೧೯೯. ಲಲಿತಾ ಸಹಸ್ರನಾಮ ೯೪೧ರಿಂದ ೯೪೫ನೇ ನಾಮಗಳ ವಿವರಣೆ

೧೯೯. ಲಲಿತಾ ಸಹಸ್ರನಾಮ ೯೪೧ರಿಂದ ೯೪೫ನೇ ನಾಮಗಳ ವಿವರಣೆ

                                                                  ಲಲಿತಾ ಸಹಸ್ರನಾಮ ೯೪೧-೯೪೫

Manomayī मनोमयी (941)

೯೪೧. ಮನೋಮಯೀ

            ದೇವಿಯು ಮನಸ್ಸಿನ ಸ್ವರೂಪದಲ್ಲಿದ್ದಾಳೆ. ಪತಂಜಲಿಯ ಯೋಗ ಸೂತ್ರವು (೪.೨೪) ಹೀಗೆ ಹೇಳುತ್ತದೆ, "ಚಿತ್ತವು ಲೆಕ್ಕವಿಲ್ಲದಷ್ಟು ವಾಸನೆಗಳಿಂದ ವಿಚಿತ್ರವಾಗಿದ್ದರೂ ಪುರುಷನಿಗಾಗಿ ಇರುತ್ತದೆ. ಏಕೆಂದರೆ (ಅದು ದೇಹೇಂದ್ರಿಯಾದಿಗಳೊಡನೆ) ಬೆರೆತು (ಸುಖಾದಿ ಭೋಗಗಳನ್ನುಂಟು) ಮಾಡುತ್ತದೆ". ಮುಂದಿನ ಸೂತ್ರದಲ್ಲಿ (೪.೨೫), "ಪುರುಷನೂ ಚಿತ್ತವೂ ಬೇರೆ ಬೇರೆಯೆಂಬ ವಿಶೇಷವನ್ನು ನೋಡುವವನಿಗೆ ಆತ್ಮವಿಷಯದಲ್ಲಿನ ಜಿಜ್ಞಾಸೆಯು ಹೋಗಿಬಿಡುತ್ತದೆ". ಆದ್ದರಿಂದ ಕೃಷ್ಣನು ಭಗವದ್ಗೀತೆಯಲ್ಲಿ (೬.೩೫), "ಮನಸ್ಸು ದುರ್ನಿಗ್ರಹವಾದದ್ದು ಮತ್ತು ಚಂಚಲವಾದದ್ದು ಎಂಬುದು ನಿಸ್ಸಂಶಯವು; ಅಭ್ಯಾಸದಿಂದಲೂ ಮತ್ತು ವೈರಾಗ್ಯದಿಂದಲೂ ಇದನ್ನು ನಿಗ್ರಹಿಸಬಹುದು" ಎಂದು ಹೇಳುತ್ತಾನೆ. ಕೃಷ್ಣನು ಅದೇ ಅಧ್ಯಾಯದಲ್ಲಿ (೬.೨೬) ಹೀಗೆ ಹೇಳಿದ್ದಾನೆ, "ಚಂಚಲವೂ ಅಸ್ಥಿರವೂ ಆದ ಮನಸ್ಸು ಯಾವ ಯಾವ ವಿಷಯದಿಂದ ಹೊರಗೆ ಬರುವುದೋ ಆ ಆ ವಿಷಯದಿಂದ ಮನಸ್ಸನ್ನು ನಿಗ್ರಹಿಸಿ ಅದನ್ನು ಆತ್ಮನಲ್ಲಿಯೇ ವಶಪಡಿಸಿಕೊಳ್ಳಬೇಕು ಅಥವಾ ಅದನ್ನು ಭಗವಂತನ ಮೇಲೆ ಕೇಂದ್ರೀಕರಿಸಬೇಕು".

            ಅನಿರ್ಭಂದಿತ ಪ್ರಜ್ಞೆಯೇ (*ಖೇಚರೀ ಶಕ್ತಿಯೇ) ಮುಕ್ತಿಯಾಗಿದೆ. ಈ ಅನಿರ್ಭಂದಿತ ಪ್ರಜ್ಞೆಯು ಅನುತ್ತರಾ ಎಂದು ಕರೆಯಲ್ಪಡುವ ಸತ್ಯದ ಕುರಿತಾದ ಅರಿವಿನಿಂದ ಉಂಟಾಗುತ್ತದೆ; ಮತ್ತು ಈ ವಿಧವಾದ ಅನಿರ್ಭಂದಿತ ಪ್ರಜ್ಞೆಯು ನಿರಂತರವಾಗಿದ್ದು ಅದು ಶಿವ-ಶಕ್ತಿಯರ ಸಮಾಗಮವು ಮುಗಿದ ನಂತರ ಉಂಟಾಗುವ ಪರಮಾನಂದದ ಪರಿಣಾಮವಾಗಿದೆ. ಕೇವಲ ಶಕ್ತಿ ಅಥವಾ ಶಿವನ ಕುರಿತಾದ ಜ್ಞಾನವು ಮುಕ್ತಿಯನ್ನು ಕೊಡಮಾಡುವುದಿಲ್ಲ. ಶಿವ-ಶಕ್ತಿಯರೊಂದಿಗೆ ಸಾಮೀಪ್ಯದ ಬಂಧನಲ್ಲಿದ್ದರೆ ಮಾತ್ರ ನಿರಂತರ ಪ್ರಜ್ಞೆಯ ನಿಜವಾದ ಮಾರ್ಪಾಟು ಉಂಟಾಗುತ್ತದೆ. ಮುಕ್ತಿಯುಂಟಾಗ ಬೇಕೆಂದರೆ ಅದಕ್ಕೆ ಸೂಕ್ತವಾಗಿ ಮನಸ್ಸು ಮಾರ್ಪಾಟುಗೊಳ್ಳಬೇಕು. ಮುಕ್ತಿಯೆನ್ನುವುದು ಕೇವಲ ಧ್ಯಾನದಿಂದ ಮಾತ್ರವೇ ಸಾಧ್ಯವಾಗುವುದಿಲ್ಲ. ಪರಬ್ರಹ್ಮದ ಇರುವಿಕೆಯು ಒಬ್ಬನು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿಯೂ ಅನುಭವಕ್ಕೆ ಬರಬೇಕು. ಇದನ್ನೇ ನಿರಂತರ ಧ್ಯಾನ ಅಥವಾ ‘ಖೇಚರೀ ಸಮ್ಯಾ‘ ಎಂದು ಕರೆಯುತ್ತಾರೆ ಮತ್ತು ಇದು ದೈನಂದಿನ ಚಟುವಟಿಕೆಯಿಂದ ಕೂಡಿದ ಮನಸ್ಸನ್ನು ದೈವೀ ಪ್ರಜ್ಞೆಯೆಡೆಗೆ ರೂಪಾಂತರಗೊಳಿಸಲು ಸಹಾಯಕವಾಗಿದೆ; ಆಗ ಶಿವನ ಸಾಕ್ಷಾತ್ಕಾರವಾಗುವುದು.

           *ಖೇಚರೀ ಶಕ್ತಿಯು ವಾಮಕೇಶ್ವರೀ ಶಕ್ತಿಯ ಭಾಗವಾಗಿದ್ದು ಅದು ತೋರಿಕೆಯ ಜೀವಿಯೊಂದಿಗೆ ಅನುಭಂದವನ್ನು ಹೊಂದಿದೆ. ಖೇಚರೀ ಎಂದರೆ ಯಾವುದು ’ಖ’ನಲ್ಲಿ ಅಥವಾ ವಿಶಾಲವಾದ ಪ್ರಜ್ಞೆಯಲ್ಲಿ ಚಲಿಸುತ್ತದೆಯೋ ಅದು. ಹೆಚ್ಚಿನ ವಿವರಗಳನ್ನು ನಾಮ ೯೪೫ರಲ್ಲಿ ನೋಡಬಹುದು.

           ಬೃಹದಾರಣ್ಯಕ ಉಪನಿಷತ್ತು (೪.೪.೨೦), ಬ್ರಹ್ಮವು ಕೇವಲ ಮನಸ್ಸಿನ ಮೂಲಕವಷ್ಟೇ ಅರಿವಿಗೆ ಬರುತ್ತದೆ ಎಂದು ಹೇಳುತ್ತದೆ.

           ಕೇವಲ ದೇವಿ ಮಾತ್ರಳೇ ಮೇಲೆ ಚರ್ಚಿಸಿದಂತಹ ರೂಪಾಂತರವನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದ್ದಾಳೆಂದು ಈ ನಾಮವು ತಿಳಿಸುತ್ತದೆ.

Vyoma-keśī व्योम-केशी (942)

೯೪೨. ವ್ಯೋಮ-ಕೇಶೀ

              ವ್ಯೋಮಾನ್ ಎಂದರೆ ಸ್ವರ್ಗ, ಆಕಾಶ, ವಾತಾವರಣ, ಪಂಚಭೂತಗಳ ಮೂಲ ಧಾತು, ವಾಯು, ಮೊದಲಾದ ಅರ್ಥಗಳಿವೆ ಮತ್ತು ಕೇಶ ಎಂದರೆ ಕೂದಲು. ದೇವಿಯ ಕೂದಲುಗಳು ಪಂಚಭೂತಗಳಲ್ಲೊಂದಾದ ಆಕಾಶವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ದೇವಿಯ ವಿರಾಟ್ ರೂಪವೆಂದೂ ಕರೆಯಲಾಗುತ್ತದೆ. ವಿರಾಟ್ ಎನ್ನುವುದು ಪರಬ್ರಹ್ಮದ ತೋರಿಕೆಯ ವಿಶ್ವದ ಪ್ರಥಮ ಸ್ಥಿತಿಯಾಗಿದೆ. ಪ್ರಜ್ಞೆಗೆ ನಾಲ್ಕು ಹಂತಗಳಿವೆ; ಅವೆಂದರೆ ಜಾಗ್ರತ್, ಸ್ವಪ್ನ, ಸುಷುಪ್ತಿ ಮತ್ತು ತುರಿಯಾ. ಮೊದಲನೆಯದಾದ ಜಾಗೃತ ಸ್ಥಿತಿಯನ್ನೂ ಸಹ ವಿರಾಟ್ (ನಾಮ ೭೭೮) ಎಂದು ಕರೆಯಲಾಗುತ್ತದೆ. ವಿರಾಟ್ ಅನ್ನು ವಿಶ್ವ (ನಾಮ ೯೩೪) ಎಂದೂ ಕರೆಯಲಾಗುತ್ತದೆ. ಈ ನಾಮವು ದೇವಿಯ ಕೇಶವು ಆಕಾಶ ಅಥವಾ ವಾತಾವರಣವನ್ನು ಪ್ರತಿನಿಧಿಸುತ್ತದೆ ಎಂದು ಹೇಳುತ್ತದೆ.

              ಶಿವನನ್ನು ವ್ಯೋಮಕೇಶ (ಆಕಾಶವನ್ನೇ ಕೂದಲಾಗುಳ್ಳವನು) ಎಂದು ಕರೆಯಲಾಗುತ್ತದೆ ಮತ್ತವನ ಸಂಗಾತಿಯು ವ್ಯೋಮಕೇಶೀ ಆಗಿದ್ದಾಳೆ.

Vimānasthā विमानस्था (943)

೯೪೩. ವಿಮಾನಸ್ಥಾ

             ದೇವಿಯು ಆಕಾಶದಲ್ಲಿ ದೈವೀ ರಥಗಳಲ್ಲಿ ಹಾರುವ ಇತರೇ ದೇವ-ದೇವಿಯರಿಗಿಂತ ಭಿನ್ನಳಲ್ಲ. ಪ್ರತಿಯೊಂದು ದೇವ-ದೇವಿಯವರಿಗೂ ದಿವ್ಯವಾದ ಸ್ವಂತ ವಾಹನಗಳಿರುತ್ತವೆ.

             ವಿ(ಪ್ರೇರೇಪಣೆ) + ಮಾನ(ಕಾಪಾಡು) + ಸ್ಥಾ(ನಿರತವಾದ). ಈ ವಿಧವಾಗಿ ದೇವಿಯು ತನ್ನ ಭಕ್ತರನ್ನು ಕಾಪಾಡುವುದರಲ್ಲಿ ಆಕೆಯು ನಿರತಳಾಗಿದ್ದಾಳೆ. ಇಲ್ಲಿ ಭಕ್ತರೆಂದರೆ ಅದು ಸಮಸ್ತ ಸೃಷ್ಟಿಯನ್ನು ಸೂಚಿಸುತ್ತದೆ. ದೇವಿಗೆ ಎಲ್ಲಾ ಜೀವಿಗಳೂ ಸಹ ಭಕ್ತರೇ ಆಗಿದ್ದಾರೆ. ಆದರೆ ನಿಜವಾದ ಭಕ್ತನೆಂದರೆ ಮುಕ್ತಿಯನ್ನು ಹೊಂದ ಬಯಸುವ ಏಕೈಕ ಉದ್ದೇಶದಿಂದ ದೇವಿಯನ್ನು ನಿರಂತರವಾಗಿ ನೆನೆಯುವವನು. 

             ವಿಮಾನ ಶಬ್ದವನ್ನು ಪದಶಃ ಅರ್ಥದಲ್ಲಿ ತೆಗೆದುಕೊಂಡರೆ, ಅದು ದೇವಿಯು ಚಕ್ರ-ರಾಜ-ರಥ (ನಾಮ ೬೮) ಮತ್ತು ಗೇಯ ಚಕ್ರ  (ನಾಮ ೬೯) ರಥಗಳಲ್ಲಿ ಆಸೀನಳಾಗಿದ್ದಾಳೆನ್ನುವುದನ್ನು ಸೂಚಿಸಬಹುದು.

             ವಿಮಾ ಎಂದರೆ ನಾಮ, ರೂಪ, ಭೇದ ರಹಿತ ಬ್ರಹ್ಮ (ಅವ್ಯಕ್ತವಾದ ಬ್ರಹ್ಮ) ಮತ್ತು ಸ್ಥ ಎಂದರೆ ನಿವಸಿಸುವ. ದೇವಿಯು ಪರಬ್ರಹ್ಮವನ್ನು ವಿವಿಧ ರೂಪಾಂತರಗಳೊಳಗೆ ಪರಿಮಿತಿಗೊಳಿಸುತ್ತಾಳೆ ಅಥವಾ ಸಗುಣ ಬ್ರಹ್ಮವಾಗಿಸುತ್ತಾಳೆ. ನಿರ್ಗುಣ ಬ್ರಹ್ಮವು ನಾಮ, ರೂಪಗಳಿಗೆ ಅತೀತವಾಗಿದೆ.

             ಈ ನಾಮವು ದೇವಿಯು ಅಳೆಯಲಾಗದವಳು ಎಂದು ಹೇಳುತ್ತದೆ (ಮಾನ=ಅಳೆ, ವಿ=ರಹಿತ; ಆದ್ದರಿಂದ ವಿಮಾನವೆಂದರೆ ಅಳೆಯಲಾಗದವಳು).

             ದೇವಿಯನ್ನು ವೇದಗಳು ಗೌರವಿಸುತ್ತವೆ ಮತ್ತು ಸಕಲ ಶಾಸ್ತ್ರಗಳು ವೇದಗಳಿಂದ ಉಗಮವಾದವು.

Vajriṇī वज्रिणी (944)

೯೪೪. ವಜ್ರಿಣೀ

            ಶಿವನು ವಜ್ರನೆಂದು ಕರೆಯಲ್ಪಡುವುದರಿಂದ ಅವನ ಸಂಗಾತಿಯು ವಜ್ರಿಣೀ ಆಗಿದ್ದಾಳೆ. ಈ ನಾಮಕ್ಕೆ ಇನ್ನೊಂದು ವಿಧವಾದ ವ್ಯಾಖ್ಯಾನವೂ ಇದೆ, ಅದರ ಪ್ರಕಾರ ದೇವಿಯು ಇಂದ್ರನ ರಾಣಿಯಾದ ಇಂದ್ರಾಣಿಯ ರೂಪದಲ್ಲಿದ್ದಾಳೆಂದು ಹೇಳಲಾಗುತ್ತದೆ. ಇಂದ್ರನು ದೇವತೆಗಳ ಅಧಿಪತಿ. ದೇವತೆಗಳು ಪರಬ್ರಹ್ಮಕ್ಕಿಂತ ಭಿನ್ನವಾದವರು, ಪರಬ್ರಹ್ಮವೇ ಅಂತಿಮವಾದದ್ದು. ದೇವತೆಗಳು ಕಾರ್ಯಾಧಿಕಾರಿಗಳಷ್ಟೆ. ಉದಾಹರಣೆಗೆ ಅಗ್ನಿಯು ಬೆಂಕಿಯ ಅಧಿದೇವತೆಯಾದರೆ, ವರುಣನು ನೀರಿನ ಅಧಿದೇವತೆ. ಇಂದ್ರನು ಇಂತಹ ದೇವತೆಗಳ ಪ್ರಮುಖನಾಗಿದ್ದಾನೆ. ಇಂದ್ರನು ಮಿಂಚಿಗೆ ಸಮವಾದ ವಜ್ರಾಯುಧವೆಂದು ಕರೆಯಲ್ಪಡುವ ಶಕ್ತಿಯುತವಾದ ಆಯುಧವನ್ನು ಹೊಂದಿದ್ದಾನೆ. ಈ ವಜ್ರಾಯುಧವನ್ನು ದಧೀಚಿ ಮಹರ್ಷಿಯ ಬೆನ್ನುಮೂಳೆಗಳಿಂದ ರೂಪಿಸಲಾಯಿತೆಂದು ಹೇಳಲಾಗುತ್ತದೆ. ಲಲಿತಾಂಬಿಕೆಯು ಪಾಪಿಗಳನ್ನು ವಿನಾಶಗೊಳಿಸಲು ತನ್ನ ಕೈಯ್ಯಲ್ಲಿ ವಜ್ರಾಯುಧವನ್ನು ಹಿಡಿದಿದ್ದಾಳೆ ಎಂದು ಈ ನಾಮವು ಹೇಳುತ್ತದೆ ಅಥವಾ ದೇವಿಯು ವಜ್ರ ಮೊದಲಾದ ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದಾಳೆ ಎಂದು ಹೇಳಬಹುದು.

             ಕಠೋಪನಿಷತ್ತು (೨.೩.೨) ಹೀಗೆ ಹೇಳುತ್ತದೆ, "ಪರಬ್ರಹ್ಮವು ಪ್ರಹಾರಕ್ಕೆ ಸಿದ್ಧವಾಗಿರುವ ವಜ್ರಾಯುಧದಂತೆ ಇರುತ್ತದೆ". ಪರಬ್ರಹ್ಮವು ಯಾರು ತಮಗೆ ವಿಹಿತವಾದ ಕರ್ತವ್ಯಗಳನ್ನು ಮಾಡುವುದಿಲ್ಲವೋ ಅಂತಹವರ ಮೇಲೆ ಪ್ರಹಾರವನ್ನು ಮಾಡುತ್ತದೆ. ಕಠೋಪನಿಷತ್ತು (೨.೩.೩) ಮುಂದುವರೆಯುತ್ತಾ, ಹೀಗೆ ಹೇಳುತ್ತದೆ, "ಇದರ (ಬ್ರಹ್ಮದ) ಭಯದಿಂದ ಅಗ್ನಿಯು ಸುಡುತ್ತಾನೆ, ಇದರ ಭಯದಿಂದ ಸೂರ್ಯನು ಪ್ರಕಾಶಿಸುತ್ತಾನೆ. ಇದರ ಭಯದಿಂದಾಗಿ ಅಗ್ನಿ, ವಾಯು ಮತ್ತು ಯಮ ಇವರುಗಳು ತಮ್ಮ ತಮ್ಮ ಕರ್ತವ್ಯಗಳನ್ನು ಮಾಡಲು ಧಾವಿಸುತ್ತಾರೆ". ಈ ವಿಶ್ವದಲ್ಲಿನ ಪ್ರತಿಯೊಂದು ಕ್ರಿಯೆಗೂ ಒಂದೊಂದು ದೇವತೆಯು ಅಧಿಪತಿಯಾಗಿದೆ ಮತ್ತು ಯಾವಾಗ ಅವರು ತಮ್ಮ ಪಾಲಿನ ಕರ್ತವ್ಯಗಳನ್ನು ಮಾಡುವುದಿಲ್ಲವೋ, ಆಗ ದೇವಿಯು ಶಕ್ತಿಯುತವಾದ ತನ್ನ ವಜ್ರಾಯುಧವನ್ನು ಉಪಯೋಗಿಸುತ್ತಾಳೆ. ಪ್ರಪಂಚವನ್ನು ಸುಸ್ಥಿತಿಯಲ್ಲಿಡಲು ದೇವಿಯು ನಿಯಮಗಳು ಸರಿಯಾಗಿ ಅನುಷ್ಠಾನಗೊಳ್ಳುವಂತೆ ಮಾಡುತ್ತಾಳೆ ಎಂದು ಈ ನಾಮವು ಹೇಳುತ್ತದೆ.

             ವಜ್ರಯೋಗಿನೀ ಮತ್ತು ವಜ್ರೇಶ್ವರೀ ಇವೆರಡೂ ಬೌದ್ಧ ದೇವತೆಗಳಾಗಿವೆ.

Vāmakeśvarī वामकेश्वरी (945)

೯೪೫. ವಾಮಕೇಶ್ವರೀ

            ಲಲಿತಾ ಸಹಸ್ರನಾಮದಲ್ಲಿ ವಾಮಕೇಶ ಎಂದು ಆರಂಭವಾಗುವ ಎರಡು ನಾಮಗಳಿವೆ. ಅದರಲ್ಲಿ ಮೊದಲನೆಯದು ವಾಮಕೇಶಿ (ನಾಮ ೩೫೧). ಅದರಲ್ಲಿ ಚರ್ಚಿಸಿರುವುದಲ್ಲದೇ ಕೆಳಗೆ ತಿಳಿಸಿರುವ ಹೆಚ್ಚಿನ ವಿವರಗಳೂ ಇವೆ.

            ವಾಮ ಎನ್ನುವುದಕ್ಕೆ ಲೆಕ್ಕವಿಲ್ಲದಷ್ಟು ಅರ್ಥಗಳಿವೆ, ಮನೋಹರವಾದ, ಶಿವ, ದುರ್ಗಾ, ಲಕ್ಷ್ಮೀ, ಸರಸ್ವತೀ, ಸುಂದರವಾದ ಸ್ತ್ರೀ, ಹೆಂಡತಿ, ಎಡಗಡೆ, ಮೊದಲಾದವು. ಕೇಶಿ ಎಂದರೆ ಕೂದಲುಳ್ಳವಳು. ನಾಮ ೩೫೧ರಲ್ಲಿ ದೇವಿಯು ವಾಮಕೇಶ್ವರನ ಅರ್ಧಾಂಗಿ ಎಂದು ಹೇಳಿದಾಗ ಅದು ಹಿಂದಿನ ಮತ್ತು ಮುಂದಿನ ನಾಮಗಳ ವರಸೆಗೆ ಸರಿಹೊಂದಿರಲಿಲ್ಲ. ೩೫೦ನೇ ನಾಮವು ಸರಸ್ವತೀ ದೇವಿಯನ್ನು ಉಲ್ಲೇಖಿಸಿದರೆ, ೩೫೨ನೇ ನಾಮವನ್ನು ದುರ್ಗಾ ದೇವಿಯೆಂದು ಅರ್ಥೈಸಬಹುದು. ಈ ಎರಡು ನಾಮಗಳ ವ್ಯಾಖ್ಯಾನವು ಸರಿಯಾದಲ್ಲಿ ೩೫೧ನೇ ನಾಮವು ಲಕ್ಷ್ಮೀ ದೇವಿಯನ್ನು ಸೂಚಿಸುತ್ತದೆ; ಬಹುಶಃ ಇದು ಸರಿಯೆನಿಸುತ್ತದೆ. 

            ಇಲ್ಲಿ ಸೂಚಿಸಿರುವ ವಾಮಕೇಶ್ವರಿಯು ವಾಮಕೇಶ್ವರ ತಂತ್ರವನ್ನು ಉಲ್ಲೇಖಿಸುತ್ತದೆ. ಸೌಂದರ್ಯ ಲಹರಿಯ ೩೧ನೇ ಸ್ತೋತ್ರವು ಹೇಳುವಂತೆ ಮತ್ತು ಈ ಸಹಸ್ರನಾಮದ ೨೩೬ನೇ ನಾಮದಲ್ಲಿ ಚರ್ಚಿಸಿದಂತೆ, ಈ ತಂತ್ರವು ಅರವತ್ನಾಲ್ಕು ತಂತ್ರಗಳನ್ನು ಹೊರತುಪಡಿಸಿದ ಅರವತ್ತೈದನೇ ತಂತ್ರವಾಗಿದೆ. ಶ್ರೀ ವಿದ್ಯಾ ಉಪಾಸನೆಯಲ್ಲಿ ವಾಮಕೇಶ್ವರ ತಂತ್ರವು ಅತ್ಯಂತ ಪ್ರಮುಖವಾದುದ್ದಾಗಿದೆ. ಈ ತಂತ್ರವು ದೇವಿಯ ಆಂತರಿಕ ಪೂಜೆಯ ಕುರಿತಾಗಿ ಚರ್ಚಿಸುತ್ತದೆ. ವಾಮಕೇಶ್ವರಿಯು ಈ ಜಗತ್ತಿನ ಮೂಲವಾಗಿದ್ದಾಳೆ ಎಂದು ಹೇಳಲಾಗುತ್ತದೆ.

            ವಾಮಕೇಶ್ವರ ತಂತ್ರದಲ್ಲಿ ಶಕ್ತಿಯು ಶಿವನನ್ನು ಕೇಳುತ್ತಾಳೆ, "ದೇವಾ, ನೀನು ನನಗೆ ಎಲ್ಲಾ ಅರವತ್ನಾಲ್ಕು ತಂತ್ರಗಳನ್ನೂ ಬಹಿರಂಗಪಡಿಸಿದ್ದೀಯ. ಆದರೆ ನೀನು ನನಗೆ ಹದಿನಾರು ವಿದ್ಯೆಗಳ ಕುರಿತಾಗಿ ಹೇಳಲಿಲ್ಲ!" ಆಗ ಶಿವನು ಅದಕ್ಕೆ ಪ್ರತ್ಯುತ್ತರಿಸುತ್ತಾ ಅದು ಇದುವರೆವಿಗೂ ಬಹಿರಂಗವಾಗಿಲ್ಲ ಎಂದು ಹೇಳಿ ಆ ತಂತ್ರವನ್ನು ದೇವಿಗೆ ಉಪದೇಶಿಸಲು ತೊಡಗುತ್ತಾನೆ. ಆ ತಂತ್ರದಲ್ಲಿ ಪ್ರತಿಯೊಂದು ವಿಷಯವೂ ಬಹಳ ಸೂಕ್ಷ್ಮವಾಗಿ ಬಹಿರಂಗ ಪಡಿಸಲ್ಪಟ್ಟಿದೆ.

            ಉದಾಹರಣೆಗೆ ‘ಹ್ರೀಂ’ ಬೀಜಾಕ್ಷರವನ್ನು, ’ಆತ್ಮರಕ್ಷಣೆಯ ವಿದ್ಯೆಯ ರೂಪದಲ್ಲಿರುವ ಅದು ಶಿವ, ಅಗ್ನಿ, ಮಾಯಾ ಮತ್ತು ಬಿಂದುವನ್ನೊಳಗೊಂಡಿದೆ’ ಎಂದು ಅಧಿಕಾರಯುತವಾಗಿ ಹೇಳಲಾಗಿದೆ. ಒಬ್ಬರಿಗೆ ಈ ದೇವತೆಗಳ ಬೀಜಾಕ್ಷರಗಳ ಕುರಿತಾದ ವಿಷಯದ ತಿಳುವಳಿಕೆ ಇಲ್ಲದಿದ್ದರೆ, ಅದರಲ್ಲಿ ಹುದುಗಿರುವ ಬೀಜಾಕ್ಷರಗಳನ್ನು ಅರಿತುಕೊಳ್ಳುವುದು ಬಹಳ ಕಷ್ಟಕರವಾದ ಸಂಗತಿ. ಶಿವ ಬೀಜವು ಹ (ह), ಅಗ್ನಿ ಬೀಜವು ರ (र) ಮತ್ತು ಕಾಮಕಲಾ ಬೀಜ (ईं) ಇವುಗಳು ಸಂಯುಕ್ತಗೊಂಡು ಮಾಯಾ ಬೀಜವಾದ ಹ್ರೀಂ(ह्रीं) ಅನ್ನು ಕೊಡುತ್ತವೆ. ಶಿವನು ಸಾಮಾನ್ಯವಾಗಿ ಪರಿಚಯವಿಲ್ಲದ ಆದರೆ ಬಹಳ ಶಕ್ತಿಯುತವಾದ ಬೀಜಾಕ್ಷರಗಳನ್ನು ಈ ತಂತ್ರದಲ್ಲಿ ಬಹಿರಂಗಪಡಿಸುತ್ತಾನೆ.

            ’ವಾಮ’ರು ಎಂದರೆ ಯಾರು ದೇವಿಯನ್ನು ಎಡಗೈಯ್ಯಿಂದ ಪೂಜಿಸುತ್ತಾರೋ ಅವರು. ಮುಂದಿನ ನಾಮದಲ್ಲಿ ಚರ್ಚಿಸಲ್ಪಟ್ಟ ಪಂಚ (ಐದು) ಮಹಾಯಜ್ಞಗಳನ್ನು ಅವರು ಅನುಸರಿಸುವುದಿಲ್ಲ. ಈ ವಾಮ ಹಸ್ತ ಪೂಜಕರಿಗೆ ದೇವಿಯೇ ಅಧಿದೇವತೆ. ದೇವಿಯನ್ನು ವಾಮೇಶ್ವರೀ ಎಂದೂ ಕರೆಯಲಾಗುತ್ತದೆ; ಇದು ಆಕೆಯು ತನ್ನ ದಿವ್ಯ ಶಕ್ತಿಯಿಂದ ಈ ವಿಶ್ವವನ್ನು ಶಿವನಿಂದ (ನಿರ್ಗುಣ ಬ್ರಹ್ಮದಿಂದ) ಅನಾವರಣಗೊಳಿಸುತ್ತಾಳೆ ಮತ್ತು ಆಕೆಯು ಭೇದಕ್ಕೆ ಪ್ರತಿಕೂಲವಾದ (ವಾಮವಾದ) ಪ್ರಜ್ಞೆಯನ್ನು ಉಂಟು ಮಾಡುತ್ತಾಳೆ.

             ಶಿವನ ಹಿಂದಲೆಯ ಮುಖವನ್ನು ವಾಮದೇವ ಎಂದು ಕರೆಯಲಾಗುತ್ತದೆ.

                                                                              ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 941 - 945 http://www.manblunder.com/2010/07/lalitha-sahasranamam-941-945.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 01/08/2014 - 19:38

ಶ್ರೀಧರರೆ,"೧೯೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯ ರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-
.
ಲಲಿತಾ ಸಹಸ್ರನಾಮ ೯೪೧-೯೪೫
_______________________________________
.
೯೪೧. ಮನೋಮಯೀ
ದುರ್ನಿಗ್ರಹ ಚಂಚಲ ಮನಸ್ಸು, ಅಭ್ಯಾಸ-ವೈರಾಗ್ಯ ಬಲವಿರೆ ನಿಗ್ರಹಿಸು
ಅಗಣಿತ ವಾಸನಾಚಿತ್ತ ಸುಖಭೋಗದತ್ತ, ಆತ್ಮ ಭಗವಂತನತ್ತ ಹರಿಸು
ಮನಸಿನ ರೂಪದೆ ಮನೋಮಯೀ ಲಲಿತೆ, ಅನಿರ್ಭಂದಿತ ಪ್ರಜ್ಞೆ ಮುಕ್ತಿ
ಬ್ರಹ್ಮವರಿಯೆ ಮನ ಸುವರ್ಣಮಾಧ್ಯಮ, ದೇವಿ ನೀಡೆ ರೂಪಾಂತರ ಶಕ್ತಿ ||
.
ಸತ್ಯದರಿವೆ ಅನುತ್ತರಾ, ತರುವ ಅನಿರ್ಭಂದಿತ ಪ್ರಜ್ಞೆಯೆ ಖೇಚರಿ ಶಕ್ತಿ
ಶಿವಶಕ್ತಿ ಸಮಾಗಮೋತ್ತರ ಪರಮಾನಂದದ ಮಾರ್ಪಾಟಿನ ಫಲಶ್ರುತಿ
ಸಾಲದು ಶಿವಶಕ್ತಿಜ್ಞಾನ ಮುಕ್ತಿಗೆ, ಮನವರಿಕೆ ಬ್ರಹ್ಮಾನುಭವ ಸಕಲದೆ
ಅಗುತೆ ನಿರಂತರ ಧ್ಯಾನ-ಖೇಚರೀ ಸಮ್ಯಾ, ಶಿವಸಾಕ್ಷಾತ್ಕಾರಕೆ ಸನ್ನದ್ದೆ ||
.
೯೪೨. ವ್ಯೋಮ-ಕೇಶೀ
ಕೇಶವೆ ಆಕಾಶವಾಗಿಹ ದೇವಿ ವಿರಾಟ್ ರೂಪ, ಪಂಚಭೂತ ಸ್ವರೂಪ
ತೋರಿಕೆ ವಿಶ್ವದ ಪ್ರಥಮಸ್ಥಿತಿ ವಿರಾಟ್, ಜಾಗೃತ ಪ್ರಜ್ಞಾಹಂತ ರೂಪ
ವಿಶ್ವವೆ ವಿರಾಟ್, ದೇವಿ ಕೇಶ ವ್ಯೋಮವ ಪ್ರತಿನಿಧಿಸೊ ಬೃಹತ್-ಕೇಶಿ
ಕೂದಲೆ ಆಕಾಶವಾಗಿಹ ಶಿವ ವ್ಯೋಮಕೇಶ, ಸತಿ ಲಲಿತೆ ವ್ಯೋಮಕೇಶಿ ||
.
೯೪೩. ವಿಮಾನಸ್ಥಾ
ವಿ-ಪ್ರೇರೇಪಣೆ, ಮಾನ-ಕಾಪಾಡು, ಸ್ಥಾ-ನಿರತ, ಸಮಷ್ಟಿಯ ಕಾಪಿಡುತ
ವಿಮಾ-ಅವ್ಯಕ್ತ ಬ್ರಹ್ಮ, ಸ್ಥ-ನಿವಸಿತ, ಪರಬ್ರಹ್ಮ ಸಗುಣಬ್ರಹ್ಮವಾಗಿಸುತ
ವಿ-ರಹಿತ, ಮಾನ-ಅಳತೆ, ಅಳೆಯಲಾಗದವಳ ಯಾನ, ರಥಾಸೀನಸ್ಥ
ದಿವ್ಯವಾಹನ ದೈವೀರಥದಲಿ ಹಾರುತ, ವಿಹಾರ-ಸಂಚಾರ ವಿಮಾನಸ್ಥ ||
.
೯೪೪. ವಜ್ರಿಣೀ
ವಜ್ರ ನಾಮಧೇಯಿ ಶಿವನ ಸಂಗಾತಿ ವಜ್ರಿಣೀ, ಜಗ ಸುಸ್ಥಿತಿಗವಳೆ ಆಯುಧ
ದೇವರಾಜನ ಸತಿ ಇಂದ್ರಾಣಿಯಾಗಿ ಲಲಿತೆ, ಕೈಲ್ಹಿಡಿದಿಹಳು ವಜ್ರಾಯುಧ
ದಧೀಚಿ ಮಹರ್ಷಿಯ ತ್ಯಾಗ, ಬೆನ್ನುಮೂಳೆಯಾಗಿ ವಜ್ರಯುಧ ಪಾಪಿವಿನಾಶ
ಕರ್ತವ್ಯಪಾಲಿಸದ ಕಾರ್ಯಾಧಿಕಾರಿ ದೇವತೆಗಳ, ಅಂಕೆಯಲಿಡುವ ಅಂಕುಶ ||
.
೯೪೫. ವಾಮಕೇಶ್ವರೀ
ಜಗಮೂಲ ವಾಮಕೇಶ್ವರೀ, ಶೀವಿದ್ಯಾ ಆಂತರಿಕ ಪೂಜಾತಂತ್ರ ವಾಮಕೇಶ್ವರ
ಷೋಡಶ ವಿದ್ಯೆಗಳ ಅರವತ್ತೈದನೆ ತಂತ್ರ, ಬಹಿರಂಗಪಡಿಸಿದ ಸೂಕ್ಷ್ಮ ವಿಚಾರ
ವಾಮಹಸ್ತ ಪೂಜಕರಿಗಧಿದೇವತೆ ವಾಮೇಶ್ವರೀ, ಅನಾವರಣಗೊಳಿಸುತ ವಿಶ್ವ
ದಿವ್ಯಶಕ್ತಿಯಲ್ಹುಟ್ಟುತೆ, ಭೇದ ಪ್ರತಿಕೂಲ ವಾಮವಾದ ಪ್ರಜ್ಞೆ, ಶಿವ ವಾಮದೇವ ||
.
ಶಿವ ಬೀಜ-ಹ, ಅಗ್ನಿ ಬೀಜ-ರ, ಕಾಮಕಲಾ ಬೀಜ-ಇಂ ಸಂಗಮ-ಹ್ರೀಂ ಬೀಜ
ಆತ್ಮರಕ್ಷಣೆ ವಿದ್ಯಾರೂಪದೆ ಶಿವ-ಅಗ್ನಿ-ಮಾಯಾ-ಬಿಂದುಸಹಿತ ಮಾಯಾಬೀಜ
ವಾಮಕೇಶ್ವರೀ ಶಕ್ತಿಯ ಭಾಗ ಖೇಚರಿ, ಖ-ವಿಶಾಲಪ್ರಜ್ಞೆಯಲಿ ಚಲಿಸುವ ಶಕ್ತಿ
ತೋರಿಕೆ ಜೀವಿಯೊಂದಿಗೆ ಹೊಂದಿದ ಅನುಬಂಧ, ಖೇಚರಿ ಪ್ರಜ್ಞೆಯಾಗಿಸುತ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು