ಕುಣಿಗಲ್ ಟು ಕಂದಹಾರ್

ಕುಣಿಗಲ್ ಟು ಕಂದಹಾರ್

Image
ಪುಸ್ತಕದ ಲೇಖಕ/ಕವಿಯ ಹೆಸರು
ಮಂಜುನಾಥ್ ಕುಣಿಗಲ್
ಪ್ರಕಾಶಕರು
ವೀರಲೋಕ

ಸಂಪದದ ಗೆಳೆಯರೆ 

ಈ ಹತ್ತು-ಹನ್ನೆರೆಡು ವರ್ಷಗಳ ಹಿಂದೆ ಸಂಪದದಲ್ಲಿ ಸಕ್ರಿಯನಾಗಿ ಬರೆಯುತ್ತಿದ್ದೆ. ಆಗ ದುಬೈನಲ್ಲಿದ್ದ ನನಗೆ ಕೆಲಸದ ನಿಮಿತ್ತ ಯುದ್ಧಭಾದಿತ ಆಫ್ಘಾನಿಸ್ತಾನಕ್ಕೆ ಹೋಗುವ ಅವಕಾಶಗಳು ಬಂದವು. ನನ್ನ ಅಲ್ಲಿನ ರೋಚಕ ಅನುಭವಗಳನ್ನು ಲೇಖನ ಮಾಲಿಕೆಯಂತೆ ಪ್ರಕಟಿಸಲು ಸಂಪದ ವೇದಿಕೆಯಾಯ್ತು. ಕೆಲವಷ್ಟೇ ಅಧ್ಯಾಯಗಳನ್ನು ಬರೆದ ಮೇಲೆ ಕೆಲಸದ ಒತ್ತಡಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೋ ಬರೆಯುವದನ್ನು ನಿಲ್ಲಿಸಿಬಿಟ್ಟಿದ್ದೆ. ನ್ಯಾಟೋ ಮತ್ತು ಅಮೆರಿಕಾದ ಮಿಲಿಟರಿ ಹೊರಹೋಗಿ ಆಫ್ಘಾನಿಸ್ತಾನ ಮತ್ತೆ ತಾಲಿಬಾನ್ ವಶವಾದ ಮೇಲೆ ಮತ್ತೆ ನನ್ನ ಮಿಕ್ಕ ಅನುಭವಗಳನ್ನು ಬರೆದು ದಾಖಲು ಮಾಡಲು ಇದು ಸಕಾಲವೆಂದು ಬರೆಯಲು ಶುರುಮಾಡಿದೆ. ಆ ವಿಶಿಷ್ಟ ಅನುಭವಗಳ ಕಥಾನಕ ಇದೀಗ 224 ಪುಟಗಳ ಪುಸ್ತಕ ರೂಪವಾಗಿ ಇದೇ ಡಿಸೆಂಬರ್ 31ಕ್ಕೆ ವೀರಲೋಕ ಪ್ರಕಾಶನದಿಂದ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ವಿಶಿಷ್ಟ ಹಾಗೂ ರೋಚಕ ಅನುಭವ ಕಥನವಿದು. ಇದೊಂದು ಸಂಗ್ರಹಯೋಗ್ಯ ಪುಸ್ತವಾಗುತ್ತೆ ಎಂಬ ಧೃಡ ವಿಶ್ವಾಸ ನನಗಿದೆ. ಓದಿರಿ, ಓದಿಸಿರಿ.

ಪುಸ್ತಕದ ಮುನ್ನುಡಿಯಲ್ಲಿ ಸಂಪದದ ಬಗ್ಗೆ ಬರೆದ ಸಾಲುಗಳಿವು...

ಬಹುಶಃ ೨೦೦೭-೧೦ರ ವರ್ಷಗಳು. ಬ್ಲಾಗ್-ಸ್ಪಾಟ್ಗಳೆಂಬ ಜಾಲತಾಣಗಳು ಉದಯೋನ್ಮುಖ ಬರಹಗಾರರಿಗೆ ಮತ್ತು ಓದುಗರಿಗೆ ಒಂದೊಳ್ಳೆಯ ಆನ್ಲೈನ್ ಪ್ಲಾಟ್-ಫಾರ್ಮ್ ಒದಗಿಸುತ್ತಿದ್ದ ಕಾಲ ಅದು. ಸಾಹಿತ್ಯದ ವಿದ್ಯಾರ್ಥಿಯಲ್ಲದ ಆದರೆ ಓದುಗನ ತುಡಿತವಿದ್ದ ನನ್ನಲ್ಲೂ ತೋಚಿದ್ದನ್ನು ಗೀಚಲು ಅವಕಾಶವಾಗಿದ್ದು ಆಗ. ಅದೇ ಸಮಯದಲ್ಲಿ ಶ್ರೀಯುತ ಹರಿಪ್ರಸಾದ್ ನಾಡಿಗರು ಒದಗಿಸಿದ್ದ ಸಂಪದ ಡಾಟ್ ನೆಟ್ ಎಂಬ ಬರಹ ತಾಣ ನನ್ನಂತಹ ಮತ್ತೂ ಅನೇಕ ಕಿರಿಯ-ಹಿರಿಯ ಬರಹಗಾರರು, ಓದುಗರನ್ನು ಹತ್ತಿರಕ್ಕೆ ತಂದಿತ್ತು. ಆಗ ತಾನೇ ಕಂದಹಾರ್-ಕಾಬೂಲ್ ಎಲ್ಲಾ ಸುತ್ತಾಡಿ ಆ ರೋಚಕತೆಯನ್ನು ಅನುಭವಿಸಿ ಬಂದಿದ್ದ ನನಗೆ ಅದನ್ನು ದಾಖಲಿಸಲು ಸಂಪದ ಡಾಟ್ ನೆಟ್ ವರವಾಯ್ತು. ಇಂದಿಗೂ ಈ ತಾಣ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಂಡು ಮುಂದೆ ಹೋಗುತ್ತಿದೆ ಎನ್ನುವುದು ಸಂತೋಷದ ಬೆಳವಣಿಗೆ. ಅಲ್ಲಿ ನನಗೆ ಸಿಕ್ಕ ಪ್ರೋತ್ಸಾಹ ಮತ್ತಷ್ಟು ಹುರಿದುಂಬಿಸಿತು. ಸಂಪದಕ್ಕೆ ನಾನು ಕೃತಜ್ಞ. ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ನನ್ನನ್ನು ಮೆಚ್ಚಿ ಮುಂದೆ ಬರೆಯಲು ಪ್ರೋತ್ಸಾಹಿಸಿದ ಸಂಪದದ ಎಲ್ಲ ಗೆಳೆಯರಿಗೂ ಆಭಾರಿ. ಮೊದಲ ಮೂರ್ನಾಲ್ಕು ಅಧ್ಯಾಯಗಳನ್ನು ಮಾತ್ರ ಸಂಪದದಲ್ಲಿ ಬರೆದು ನಂತರ ಕೆಲಸ ಮತ್ತು ಜೀವನದ ಒತ್ತಡಕ್ಕೆ ಸಿಲುಕಿ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಇನ್ನೂ ಬರೆಯದ ವಿಷಯಗಳನ್ನು ಒಂದು ಕಡೆ ತೀರ ಸಂಕ್ಷಿಪ್ತವಾಗಿ ದಾಖಲಿಸಿ ಜೋಪಾನವಾಗಿಟ್ಟಿದ್ದೆ. ಒಂದೊಂದು ಬಾರಿ ಆಫ್ಘಾನಿಗೆ ಹೋದಾಗಲೂ ಹಿಂದೆ ನೋಡಿದ ಮತ್ತು ಅನುಭವಿಸಿದ ವಿಷಯಗಳು ಸ್ವಲ್ಪ ಏನೋ ಬದಲಾದಂತೆ ಮತ್ತು ವಿಷಯಗಳು ಮತ್ತಷ್ಟು ಮೊನಚಾದಂತೆ ಅನಿಸುತ್ತಿತ್ತು. ನನ್ನ ಅನುಭವ ಮತ್ತು ಬರವಣಿಗೆ ಪಕ್ವವಾಗಲಿ ಎಂದು ಕಾದದ್ದು ಕೂಡ ನಿಜವೇ.