ದೃಶ್ಯ ೧

ದೃಶ್ಯ ೧

ನಮೋ ಭಗವತೇ ಶ್ರೀರಾಮಕೃಷ್ಣಾಯ ||
ಚಂದ್ರಹಾಸ
(ನಾಟಕ)
ಆದಿರಂಗಂ

ದೃಶ್ಯ ೧

[ಕುಂತಳನಗರದ ಒಂದು ಬೀದಿ. ಚಂದ್ರಹಾಸನೇ ಮೊದಲಾದ ಮೂವರು ಹುಡುಗರು ಧೂಳಾಟವಾಡುತ್ತಿರುವರು.]

೧ನೆ ಬಾಲಕ:- ನಾನೊಂದು ಹಣ್ಣು ಬರೆದೆನು; ನೋಡಿ!
೨ನೆ ಬಾಲಕ:- ನೋಡಿಲ್ಲಿ ನಾನೊಂದು ಹಕ್ಕಿಯನು ಕೆತ್ತಿಹೆನು; ಹಾರುತಿದೆ!
ಹಾರಿಹೋಗುವ ಮುನ್ನ ಬನ್ನಿ; ನೋಡಿ!
ಚಂದ್ರ:- ಸುಭಟನೋರ್ವನು ಬಿಲ್ಲು ಬಾಣಂಗಳನು ಪಿಡಿದು ಕದನಕೈದುವ ಚಿತ್ರವನು ಕೆತ್ತಿಹೆನು! ನೋಡಿ!
೧ನೆ:- ಎಲ್ಲಿ? ಎಲ್ಲಿ?
೨ನೆ:- ನನಗು ತೋರಿಸು; ಎಲ್ಲಿ?
ಚಂದ್ರ:- ಹೆದರದಿರಿ! ಹಣ್ಣು ಹಕ್ಕಿಗಳೆಂದು ತಿಳಿಯದಿರಿ!

(ಬಂದು ನೋಡುವರು)

೨ನೆ:- ಅವನ ಬೆನ್ನಿನ ಮೇಲೆ ತೂಗಾಡುತಿಹುದೇನು?
ಚಂದ್ರ:- ಬತ್ತಳಿಗೆ! ನಿನ್ನ ಹಕ್ಕಿಯದೆಲ್ಲಿ?
೧ನೆ:- ಹೋಯಿತದು ಹಾರಿ ನಿನ್ನ ಸುಭಟನ ಕಂಡು
೨ನೆ:- ಹಣ್ಣೆಲ್ಲಿ?
ಚಂದ್ರ:- ಹಸಿದ ತಿರ ತಿಂದು ತೇಗಿದಳೆಂದು ತೋರುವುದು! ಕೇಳಣ್ಣ ಕೋಗಿಲೆಯು ಹಾಡುತಿದೆ ಮಾಮರದ ತಳಿರಲ್ಲಿ!

[ಎಲ್ಲರೂ ಕೋಗಿಲೆಯನ್ನು ಅನುಕರಿಸುತ್ತಾ ಮಳಲಲ್ಲಿ ಆಡಲಾರಂಭಿಸುವರು. ಚಂದ್ರಹಾಸನಿಗೆ ಒಂದು ಸಾಲಗ್ರಾಮ ಶಿಲೆ ಸಿಕ್ಕುವುದು. ಚಂದ್ರಹಾಸನು ಹಿಗ್ಗಿ] ಸಿಕ್ಕೆತೆನಗೊಂದೊಡವೆ! [ಎದ್ದುನಿಂತು ಬಾಯಲ್ಲಿ ಬಚ್ಚಿಟ್ಟೂಕೊಳ್ಳುವನು]

೧ನೆ:- ಏನಿದು?
೨ನೆ:- ನೋಡೋಣ! (ಚಂದ್ರಹಾಸನು ತೋರಿಸುತ್ತಾ)
ಚಂದ್ರ:- ಬಟ್ಟಗಲ್ಲಿಂಟು ವರ್ತುಳದಿಂದೆ ಚೆಲ್ವಾಗಿ ಪುಟ್ಟುವದೆ ಪೊಸತು! ಕಟ್ಟೆಸಕದಿಂದ ಕಾಣಿಸುತಿಹುದು ರಮಣೀಮಾಗಿ!
೨ನೆ:- ಗೋಲಿಯಾಟಕೆ ಸೊಗಸು!
೧ನೆ:- ಪೂಜಿಸುವರೀತೆರದ ಕಲ್ಲೊಂದ ನಮ್ಮ ಮನೆಯಲ್ಲಿ. ಸಾಲಗ್ರಾಮ
ವೆಂದದನು ಕರೆಯುವರು. ದೇವರಲ್ಲಿಹನಂತೆ.
(ಚಂದ್ರಹಾಸನು ಮರಳಿ ಬಾಯಲ್ಲಿಡುವನು) ಎಂಜಲಾಗುವುದದಕೆ!
ಚಂದ್ರ:- ಇಡಲೆನಗೆ ತಾವಿಲ್ಲ [ದೂರ ನೋಡಿ] ಯಾರವರು ಮಾರದೊಳು ಬರುತಿಹರು?
೨ನೆ:- ತಿಳಿಯದೆ? ದುಷ್ಟಬುದ್ಧಿ.
ಚಂದ್ರ:- ಯಾರವನು?
೧ನೆ:- ನಮ್ಮ ರಾಜ್ಯದ ಮಂತ್ರಿ.
ಚಂದ್ರ:- ಅವನ ಸಂಗಡ ಬರುವ ಬಾಲಕರದಾರು?
೨ನೆ:- ಮದನನೆಂಬುವನೊಬ್ಬ ಮಂತ್ರಿಸುತ. ಮಂತ್ರಿಸುತೆ ಗಾಲವನ ಕೈಹಿಡಿದು ಬಹ ವಿಷಯೆ.
ಚಂದ್ರ:- (ಕೈತೋರಿಸಿ) ಅವನಾರು?
೧ನೆ:- ಗಾಲವನು ರಾಜರ ಪುರೋಹಿತನು. ಕೈತೋರಬೇಡ, ಕೆಡುಕಾಗುವುದು.

[ದುಷ್ಟಬುದ್ಧಿ. ಬಾಲಕನಾದ ಮದನ. ಬಾಲೆಯಾದ ವಿಷಯೆ ಪುರೋಹಿತನಾದ ಗಾಲವ ಇವರು ಬರುವರು. ಬಾಲಕರು ಹಿಂಜರಿವರು. ಗಾಲವನು ನಿಂತು ಚಂದ್ರಹಾಸನನ್ನು ಎವೆಯಿಕ್ಕದೆ ನೋದುತ್ತಾ ನಿಲ್ಲುವನು]

ದುಷ್ಟ:- ಗಾಲವ ಪುರೋಹಿತರೆ ನಿಂತೇನ ನೋಡುವಿರಿ?
ಗಾಲವ:- (ತೋರಿಸುತ್ತಾ) ನೋಡಲ್ಲಿ ಮಣ್ಣಾಟವಾಡುತಿಹ ಬಾಲಕರ ಗುಂಪಿನೊಳು ತಾರೆಗಲ ನಡುವೆಯಿಹ ಹಿಮಕರನ ಹೋಲುತಿಹ ಬಾಲಕನು ನಿಂತಿಹನು!
ದುಷ್ಟ:- ಅದರಲ್ಲಿ ಅತಿಶಯವದೇನು?
ಗಾಲವ:- ಆರ ಸುತನೀತರುಣ?
ಎಲ್ಲಿಂದ ಬಂದಿಹನು?
ದುಷ್ಟ:- ಈಪರಿಯೊಳೆನಿತಿಲ್ಲ ಅನಾಥರಾಗಿಹ ಬಾಲರೀ ಮಹಾಪುರದಲ್ಲಿ! ಎತ್ತಣವ ನಾರಸುತನೆಂದರಿಯೆ. ರಾಜಕಾರ್ಯದೊಳಗಿಹ ನಮಗೇತಕಿದರ ಚಿಂತೆ?
ಗಾಲವ:- ಹಾಗಲ್ಲ ನೋಡವನ; ರಾಜಚಿಹ್ನೆಗಳೆಂತು ಶೋಭಿಪವು ಮೈಯಲ್ಲಿ. ಮೊಗದ ಕಾಂತಿಯ ನೋಡು!
ಎಂದಿರ್ದೊಡಂ ಚಾರು ಲಕ್ಷಣದೊಳೋ ಪೊಳಲ್ಗೀ ಕುಂತಳಾಧೀಶನಾಳ್ವ ನಮ್ಮೀ ಪೊಡವಿಗೊಡೆಯನಹ ನೀತನಂ ನೀನಿರಿಸಿಕೊಂಡು ರಕ್ಷಿಪುದು.
ದುಷ್ಟ:- (ಚಿಂತಿಸಿ) ಕರೆದವನ ಕೇಳೋಣ. ಯಾರೆಂದು?

[ಗಾಲವನು ಕೈಸನ್ನೆಯಿಂದ ಚಂದ್ರಹಾಸನನ್ನು ಕರೆಯುವನು. ಚಂದ್ರಹಾಸನು ವಿಸ್ಮಯದಿಂದ ಬಳಿಗೆ ಬರುವನು. ಮದನ, ವಿಷಯೆ ಇಬ್ಬರೂ ಹತ್ತಿರಕ್ಕೆ ಹೋಗುವರು.]

ಮಗುವೆ, ನೀನಾರವಂ?
ಚಂದ್ರ:- ನಾನರಿಯೆ!
ಗಾಲವ:- ನಿನ್ನ ಹೆಸರೇನು?
ಚಂದ್ರ:- ನನಗದೂ ಗೊತ್ತಿಲ್ಲ.
ಗಾಲವ:- ನಿನ್ನ ಪಿತನಾರು? ನಿನ್ನ ಹೆತ್ತವಳಾರು?
ಚಂದ್ರ:- ನಾನೊಂದನರಿಯೆ.
ಗಾಲವ:- ನಿನಗುಣಿಸನಿಕ್ಕುವರದಾರು?
ಚಂದ್ರ:- ನನ್ನಜ್ಜಿ!
ಗಾಲವ:- ಯಾರಾಕೆ? ಎಲ್ಲಿಹಳು?
ಚಂದ್ರ:- (ದೂರ ಕೈತೋರಿಸಿ) ಅಲ್ಲಿಹಳು!
ದುಷ್ಟ:- ಗಾಲವರೆ, ಈಗಿರಲಿ, ಆಮೇಲೆ ನೋಡೋಣ ಬನ್ನಿ ಹೊತ್ತಾಯ್ತು, ರಾಜಕಾರ್ಯಕ್ಕೆ. ಬಾಲಕನೆ ಬಹಳ ಸಂತಸವಾಯ್ತು ನಿನ್ನ ನೋಡಿ! ಹೋಗು ನಿನ್ನಜ್ಜಿಗಿದನರಹು.

[ಚಂದ್ರಹಾಸನು ತೆರಳುವಾಗ ವಿಷಯೆಯು ಕೈಲಿದ್ದ ಹೂವೊಂದನ್ನು ಕೊಡುವಳು. ಎಲ್ಲರೂ ಹೋಗುವರು. ಚಂದ್ರಹಾಸನು ಮಾತ್ರ ನಿಲ್ಲುವನು. ಉಳಿದಿಬ್ಬರು ಬಾಲಕರು ಹತ್ತಿರಕ್ಕೆ ಓಡಿಬಂದು ಜೂವನ್ನು ನೋಡಿ]

೧ನೇ:- ಯಾರಿತ್ತರೀಹೂವ?
ಚಂದ್ರ:-ವಿಷಯೆ.
೨ನೇ: ರನ್ನದಲಿ ಕೆತ್ತಿದುದು!
೧ನೇ: ಬಾರಣ್ಣ ಕೇಳಿಲ್ಲ ಅಮ್ಮ ಕೂಗುವಳು.

[ಹೊರಡುವರು. ಚಂದ್ರಹಾಸನು ಹೂವನ್ನೂ ಸಾಲಿಗ್ರಾಮವನ್ನೂ ನೋಡುತ್ತ ನಿಲ್ಲುವನು]
(ಪರದೆ ಬೀಳುವುದು)