪ್ರಪಂಚವನ್ನು ಪ್ರತಿಫಲಿಸುತ್ತದೆ. ಈ ಮೂರು ಹಂತಗಳನ್ನು ಪ್ರಜ್ಞೆಯ ಮೂರು ಅವಸ್ಥೆಗಳಾದ ಎಚ್ಚರ, ಕನಸಿನ ಸ್ಥಿತಿ ಮತ್ತು ಗಾಢನಿದ್ರಾವಸ್ಥೆಯಲ್ಲಿ (ಜಾಗೃತ್, ಸ್ವಪ್ನ ಮತ್ತು ಸುಷುಪ್ತಿಗಳಲ್ಲಿ) ಅರಿವಿಗೆ ಬರುತ್ತವೆ. ಕಾರಣ ಶರೀರದ ಪರಿಣಾಮಗಳೇ ಸ್ಥೂಲ ಮತ್ತು ಸೂಕ್ಷ್ಮ ಶರೀರಗಳಾಗಿವೆ. ಈ ವಿಧವಾದ ಶರೀರಗಳಿಗೆ ಕಾರಣವಾಗಿರುವುದು ಕಾರಣ ಶರೀರ ಅಥವಾ ರೂಪಾಂತರಕ್ಕೆ ಪ್ರಜ್ಞೆಯೇ ಕಾರಣವಾಗಿದೆ.  ಕೆಲವೊಂದು ಮತಾನುಯಾಯಿಗಳ ಪ್ರಕಾರ ಪ್ರಜ್ಞೆಗೆ ನಾಲ್ಕನೇ ಹಂತವಿದ್ದು ಅದನ್ನು ತುರೀಯಾವಸ್ಥೆ ಎಂದು ಕರೆಯಲಾಗಿದೆ. ವಾಸ್ತವವಾಗಿ ಈ ಹಂತವನ್ನೇ ಎಲ್ಲರೂ ಒಪ್ಪಿಕೊಳ್ಳಬೇಕು. ಈ ಹಂತದಲ್ಲಿ ಮಾತ್ರವೇ ಪ್ರಜ್ಞೆಯು ದೇಹಕ್ಕೆ ಸಂಭಂದಿಸಿದ ಎಲ್ಲಾ ವಿಧವಾದ ಕ್ಲೇಷಗಳನ್ನು ಅಧಿಗಮಿಸಿ ಪರಿಶುದ್ಧವಾಗಿ ಚಿತ್ ಎನಿಸಿಕೊಳ್ಳುವುದಕ್ಕೆ ಅರ್ಹತೆಯನ್ನು ಪಡೆಯುತ್ತದೆ. ಚಿತ್ ಎಂದರೆ ಪರಿಪೂರ್ಣ ಅಥವಾ ಮೂಲ ಪ್ರಜ್ಞೆ/ಚೈತನ್ಯ. ಮಾಂಡೂಕ್ಯ ಉಪನಿಷತ್ತು ಈ ತುರೀಯಾವಸ್ಥೆಯನ್ನು ಅಧಿಕಾರಯುತವಾಗಿ ವಿವರಿಸುತ್ತದೆ, "ತುರೀಯಾ ಎಂದರೆ ಆಂತರಿಕವಾಗಿ ಏನು ಜರುಗುತ್ತಿದೆ ಎನ್ನುವುದರ ಪ್ರಜ್ಞೆಯಲ್ಲ. ಅದು ಏನಿಲ್ಲದಿದ್ದರೆ ಏನಾಗುತ್ತದೆ ಎನ್ನುವುದರ ಪ್ರಜ್ಞೆಯೂ ಅಲ್ಲ. ಅದು ಯಾವೆರಡು ವಸ್ತುಗಳ ನಡುವಿನ ಪ್ರಜ್ಞೆಯೂ ಅಲ್ಲಾ. ಅದು ಏಕಕಾಲಕ್ಕೆ ಎಲ್ಲಾ ವಸ್ತುಗಳ ಬಗೆಗಿನ ಪ್ರಜ್ಞೆಯೂ ಅಲ್ಲ. ಅದು ಪ್ರಜ್ಞೆಯೂ ಅಲ್ಲ. ಅದು ಗೋಚರವಾಗದ್ದು, ಅದು ಯಾವುದೇ ವಿಧವಾದ ಉಪಯೋಗಕ್ಕೆ ಒಳಪಡುವುದಲ್ಲ, ಅದು ಇಂದ್ರಿಯಗಳಿಗೆ ನಿಲುಕದ್ದು, ಆಲೋಚನೆಗೆ ಅತೀತವಾದದ್ದು ಮತ್ತು ಯಾವುದೇ ವಿಧವಾದ ಶಬ್ದದ ಮೂಲಕ ಸಂಕೇತಿಸಲಾಗದ್ದು. ಆ ಸ್ಥಿತಿಯಲ್ಲಿ ಕೇವಲ ಆತ್ಮಪ್ರಜ್ಞೆಯೊಂದೇ ಇರುತ್ತದೆ ಮತ್ತು ಅದು ಪ್ರಪಂಚದಿಂದ ಮುಕ್ತವಾಗಿರುತ್ತದೆ. ಅದು ಎಲ್ಲಾ ವಿಧವಾದ ಒಳ್ಳೆಯ ಸಂಗತಿಗಳು ಮತ್ತು ಶಾಂತಿಯ ಮೂರ್ತ ರೂಪವಾಗಿದೆ. ಅದು ಅದ್ವಿತೀಯವಾದದ್ದು. ನಾಲ್ಕನೆಯ ಹಂತವೇ ತುರಿಯಾವಸ್ಥೆಯಾಗಿದೆ. ಜ್ಞಾನಿಗಳು ಇದನ್ನು ಆತ್ಮವೆಂದು ಪರಿಗಣಿಸುತ್ತಾರೆ. ಈ ಆತ್ಮವನ್ನು ಅರಿತುಕೊಳ್ಳಬೇಕು". ಆತ್ಮವು ತುರಿಯಾವಸ್ಥೆಯಲ್ಲಿ ಅತ್ಯಂತ ಪರಿಶುದ್ಧವಾದ ಪ್ರಜ್ಞೆಯಲ್ಲಿರುತ್ತದೆ. ಈ ಹಂತದಲ್ಲಿ ಪ್ರಜ್ಞೆಯು ಯಾವುದೇ ವಿಧವಾದ ಅಡಚಣೆಗಳಿಲ್ಲದೆ ಅದೊಂದೇ ಇರುತ್ತದೆ.

          ಪ್ರಕೃತಿಯು ಆತ್ಮವನ್ನು ಮೇಲೆ ತಿಳಿಸಿದ ಶರೀರಗಳಲ್ಲಿ ಬಂಧಿಸುವ ಪ್ರಬಲವಾದ ಅಸ್ತ್ರವಾಗಿದ್ದು ಅದು ಕೇವಲ ಅದರೊಳಗೆ ಅಡಕವಾಗಿರುವ ಕರ್ಮಗಳನ್ನು ಅನಾವರಣಗೊಳಿಸುತ್ತದೆ. ಯಾವಾಗ ಆತ್ಮವು ಕಾಮಪೂರಿತ ಪ್ರಕೃತಿಯ ಆಲಿಂಗನದಲ್ಲಿರುತ್ತದೆಯೋ ಆಗ ಅದು ತನ್ನ ಪರಬ್ರಹ್ಮ ಸ್ವರೂಪವನ್ನು ಮರೆತು ತನ್ನನ್ನು ತಾನು ಅಹಂಕಾರದೊಂದಿಗೆ ಗುರುತಿಸಿಕೊಳ್ಳುತ್ತದೆ. ಮೋಸಪೂರಿತವಾದ ಮತ್ತು ಭ್ರಮೆಯಿಂದ ಕೂಡಿದ ಪ್ರಕೃತಿಯ ಸ್ವಭಾವವು ಆತ್ಮಕ್ಕೆ ಎಲ್ಲಾ ವಿಧವಾದ ಹವ್ಯಾಸಗಳು, ಅಡಚಣೆಗಳು ಮತ್ತು ಗೊಂದಲಗಳನ್ನುಂಟು ಮಾಡಿ ಅದು ಆತ್ಮನನ್ನು ಪ್ರಾಪಂಚಿಕತೆಯಲ್ಲಿ ಮುಳುಗಿಸುತ್ತದೆ. ಆತ್ಮದ ಈ ಹಂತವು ಅಜ್ಞಾನ ಅಥವಾ ಅವಿದ್ಯೆಯ ಅವಸ್ಥೆಯಲ್ಲಿದ್ದು ಅದು ವಿದ್ಯೆ ಅಥವಾ ಜ್ಞಾನಕ್ಕೆ ಪ್ರತಿಕೂಲವಾದ ಸ್ಥಿತಿಯಲ್ಲಿರುತ್ತದೆ. ಶುದ್ಧವಾದ ಆತ್ಮವು ಈಗ ಪ್ರಕೃತಿಯುಂಟು ಮಾಡುವ ಮಾಯೆ ಅಥವಾ ಭ್ರಮೆಯ ಮುಸುಕಿನೊಳಗೆ ಮುಚ್ಚಲ್ಪಡುತ್ತದೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 396-397 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Sat, 08/31/2013 - 17:55

ಶ್ರೀಧರರೆ, ೧೦೫. ಲಲಿತಾ ಸಹಸ್ರನಾಮ ೩೯೬ರಿಂದ ೩೯೭ನೇ ನಾಮಗಳ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ. ಆತ್ಮ / ಪ್ರಕೃತಿಯ ಕುರಿತ ಹೆಚ್ಚು ವಿವರವನ್ನು ಬೇರೆಯಾಗಿ ಪ್ರಯತ್ನಿಸುತ್ತೇನೆ.

ಲಲಿತಾ ಸಹಸ್ರನಾಮ ೩೯೬-೩೯೭
____________________________________

೩೯೬. ಪರಮೇಶ್ವರೀ
ಸಕಲ ಜೀವಿಗಳಲಸ್ಥಿತ್ವ, ನಶ್ವರದವಿನಾಶಿ ತತ್ವ ಪರಮೇಶ್ವರ
ನೋಡಬಲ್ಲವನೆ ನಿಜದಲಿ ಪರಮಪಾಲಕನನೆ ಕಾಣುವ ತರ
ಪರಶಿವ ತಾ ಪರಮೇಶ್ವರ, ಸಂಗಾತಿ ತಾನಾಗಿ ಪರಮೇಶ್ವರೀ
ಪರಮೋನ್ನತ ಪರಿಪಾಲಕಳಾಗಿ ದೇವಿ, ಜಗವನಾಳುವ ಪರಿ!

೩೭೯. ಮೂಲಪ್ರಕೃತಿಃ 
ಸಕಲ ಮೂಲಾಧಾರ ಪ್ರಕೃತಿ, ಸಹಜ ಸ್ವಭಾವ ಮಾಯೆ
ವ್ಯಕ್ತಿಗತಾತ್ಮ ಮನ ಬುದ್ಧಿ ಅಹಂಕಾರ ಸಂಕೀರ್ಣ ಛಾಯೆ
ಸತ್ವ ತಮೋ ರಾಜೊ ತ್ರಿಗುಣ, ಇಚ್ಛಾ ಜ್ಞಾನ ಕ್ರಿಯಾ ತ್ರಿಶಕ್ತಿ
ಜಡನಿಷ್ಕ್ರಿಯಾತ್ಮಗಳ ಕಟ್ಟಿ ರೂಪಾಂತರಿಸೊ ಮೂಲಪ್ರಕೃತಿಃ!

ಸೃಷ್ಟಿಕ್ರಿಯೆ ಜತೆ ಸುಸ್ಥಿತಿಯಲಿಡುತ, ಚಲನಶೀಲ ಪ್ರಕೃತಿ ಪಾತ್ರ
ಮೂಲದಸ್ಥಿತ್ವ ಪರಮಾತ್ಮ, ಪಂಚಭೂತವಾಗಿ ಸೃಷ್ಟಿ ರೂಪಾಂತರ
ಆಕಾಶ ನಂತರ ವಾಯು ಅಗ್ನಿ ನೀರು ಭೂಮಿ-ಪರಿವರ್ತನೆ ಕಾರಣ
ಸಸ್ಯ, ಪ್ರಾಣಿ, ಮನುಜಾದಿಗಳಾಗಮನಾ ಭೂಮಿಯಿಂದನಾವರಣ!

ಮಾತು ಆಲೋಚನೆಗತೀತ ಅಮೂರ್ತ, ಅವ್ಯಕ್ತಾ ರೂಪಾ ಪ್ರಕೃತಿ
ತ್ರಿಗುಣ ಶಕ್ತಿ ವ್ಯತ್ಯಯ, ಸೃಷ್ಟಿಕಾರ್ಯಕೆ ಅಹಂ ಬುದ್ಧಿ ಜತೆ ತ್ರಿಶಕ್ತಿ
ಅವ್ಯಕ್ತಾ ಹಿನ್ನಲೆ, ಸೃಷ್ಟಿ ಮೂಲ ನಿರ್ಗುಣ ಸಕಲಾತೀತ ಪರಬ್ರಹ್ಮ
ವಿಮರ್ಶಾರೂಪ ಮೂಲ ಪ್ರಕೃತಿ ಶಕ್ತಿ, ಮಿಲನಕಷ್ಟೆ ಸೃಷ್ಟಿಯುಗಮ!

ಅಂತಾಗಿ ಸೃಷ್ಟಿಯ ಮೂಲ ಪ್ರಕೃತಿ, ಪರಬ್ರಹ್ಮದ ಆಜೀವ ಸಂಗಾತಿ
ಸೃಷ್ಟಿಕ್ರಿಯೆ ಜತೆ ಸುಸ್ಥಿತಿಯಲಿಡೆ ಬ್ರಹ್ಮಾಂಡ, ಅವಲಂಬನೆ ಪ್ರಕೃತಿ
ಪರಮ ಅಸ್ಥಿತ್ವ ಪರಬ್ರಹ್ಮದಸ್ವಗತ, ತಾನಾದ ಅನೇಕ ಪ್ರಕೃತಿರೂಪ
ತಪದಿಂದ ಬೆಳೆವ ಬ್ರಹ್ಮದನಂತ, ಸೃಷ್ಟಿ ಚಕ್ರ ನಡಿಗೆ ಸಮತೋಲಿಪ!

ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
 

ನಾಗೇಶರೆ,
ಈ ಕಂತಿನ ಎಲ್ಲಾ ಪದ್ಯಗಳೂ ಅದ್ಭುತವಾಗಿ ಮೂಡಿಬಂದಿವೆ. ಒಂದೆರಡು ಕಾಗುಣಿತ ತಪ್ಪುಗಳು ಒಳನುಸುಳಿವೆ ಅವೇನೂ ಈ ಕಂತಿನ ಸೌಂದರ್ಯಕ್ಕೆ ಧಕ್ಕೆ ತಂದಿಲ್ಲ. ಅವನ್ನು ಹೊರತುಪಡಿಸಿದರೆ ಈ ಕಂತಿನಲ್ಲಿ ತಿದ್ದು ಪಡಿ ಮಾಡಬೇಕಾಗಿರುವುದೇನೂ ಇಲ್ಲಾ.
೩೯೬. ಪರಮೇಶ್ವರೀ
ಸಕಲ ಜೀವಿಗಳಲಸ್ಥಿತ್ವ, ನಶ್ವರದವಿನಾಶಿ ತತ್ವ ಪರಮೇಶ್ವರ
ಜೀವಿಗಳಲಸ್ಥಿತ್ವ=ಜೀವಿಗಳಲಸ್ತಿತ್ವ (ಈ ಅಸ್ತಿ ಇಂದಲೇ ಆಸ್ತಿ ಶಬ್ದ ಬಂದಿರುವುದು :) )

೩೭೯. ಮೂಲಪ್ರಕೃತಿಃ
೧) ಸಕಲ ಮೂಲಾಧಾರ ..........
:
ಸತ್ವ ತಮೋ ರಾಜೊ ತ್ರಿಗುಣ, ಇಚ್ಛಾ ಜ್ಞಾನ ಕ್ರಿಯಾ ತ್ರಿಶಕ್ತಿ
ರಾಜೋ=ರಜೋ
:

೨) ಸೃಷ್ಟಿಕ್ರಿಯೆ .................................................................
ಮೂಲದಸ್ಥಿತ್ವ ಪರಮಾತ್ಮ, ಪಂಚಭೂತವಾಗಿ ಸೃಷ್ಟಿ ರೂಪಾಂತರ
ಮೂಲದಸ್ಥಿತ್ವ=ಮೂಲದಸ್ತಿತ್ವ
:
:

೩) ಮಾತು .......
:
:
ವಿಮರ್ಶಾರೂಪ ಮೂಲ ಪ್ರಕೃತಿ ಶಕ್ತಿ, ಮಿಲನಕಷ್ಟೆ ಸೃಷ್ಟಿಯುಗಮ!
ವಿಮರ್ಶಾ=ವಿಮರ್ಶ (ದೀರ್ಘದ ಅವಶ್ಯಕತೆಯಿಲ್ಲ)

೪) ಅಂತಾಗಿ .................................
:
ಪರಮ ಅಸ್ಥಿತ್ವ ಪರಬ್ರಹ್ಮದಸ್ವಗತ, ತಾನಾದ ಅನೇಕ ಪ್ರಕೃತಿರೂಪ
ಅಸ್ಥಿತ್ವ=ಅಸ್ತಿತ್ವ
ತಪದಿಂದ ಬೆಳೆವ ಬ್ರಹ್ಮದನಂತ, ಸೃಷ್ಟಿ ಚಕ್ರ ನಡಿಗೆ ಸಮತೋಲಿಪ!
ಬ್ರಹ್ಮದನಂತ=ಬ್ರಹ್ಮವನಂತ

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ನನ್ನ ಎರಡು ದಶಕದ 'ಗ್ಯಾಪ್' ಕನ್ನಡದ ಕಾಗುಣಿತ ಜ್ಞಾನಕ್ಕೆ ಸಾಕಷ್ಟು ಘಾಸಿಮಾಡಿಬಿಟ್ಟಿವೆಯೆಂದು ಕಾಣುತ್ತದೆ. ಸದ್ಯ, ಈ ನೆಪದಲ್ಲಾದರೂ ರಿಪೇರಿಯಾಗುತ್ತಿದೆ ಅಷ್ಟಿಷ್ಟು :-) ಕೇವಲ ಒಂದೆರಡು ತಪ್ಪು ಮಾತ್ರ ಎಡಿಟರಿನ 'ಚಾಲಾಕಿತನದಿಂದ' ಅನಗತ್ಯವಾಗಿ ನುಸುಳುತ್ತಿದೆ (ಉದಾ: ರ ಜೋ ಟೈಪ್ ಮಾಡಿದರೆ ರಾಜೋ ಆಗಿಬಿಡುತ್ತದೆ - ತಂತ್ರಾಂಶ ಕೃಪೆ; ಮಿಕ್ಕಿದ್ದೆಲ್ಲ ಸ್ವಯಂಕೃತಾಪರಾಧ). ನೀವು ಸೂಚಿಸಿದ ತಿದ್ದುಪಡಿಯೊಂದಿಗೆ ಇಲ್ಲಿದೆ ಆವೃತ್ತಿ.

ಲಲಿತಾ ಸಹಸ್ರನಾಮ ೩೯೬-೩೯೭
____________________________________

೩೯೬. ಪರಮೇಶ್ವರೀ
ಸಕಲ ಜೀವಿಗಳಲಸ್ತಿತ್ವ, ನಶ್ವರದವಿನಾಶಿ ತತ್ವ ಪರಮೇಶ್ವರ
ನೋಡಬಲ್ಲವನೆ ನಿಜದಲಿ ಪರಮಪಾಲಕನನೆ ಕಾಣುವ ತರ
ಪರಶಿವ ತಾ ಪರಮೇಶ್ವರ, ಸಂಗಾತಿ ತಾನಾಗಿ ಪರಮೇಶ್ವರೀ
ಪರಮೋನ್ನತ ಪರಿಪಾಲಕಳಾಗಿ ದೇವಿ, ಜಗವನಾಳುವ ಪರಿ!

೩೭೯. ಮೂಲಪ್ರಕೃತಿಃ
ಸಕಲ ಮೂಲಾಧಾರ ಪ್ರಕೃತಿ, ಸಹಜ ಸ್ವಭಾವ ಮಾಯೆ
ವ್ಯಕ್ತಿಗತಾತ್ಮ ಮನ ಬುದ್ಧಿ ಅಹಂಕಾರ ಸಂಕೀರ್ಣ ಛಾಯೆ
ಸತ್ವ ತಮೋ ರಜೋ ತ್ರಿಗುಣ, ಇಚ್ಛಾ ಜ್ಞಾನ ಕ್ರಿಯಾ ತ್ರಿಶಕ್ತಿ
ಜಡನಿಷ್ಕ್ರಿಯಾತ್ಮಗಳ ಕಟ್ಟಿ ರೂಪಾಂತರಿಸೊ ಮೂಲಪ್ರಕೃತಿಃ!

ಸೃಷ್ಟಿಕ್ರಿಯೆ ಜತೆ ಸುಸ್ಥಿತಿಯಲಿಡುತ, ಚಲನಶೀಲ ಪ್ರಕೃತಿ ಪಾತ್ರ
ಮೂಲದಸ್ತಿತ್ವ ಪರಮಾತ್ಮ, ಪಂಚಭೂತವಾಗಿ ಸೃಷ್ಟಿ ರೂಪಾಂತರ
ಆಕಾಶ ನಂತರ ವಾಯು ಅಗ್ನಿ ನೀರು ಭೂಮಿ-ಪರಿವರ್ತನೆ ಕಾರಣ
ಸಸ್ಯ, ಪ್ರಾಣಿ, ಮನುಜಾದಿಗಳಾಗಮನಾ ಭೂಮಿಯಿಂದನಾವರಣ!

ಮಾತು ಆಲೋಚನೆಗತೀತ ಅಮೂರ್ತ, ಅವ್ಯಕ್ತಾ ರೂಪಾ ಪ್ರಕೃತಿ
ತ್ರಿಗುಣ ಶಕ್ತಿ ವ್ಯತ್ಯಯ, ಸೃಷ್ಟಿಕಾರ್ಯಕೆ ಅಹಂ ಬುದ್ಧಿ ಜತೆ ತ್ರಿಶಕ್ತಿ
ಅವ್ಯಕ್ತಾ ಹಿನ್ನಲೆ, ಸೃಷ್ಟಿ ಮೂಲ ನಿರ್ಗುಣ ಸಕಲಾತೀತ ಪರಬ್ರಹ್ಮ
ವಿಮರ್ಶ ರೂಪ ಮೂಲ ಪ್ರಕೃತಿ ಶಕ್ತಿ, ಮಿಲನಕಷ್ಟೆ ಸೃಷ್ಟಿಯುಗಮ!

ಅಂತಾಗಿ ಸೃಷ್ಟಿಯ ಮೂಲ ಪ್ರಕೃತಿ, ಪರಬ್ರಹ್ಮದ ಆಜೀವ ಸಂಗಾತಿ
ಸೃಷ್ಟಿಕ್ರಿಯೆ ಜತೆ ಸುಸ್ಥಿತಿಯಲಿಡೆ ಬ್ರಹ್ಮಾಂಡ, ಅವಲಂಬನೆ ಪ್ರಕೃತಿ
ಪರಮ ಅಸ್ತಿತ್ವ ಪರಬ್ರಹ್ಮದಸ್ವಗತ, ತಾನಾದ ಅನೇಕ ಪ್ರಕೃತಿರೂಪ
ತಪದಿಂದ ಬೆಳೆವ ಬ್ರಹ್ಮವನಂತ, ಸೃಷ್ಟಿ ಚಕ್ರ ನಡಿಗೆ ಸಮತೋಲಿಪ!

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
 

ನಾಗೇಶರೆ,
ನನ್ನದೂ ಅದೇ ಹಣೇಬರಹ ಬಿಡಿ. ನಾನೂ ಕನ್ನಡ ಬರೆದು ಸುಮಾರು ಮೂರು ದಶಕಗಳೇ ಆಗಿವೆ. ಈ ಬರಹ ತಂತ್ರಾಂಶವಿಲ್ಲದಿದ್ದರೆ ನನಗೂ ಸಹ ಕನ್ನಡ ಬರೆಯುವುದು ಮರೆತೇ ಹೋಗುತ್ತಿತ್ತು ಎನಿಸುತ್ತಿದೆ. ಅದೊಂದು ದಿನ (ಸುಮಾರು ಎರಡೂವರೆ ವರ್ಷದ ಕೆಳಗೆ) ಪ್ರಜಾವಾಣಿ ಪತ್ರಿಕೆ ಕೈಗೆ ಸಿಕ್ಕಾಗ ಅದರಲ್ಲಿ ತಿಂಗಳಿಗೆ ಹತ್ತು ಸಾವಿರಕ್ಕೂ ಅಧಿಕವಾಗಿ ಡೌನ್ ಲೋಡ್ ಆಗುತ್ತಿರುವ ಬರಹ ತಂತ್ರಾಂಶದ ಕುರಿತ ಲೇಖನ ಓದಿದೆ. ಒಮ್ಮೆ ಪ್ರಯತ್ನಿಸಿ ಬಿಡೋಣವೆಂದು ಅದನ್ನು ಡೌನ್ ಲೋಡ್ ಮಾಡಿ ಸ್ವತಃ ಅದನ್ನು ಕಂಪ್ಯೂಟರಿಗೆ ಅಪ್-ಲೋಡ್ ಮಾಡಿದೆ. ಅಂದಿನಿಂದ ಇಂದಿನವರೆಗೆ ಅದು ನನ್ನ ನೆಚ್ಚಿನ ಸಂಗಾತಿಯಾಗಿದೆ.
ಇರಲಿ ಈಗ ವಿಷಯಕ್ಕೆ ಬರೋಣ. ಈ ಕವನಗಳನ್ನು ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಈ ಕಂತನ್ನು ಅಂತಿಮಗೊಳಿಸುವ ಮುನ್ನ ಆತ್ಮ / ಪ್ರಕೃತಿಯ ಕುರಿತಾದ ಹೆಚ್ಚು ವಿವರಗಳ ಕಾವ್ಯ ಪ್ರಯತ್ನ ಪರಿಷ್ಕರಣೆಗೆ ಸಿದ್ದವಾಗಿದೆ. ಸೂಕ್ತವಾಗಿ ಬಂದಿದ್ದರೆ ಅದನ್ನು ಅಂತಿಮ ರೂಪಕ್ಕೆ ಸೇರಿಸಬಹುದು.
 
ಆತ್ಮ ಮತ್ತು ಪ್ರಕೃತಿಯ ಕುರಿತ ಹೆಚ್ಚಿನ ವಿವರಣೆಗಳು:
______________________________________

ಆತ್ಮ :
____

ಪರಮಾಣು ಕಣ ಮೀರಿದ ಸೂಕ್ಷ್ಮ, ಜಡ ಪುರುಷ ದೈವೀ ರಹಸ್ಯ
ಸಂಖ್ಯಾನಂತತೆಯಾತ್ಮ ರೂಪಾಂತರ ಜೀವಿ, ಸ್ಥಿತ ಪ್ರಜ್ಞತೆ ಭಾಷ್ಯ
ದ್ವೈತವಲ್ಲ ಆತ್ಮ-ಪರಮಾತ್ಮ ಸಖ್ಯ, ಶಶಿ ಪ್ರತಿಫಲಿಸುವಂತೆ ರವಿ
ಕರ್ಮ ಬಂಧನವಷ್ಟೆ ಪ್ರತ್ಯೇಕಿಸುವ ಅಗುಳಿ, ಬ್ರಹ್ಮಕೆ ಆತ್ಮ ಕೀಲಿ!

ಕರ್ಮನಿರತ ಪುರುಷಾತ್ಮಧಾರಣೆ ಪರಬ್ರಹ್ಮ, ಪರ್ಣಕಂಟದ ಜಲ
ಜೀವಾತ್ಮ ಸ್ವನಿಯಂತ್ರಕತೆ, ಕರ್ಮಾನುಸಾರದೆ ಕರ್ಮಫಲ ಸಕಲ
ವೇದಾಂತಾತ್ಮ-ಸಾಂಖ್ಯಪುರುಷ, ಸಕ್ರೀಯ ಸ್ಥೂಲಶರೀರದಿ ವಾಸ
ಪ್ರಾಣತ್ಯಾಗ ಬಿದ್ದಾಗ ಸ್ಥೂಲ, ಆತ್ಮವ್ಹೊತ್ತ ಕರ್ಮ ನಿಯತಿಗೆ ಗ್ರಾಸ!

ಕರ್ಮ ಸದಾಕರ್ಮನಿರತ, ಕ್ರಿಯಾಲೋಚನೆಯೆಲ್ಲ ದಾಖಲಿಸುತ
ಜೀವಿತಾವಧಿ ಮನನಿರ್ಧಾರಗಳ, ಗುಟ್ಟೆಲ್ಲ ಸೋಸಿದ ಅಂತರ್ಗತ
ಗತ-ವಿಕಸನ ಕರ್ಮಶೇಷಕನುಗುಣ, ಶರೀರ ಕ್ರಿಯಾ ಅನಾವರಣ
ಬದಲಿಲ್ಲದ ಬ್ರಹ್ಮಬಿಂಬ, ಪ್ರಕೃತಿ ಸಂಯೋಗಕಷ್ಟೆ ರೂಪಾಂತರಣ!

ಪ್ರಕೃತಿ:
_________

ಪ್ರಕೃತಿ ಪ್ರತಿಕ್ರಿಯಿಸೆ ಪುರುಷ ರೂಪಾಂತರ, ಸೂಕ್ಷ್ಮ ಭೌತಿಕದಿಂ ಸ್ಥೂಲ
ಸಹಜಸೃಷ್ಟಿ ಸ್ವಯಂಮನಾವರಣ, ಸ್ಥೂಲ ಸೂಕ್ಷ್ಮ ಕಾರಣ ಸಮಷ್ಟಿಬಲ
ಶರೀರಾವಸ್ಥೆಯ ತ್ರಿರೂಪವೆ ಅಸ್ತಿತ್ವ, ಪ್ರಜ್ಞಾಸ್ತರವೇರಿಸಿ ಆಧ್ಯಾತ್ಮಿಕಸ್ತರ 
ತ್ರಿಶರೀರಗಳಾಗಿ ಪ್ರಕೃತಿ ಪ್ರತಿಫಲಿತ ಮಾಯೆ-ಭ್ರಮೆ, ಗುರುತಿಸೆ ಸಾರ!

ಸ್ಥೂಲ-ಭೌತಿಕ, ಸೂಕ್ಷ್ಮ-ಪ್ರಾಣಶಕ್ತಿ, ಕಾರಣ ಶರೀರ ಬಿಂಬಿಸಿ ಕಾರಣ ಪ್ರಪಂಚ
ಪ್ರಜ್ಞಾವಸ್ಥೆಯರಿಸುವ ಶರೀರಾವಸ್ಥೆಯ್ಹಂತ, ಕಾರಣವೆ ಸ್ಥೂಲಸೂಕ್ಷ್ಮದ ಕುಂಚ
ಕಾರಣ ಶರೀರದ ರೂಪಾಂತರ ಪ್ರಜ್ಞೆಯೀ ಶರೀರಾವಸ್ಥೆ, ಮೀರೆ ತುರಿಯಾವಸ್ಥೆ
ಅಧಿಗಮಿಸಿ ಕ್ಲೇಷ, ಪರಿಶುದ್ಧ ಪರಿಪೂರ್ಣ ಚೈತನ್ಯಕರ್ಹ ಅನಾವರಣ ವ್ಯವಸ್ಥೆ!

ಅಡಚಣೆರಹಿತ ಏಕಾಂತದೆ ಪರಿಶುದ್ಧ ಪ್ರಜ್ಞೆ, ಆತ್ಮವೆ ತುರಿಯಾವಸ್ಥೆ
ಅಗೋಚರ ಪ್ರಜ್ಞೆಯಲ್ಲದ ಪ್ರಜ್ಞೆ, ಇಂದ್ರಿಯಾಲೋಚನೆಗತೀತ ಅವಸ್ಥೆ
ಶಬ್ದದಳತೆ ಸಂಕೇತಕೆ ನಿಲುಕದ, ಪ್ರಪಂಚಾ ಮುಕ್ತ ಅತ್ಮಪ್ರಜ್ಞಾ ಸ್ಥಿತಿ
ಅದ್ವಿತೀಯ ಶಾಂತಿ ಸತ್ಸಂಗತಿ ಮೂರ್ತರೂಪ, ಒಳವಹಿವಾಟ ನೇತಿ!

ಆತ್ಮವನು ಬಂಧಿಸಿ ತ್ರಿಶರೀರದಿ, ಕರ್ಮದನಾವರಣಕೆ ಪ್ರಬಲಾಸ್ತ್ರ ಪ್ರಕೃತಿ
ಕಾಮಪೂರ್ಣಾಲಿಂಗನ ಮರೆಸಿ ಪರಬ್ರಹ್ಮ ಸ್ವರೂಪ, ಅಹಂಕಾರದಾ ಪ್ರಗತಿ
ಮಾಯಾಭ್ರಮಾಧೀನತೆ ಪ್ರಕೃತಿಸ್ವಭಾವ, ಮುಳುಗಿ ಪ್ರಾಪಂಚಿಕದೆ ಪುರುಷ
ಮುಸುಕಿದ ಅವಿದ್ಯೆ, ಜ್ಞಾನ ಪ್ರತಿಕೂಲ-ಮುದ್ರೆ ಮರೆತೆಲ್ಲ ಶುದ್ದಾತ್ಮ ಪರುಷ!

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು