೧೭೨. ಲಲಿತಾ ಸಹಸ್ರನಾಮ ೭೭೮ರಿಂದ ೭೮೧ನೇ ನಾಮಗಳ ವಿವರಣೆ

೧೭೨. ಲಲಿತಾ ಸಹಸ್ರನಾಮ ೭೭೮ರಿಂದ ೭೮೧ನೇ ನಾಮಗಳ ವಿವರಣೆ

                                                                      ಲಲಿತಾ ಸಹಸ್ರನಾಮ ೭೭೮ - ೭೮೧

Virāḍ-rūpā विराड्-रूपा (778)

೭೭೮. ವಿರಾಡ್ರೂಪಾ

            ಈ ಪರಿಕಲ್ಪನೆಯ ಕುರಿತಾಗಿ ಇದಾಗಲೇ ನಾಮ ೨೫೬, ’ವಿಶ್ವರೂಪಾ’ ಎನ್ನುವುದರಲ್ಲಿ ಚರ್ಚಿಸಲಾಗಿದೆ. ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳಿಗೆ ಮತ್ತಷ್ಟು ಅಂಶಗಳನ್ನು ಸೇರಿಸಿ ವಿರಾಟ್ ಎನ್ನುವುದನ್ನು ಈ ವಿಧವಾಗಿ ವಿವರಿಸಬಹುದು. ‘ವಿರಾಟ್’ ಎನ್ನುವುದು ಜಾಗ್ರತಾವಸ್ಥೆಯಲ್ಲಿ ವ್ಯಕ್ತಿಗತ ಸ್ಥೂಲ ಶರೀರದ ಪ್ರಜ್ಞೆಯೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು. ಪ್ರಜ್ಞೆಯನ್ನು ವಿಶಾಲವಾಗಿ ಸೂಕ್ಷ್ಮ ಹಾಗೂ ಸ್ಥೂಲ ತರದ್ದೆಂದು ಎರಡು ಭಾಗಗಳಾಗಿ ವಿಭಜಿಸಬಹುದು. ಸೂಕ್ಷ್ಮ ಪ್ರಜ್ಞೆಯು ವ್ಯಕ್ತಿಗತ ಪ್ರಜ್ಞೆಯಾದರೆ, ಸ್ಥೂಲ ಪ್ರಜ್ಞೆಯು ಬ್ರಹ್ಮಾಂಡದ ಪ್ರಜ್ಞೆಯಾಗಿದೆ. ಇದನ್ನು ವ್ಯಕ್ತಿಗತ ಆತ್ಮ ಮತ್ತು ಬ್ರಹ್ಮಾಂಡದ ಆತ್ಮ ಎನ್ನುವುದಾಗಿ ಸಹ ವ್ಯಾಖ್ಯಾನಿಸಬಹುದು.

           ಸೂಕ್ಷ್ಮ ಪ್ರಜ್ಞೆ ಅಥವಾ ವ್ಯಕ್ತಿಗತ ಜಗತ್ತು ಬೃಹತ್ ಬ್ರಹ್ಮಾಂಡದ ಅಥವಾ ಒಟ್ಟು ಸೂಕ್ಷ್ಮ ಪ್ರಜ್ಞೆಗಳ ಅಣುರೂಪವಾಗಿದೆ.

           ವ್ಯಕ್ತಿಗತ ಆತ್ಮವು ನಾಲ್ಕು ವಿಧವಾದ ಪ್ರಜ್ಞೆಯ ಹಂತವುಳ್ಳದ್ದಾಗಿದೆ. ೧) ತುರ್ಯಾ ಅಥವಾ ಅವ್ಯಕ್ತ (ಇದರ ಕುರಿತು ಹೆಚ್ಚಿನ ವಿವರಗಳಿಗೆ ನಾಮ ೩೯೮ನ್ನು ನೋಡಿ) ೨) ಈಶ್ವರಾ (೨೭೧ನೇ ನಾಮವು ಈಶ್ವರೀ ಆಗಿದೆ) ೩) ಹಿರಣ್ಯಗರ್ಭಾ (ಇದರ ಕುರಿತಾಗಿ ಈ ಸಹಸ್ರನಾಮದಲ್ಲಿ ಹಲವಾರು ನಾಮಗಳ ವಿವರಣೆಯಲ್ಲಿ ಚರ್ಚಿಸಲಾಗಿದೆ ೬೩೮ನೇ ನಾಮವಾದ ’ಸ್ವರ್ಣಗರ್ಭಾ’ವನ್ನು ಹೆಚ್ಚಿನ ವಿವರಗಳಿಗಾಗಿ ನೋಡಿ) ೪) ವಿರಾಟ್ - ವಿರಾಟ್ ಎನ್ನುವುದನ್ನು ವಿರಾಜ್ ಎಂದೂ ಸಹ ಕರೆಯಲಾಗುತ್ತದೆ. ಇದನ್ನು ವೈಶ್ವಾನರ ಎಂದೂ ಹೇಳಲಾಗುತ್ತದೆ. ನಾಲ್ಕನೆಯದಾದ ವಿರಾಟ್ ರೂಪವು ಸರ್ವಾಂತರಯಾಮಿಯಾದ ದೈವೀ ಸ್ವರೂಪದ ರೂಪಾಂತರವಾಗಿದೆ. ಅದು ಸರ್ವವ್ಯಾಪಿಯಾದ ವಿಶ್ವರೂಪವಾಗಿದ್ದು  ಅದು ಸಮಸ್ತ ಗೋಚರ ಮತ್ತು ಪ್ರತ್ಯಕ್ಷವಾದ ಅಸದೃಶ ಲೋಕವನ್ನು ಆಕ್ರಮಿಸಿದೆ. ಮಾನವ ದೃಷ್ಟಿಗೆ ಗೋಚರವಾಗುವ ಇದು ಬ್ರಹ್ಮಾಂಡ ಚೈತನ್ಯದ ಸಂಪೂರ್ಣ ಆವಿರ್ಭಾವವಾದ ವಿಶ್ವವಾಗಿದೆ. ನಾವು ಏನನ್ನು ಗ್ರಹಿಸುತ್ತೇವೆಯೋ ಅದು ಸಂಪೂರ್ಣ ಬ್ರಹ್ಮಾಂಡವಲ್ಲ (ವಿಶ್ವವಲ್ಲ), ಆದರೆ ಕೇವಲ ಅದರ ಒಂದು ಧೂಳಿನ ಕಣ ಮಾತ್ರ ಮತ್ತದು ಮಾಯೆಯಿಂದ ಆವೃತವಾಗಿದೆ. 

          ವಿರಾಡ್ ಎನ್ನುವುದು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಸ್ಥೂಲ ಬ್ರಹ್ಮಾಂಡದ ಅಂತಿಮ ಉತ್ಪನ್ನವಾಗಿದ್ದು ಕೇವಲ ಸಿದ್ಧಾಂತಗಳ ಮೇಲೆ ಅವಲಂಬಿಸದೆ ಅದನ್ನು ಪ್ರಯೋಗ ಮತ್ತು ಆಧ್ಯಯನಗಳ ಮೂಲಕ ಅರಿಯಬಹುದು. ಅದ್ವೈತ ಸಿದ್ಧಾಂತದ ಮೇಲೆ ಆದಿ ಶಂಕರರು ರಚಿಸಿರುವ ಸಣ್ಣ ಕೃತಿಯಾದ ’ಪಂಚೀಕರಣಮ್’ ಹೀಗೆ ಹೇಳುತ್ತದೆ, " ಈ ವಿರಾಡ್ ಎನ್ನುವುದು ಪಂಚಭೂತಗಳ ತತ್ವಗಳು ಮತ್ತು ಅವುಗಳ ಪರಿಣಾಮಗಳ ಒಟ್ಟು ಸ್ವರೂಪವಾಗಿದೆ (ಶ್ಲೋಕ ೧). ಈ ಸೂಕ್ಷ್ಮ ಧಾತುಗಳು ಸ್ಥೂಲ ವಸ್ತುಗಳನ್ನು ಸೃಷ್ಟಿಸಿದವು, ಅವುಗಳಿಂದ ಮತ್ತೆ ಈ ವಿರಾಟ್ ಅಥವಾ ಸ್ಥೂಲ ಬ್ರಹ್ಮಾಂಡ ಅಥವಾ ಒಟ್ಟು ವಸ್ತು ಪ್ರಪಂಚವು ಅಸ್ತಿತ್ವಕ್ಕೆ ಬಂತು". ಮತ್ತೆ ಅದೇ ಕೃತಿಯ ೧೧ನೇ ಶ್ಲೋಕವು ಹೀಗೆ ಹೇಳುತ್ತದೆ, " ಆ ಸ್ಥೂಲ ಧಾತುಗಳು ಸಂಕರಗೊಂಡು ಹಲವು ವಸ್ತುಗಳಾಗುತ್ತವೆ. ಇವುಗಳು ಎಲ್ಲಾ ವಿಧವಾದ ಸ್ಥೂಲ ಶರೀರಗಳನ್ನು ಉಂಟು ಮಾಡುತ್ತವೆ. ಇದು ದೇಹವಿಲ್ಲದ ಆತ್ಮನ ಸ್ಥೂಲ ಶರೀರವಾಗಿವೆ. ವಿರಾಡ್, ವಿರಾಟ್ ಮತ್ತು ವಿರಾಜ್ ಮೂರು ಒಂದೇ ಎನ್ನುವುದನ್ನು ಗಮನಿಸಿ.

Virajā विरजा (779)

೭೭೯. ವಿರಜಾ

           ’ವಿ’ ಎಂದರೆ ರಹಿತ ಮತ್ತು ’ರಜಸ್’ ಎಂದರೆ ಅಶುದ್ಧತೆ. ದೇವಿಯು ಅಶುದ್ಧತೆಯಿಲ್ಲದವಳಾಗಿದ್ದಾಳೆ. ಮಹಾನಾರಾಯಣ ಉಪನಿಷತ್ತು (೬೫.೧) ಹೇಳುತ್ತದೆ, "ಅಹಂ ವಿರಜಾ ವಿಪಮಾ" ಅಂದರೆ ’ನಾನು ಪಾಪ ಮತ್ತು ಭಾವೋದ್ವೇಗಗಳಿಂದ ಮುಕ್ತನಾಗಿದ್ದೇನೆ’. ಭಕ್ತನು ತನಗೆ ಉಸಿರಿನ ಶುದ್ಧತೆ, ಸ್ಥೂಲ ಶರೀರದ ಶುದ್ಧತೆ ಮೊದಲಾದವುಗಳನ್ನು ಅಪೇಕ್ಷಿಸಿ ಅಗ್ನಿಗೆ ಆಹುತಿಗಳನ್ನು ಅರ್ಪಿಸುತ್ತಾನೆ. ಸಂನ್ಯಾಸಿಯಾಗುವುದಕ್ಕಿಂತ ಮುಂಚೆ ವಿರಜಾ ಹೋಮವೆಂದು ಕರೆಯಲ್ಪಡುವ ಒಂದು ಯಜ್ಞವನ್ನು ಕೈಗೊಳ್ಳಬೇಕು. ಯಾವಾಗ ಒಬ್ಬನು ಮಾಲಿನ್ಯರಹಿತನಾಗುತ್ತಾನೆಯೋ (ಅಶುದ್ಧತೆ ಇಲ್ಲದವನಾಗುತ್ತಾನೆಯೋ) ಆಗ ಅವನು ಬ್ರಹ್ಮದೊಂದಿಗೆ ಒಂದಾಗುತ್ತಾನೆ. ದೇವಿಯು ಕಲ್ಮಶ ರಹಿತ ಪರಬ್ರಹ್ಮವಾಗಿದ್ದಾಳೆ. ದೇವಿಯು ಪರಿಶುದ್ಧಳು (ವಿವರಗಳಿಗೆ ೭೬೫ನೇ ನಾಮವನ್ನು ನೋಡಿ). ಯಾವಾಗ ಒಬ್ಬನು ಬ್ರಹ್ಮದೊಂದಿಗೆ ಒಂದಾಗ ಬಯಸುತ್ತಾನೆಯೋ ಆಗ ಅವನು ಬ್ರಹ್ಮದ ಗುಣಗಳನ್ನು ಹೊಂದಿರಬೇಕು.

Viśvato-mukhī विश्वतो-मुखी (780)

೭೮೦. ವಿಶ್ವತೋ-ಮುಖೀ

          ದೇವಿಯು ಎಲ್ಲಾ ದಿಕ್ಕುಗಳಲ್ಲಿ ಮುಖವನ್ನು ಹೊಂದಿದ್ದಾಳೆ. ಶ್ವೇತಾಶ್ವತರ ಉಪನಿಷತ್ತು (೩.೩) ಹೀಗೆ ಹೇಳುತ್ತದೆ, "ವಿಶ್ವತೋ ಮುಖವೆಂದರೆ ಎಲ್ಲಾ ಮುಖಗಳು ಅವನವೇ". ಎಲ್ಲಾ ಜೀವಿಗಳ ಮುಖಗಳು ಅವನವೇ. ಈ ನಾಮವು ಬ್ರಹ್ಮದ ಸರ್ವವ್ಯಾಪಕತ್ವದ ಗುಣವನ್ನು ದೃಢ ಪಡಿಸುತ್ತದೆ.

          ಶ್ರೀ ಕೃಷ್ಣನೂ ಸಹ ಭಗವದ್ಗೀತೆಯಲ್ಲಿ (೯.೧೫) ಹೇಳುತ್ತಾನೆ, "ಇತರರು ನನ್ನನ್ನು ನನ್ನ ವಿಶ್ವರೂಪದ ಮೂಲಕ ಅನೇಕ ವಿಧಗಳಲ್ಲಿ ಪೂಜಿಸುತ್ತಾರೆ; ಅಲೌಕಿಕವಾದ ವೈವಿಧ್ಯಮಯವಾದ ರೂಪಗಳಲ್ಲಿ (ವಿಶ್ವತೋಮುಖಮ್) ಆವಿರ್ಭಾವವಾಗಿರುವವನು ನಾನೇ ಎಂದು ಭಾವಿಸಿ".

ಪುರುಷ ಸೂಕ್ತವು ’ಸಹಸ್ರಶೀರ್ಷಾ ಪುರುಷಃ’ ಎಂದು ಆರಂಭವಾಗುತ್ತದೆ. ಇದರರ್ಥ ಅವನಿಗೆ ಸಾವಿರ ತಲೆಗಳಿವೆ. ಸಮಸ್ತ ಜೀವಿಗಳ ತಲೆಗಳು ಅವನ ಸ್ವಂತದ್ದಾಗಿವೆ.

         ಈ ನಾಮವು ದೇವಿಯು ಈ ಬ್ರಹ್ಮಾಂಡದ ಸಮಸ್ತ ಜೀವಿಗಳಲ್ಲಿ ಅಂತರ್ಗತವಾಗಿರುತ್ತಾಳೆ ಎಂದು ಹೇಳುತ್ತದೆ; ಇದು ದೇವಿಯ ಸರ್ವಾವ್ಯಾಪಕತ್ವವನ್ನು ದೃಢ ಪಡಿಸುತ್ತದೆ.

Pratyag-rūpā प्रत्यग्-रूपा (781)

೭೮೧. ಪ್ರತ್ಯಗ್-ರೂಪಾ

           ಯಾರು ಅಂತರ್ಮುಖವಾಗಿ ನೋಡುತ್ತಾರೋ ಅವರಿಗೆ ದೇವಿಯು ಕಾಣಿಸುತ್ತಾಳೆ. ದೇವಿಯನ್ನು ಕೇವಲ ಅಂತರಂಗದಲ್ಲಿ ಮಾತ್ರವೇ ಅರಿಯಬಹುದು ಇದನ್ನೇ ಆತ್ಮ ಸಾಕ್ಷಾತ್ಕಾರವೆನ್ನುತ್ತಾರೆ. ಮನಸ್ಸನ್ನು ಇಂದ್ರಿಯಗಳಿಂದ ಉಂಟಾಗುವ ಕ್ಲೇಷಗಳಿಂದ ವಿಮುಕ್ತವಾಗಿಸಿ ಅಂತರಂಗದೊಳಗೆ ಅವಲೋಕಿಸಿದಾಗ ದೇವಿಯ ಸಾಕ್ಷಾತ್ಕಾರವಾಗುತ್ತದೆ.

          ಕಠೋಪನಿಷತ್ತು (೨.೧.೧) ಇದನ್ನು ವಿವರಿಸುತ್ತದೆ. "ಸ್ವಯಂ ಸೃಷ್ಟಿಗೊಳ್ಳಲ್ಪಟ್ಟ ಭಗವಂತನು ಇಂದ್ರಿಯಗಳನ್ನು ಅಂತರ್ಗತವಾದ ಹೊರಹೊಮ್ಮುವ ಗುಣ ದೋಷದೊಂದಿಗೆ ಸೃಷ್ಟಿಸಿದ್ದಾನೆ. ಆದ್ದರಿಂದ ಜೀವಿಗಳು ಹೊರಗಿನ ವಸ್ತುಗಳನ್ನು ನೋಡುತ್ತವೆಯೇ ಹೊರತು ತಮ್ಮ ಅಂತರಂಗವನ್ನು ನೋಡಲಾರವು. ಆದರೆ ಯಾವನೋ ಒಬ್ಬ ವಿವೇಕಿಯು ಇಂದ್ರಿಯಗಳನ್ನು ಹಿಂತಿರುಗಿಸಿ ನೋಡುತ್ತಾನೆ”. ಈ ಹಿಂತಿರುಗಿದ ನೋಟವನ್ನು ಅದು ಪ್ರತ್ಯಗಾತ್ಮಾನಮೈಕ್ಷತ್ - प्रत्यगात्मानमैक्षत् ಎಂದು ಹೇಳುತ್ತದೆ.

          ನಾರಾಯಣ ಸೂಕ್ತಮ್ (೫ನೇ ಸ್ತೋತ್ರ) ಹೇಳುತ್ತದೆ, "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ-ಸ್ಥಿತಃ" ಅಂದರೆ ನಾರಾಯಣನು ಬಾಹ್ಯವಾಗಿ ಮತ್ತು ಅಂತರ್ಗತನಾಗಿ ಎಲ್ಲವನ್ನೂ ವ್ಯಾಪಿಸಿದ್ದಾನೆ.  

          ಬ್ರಹ್ಮನು ಸರ್ವವ್ಯಾಪಿಯಾಗಿರುವಾಗ ಒಬ್ಬನು ಅಂತರಂಗದೊಳಗೇಕೆ ನೋಡಿಕೊಳ್ಳಬೇಕು. ಏಷ್ಟೇ ಆದರೂ ನಾರಾಯಣನು ಆಂತರಿಕವಾಗಿ ಮತ್ತು ಬಾಹ್ಯವಾಗಿ ವ್ಯಾಪಿಸಿದ್ದಾನಲ್ಲವೇ? ಕಠೋಪನಿಷತ್ತು (೨.೩.೯) ಇದಕ್ಕೆ ಉತ್ತರವನ್ನು ಕೊಡುತ್ತದೆ. "ಬ್ರಹ್ಮವು ನಮ್ಮ ದೃಷ್ಟಿಗೆ ಗೋಚರವಾಗುವ ವಸ್ತುವಲ್ಲ. ಯಾರೂ ಅವನನ್ನು ತಮ್ಮ ಕಣ್ಣುಗಳಿಂದ ನೋಡಲಾರರು. ಯಾವಾಗ ಮನಸ್ಸು ಪರಿಶುದ್ಧವಾಗಿದ್ದು ಅವನನ್ನೇ ನಿರಂತರವಾಗಿ ಚಿಂತಿಸುತ್ತಿರುತ್ತದೆಯೋ ಆಗ ಅವನು ತನ್ನನ್ನು ತಾನು ವ್ಯಕ್ತಮಾಡಿಕೊಳ್ಳುತ್ತಾನೆ".

                                                                                              ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 778 - 781 http://www.manblunder.com/2010/05/lalitha-sahasranamam-778-781.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sun, 12/01/2013 - 04:30

ಶ್ರೀಧರರೆ,"೧೭೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯ ರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೭೮ - ೭೮೧
_________________________________________
.
೭೭೮. ವಿರಾಡ್ರೂಪಾ
ಸ್ಥೂಲ ಬ್ರಹ್ಮಾಂಡದಂತಿಮ ಉತ್ಪನ್ನ ವಿರಾಡ್, ಪರಿಪೂರ್ಣ ವಸ್ತು
ಪಂಚಭೂತ ತತ್ವ - ಪರಿಣಾಮದೊಟ್ಟು ಸ್ವರೂಪದಾ ಸೂಕ್ಷ್ಮ ಧಾತು
ಧಾತುವಿಂದ ಸ್ಥೂಲವಸ್ತು, ಸೃಷ್ಟಿಸುತ ವಿರಾಟ್ ಸ್ಥೂಲ ಬ್ರಹ್ಮಾಂಡ
ಸ್ಥೂಲಧಾತು ಸಂಕರದಲೆಲ್ಲ ಸ್ಥೂಲ ಶರೀರ, ವಿದೇಹಾತ್ಮ ವಿರಾಡ ||
.
ಜಾಗ್ರತಾವಸ್ಥೆ ಸ್ಥೂಲ ಶರೀರ ಪ್ರಜ್ಞೆಯಲಡಕ ವಿರಾಟ್, ಸೂಕ್ಷ್ಮ-ಸ್ಥೂಲ ಆತ್ಮ
ಬೃಹತ್ ಬ್ರಹ್ಮಾಂಡದೊಟ್ಟು ಸೂಕ್ಷ್ಮಪ್ರಜ್ಞೆಯಣು ರೂಪ, ವ್ಯಕ್ತಿಗತಪ್ರಜ್ಞೆ ಸೂಕ್ಷ್ಮ
ವ್ಯಕ್ತಿಗತಾತ್ಮ ಚತುರ್ಪ್ರಜ್ಞಾಹಂತ ತುರ್ಯಾ-ಈಶ್ವರಾ-ಹಿರಣ್ಯಗರ್ಭಾ-ವಿರಾಟ
ಗೋಚರಾಗೋಗರ ಲೋಕ ವಿಶ್ವರೂಪ ಧೂಳಕಣವಷ್ಟೆ ಗ್ರಾಹ್ಯ ಮಾಯೆಯಾಟ ||
.
೭೭೯. ವಿರಜಾ
ವಿ - ರಹಿತ, ರಜಸ್ - ಅಶುದ್ಧತೆ, ಆಶುದ್ದತೆಯಿಲ್ಲದ ದೇವಿ ವಿರಜಾ
ಮಾಲಿನ್ಯರಹಿತನಾಗೆ ಅಶುದ್ಧತೆ ಕ್ಷಯ, ಬ್ರಹ್ಮದೆ ಒಂದಾಗೊ ಸಹಜ
ಕಲ್ಮಶ ರಹಿತ ಪರಿಶುದ್ಧ ಪರಬ್ರಹ್ಮ ಲಲಿತೆ, ಒಂದಾಗೆ ಬ್ರಹ್ಮದ ಗುಣ
ಪಾಪ ಭಾವೋದ್ವೇಗ ಮುಕ್ತಿ, ಶುದ್ದತೆಗೆ ಅಗ್ನಿಗಾಹುತಿ ಭಕ್ತನಲಿ ತ್ರಾಣ ||
.
೭೮೦. ವಿಶ್ವತೋ-ಮುಖೀ
ಎಲ್ಲಾ ಜೀವಿಗಳ ಮುಖ ದೇವಿಯದೆ, ಸರ್ವವ್ಯಾಪಿ ಬ್ರಹ್ಮ ದಿಕ್ಕುದಿಕ್ಕಲಿ
ಅಲೌಕಿಕ ವೈವಿಧ್ಯಮಯ ರೂಪಾವಿರ್ಭಾವವೆಲ್ಲವು ಲಲಿತಾ ಬ್ರಹ್ಮನಲಿ
ಸಮಸ್ತ ಜೀವಿ ಶಿರ ದೇವಿಗೆ ಸ್ವಂತ, ಎಲ್ಲ ಜೀವಿಗಳಲಂತರ್ಗತ ಸುಮುಖಿ
ಸರ್ವಾಂತರ್ಯಾಮಿ ಸರ್ವವ್ಯಾಪಿ ಮುಖವಾಣಿ, ದೇವಿ ವಿಶ್ವತೋ ಮುಖೀ ||
.
೭೮೧. ಪ್ರತ್ಯಗ್-ರೂಪಾ
ದೃಷ್ಟಿಗಗೋಚರ ಬ್ರಹ್ಮ, ಕಣ್ಣಿಗೆ ಕಾಣದ ಮರ್ಮ ಅಂತರ್ಮುಖಿಗಷ್ಟೆ ವ್ಯಕ್ತ
ಇಂದ್ರಿಯ ಕ್ಲೇಶ ಮುಕ್ತಮನ, ಅಂತರಂಗದವಲೋಕನ ಸಾಕ್ಷಾತ್ಕಾರದತ್ತ
ಇಂದ್ರಿಯ ಗುಣ ದೋಷ ಜೀವಿ, ನೋಡೊ ಬಾಹ್ಯ ಬಿಟ್ಟಂತರಂಗದ ರೂಪ
ವಿವೇಕಿ ಇಂದ್ರಿಯ ಹಿಂತಿರುಗಿಸಿ ನೋಡುತಲರಿವ ದೇವಿ ಪ್ರತ್ಯಗ್ ರೂಪಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು