೧೯೭. ಲಲಿತಾ ಸಹಸ್ರನಾಮ ೯೨೪ರಿಂದ ೯೨೮ನೇ ನಾಮಗಳ ವಿವರಣೆ

೧೯೭. ಲಲಿತಾ ಸಹಸ್ರನಾಮ ೯೨೪ರಿಂದ ೯೨೮ನೇ ನಾಮಗಳ ವಿವರಣೆ

                                                                  ಲಲಿತಾ ಸಹಸ್ರನಾಮ ೯೨೪ - ೯೨೮

Darasmera-mukhāmbujā दरस्मेर-मुखाम्बुजा (924)

೯೨೪. ದರಸ್ಮೇರ-ಮುಖಾಂಬುಜಾ

            ದೇವಿಯ ಮುಖವು ನಗೆಯಿಂದ ಕೂಡಿದೆ ಮತ್ತದು ಪೂರ್ಣ ವಿಕಸಿತ ಕಮಲದ ಹೂವಿನಂತಿದೆ. ದೇವಿಯ ಸಮಸ್ತ ರೂಪವನ್ನೇ ನಳಿನೀ - ನಾಮ ೪೬೦ರಲ್ಲಿ ಕಮಲವಾಗಿ ವರ್ಣಿಸಲಾಗಿದೆ. ಸ್ವಯಂ ಶಿವನೂ ಸಹ ದೇವಿಯ ಮುಗುಳ್ನಗೆಗೆ ಆಕರ್ಷಿತನಾದನೆಂದು ನಾಮ ೨೮ - ”ಮಂದಸ್ಮಿತ-ಪ್ರಭಾಪೂರ-ಮಜ್ಜತ್ಕಾಮೇಶ-ಮಾನಸ’ವು ಹೇಳುತ್ತದೆ. ನಾಮ ೬೦೨ ಸಹ ದೇವಿಯ ನಗೆಯನ್ನು ವಿವರಿಸುತ್ತದೆ. ದೇವಿಯ ನಗೆಗೆ ಕಾರಣವನ್ನು ನಾಮ ೮೭೮- ’ಸ್ವಾತ್ಮಾರಾಮಾ’ವು ಹೇಳುತ್ತದೆ; ಅದರರ್ಥ ”ತನ್ನಲ್ಲಿಯೇ ತಾನು ಸಂತೋಷವನ್ನು ಕಂಡುಕೊಳ್ಳುವವಳು.’ ಒಬ್ಬನು ತನ್ನಲ್ಲಿಯೇ ಸಂತೋಷವನ್ನು ಕಂಡುಕೊಂಡಾಗ ಅದು ನಿತ್ಯಾನಂದವನ್ನು ಉಂಟು ಮಾಡುತ್ತದೆ ಮತ್ತದು ಮಂದಹಾಸವಾಗಿ (ಕಿರುನಗೆಯಾಗಿ) ಹೊರಸೂಸುತ್ತದೆ.

           ದರಸ್ಮೇರ ಎನ್ನುವುದು ಹೊಳೆಯುವ ಶಂಖವನ್ನೂ ಸೂಚಿಸುತ್ತದೆ. ಇಲ್ಲಿ ದೇವಿಯ ದಂತಗಳನ್ನು ಹೊಳೆಯುವ ಶಂಖಕ್ಕೆ ಹೋಲಿಸಲಾಗಿದೆ. ಇದು ಮೂರು ಗೆರೆಗಳುಳ್ಳ ದೇವಿಯ ಕುತ್ತಿಗೆಯ ಭಾಗವನ್ನೂ ಸಹ ಸೂಚಿಸುತ್ತದೆ. ಈ ಮೂರು ಗೆರೆಗಳು ಓಂಕಾರದ ಮೂರು ಅಕ್ಷರಗಳಾದ ’ಅ’, ’ಉ’, ಮತ್ತು ಮ’ಗಳೆಂದು ಹೇಳಲಾಗುತ್ತದೆ. ಲಲಿತಾ ತ್ರಿಶತಿಯ ೧೫೭ನೇ ನಾಮವು ದೇವಿಯ ಕುತ್ತಿಗೆಯನ್ನು ಶಂಖಕ್ಕೆ ಹೋಲಿಸುತ್ತದೆ. ಸೌಂದರ್ಯ ಲಹರಿಯೂ ಸಹ (ಸ್ತೋತ್ರ ೬೯) ದೇವಿಯ ಕುತ್ತಿಗೆಯ ಈ ಮೂರು ಗೆರೆಗಳನ್ನು ಉಲ್ಲೇಖಿಸುತ್ತದೆ. ಆ ಸ್ತೋತ್ರವು ಹೀಗೆ ಹೇಳುತ್ತದೆ, ते गले तिस्रः रेखाः ತೇ ಗಲೇ ತಿಸ್ರಃ ರೇಖಾಃ ಅಂದರೆ ’ನಿನ್ನ ಕುತ್ತಿಗೆಯಲ್ಲಿರುವ ಮೂರು ಗೆರೆಗಳು’.

           ಮಹಾಭಯದ (ಮಹಾಪ್ರಳಯ ಅಥವಾ ಸರ್ವನಾಶದ) ಸಮಯದಲ್ಲಿಯೂ ಸಹ ದೇವಿಯ ಮುಖವು ಕಿರುನಗೆಯಿಂದ ಕೂಡಿರುತ್ತದೆ. ಶಿವನು ತನ್ನ ರುದ್ರ ಪ್ರಳಯ ತಾಂಡವವನ್ನು ಮಾಡುತ್ತಿರುವಾಗಲೂ ಸಹ ದೇವಿಯು ಯಾವುದೇ ವಿಧವಾದ ಭಯದ ಸೂಚನೆಗಳನ್ನು ತೋರದೆ ಆಕೆಯು ಅದಕ್ಕೆ ಸಾಕ್ಷಿಯಾಗಿ ಉಳಿಯುತ್ತಾಳೆ. ಇಂತಹ ಭಯಂಕರ ಪ್ರಳಯಕಾಲದಲ್ಲಿಯೂ ಸಹ ದೇವಿಯು ಮಂದಸ್ಮಿತಳಾಗಿರುವುದನ್ನು ಮುಂದುವರೆಸುತ್ತಾಳೆ. ಇದರರ್ಥ ದೇವಿಯು ಯಾವುದಕ್ಕೂ ಭಯ ಪಡುವುದಿಲ್ಲ ಎಂದಾಗುತ್ತದೆ. ಎಲ್ಲಿಯವರೆಗೆ ಒಬ್ಬನು ಆತ್ಮ ಸಂತೋಷಿಯಾಗಿರುತ್ತಾನೆಯೋ (ಸ್ವಾತ್ಮಾರಾಮ - ನಾಮ ೮೭೮) ಅಲ್ಲಿಯವರೆಗೆ ಅವನಿಗೆ ಹೆದರಿಕೆಯು ಇರುವುದಿಲ್ಲ.

ಶಿವನ ಬ್ರಹ್ಮಾಂಡ ನೃತ್ಯ ಅಥವಾ ಪ್ರಳಯ ತಾಂಡವದ ಕುರಿತು ಇನ್ನಷ್ಟು ವಿವರಗಳು:

          ಬ್ರಹ್ಮಾಂಡ ಚಕ್ರದ ಅಂತ್ಯವನ್ನು ಸೂಚಿಸುವ ಮಹಾಪ್ರಳಯದ ಸಮಯದಲ್ಲಿ ಕಾಲಾಗ್ನಿ ರುದ್ರನು ಈ ಪ್ರಪಂಚವನ್ನು ಮಾರಣಾಂತಿಕ ನೃತ್ಯ ಮತ್ತು ವಿನಾಶದೊಂದಿಗೆ ಅಪ್ಪಿಕ್ಕೊಳ್ಳುತ್ತಾನೆ. ಇದನ್ನೇ ತಾಂಡವ ಎಂದು ಕರೆಯುತ್ತಾರೆ (ಹೆಚ್ಚಿನ ವಿವರಗಳಿಗೆ ನಾಮ ೨೩೨ನ್ನು ನೋಡಿ). ಶಿವನು ಢಕ್ಕೆಯ ಶಬ್ದಕ್ಕೆ ನಾಟ್ಯವಾಡುತ್ತ ಈ ಪ್ರಪಂಚದಲ್ಲಿನ ಸಮಸ್ತ ವಸ್ತುಗಳೂ ಸೇರಿ ದೈವೀ ಏಕತ್ವದಲ್ಲಿ ಒಂದಾಗುವಂತೆ ಮಾಡುತ್ತಾನೆ. ಈ ಪ್ರಪಂಚವನ್ನು ಭಸ್ಮ ಮಾಡುವ ಅಗ್ನಿಯು ನೀರಾಗಿ ಕರಗುತ್ತದೆ, ಆ ನೀರು ಗಾಳಿಯಾಗಿ, ಆ ಗಾಳಿಯು ಆಕಾಶವಾಗಿ ಮತ್ತು ಆ ಆಕಾಶವು ಅನೇಕವಾಗಿರುವ ದೇವಾನುದೇವತೆಗಳಲ್ಲಿ ಮತ್ತು ಆ ಅನೇಕ ದೇವಾನುದೇವತೆಗಳು ಬ್ರಹ್ಮದಲ್ಲಿ ಕರಗಿಹೋಗುತ್ತಾರೆ. ಈ ಹಂತದಲ್ಲಿ ಪುರುಷ ಮತ್ತು ಪ್ರಕೃತಿಗಳು ಪ್ರತ್ಯೇಕಗೊಂಡು ಅವೆರಡೂ ಪುನಃ ಶಿವನೊಳಗೆ ಐಕ್ಯವಾಗುತ್ತವೆ. ಆಗ ಶಿವನೊಬ್ಬನೇ ಅಸ್ತಿತ್ವದಲ್ಲಿರುತ್ತಾನೆ ಮತ್ತದಕ್ಕೆ ಶಕ್ತಿ ದೇವಿಯು ಸಾಕ್ಷಿಯಾಗುತ್ತಾಳೆ. ಶಿವನ ಈ ನೃತ್ಯವು ಸೃಷ್ಟಿಯ ಸ್ಪಂದನ ಕ್ರಿಯೆ ಮತ್ತು ವಿನಾಶದ ಕ್ರಿಯೆಯಾಗಿ ಕರೆಯಲ್ಪಡುತ್ತದೆ.

Kaulinī-kevalā कौलिनी-केवला (925)

೯೨೫. ಕೌಲಿನೀ-ಕೇವಲಾ

            ಕೌಲಿನೀ ಶಬ್ದದ ಕುರಿತಾಗಿ ಇದಾಗಲೇ ನಾಮ ೯೪ರಲ್ಲಿ ಚರ್ಚಿಸಲಾಗಿದೆ ಮತ್ತು ಕೇವಲಾ ಎನ್ನುವುದನ್ನು ನಾಮ ೬೨೩ರಲ್ಲಿ ವಿವರಿಸಲಾಗಿದೆ.

           ಶಿವನನ್ನು ಕುರಿತಾದ ಜ್ಞಾನವನ್ನು ಕೇವಲ ಅಥವಾ ಶುದ್ಧವೆಂದು ಕರೆಯಲಾಗುತ್ತದೆ. ಶಿವ ಸೂತ್ರವು (೩.೩೪) ಹೀಗೆ ಹೇಳುತ್ತದೆ, "तद्विमुम्तस्तु केवली ತದ್ವಿಮುಂತಸ್ತು ಕೇವಲೀ" ಅಂದರೆ ’ನೋವು ನಲಿವುಗಳಿಂದ ಮುಕ್ತನಾಗಿ ಅವನ ನಿಜವಾದ ರೂಪದಲ್ಲಿ ಸ್ಥಿತನಾಗಿ’ (ಹೆಚ್ಚಿನ ವಿವರಗಳಿಗೆ ನಾಮ ೮೭೮ ಸ್ವಾತ್ಮಾರಾಮಾವನ್ನು ನೋಡಿ). ಕೇವಲ ಮತ್ತು ಸ್ವಾತ್ಮಾರಾಮ ಈ ಶಬ್ದಗಳನ್ನು ಯಾರ ಚಿತ್ತವು ಬ್ರಹ್ಮದಲ್ಲಿಯೇ ಸ್ಥಿತವಾಗಿರುತ್ತದೆಯೋ ಅವರ ಕುರಿತಾಗಿ ಹೇಳಲು ಬಳಸಲಾಗುತ್ತದೆ. ಈ ಹಂತದಲ್ಲಿ ದ್ವಂದ್ವತೆ ಅಥವಾ ದ್ವೈತ್ವವು ಇರುವುದಿಲ್ಲ. ಯಾವಾಗ ಮನಸ್ಸು ದ್ವಂದ್ವತೆಗಳಿಂದ ಮುಕ್ತವಾಗಿರುತ್ತದೆಯೋ ಆಗ ಅದಕ್ಕೆ ಸಹಜವಾಗಿ ಬ್ರಹ್ಮದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ. ವಿರೋಧಾಬಾಸಗಳು ಮನಸ್ಸು ಇಂದ್ರಯಗಳೊಂದಿಗೆ ಅನುಭಂದ ಹೊಂದಿದಾಗ ಉತ್ಪನ್ನವಾಗುವ ಅದರ ಗ್ರಹಿಕೆಗಳಷ್ಟೇ, ಆದ್ದರಿಂದ ಕೇವಲ ಎಂದರೆ ಏಕತೆಯ (ಅದ್ವೈತದ) ಸಾರೂಪ್ಯ ಸಿದ್ಧಾಂತ.

            ಕೌಲಿನೀ ಎಂದರೆ ಯಾರು ಕೌಲ ಮಾರ್ಗವನ್ನು (ನಾಮ ೪೪೧) ಅನುಸರಿಸುತ್ತಾರೋ ಅವರು. ಕೌಲವೆಂದರೆ ವಾಮ ಹಸ್ತದ ಶಾಕ್ತರು ಅನುಸರಿಸುವ ತತ್ವ ಮತ್ತು ಆಚರಣೆಗಳು.

           ಈ ನಾಮವನ್ನು ಸ್ಪಂದ-ಕಾರಿಕಾ (೧.೮) ಗ್ರಂಥದ ಆಧಾರದ ಮೇಲೆ ವಿವರಿಸಬಹುದು. ಅದು ಹೀಗೆ ಹೇಳುತ್ತದೆ, "ಸಿದ್ಧ ಪುರುಷನು (ಇಲ್ಲಿ ಕೌಲಿನಿಯನ್ನು ಸೂಚಿಸುತ್ತದೆ) ಕಾಮವಾಂಛೆಯ ಮೂಲವನ್ನು ನಿಷ್ಪತ್ತಿಗೊಳಿಸಲಾರ, ಆದರೆ ಅವನು ಆತ್ಮಬಲದ (ಆತ್ಮಬಲವೆಂದರೆ ಇಲ್ಲ ಕೇವಲಾ ಅಥವಾ ಶಕ್ತಿ ದೇವಿ) ಸಂಪರ್ಕಕ್ಕೆ ಬರುವ ಮೂಲಕ ಅವನು ಆ ತತ್ವಕ್ಕೆ ಸಮಾನವಾಗುತ್ತಾನೆ". ಶಾಕ್ತ ಪೂಜೆಯಲ್ಲಿ ಶಕ್ತಿ ದೇವಿಯನ್ನು ಕೇವಲಾ ಎಂದು ಕರೆಯುತ್ತಾರೆ. ಈ ನಾಮದ ಅರ್ಥವು, ಕೌಲಿನಿಯು ಕೇವಲಾ ಆಗಿ ಮಾರ್ಪಾಟು ಹೊಂದುತ್ತಾನೆ ಎನ್ನುವುದಾಗಿದೆ. ದೇವಿಯು ಈ ವಿಧವಾದ ರೂಪಾಂತರ ಹೊಂದುವುದಕ್ಕೆ ಸಹಾಯ ಮಾಡುತ್ತಾಳೆ.

Anarghya-kaivalya-pada-dāyinī अनर्घ्य-कैवल्य-पद-दायिनी (926)

೯೨೬. ಅನರ್ಘ್ಯ-ಕೈವಲ್ಯ-ಪದ-ದಾಯಿನೀ

           ಅನರ್ಘ್ಯವೆಂದರೆ ಬೆಲೆಕಟ್ಟಲಾಗದ್ದು, ಕೈವಲ್ಯ-ಪದ ಎಂದರೆ ಪರಮಾನಂದದ ದಾರಿಯಲ್ಲಿನ ಹಂತವಾಗಿದ್ದು ಅದು ಅಂತಿಮವಾಗಿ ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ ಮತ್ತು ದಾಯಿನಿ ಎಂದರೆ ಪ್ರಸಾದಿಸುವವಳು. ನಾಮ ೬೨೫ ಕೈವಲ್ಯ-ಪದ-ದಾಯಿನೀ ಆಗಿದೆ ಮತ್ತು ಈ ನಾಮವು ಅದರ ದೃಢೀಕರಣವಾಗಿದೆ. ಇವರೆಡೂ ನಾಮಗಳ ಮಧ್ಯದಲ್ಲಿ ಇರುವ ವ್ಯತ್ಯಾಸವೇನೆಂದರೆ ಈ ನಾಮದಲ್ಲಿರುವ ಪೂರ್ವ ಪ್ರತ್ಯಯವಾದ ಅನರ್ಘ್ಯವಾಗಿದೆ. ಈ ಶಬ್ದವು ಕೈವಲ್ಯ ಅಥವಾ ಜನನ-ಮರಣ ಚಕ್ರಗಳಿಂದ ಬಿಡುಗಡೆಯನ್ನು ಹೊಂದುವುದನ್ನು ಕುರಿತು ಒತ್ತಿ ಹೇಳುತ್ತದೆ. ನಾಮ ೬೨೫ರಲ್ಲಿ ವಿವರಿಸಿರುವ ಕೈವಲ್ಯದ ವಿವರದೊಂದಿಗೆ ಅದಕ್ಕೆ ಒಟ್ಟಾರೆಯಾಗಿ ಆತ್ಮದ ಅಸ್ತಿತ್ವ ಎನ್ನುವ ಅರ್ಥವೂ ಇದೆ. ಆತ್ಮ ಮತ್ತು ಪ್ರಕೃತಿ ಇವೆರಡೂ ಬೇರೆ ಬೇರೆ ಎಂದು ಅರಿತುಕೊಳ್ಳುವ ಜ್ಞಾನವು ಕೈವಲ್ಯ ಅಥವಾ ಮುಕ್ತಿಯೆಡೆಗೆ ಕರೆದೊಯ್ಯುತ್ತದೆ. ಕೈವಲ್ಯವೆಂದರೆ ಮೋಕ್ಷ ಅಥವಾ ಮುಕ್ತಿ ಎಂದೂ ಕರೆಯಲಾಗುತ್ತದೆ.

           ಕೈವಲ್ಯ ಎನ್ನುವ ಶಬ್ದವನ್ನು ವಿಶೇಷವಾಗಿ ಸಾಂಖ್ಯ ಸಿದ್ಧಾಂತದಲ್ಲಿ ಬಳಸುತ್ತಾರೆ; ಅದು ಕೇವಲ ಮಾನವ ರೂಪದಲ್ಲಿ ಸಂಪೂರ್ಣ ಪ್ರತ್ಯೇಕವಾಗಿರುವುದಷ್ಟೇ ಅಲ್ಲ ಅದು ದೇವತಾ ರೂಪದಲ್ಲಿಯೂ ಪ್ರತ್ಯೇಕವಾದ ಅಸ್ತಿತ್ವ ಹೊಂದಿರುವುದನ್ನು ಸೂಚಿಸುತ್ತದೆ. ಅದು ಬಂಧನರಹಿತ, ಸರ್ವಜ್ಞವಾದ ಮತ್ತು ಪರಿಪೂರ್ಣ ಅಸ್ತಿತ್ವವುಳ್ಳ ಆತ್ಮ ಅಥವಾ ಜೀವದ ಇರುವಿಕೆಯಾಗಿದೆ. ಪ್ರತ್ಯೇಕಗೊಳಿಸಲ್ಪಟ್ಟ ಆತ್ಮವು ಸಂಸಾರಬಂಧನಗಳಿಗೆ ಸಿಲುಕುವುದಿಲ್ಲ ಆದ್ದರಿಂದ ಅದು ಜನನ-ಮರಣಗಳ ಚಕ್ರದಿಂದ ಬಿಡುಗಡೆಯನ್ನು ಹೊಂದುತ್ತದೆ. ಅಂತಿಮವಾದ ನಿತ್ಯಾನಿತ್ಯ ವಸ್ತು ಜ್ಞಾನ ಅಥವಾ ವಿವೇಕವನ್ನೇ ಕೈವಲ್ಯ ಜ್ಞಾನವೆನ್ನುತ್ತಾರೆ ಮತ್ತು ಇದನ್ನು ನಿರ್ವಿಕಲ್ಪ ಸಮಾಧಿಯ (ನಿರ್ವಿಕಲ್ಪ ಎಂದರೆ ಯಾವುದೇ ವಿಧವಾದ ವಿಕಾರಗಳಲ್ಲಿದ ಸ್ಥಿತಿ) ಮೂಲಕ ಹೊಂದಲಾಗುತ್ತದೆ; ಇದುವೇ ಪ್ರಜ್ಞೆಯ ಪರಮೋನ್ನತ ಸ್ಥಿತಿಯಾಗಿದೆ. ಕೈವಲ್ಯ ಜ್ಞಾನವನ್ನು, ಪ್ರಜ್ವಲಿಸುವಿಕೆ, ಆತ್ಮಸಾಕ್ಷಾತ್ಕಾರ, ಜ್ಞಾನೋದಯವಾಗುವಿಕೆ, ಮುಕ್ತಿ, ಬಿಡುಗಡೆ ಮೊದಲಾದ ಶಬ್ದಗಳಿಂದಲೂ ಕರೆಯಲಾಗುತ್ತದೆ.

          ಮಹರ್ಷಿ ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ (೪. ೩೬) ಹೀಗೆ ಹೇಳಿದ್ದಾನೆ, "ಕೈವಲ್ಯಂ ಧರ್ಮ ಧರ್ಮಿಣಃ ಪುರುಷಸ್ಯ". ಈ ಸೂತ್ರದ ವಿಶ್ಲೇಷಣೆಯು ಹೀಗಿದೆ, "ಮುಕ್ತಿಯ ಸ್ವಾತಂತ್ರ್ಯವು ಈ ಜೀವಿಯ ಅಥವಾ ವಸ್ತುವಿನ ಮೂಲಭೂತ ಲಕ್ಷಣವಾಗಿದೆ. ಅದು ಹೊಂದಬೇಕಾದುದಲ್ಲ, ಅಥವಾ ನೀವು ಹೊಸದೊಂದನ್ನು ಅನುಭವಿಸುತ್ತೀ ಎಂದಲ್ಲ, ಆದರೆ ಆ ಸ್ವಾತಂತ್ರವೆನ್ನುವುದೇ ಆ ವಸ್ತುವಿನ ಸಹಜ ಗುಣವಾಗಿದೆ." ಕೈವಲ್ಯ ಸ್ಥಿತಿಯು ಆತ್ಮದಲ್ಲಾಗಲೇ ಅಂತರ್ಗತವಾಗಿದೆ, ಆದರೆ ಅದನ್ನು ಅರಿಯಲು ಪ್ರಯತ್ನಗಳನ್ನು ಆರಂಭಿಸಲ್ಲವಷ್ಟೆ. ಯೋಗವು ಅದನ್ನು ಅರಿಯುವ ಮಾರ್ಗವನ್ನು ತಿಳಿಸಿಕೊಡುತ್ತದೆ.

          ಈ ನಾಮವು ದೇವಿಯ ಸಹಾಯವಿಲ್ಲದಿದ್ದರೆ ಆ ಕೈವಲ್ಯದ ಸ್ಥಿತಿಯನ್ನು ಹೊಂದಲಾಗುವುದಿಲ್ಲ ಎಂದು ಹೇಳುತ್ತದೆ.

Stotra-priyā स्तोत्र-प्रिया (927)

೯೨೭. ಸ್ತೋತ್ರ-ಪ್ರಿಯಾ

             ಸ್ತೋತ್ರ ಎಂದರೆ ಹೊಗಳಿಕೆ, ಪ್ರಶಂಸೆ, ಹೊಗಳಿಕೆಯ ಪದ್ಯ. ಸ್ತೋತ್ರವೆಂದರೆ ಹಾಡಿನ ಮೂಲಕ ಹೇಳುವ ಗದ್ಯ ಅಥವಾ ಪದ್ಯಗಳಾದರೆ; ಶಾಸ್ತ್ರಗಳನ್ನು ವಾಚಿಸಲಾಗುತ್ತದೆ ಅಥವಾ ಪಠಿಸಲಾಗುತ್ತದೆ. ಸ್ತೋತ್ರಗಳನ್ನು ಆರು ವಿಧಗಳಾಗಿ ವಿಭಜಿಸಲಾಗುತ್ತದೆ. ನಮನ ಪದ್ಯಗಳು (ಪ್ರಣಾಮ ಸ್ತೋತ್ರಗಳು), ಮುಕ್ತಿ ಪದ್ಯಗಳು, (ಮುಕ್ತಿ ಸ್ತೋತ್ರಗಳು), ಪ್ರಶಂಸಾ ಸ್ತೋತ್ರಗಳು (ಸಾಧನೆಗಳನ್ನು ಹೊಗಳುವ ಸ್ತೋತ್ರಗಳು), ವೀರಗಾಥಾ ಸ್ತೋತ್ರಗಳು (ಸಾಹಸಗಳ ಕುರಿತಾದ ಸ್ತೋತ್ರಗಳು), ವೈಭವ ಸ್ತೋತ್ರ, ಮತ್ತು ಸಂಪದಭಿವೃದ್ಧಿ ಸ್ತೋತ್ರಗಳು.  ಈ ಸಹಸ್ರನಾಮದ ಸಂಪೂರ್ಣ ೧೦೦೦ ನಾಮಗಳು ಈ ಆರು ವಿಧವಾದ ಸ್ತೋತ್ರಗಳನ್ನು ಆಧರಿಸಿವೆ. ನಾಮ ೬೨೭, ೯೨೮, ೭೩೫, ೭೯, ೬೫೮ ಮತ್ತು ೬೯೨ ಇವುಗಳನ್ನು ಅನುಕ್ರಮವಾಗಿ ಆರು ವಿಧದ ಸ್ತೋತ್ರಗಳಿಗೆ ಉದಾಹರಣೆಗಳಾಗಿ ಕೊಡಲಾಗುತ್ತದೆ.

            ಈ ನಾಮವು ದೇವಿಯು ಶ್ರೀ ದೇವಿ ಮಹಾತ್ಮ್ಯಂನ ಸ್ತೋತ್ರ, ಅಥವಾ ವೈದಿಕ ಸೂಕ್ತಿಗಳಾದ ಶ್ರೀ ಸೂಕ್ತ, ದುರ್ಗಾ ಸೂಕ್ತ ಮೊದಲಾದವುಗಳ ಪಠಣದಿಂದ ಸಂತುಷ್ಟಗೊಳ್ಳುತ್ತಾಳೆ ಎಂದು ಹೇಳುತ್ತದೆ.

           (ವನದುರ್ಗಾ ವಿಧಾನ ಅಥವಾ ವನದುರ್ಗಾ ಸಪ್ತಶತೀ ಎನ್ನುವ ಏಳುನೂರು ಸ್ತೋತ್ರಗಳನ್ನೊಳಗೊಂಡ ಒಂದು ರಚನೆಯಿದೆ. ಈ ರಚನೆಯ ಪಠಣದಿಂದ ಎಲ್ಲಾ ವಿಧವಾದ ದುರಾದೃಷ್ಟಗಳು ಮತ್ತು ಯಾತನೆಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ದುರ್ದೈವವಶಾತ್, ಈ ರಚನೆಯು ಸಾಕಷ್ಟು ಪ್ರಚಲಿತವಿಲ್ಲ, ಅಲ್ಲೊಂದು ಇಲ್ಲೊಂದು ಕೆಲವೊಂದು ಅಚ್ಚು ಪುಸ್ತಕಗಳು ದೊರೆಯಬಹುದಷ್ಟೇ. ಇದರ ಪಠಣೆಯು ಬಹಳ ಕ್ಲಿಷ್ಟವಾದದ್ದು, ಏಕೆಂದರೆ ಅದರಲ್ಲಿ ಸ್ತೋತ್ರಗಳಿಗಿಂತ ಹೆಚ್ಚಾಗಿ ಬೀಜಾಕ್ಷರಗಳು ಮತ್ತು ಮೂಲ ಮಂತ್ರಗಳೇ ಅಧಿಕವಾಗಿರುತ್ತವೆ).

Stuti matī स्तुति मती (928)

೯೨೮. ಸ್ತುತಿ-ಮತೀ

            ಸ್ತುತಿ ಎಂದರೆ ಹೊಗಳುವುದು ಮತ್ತು ಮತಿ ಎಂದರೆ ಜ್ಞಾನ. ದೇವಿಯನ್ನು ಹಿಂದಿನ ನಾಮದಲ್ಲಿ ವಿವರಿಸಿದಂತೆ, ಸ್ತೋತ್ರಗಳ ಮೂಲಕ ಹೊಗಳಿದರೆ ಒಬ್ಬನಿಗೆ ಬ್ರಹ್ಮಸಾಕ್ಷಾತ್ಕಾರಕ್ಕೆ ಅವಶ್ಯವಾಗಿರುವ ಜ್ಞಾನವು ದೊರೆಯುತ್ತದೆ. ಮತೀ ಎನ್ನುವುದನ್ನು ಮತಿ+ಇ ಎಂದು ವಿಭಜಿಸಬಹುದು. ಮತಿ ಎಂದರೆ ಜ್ಞಾನ ಮತ್ತು ಇ ಎಂದರೆ ಐಶ್ವರ್ಯ. ದೇವಿಯನ್ನು ಸ್ತುತಿಸಿದರೆ, ಒಬ್ಬನಿಗೆ ಜ್ಞಾನ ಮತ್ತು ಸಂಪದಗಳೆರಡೂ ದೊರೆಯುತ್ತವೆ.

                                                                                 ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 924 - 928 http://www.manblunder.com/2010/07/lalitha-sahasranamam-meaning-924-928.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

 

Rating
Average: 5 (1 vote)

Comments

Submitted by nageshamysore Fri, 01/10/2014 - 02:13

ಶ್ರೀಧರರೆ,"೧೯೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೨೪ - ೯೨೮
______________________________________________
.
೯೨೪. ದರಸ್ಮೇರ-ಮುಖಾಂಬುಜಾ
ಹೊಳೆವ ಶಂಖ ದೇವಿದಂತ, ಕೊರಳ ಮೂರುಗೆರೆ ಸೂಚಿ ಅ-ಉ-ಮ ಓಂಕಾರ
ದೇವಿ ಸ್ವಾತ್ಮಾರಾಮ ಆತ್ಮ ಸಂತೋಷಿ, ಏತಕೂ ಭಯಪಡದ ನಗೆ ಮಂದಾರ
ಮಹಾಭಯ-ರುದ್ರ ತಾಂಡವನೃತ್ಯ ಸಾಕ್ಷೀಭೂತ ಲಲಿತೆ ಮಂದಸ್ಮಿತ ಸಹಜ
ಶಿವ ಸೋತ ಮುಗುಳ್ನಗೆ, ಮುಖ ಕಮಲ ನಗೆ ಹಿಗ್ಗೆ ದರಸ್ಮೇರ-ಮುಖಾಂಬುಜಾ ||
.
ಢಕ್ಕೆಯ ನಾದಕೆ ನಾಟ್ಯವಾಡುತ ಶಿವ, ಕಾಲಾಗ್ನಿ ರುದ್ರನಾಗಿ ಜಗವನಪ್ಪುವ
ಸಮಸ್ತ ಸೃಷ್ಟಿ ದೈವಿ ಏಕತ್ವದೆ ಸಮಷ್ಟಿ, ಬ್ರಹ್ಮಾಂಡ ಚಕ್ರದಂತ್ಯ ಸೂಚಿಸುವ
ತಾಂಡವನೃತ್ಯದೆ ಅಗ್ನಿ ಕರಗುತ ನೀರು, ನೀರಾಗಿ ಗಾಳಿ, ಆಕಾಶವಾಗುತಲಿ
ದೇವಾನುದೇವತೆ ಪುರುಷಪ್ರಕೃತಿ ಜತೆಬ್ರಹ್ಮೈಕ್ಯ, ಶಕ್ತಿ ಸಾಕ್ಷಿ ಶಿವನಸ್ತಿತ್ವಕಲ್ಲಿ ||
.
೯೨೫. ಕೌಲಿನೀ-ಕೇವಲಾ
ಕೌಲಿನೀ ಮಾರ್ಪಾಟಾಗಿ ಕೇವಲಾ, ರೂಪಾಂತರಕೆ ಲಲಿತೆಯಾಗುತಾ ಬಲ
ಕಾಮವಾಂಛೆ ಮಣಿಸೆ ಕೌಲಿನೀ-ಸಿದ್ದಪುರುಷ, ತತ್ವಕೆ ಸಮನಾಗಿ ಕೇವಲಾ
ಕೌಲಮಾರ್ಗಾರಾಧಕ ವಾಮಹಸ್ತ ಶಾಕ್ತ ಕೌಲಿನೀ, ಅದ್ವೈತದ ಸ್ಥಿತಿ ಕೇವಲ
ಇಂದ್ರಿಯ-ಮನದನುಬಂಧಕಷ್ಟೆ ದ್ವಂದ್ವ, ಕೇವಲ-ಶುದ್ಧ ಶಿವ ಜ್ಞಾನ ಅಮಲ ||
.
೯೨೬. ಅನರ್ಘ್ಯ-ಕೈವಲ್ಯ-ಪದ-ದಾಯಿನೀ
ಮುಕ್ತಿಯತ್ತ ಪರಮಾನಂದ ಪಥದ ಹಂತ ಕೈವಲ್ಯ ಪದ, ಅನರ್ಘ್ಯ
ಜನನಮರಣ ಚಕ್ರ ವಿಮುಕ್ತಿಣಿ ಲಲಿತೆ, ಪ್ರಸಾದಿಸಿ ಮುಕ್ತಿ ಕೈವಲ್ಯ
ಆತ್ಮದ ಅಸ್ತಿತ್ವ, ಆತ್ಮ ಪ್ರಕೃತಿಯ ದ್ವೈತದ ಜ್ಞಾನ, ಮುಕ್ತಿಗಿಟ್ಟ ಏಣಿ
ಹೂವ್ವೆತ್ತಿಟ್ಟಂತಾಗಿಸಿ ಸುಲಲಿತ, ಅನರ್ಘ್ಯ-ಕೈವಲ್ಯ-ಪದ-ದಾಯಿನೀ ||
.
ಅಂತಿಮ ನಿತ್ಯಾನಿತ್ಯದ ವಿವೇಕ ಕೇವಲ ಜ್ಞಾನ, ನಿರ್ವಿಕಲ್ಪ ಸಮಾಧಿಗೆ ಸಿದ್ದಿ
ಪ್ರಜ್ಞೆಯ ಪರಮೋನ್ನತ ಸ್ಥಿತಿ, ಸಂಸಾರ ಬಂಧಕೆ ಸಿಲುಕದ ಪ್ರತ್ಯೇಕಾತ್ಮನಿಧಿ
ಮಾನವ-ದೇವತಾರೂಪದಸ್ತಿತ್ವ, ಬಂಧನ ರಹಿತ, ಸರ್ವಜ್ಞ, ಪರಿಪೂರ್ಣಾತ್ಮ
ಮುಕ್ತಿ ಸ್ವಾತಂತ್ರ ಜೀವಿಗೆ ಮೂಲಭೂತ ಲಕ್ಷಣ, ಕೈವಲ್ಯಾಂತರ್ಗತ ಸ್ಥಿತಿ ಆತ್ಮ ||
.
೯೨೭. ಸ್ತೋತ್ರ-ಪ್ರಿಯಾ
ಶಾಸ್ತ್ರಕಿದ್ದಂತೆ ವಾಚನ-ಪಠನ, ಹೊಗಳುವ ಸ್ತೋತ್ರ ಹಾಡಾಗುವ ಗದ್ಯ-ಪದ್ಯ
ಪ್ರಣಾಮ ಸ್ತೋತ್ರ-ನಮನಕೆ, ಮುಕ್ತಿ ಸ್ತೋತ್ರ-ಮುಕ್ತಿಗೆ, ಆರುಸ್ತೋತ್ರಗಳ ವಿದ್ಯ
ಸಾಧನೆಯ ಹೊಗಳೆ ಪ್ರಶಂಸಾ ಸ್ತೋತ್ರ, ಸಾಹಸಕೆ ವೀರಗಾಥಾ ನಾಲ್ಕಾಗುತ
ವೈಭವ-ಸಂಪದಭಿವೃದ್ಧಿ ಸ್ತೋತ್ರಪಠನಕೆ ಸಂತುಷ್ಟೆ, ಸ್ತೋತ್ರ-ಪ್ರಿಯಳು ಲಲಿತ ||
.
೯೨೮. ಸ್ತುತಿ-ಮತೀ
ಜ್ಞಾನವೆ ಮತಿ ಹೊಗಳುವಿಕೆ ಸ್ತುತಿ, ಸುಜ್ಞಾನ ನೀಡೆ ಸ್ತುತಿ-ಮತೀ ಲಲಿತೆ
ಬ್ರಹ್ಮಸಾಕ್ಷಾತ್ಕಾರ ಜ್ಞಾನ ಹೊಂದೆ ಮನುಜ, ಸ್ತೋತ್ರದಿಂ ಲಭ್ಯ ಸ್ತುತಿಸುತೆ
ಮತಿ-ಜ್ಞಾನ, ಇ-ಐಶ್ವರ್ಯ, ದೇವಿ ಸ್ತುತಿಯಿಂದಾ ದೊರಕೆ ಜ್ಞಾನ ಸಂಪದ
ನಿರಂತರ ಸ್ತುತಿಗೆ ಇಹ ಪರ ಸುಖ ಸೌಭಾಗ್ಯ ನೀಡುವಳು ದೇವಿ ಸರ್ವದಾ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು